ಅನುದಿನ ಚರಿತೆ | ನಮ್ಮ ಯಾವುದೇ ಆಯ್ಕೆ ಅಥವಾ ನಿರ್ಧಾರ ರಾಜಕೀಯ ಪ್ರಭಾವದಿಂದ ಹೊರತಲ್ಲ; ಏಕೆಂದರೆ...

ನಾವು ಅನುಸರಿಸುವ ರಾಜಕಾರಣವು ಸಾಮಾಜಿಕ, ಸಾಂಸ್ಕೃತಿಕ ಇಲ್ಲವೇ ಅಧಿಕಾರ ರಾಜಕಾರಣದ ಒಂದು ಆಯಾಮವೇ ಆಗಿರುತ್ತದೆ. ಈ ರಾಜಕೀಯ ನಿಲುವುಗಳನ್ನು ಅಭಿವ್ಯಕ್ತಿಸಲು ಬಳಸುವ ಭಾಷೆ, ನುಡಿಗಟ್ಟು, ಅದಕ್ಕಾಗಿ ನಾವು ಆರೋಪಿಸುವ ಸಾಮಾಜಿಕ, ಸಾಂಸ್ಕೃತಿಕ ಅಥವಾ ಧಾರ್ಮಿಕ ಮೌಲ್ಯಗಳು ಎಂತಹವು ಎಂಬುದು ಗಮನಾರ್ಹ

ರಾಜಕೀಯ ನಿಲುವುಗಳು ಎನ್ನುವುದು ಕೇವಲ ಅಧಿಕಾರ ಇಲ್ಲವೇ ಪ್ರಭುತ್ವ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ. ಧರ್ಮ, ಸಂಸ್ಕೃತಿ, ಸಾಮಾಜಿಕ ವಿದ್ಯಮಾನಗಳನ್ನು ಕುರಿತು ಕೈಗೊಳ್ಳುವ ತೀರ್ಮಾನಗಳು ಕೂಡ ರಾಜಕೀಯ ನಿಲುವುಗಳೇ ಆಗಿರುತ್ತವೆ. ಹಾಗಾಗಿ, ರಾಜಕೀಯ ನಿಲುವುಗಳು ಅನ್ನುವುದು ಮುಖ್ಯವಾಗಿ ಚರಿತ್ರೆ, ಸಾಮಾಜಿಕತೆ ಹಾಗೂ ಸಾಂಸ್ಕೃತಿಕ ರಾಜಕಾರಣಕ್ಕೆ ಪೂರಕವಾಗಿ ಮೈದೋರುವ ವಿನ್ಯಾಸಗಳಾಗಿರುತ್ತವೆ. ಹೀಗೆ ಹೇಳುವಾಗ, ನಾವು ಗಮನಿಸಬೇಕಾದ ಸಂಗತಿ ಏನೆಂದರೆ, ವರ್ತಮಾನದ ತಲ್ಲಣಕ್ಕೆ ಇವುಗಳು ಹೇಗೆ ಕಾರಣವಾಗಿವೆ ಎಂಬ ವಾಸ್ತವ. ಅಂದರೆ, ರಾಜಕೀಯ ಮತ್ತು ನಿಲುವುಗಳು, ಸಂಸ್ಕೃತಿ ಮತ್ತು ರಾಜಕಾರಣ ಎಂಬ ಪರಿಕಲ್ಪನೆಗಳನ್ನು ಕುರಿತು ಪ್ರತ್ಯೇಕವಾದ ವಿವರಣೆಯನ್ನು ಕೊಡುವುದಲ್ಲ; ಬದಲಾಗಿ, ಸಾಮಾಜಿಕ ನಿಲುವುಗಳನ್ನು ವ್ಯಾಖ್ಯಾನಿಸುವ ವಿಧಾನ ಎನ್ನಬಹುದು. ಏಕೆಂದರೆ, ಸಾಮಾಜಿಕತೆ ಅನ್ನುವುದು ಒಂದು ಸಂಕಥನ. ಈ ಸಂಕಥನವು ಮೂರು ಪ್ರಮುಖವಾದ ಸಾಮಾಜಿಕ ನಿಲುವುಗಳನ್ನು ಒಳಗೊಂಡಿರುತ್ತದೆ. ಅವುಗಳನ್ನು ತಿಳಿವು/ಜ್ಞಾನ, ಸಾಮಾಜಿಕ ನಂಟಸ್ತಿಕೆ ಹಾಗೂ ಸಾಮಾಜಿಕ ಗುರುತು ಇಲ್ಲವೇ ಅಸ್ಮಿತೆ ಎಂಬುದಾಗಿ ವರ್ಗೀಕರಿಸಿ ನೋಡಲಾಗುತ್ತದೆ. ಈ ಸಂಕಥನವು ಅಧಿಕಾರ ರಾಜಕಾರಣ ಮತ್ತು ಸಂಬಂಧಗಳ ಮೂಲಕ ಹೊರಹೊಮ್ಮುವುದಷ್ಟೇ ಅಲ್ಲ, ಯಾವುದೇ ಒಂದು ಸೈದ್ಧಾಂತಿಕತೆಯ ಜೊತೆಗೂ ಬೆರೆತುಕೊಂಡಿರುತ್ತದೆ. ಇಂತಹ ಸೈದ್ಧಾಂತಿಕ ನಿಲುವುಗಳು ಜನಸಾಮಾನ್ಯರ ಬದುಕಿನ ನಂಬಿಕೆಗಳಾಗಿ ಮಾರ್ಪಡುತ್ತವೆ. ಇದನ್ನು ಆಗುಮಾಡುವುದೇ ಅಧಿಕಾರ ರಾಜಕಾರಣದ ಗುರಿಯಾಗಿರುತ್ತದೆ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | 'ಅಯ್ಯೋ... ಕುರಿ ಲೋನಿಗೆ ಅಂತ ನಾನೂ ಮುನ್ನೂರು ರುಪಾಯಿ ಕೊಟ್ಟಿದಿನಿ...'

ರಾಜಕೀಯ ನಿಲುವುಗಳನ್ನು ಸಾಕಾರಗೊಳಿಸಲು ಇಲ್ಲವೇ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಭಾಷೆಯನ್ನು ಹೇಗೆ ಬಳಸಲಾಗುತ್ತದೆ? ಯಾವ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಧಾರ್ಮಿಕ ನುಡಿಗಟ್ಟುಗಳನ್ನು ಮುನ್ನೆಲೆಗೆ ತರಲಾಗುತ್ತದೆ? ರಾಜಕಾರಣ ಎಂದರೇನು? ಅದನ್ನು ಹೇಗೆ ಗ್ರಹಿಸಲಾಗುತ್ತದೆ? ಇವೇ ಮೊದಲಾದ ಕೆಲವು ಪ್ರಶ್ನೆಗಳನ್ನು, ಇಲ್ಲಿಯ ಚರ್ಚೆಗೆ ಪೂರಕವಾಗಿ ಕೇಳಲಾಗಿದೆ. ಹಾಗಂತ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಗುರಿಯನ್ನು ಈ ಟಿಪ್ಪಣಿಯಲ್ಲಿ ಹೊಂದಲಾಗಿದೆ ಎಂದರ್ಥವಲ್ಲ. ಬದಲಾಗಿ, ಇವುಗಳನ್ನು ಗ್ರಹಿಕೆಯ ಸೂಚಕಗಳನ್ನಾಗಿ ನಮ್ಮೆದುರಿಗೆ ಇರಿಸಿಕೊಳ್ಳಲಾಗಿದೆ. ಅಂದರೆ, ನಮ್ಮ ಬದುಕಿನ ದೈನಂದಿನ ಆಯ್ಕೆಗಳು ಮತ್ತು ನಿರ್ಧಾರಗಳನ್ನು ಕೈಗೊಳ್ಳುವಾಗ, ನಾವು ಯಾವ ನಿಲುವುಗಳನ್ನು, ಯಾವ ರಾಜಕೀಯ ಪರಿಣಾಮಗಳನ್ನು ಅನುಸರಿಸಿಕೊಂಡು ಮುನ್ನಡೆಯುತ್ತೇವೆ ಇಲ್ಲವೇ ಬದ್ಧರಾಗುತ್ತೇವೆ ಅನ್ನುವುದು ಮುಖ್ಯ. ನಾವು ಚಿಂತಿಸುವ ಬಗೆ ಮತ್ತು ಅದನ್ನು ಅಭಿವ್ಯಕ್ತಿಸುವುದಕ್ಕೆ ನಾವು ಬಳಸುವ ಭಾಷೆ ಹಾಗೂ ಇಲ್ಲಿ ನಾವು ಅನುಸರಿಸುವ ರಾಜಕೀಯ ನಿಲುವುಗಳು ಸಹಜವಾಗಿಯೇ ನಮ್ಮ ಬದುಕಿನ ಸೈದ್ಧಾಂತಿಕತೆಯ ಸೂಚಕಗಳು ಆಗಿರುತ್ತವೆ ಅನ್ನುವುದಕ್ಕಿಂತ, ರಾಜಕೀಯ ಪ್ರೇರಿತ ಧೋರಣೆಗಳಾಗಿರುತ್ತವೆ. ದೈನಂದಿನ ಚಟುವಟಿಕೆಗಳಲ್ಲಿ ಇವುಗಳೇ ಹಾಸುಹೊಕ್ಕಾಗಿರುತ್ತವೆ. ನಮ್ಮ ಬದುಕಿನ ಯಾವುದೇ ಒಂದು ಆಯ್ಕೆ ಅಥವಾ ನಿರ್ಧಾರವೂ ರಾಜಕೀಯೇತರವಾಗಿರುವುದಿಲ್ಲ. ಅಂದರೆ, ನಾವು ಅನುಸರಿಸುವ ರಾಜಕಾರಣ ಅದು ಸಾಮಾಜಿಕ, ಸಾಂಸ್ಕೃತಿಕ ಇಲ್ಲವೇ ಅಧಿಕಾರ ರಾಜಕಾರಣದ ಒಂದು ಆಯಾಮವೇ ಆಗಿರುತ್ತದೆ. ಈ ರಾಜಕೀಯ ನಿಲುವುಗಳನ್ನು ರೂಪಿಸಲು ಇಲ್ಲವೇ ಅಭಿವ್ಯಕ್ತಿಸಲು ಬಳಸುವ ಭಾಷೆ, ನುಡಿಗಟ್ಟು, ಅದಕ್ಕಾಗಿ ನಾವು ಆರೋಪಿಸುವ ಸಾಮಾಜಿಕ, ಸಾಂಸ್ಕೃತಿಕ ಅಥವಾ ಧಾರ್ಮಿಕ ಮೌಲ್ಯಗಳು ಎಂತಹವು? ಹೀಗೆ ಆರೋಪಿಸುವ ಮೌಲ್ಯಗಳು ಯಾರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತವೆ ಎಂಬುದು ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ, ಯಾರೋ ಧರ್ಮದ ಕುರಿತು ಮಾತನಾಡುವಾಗ, ನಾವು ಅದಕ್ಕೆ ಪ್ರತಿಕ್ರಿಯಿಸುವಾಗ, ಧರ್ಮವನ್ನು ಕುರಿತು ಹೇಗೆ ಮತ್ತು ಏನು ಮಾತನಾಡಿದ್ದಾರೆ ಅನ್ನುವುದನ್ನು ಗಮನಿಸಿ ಮಾತನಾಡಿದರೂ, ಅದು ಖಚಿತ ಮತ್ತು ವಸ್ತುನಿಷ್ಠ ನಿಲುವು ಆಗಿರುವುದಿಲ್ಲ. ಬದಲಾಗಿ, ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ ಪೂರಕವಾಗಿ ನಾವು ಯಾವ ನಿಲುವುಗಳನ್ನು ತಾಳುತ್ತೇವೆ ಅನ್ನುವುದು ವಿಶೇಷ.

ಸಾಂದರ್ಭಿಕ ಚಿತ್ರ | ಕೃಪೆ: ಇಂಡಿಕಾ ಶ್ರೀಯನ್

ದಿನನಿತ್ಯದ ಮಾತುಕತೆ, ವಾಗ್ವಾದ, ಸಂವಾದ ಇಲ್ಲವೇ ನಾವು ನಂಬಿದ ನಂಬಿಕೆಗಳನ್ನು ಯಾವೆಲ್ಲ ಬಗೆಯಲ್ಲಿ ತಿರುವುಮುರುವು ಮಾಡಿ ನಮ್ಮ ರಾಜಕೀಯ ನಿಲುವುಗಳನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತೇವೆ ಎಂಬುದನ್ನು ಗಮನಿಸಿದರೆ, ದಿನನಿತ್ಯದ ಸಹಜ ಎಷ್ಟೋ ಸಂಗತಿಗಳು ಎಂತಹ ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳತ್ತವೆ ಅನ್ನುವುದು ನಮಗೆ ಮನವರಿಕೆ ಆಗುತ್ತದೆ. ಉದಾಹರಣೆಗೆ ಗೋಮಾಂಸ ಕುರಿತ ಚರ್ಚೆಗಳು, ಹಿಜಾಬ್ ಬಗೆಗಿನ ಮಾತುಕತೆ, ಹಿಂದುತ್ವ ಕುರಿತಾದ ವಾಗ್ವಾದಗಳು ಇಲ್ಲವೇ ಅಲ್ಪಸಂಖ್ಯಾತ ಸಮೂಹಗಳ ಬಗೆಗೆ ಸಂಬಂಧಿಸಿದ ವಿದ್ಯಮಾನಗಳು... - ಯಾವುದೇ ವಿಚಾರವಾದರೂ ಅದೊಂದು ರಾಜಕೀಯ ವಿದ್ಯಮಾನದಂತೆಯೇ ತೋರುತ್ತದೆ. ಇಂತಹ ಎಲ್ಲ ರೀತಿಯ ವಿಚಾರಗಳಿಗೆ ಪೂರಕವಾಗಿ ನಮ್ಮ ರಾಜಕೀಯ ನಿಲುವುಗಳು ಮೈದೋರುತ್ತವೆ. ಅದು ಯಾವುದೇ ವಿಷಯವಾದರೂ ಸರಿ, ಅದನ್ನು ವಸ್ತನಿಷ್ಠವಾಗಿ ಇಲ್ಲವೇ ಖಚಿತವಾಗಿ ಆಯಾ ವಸ್ತುವಿಷಯಕ್ಕೆ ಮಾತ್ರ ಸೀಮಿತಗೊಳಿಸಿ ಚರ್ಚೆಯನ್ನು ಬೆಳೆಸುವುದಕ್ಕೆ ನಮಗೆ ಸಾಧ್ಯವೇ ಇಲ್ಲ. ರಾಜಕೀಯ ಲೇಪನವಿಲ್ಲದೆ ಯಾವುದೇ ನಿಲುವು ಕೂಡ ಇತ್ಯರ್ಥಗೊಳ್ಳದು. ಇದು ನಮ್ಮ ಬದುಕಿನ ಈ ಹೊತ್ತಿನ ಸನ್ನಿವೇಶವಾಗಿದೆ. ಆದರೆ, ರಾಜಕೀಯ ಪ್ರೇರಿತ ನಿಲುವುಗಳ ಪರಿಣಾಮದಿಂದ ಏರ್ಪಡುವ ‘ಸಂಕಥನ’ವು ಜನಸಾಮಾನ್ಯರ ಬದುಕಿನ ಮೇಲೆ ಯಾವ ಬಗೆಯ ಪರಿಣಾಮವನ್ನು ಬೀರುತ್ತದೆ ಎಂದು ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಅಂದರೆ, ಜನರ ನಂಬಿಕೆ ಇಲ್ಲವೇ ಅವರ ಬದುಕಿನ ಪ್ರೇರಣೆಗೆ ಏನೆಲ್ಲ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂದು ಚಿಂತಿಸುವುದಕ್ಕಿಂತ, ಸಾಮಾಜಿಕ ವಿಘಟನೆಗೆ ಕಾರಣವಾಗುವ ನಿಟ್ಟಿನಲ್ಲಿ ಚಿಂತನಾಧಾರೆಗಳು ರೂಪುಗೊಳ್ಳುತ್ತವೆ. ಏಕೆಂದರೆ, ನಮ್ಮ ಬದುಕಿನ ವ್ಯಾಪ್ತಿಯೊಳಗೆಯೇ ನೆಲೆಗೊಂಡಿದ್ದ ನಮ್ಮ ನಂಬಿಕೆಯ ಜಗತ್ತು, ಬದುಕಿನ ಮುನ್ನೋಟ ಹಾಗೂ ನಾವು ಆಶಿಸುವ ಬದುಕಿನ ಆಶೋತ್ತರಗಳ ಮೂಲಕ ಏರ್ಪಡುವ ತಿಳಿವು, ವಿಚಾರ ಇಲ್ಲವೇ ಸಿದ್ಧಾಂತವನ್ನೇ ನಾಶ ಮಾಡುವ ಅಪಾಯಕಾರಿ ರಾಜಕೀಯ ನಿಲುವುಗಳನ್ನು ಇವತ್ತು ನಾವು ತಾಳುತ್ತಿದ್ದೇವೆ. ಯಾವುದು ನಮ್ಮ ಬದುಕಿನ ಸಾಮಾನ್ಯ ಜ್ಞಾನ ಆಗಿರುತ್ತದೆಯೋ ಅದನ್ನೇ ನಾವು ನಿರಾಕರಿಸಿ ಬದುಕುವಂತಹ ವ್ಯತಿರಿಕ್ತ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತದೆ. ಇಲ್ಲಿ ಒಂದು ಮುಖ್ಯ ಸಂಗತಿಯನ್ನು ಗಮನಿಸುವುದು ಅವಶ್ಯ. ಅದೇನೆಂದರೆ, ಎಷ್ಟೋ ಸನ್ನಿವೇಶದಲ್ಲಿ ಈ ಸಾಮಾನ್ಯ ಜ್ಞಾನದಿಂದ ಸಂಚಿತವಾದ ನಿಲುವುಗಳೇ ಸಿದ್ಧಾಂತವಾಗಿ ಇಲ್ಲವೇ ಬದುಕಿನ ಆದರ್ಶದ ಮಾದರಿಗಳಾಗಿ ನೆಲೆಗೊಳ್ಳುತ್ತವೆ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ದಯವಿಟ್ಟು ಯಾರಾದರೂ ಹೇಳಿ... 'ಹೆಣ್ಣನ್ನು ಕೊಡುವುದು' ಎಂದರೇನರ್ಥ?

ಜಾರ್ಜ್ ಆರ್ವೆಲ್ ಹೇಳಿದಂತೆ, ನಮ್ಮ ಕಾಲದಲ್ಲಿ ಯಾವುದೂ ರಾಜಕೀಯದಿಂದ ಹೊರಗೆ ಉಳಿದಿರುವುದಿಲ್ಲ. ಎಲ್ಲ ವಿದ್ಯಮಾನ ಅಥವಾ ಸಮಸ್ಯೆಗಳು ರಾಜಕೀಯ ಸಮಸ್ಯೆಗಳೇ ಆಗಿರುತ್ತವೆ. ನಮ್ಮ ಬದುಕಿನ ಪ್ರತಿ ಸಂಗತಿಯೂ ರಾಜಕೀಕರಣಗೊಂಡಿದೆ ಅನ್ನುವುದು ಈ ಮಾತಿನಿಂದ ನಿಚ್ಚಳಗೊಳ್ಳುತ್ತದೆ. ರಾಜಕಾರಣವು ಅಧಿಕಾರಕ್ಕೆ ಸಂಬಂಧಿಸಿದೆ. ಅಂದರೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಾಗಿದೆ. ಸಂಪನ್ಮೂಲವನ್ನು ನಿಯಂತ್ರಿಸುವುದು, ಜನರ ನಡವಳಿಕೆ, ಅವರು ಅನುಸರಿಸುವ ಮೌಲ್ಯಗಳು, ಆಚರಣೆಗಳು ಒಟ್ಟಾರೆ ಸಮೂಹಗಳ ಬದುಕಿನ ಎಲ್ಲ ಬಗೆಯ ಆಗುಹೋಗುಗಳನ್ನು ನಿರ್ಧರಿಸಿ-ನಿಯಂತ್ರಿಸುವ ಅಧಿಕಾರವೇ ಇವತ್ತು ನಮ್ಮ ಈ ರಾಜಕೀಯ ಅಧಿಕಾರವಾಗಿದೆ. ಸಮುದಾಯಗಳ ಬದುಕಿನ ದೈನಂದಿನ ಚಟುವಟಿಕೆ ಮತ್ತು ಯಕಶ್ಚಿತ ನಿರ್ಧಾರಗಳನ್ನು ಕೂಡ ಈ ರಾಜಕೀಯ ಕಣ್ಣೋಟದಲ್ಲಿಯೇ ನೋಡಲಾಗುತ್ತದೆ. ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ ಎರಡೂ ಪರಸ್ಪರ ಯೋಜಿಸಿ, ನಮ್ಮ ಬದುಕನ್ನು ನಿಯಂತ್ರಿಸುತ್ತಿವೆ. ಬದುಕಿನ ಕ್ರಿಯಾವರ್ತುಲದೊಳಗಿಂದಲೇ ಏರ್ಪಡುವ ಅನುಭವದ ಮಾದರಿಗಳನ್ನು ಮರು ವಿನ್ಯಾಸಗೊಳಿಸುವ ಹುನ್ನಾರಗಳು ಕೂಡ ಯಥೇಚ್ಚವಾಗಿ ನಡೆಯುತ್ತಿವೆ. ಇಂತಹ ಹುನ್ನಾರಗಳ ಮೂಲಕವೇ ನಮ್ಮ ಸಾಂಸ್ಕೃತಿಕ ನೀತಿ ಇಲ್ಲವೇ ಸಾಮಾಜಿಕ ಯೋಜನೆಗಳನ್ನಾಗಿ ಬಿಂಬಿಸಲಾಗುತ್ತಿದೆ. ಹೀಗೆ ಬಿಂಬಿಸಿದ ಪ್ರತಿಯೊಂದು ನಿಲುವನ್ನು ನಮ್ಮ ಬದುಕಿನಲ್ಲಿ ಅನುಸರಿಸುವಂತೆ, ಅವುಗಳಿಗೆ ನಮ್ಮದೇ ಧರ್ಮ ಇಲ್ಲವೇ ಜಾತಿಯ ಸೈದ್ಧಾಂತಿಕ ಆಯಾಮಗಳನ್ನು ಆರೋಪಿಸಲಾಗುತ್ತದೆ. ಇದುವೇ ನಮ್ಮ ಬದುಕಿನ ಕ್ರಮವಾಗಿ ಮಾರ್ಪಡುವುದನ್ನು ನಾವು ಈಗ ನೋಡುತ್ತಿದ್ದೇವೆ. ವೈಚಿತ್ರ್ಯವೆಂದರೆ, ಈ ಅಪಾಯಗಳೇ ಬದುಕಿನ ಏಳಿಗೆಯ ಉಪಾಯಗಳಾಗಿವೆ ಎಂಬ ಕಣ್ಭ್ರಮೆಗೆ ನಾವು ಒಳಗಾಗಿದ್ದೇವೆ. ಧರ್ಮ, ಜಾತಿ ಹಾಗೂ ಲೈಂಗಿಕತೆಯ ಕಾರಣದಿಂದ ಏನೆಲ್ಲ ಶೋಷಣೆಗಳು ಶತಮಾನಗಳ ಕಾಲದಿಂದ ನಮ್ಮ ಸಮೂಹಗಳಲ್ಲಿ ನೆಲೆಗೊಂಡಿದ್ದವೋ, ಅವುಗಳನ್ನೇ ಮರುವಿನ್ಯಾಸಗೊಳಿಸಿ ಸಮೂಹಗಳನ್ನು ತೀವ್ರ ಶೋಷಣೆಗೆ ಈಡುಮಾಡಲಾಗಿತ್ತಿದೆ. ಈ ತೀವ್ರತೆಯನ್ನು ಹದಗೊಳಿಸುವ ಲಯಗಳನ್ನು ಸಿದ್ಧಾಂತಗಳ ಮೂಲಕ ಕಲ್ಪಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ರಾಜಕಾರಣ ಮತ್ತು ಸಿದ್ಧಾಂತಗಳ ನಡುವಣ ಹೊಂದಾಣಿಕೆಯನ್ನು ಹಲವು ನೆಲೆಗಳಲ್ಲಿ ಗುರುತಿಸಬಹುದು. ಇದನ್ನು ನಿರ್ದಿಷ್ಟವಾಗಿ ಕೆಲವೇ ಕೆಲವು ವಿನ್ಯಾಸಗಳಲ್ಲಿ ಮಾತ್ರ ಕಾಣಲು ಸಾಧ್ಯವಿಲ್ಲ. ಬದುಕಿನ ಪ್ರತಿಯೊಂದು ನಿಲುವಿನಲ್ಲಿ ಇವುಗಳ ಹೊಂದಾಣಿಕೆಯ ಚಹರೆಗಳನ್ನು ನೋಡಲು ಸಿಗುತ್ತವೆ. ರಾಜಕೀಯದ ಆತ್ಯಂತಿಕ ಉದ್ದೇಶವೇ ಅಧಿಕಾರವನ್ನು ಹೊಂದುವುದು. ಆ ಮೂಲಕ ಸಮೂಹಗಳನ್ನು ನಿಯಂತ್ರಿಸುವ ತಂತ್ರಗಳನ್ನು ರೂಪಿಸಲಾಗುತ್ತದೆ. ಸಮೂಹಗಳಿಗೆ ಇದನ್ನು ತಾಳಿಕೊಳ್ಳುವುದು ಒಂದು ಬಗೆಯಲ್ಲಿ ಅನಿವಾರ್ಯ ಅನಿಷ್ಟವೇ ಸರಿ. ಪ್ರಭುತ್ವದ ಪ್ರಾಬಲ್ಯಕ್ಕೆ ಪ್ರತಿರೋಧವನ್ನು ಒಡ್ಡುವುದಕ್ಕೆ ಸಾಧ್ಯವಾಗದ ರಾಜಕೀಯ ಹುನ್ನಾರಗಳನ್ನು ರೂಪಿಸಲಾಗುತ್ತದೆ. ಹಾಗಾಗಿ ಇಂತಹ ಅನಿಷ್ಟಗಳನ್ನು ಬದುಕಿನ ಭಾಗವನ್ನಾಗಿಯೇ ಸಹಿಸಿಕೊಳ್ಳುವ ಒತ್ತಡಕ್ಕೆ ಸಮುದಾಯಗಳು ಒಳಗಾಗುತ್ತವೆ. ಪ್ರಭುತ್ವ ತನ್ನ ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ತಮ್ಮ ಹಿತಾಸಕ್ತಿಯ ರಾಜಕೀಯ ನಂಬಿಕೆಗಳನ್ನು ಬಲಪಡಿಸಲು ಏನೇನೋ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ಆ ಮುಖೇನ ಎಲ್ಲವನ್ನೂ ಸಾಧಿಸಲಾಗುತ್ತದೆ. ಈ ಮಾರ್ಗಗಳಲ್ಲಿ ಹೆಸರಿಸಲೇಬೇಕಾದ ವಿಧಾನ ಯಾವುದೆಂದರೆ, ದೈಹಿಕ ಹಲ್ಲೆ ಮಾಡುವುದು ಇಲ್ಲವೇ ಆಕ್ರಮಣಕಾರಿ ನಿಲುವುಗಳ ಮೂಲಕ ಜನರನ್ನು ನಿಯಂತ್ರಿಸುವ ಪರಿಪಾಠವನ್ನು ಅಧಿಕಾರ ರಾಜಕಾರಣದಲ್ಲಿ ನೋಡಬಹುದು. ಸಿದ್ಧಾಂತ ಮತ್ತು ತಮ್ಮದೇ ರಾಜಕೀಯ ನಿಲುವುಗಳನ್ನು ಒಪ್ಪಿಕೊಳ್ಳಲು, ರಾಜಕೀಯ ಅಧಿಕಾರವು ಎಷ್ಟೊಂದು ಆಕ್ರಮಣಕಾರಿ ನಿಲುವುಗಳನ್ನು ತಾಳಿದೆ ಅನ್ನುವುದಕ್ಕೆ ಚರಿತ್ರೆ ಮತ್ತು ವರ್ತಮಾನದಲ್ಲಿ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. ಒಟ್ಟಿನಲ್ಲಿ ಹೇರಿಕೆಯ ಸಂಸ್ಕೃತಿ ಅನ್ನುವುದು ಬಲಾಢ್ಯ ಸಮೂಹ ಮತ್ತು ಅಧಿಕಾರ ರಾಜಕಾರಣದ ಹಕ್ಕು ಮತ್ತು ಹೊಣೆಗಾರಿಕೆ ಎಂದೇ ಭಾವಿಸಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ಚಿರತೆಯ ಬೆನ್ನತ್ತಿ ಹಿಮಾಲಯ ಹತ್ತಿದ ಗಟ್ಟಿಗಿತ್ತಿ ಮತ್ತು ಅದೇ ಪರ್ವತ ದಾಟಿ ಮೈಸೂರಿಗೆ ಬಂದ ವಲಸೆ ಹಕ್ಕಿ

'ನಾವು ಭಾರತೀಯರು,' 'ವೈವಿಧ್ಯತೆಯಲ್ಲಿ ಏಕತೆ' ಎಂದು ಸಾರಿ-ಸಾರಿ ಹೇಳುವ ನಮ್ಮ ದೇಶದಲ್ಲಿಯೇ ಒಂದು ಸಮುದಾಯ ಮತ್ತೊಂದು ಸಮುದಾಯದ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸುವುದು. ಹಾಗೇ ತನ್ನ ಸೈದ್ಧಾಂತಿಕ ನಿಲುವುಗಳನ್ನು ಒಪ್ಪಿ ನಡೆಯುವಂತೆ ಅಧಿಕಾರವನ್ನು ಚಲಾಯಿಸಲಾಗುತ್ತದೆ. ಒಂದು ಜಾತಿ ಇನ್ನೊಂದು ಜಾತಿಯನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುವ ಈ ದೇಶದಲ್ಲಿಯೇ ‘ನಾವು ಭಾರತೀಯರು’, ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಒಗ್ಗಟ್ಟಿನ ಮಂತ್ರವನ್ನು ಜಪಿಸಲಾಗುತ್ತದೆ. ತತ್ವ ಮತ್ತು ಆಚರಣೆಗಳ ನಡುವಣ ಕಂದಕವು ನಿರಂತರವಾಗಿ ಬಿಗಡಾಯಿಸುವುದಕ್ಕೆ ರಾಜಕಾರಣವೇ ಕಾರಣ. ಅದು ಸಾಂಸ್ಕೃತಿಕ ರಾಜಕಾರಣ ಅಥವಾ ಅಧಿಕಾರ ರಾಜಕಾರಣ ಯಾವುದಾದರೂ ಆಗಿರಬಹುದು. ಯುದ್ಧಗಳು, ಸಂಘರ್ಷಗಳು ಹಾಗೂ ಸಾಮಾಜಿಕ ಒಡಕಿನ ಹಿಂದಿನ ಪ್ರೇರಣೆಯೇ ಇಂತಹ ರಾಜಕೀಯ ನಿಲುವುಗಳಿಗೆ ಕಾರಣವಾಗಿರುತ್ತವೆ. ಸರ್ವಾಧಿಕಾರ ಮತ್ತು ಮಿಲಟರಿ ಆಡಳಿತದಲ್ಲಿ ಬಲಪ್ರಯೋಗದ ಮೂಲಕ ಜನರನ್ನು ನಿಯಂತ್ರಿಸುವುದು ಸರ್ವೇಸಾಮಾನ್ಯ ನಿಲುವು ಆಗಿರುತ್ತದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಬದ್ಧವಾಗಿಯೇ ದೈಹಿಕ ಬಲವನ್ನು ಬಳಸಲಾಗುತ್ತದೆ. ಉದಾಹರಣೆಗೆ, ಕ್ರಿಮಿನಲ್ ಆರೋಪಿಗಳನ್ನು ನಿರ್ಬಂಧಿಸಲು ಈ ಬಲವನ್ನು ಬಳಸುವುದು ಒಂದು ಕಡೆಯಾದರೆ, ಚಿಂತಕರು, ನಾಗರಿಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳನ್ನೂ ಹೀಗೆ ಬಲ ಪ್ರಯೋಗದ ಮೂಲಕವೇ ನಿರ್ಬಂಧಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಕಾನೂನು ವ್ಯವಸ್ಥೆಯ ಮೂಲಕವೇ ಇತರೆ ರೀತಿಯ ದಬ್ಬಾಳಿಕೆಯನ್ನು ಪ್ರಜಾಪ್ರಭುತ್ವದಲ್ಲಿ ಜಾರಿಗೆ ತರಲಾಗಿದೆ. ಉದಾಹರಣೆಗೆ, ಎಲ್ಲಿ ಕಾರನ್ನು ನಿಲ್ಲಿಸಬೇಕು ಮತ್ತು ಎಲ್ಲಿ ನಿಲ್ಲಿಸಬಾರದು, ಯಾವಾಗ ಮದ್ಯವನ್ನು ಕುಡಿಯಬೇಕು ಹಾಗೂ ಯಾವಾಗ ಕುಡಿಯಬಾರದು ಎಂಬುದನ್ನು ನಿರ್ಧರಿಸುವ ಹಕ್ಕುಗಳು ಅಧಿಕಾರ ರಾಜಕಾರಣಕ್ಕೆ ಇರುತ್ತವೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ರೂಪಿಸಿದ ಕಾನೂನುಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಬಗೆ ಅಥವಾ ಬಂಧಿಸಿ ಜೈಲು ಶಿಕ್ಷೆ ವಿಧಿಸುವುದು ಮುಂತಾದವುಗಳು ಅಧಿಕಾರ ರಾಜಕಾರಣವು ತನ್ನ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಬಳಸುವ ಬಲ ಪ್ರಯೋಗದ ಮಾದರಿಗಳಾಗಿವೆ. ಆದಾಗ್ಯೂ, ಈ ವಿಧಾನಗಳೇ ಸ್ವಯಂಪ್ರೇರಣೆಯ ಮೂಲಕ ಕಾರ್ಯನಿರ್ವಹಿಸುವಂತೆ ಜನರ ಮನವೊಲಿಸಲು ಅತ್ಯಂತ ಉಪಯುಕ್ತ ಮತ್ತು ಪರಿಣಾಮಕಾರಿ ನಿಲುವುಗಳು ಆಗಿರುತ್ತವೆ ಎಂದು ಬಿಂಬಿಸಲಾಗುತ್ತದೆ. ಅಂದರೆ, ತಮಗೆ ಬೇಕಾದ ರೀತಿಯಲ್ಲಿ ಅಧಿಕಾರವನ್ನು ನಡೆಸಲು ಇಲ್ಲವೇ ಅಧಿಕಾರವನ್ನು ಚಲಾಯಿಸಲು ಜನರಿಂದ ಸಮ್ಮತಿಯನ್ನು ಪಡೆಯಲಾಗುತ್ತದೆ (ಮ್ಯಾನುಫ್ಯಾಕ್ಚರಿಂಗ್ ದ ಕನ್ಸೆಂಟ್) ಅಥವಾ ಅದರ ಕಡೆಗೆ ಕನಿಷ್ಠಪಕ್ಷ ಜನರು ಗಮನ ಹರಿಸುವಂತೆ ಮಾಡಲಾಗುತ್ತದೆ (ಫೇರ್ಕ್ಲೋ:1989:4). ಇಲ್ಲವಾದಲ್ಲಿ ಅವರನ್ನು ನಿರಂತರವಾಗಿ ತಪ್ಪಾಗಿ ದಂಡಿಸಲಾಗುತ್ತದೆ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡದಿರಲಿ ಅನ್ನುವ ರಾಜಕೀಯ ಒಳ ಹುನ್ನಾರವೂ ಇಲ್ಲಿ ಕೆಲಸ ಮಾಡುತ್ತದೆ. ಅಧಿಕಾರವನ್ನು ಪಡೆಯಲು ಇಂತಹ ಮನವೊಲಿಸುವ ತಂತ್ರಗಳು ಅಗತ್ಯವಾಗಿರುತ್ತವೆ. ಅಧಿಕಾರ ರಾಜಕಾರಣ ಇದನ್ನು ಅತ್ಯಂತ ಅರ್ಥಪೂರ್ಣವಾಗಿ ತನ್ನ ಉದ್ದೇಶಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಧೀರೇಂದ್ರ ಗೋಪಾಲರ ಟಿಪ್ಪು ಪಾತ್ರ ಮತ್ತು ಸೀತಾರಾಮ ಶಾಸ್ತ್ರಿಗಳ 'ಟಿಪ್ಪೂ ಸುಲ್ತಾನ್' ನಾಟಕ

ಜನರು ಅಥವಾ ನಾಗರಿಕರು ತಮ್ಮ ಸ್ವಇಚ್ಛೆಯಿಂದ ಇಂತಹ ರಾಜಕೀಯ ನಿಲುವುಗಳನ್ನು ಒಪ್ಪಿಕೊಂಡು, ತಮ್ಮ ದೈನಂದಿನ ಬದುಕಿನಲ್ಲಿ ಚಾಚೂ ತಪ್ಪದಂತೆ ಅನುಸರಿಸುವ ಇರಾದೆಯನ್ನು ಹೊಂದುವಂತೆ ಮಾಡಲಾಗುತ್ತದೆ. ಬಹಿರಂಗವಾಗಿ ಪೊಲೀಸರು ಮತ್ತು ಸಶಸ್ತ್ರ ಪಡೆಗಳಿಂದ ಉಂಟಾಗಬಹುದಾದ ಆಕ್ರಮಣಕಾರಿ ಚಟುವಟಿಕೆಗಳನ್ನು ಕಮ್ಮಿ ಮಾಡಲು ಅನಕೂಲವೂ ಆಗುತ್ತದೆ. ಅಷ್ಟೆ ಅಲ್ಲದೆ, ನಯವಾಗಿ ಜನರ ಮೇಲೆ ತಮ್ಮ ಪ್ರಾಬಲ್ಯವನ್ನು ಸ್ಥೀರಿಕರಿಸಲು ಸಾಧ್ಯವಾಗುತ್ತದೆ. ಇದನ್ನು ಸಾಧಿಸಲು ಒಂದು ಸೈದ್ಧಾಂತಿಕತೆಯನ್ನು ನೆಲೆಗೊಳಿಸುವುದು ಅಗತ್ಯವಾಗುತ್ತದೆ. ಅಂದರೆ, ಜನರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು ತಮ್ಮ ಸೈದ್ಧಾಂತಿಕ ನಿಲುವುಗಳನ್ನು, ಜನಸಾಮಾನ್ಯರ ಸಾಮಾನ್ಯ ಜ್ಞಾನದ ಚಹರೆಗಳನ್ನಾಗಿ ಪರಿವರ್ತಿಸಿ, ಅವುಗಳ ಮೂಲಕವೇ, ಜನರು ಈ ರಾಜಕೀಯ ಹಿತಾಸಕ್ತಿಗಾಗಿ ನೆಲೆಗೊಂಡಿರುವ ಸಿದ್ಧಾಂತವನ್ನು ಒಪ್ಪಿ ಬೆಂಬಲಿಸುವ ಸಮ್ಮತಿಯನ್ನು ನೀಡುತ್ತಾರೆ. ಈ ರಾಜಕೀಯ ಸಿದ್ಧಾಂತವನ್ನು ಜನರು ತಮ್ಮ ದೈನಂದಿನ ಬದುಕಿನ ಸಾಮಾನ್ಯ ಜ್ಞಾನವನ್ನಾಗಿ ಪರಿವರ್ತಿಸಿಕೊಂಡ ಮೇಲೆ ಅದನ್ನು ಪ್ರಶ್ನಿಸುವುದು ಅತ್ಯಂತ ದುಸ್ತರವಾಗುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app