ಯುಗಧರ್ಮ | ಪ್ರಧಾನಿ ಮೋದಿಯವರು ಹೇಳಿದ 'ಪಂಚಪ್ರಾಣ' ಮತ್ತು ಹೊಸ ಕನಸುಗಳ ಸುಳ್ಳಿನ ತೋಟ

Modi Image

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆಗೆ, ದೇಶದಲ್ಲಿ ಒಂದೇ ಒಂದು ಕಚ್ಚಾ ಮನೆ ಇರುವುದಿಲ್ಲ. ನಾಲ್ಕು ಗೋಡೆ, ಛಾವಣಿ, ಮನೆಗೊಂದು ನಲ್ಲಿ, ನಲ್ಲಿಗೆ ನೀರು, ವಿದ್ಯುತ್ ಸಂಪರ್ಕ, ಎಲ್‌ಇಡಿ ಬಲ್ಬ್ ಒದಗಿಸಲಾಗುತ್ತದೆ," ಎಂದು ಭರವಸೆ ಕೊಡಲಾಗಿತ್ತು. ಇದರ ವಾಸ್ತವ ಎಷ್ಟು ಕಹಿ ಎಂದರೆ, ಪ್ರಧಾನಿಯವರು ಸ್ವಾತಂತ್ರೋತ್ಸವ ಭಾಷಣದಲ್ಲಿ ಇದನ್ನು ಉಲ್ಲೇಖಿಸಲೂ ಇಲ್ಲ!

ಪ್ರಧಾನ ಮಂತ್ರಿಯವರು ಕೆಂಪುಕೋಟೆಯ ಆವರಣದಿಂದ ಒಂದು ದೊಡ್ಡ ಮಾತು ಹೇಳಿದರು: "ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಾವು ಕೇವಲ ಭೂತಕಾಲವನ್ನು ವೈಭವೀಕರಿಸದೆ, ಮುಂಬರುವ 25 ವರ್ಷಗಳ ದಿಕ್ಕನ್ನು ನಿರ್ಧರಿಸೋಣ." ಇದನ್ನು ಮುಂದಿಟ್ಟು ಅವರು 'ಪಂಚ ಪ್ರಾಣ’ - ಅಂದರೆ, ದೇಶವನ್ನು ಮುಂದುವರಿಸಬಹುದಾದ ಐದು ಸೂತ್ರಗಳನ್ನು ಮುಂದಿಟ್ಟರು. ಅಸಲಿಗೆ, ಪ್ರಧಾನಮಂತ್ರಿಯವರು ಆಗಾಗ ದೊಡ್ಡ-ದೊಡ್ಡ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಒಬ್ಬ ದೊಡ್ಡ ನಾಯಕನಿಗೆ ಒಂದು ದೊಡ್ಡ ಸಂದರ್ಭದಲ್ಲಿ ದೊಡ್ಡ ಮಾತನ್ನು ಆಡುವುದು ಅವಶ್ಯ ಕೂಡ.

ಆದರೆ, ಒಂದು ದೊಡ್ಡ ಮಾತನ್ನು ಹೇಳುವುದರಲ್ಲಿ ಮತ್ತು ಆ ಮಾತನ್ನು ತೇಲಿಬಿಡುವುದರಲ್ಲಿ ಒಂದು ದೊಡ್ಡ ವ್ಯತ್ಯಾಸ ಇರುತ್ತದೆ. ತೇಲಿಬಿಡುವ ಕೆಲಸವನ್ನು ಯಾರಾದರೂ ಮಾಡಬಹುದು. ಅದಕ್ಕೆ ಬೇಕಿರುವುದು, ದೊಡ್ಡ-ದೊಡ್ಡ ಮಾತುಗಳನ್ನು ಆಡುವ ಚಾತುರ್ಯ ಮತ್ತು ಒಂದು ದೊಡ್ಡ ಪುಂಗಿ (ಟಿ.ವಿ). ದೊಡ್ಡ ಮಾತನ್ನು ಮುಂದಿಡುವುದು ಎಂದರೆ, ಒಂದು ಸ್ಪಷ್ಟ ದೃಷ್ಟಿಕೋನ, ಆ ದೃಷ್ಟಿಕೋನಕ್ಕೆ ಒಂದು ಯೋಜನೆಯ ಸ್ವರೂಪ ನೀಡುವುದು, ಆ ಯೋಜನೆಯನ್ನು ಕಾರ್ಯಗತಗೊಳಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸುವುದು ಹಾಗೂ ಕಾಲಕಾಲಕ್ಕೆ ಅದರ ಸಮೀಕ್ಷೆ ಮಾಡಿ, ದೇಶವು ಆ ಗುರಿಯೆಡೆಗೆ ಮುಂದುವರಿಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವುದು.

ಈ ಮಾನದಂಡಗಳನ್ನು ಅನುಸರಿಸಿ ನೋಡಿದರೆ, ಮೋದಿಜಿಯ 'ಪಂಚಪ್ರಾಣ'ಗಳು ಅರೆಬರೆಯಾಗಿ ಕಾಣಿಸುತ್ತವೆ. ಅವುಗಳನ್ನು ಪೂರ್ಣಗೊಳಿಸುವ ದಾರ್ಷ್ಟ್ಯವನ್ನು ನಾನು ಪ್ರದರ್ಶಿಸಬೇಕಾಗಿ ಬಂದಿದೆ. ''ಪಂಚಪ್ರಾಣ'ದ ದೊಡ್ಡ ಸಂಕಲ್ಪವನ್ನಿಟ್ಟುಕೊಂಡು ನಡೆಯಿರಿ," ಎಂದು ನರೇಂದ್ರ ಮೋದಿಯವರು ಮೊದಲ ಬಾರಿಯೇನೂ ಹೇಳಿಲ್ಲ. ಅವರು ಆಗಾಗ ದೊಡ್ಡ ಕನಸು ಕಾಣುವ ಮಾತುಗಳನ್ನು ಆಡುತ್ತಾರೆ ಮತ್ತು ಆ ಕನಸುಗಳನ್ನು ಇತರರಿಗೂ ತೋರಿಸುತ್ತಾರೆ. ಆದರೆ, ಈ ಮಾತಿನಲ್ಲಿ ಒಂದು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ: ಅದೇನೆಂದರೆ, "ದೊಡ್ಡ ಸಂಕಲ್ಪಗಳನ್ನು ಇಟ್ಟುಕೊಂಡು ನಡೆಯಿರಿ; ಆದರೆ, ಹಳೆಯ ಸಂಕಲ್ಪಗಳ ಲೆಕ್ಕವನ್ನೂ ಕೊಡಿ." ಅಕಸ್ಮಾತ್ ಮೊದಲ ಕನಸನ್ನು ನನಸಾಗಿಸದೆ, ಎರಡನೆಯ-ಮೂರನೆಯ ಕನಸನ್ನು ತೋರಿಸುವ ಪ್ರಕ್ರಿಯೆ ಶುರುವಾದರೆ, ಅಂತಹ ನಾಯಕನನ್ನು ಜನರು ಹುಸಿ ಕನಸುಗಳ ವ್ಯಾಪಾರಿ ಎಂದೂ, ಹೊಸ ಕನಸನ್ನು ಸುಳ್ಳಿನ ತೋಟವೆಂದೂ ಕರೆಯುವರು.

AV Eye Hospital ad
Har Ghar Tiranga

ನನ್ನಂತಹ ಕೋಟಿಗಟ್ಟಲೆ ಭಾರತೀಯರು ಈ ಆಗಸ್ಟ್‌ 15ಕ್ಕೆ ಒಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಅಂದು ಪ್ರಧಾನಮಂತ್ರಿಯವರು ಕಳೆದ ಕೆಲವು ವರ್ಷಗಳಿಂದ ತೋರಿಸುತ್ತಿರುವ ಕನಸುಗಳ ಲೆಕ್ಕ ಕೊಡುತ್ತಾರೆ ಎಂದು ಅಂದುಕೊಂಡಿದ್ದೆವು. ಆ ಕನಸುಗಳಿಗೆ ಸ್ವಯಂ ಈ ಪ್ರಧಾನಿಯೇ 2022ರ ಆಗಸ್ಟ್ 15ರ ಗಡುವನ್ನು ನೀಡಿದ್ದರು. ಹಾಗಾಗಿ, ಆ ಇಂತಹ ಸಂಕಲ್ಪಗಳ ಪಟ್ಟಿ ತುಂಬಾ ದೊಡ್ಡದಿದೆ, ಅವುಗಳ ಎಣಿಕೆ ಇಲ್ಲಿ ಮಾಡಲೂ ಆಗುವುದಿಲ್ಲ.

ಉದಾಹರಣೆಗೆ, ಸ್ವಾತಂತ್ರ್ಯದ 75ನೆಯ ವಾರ್ಷಿಕೋತ್ಸವದ ತನಕ, ದೇಶದಲ್ಲಿ ಒಂದೇ ಒಂದು ಕಚ್ಚಾ ಮನೆ ಇರುವುದಿಲ್ಲ ಎಂಬ ಸಂಕಲ್ಪ ಮಾಡಲಾಗಿತ್ತು. ಕಚ್ಚಾ ಅಲ್ಲದ ಪಕ್ಕಾ ಮನೆ ಎಂದರೆ... ನಾಲ್ಕು ಗೋಡೆಗಳು, ಮೇಲೆ ಛಾವಣಿ, ಮನೆಗೆ ನಲ್ಲಿ, ನಲ್ಲಿಯಲ್ಲಿ ನೀರು, ವಿದ್ಯುತ್ ಸಂಪರ್ಕ ಹಾಗೂ ಅದರೊಂದಿಗೆ ಎಲ್‌ಇಡಿ ಬಲ್ಬ್ (ಇದು ನನ್ನ ಮಾತಲ್ಲ, ಸ್ವತಃ ಮೋದಿಜಿಯವರ ಶಬ್ದಗಳು). ಇದರ ವಾಸ್ತವ ಎಷ್ಟು ಕಹಿಯಾಗಿತ್ತೆಂದರೆ, ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಇದರ ಉಲ್ಲೇಖವನ್ನೂ ಮಾಡಲಿಲ್ಲ! ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂಬ ಸಂಕಲ್ಪವೂ ಇತ್ತು. ಆರು ವರ್ಷಗಳ ತನಕ ಇದರ ಡೊಳ್ಳು ಬಾರಿಸಿದ ನಂತರ ಈಗ ಸರ್ಕಾರ ಸಂಪೂರ್ಣ ಮೌನ ಆಚರಿಸುತ್ತಿದೆ.

ಈ ಲೇಖನ ಓದಿದ್ದೀರಾ?: ಸ್ವಾತಂತ್ರ್ಯ 75| ವಿಜೃಂಭಿಸುತ್ತಿರುವುದು ಸ್ವಾತಂತ್ರ್ಯ ವಿರೋಧಿ ಪಡೆ

ಜಿಡಿಪಿ ಹೆಚ್ಚಳದ ದರ ಶೇಕಡ 8ರಷ್ಟು ಆಗುವುದು, ಮಹಿಳೆಯರ ಉದ್ಯೋಗವನ್ನು ಶೇಕಡ 30ಕ್ಕೆ ಏರಿಸಲಾಗುವುದು, ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು, ರೈಲ್ವೇಯಲ್ಲಿ ಅಪಘಾತಗಳು ಸೊನ್ನೆಯಾಗುವವು... ಎಂಬಿತ್ಯಾದಿ ಎಲ್ಲ ಸಂಕಲ್ಪಗಳಿದ್ದವು. ಇಡೀ ಪಟ್ಟಿಯನ್ನು ಎಣಿಸಿ ನಾನು ಪ್ರಧಾನಿಗಳಿಗೆ ಮುಜುಗರ ಮಾಡಲು ಬಯಸುವುದಿಲ್ಲ. ಇಷ್ಟು ಮನವಿ ಮಾಡಬಯಸುತ್ತೇನೆ, ಮುಂದಿನ ದಿನಗಳಲ್ಲಿ ಯಾವುದಾದರೂ ಸಂಕಲ್ಪ ಮಾಡಿದಲ್ಲಿ, ಅದರ ಕುರಿತು ಸೂಕ್ತ ಯೋಜನೆ ರೂಪಿಸಿ, ಅದರ ಸಾಧ್ಯತೆಗಳ ಕುರಿತು ಸಮೀಕ್ಷೆ ಮಾಡಿ ಹಾಗೂ ಅದರ ಸಫಲತೆ, ವಿಫಲತೆಯ ಕುರಿತ ಲೆಕ್ಕವನ್ನು ಪ್ರಾಮಾಣಿಕತೆಯಿಂದ ದೇಶದ ಮುಂದಿಡಿ. ಒಂದು ವೇಳೆ ನನಗೆ ಕೇಳಿದರೆ, ಒಂದೇ ಸಂಕಲ್ಪ ಸಾಕು; ಅದೇನೆಂದರೆ, ಪ್ರತಿಯೊಂದು ಕೈಗೆ ತ್ರಿವರ್ಣ ಧ್ವಜದ ಬದಲು ಉದ್ಯೋಗ ಕೊಡಿ.

ಪ್ರಧಾನಮಂತ್ರಿಯವರ ಎರಡನೆಯ ಸೂತ್ರ ಹೀಗಿತ್ತು: "ಗುಲಾಮಗಿರಿಯ ಒಂದು ಸಣ್ಣ ಎಳೆಯನ್ನೂ ಉಳಿಸಿಕೊಳ್ಳಬಾರದು." ಈ ಮಾತು ನನಗೆ ಇಷ್ಟವಾಯಿತು, ಏಕೆಂದರೆ, ಸ್ವಾತಂತ್ರ್ಯದ ತರುವಾಯ ಶಿಕ್ಷಿತ ಭಾರತೀಯರಲ್ಲಿಯ ಮಾನಸಿಕ ಗುಲಾಮಗಿರಿ ನನಗೆ ಚುಚ್ಚುತ್ತೆ. ಆದರೆ, ಪ್ರಧಾನಮಂತ್ರಿಯವರ ಈ ಮಾತಿನ ಸಂತೋಷ ಒಳಗೆ ಇಳಿಯುವುದಕ್ಕೂ ಮುನ್ನ, ನಮ್ಮ ಸುಶಿಕ್ಷಿತ ಇಂಗ್ಲಿಷ್ ವರ್ಗದ ಮಾನಸಿಕ ಗುಲಾಮಗಿರಿಯ ಚಿನ್ಹೆಗಳಾದ ಅಲ್ಲಾ ಜುಮ್ಲಾ ಮಾತುಗಳು ಪ್ರಧಾನಮಂತ್ರಿಯವರ ಬಾಯಿಂದಲೇ ಬಂದಿದ್ದವು.

ಅವರು ಹೇಳುತ್ತಿದ್ದದ್ದು - 'ಡೆವಲಪ್ಡ್ ನೇಷನ್’ ಆಗಬೇಕಿದೆ (ಇದು ಯುರೋಪ್ ಮತ್ತು ಅಮೆರಿಕದ ಮೂಲಕ ವಿಧಿಸಲಾಗಿರುವ 50 ವರ್ಷಗಳ ಹಿಂದಿನ ವಿಚಾರ). ನಾವು ‘ಎಸ್ಪಿರೇಷನಲ್ ಸೊಸೈಟಿ’ ಆಗಿದ್ದೇವೆ (ಈ ಜುಮ್ಲಾವನ್ನೂ ಅಮೆರಿಕದಿಂದ ಎರವಲು ಪಡೆಯಲಾಗಿದೆ). ನಂತರ ನನಗೆ ಹೊಳೆದಿದ್ದೇನೆಂದರೆ, ನಾವು ಕೇವಲ ಮೋದಿಜಿಯವರನ್ನಷ್ಟೇ ಎಲ್ಲದಕ್ಕೂ ದೂರಬೇಕು ಎಂದು. ಅವರ ವೈಚಾರಿಕ ಪರಂಪರೆಯಲ್ಲಿ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ವಿಚಾರಗಳು ನೇರವಾಗಿ ಜರ್ಮನಿ ಮತ್ತು ಇಟಲಿಯ ರಾಷ್ಟ್ರವಾದದ ನಕಲುಗಳಾಗಿವೆ. ನನಗೆ ಎರಡನೆಯ ಸೂತ್ರದಲ್ಲಿಯೂ ತಿದ್ದುಪಡಿ ಮಾಡಬೇಕಾಗಿ ಬಂತು - ಗುಲಾಮಗಿರಿಯನ್ನು ಕೊನೆಗೊಳಿಸಿ; ಆದರೆ, ಅದರ ಪ್ರಾರಂಭ ನಿಮ್ಮಿಂದಲೇ ಆಗಲಿ.

ಈ ಲೇಖನ ಓದಿದ್ದೀರಾ?: ಸ್ವಾತಂತ್ರ್ಯ 75| ಮಹಾಡ್‌ ಸತ್ಯಾಗ್ರಹದಿಂದ ಮೇಘವಾಲ್‌ ಸಾವಿನವರೆಗೆ ದಲಿತರ ದಾಹ ನೀಗಿಸದ ಸ್ವಾತಂತ್ರ್ಯ ಜೀವಜಲ!

ಪಂಚಪ್ರಾಣದ ಮೂರನೆಯ ಸೂತ್ರ: "ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇರಲಿ." ಆಗ ನನಗನಿಸಿದ್ದು, ಮೋದಿಜಿಯವರು ತಾವು ನಿಂತು ಮಾತನಾಡುತ್ತಿರುವ ಕೆಂಪುಕೋಟೆಯ ಪರಂಪರೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಆ ಪರಂಪರೆಯ ಬಗ್ಗೆ ಅವರು ಮೌನ ವಹಿಸಿದರು. ಅಂದಹಾಗೆ ಅವರ ಮಾತು ಸರಿ ಇದೆ. ಏಕೆಂದರೆ, ಇಂದಿನ ಭಾರತೀಯಳಿ/ನಿಗೆ ತನ್ನ ದೇಶದ ಭಾಷೆ, ವೇಷಭೂಷಣ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಏನೂ ಗೊತ್ತಿಲ್ಲವೆನಿಸುತ್ತದೆ. ಪ್ರತಿಯೊಬ್ಬ ಭಾರತೀಯಳಿ/ನಿಗೆ ತನ್ನದೇ ಆದ ರೀತಿಯಲ್ಲಿ ಭಾರತವನ್ನು ಕಂಡುಕೊಳ್ಳಬೇಕಿದೆ. ಆದರೆ, ಈ ಶೋಧ ಆಗಬೇಕೆಂದರೆ, ನಾವು ನಮ್ಮ ಪರಂಪರೆಯಲ್ಲಿ ಏನೆಲ್ಲ ಸ್ವೀಕಾರಾರ್ಹವಿದೆ ಮತ್ತು ಏನೆಲ್ಲ ತ್ಯಾಜ್ಯವಿದೆ ಎಂಬುದರ ಬಗ್ಗೆ ಒಂದಿಷ್ಟು ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.

Dalit Boy

ಅಂದಹಾಗೆ, ನಮ್ಮ ಸಂಸ್ಕೃತಿ ಗುತ್ತಿಗೆ ಪಡೆದ ಶಿಕ್ಷಕನೊಬ್ಬ ತನ್ನ ಮಡಕೆಯ ನೀರನ್ನು ಕುಡಿಯುವ ಸಾಹಸ ಮಾಡಿದ ಬಾಲಕನನ್ನು ಹೊಡೆದು ಸಾಯಿಸಿದನಲ್ಲ, ಅದು ನಮ್ಮ ಪರಂಪರೆ ಆಗಲಾರದು. ಪರಂಪರೆಯಲ್ಲಿ ಬಳುವಳಿಯಾಗಿ ಬಂದ ಅಮೂಲ್ಯ ರತ್ನಗಳನ್ನು ಉಳಿಸುವ ಸಮಯದಲ್ಲಿಯೇ, ಅದೇ ಪರಂಪರೆಯ ಭಾಗವಾಗಿ ಬಂದ ಕಸವನ್ನು ಹೊರಗೆ ಎಸೆಯುವ ಸಂಕಲ್ಪವನ್ನೂ ಮಾಡಬೇಕಿದೆ. ಪರಂಪರೆಯಲ್ಲಿ ಬಂದ ಸುಂದರ ಮೌಲ್ಯಗಳನ್ನು ಪುನರುಚ್ಛರಿಸುವುದರಿಂದ ಏನೂ ಆಗುವುದಿಲ್ಲ. ಯಾವಾಗ ಅವುಗಳ ಉಲ್ಲಂಘನೆ ಆಗುತ್ತದೆಯೋ, ಯಾವಾಗ ರಸ್ತೆಯಲ್ಲಿ ಒಬ್ಬ ಅಮಾಯಕನ ಗುಂಪುಹತ್ಯೆ ಆಗುತ್ತದೋ, ಆಗ ಅದರ ಬಗ್ಗೆ ನಾಚಿಕೆಪಡುವುದೂ, ರಾಷ್ಟ್ರೀಯ ಗರ್ವದ ಪೂರ್ವಶರತ್ತಾಗಿರಬೇಕಾಗುತ್ತದೆ. ಹಾಗಾಗಿ, ಮೂರನೆಯ ಸೂತ್ರ ಹೀಗೆ ಆಗುವುದು - ಪರಂಪರೆಯ ಬಗ್ಗೆ ಹೆಮ್ಮೆ ಆದರೆ, ಮೊದಲು ಅದರ ಸ್ವಚ್ಛತೆಯನ್ನೂ ಮಾಡಿ ನಂತರ ಅದರ ಬಗ್ಗೆ ಚಿಂತನೆಯೂ ಆಗಬೇಕು.

ಪ್ರಧಾನಮಂತ್ರಿಯ ನಾಲ್ಕನೆಯ ಸೂತ್ರ: "ಏಕತೆ ಮತ್ತು ಒಗ್ಗಟ್ಟನ್ನು ಸೃಷ್ಟಿಸುವುದು." ಈ ಮಾತು ನೇರವಾಗಿತ್ತು ಮತ್ತು ಇದರಲ್ಲಿ ಯಾವುದೇ ಆತಂಕ ಕಾಣಿಸಲಿಲ್ಲ. ಆದರೆ, ನನಗೆ ಅರಗಿಸಿಕೊಳ್ಳಲು ಆಗಲಿಲ್ಲ. ಥಟ್ಟನೆ, 'ಒಂಬೈನೂರು ಇಲಿಗಳನ್ನು ತಿಂದು ಬೆಕ್ಕು ಹಜ್‌ಗೆ ಹೋಗಲು ಅಣಿಯಾಯಿತು’ ಎಂಬ ಮಾತು ನೆನಪಾಯಿತು. ಒಂದು ವೇಳೆ ಪ್ರಧಾನಿಯವರು ಹಿಂದೂ ಏಕತೆಯ ಬಗ್ಗೆ ಮಾತನಾಡಿದ್ದರೆ, ಅದು ತಪ್ಪಾಗಿರುತ್ತಾದರೂ ನಮಗೆ ಅರ್ಥವಾಗುತ್ತಿತ್ತು. ಆದರೆ, ಕಳೆದ ಬಹಳಷ್ಟು ಸಮಯದಿಂದ ದೇಶದ ಏಕತೆಯನ್ನು ಒಡೆಯುವ ಅಂದೋಲನವನ್ನು ಸುಮ್ಮನೆ ನೋಡಿದ, ಅದಕ್ಕೆ ಉತ್ತೇಜನ ನೀಡಿದ ನರೇಂದ್ರ ಮೋದಿಯವರು ರಾಷ್ಟ್ರೀಯ ಏಕತೆಯ ಬಗ್ಗೆ ಮಾತನಾಡಿದಾಗ ಕಸಿವಿಸಿಯಾಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಏನೆಲ್ಲ ಆಗಿಲ್ಲ! 80 ಮತ್ತು 20ರ ಘೋಷಣೆಗಳ ಮೇಲೆ ಚುನಾವಣೆ ಸ್ಪರ್ಧಿಸಲಾಯಿತು. ಧರ್ಮ ಸಂಸತ್ತಿನ ಹೆಸರಿನಲ್ಲಿ ದೇಶದ 20 ಕೋಟಿ ನಾಗರಿಕರನ್ನು ಮುಗಿಸುವ ಮನವಿ ಮಾಡಲಾಯಿತು. ಪ್ರಾರ್ಥನೆಯ ಸ್ಥಳಗಳ ಮುಂದೆ ತ್ರಿಶೂಲ ಮತ್ತು ತಲವಾರಗಳನ್ನು ಝಳಪಿಸಿ, ಅದರ ಮೇಲೆ ಏರಿ ಕೇಸರಿ ಬಾವುಟ ಹಾರಿಸಲಾಯಿತು. ನ್ಯಾಯದ ಹೆಸರಿನಲ್ಲಿ ಬುಲ್ಡೋಜರ್‌ಗಳನ್ನು ಹರಿಬಿಡಲಾಯಿತು. ಇಡೀ ದೇಶದಲ್ಲಿ ದ್ವೇಷದ ಬಿರುಗಾಳಿ ಎಬ್ಬಿಸಲಾಯಿತು. ತನ್ನ ಮಕ್ಕಳಲ್ಲಿ ಒಡಮೂಡಿಸುವ ಈ ಪಿತೂರಿಗಳನ್ನು ನೋಡಿ ಭಾರತಮಾತೆ ಬಿಕ್ಕಿಬಿಕ್ಕಿ ಅತ್ತಳು. ಆದರೆ, ಪ್ರಧಾನಮಂತ್ರಿ ಸುಮ್ಮನಿದ್ದರು. ಹಾಗಾಗಿ, ನಾನು ನಾಲ್ಕನೆಯ ಸೂತ್ರವನ್ನು ಸದ್ದಿಲ್ಲದೆ ವಿಸ್ತರಿಸಿದೆ - ಏಕತೆ ಮತ್ತು ಒಗ್ಗಟ್ಟನ್ನು ಸೃಷ್ಟಿಸಬೇಕು; ಕೇವಲ ಮಾತಿನಲ್ಲಿ ಅಲ್ಲ, ಬದಲಿಗೆ ನಮ್ಮ ದೈನಂದಿನ ವ್ಯವಹಾರಗಳಲ್ಲಿ.

ಐದನೆಯ ಸೂತ್ರವೂ ನಿರುಪದ್ರವಿಯಾಗಿದೆ: "ನಾಗರಿಕರ ಕರ್ತವ್ಯವನ್ನು ನಿಭಾಯಿಸುವುದು." ಆದರೆ, ನನಗೆ ಯಾಕೋ ಅದರಲ್ಲಿ ಶಾಲೆಯ ನಾಗರಿಕ ಶಾಸ್ತ್ರದ ಪುಸ್ತಕಗಳ ವಾಸನೆ ಬರುತ್ತಿತ್ತು. ಇತಿಹಾಸದ ಒಂದು ಪಾಠ ನೆನಪಾಗುತ್ತಿತ್ತು. ಪ್ರತಿಯೊಬ್ಬ ಅಹಂಕಾರಿ ಸರ್ವಾಧಿಕಾರಿಯೂ ನಾಗರಿಕರ ಕರ್ತವ್ಯದ ಬಗ್ಗೆ ಮಾತನಾಡುತ್ತಾನೆಯೇ ಹೊರತು, ಅವರ ಅಧಿಕಾರಗಳ ಬಗ್ಗೆ ಅಲ್ಲ. ಗಾಂಧೀಜಿಯವರ ಪಾಠ ನೆನಪಾಗುತ್ತಿತ್ತು - ಅನ್ಯಾಯದ ವಿರೋಧ ಮಾಡುವುದು ಪ್ರತಿಯೊಬ್ಬ ನಾಗರಿಕನ ಅತ್ಯಂತ ದೊಡ್ಡ ಕರ್ತವ್ಯವಾಗಿದೆ. ಹಾಗಾಗಿಯೇ, ಕೊನೆಯ ಸೂತ್ರದಲ್ಲಿ ತಿದ್ದುಪಡಿ ಮಾಡುವವನಿದ್ದೆ - ಕರ್ತವ್ಯವನ್ನು ನಿಭಾಯಿಸಿ ಆದರೆ, ಪ್ರತಿರೋಧ ಒಡ್ಡುವುದು ಒಂದು ಕರ್ತವ್ಯವಾಗಿದೆ. ಆಗಲೇ ನನಗೆ ಮೋದಿಜಿಯ ಒಂದು ವಾಕ್ಯ ಕೇಳಿಸಿತು - "ಯಾರ ಮನದಲ್ಲಿ ಪ್ರಜಾಪ್ರಭುತ್ವವಿದೆಯೋ, ಅವರು ಸಂಕಲ್ಪ ತೊಟ್ಟಾಗ, ಅವರು ಇಡೀ ಜಗತ್ತಿನ ದೊಡ್ಡ-ದೊಡ್ಡ ಸಾಮ್ರಾಜ್ಯಗಳ ಸಂಕಟ ಕಾಲ ತರುತ್ತಾರೆ.” ಇಲ್ಲಿ ನನಗೆ ಮೋದಿಜಿಯವರೊಂದಿಗೆ ಸಂಪೂರ್ಣ ಸಹಮತವಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app