ಕೂಡಲ ಸಂಗಮದ ದಿನಗಳು | 'ತಮ್ಮಾ, ಮುಂದ ಹೇಳಲೇ... ಬರೀ ಹೇಳಿದ್ದ ಹೇಳ್ತಿಯಲ್ಲಾ, ಹುಚ್ಚಪ್ಯಾಲಿ'

ನಾ ಕಲಿತ ಚವಡಕಮಲದಿನ್ನಿ ಶಾಲೆಯೊಳಗ ನಾಕು ಕೋಣಿ ಇದ್ವು. ಜೊತೆಗೆ ಹನುಮಂತ ದೇವರ ಗುಡಿಯೊಳಗ ಸಾಲಿ ನಡಿತಿತ್ತು. ಒಂದ್ ಕೋಣಿಯೊಳಗ ಒಂದ, ಎರಡ, ಮೂರನೇ ಕ್ಲಾಸ್ ಸೇರಿಸಿ ಕೂಡಿಸುತ್ತಿದ್ರು. ಮುಂಜಾನೆ ಭಾಷಾ ವಿಷಯ ಹೇಳಿದ್ರ, ಮಧ್ಯಾಹ್ನ ಲೆಕ್ಕ ಮಾಡೋದು, ಜೋರಾಗಿ ಒಂದರಿಂದ ಮೂವತ್ತರವರೆಗೆ ಮಗ್ಗಿ ಓದ್ಸೋದು ರೂಢಿ

“ಅಲ್ರೀ ಹುಡುಗಾ ಶಾಣ್ಯಾ ಅದಾನ. ಹಿಂಗ್ ದಿನಾ-ದಿನಾ ಶಾಲಿ ಬಿಡಿಸಿದ್ರ ಹಾಳಾಗ್ತಾನ ನೋಡ್ರೀ...” ಅಂತ ಮಡಿವಾಳ ಸರ್ ಹೇಳುವಾಗ, ಅಪ್ಪ-ಅವ್ವ, "ಇನ್ನೊಮ್ಮೆ ಸಾಲಿ ಬಿಡಸಲ್ರಿ ಸರ್..." ಅಂತಿದ್ದರು. ಅವರು ನನ್ ಸಾಲಿ ಬಿಡಿಸದಿದ್ದರೂ, ಅವರ ಬಿಡಿಸಿದಂಗ ಮಡಿವಾಳ ಮಾಸ್ತರ ಮುಂದ ಕೈಕಟ್ಟಿ ನಿಂತಿದ್ದರು. "ಲೇ ಮುನ್ಯಾ... ದಿನಾ ಶಾಲೆ ಬಿಟ್ಟಂದ್ರ ಉದ್ದಾರ ಆಗಲ್ಲ ನೋಡು, ನಾಳಿಂದ್ರ ನೆಟ್ಟಗ ಸಾಲಿಗೆ ಬಾ...” ಅಂತ ಹೇಳಿ ಹೋದ್ರು.

Eedina App

ನಾನು ಒಂದರಿಂದ ಏಳನೇ ಇಯತ್ತೇ ಕಲಿತಿದ್ದು ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಚವಡಕಮಲದಿನ್ನಿ ಅಂತಾ ಹೆಸರು. ಕೂಡಲ ಸಂಗಮದಿಂದ ಒಂದೆರಡು ಕಿಲೋಮೀಟರ್ ದೂರ ಇರೋ (ಕೂಗಳತಿ) ಹಳ್ಳಿ. ಈ ಕಡೆ ಚವಡಕಮಲದಿನ್ನಿ, ವರಗೋಡದಿನ್ನಿ, ವಳಕಲದಿನ್ನಿ, ಚಿಂತಕಮಲದಿನ್ನಿ... ಹೀಗೆ ‘ದಿನ್ನಿ’ ಅಂತಾ ಕೊನೆಗೊಳ್ಳೊ ಹಳ್ಳಿಗಳು ಬಹಳ.

ನಮ್ಮಪ್ಪ-ಅವ್ವ ಊರೂರು ಜಾತ್ರೆಗಳಿಗೆ ವ್ಯಾಪಾರ ಮಾಡೋದಕ್ಕೆ ಹೋಗ್ತಾ ಇದ್ರು. ಅಂದ್ರೆ, ಸಂಚಾರಿ ವ್ಯಾಪಾರಿಗಳು. ವ್ಯಾಪಾರ ಅಂದ್ರ ಚಿಕ್ಕ ಮಕ್ಕಳ ಆಟಿಕೆ ಸಾಮಾನು, ಬಲೂನು ಇತ್ಯಾದಿ ಇರೋ ಟೆಂಟ್ ಅಂಗಡಿ. ಅವರೊಂದಿಗೆ ಹೋದ್ರೆ ನಂಗೂ ಜಾತ್ರೆ ಸುತ್ತುವ ಅವಕಾಶ, ಒಂದಿಷ್ಟು ರೊಕ್ಕ ಸಿಗುತ್ತಿತ್ತು. ಅದರಿಂದ ಜಾತ್ರೆಯೊಳಗೆ ಬಂದ ಬ್ಯಾರೇ ಅಂಗಡಿಗಳಿಂದ ಗನ್, ಬುಗುರಿ, ತರಹೇವಾರಿ ಹಾಡು ಹಾಡೋ ಗೊಂಬೆ ತಗೊಂಡು ಬಂದು ಊರಾಗ್, ಓಣಿಯೊಳಾಗ್ ಧಿಮಾಕಿಂದ ತೋರಸಕೊಂಡು ಓಡಾಡುತ್ತಿದ್ದೆ.

AV Eye Hospital ad
ಸಾಂದರ್ಭಿಕ ಚಿತ್ರ

ಶಾಲೆ ಬಿಟ್ಟು ಜಾತ್ರಿ-ಜಾತ್ರಿ ತಿರುಗಿದ್ರ ಹಾಳಾಗ್ತಾನ ಅಂತಾ ಚಿಂತಿ ಮಾಡುತ್ತಿದ್ದ ಅಪ್ಪ-ಅವ್ವ, ಕೊನೆಗೆ ಮಾಸ್ತಾರ ಮಾತ ಕೇಳಿ, ನನ್ನ ಜಾತ್ರೆಗಳಿಗೆ ಕರಕೊಂಡು ಹೋಗೋದು ಬಿಟ್ರು. ಅವರು ಹೋಗುವಾಗ ನಂದು ದೊಡ್ಡ ರಂಪಾಟ. ನಮ್ಮವ್ವ ರಮಿಸಿ, "ನನ್ನ ಬಂಗಾರ, ಶಾಣ್ಯಾ," ಅಂತಾ ಮುದ್ದ ಮಾಡಿ, ಕೈಯಾಗ ಒಂದೆರಡು ರೂಪಾಯಿ ಕೊಟ್ಟ ಹೋಗುತ್ತಿದ್ರು. ಬರುವಾಗ ಹೊಸ ಆಟಿಕೆ ಸಾಮಾನ ತರ್ತೀನಿ ಅಂಥ ಭರವಸೆ ಇದ್ದೇ ಇರುತ್ತಿತ್ತು. ಆ ಆಟಿಕೆ ಸಾಮಾನ ಬರುತ್ತನ್ನೋ ಖುಷಿಯೊಳಗ ದಿನಗಳು ಕಳೆದಿದ್ದು ಗೊತ್ತಾಗತಿದ್ದಿಲ್ಲ.

ನಾ ಕಲಿತ ಚವಡಕಮಲದಿನ್ನಿ ಶಾಲೆಯೊಳಗ ನಾಕು ಕೋಣಿ ಇದ್ವು. ಜೊತೆಗೆ ಹನುಮಂತ ದೇವರ ಗುಡಿಯೊಳಗ ಸಾಲಿ ನಡಿತಿತ್ತು. ಒಂದ ಕೋಣಿಯೊಳಗ 1, 2, 3ನೇ ಕ್ಲಾಸ್ ಸೇರಿಸಿ ಕೂಡಿಸುತ್ತಿದ್ರು. ಮುಂಜಾನೆ ಭಾಷಾ ವಿಷಯ ಹೇಳಿದ್ರ, ಮಧ್ಯಾಹ್ನ ಕೂಡುಸು, ಕಳೆಯೊ, ಗುಣಾಕಾರ, ಭಾಗಾಕಾರ ಲೆಕ್ಕ ಮಾಡೋದು, ಜೋರಾಗಿ ಒಂದರಿಂದ ಮೂವತ್ತರವರೆಗೆ ಮಗ್ಗಿ ಓದ್ಸೋದು ರೂಢಿ. ಹ್ಞಾಂ... ಮಗ್ಗಿ ಓದುದಂದ್ರ ತುಂಬಾ ಕಷ್ಟ. ಸ್ವಲ್ಪ ತಪ್ಪಿದ್ರ ಸಾಕು, ಕಳ್ಳಿ ಕಟಿಗಿ ಏಟು ಕುಂಡಿ, ಬೆನ್ನು, ಕೈ ಮ್ಯಾಲೆ ಕೆಂಪ ರಂಗೋಲಿ ಹಾಕ್ತಿತ್ತು. ಇಲ್ಲಂದ್ರ ಬಗ್ಗಿಸಿ ಬೆನ್ನಿಗೆ ಗುದ್ದಿದ್ರ ಕಣ್ಣಾಗ ನೀರು ಪಿಚ್‍ಕ ಅಂತಾ ಹಾರತಿದ್ದವು. ನನ್ನೋರಿಗೆಯವರಿಗೆ ಆಗಿನ ಶಿಕ್ಷಕರಿಂದ ಬಿದ್ದ ಏಟುಗಳೆಷ್ಟೋ! ಆದ್ರ ಒಬ್ಬ ತಂದೆ-ತಾಯಿ ಕೂಡ, "ಮಾಸ್ತರ ಯಾಕ್ ಹೊಡಿದ್ರಿ?" ಅಂತಾ ಒಂದಿನಾನೂ ಕೇಳಲಿಲ್ಲ. ಮರುದಿನ ಶಾಲೆಗೆ ಬಂದು, "ಇನ್ನೊಂದಿಷ್ಟು ಬೇಷ್ ನಾದ್ರಿ ಅವಂಗ್, ಕಲಿತ ಶಾಣ್ಯಾ ಆಗಲಿ," ಅಂತಿದ್ರು. ಛಡಿ ಚಮ್ ಚಮ್, ವಿದ್ಯೆ ಗಮ್ ಗಮ್ ಅನ್ನೊದು ಮಾಮೂಲಿಯಾಗಿತ್ತು.

ಒಂದು ದಿನ ಶಾಲೆ ಬಿಟ್ರ ಮರುದಿನ ಹೋಗಾಕ ಹೆದರಿ, ಸರ್ ಏಟ್ ನೆನಪಾಗಿ ಮೈ ನಡುಗುತ್ತಿತ್ತು. ಮನ್ಯಾಗ ಶಾಲಿಗೋದಂಗ ಮಾಡಿ, ಪೂಜಾವನ, ಕೂಡಲ ಸಂಗಮೇಶ್ವರ ದೇವಸ್ಥಾನ ಕಡೆ ಸುತ್ತಾಡಿ, ಸರಿಯಾಗಿ ಶಾಲೆ ಬಿಡುವಾಗ ಮನಿಗ ಬರತಿದ್ದೆ. ಆಗ ಶಾಲೆಗೆ ಹೋಗಿದ್ದ ನನ್ನ ಗೆಳೆಯರು, "ಮುನ್ಯಾ ಸಾಲಿಗೆ ಬಂದಿಲ್ಲ. ನಾಳೆ ಕಳಿಸಬೇಕಂತ," ಅಂದಾಗ, ನಮ್ಮವ್ವ ಕೈಯಾಗ ಸಿಕ್ಕಿದ್ದ ತಗೊಂಡು ಬೇಷ್ ಬಡಿತಿದ್ದಳು. ಹೊಡಿಸಕೊಂಡು ಮೂಲ್ಯಾಗ ಕುಂತಾಗ, ತಾನು ಅಳಕೋತ ರಮಿಸಿ ಊಟಾ ಮಾಡಿಸಿ, "ಶಾಣ್ಯಾ ಆಗಬೇಕಪ್ಪಾ... ನಮ್ಮಂಗ ದುಡಿಯೋದು ಬ್ಯಾಡ..." ಅಂತಾ ಹೇಳುವಾಗ, ಅವರ ನೋವು ಅರ್ಥ ಆಗ್ತಿತ್ತು.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ಊರಿನಲ್ಲಿ ಬೈಗುಳವಾಗಿದ್ದ ಜಾತಿಯ ಹೆಸರೊಂದು ಹೋರಾಟದಲ್ಲಿ ಆತ್ಮಾಭಿಮಾನವಾದ ಕತೆ

ಹಿಂಗ್ ಒಂದು ದಿನ ಸಾಲಿ ಬಿಟ್ಟಿದ್ಯಾ. ನಮ್ಮಪ್ಪವ್ವ ಊರಾಗ ಇರ್ಲಿಲ್ಲ. ನಮ್ ಕಾಕಾ ನಬೀಸಾಬಂದ್ರ ನಮಗ ಬಹಳ ಹೆದರಿಕೆ. ನಮ್ಮನೇಲಿ ಕಾಲೇಜು ಮೆಟ್ಟಿಲೇರಿದ ವ್ಯಕ್ತಿಯಂದ್ರ ನಮ್ಮ ಕಾಕಾ. ಆಗಾಗ ಅವರ ಹತ್ತಿರ ನಾಲ್ಕಾನೇ ಕೇಳಿ ಇಸಕೊಂಡು ಲಿಂಬುವಳಿ ಪೇಪರ್‍ಮಂಟ್ ತಿಂತಿದ್ದೆ. ನಾ ಸಾಲಿ ಬಿಟ್ಟ ಮನಿಯೊಳಾಗ ಕುಂತಿದ್ದು ನೋಡಿ ಬಾಜುಮನಿ ಚಿಗವ್ವ, ‘ಲೇ ಮುನ್ಯಾ... ಸಾಲಿಗೆ ಹೋಗಿ ಬಾ. ಇಲ್ಲಂದ್ರ ನಿಮ್ ಕಾಕಾಗ ಹೇಳ್ತಿನಿ ನೋಡು," ಅಂದದ್ದ ತಡಾ, ಮನಿ ಬಾಗಲ ಹಾಕಿ, ಬಚ್ಚಲ ಮನ್ಯಾಗ ಡೊಕ್ಕೊಂಡು ಕುಂತಬಿಟ್ಯಾ. ಒಂದೈದಹತ್ತ ನಿಮಿಷ ಆದ ನಂತರ ಮೆಲ್ಲಗ ಹೊರಗ ಬರುದ ತಡ, ಮರ್ಯಾಗ ನಿಂತಿದ್ದ ನಮ್ಮ ಕಾಕಾ ಪಡ್ಡನ ಕಪಾಳಕ ಹೊಡದು, ಕೈ ಕಟ್ಟಿ, "ಮಗನಾ ದಿನಾ ಒಂದ ಹುಡಗಾಟಿಕೆ ಹಚ್ಚಿಯೇನ್...?" ಅನಕೋತ ಸೈಕಲ್ ಮುಂದ ಕುಡಿಸಿಕೊಂಡು ಸಾಲಿಗೆ ಬಿಟ್ಟ ಬಂದ. ನನ್ನ ಜೀವನದಾಗ ಅದ ಕೊನೆ - ನಾನ್ಯಾವತ್ತು ಸಾಲಿ ಬಿಡಲಿಲ್ಲ. ಬಿಟ್ರು ಸರ್‍ನ ಕೇಳಿ ಒಂದಿನ ಬಿಡತಿದ್ದೆ. ಒಂದು ವೇಳೆ ನಮ್ಮ ಕಾಕಾ ಅವತ್ತು ಆ ರೀತಿ ವರ್ತಿಸಿರಲಿಲ್ಲಂದ್ರ ನಾನು ಎಲ್ಲೋ ಇರತಿದ್ದೆ.

ಚವಡಕಮಲದಿನ್ನಿ ಶಾಲೆಯಲ್ಲಿ ಬದುಕಿಗಂತು ಭದ್ರ ಬುನಾದಿ ಬಿತ್ತು. ನಂಗ್ ಸಿಕ್ಕ ಶಿಕ್ಷಕರೆಲ್ಲ ಕಾಳಜಿಯಿಂದ ಪಾಠ ಮಾಡಿದವರೇ. ಅದರಲ್ಲೂ, ಪಗಾರಿಲ್ಲದ ನಮಗೆಲ್ಲ ಪಾಠ ಮಾಡಿದ ಮಡಿವಾಳ ಸರ್‍ನ ಮರೆಯಂಗಿಲ್ಲ. ಸಾರಂಗಮಠ ವಠಾರದಾಗ ಇದ್ದ ಅವರು ನಮ್ಮನ್ನ ಸಾಲಿಗೆ ದಿನಾ ಕರಕೊಂಡ ಹೋಗತಿದ್ರು. ಕಟಗೂರ ಸರ್, ಮಂಕಣಿ ಸರ್, ಬಿರಾದಾರ್ ಸರ್, ಪಾಟೀಲ್ ಸರ್, ಕೂಗನ್ನವರ ಸರ್... ಹಿಂಗ ಯಾವತ್ತೂ ಮರೆಯಲಾರದ ಹೆಸರುಗಳು.

ಹಿಂಗ ಒಮ್ಮೆ ಕೂಡಲ ಸಂಗಮದಿಂದ 10-12 ಕಿಲೋಮೀಟರ್ ದೂರ ಇರೋ ಗಂಜೀಹಾಳ ಜಾತ್ರಿಗೆ ನನ್ನ ಕರಕೊಂಡು ಹೋಗಿದ್ರು ನಮ್ಮಪ್ಪ-ಅವ್ವ. ಮುಂಜಾನಿಂದ ಜಾತ್ರಿ ಸುತ್ತಿ, ಕಬ್ಬಿನ ಹಾಲು ಕುಡಿದು, ಮಸ್ತ ಮಜಾ ಮಾಡಕೊಂತ ಇದ್ದೆ. "ಸಂಜಿ ಮುಂದ ತೇರ ಎಳದ ಮ್ಯಾಲೆ ಗದ್ದಲ ಆಗತ್ತ, ನೆಟ್ಟಗ ಅಂಗಡಿ ಮುಂದಿರು," ಅಂತಾ ಅವ್ವ ಹೇಳಿದಳು. ಹಂಗ್ ಕುಂತಾಗ ನನ್ ಮುಂದ ಬಂದದ್ದು ಕಟಗೂರ್ ಸರ್. ಹೆದರಿ ಮೈ-ಕೈ ನಡಗಾಕತ್ತಿತ್ತು. ನಮ್ಮಪ್ಪವ್ವ ನಮಸ್ಕಾರ ಮಾಡಿದ್ರು. "ಅಲ್ರೀ ಮಕ್ತುಮಸಾಬ್, ಹುಡುಗನ್ನ ಜಾತ್ರಿ-ಜಾತ್ರಿ ಕರಕೊಂಡ ಹೋದ್ರ ಹೆಂಗ? ನಾಳೆ ಸಾಲಿಗೆ ಸಾಹೆಬ್ರು ಬರಕತ್ತಾರ. ಇರೋ ಹುಡುಗರ ಪೈಕಿ ಮುನ್ಯಾ ಶಾಣ್ಯಾ ಅದಾನ್. ಅವನ ಕರಕೊಂಡ ಹೋಗ್ತಿನಿ," ಅಂತ ಹೇಳಿ, ನಾ ಅಳಾಕತ್ತಿದ್ರೂ, ತಮ್ಮ ಬುಲೆಟ್ ಮ್ಯಾಲೆ ಕೂಡಲ ಸಂಗಮಕ್ಕ ಕರಕೊಂಡು ಬಂದ್ರು. ಮರುದಿನ ಸಾಹೆಬ್ರು ಸಾಲಿಗೆ ಬಂದಾಗ, ಕನ್ನಡ ಪದ್ಯ ಹಾಡಿ, ಪ್ರಶ್ನೆಗೆ ಉತ್ತರ ಕೊಟ್ಟು ಭೇಷ್ ಅನಸಿಕೊಂಡ್ಯಾ. ಕಟಗೂರ ಸರ್ ಮುಖದಾಗ ಖುಷಿ ಕಂಡಿತು.

ಸಾಂದರ್ಭಿಕ ಚಿತ್ರ

ಆಗಸ್ಟ್ 15ಕ್ಕೆ ಭಾಷಣ ಮಾಡಬೇಕಂತ ಬ್ಯಾರೆಯವರ ಕೈಲಿ ಭಾಷಣ ಬರೆಯಿಸಿಕೊಂಡು, ಬಾಯಿ ಪಾಠ ಮಾಡಿದ್ದೆ. ಧ್ವಜಾರೋಹಣ ಆದ ಮೇಲೆ ನನ್ನ ಹೆಸರು ಕರೆದ ಕೂಡಲೇ ಮೈಯೆಲ್ಲಾ ನಡುಗಿ, ಬಾಯಿ ಪಾಠ ಮಾಡಿದ್ದೆಲ್ಲಾ ಮರೆತೋಗಿ, "ಅಧ್ಯಕ್ಷರೇ, ಅತಿಥಿಗಳೇ ಹಾಗೂ ನನ್ನ ಗುರುಗಳೇ...” ಅಂತಾ ಮೂರ್ ಸಾಲಿ ಹೇಳಿದಾಗ ಅಲ್ಲಿದ್ದ ಹಿರಿಯರೊಬ್ಬರು, "ತಮ್ಮ, ಮುಂದ ಹೇಳಲೇ... ಬರೀ ಹೇಳಿದ್ದ ಹೇಳ್ತಿಯಲ್ಲಾ... ಹುಚ್ಚಪ್ಯಾಲಿ," ಅಂತಾ ಎರಡ ಸಾರಿ ಅಂದಾಗ, ಕೈ ಹಿಚಕೊಂಡು ಅಸಹ್ಯ ಆಗಿ ವಾಪಸ್ ಬಂದಿದ್ದೆ. ಅವತ್ತಿಂದ ಅದನ್ನ ಮನಸ್ಸಿಗ ಹಚಕೊಂಡು, 'ಭಾಷಣ ಮಾಡಿದ್ರ ಮುನ್ಯಾನಂಗ ಮಾಡಬೇಕು' ಅನ್ನುವಂಗ ರಾಜ್ಯ ಮಟ್ಟದವರಿಗೂ ಪ್ರಶಸ್ತಿ ಪಡದೆ. ಒಂದು ವೇಳೆ ಅವತ್ತು ಆ ಅಜ್ಜ ಅಸಹ್ಯ ಮಾಡಿಲ್ಲಂದ್ರ... ಇವತ್ತು ನಾಲ್ಕ ಮಂದ್ಯಾಗ ಮಾತಾಡುದು ಬರತಿರಲಿಲ್ಲ.

ಚಿಕ್ಕವರಿದ್ದಾಗ ಶಿಕ್ಷಕರೆಂದರೇ ಅದೆಷ್ಟು ಭಯ, ವಿನಯ. ದಾರಿಯಲ್ಲಿ ಶಿಕ್ಷಕರೇನಾದರೂ ಕಂಡರೆ, "ಯಪ್ಪೋ... ಸತ್ತೆ..." ಎಂದು ಯಾವುದೋ ಓಣಿ ಸಂಧಿಯಲ್ಲಿ ಓಡಿಹೋಗಿಬಿಡುತ್ತಿದ್ದೆವು. ಗುರುವೆಂದರೆ ಗುರುತರವಾದದ್ದು. ಅದೊಂದು ಆಯಸ್ಕಾಂತ. ಅದೊಂದು ಜ್ಯೋತಿ. ಅದು ಬೆಳಗುವಂತದ್ದು. ನೂರಾರು ಮಕ್ಕಳ ಅಂಧಕಾರ ಕಳೆಯುವಂತದ್ದು. ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣದಡಿ ಅಂತಹ ಹತ್ತಾರು ಅತ್ಯುತ್ತಮ ಶಿಕ್ಷಕರು ಸಿಕ್ಕ ಫಲವೇ ನನ್ನ ಬದುಕು ಹೀಗೆ ರೂಪುಗೊಂಡಿದೆ.

ಹಾಡು, ಆಟ, ನಾಟಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಗುರುಗಳು ನೀಡಿದ ಪ್ರೋತ್ಸಾಹ ನನ್ನಲ್ಲಿ ಹೊಸ ದಾರಿ ಕಂಡುಕೊಳ್ಳಲು ಸಹಾಯವಾಯಿತು. ಶಿಕ್ಷಕರ ದಿನದಂದು ಮಾತ್ರ ಅವರನ್ನೆಲ್ಲಾ ನೆನಸಿಕೊಳ್ಳದೆ, ಮರೆತೆನೆಂದರ ಮರೆಯಲಿ ಹ್ಯಾಂಗ್ ಎನ್ನುವಂತೆ ಅವರ ಚಿತ್ರ ಸದಾ ಸ್ಮರಣೀಯ. ವಿದ್ಯಾರ್ಥಿಗಳನ್ನೆಲ್ಲಾ ದೊಡ್ಡ-ದೊಡ್ಡ ಹುದ್ದೆಗಳಿಗೆ ಕಳುಹಿಸಿ, ತಾನು ಮಾತ್ರ ಶಿಕ್ಷಕರಾಗಿ ಉಳಿಯುವ ಧನ್ಯತಾ ಜೀವಿಗಳು ಅವರು. ನನ್ನೊಂದಿಗೆ ಎಲ್ಲರ ಬದುಕನ್ನ ಬದಲಿಸಿದ ಅಂಥ ಗುರುಗಳಿಗೆ ನಮನಗಳು.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app