ಅರ್ಥ ಪಥ | ಭಾರತದ ಆರ್ಥಿಕ ಬೆಳವಣಿಗೆಯ ದಾರಿ ಕುರಿತು ರಘುರಾಂ ರಾಜನ್ ಹೇಳುವುದೇನು?

Raghu-Rajan

35,000 ರೈಲ್ವೆ ನೌಕರಿಗೆ 25,000 ಲಕ್ಷ ಅರ್ಜಿಗಳು ಬರುತ್ತವೆ. ಅಂದರೆ, ನಮ್ಮ ಯುವಕರಿಗೆ ಒಳ್ಳೆಯ ಉದ್ಯೋಗಗಳನ್ನು ಕಲ್ಪಿಸಲಾಗಿಲ್ಲ ಎನ್ನುವುದು ಸ್ಪಷ್ಟ. ಯುವಕರು ಕೆಲಸಗಳಿಗೆ ಅರ್ಜಿ ಹಾಕುವುದರಲ್ಲೇ ತಮ್ಮ ಆಯಸ್ಸನ್ನು ಕಳೆದುಬಿಡುತ್ತಾರೆ. ನಮ್ಮಲ್ಲಿ ಬಹುಪಾಲು ಮಹಿಳೆಯರು ಉದ್ಯೋಗಕ್ಕೆ ಪ್ರಯತ್ನಿಸುತ್ತಿಲ್ಲ. ಆದರೂ ನಿರುದ್ಯೋಗ ಈ ಪ್ರಮಾಣದಲ್ಲಿದೆ

ರಘುರಾಂ ರಾಜನ್ ಇತ್ತೀಚೆಗೆ ಭಾರತದ ಆರ್ಥಿಕ ಬೆಳವಣಿಗೆಗೆ ಒಂದು ಮಾರ್ಗವನ್ನು ಸೂಚಿಸಿದ್ದಾರೆ. ಇಂದಿನ ಸ್ಥಿತಿಯಲ್ಲಿ ಆ ಬಗ್ಗೆ ಚಿಂತಿಸುವ ಅವಶ್ಯಕತೆ ಇದೆ ಎನ್ನುವ ನಂಬಿಕೆಯಿಂದ ಸ್ಥೂಲವಾಗಿ ಅದನ್ನು ಪರಿಚಯಿಸುತ್ತಿದ್ದೇನೆ. ಪ್ರಜಾಸತ್ತಾತ್ಮಕತೆ ಎನ್ನುವುದು ಬೆಳವಣಿಗೆಗೆ ಅಡ್ಡಿ ಎಂದು ಹಲವರು ವಾದಿಸುತ್ತಾರೆ. ಅವರ ಪ್ರಕಾರ ಬೆಳವಣಿಗೆ ಆಗಬೇಕಾದರೆ, ಒಬ್ಬ ನಿರಂಕುಶ ನಾಯಕ ಬೇಕು. ಅವನು ಅತೀಯಾಗಿ ಹೋಗದಂತೆ ತಡೆಯೋದಕ್ಕೆ ಒಂದಿಷ್ಟು ನಿರ್ಬಂಧಗಳು ಇದ್ದರೆ ಸಾಕು. ರಾಜನ್ ಇದನ್ನು ಒಪ್ಪುವುದಿಲ್ಲ. ಬೆಳವಣಿಗೆಯನ್ನು ಪ್ರಜಾಸತ್ತಾತ್ಮಕ ಬುನಾದಿಯ ಮೇಲೆಯೇ ಕಟ್ಟಬೇಕು ಎಂದು ಪ್ರತಿಪಾದಿಸುತ್ತಾರೆ. ಪ್ರಜಾಪ್ರಭುತ್ವ ಕುಸಿದರೆ ನಮ್ಮ ಆರ್ಥಿಕತೆ ನಾಶವಾಗುತ್ತದೆ. ಅಷ್ಟೇ ಅಲ್ಲ, ಒಂದು ದೇಶವಾಗಿ ನಮ್ಮ ಆತ್ಮವೇ ನಾಶವಾಗಿಬಿಡುತ್ತದೆ. ಜಾಗತಿಕವಾಗಿ ನಮ್ಮ ಮೇಲೆ ಜನ ತೋರುತ್ತಿರುವ ಪ್ರೀತಿಯನ್ನು ಕಳೆದುಕೊಂಡುಬಿಡುತ್ತೇವೆ. ನಿಜವಾಗಿ ಬೆಳವಣಿಗೆ ಎನ್ನುವುದು ಉದಾರವಾದಿ ಪ್ರಜಾಸತ್ತೆಯ ತಳಹದಿಯ ಮೇಲೆ ರೂಪುಗೊಳ್ಳಬೇಕು.

ಭಾರತದ ಆರ್ಥಿಕತೆ ಸಾಕಷ್ಟು ಸದೃಢವಾಗಿದೆ ಎನ್ನುವುದು ಸರಿ. ಆದರೆ, ಹಾಗೆ ಹೇಳುವಾಗ ಅಂಕಿ-ಅಂಶಗಳನ್ನು ಎಚ್ಚರದಿಂದ ಗಮನಿಸಬೇಕು. ನಮ್ಮಲ್ಲಿ ಬಡವರು ಅದರಲ್ಲೂ ಮಕ್ಕಳು ಕೊರೋನಾದಿಂದ ತುಂಬಾ ಬಳಲಿದ್ದಾರೆ. ಅನೌಪಚಾರಿಕ ವಲಯಕ್ಕೆ, ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ತೀವ್ರವಾದ ಹೊಡೆತ ಬಿದ್ದಿದೆ. ಪಿಡುಗಿನ ನಂತರ ಚೇತರಿಕೆ ಕಂಡರೂ ಹಿಂದಿನ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ. ಮೊದಲಿಗಿಂತ ನಮ್ಮ ಜಿಡಿಪಿ ಶೇಕಡ ಆರರಿಂದ ಏಳರಷ್ಟು ಕಡಿಮೆ ಇದೆ ಎಂದು ಮಾರ್ಗನ್ ಅಂದಾಜು ಹೇಳುತ್ತದೆ. ರಫ್ತು ಹೆಚ್ಚಾಗಿದೆ ಅನ್ನೋದು ನಿಜ. ಅದಕ್ಕೆ ಡಾಲರ್ ಬೆಲೆ ಹೆಚ್ಚಿರುವುದು ಸ್ವಲ್ಪ ಮಟ್ಟಿಗೆ ಕಾರಣ. ಅದನ್ನು ಲೆಕ್ಕಕ್ಕೆ ತೆಗೆದುಕೊಂಡರೆ ರಫ್ತಿನಲ್ಲಿ ನಾವು ಭಾವಿಸಿರುವಷ್ಟು ಹೆಚ್ಚಳ ಕಾಣುವುದಿಲ್ಲ. ಜೊತೆಗೆ ನಾವು ರಫ್ತಿಗಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ವ್ಯಾಪಾರದ ಕೊರತೆ ತೀವ್ರವಾಗಿದೆ. ಇದು ನಿರಾಶವಾದದ ಹೇಳಿಕೆಯಲ್ಲ. ನಮ್ಮ ಬೆಳವಣಿಗೆಯನ್ನು ಗಮನಿಸುವಾಗ ಹೆಚ್ಚು ಪ್ರಾಯೋಗಿಕವಾಗಿ ಯೋಚಿಸಬೇಕು ಅನ್ನುವ ಕೋರಿಕೆಯಷ್ಟೆ.

ನಮ್ಮ ಬೆಳವಣಿಗೆಯ ಸಮಸ್ಯೆಗೆ ಕೋವಿಡ್ ಸಂಪೂರ್ಣವಾಗಿ ಕಾರಣವಲ್ಲ. ನಾವು ಇನ್ನೂ ಬೆಳೆಯಬಹುದಿತ್ತು. 35,000 ರೈಲ್ವೆ ನೌಕರಿಗೆ 25,000 ಲಕ್ಷ ಅರ್ಜಿಗಳು ಬರುತ್ತವೆ. ಅಂದರೆ, ನಮ್ಮ ಯುವಕರಿಗೆ ಒಳ್ಳೆಯ ಉದ್ಯೋಗಗಳನ್ನು ಕಲ್ಪಿಸಲಾಗಿಲ್ಲ ಎನ್ನುವುದು ಸ್ಪಷ್ಟ. ಯುವಕರು ಕೆಲಸಗಳಿಗೆ ಅರ್ಜಿ ಹಾಕುವುದರಲ್ಲೇ ತಮ್ಮ ಆಯಸ್ಸನ್ನು ಕಳೆದುಬಿಡುತ್ತಾರೆ. ನಮ್ಮಲ್ಲಿ ಬಹುಪಾಲು ಮಹಿಳೆಯರು ಉದ್ಯೋಗಕ್ಕೆ ಪ್ರಯತ್ನಿಸುತ್ತಿಲ್ಲ. ಆದರೂ ನಿರುದ್ಯೋಗ ಈ ಪ್ರಮಾಣದಲ್ಲಿದೆ. ಈಗ ಸೌದಿ ಅರೇಬಿಯಾದಲ್ಲಿ ನಮ್ಮಲ್ಲಿಗಿಂತ ಹೆಚ್ಚು ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾರೆ. ಈ ವಿಷಯಲ್ಲಿ ನಮ್ಮ ಜೊತೆಯ ಎಲ್ಲಾ ದೇಶಗಳಿಗಿಂತ ಹಿಂದೆ ಇದ್ದೇವೆ.

Image
highway

ಜಿಡಿಪಿ, ರಫ್ತು ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವಕರಿಗೆ ಉದ್ಯೋಗ ಕೊಡಿಸಲು ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ದೇಶದಲ್ಲಿ ಒಳ್ಳೆಯದೂ ಆಗಿದೆ. 1991ರ ನಂತರ ಸುಮಾರು ಎರಡು ದಶಕಗಳ ಕಾಲ ನಮ್ಮ ಬೆಳವಣಿಗೆ ಶೇಕಡ ಏಳಕ್ಕೂ ಹೆಚ್ಚು ಪ್ರಗತಿಯಾಗಿದೆ. ಜಗತ್ತಿನಲ್ಲೇ ಅತಿಹೆಚ್ಚು ದ್ವಿಚಕ್ರ ವಾಹನ ತಯಾರಿಸುವ ದೇಶ ನಮ್ಮದು. ನಮ್ಮ ಪ್ರಖ್ಯಾತ ಎನ್‌ಫೀಲ್ಡ್ ಗಾಡಿಯನ್ನು, ಹಾರ್ಲಿ ಡೇವಿಡ್‌ಸನ್‌ ಉತ್ಪಾದಿಸುವ ದೇಶಕ್ಕೇ ರಫ್ತು ಮಾಡುತ್ತಿದ್ದೇವೆ. ಜನರ ಬದುಕು ಡಿಜಿಟಲೀಕರಣಗೊಂಡಿದೆ. ಸಂಪೂರ್ಣ ಸರ್ಕಾರಿ ಸ್ವಾಮ್ಯದ ಇಸ್ರೋ ಒಳ್ಳೆಯ ಕೆಲಸ ಮಾಡಿದೆ. ಮೈಕ್ರೋಸಾಫ್ಟ್ ಹಾಗೂ ಗೂಗಲ್‌ನಂತಹ ಸಂಸ್ಥೆಗಳನ್ನು ಭಾರತೀಯರು ಸೊಗಸಾಗಿ ನಿರ್ವಹಿಸಿದ್ದಾರೆ. ಭಾರತೀಯರಿಗೆ ಸಾಮರ್ಥ್ಯದ ಕೊರತೆಯಿಲ್ಲ. ಅವಕಾಶ ಸಿಕ್ಕರೆ ಅವರು ಯಾರಿಗೂ ಕಮ್ಮಿಯಿಲ್ಲ. ಆದರೂ, ನಮಗೆ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಅದಕ್ಕೆ ನಮ್ಮ ನಾಯಕತ್ವಕ್ಕಿರುವ ಕಲ್ಪನೆಯ ಕೊರತೆ ಕಾರಣ.

ವಾಜಪೇಯಿ ಕಾಲದಲ್ಲಿ ಹಮ್ಮಿಕೊಂಡಿದ ಗೋಲ್ಡನ್ ಕ್ವಾಡ್ರಿಲೇಟರಲ್ ರಸ್ತೆಗಳು ಹೆದ್ದಾರಿಗಳು ರಾಜ್ಯಗಳನ್ನು ಬೆಸೆದವು. ರಾಜ್ಯ ಸರ್ಕಾರಗಳು ನಿರ್ಮಿಸಿದ ರಸ್ತೆಗಳು ಹಳ್ಳಿಗಳನ್ನು ಪಟ್ಟಣಗಳೊಂದಿಗೆ ಬೆಸೆದವು. ಹೀಗೆ, ರಸ್ತೆಗಳನ್ನು ನಿರ್ಮಿಸುವುದರಿಂದ ಗ್ರಾಮೀಣ ಆರ್ಥಿಕತೆಗೆ ಅನುಕೂಲವಾಗುತ್ತದೆ. ಕೋಳಿ ಸಾಕಣೆ, ಹೈನು ಉದ್ಯಮ ಬೆಳೆಯುತ್ತವೆ. ಹಾಲು, ಕೋಳಿ ಹಾಗೂ ಮೊಟ್ಟೆಗಳನ್ನು ಪಟ್ಟಣದ ಮಾರುಕಟ್ಟೆಗಳಿಗೆ ಸಾಗಿಸುವುದು ಸುಲಭವಾಗುತ್ತದೆ. ಅಂಗಡಿಗಳಿಗೆ ಹೊಸ ವಸ್ತುಗಳು ಬರುತ್ತವೆ. ಹೊಸ ಕೆಲಸಗಳು ಸೃಷ್ಟಿಯಾಗುತ್ತವೆ. ಬೆಳವಣಿಗೆಯನ್ನು ಕಣ್ಣ ಮುಂದೆಯೇ ನೋಡಬಹುದು. ಹಾಗೆಯೇ ಶಾಲೆಗಳ ನಿರ್ಮಾಣ ಹಾಗೂ ಕೆಲಸಗಾರರ ನೈಪುಣ್ಯವನ್ನು ಹೆಚ್ಚಿಸುವುದು. ಇವೆಲ್ಲಾ ಮೂಲಭೂತ ಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಡಬಹುದಾದ ಕೆಲಸಗಳು.

ಇನ್ನು ತೆರಿಗೆಯ ನಿಯಮಗಳಲ್ಲಿ ನಿರಂತರವಾಗಿ ಉದಾರೀಕರಣ ಆಗುತ್ತಿದೆ. ಸರ್ಕಾರದ ಆಳ್ವಿಕೆಯ ಮೇಲೆ ಒಂದಿಷ್ಟು ನಿಯಂತ್ರಣಕ್ಕಾಗಿ ಮಾಹಿತಿ ಹಕ್ಕು ಕಾಯ್ದೆ, ಡಿಜಿಟಲೀಕರಣ ಇವೆಲ್ಲಾ ಆಗಿದೆ. ಜಿಡಿಪಿ ಏಳರಷ್ಟು ಏರುವುದರ ಹಿಂದೆ ಈ ಎಲ್ಲಾ ಪ್ರಯತ್ನಗಳೂ ಇವೆ. ಆದರೆ ಕಳೆದ ದಶಕದಲ್ಲಿ ಮತ್ತೆ ಬೆಳವಣಿಗೆ ಕುಸಿಯುವುದಕ್ಕೆ ಪ್ರಾರಂಭವಾಗಿದೆ. ಅಂದರೆ ನಾವು ಬೆಳವಣಿಗೆಯ ದಿಕ್ಕನ್ನು ಬದಲಿಸಬೇಕೆೆ? ಸುಧಾರಣೆಯನ್ನು ಇನ್ನಷ್ಟು ತೀವ್ರ ಹಾಗೂ ವ್ಯಾಪಕಗೊಳಿಸಬೇಕೆ? ಮೊದಲಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

"ಈ ಬಗ್ಗೆ ಸರ್ಕಾರದ ಚಿಂತನೆ ಏನು? ಪ್ರಸ್ತುತ ಸರ್ಕಾರ ಆತ್ಮನಿರ್ಭರದ ಅಥವಾ ಸ್ವಾವಲಂಬನೆಯ ವಿಷಯ ಮಾತನಾಡುತ್ತಿದೆ. ಸರ್ಕಾರ ಈವರೆಗಿನ ನೀತಿಗೆ ವಿರುದ್ಧ ದಿಕ್ಕಿನಲ್ಲಿ ಚಿಂತಿಸುತ್ತಿದೆ," ಎನ್ನುವುದು ರಘುರಾಂ ರಾಜನ್ ನಿಲುವು. ರಾಜನ್ ದೃಷ್ಟಿಯಲ್ಲಿ ಸರ್ಕಾರ ಮಾನವ ಬಂಡವಾಳ ಹಾಗೂ ಸೇವೆಗೆ ಆದ್ಯತೆ ನೀಡುತ್ತಿಲ್ಲ. ಅದಕ್ಕೆ ಭೌತಿಕ ಬಂಡವಾಳ ಹಾಗೂ ಸರಕುಗಳು ಹೆಚ್ಚು ಮುಖ್ಯವಾಗಿದೆ. ಅದರ ಹೆಚ್ಚಳಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರದ ಆದ್ಯತೆಯನ್ನು ತಿಳಿಯುವುದಕ್ಕೆ ಒಂದು ಉದಾಹರಣೆಯನ್ನು ಗಮನಿಸಿ. ಕೊರೊನಾದಿಂದ ಮಕ್ಕಳಿಗೆ ಎರಡು ವರ್ಷಗಳ ಕಾಲ ಶಾಲೆ ತಪ್ಪಿದೆ. ಅಷ್ಟೇ ಅಲ್ಲ, ಕಲಿತದ್ದನ್ನೂ ಮರೆತಿದ್ದಾರೆ. ಹಾಗಾಗಿ, ಹಲವು ವರ್ಷ ಹಿಂದೆ ಬಿದ್ದಿದ್ದಾರೆ. ಅವರನ್ನು ಕನಿಷ್ಠ ಹಿಂದಿನ ಮಟ್ಟಕ್ಕಾದರೂ ತರಬೇಕು. ಅದಕ್ಕೆ ಅಪಾರ ಶ್ರಮ ಬೇಕು. ಹೆಚ್ಚಿನ ಸಂಪನ್ಮೂಲ ಬೇಕು. ಹೆಚ್ಚಿನ ರಾಜ್ಯಗಳಿಗೆ ಈ ಕಡೆ ಗಮನ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಬಹುಶಃ ಸಂಪನ್ಮೂಲದ ಕೊರತೆ ಇರಬಹುದು. ತಮಿಳುನಾಡು ಒಂದು ಯೋಜನೆಯನ್ನು ಅದಕ್ಕಾಗಿ ಜಾರಿಗೆ ತಂದಿದೆ. ಕೇಂದ್ರ ಡಿಜಿಟಲ್ ಸಂಪನ್ಮೂಲದ ಮೂಲಕ ಮಾಡುತ್ತಿರುವ ಪ್ರಯತ್ನ ಹೆಚ್ಚು ಜನರಿಗೆ ತಲುಪುವುದಕ್ಕೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ರಾಜ್ಯಗಳ ನೆರವಿಗೆ ಬರಬಹುದು. ದಾರಿ ತೋರಿಸಬಹುದು.

Image
Exports

ಆದರೆ, ಕೇಂದ್ರ ಸರ್ಕಾರ ಬೇರೆ ಕಡೆ ಹಣವನ್ನು ತೊಡಗಿಸುತ್ತಿದೆ. 35 ಬಿಲಿಯನ್ ಡಾಲರನ್ನು ಉತ್ಪಾದನೆಯ ಸಬ್ಸಿಡಿಯಾಗಿ ದೊಡ್ಡ ಕೈಗಾರಿಕೆಗಳಿಗೆ ಪಿಎಲ್ಐ ಯೋಜನೆಯಡಿ ನೀಡುತ್ತಿದೆ. ಇದು ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಉದ್ಯೋಗ ಸೃಷ್ಟಿಸುವ ಪ್ರಯತ್ನ. ಇದರಿಂದ ಹಲವು ದೇಶಗಳಲ್ಲಿ ಒಳ್ಳೆಯದಾಗಿದೆ. ಚೀನಾ ಹೀಗೆ ಮಾಡಿ ತುಂಬಾ ಅಭಿವೃದ್ಧಿಯನ್ನು ಸಾಧಿಸಿದೆ. ನಮ್ಮ ಸರ್ಕಾರಕ್ಕೂ ಚೀನಾ ಹಾದಿ ಹಿಡಿಯಬೇಕೆನ್ನುವ ಚಿಂತನೆ ಇರಬಹುದು. ಅದು ಒಳ್ಳೆಯದೇ. ಆದರೆ, ಚೀನಾದಲ್ಲಿ ಮಾಡಿದ ಹಾಗೆ ಭಾರತದಲ್ಲಿ ಮಾಡುವುದಕ್ಕೆ ಸಾಧ್ಯವೆ? ಅಲ್ಲಿ ಮೊದಲು ತುಂಬಾ ಕಡಿಮೆ ಕೂಲಿ ಕೊಡುತ್ತಿದ್ದರು. ಬಡ್ಡಿದರ ತುಂಬಾ ಕಡಿಮೆಯಿತ್ತು. ಉದ್ದಿಮೆಗಳಿಗೆ ಅಗ್ಗವಾಗಿ ಮೂಲ ಸಾಮಗ್ರಿಗಳನ್ನು ಒದಗಿಸಿದರು. ಅಲ್ಲಿನ ಉದ್ದಿಮೆ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ರಫ್ತು ಮಾಡುವುದಕ್ಕೆ ಬೇಕಾದ ವಸ್ತಗಳನ್ನು ತಯಾರಿಸಿತು. ಚೀನಾ ನಿರಂಕುಶ ಪ್ರಭುತ್ವವಿದ್ದ ದೇಶವಾದ್ದರಿಂದ ಇವೆಲ್ಲಾ ಸಾಧ್ಯವಾಗಿತ್ತು.

ಭಾರತದಲ್ಲಿ ಆ ಮಾರ್ಗ ಸಾಧ್ಯವೂ ಇಲ್ಲ, ಸಿಂಧವೂ ಅಲ್ಲ ಅನ್ನುವುದು ರಾಜನ್ ಅಭಿಪ್ರಾಯ. ಹಾಗಾದರೆ ನಾವು ಏನು ಮಾಡಬಹುದು? ವ್ಯಾಪಾರಕ್ಕೆ ಬೇಕಾದ ಅನುಕೂಲಕರ ಪರಿಸರವನ್ನು ನಿರ್ಮಿಸುವುದು ಒಂದು ಮಾರ್ಗ. ಮತ್ತೊಂದು ದಾರಿಯೆಂದರೆ ನಮ್ಮಲ್ಲಿಯ ಉತ್ಪಾದನೆಗೆ ರಕ್ಷಣೆ ನೀಡಿ ಪ್ರೋತ್ಸಾಹಿಸುವುದು. ಆಮದು ಸುಂಕವನ್ನು ಹೆಚ್ಚಿಸಿದರೆ ಹೊರಗಡೆಯ ಸರಕುಗಳು ದುಬಾರಿಯಾಗುತ್ತವೆ. ನಮ್ಮ ಉತ್ಪನ್ನಗಳಿಗೆ ರಕ್ಷಣೆ ಸಿಗುತ್ತವೆ. ಜೊತೆಗೆ ಪ್ರೋತ್ಸಾಹ ಧನ ನೀಡಿ ಉತ್ಪಾದನೆಯನ್ನು ಹೆಚ್ಚಿಸಬಹುದು. ಉದಾಹರಣೆಗೆ ಸೆಲ್ ಫೋನಿಗೆ ಆಮದು ಸುಂಕವನ್ನು ಶೇಕಡ 10ರಿಂದ ಶೇಕಡ 20ಕ್ಕೆ ಏರಿಸಲಾಗಿದೆ. ಅದರಿಂದ ವಿದೇಶಿ ಫೋನ್ ಭಾರತದಲ್ಲಿ ದುಬಾರಿಯಾಗುತ್ತದೆ. ಜೊತೆಗೆ ಉತ್ಪಾದನೆಯನ್ನು ಪ್ರೋತ್ಸಾಹಿಸುವುದಕ್ಕೆ ಸಬ್ಸಿಡಿ ನೀಡಲಾಗಿದೆ. ಇದಕ್ಕೆ ಸರ್ಕಾರ ಕೊಡುವ ಕಾರಣವೆಂದರೆ ನಮ್ಮಲ್ಲಿ ಒಳ್ಳೆಯ ಮೂಲಭೂತ ಸೌಕರ್ಯಗಳಿಲ್ಲ, ಬಡ್ಡಿಯದರ ಹೆಚ್ಚಿಗೆ ಇದೆ, ಬಿಡಿಭಾಗಗಳ ಕೊರತೆಯಿದೆ, ಇತ್ಯಾದಿ ಸಮಸ್ಯೆಗಳಿರುವುದರಿಂದ ಅವರಿಗೆ ನೆರವು ನೀಡಬೇಕಾಗುತ್ತದೆ.

ಆದರೆ, ಸರ್ಕಾರ ಇಲ್ಲಿ ಸರ್ಪಡೆಯಾದ ಮೌಲ್ಯಕ್ಕೆ ಮಾತ್ರ ಸಬ್ಸಿಡಿ ನೀಡುತ್ತಿಲ್ಲ. ಇಡೀ ಫೋನ್ ಬೆಲೆಗೆ ಸಬ್ಸಿಡಿ ಸಿಗುತ್ತಿದೆ. ಅದರಲ್ಲಿ ಬಹುಭಾಗ ಬೇರೆ ಕಡೆಯಿಂದ ಆಮದು ಮಾಡಿಕೊಂಡಿದ್ದು. ಜೊತೆಗೆ ಭೂಮಿಗೆ, ವಿದ್ಯುತ್ತಿಗೆ ಹೀಗೆ ಎಷ್ಟೋ ಸೌಲಭ್ಯಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಇದಕ್ಕೆ ಗ್ರಾಹಕರು ಬೆಲೆ ತೆರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಿಂತ ಕನಿಷ್ಠ ಶೇಕಡ 20ರಷ್ಟು ಹೆಚ್ಚು ಬೆಲೆ ತೆರಬೇಕು. ʼಐಪ್ರೋ-13 ಮ್ಯಾಕ್ಸ್ʼ ಚಿಕಾಗೊದಲ್ಲಿ 90,366 ರೂಪಾಯಿಗೆ ಸಿಗುತ್ತದೆ. ಭಾರತದಲ್ಲಿ ಅದಕ್ಕೆ 1,29,000 ರೂಪಾಯಿಗಳಾಗುತ್ತದೆ. ಸೆಲ್ ಫೋನ್ ಖರೀದಿಸುವ ಪ್ರತಿಯೊಬ್ಬ ಭಾರತೀಯ 30,000ಕ್ಕೂ ಹೆಚ್ಚು ಹಣವನ್ನು ಸೆಲ್ಫೋನ್ ತಯಾರಕರನ್ನು ಭಾರತದಲ್ಲಿ ಉಳಿಸಿಕೊಳ್ಳುವುದಕ್ಕೆ ತೆರುತ್ತಿದ್ದಾರೆ. ಇದರಿಂದ ಒಳ್ಳೆಯದು ಆಗಬಹುದಾ? ಈ ಸೌಲಭ್ಯ ನಿಂತ ತಕ್ಷಣ ಅವರು ಮತ್ತೆ ಇಂಡಿಯಾ ಬಿಟ್ಟು ಹೋಗುತ್ತಾರೆ. ಇಲ್ಲ ಅಂದರೆ ಒತ್ತಡ ತಂದು ಸೌಲಭ್ಯ ಮುಂದುವರಿಸಿಕೊಳ್ಳುತ್ತಾರೆ.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಜಾಗತೀಕರಣದ ಯುಗ ನಿಜಕ್ಕೂ ಮುಗಿದುಹೋಯಿತೇ?

ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. ಆಮದು ಶುಲ್ಕವನ್ನು ಹೆಚ್ಚಿಸುವುದರಿಂದ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ. ಇದನ್ನು ಬಹಪಾಲು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ನೀವು ಕಚ್ಚಾ ಪದಾರ್ಥಗಳ ಆಮದಿನ ಮೇಲೆ ಸುಂಕ ಹಾಕಿದರೆ ಅದನ್ನು ಬಳಸಿ ತಯಾರಿಸುವ ಸರಕುಗಳ ಬೆಲೆ ಏರುತ್ತದೆ. ಒಂದರ್ಥದಲ್ಲಿ ಇದು ಅಂತಹ ಸರಕುಗಳ ಮೇಲೆ ವಿಧಿಸಿದ ತೆರಿಗೆ ಇದ್ದ ಹಾಗೆ. ಉಕ್ಕಿನ ಮೇಲೆ ಸುಂಕ ಹಾಕಿದರೆ ಕಾರಿನ ಬೆಲೆ ಹೆಚ್ಚುತ್ತದೆ. ಕಾರಿನ ಉದ್ದಿಮೆಗಳು ರಕ್ಷಣೆ ಕೇಳುತ್ತವೆ. ಹೀಗೆ, ರಕ್ಷಣೆಗೆ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೊಂದು ಮಿತಿಯೇ ಇರುವುದಿಲ್ಲ. ಉದ್ದಿಮೆಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೆಗಲ ಮೇಲೆ ಎಳೆದುಕೊಂಡಿರುವುದರಿಂದ ಶಿಕ್ಷಣವನ್ನು ಮರೆತಿದ್ದೇವೆ. ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಯಶಸ್ವಿಯಾದರೂ ಉತ್ಪಾದನೆಗೂ ಒಂದು ಮಿತಿ ಇರುತ್ತದೆ. ಮಾಡಬಹುದಾದ ರಫ್ತಿಗೂ ಒಂದು ಮಿತಿ ಇರುತ್ತದೆ. ಚೀನಾ ಆ ಕ್ಷೇತ್ರವನ್ನು ಈಗಾಗಲೇ ಸಾಕಷ್ಟು ರಾಡಿ ಮಾಡಿದೆ. ಹಾಗಾಗಿ, ಇನ್ನೊಂದು ಚೀನಾ ತಮ್ಮ ಮಾರುಕಟ್ಟೆಗಳನ್ನು ಆಕ್ರಮಿಸಿಕೊಳ್ಳುವುದು ಯಾರೂ ಬಯಸುವುದಿಲ್ಲ. ಆದ್ದರಿಂದ ರಾಜಕೀಯವಾಗಿಯೂ ಪ್ರತಿರೋಧ ಬರಬಹುದು.

ಹಾಗಾದರೆ, ನಮಗಿರುವ ಪರ್ಯಾಯವೇನು? ಜಗತ್ತಿನ ಮಾರುಕಟ್ಟೆಯಲ್ಲಿ ನಾವು ಏನು ರಫ್ತು ಮಾಡಬಹುದು? ರಾಜನ್ ಅಭಿಪ್ರಾಯದಲ್ಲಿ ಉದಾರೀಕರಣ ಹಾಗೂ ಮುಕ್ತ ಆರ್ಥಿಕತೆಯ ನೀತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಜೊತೆಗೆ, ಭಾರತೀಯ ಜನರ ಬುದ್ದಿಮತ್ತೆ, ಕ್ರಿಯಾಶೀಲತೆ ಹಾಗೂ ಉದಾರವಾದಿ ಪ್ರಜಾಸತ್ತೆಯನ್ನು ಅವಲಂಬಿಸಿ ನೀತಿಗಳನ್ನು ರೂಪಿಸಬೇಕು. ಆದರೆ, ಸರಕು ಉತ್ಪಾದನೆಗೆ ಆದ್ಯತೆ ನೀಡುವುದು ನಿಲ್ಲಬೇಕು. ಬದಲಿಗೆ ಸೇವೆಯನ್ನು ಉತ್ಪಾದಿಸುವುದರ ಕಡೆ ಗಮನಕೊಡಬೇಕು. ಸೇವಾ ಕ್ಷೇತ್ರದಲ್ಲಿ ನಮಗೆ ಈಗಾಗಲೇ ಸ್ವಲ್ಪ ಮಾರುಕಟ್ಟೆ ಇದೆ. ಅಲ್ಲಿ ಔತ್ತಮನ್ಯವನ್ನು ಸಾಧಿಸುವುದಕ್ಕೆ ಸಾಧ್ಯವಾಗಬೇಕು. ಅದರ ಅರ್ಥ ಸರಕು ಉತ್ಪಾದನೆಯನ್ನು ನಿಲ್ಲಿಸಬೇಕು ಅಂತ ಅಲ್ಲ. ಅದಕ್ಕೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸಬೇಕು. ಅದಕ್ಕೆ ಏನೆಲ್ಲ ತೊಂದರೆ ಇದೆ ಎಂದು ಸರ್ಕಾರ ಪಟ್ಟಿ ಮಾಡಿದೆಯೋ ಅವೆಲ್ಲವನ್ನು ನಿವಾರಿಸಬೇಕು. ಆದರೆ, ಅದಕ್ಕಾಗಿ ಆಮದು ಸುಂಕ ಕಡಿಮೆ ಮಾಡುವುದು, ಸಬ್ಸಿಡಿ ಕೊಡುವುದು ಒಳ್ಳೆಯ ಮಾರ್ಗವಲ್ಲ ಎನ್ನುವುದು ರಾಜನ್ ಅಭಿಪ್ರಾಯ. ಸಬ್ಸಿಡಿಯನ್ನು ನೀಡಲೇ ಬೇಕಿದ್ದರೆ ಸರುಕ ಉತ್ಪಾದನೆಗಿಂತ ಶಿಕ್ಷಣಕ್ಕೆ ನೀಡುವುದು ಒಳ್ಳೆಯದು.

ಸೇವೆಯ ರಫ್ತಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಅದಕ್ಕೆ ಅನುಕೂಲವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಕುಳಿತು ಬಾಂಬೆ, ಅಷ್ಟೇ ಅಲ್ಲ ಚಿಕಾಗೊದಲ್ಲಿರುವ ಗಿರಾಕಿಗೂ ಸೇವೆಯನ್ನು ನೀಡಬಹುದು. ಕಾನೂನು, ಹಣಕಾಸು, ವೈದ್ಯಕೀಯ, ಶಿಕ್ಷಣ ಈ ಎಲ್ಲಾ ಕ್ಷೇತ್ರಗಳಲ್ಲೂ ಈಗ ಜಾಗತಿಕವಾಗಿ ಸಲಹೆ ನೀಡುವುದಕ್ಕೆ, ಸೇವೆ ಸಲ್ಲಿಸುವುದಕ್ಕೆ ಅವಕಾಶವಿದೆ. ಈ ಎಲ್ಲಾ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೀಡಬಹುದು. ಇದೊಂದು ಅನುಕೂಲ. ಭೌತಿಕ ವಸ್ತುಗಳಲ್ಲಿ ಇದು ಸಾಧ್ಯವಿಲ್ಲ. ಜೊತೆಗೆ ದಾಟುವುದಕ್ಕೆ ಇಲ್ಲಿ ಬೌಂಡರಿ ಅಂತಲೂ ಇಲ್ಲ. ಹಾಗಾಗಿ ಅದಕ್ಕೆ ಅಡ್ಡಿಪಡಿಸೋದು ಕಷ್ಟ. ಅಮೆರಿಕಾ ಹಾಗೂ ಯುರೋಪ್ ಸ್ವತಃ ಅತಿ ಹೆಚ್ಚು ಸೇವೆಗಳನ್ನು ರಫ್ತು ಮಾಡುತ್ತಿರುವುದರಿಂದ ಬೇರೆ ದೇಶಗಳಿಗೆ ಅಡ್ಡಿಪಡಿಸುವ ಸಾಧ್ಯತೆಗಳು ಕಡಿಮೆ.

Image
IT

ಸೇವಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಇನ್ನೂ ಒಂದು ಅನುಕೂಲ ಇದೆ. ಉದಾರವಾದಿ ಪ್ರಜಾಸತ್ತಾತ್ಮಕ ರಾಷ್ಟ್ರಗಳಿಗೆ ಸೇವಾ ಕ್ಷೇತ್ರದಲ್ಲಿ ಜಗತ್ತಿನ ವಿಶ್ವಾಸ ಗೆದ್ದುಕೊಳ್ಳುವುದು ಸುಲಭ. ಏಕೆಂದರೆ, ಈ ಕ್ಷೇತ್ರದ ಹೆಚ್ಚಿನ ವ್ಯವಹಾರಗಳಲ್ಲಿ ಮೌಲ್ಯಗಳು ಹಾಗೂ ವಿಶ್ವಾಸ ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ದತ್ತಾಂಶಗಳನ್ನು ಸಂಸ್ಕರಿಸುವ ವಿಷಯಕ್ಕೆ ಬಂದಾಗ ನಿಮ್ಮ ಬಗ್ಗೆ ವಿಶ್ವಾಸ ಇಲ್ಲದೇ ಹೋದರೆ ಯಾರೂ ದತ್ತಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ. ನೀವು ಅದನ್ನು ಅಪಬಳಕೆ ಮಾಡಿಕೊಳ್ಳಬಹುದು ಎನ್ನುವ ಅನುಮಾನವಿರುತ್ತದೆ. ತಾವು ಹಂಚಿಕೊಳ್ಳುತ್ತಿರುವ ಮಾಹಿತಿಗೆ ರಕ್ಷಣೆ ಇದೆಯಾ, ಅವುಗಳನ್ನು ಬ್ಲಾಕಮೇಲ್ ಮಾಡಲು ಬಳಸಿಕೊಂಡುಬಿಡುತ್ತಾರಾ ಇತ್ಯಾದಿ ಆತಂಕಗಳು ಇರುತ್ತವೆ. ಸರಕಿನ ವಿಷಯದಲ್ಲಿ ಈ ಸಮಸ್ಯೆ ಇಲ್ಲ. ವ್ಯಾಕ್ಯೂಂ ಕ್ಲೀನರ್ ಕೆಲಸ ಮಾಡಿದರೆ ಸಾಕು, ಎಲ್ಲಿ ತಯಾರಾಗಿದ್ದರೇನು?

ಸರ್ಕಾರ ಪಾರದರ್ಶಕವಾಗಿ, ಪ್ರಜಾಸತ್ತಾತ್ಮಕವಾಗಿದ್ದಷ್ಟೂ ಅನುಕೂಲ. ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮಗೆ ಒಳ್ಳೆಯ ಹೆಸರೂ ಇದೆ. ಅಮೆರಿಕೆಯಲ್ಲಿ ಭಾರತೀಯ ಮೂಲದ ಒಳ್ಳೆಯ ಡಾಕ್ಟರುಗಳಿದ್ದಾರೆ. ಭಾರತದ ಮೂಲದ ಒಳ್ಳೆಯ ಸಿಇಒಗಳಿದ್ದಾರೆ. ನಮ್ಮ ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಒಳ್ಳೆಯ ಬ್ರ್ಯಾಂಡ್ ಇಮೇಜ್ ಇದೆ. ಜೊತೆಗೆ ಸೇವಾಕ್ಷೇತ್ರಕ್ಕೆ ಆದ್ಯತೆ ಕೊಡಬೇಕು ಎನ್ನುವುದಕ್ಕೆ ಇನ್ನೂ ಒಂದು ಕಾರಣವೂ ಇದೆ. ಜಗತ್ತು ಇತ್ತೀಚಿನ ದಿನಗಳಲ್ಲಿ ಹಸಿರನ್ನು ಉಳಿಸುವ ಕಡೆಗೆ ವಾಲುತ್ತಿದೆ. ಹಾಗಾಗಿ, ಮುಂದೆ ಈ ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸುವುದು ಕಷ್ಟವಾಗಬಹುದು. ನಾವು ಸೇವೆಯನ್ನು ಬಳಸುವುದು ಹೆಚ್ಚಾಗಬಹುದು. ಈಗ ಎರಡು ಪ್ರಶ್ನೆಗಳು ಬರುತ್ತವೆ.

Image
Education

ಒಂದು ಸೇವಾಕ್ಷೇತ್ರದಲ್ಲಿ ಅಷ್ಟೊಂದು ಉದ್ಯೋಗಗಳು ಸೃಷ್ಟಿಯಾಗುತ್ತವೆಯೇ? ಸೇವಾಕ್ಷೇತ್ರದಲ್ಲಿ ಬಂಡವಾಳವನ್ನು ತೊಡಗಿಸುವುದಾದರೂ ಹೇಗೆ? ಉತ್ಪಾದನೆಯನ್ನು ನಿಲ್ಲಿಸಬೇಕೆಂಬುದು ಇಲ್ಲಿಯ ಅಭಿಪ್ರಾಯವಲ್ಲ. ಅದನ್ನು ಇನ್ನಷ್ಟು ಬೆಳೆಸಬಹುದು. ಉದಾಹರಣೆಗೆ ನಿರ್ಮಾಣ ತುಂಬಾ ಬೆಳೆಯುತ್ತಿರುವ ಕ್ಷೇತ್ರ. ಹಲವು ದೇಶಗಳಲ್ಲಿ ಅದು ಬೆಳವಣಿಗೆಗೆ ಕಾರಣವಾಗಿದೆ. ಭಾರತವೂ ಅದಕ್ಕೆ ಅಪವಾದವಾಗಬೇಕಾಗಿಲ್ಲ. ಈ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆಯೂ ಬೆಳವಣಿಗೆಯಾಗುತ್ತದೆ. ಅವು ಉದ್ಯೋಗವನ್ನೂ ಸೃಷ್ಟಿಸುತ್ತವೆ.

ಆದರೆ, ಉತ್ಪಾದನಾ ಕ್ಷೇತ್ರವನ್ನೇ ಸಂಪೂರ್ಣ ಅವಲಂಬಿಸುವುದು ಬೇಡ, ಸೇವಾಕ್ಷೇತ್ರಕ್ಕೂ ಆದ್ಯತೆ ಕೊಡೋಣ ಎನ್ನುವುದು ರಾಜನ್ ಅಭಿಪ್ರಾಯ. ಉದಾಹರಣಗೆ ಶಿಕ್ಷಣದಂತ ಒಂದು ಸೇವಾಕ್ಷೇತ್ರ. ಅಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ವಿದ್ಯಾರ್ಹತೆ ಇರಬೇಕಾಗುತ್ತದೆ. ಅದನ್ನು ಕೊಡುವಂತಹ ಉತ್ತಮ ಗುಣಮಟ್ಟದ ವಿಶ್ವವಿದ್ಯಾನಿಲಯಗಳನ್ನು, ತಾಂತ್ರಿಕ ಸಂಸ್ಥೆಗಳನ್ನು ನಿರ್ಮಿಸಬೇಕು. ನಮ್ಮ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಬೇರೆ ದೇಶದ ವಿದ್ಯಾರ್ಥಿಗಳಿಗೂ ಶಿಕ್ಷಣವನ್ನು ವಿಸ್ತರಿಸಬಹುದು. ಪ್ರಾರಂಭದಲ್ಲಿ ನಮ್ಮ ನೆರೆಯ ರಾಷ್ಟ್ರಗಳಿಂದ, ಆಫ್ರೀಕಾ, ಆಗ್ನೇಯ ಏಷ್ಯಾದಂತ ದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಅವರ ಮೂಲಕ ಇತರರು ಬರುವ ಸಾಧ್ಯತೆ ಇರುತ್ತದೆ. ಆಸ್ಟ್ರೇಲಿಯಾ ಈ ಕೆಲಸವನ್ನು ಮಾಡುತ್ತಿದೆ. ನಾವು ಯಾಕೆ ಮಾಡಬಾರದು? ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುವವರು ಬಹುಪಾಲು ಪ್ರಾಧ್ಯಾಪಕರು ಭಾರತೀಯ ಮೂಲದವರು. ಜೊತೆಗೆ ವಿದ್ಯಾರ್ಥಿಗಳಿಗೆ ಅವರ ಮನೆಯಲ್ಲೇ ಕಲಿಸಬಹುದು. ಎಡ್ಟೆಕ್ ಸಾಕಷ್ಟು ಬೆಳೆದಿದೆ. ಇಂತಹ ಯೋಜನೆಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಕೇವಲ ಪ್ರಾಧ್ಯಾಪಕರಿಗೆ ಮಾತ್ರವಲ್ಲ ಗುಮಾಸ್ತರು, ಕೆಲಸಗಾರರಿಗೆ, ಅಡಿಗೆಯವರಿಗೆ, ಕ್ಲೀನರುಗಳಿಗೆ ಹೀಗೆ, ಹಲವು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇವೆಲ್ಲಾ ದೊಡ್ಡ ಕೆಲಸಗಳಲ್ಲದೇ ಇರಬಹುದು. ಆದರೆ, ಇಂದು ಕೃಷಿಯಲ್ಲಿ ಸಿಗುತ್ತಿರುವುದಕ್ಕಿಂತ ಒಳ್ಳೆಯ ಕೆಲಸಗಳು. ಮುಂದೆ ಎಲ್ಲರಿಗೂ ಒಳ್ಳೆಯ ಕೆಲಸ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಬೇಕು. ಕಠಿಣ ದುಡಿಮೆಯ ನಿಪುಣತೆ ಬೇಡದ ಕೆಲಸಗಳನ್ನು ಯಂತ್ರಿಕರಣಗೊಳಿಸಬೇಕು.

ವೈದ್ಯಕೀಯ, ಕಾನೂನು, ಹಣಕಾಸು ಇಂತಹ ಕೆಲವು ಕ್ಷೇತ್ರಗಳಲ್ಲಿ ಇಂತಹ ಸಾಧ್ಯತೆ ಹೆಚ್ಚು. ಉತ್ಪಾದನಾ ಕ್ಷೇತ್ರದಲ್ಲಿ ಪೂರ್ಣ ಪ್ರಗತಿ ಸಾಧಿಸುವುದಕ್ಕೆ ಕಾಯದೆ ಸೇವಾಕ್ಷೇತ್ರದಲ್ಲಿ ಔತ್ತಮ್ಯ ಸಾಧಿಸಲು ಸಾಧ್ಯವಾಗಬಹುದು. ಹಾಗೇ ನೇರವಾಗಿ ಸೇವಾ ಕ್ಷೇತ್ರದಲ್ಲಿ ಔತ್ತಮ್ಯ ಸಾಧಿಸಿದ ದೇಶಗಳಲ್ಲಿ ನಾವೇ ಮೊದಲಿಗರೂ ಆಗಬಹುದು. ಅದು ನಮ್ಮ ಬೆಳವಣಿಗೆಯ ವಿಶಿಷ್ಟ ಲಕ್ಷಣವಾಗಬಹುದು. ಇದು ಸುಲಭವಲ್ಲ. ಸೇವಾಕ್ಷೇತ್ರದ ಮೂಲಕ ಬೆಳವಣಿಗೆ ಸಾಧಿಸುವುದಕ್ಕೆ ಉತ್ತಮ ಸಾಮರ್ಥ್ಯವಿರುವ ಜನ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತಾರೆ. ನಾವು ಮಾನವ ಸಂಪನ್ಮೂಲದ ಮೇಲೆ ಹಣ ಹೂಡಬೇಕು. ಜನ ನಮ್ಮ ಮೊದಲ ಆದ್ಯತೆಯಾಗಬೇಕು. ನಮಗೆ ಹೆಚ್ಚು ಪ್ರಾಯೋಗಿಕವಾಗಿ, ವ್ಯಾವಹಾರಿಕವಾಗಿ, ಪರಾದರ್ಶಕವಾದ, ವಿಕೇಂದ್ರೀಕೃತ, ಎಲ್ಲಾ ಸವಾಲಿಗೆ ಒಡ್ಡಿಕೊಳ್ಳಲು ತಯಾರಿರುವ ಸರ್ಕಾರ ಬೇಕು. ಇಲ್ಲಿಯವರೆಗೂ ಯಾವ ಸರ್ಕಾರವೂ ಮಾಡದ್ದನ್ನು ಮಾಡಲು ಅದು ತಯಾರಿರಬೇಕು. ಸೇವೆಯಕ್ಷೇತ್ರದ ಮೂಲಕ ಅಭಿವೃದ್ಧಿಗೊಳಿಸಲು ಸರ್ಕಾರಕ್ಕೂ ಅಪಾರ ಕಲಿಕೆ ಬೇಕು. ಸರ್ಕಾರ ಅದಕ್ಕೆ ತಯಾರಿರಬೇಕು.

Image
Tribalintegration

ಮೂರನೆಯದಾಗಿ ಜಗತ್ತು ವ್ಯಾಪಾರ ಹಾಗೂ ಸೇವೆಯನ್ನು ಹೆಚ್ಚು ಮುಕ್ತವಾಗಿ ಸ್ವಾಗತಿಸುವ ಸ್ಥಿತಿ ನಿರ್ಮಾಣವಾಗಬೇಕು. ಸೇವಾ ಕ್ಷೇತ್ರದಲ್ಲೂ ಕೆಲವು ನಿರ್ಬಂಧಗಳಿವೆ. ಆದರೆ ಅವನ್ನು ತೆರವುಗೊಳಿಸುವ ಪ್ರಯತ್ನ ನಡೆಯಬೇಕು. ಆದರೆ ಈಗ ಜಗತ್ತಿನಾದ್ಯಂತ ಬದಲಾವಣೆಗಳಾಗುತ್ತಿವೆ. ಬದಲಾವಣೆಗೆ ಆಸಕ್ತಿಯೂ ಹೆಚ್ಚುತ್ತಿದೆ. ಭಾರತ ಜಾಗತಿಕ ಮಟ್ಟದ ಬದಲಾವಣೆಯ ಬಗ್ಗೆ ನಾಯಕತ್ವ ವಹಿಸಬಹುದು. ಈ ಬೆಳವಣಿಗೆಯಲ್ಲಿ ಎಲ್ಲರಿಗೂ ಅವಕಾಶವಿರಬೇಕು. ಬಹುಸಂಖ್ಯಾತ ಧಾರ್ಮಿಕ ಸಮುದಾಯದ ಮಹಿಳೆಯರಿಂದ ಪ್ರಾರಂಭವಾಗಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ, ಶೋಷಣೆಗೆ ಒಳಗಾದ ಬುಡಕಟ್ಟು ಹಾಗೂ ಜಾತಿಯ ಜನರು ಸೇರಿದಂತೆ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು. ತಾರತಮ್ಯದ ಸಮಾಜ ಅನೈತಿಕ ಮಾತ್ರವಲ್ಲ. ಅದು ದುರ್ಬಲ ಕೂಡ. ಅದು ಆಂತರಿಕವಾಗಿ ಛಿದ್ರವಾಗಿರುತ್ತದೆ.

ಪ್ರಜಾಸತ್ತಾತ್ಮಕ ಜಗತ್ತಿನಲ್ಲಿ ಅದಕ್ಕೆ ಅವಕಾಶ ಕಡಿಮೆ. ಪ್ರಜಾಸತ್ತಾತ್ಮಕ ದೇಶಗಳೊಂದಿಗೆ ವ್ಯವಹಾರ ನಡೆಸುವುದು ನಮ್ಮ ಉದ್ದೇಶವಾದರೆ, ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಅನ್ನುವುದೂ ಮುಖ್ಯವಾಗುತ್ತದೆ. ನಾವು ಅಲ್ಪಸಂಖ್ಯಾತರನ್ನು ಎರಡನೆಯ ದರ್ಜೆಯ ಪ್ರಜೆಗಳಾಗಿ ನೋಡುತ್ತಿದ್ದೇವೆ ಅನ್ನುವ ಸಂದೇಶ ರವಾನೆಯಾಗುವುದು ಒಳ್ಳೆಯದಲ್ಲ. ಸಧ್ಯಕ್ಕೆ ನಮಗೆ ಒಳ್ಳೆಯ ಹೆಸರಿದೆ. ನಾವು ಮಹಿಳೆಯರು, ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದರೆ ನಮ್ಮ ಬಗ್ಗೆ ಇರುವ ಸದಭಿಪ್ರಾಯವನ್ನು ಕಳೆದುಕೊಳ್ಳುತ್ತೇವೆ. ಎಲ್ಲರನ್ನೂ ಸಬಲಗೊಳಿಸುವ ನಿಟ್ಟಿನಲ್ಲಿ ಬೆಳವಣಿಗೆಯನ್ನು ರೂಪಿಸಬೇಕು. ತಮಿಳುನಾಡಿನಲ್ಲಿ ಸರ್ಕಾರ ಮಹಿಳೆಯರಿಗೆ ಚಿನ್ನ ಕೊಡಿಸುವ ಬದಲು ಶಿಕ್ಷಣಕ್ಕೆ ಹಣ ತೊಡಗಿಸುತ್ತಿದೆ. ಇದು ಸರಿಯಾದ ಕ್ರಮ. ಜನರಿಗೆ ಅವಶ್ಯಕ ನಿಪುಣತೆಯನ್ನು ಕಲಿಸಬೇಕು. ಶಿಕ್ಷಣಕ್ಕೆ ಬೆಂಬಲ ಕೊಡಬೇಕು.

ನೀವು ಹತ್ತು ಬಿಲಿಯನ್ ಹಣವನ್ನು ಎಲೆಕ್ಟ್ರಾನಿಕ್‌ ಚಿಪ್ಸ್ ಉತ್ಪಾದನೆಯಲ್ಲಿ ತೊಡಗಿಸುವುದು ಉತ್ಪಾದನೆಯ ಮೂಲಕ ಬೆಳವಣಿಗೆಯನ್ನು ಸಾಧಿಸುವ ಮಾರ್ಗ. ಅದೇ ಮಾನವ ಬಂಡವಾಳ ಮಾರ್ಗ ಅಂದರೆ 10 ಬಿಲಿಯನ್ ಹಣವನ್ನು ದೊಡ್ಡ ವಿಶ್ವವಿದ್ಯಾನಿಲಯಗಳ ಮೇಲೆ ವಿನಿಯೋಗಿಸುವುದು. ಅದರಿಂದ ನೂರು ಶ್ರೇಷ್ಠ ವಿಶ್ವವಿದ್ಯಾನಿಲಯಗಳನ್ನೋ 10,000 ಒಳ್ಳೆಯ ಶಾಲೆಗಳನ್ನೋ ಸ್ಥಾಪಿಸಬಹುದು. ಅದರಿಂದ 10,000 ಅತ್ಯುತ್ತಮ ಇಂಜಿಯನಿಯರುಗಳು ತಯಾರಾಗಬಹುದು. ಅವರು ಅತ್ಯುತ್ತಮ ಬೌದ್ಧಿಕ ಉತ್ಪನ್ನವನ್ನು ಸೃಷ್ಟಿಸಬಹುದು. ಇನ್ನು ಉತ್ತಮ ಚಿಪ್ ವಿನ್ಯಾಸವನ್ನು ಕೊಡಬಹುದು. ಹೆಚ್ಚಿನ ಸಾಫ್ಟವೇರನ್ನು ಕೊಡಬಹುದು. ನೀವು 10,000 ಬಿಲಿಯನ್ ಹಾರ್ಡವೇರ್‌ನಲ್ಲಿ ತೊಡಗಿಸುವುದಕ್ಕಿಂತ ಹೆಚ್ಚು ಉತ್ತಮ ಮಟ್ಟದ ಉತ್ಪನ್ನ ತಯಾರಾಗುತ್ತದೆ. ನಮಗೆ ಕಲಿಯಲು ತಯಾರಿರುವ ಸರ್ಕಾರ ಬೇಕು. ಕಲಿಯುವುದಕ್ಕೆ ಅಂಕಿ-ಅಂಶಗಳು ಬೇಕು. ಮಾಹಿತಿ ಬೇಕು. ಮಾಹಿತಿಯನ್ನು ಹತ್ತಿಕ್ಕಬಾರದು. ಅದು ಕೋವಿಡ್ ಸಂಬಂಧಿಸದ ಮಾಹಿತಿ ಇರಬಹುದು. ರೈತರನ್ನು ಕುರಿತ ಮಾಹಿತಿ ಇರಬಹುದು.

Image
parliament

ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸರಿಯಾದ ಮಾಹಿತಿ ಬೇಕು. ಸರ್ಕಾರ ಸ್ಥಳೀಯ ಅವಶ್ಯಕತೆಗೆ ಸ್ಪಂದಿಸಬೇಕು. ವೈಯಕ್ತಿಕ ಹಕ್ಕು ಹಾಗೂ ಸ್ವತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಟೀಕೆಯನ್ನು ಸ್ವಾಗತಿಸಬೇಕು. ಆಗ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಟೀಕೆಯನ್ನು ಕರಾಳ ಕಾಯ್ದೆಗಳನ್ನು ಬಳಸಿ ಹತ್ತಿಕ್ಕಬಾರದು. ಆಗ ಬದಲಾವಣೆಯೂ ಸಾಧ್ಯವಾಗುವುದಿಲ್ಲ. ಇದು ದೇಶದ ಜನತೆಯ ದೃಷ್ಟಿಯಿಂದ ಭಯಂಕರ. ಬೆಳವಣಿಗೆ ನಿಂತು ಹೋಗುತ್ತದೆ. ಈ ಕರಾಳ ಕಾನೂನುಗಳನ್ನು ತೆಗೆಯಬೇಕಾಗುತ್ತದೆ. ಸರ್ಕಾರ ಹೆಚ್ಚು ವಿಶಾಲವಾಗಿರಬೇಕು. ತುಂಬಾ ಸೀಮಿತ ಮಾಹಿತಿ ಹಾಗೂ ನಿಲುವು ಇರುವ ಸಣ್ಣ ಗುಂಪು ಸರ್ಕಾರವನ್ನು ನಡೆಸುವಂತೆ ಆಗಬಾರದು. ಕ್ಯಾಬಿನೆಟ್, ಪಾರ್ಲಿಮೆಂಟ್ ಹಾಗೂ ಇತರ ವೇದಿಕೆಗಳಲ್ಲಿ ಚರ್ಚೆಯಾಗಬೇಕು. ವಿಕೇಂದ್ರಿತ ವ್ಯವಸ್ಥೆಯಿದ್ದರೆ ಜನರಿಗೆ ಹೆಚ್ಚು ಹತ್ತಿರವಾಗುತ್ತೇವೆ. ಸ್ಥಳೀಯ ಸಮಸ್ಯೆಗಳಿಗೆ ಹತ್ತಿರವಾಗುತ್ತೇವೆ. ಯಾವ ಯೋಜನೆ ಸ್ಥಳೀಯವಾಗಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಒಟ್ಟಿನಲ್ಲಿ ಭಾರತೀಯ ಸಾಮರ್ಥ್ಯವನ್ನು ಆಧರಿಸಿದ, ಸಹಿಷ್ಟುತೆ ಹಾಗೂ ಎಲ್ಲರನ್ನು ಗೌರವಿಸುವ ದರ್ಶನದ ಆಧಾರದ ಮೇಲೆ ಭಾರತದ ಬೆಳವಣಿಗೆಯನ್ನು ಕಟ್ಟಬೇಕು. ಇಡೀ ವಿಶ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರನ್ನೂ ಒಳಗೊಂಡ, ಪರಿಸರಸ್ನೇಹಿಯಾದ, ಸ್ಥಳೀಯ ಅವಶ್ಯಕತೆಗೆ ಪೂರಕವಾದ ಬೆಳವಣಿಗೆ ಹಾಗೂ ಪ್ರಗತಿಯನ್ನು ಸಾಧ್ಯವಾಗಿಸುವ ಬೆಳವಣಿಗೆ ನಮ್ಮ ಗುರಿಯಾಗಬೇಕು ಅನ್ನುವುದು ರಾಜನ್ ಒಟ್ಟಾರೆ ಅಭಿಪ್ರಾಯ.

ನಿಮಗೆ ಏನು ಅನ್ನಿಸ್ತು?
1 ವೋಟ್