ಪಾಟಿ ಚೀಲ | ಶಾಲೆ, ಮಕ್ಕಳು, ಮೇಷ್ಟ್ರು, ಮಿಸ್ಸು, ಬೆತ್ತ, ಪೆಟ್ಟು ಇತ್ಯಾದಿ

ಪಾಲಕರ ಸಭೆಯಲ್ಲಿ ಒಬ್ಬರು ದೂರಿನ ರೀತಿಯಲ್ಲಿ, "ನೀವು ಹೊಡೆಯುವುದಿಲ್ಲ, ಅದ್ಕೆ ಅವನು ಮಾತು ಕೇಳುವುದಿಲ್ಲ,” ಎಂದರು. ಆಗ ಇನ್ನೊಬ್ಬರು, "ಮೇಷ್ಟ್ರೇ, ನೀವು ಸರೀ ಬಡಿಯಿರಿ... ನಮ್ಮ ಅಭ್ಯಂತರ ಏನಿಲ್ಲ...” ಎಂದು ಪರವಾನಗಿ ನೀಡಿದರು. "ನೀವು ನಿಮ್ಮ ಮಕ್ಕಳಿಗೆ ಹೊಡಿತೀರಾ?” ಎಂದು ಕೇಳಿದೆ. ಅವರು ಎನೋ ತಪ್ಪು ಮಾಡಿದವರಂತೆ, "ಇಲ್ಲ..." ಎಂದು ತಲೆ ತಗ್ಗಿಸಿದರು

ಪುಟ್ಟ ಮಗುವಿನಲ್ಲಿ ಯಾರೋ ಕೇಳಿದರು-

"ನಿಮ್ ಮಿಸ್ ಬೆತ್ತದಲ್ಲಿ ಹೊಡಿತಾರಾ?"

"ಇಲ್ಲ..."

AV Eye Hospital ad

"ಹಾಗಾದ್ರೆ, ತುಂಬಾ ಒಳ್ಳೇವ್ರು ನಿಮ್ ಮಿಸ್ಸು?"

ತುಂಬಾ ನಿರಾಸೆಯಿಂದ ಮಗು ಹೇಳಿತು: "ಅವರು ಸ್ಕೇಲಲ್ಲಿ ಹೊಡಿತಾರೆ..."

* * *

ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವುದರ ಕುರಿತು ಹೊಸದಾಗಿ ವೃತ್ತಿಗೆ ಸೇರುವ ಶಿಕ್ಷಕ-ಶಿಕ್ಷಕಿಯರಲ್ಲಿ ಬಹಳ ಗೊಂದಲಗಳಿರುತ್ತವೆ. ಶಿಕ್ಷಣಶಾಸ್ತ್ರದ ಕಲಿಕೆಗಿಂತ ಬೇರೆ ಸಂಗತಿಗಳು ನಮ್ಮ ನಡವಳಿಕೆಗಳ ಮೇಲೆ ಪ್ರಭಾವ ಬೀರಿರುತ್ತವೆ. ಕೆಲವು ತಪ್ಪು ನಂಬಿಕೆಗಳು ಉಂಟಾಗಿರಲು ಕಾರಣವಾಗಿರುತ್ತವೆ. ಶಾಲಾ ದಿನಗಳ ನಮ್ಮ ಅನುಭವ ಮನಸ್ಸಿನಲ್ಲಿ ಹೆಚ್ಚು ಅಚ್ಚೊತ್ತಿರುತ್ತದೆ. ನಮ್ಮ ಶಿಕ್ಷಕರು ತರಗತಿಯ ಮೌನವನ್ನು ಕಾಪಾಡಲು ಹೆಚ್ಚಾಗಿ ಬೆತ್ತವನ್ನೇ ಆಶ್ರಯಿಸಿದ್ದರಿಂದ ನಮಗೂ ಆ ವಿಧಾನದ ಕುರಿತು ಒಲವು ಮೂಡಿರುತ್ತದೆ. ಸ್ವತಃ ಇಂತಹ ವಿಧಾನದ ಸಂತ್ರಸ್ತರೇ ಆಗಿದ್ದರೂ ನಾವೀಗ ಮಗುವಾಗಿ ಯೋಚಿಸದೆ ಶಿಕ್ಷಕರಾಗಿ ಯೋಚಿಸಲು ತೊಡಗುತ್ತೇವೆ.

ನಾನು ಕೆಲಸಕ್ಕೆ ಸೇರಿದ ಆರಂಭದಲ್ಲಿಯೇ ಒಂದು ಘಟನೆ ನಡೆಯಿತು. ತರಗತಿಯಲ್ಲಿದ್ದ ದೈಹಿಕ ಸವಾಲುಳ್ಳ ಹುಡುಗಿಗೆ ಆಕೆಯ ಕೊರತೆಯನ್ನೇ ಆಡಿಕೊಂಡು ಒಬ್ಬ ಹುಡುಗ ಗೇಲಿ ಮಾಡಿದ್ದ. ಇದನ್ನು ಬೇರೆ ಹುಡುಗಿಯರು ನನಗೆ ವರದಿ ಮಾಡಿದರು. ನನಗೆ ವಿಪರೀತ ಸಿಟ್ಟು ಬಂತು. ಆ ಹುಡುಗನಿಗೆ ಹೊಡೆದೆ.

ಸಾಂದರ್ಭಿಕ ಚಿತ್ರ

ಈ ಘಟನೆ ಅಲ್ಲಿಗೆ ಮುಗಿಯಲಿಲ್ಲ. ನನ್ನನ್ನು ಒಂದಿಡೀ ದಿನ ಕಾಡಿತು. ಆ ನಂತರವೂ ಕಾಡುತ್ತಲೇ ಉಳಿಯಿತು. ಆ ಹುಡುಗ ಆಕೆಯನ್ನು ಗೇಲಿ ಮಾಡಿದ್ದು ತಪ್ಪು. ಆ ಕಾರಣಕ್ಕಾಗಿ ನಾನು ಶಿಕ್ಷೆ ನೀಡಿದ್ದೇನೆ ಎಂದು ನನ್ನನ್ನು ನಾನೇ ಸಮಾಧಾನ ಮಾಡಿಕೊಳ್ಳಲು ಅಥವಾ ರಕ್ಷಿಸಿಕೊಳ್ಳಲು ಎಷ್ಟು ಕಷ್ಟಪಟ್ಟರೂ, ನಾನು ಆ ರೀತಿ ವಿಚಾರಣೆಯೇ ಇಲ್ಲದೆ ಶಿಕ್ಷೆ ನೀಡಿದ್ದು ತಪ್ಪಲ್ಲವೇ ಎಂಬ ಪ್ರಶ್ನೆ ಎದುರಾಗುತಿತ್ತು. ವಿಚಾರಣೆ ನಡೆಸಿ ಆತ ತಪ್ಪಿತಸ್ಥ ಎಂದು ಖಾತರಿಯಾದರೂ ಹೊಡೆಯಲು ನನಗೆ ಯಾವ ಹಕ್ಕಿದೆ? ನಾನು ಶಿಕ್ಷೆ ನೀಡುವ ಪ್ರಾಧಿಕಾರವೂ ಅಲ್ಲ, ಶಿಕ್ಷೆಯನ್ನು ಜಾರಿಗೆ ತರಬೇಕಾದವನೂ ಆಗಿರಲಿಲ್ಲ. ನನ್ನದು ತಪ್ಪು ಎನಿಸಿತು. ತಪ್ಪು ಮಾಡಿದರೆ ನನಗೆ ಶಿಕ್ಷೆ ಇಲ್ಲವೇ? ನಾನು ತಪ್ಪಲು ಸಾಧ್ಯವಿದೆಯೆಂದಾದರೆ ಆ ಹುಡುಗನೂ ತಪ್ಪಬಹುದಲ್ಲ? ಆಕೆಯ ದೈಹಿಕ ವಿಕಲತೆಯ ಕುರಿತು ನನಗಿದ್ದ ಅನುಕಂಪ, ಅನುಕಂಪವಿದೆಯೆಂದು ತೋರಿಸಬೇಕಾದ ಜರೂರತ್ತು ಇತ್ಯಾದಿಗಳೊಂದಿಗೆ ಮಕ್ಕಳನ್ನು ನಿರ್ವಹಿಸುವಲ್ಲಿನ ನನ್ನ ಅನನುಭವವೂ ಸೇರಿಕೊಂಡು ಆ ಘಟನೆಯನ್ನು ಸೃಷ್ಟಿಸಿತ್ತು.  ಇನ್ನೂ ಕೆಲವು ಸಂಗತಿಗಳು ನನ್ನನ್ನು ಪ್ರಭಾವಿಸಿರಬಹುದಾದ ಸಾಧ್ಯತೆ ಇದೆ. ಇದು ನನ್ನ ತಪ್ಪನ್ನು ಇನ್ನೊಬ್ಬರ ತಲೆಗೆ ಕಟ್ಟುವ ರಕ್ಷಣಾತ್ಮಕ ತಂತ್ರವೂ ಆಗಿರಬಹುದು. ಅದನ್ನೂ ಸ್ವಲ್ಪ ಚರ್ಚಿಸೋಣ.

ಹಿರಿಯ ಶಿಕ್ಷಕರು ಹೊಸಬರಿಗೆ ಬುದ್ಧಿವಾದ ಹೇಳುತ್ತಿರುತ್ತಾರೆ. "ಕ್ಲಾಸ್ ಕಂಟ್ರೋಲಲ್ಲಿಟ್ಟುಕೊಂಡರೆ ಆಯ್ತು. ಮತ್ತೆಲ್ಲ ಸರಿಹೋಗುತ್ತದೆ," ಎಂತಲೋ, "ಎರಡು ಬಾರಿಸಿದರೆ ಬಾಲ ಮಡಿಚಿಕೊಂಡು ಇರುತ್ತವೆ," ಎಂತಲೋ ಅವರು ಆಗಾಗ ಹೇಳುವುದನ್ನು ಕೇಳಿಸಿಕೊಂಡಿದ್ದೆ. "ಸಲಿಗೆ ಬಿಟ್ಟರೆ ತಲೆ ಮೇಲೆ ಕೂತ್ಕೊಳ್ತವೆ," ಎಂಬ ಸಲಹಾತ್ಮಕ ಆದೇಶಗಳು ಬರುತ್ತಿರುತ್ತವೆ. ಪಾಲಕರೂ ಆಗಾಗ ಶಾಲೆಗೆ ಬಂದು, "ನೀವು ನಾಲ್ಕು ಬಾರಿಸಿ, ನಮ್ಮದೇನೂ ಅಭ್ಯಂತರವಿಲ್ಲ," ಎಂದು ಹೇಳುತ್ತಿರುತ್ತಾರೆ. ಕೆಲವು ಶಾಲೆಗಳ ಗೋಡೆಗಳ ಮೇಲೆ ಮೊದಲೆಲ್ಲ, 'ಛಡಿ ಛಂ ಛಂ, ವಿದ್ಯೆ ಘಂ ಘಂ' ನುಡಿಮುತ್ತನ್ನು ಬರೆಸಿರುತ್ತಿದ್ದರು. "ನಾನು ಕ್ಲಾಸಿಗೆ ಹೋದ್ರೆ ಸಾಕು, ಪಿನ್ ಡ್ರಾಪ್ ಸೈಲೆನ್ಸ್..." ಎಂದು ನಿವೃತ್ತರಾಗಿರುವ ಕೆಲವು ಶಿಕ್ಷಕರು ತಮ್ಮ ಪರಾಕ್ರಮಗಳನ್ನು ಹೇಳುವುದನ್ನೂ ನಾವು ಕೇಳಿಸಿಕೊಂಡಿರುತ್ತೇವೆ. ಇವೆಲ್ಲವೂ ನಮ್ಮನ್ನು ಕಂಡೀಷನ್ ಮಾಡುತ್ತ, ಶಿಕ್ಷೆ ನೀಡುವುದು ಅನಿವಾರ್ಯ ಎಂದು ಮನದಟ್ಟು ಮಾಡಿಸಿರುತ್ತವೆ.

ಈ ಲೇಖನ ಓದಿದ್ದೀರಾ?: ಊರ್ಬದಿ | ಅಮಾಯಕ ಸಿಂಗಳೀಕಗಳು ಮತ್ತು ಅವಿವೇಕಿ ಮನುಷ್ಯನ ಔದಾರ್ಯದ ಉರುಳು

ಶಿಕ್ಷೆಯನ್ನು ಸಕಾರಣವಾಗಿಯೇ ನೀಡಲಾಗಿದೆ ಎಂಬುದು ಶಿಕ್ಷೆ ನೀಡಿರುವ/ನೀಡುವ ಎಲ್ಲರ ಅಭಿಪ್ರಾಯ. ಶಿಕ್ಷೆ ನೀಡಲು ಕಾರಣಗಳು ಹಲವು- ವಿದ್ಯಾರ್ಥಿಗಳು ನಿರೀಕ್ಷಿತ ಪ್ರಗತಿ ಸಾಧಿಸದೆ ಇರುವಾಗ, ಹೇಳಿದ ಕೆಲಸ ಮಾಡದಿರುವಾಗ, ತರಗತಿಯಲ್ಲಿ ಗದ್ದಲ ಉಂಟಾದಾಗ, ದುರ್ವರ್ತನೆ ತೋರಿದಾಗ... ಹೀಗೆ ಹಲವು ಕಾರಣಗಳಿಂದ ಮಕ್ಕಳು ಶಿಕ್ಷೆ ಅನುಭವಿಸುತ್ತಾರೆ. ಶಿಕ್ಷೆ ನೀಡುವುದೆಂದರೆ ಬೆತ್ತ ಪ್ರಯೋಗವಷ್ಟೇ ಅಲ್ಲ. ತಲೆಕೂದಲು ಬೋಳಿಸುವುದು, ಊಟ ನೀಡದೆ ಇರುವುದು, ತರಗತಿಯ ಹೊರಗೆ ಒಂಟಿಕಾಲಲ್ಲಿ ನಿಲ್ಲಿಸುವುದು ಹೀಗೆ ಹತ್ತು ಹಲವು. ಹೀಗೆ ಶಿಕ್ಷೆ ನೀಡುವುದಕ್ಕೆ ಸಮಾಜದ ಒಪ್ಪಿಗೆಯ ಮುದ್ರೆಯೂ ಇರುತ್ತದೆ.

"ದುರ್ವರ್ತನೆ ತೋರುವ ಮಕ್ಕಳನ್ನು ದಂಡಿಸದಿದ್ದರೆ ತರಗತಿಯ ಶಿಸ್ತನ್ನು ಕಾಪಾಡುವುದು ಹೇಗೆ? ಕಲಿಯಲು ಬೇರೆ ಮೋಟಿವೇಷನ್ ಇಲ್ಲದಾಗ ಪೆಟ್ಟಿನ ಭಯಕ್ಕಾದ್ರೂ ಓದ್ತಾರಲ್ವಾ? ಪೆಟ್ಟು ನೀಡುವುದರಿಂದ ಮಕ್ಕಳಿಗೆ ಒಳಿತಾಗುವುದಾದರೆ ನಿಮಗೇನು ಸಮಸ್ಯೆ? ಪಾಲಕರೇ ತಮ್ಮ ಮಕ್ಕಳಿಗೆ ಶಿಕ್ಷೆ ನೀಡಲು ವಿನಂತಿಸುವಾಗ ಬೇರೆ ಪ್ರಶ್ನೆ ಏಕೆ? ಹೊಡೆಯದೆ ಬಡಿಯದೆ ದೊಡ್ಡವರಾದ ಮಕ್ಕಳು ಮುಂದೆ ಮಾತು ಕೇಳುತ್ತಾರಾ?" - ಇಂತಹ ಪ್ರಶ್ನೆಗಳು ಶಿಕ್ಷೆಯನ್ನು ಸಮ್ಮತವಾಗಿಸುತ್ತವೆ.

ದೈಹಿಕ ಶಿಕ್ಷೆ ನೀಡಿದರೆ ಹಿಂದೆ ಸುದ್ದಿಯೇ ಅಲ್ಲವಾಗಿತ್ತು. ಈಗ ಅಂಥದ್ದು ಸಂಭವಿಸಿದರೆ ಸೋಷಿಯಲ್ ಮೀಡಿಯಾದ ಮೂಲಕ ಕ್ಷಣಾರ್ಧದಲ್ಲಿ ಸುದ್ದಿಯಾಗುತ್ತದೆ. ಹಾಗೆಯೇ, ಶಿಕ್ಷೆಯನ್ನು ಬೆಂಬಲಿಸುವ ಶಿಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನನ್ನ ಕಿರಿಯ ಸಹೋದ್ಯೋಗಿಯೊಬ್ಬರು ಮೊನ್ನೆ, "ನಾನು ಇಷ್ಟವಾದರೆ ಮಾತ್ರ ನನ್ನ ಪಾಠವೂ ಇಷ್ಟವಾಗುತ್ತದೆ,” ಎಂದು ಹೇಳುತ್ತಿದ್ದರು. ಇದನ್ನು ಕೇಳುವಾಗ, ಯಾವಾಗಲೂ ಹಿರಿಯರೇ ಕಿರಿಯರಿಗೆ ಬುದ್ಧಿವಾದ ಹೇಳಬೇಕಿಲ್ಲ ಎನಿಸಿತು.

ಸಾಂದರ್ಭಿಕ ಚಿತ್ರ

ಪಾಲಕರ ಸಭೆಯಲ್ಲಿ ಒಬ್ಬರು ದೂರಿನ ರೀತಿಯಲ್ಲಿ ನನ್ನಲ್ಲಿ, "ನೀವು ಹೊಡೆಯುವುದಿಲ್ಲ, ಅದ್ಕೆ ಅವನು ಮಾತು ಕೇಳುವುದಿಲ್ಲ,” ಎಂದರು. ಆಗ ಇನ್ನೊಬ್ಬರು, "ಮೇಷ್ಟ್ರೇ, ನೀವು ಸರೀ ಬಡಿಯಿರಿ... ನಮ್ಮ ಅಭ್ಯಂತರ ಏನಿಲ್ಲ...” ಎಂದು ಪರವಾನಗಿ ನೀಡಿದರು. "ನೀವು ನಿಮ್ಮ ಮಕ್ಕಳಿಗೆ ಹೊಡಿತೀರಾ?” ಎಂದು ಕೇಳಿದೆ. ಅವರು ಎನೋ ತಪ್ಪು ಮಾಡಿದವರಂತೆ, "ಇಲ್ಲ..." ಎಂದು ತಲೆ ತಗ್ಗಿಸಿದರು. ಅವರು, ಹೊಡೆಯುವುದು ತಮ್ಮಿಂದ ಸಾಧ್ಯವಾಗದ ಕ್ರಿಯೆ ಎಂದುಕೊಂಡಿದ್ದರೇ ಹೊರತು ತಾವು ಮಾಡಬಾರದ ಕ್ರಿಯೆ ಎಂದು ಒಬ್ಬರಿಗೂ ಅನಿಸಿರಲಿಲ್ಲ.

* * *

ಶಿಕ್ಷೆ ನೀಡುವುದರಿಂದ ಮಗುವಿನ ವರ್ತನೆಗಳನ್ನು ತರಬೇತುಗೊಳಿಸಬಹುದು ಎಂಬುದಕ್ಕೆ ಆಧಾರಗಳಿಲ್ಲ. ಶಿಕ್ಷೆ ನೀಡುತ್ತ ಹೋದಂತೆ ಮಗುವು ಒರಟಾಗುತ್ತ ಹೋಗುತ್ತದೆ. ತರಗತಿ ಕೊಠಡಿಯಲ್ಲಿ ಮೌನವನ್ನು ಕಾಪಾಡುವುದರಿಂದ ಕಲಿಕೆಯನ್ನು ಉತ್ತಮಗೊಳಿಸಬಹುದು ಎಂಬುದೂ ತಪ್ಪು ತಿಳಿವಳಿಕೆ. ಹಾಗೆ ನೋಡಿದರೆ, ಅದು ಕಲಿಕೆಯೇ ಅಲ್ಲ. ಕಲಿಕೆ ಇರುವಲ್ಲಿ ಒಡನಾಟ ಇರುತ್ತದೆ. ಕಲಿಕೆ ಇರುವಲ್ಲಿ ಪ್ರಶ್ನೆ ಇರುತ್ತದೆ. ಕಲಿಕೆ ಇರುವಲ್ಲಿ ಚರ್ಚೆ ಇರುತ್ತದೆ. ಕಲಿಕೆ ಎಂದೂ ಏಕಮುಖವಾಗಿರದು. ಗುಂಪು ಚಟುವಟಿಕೆ, ಜೋಡಿ ಕಾರ್ಯ ಮುಂತಾದ ಒಡನಾಟದ ಅವಕಾಶವಿರುವ ಕಲಿಕಾ ವಾತಾವರಣದಲ್ಲಿ ನಡೆಯುವ ಮಾತುಕತೆಗಳನ್ನು ಗದ್ದಲ ಎಂದು ಭಾವಿಸಲು ನಮ್ಮಲ್ಲಿರುವ ತಪ್ಪು ನಂಬಿಕೆಗಳು ಕಾರಣ. ಶಿಸ್ತಿನ ಕುರಿತೂ ನಮ್ಮಲ್ಲಿ ಸಾಕಷ್ಟು ತಪ್ಪು ತಿಳಿವಳಿಕೆಗಳಿವೆ. ಇಷ್ಟು ಹೇಳಿದ ಮೇಲೂ, ಕೆಲವು ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಬರುತ್ತದೆ. ಆ ಸಂದರ್ಭಗಳನ್ನು ದೈಹಿಕ ಶಿಕ್ಷೆಯಿಲ್ಲದೆ ಹೇಗೆ ನಿಭಾಯಿಸುತ್ತೇವೆ ಎಂಬುದು ನಮ್ಮ-ನಮ್ಮ ನಂಬಿಕೆಯನ್ನು ಆಧರಿಸಿರುತ್ತದೆ.

* * *

ಒಮ್ಮೆ ಮೇಷ್ಟ್ರು ಕ್ಲಾಸಿಗೆ ಬಂದು, "ಒಂದು ಗುಂಡುಸೂಜಿ ಬಿದ್ದರೂ ಸದ್ದು ಕೇಳಿಸಬೇಕು," ಎಂದರಂತೆ.

ಮಕ್ಕಳು ಒಮ್ಮೆಲೇ ಮೌನವಾದರು.

ಪಿಳಿಪಿಳಿ ಕಣ್ಣು ಬಿಟ್ಟುಕೊಂಡು, ಮೇಷ್ಟ್ರು ಗುಂಡುಸೂಜಿ ಬೀಳಿಸುವುದನ್ನೇ ನಿರೀಕ್ಷಿಸತೊಡಗಿದರು!

ನಿಮಗೆ ಏನು ಅನ್ನಿಸ್ತು?
1 ವೋಟ್
eedina app