
ದುಡಿಮೆಯ ದರೋಡೆಯಾಯಿತಾದರೆ
ಅತ್ಯಂತ ಅಪಾಯಕಾರಿಯಾಗಿರುವುದಿಲ್ಲ
ಪೋಲೀಸರು ನಿರ್ದಯ ಚಚ್ಚಿದರೆ ಅದು
ಅತ್ಯಂತ ಅಪಾಯಕಾರಿಯಾಗಿರುವುದಿಲ್ಲ
ದ್ರೋಹ, ಲೋಭಗಳ ಕಪಿಮುಷ್ಟಿ ಎನ್ನುವುದು
ಅತ್ಯಂತ ಅಪಾಯಕಾರಿಯಾಗಿರುವುದಿಲ್ಲ
ಕೂತುಕೂತಲ್ಲಿಯೇ ಬಂಧನಕ್ಕೊಳಗಾಗುವುದು
ಭಯಾನಕವಾಗಿರುತ್ತದೆ ಹೌದು
ಭೀತಿಯಡಿಯಲ್ಲಿ ಮೌನಕ್ಕೆ ಶರಣಾಗಿಬಿಡುವುದು
ಭಯಾನಕವಾಗಿರುತ್ತದೆ ಹೌದು
ಆದರದು ಪ್ರಪಂಚದಲ್ಲಿ
ಅತ್ಯಂತ ಅಪಾಯಕಾರಿ ಸಂಗತಿಯಾಗಿರುವುದಿಲ್ಲ
ಸರ್ವೇಸಾಮಾನ್ಯ ಭ್ರಷ್ಟಾಚಾರದೆದುರು ಸುಮ್ಮನಿದ್ದುಬಿಡುವುದು
ಕೆಟ್ಟದ್ದು ನಿಜ
ಮಿಂಚುಹುಳುಗಳ ಬೆಳಕಲ್ಲಿ ಓದು-ಬರಹ ಮಾಡುವಂತಹ ಸ್ಥಿತಿ
ಕೆಟ್ಟದ್ದು ನಿಜ
ಮುಷ್ಟಿ ಬಿಗಿಹಿಡಿದು ಕುಳಿತು ಕಾಲ ಕಳೆಯುವುದು
ಕೆಟ್ಟದ್ದು ನಿಜ
ಆದರದು ಪ್ರಪಂಚದಲ್ಲಿ
ಅತ್ಯಂತ ಅಪಾಯಕಾರಿ ಸಂಗತಿಯಾಗಿರುವುದಿಲ್ಲ
ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ಶವದಂತೆ ಮರಗಟ್ಟಿರುವುದು
ಯಾತನೆಗಳು ತಟ್ಟಿಯೇ ಇಲ್ಲವೆಂಬಂತೆ
ಎಲ್ಲವನ್ನೂ ಒಪ್ಪಿಕೊಳ್ಳುವುದು
ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ನೌಕರಿಗಾಗಿ ಮನೆಯಿಂದ ಹೊರಹೋಗುವುದು
ಮರಳಿ ಮನೆಗೆ ಬರುವುದು
ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ನಮ್ಮ ಕನಸುಗಳು ನಶಿಸಿಹೋಗುವುದು.
ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ನೀರಸ ದಿನಚರಿಯ ಚಕ್ರ ಸುತ್ತುತ್ತಿರುವುದನ್ನು
ನೋಡುತ್ತಿದ್ದರೂ ಕಣ್ಣುಗಳಿಗೆ ಕಾಣದಂತಾಗುವುದು.
ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ಜಗತ್ತನ್ನು ಪ್ರೀತಿಯಿಂದ ನೋಡುವ ಕಾಣ್ಕೆ ಇಲ್ಲದಾಗುವುದು
ಮತ್ತು ನಿತ್ಯಕರ್ಮಗಳಲ್ಲಿ ಹುದುಗಿಹೋಗಿರುವುದು.
ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ಭಯಭೀತರೆದುರಲ್ಲಿ ಠಕ್ಕರ ಸೊಕ್ಕಿನೊಂದಿಗೆ
ಶೋಕಗೀತೆಯನ್ನು ಹಾಡುವುದು
ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ಕಗ್ಗೊಲೆಗಳು ನಡೆದ ಅಂಗಳದ ಮೇಲೆ
ಚೆಲ್ಲುವ ಬೆಳದಿಂಗಳು ಮೆಣಸಿನ ಖಾರದಂತೆ
ನಿಮ್ಮ ಕಣ್ಣುಗಳನ್ನು ಕುಕ್ಕದೇ ಇರುವುದು.
ಅತ್ಯಂತ ಅಪಾಯಕಾರಿ ಸಂಗತಿಯೆಂದರೆ
ಅಂತರಂಗದ ಸೂರ್ಯ ಮುಳುಗಿಹೋದ ಬಾನಂಚು
ಬೆಳಕು ಸತ್ತ ಬಿಸಿಲಿನ ಕಿರಣವೊಂದು ನಿಮ್ಮ ಪಾಲಿಗೆ
ಉದಯಾಂಚಲವಾಗಿದೆಯಾದರೆ, ಹೇಳುತ್ತೇನೆ ನಾನು...
ದುಡಿಮೆಯ ದರೋಡೆಯಾಯಿತಾದರೆ
ಅತ್ಯಂತ ಅಪಾಯಕಾರಿಯಾಗಿರುವುದಿಲ್ಲ
ಪೋಲೀಸರು ನಿರ್ದಯ ಚಚ್ಚಿದರೆ ಅದು
ಅತ್ಯಂತ ಅಪಾಯಕಾರಿಯಾಗಿರುವುದಿಲ್ಲ
ದ್ರೋಹ, ಲೋಭಗಳ ಕಪಿಮುಷ್ಟಿ ಎನ್ನುವುದು
ಅತ್ಯಂತ ಅಪಾಯಕಾರಿಯಾಗಿರುವುದಿಲ್ಲ
* * *
“Every beautiful poem is an act of resistance” - Mahmoud Darwish

ಲೋಕ ಕಾಯುತ್ತಿದೆ ಕಲ್ಯಾಣಕ್ಕಾಗಿ, ನ್ಯಾಯಕ್ಕಾಗಿ, ಸತ್ಯಕ್ಕಾಗಿ, ಸಮತೆಗಾಗಿ, ಶಾಂತಿಗಾಗಿ, ಕರುಣೆಗಾಗಿ. ನಮ್ಮ ಜಗಳಗಳೇ ತೀರುತ್ತಿಲ್ಲ. ನಮಗಿನ್ನೂ ಚಿಕ್ಕ ಮಕ್ಕಳ ಹಠವೇ ಹತ್ತಿಕೊಂಡಿದೆ. ಮುಂದೆ ಸಾಗುವುದಕ್ಕೆ ಹೆಜ್ಜೆ ಎತ್ತಿಡಲಿಕ್ಕೇ ಆಗುತ್ತಿಲ್ಲ. ನಾವಿನ್ನೂ ಕೊಸಕೊಸ ಕೊರಗು ಮುಗಿಸಿಲ್ಲ. ಅಂತರಂಗದ ಸೂರ್ಯನ ಕಿರಣಗಳು ಕುಕ್ಕಿ ನಮ್ಮನ್ನು ಎಬ್ಬಿಸುವುದು ಯಾವಾಗ? ಇದು ಅವತಾರ್ ಸಿಂಗ್ ಸಂಧು ‘ಪಾಶ್’ ಎತ್ತುವ ಪ್ರಶ್ನೆ.
ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಆರ್ಸೆನಿ ತಾರ್ಕೊವಸ್ಕಿ ಕವಿತೆ 'ಉಗಿಬಂಡಿಯಲ್ಲಿ ಕುರುಡನ ಪಯಣ'
ನೆರೂಡಾ, ಫೈಜ್, ಹಿಕ್ಮತ್, ಲೋರ್ಕಾ, ದರ್ವೇಶ್ ಮುಂತಾದ ಜಗತ್ತಿನ ಶ್ರೇಷ್ಠ ಕ್ರಾಂತಿಕಾರಿ ಕವಿಗಳ ಯಾದಿಯಲ್ಲಿ ಇರಬೇಕಾದ ಹೆಸರು ಪಾಶ್; ಖಾಲಿಸ್ತಾನಿ ಉಗ್ರರ ಗುಂಡಿಗೆ ಬಲಿಯಾಗಿ 38ರ ಎಳೆ ಪ್ರಾಯದಲ್ಲಿ ಹತನಾದ ಪಂಜಾಬಿ ಕವಿ.ಪ್ರಭುತ್ವಕ್ಕೆ ಪ್ರಶ್ನೆ ಕೇಳುವುದೇ ಅಲ್ಲದೆ, ಜನರ ಉದಾಸೀನ ಪ್ರವೃತ್ತಿಯನ್ನು ಸಹ ಕಟುವಾಗಿ ಟೀಕಿಸಿ, ಜಾಗೃತ ಸಮಾಜದ ಅಗತ್ಯವನ್ನು ಒತ್ತಿ ಹೇಳಿದ ಕವಿ.
ಯಾವ ಸಮಾಜದಲ್ಲಿ ಅನ್ಯಾಯ, ಹಿಂಸೆ, ದಬ್ಬಾಳಿಕೆಗಳಿಗೆ ಜಾತಿ, ಮತ, ಕುಲ, ವರ್ಣ, ಪಕ್ಷ, ಪ್ರದೇಶಗಳ ರಿಯಾಯತಿ ಇರುವುದೋ ಆ ಸಮಾಜದಲ್ಲಿ ಬದುಕು ಅಸಹನೀಯವಾಗಿರುವುದರಲ್ಲಿ ಸಂಶಯವಿಲ್ಲವೆನ್ನುತ್ತದೆ ಪಾಶ್ ಕವಿಯ ಈ ಪ್ರಸಿದ್ಧ ಕವನ.