ಮೈಕ್ರೋಸ್ಕೋಪು | ಹೆಚ್ಚುತ್ತಲೇ ಇದೆ ದರೋಡೆಕೋರ ವಿಜ್ಞಾನ ಪತ್ರಿಕೆಗಳ ದರ್ಬಾರು

predatory science journals 3

ಸಂಶೋಧನಾ ಪತ್ರಿಕೆಗಳಲ್ಲಿ (ಜರ್ನಲ್) ಲೇಖನ ಪ್ರಕಟ ಆಗುವುದೊಂದು ಪ್ರತಿಷ್ಠೆಯ ಸಂಗತಿ. ಆದರೆ, ಬಡ್ತಿಗಾಗಿಯೋ ಅಥವಾ ಸ್ಥಾನಮಾನಕ್ಕಾಗಿಯೋ ಆಸೆಪಟ್ಟು ಅಡ್ಡ ದಾರಿ ಹಿಡಿದು, ಹಣ ಕೊಟ್ಟು ಲೇಖನ ಪ್ರಕಟಿಸಿಕೊಳ್ಳುವ ಕಳ್ಳಮಾರ್ಗ ಬಳಸುವವರಿದ್ದಾರೆ. ಇದರ ಜೊತೆಗೀಗ, ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳ ಹೆಸರಿನ ನಕಲಿ ಪತ್ರಿಕೆಗಳ ಅಬ್ಬರ ಮಿತಿ ಮೀರಿದೆ

ದೆಹಲಿ ಒಂದು ವಿಚಿತ್ರ ನಗರ. ಮಾಯಾನಗರ ಎನ್ನಬಹುದು. ನಾನು ಅಲ್ಲಿ ವಾಸವಿದ್ದಾಗ ಪ್ರತೀ ವಾರವೂ ನಡೆಯುವ ಸಂತೆಗೆ ಹೋಗುತ್ತಿದ್ದೆ. ನಗರದ ವಿವಿಧ ಭಾಗಗಳಲ್ಲಿ, ವಿವಿಧ ದಿನಗಳಲ್ಲಿ ಈ ಸಂತೆ ನಡೆಯುತ್ತಿತ್ತು. ಒಂದು ರೀತಿಯಲ್ಲಿ ನಮ್ಮ ನಗರಗಳಲ್ಲಿ ಇರುವ ಬೀದಿ ಬದಿಯ ತರಕಾರಿ ಮಾರುಕಟ್ಟೆಯ ಹಾಗೆ. ಅಲ್ಲಿಯೂ ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ವಸ್ತುಗಳನ್ನು ಮಾರಾಟ ಮಾಡುವವರು ಸಿಗುತ್ತಿದ್ದರು. “ಅಪ್ಪ, ಅಮ್ಮನ ಹೊರತಾಗಿ ಬಹುಶಃ ಎಲ್ಲವೂ ಇಲ್ಲಿ ಸಿಗುತ್ತದೆ,” ಎಂದು ಗೆಳೆಯನೊಬ್ಬ ತಮಾಷೆ ಮಾಡುತ್ತಿದ್ದ. ಗಡ್ಡ ಕಳೆಯುವ ಪುಟ್ಟ ರೇಜರಿನಿಂದ ಹಿಡಿದು, ದೊಡ್ಡ ಮಂಚದವರೆಗೆ, ಟೀವಿ, ಮಿಕ್ಸಿ, ವಾಷಿಂಗ್ ಮೆಷೀನು ಕೂಡ ಈ ಫುಟ್‌ಪಾತ್ ಸಂತೆಯಲ್ಲಿ ಮಾರಾಟವಾಗುತ್ತಿತ್ತು. ಅಷ್ಟೇ ಅಲ್ಲ, ನಿಮ್ಮ ಜೇಬಿನ ತೂಕಕ್ಕೆ ತಕ್ಕಂತೆ ವಸ್ತುಗಳು ದೊರೆಯುತ್ತಿದ್ದುವು. ದುಡ್ಡಿರುವವರಿಗೆ ಬ್ರಾಂಡೆಡ್, ಕಡಿಮೆ ಕಾಸಿದ್ದರೆ 'ಡೆಲ್ಲಿ ಮಾಲು.' ಒಟ್ಟಾರೆ, ಶ್ರೀಮಂತರ ಮನೆಯಲ್ಲಿ ದೊರಕುವ ವಸ್ತುಗಳೆಲ್ಲವೂ ಅಗ್ಗದ ಮಾಲುಗಳ ರೂಪದಲ್ಲಿ ಇಲ್ಲಿ ಸಿಗುತ್ತಿದ್ದವು.

ಈ ಸಂತೆಯಲ್ಲಿ ಸೌಂದರ್ಯ ವರ್ಧಕಗಳ ಅಂಗಡಿಯೂ ಇರುತ್ತಿತ್ತು. ಅದಕ್ಕೆ ಭಾರೀ ಡಿಮ್ಯಾಂಡು. ಇಲ್ಲಿ ಲಿಪ್‌ಸ್ಟಿಕ್ಕು, ಪೌಡರು, ನೇಲ್ ಪಾಲಿಶ್, ಶೇವಿಂಗ್ ಕ್ರೀಂ ಮೊದಲಾದ ಬ್ರಾಂಡೆಡ್ ವಸ್ತುಗಳಂತೆಯೇ ಕಾಣುವ ಹೆಸರಿನ ನಕಲಿ ಮಾಲುಗಳದ್ದೇ ದರ್ಬಾರು. ಕಾಲ್ಗೇಟು ಇಲ್ಲಿ ಕಾಲ್ಜೇಟೋ, ಕೋಲ್ಗೇಟೋ, ಕೂಲ್ಗೇಟೋ ಆಗಿರುತ್ತಿತ್ತು. ಲಕ್ಮೆ ಎಂಬುದು ಲಾಕ್ಮೆ ಇಲ್ಲವೇ ಲಕ್ನೆ ಅಥವಾ ಲಕ್ಕಿ ಆಗಿರುತ್ತಿತ್ತು. ಆದರೆ, ಮೊದಲ ನೋಟಕ್ಕೆ ಲಕ್ಮೆಯ ಡಬ್ಬದಂತೆಯೇ ಪ್ಯಾಕೇಜು. ಇವುಗಳ ಗುಣಮಟ್ಟ ಏನೋ ದೇವರೇ ಬಲ್ಲ! ಆದರೆ, ಬಿಐಎಸ್ ಮುದ್ರೆಯೂ, ಸಂಖ್ಯೆಯೂ ಢಾಳಾಗಿ ಎದ್ದು ಕಾಣುತ್ತಿದ್ದುವು. ಅಲ್ಲಿನ ಕೆಳವರ್ಗದ ಜನ ಇಂತಹ ʼಡೆಲ್ಲಿ ಮಾಲು'ಗಳಿಗೆ ಮುಗಿಬೀಳುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ದೆಹಲಿಯ ಸುಪ್ರಸಿದ್ಧ ಕನಾಟ್ ಪ್ಲೇಸ್ ಸುತ್ತಮುತ್ತಲೂ ಫುಟ್‌ಪಾತಿನಲ್ಲಿ ಭಾನುವಾರ ಪುಸ್ತಕಗಳ ಅಂಗಡಿಗಳು ತೆರೆಯುತ್ತಿದ್ದುವು. ದುಬಾರಿ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸುಪ್ರಸಿದ್ಧ ಲೇಖಕರ ಪುಸ್ತಕಗಳವರೆಗೆ ರದ್ದಿ ಬೆಲೆಗೆ ಸಿಗುತ್ತಿದ್ದುವು. ಹಾಗಂತ ಇವು ಯಾರೋ ಓದಿ ಹಳತಾದವುಗಳಲ್ಲ. ಹೊಚ್ಚ ಹೊಸ ಮುದ್ರಣ. ಅದೇ ಹೆಸರು, ಅದೇ ಮುಖಪುಟ ಇರುವ ಕಳ್ಳ ಪುಸ್ತಕ. ಪೈರೇಟು ಮಾಡಿದವುಗಳು. ಇದು ಹಳೆಯ ಸುದ್ದಿ. ಹೊಸ ವಿಷಯವೇನೆಂದರೆ, ವಿಜ್ಞಾನ ಪತ್ರಿಕೆಗಳಲ್ಲಿಯೂ ಈಗ 'ಡೆಲ್ಲಿ ಮಾಲು'ಗಳಂತಹ ಪತ್ರಿಕೆಗಳು ಇವೆಯಂತೆ. ವೈಜ್ಞಾನಿಕ ಸಂಶೋಧನೆಗಳ ವಿವರಗಳನ್ನು ಪ್ರಕಟಿಸುವ ಸಂಶೋಧನಾ ಪತ್ರಿಕೆಗಳನ್ನೇ ನಕಲಿಸುವ ಪತ್ರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ, ಪ್ರತಿಷ್ಠಿತ ಪತ್ರಿಕೆಗಳ ಹೆಸರನ್ನು ನಕಲು ಮಾಡಿದ ಕಳ್ಳ ಪತ್ರಿಕೆಗಳು ಸಾಕಷ್ಟು ಇವೆ ಎಂದು ವಿಜ್ಞಾನ ಲೋಕದಲ್ಲಿನ ಅನೈತಿಕ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿರುವ 'ರಿಟ್ರಾಕ್ಟರ್ ವಾಚ್' ಪತ್ರಿಕೆ ಇತ್ತೀಚೆಗೆ ವರದಿ ಮಾಡಿದೆ.

Image
predatory science journals 5
ವಿಜ್ಞಾನ ಪತ್ರಿಕೆಗಳನ್ನು ಕಾಡುತ್ತಿದೆ 'ನಕಲು ದರೋಡೆ'

ವಿಜ್ಞಾನ ಪತ್ರಿಕೆಗಳನ್ನು ಓದುವವರೇ ಕಡಿಮೆ. ಅವನ್ನು ನಕಲು ಮಾಡಿದರೆ ಕೊಳ್ಳುವವರು ಯಾರು ಎಂದು ನೀವು ಯೋಚಿಸುತ್ತಿರಬಹುದು. ಇದೇಕೆ ಹೀಗೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ವಿಜ್ಞಾನ ಪತ್ರಿಕೆಗಳ ವ್ಯವಹಾರದ ಬಗ್ಗೆಯೂ ತಿಳಿಯಬೇಕು. 'ನೇಚರ್,' 'ಸೈನ್ಸ್,' 'ಕ್ವಾಂಟಾ,' 'ಕರೆಂಟ್ ಸೈನ್ಸ್,' 'ರೆಸೊನೆನ್ಸ್' ಮೊದಲಾದ ಹೆಸರಿನ ಪತ್ರಿಕೆಗಳಿವೆ. ಇವುಗಳಲ್ಲಿ ಫಿಸಿಕ್ಸು, ಕೆಮಿಸ್ಟ್ರಿ, ಬಯಾಲಜಿ ಮೊದಲಾದ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ನಡೆವ ಸಂಶೋಧನೆಗಳ ವಿವರಗಳನ್ನು ಪ್ರಕಟಿಸಲಾಗುತ್ತದೆ. ಇವುಗಳಿಗೆ ಇರುವ ಓದುಗರ ಸಂಖ್ಯೆಯೂ ಅಧಿಕವೇ. ಬೆಂಗಳೂರಿನಿಂದ ಪ್ರಕಟವಾಗುವ 'ಕರೆಂಟ್ ಸೈನ್ಸ್' ಪತ್ರಿಕೆಗೇ ಹತ್ತಾರು ಸಾವಿರ ಚಂದಾದಾರರಿದ್ದಾರೆ. ಉಚಿತವಾಗಿ ಅದನ್ನು ಪಡೆದು ಓದುವ ಇನ್ನೂ ಹತ್ತಾರು ಸಾವಿರ ಓದುಗರಿದ್ದಾರೆ. 'ನೇಚರ್' ಪತ್ರಿಕೆಯ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತವೆ. ಇವಲ್ಲದೆ, ಕೇವಲ ನೂರೋ, ಇನ್ನೂರೋ, ಅತಿ ಹೆಚ್ಚು ಎಂದರೆ ಸಾವಿರವೋ ಚಂದಾದಾರರಿರುವ ಪತ್ರಿಕೆಗಳೂ ಇವೆ - ನಮ್ಮ ಕನ್ನಡದ ಸಾಹಿತ್ಯ ಪತ್ರಿಕೆಗಳಂತೆ. ಅತಿ ಸೀಮಿತವಾದ ಸಂಶೋಧನಾ ಕ್ಷೇತ್ರದಲ್ಲಿನ ಸಂಶೋಧನೆಗಳ ವಿವರಗಳನ್ನು ಪ್ರಕಟಿಸುವ ಪತ್ರಿಕೆಗಳೂ ಇವೆ; 'ಬಯೋಸೆನ್ಸಾರು,' 'ಲ್ಯಾಬ್ ಆನ್ ಚಿಪ್,' 'ಮೈಕಾಲಜಿ' ಮೊದಲಾದವುಗಳು. 'ಮೈಕಾಲಜಿ' ಕೇವಲ ಬೂಸು ಜೀವಿಗಳ ಸಂಶೋಧನೆಯ ವಿವರಗಳನ್ನಷ್ಟೆ ಪ್ರಕಟಿಸುತ್ತದೆ. ಇವುಗಳಲ್ಲಿ ಹಲವು ಆಯಾ ಕ್ಷೇತ್ರದ ಸಂಶೋಧಕರುಗಳ ಸಂಘಗಳ ಪ್ರಕಟಣೆಗಳು. ಇವುಗಳಲ್ಲಿ ಪ್ರಕಟವಾಗುವ ಲೇಖನಗಳು ಕ್ಲಿಷ್ಟ ಮತ್ತು ಆಯಾ ವಿಷಯ ಪಂಡಿತರಿಗಷ್ಟೆ ಅರ್ಥವಾಗುವಂತಹ ಉಕ್ಕಿನ ಕಡಲೆಗಳು ಎನ್ನಬಹುದು.

ವಿವಿಧ ವಿಷಯಕವೋ, ವಿಶಿಷ್ಟ ವಿಷಯದ್ದೋ, ಒಟ್ಟಾರೆ ವಿಜ್ಞಾನ ಪತ್ರಿಕೆಗಳು ಕೈಗೆಟುಕದ ಹಣ್ಣಿನಂತೆ ಬಲು ದುಬಾರಿ. ಅತಿ ಹೆಚ್ಚು ಮಾರಾಟವಾಗುವ 'ನೇಚರ್' ಪತ್ರಿಕೆಯ ತಿಂಗಳ ಚಂದಾ ಸಾವಿರ ರೂಪಾಯಿಗಳಿಗೂ ಮಿಗಿಲು. ತಂತಮ್ಮ ಕ್ಷೇತ್ರದಲ್ಲಿ ಪ್ರಕಟವಾಗುವ ನೂರಾರು ಪತ್ರಿಕೆಗಳನ್ನು ಸಂಶೋಧಕರು ಓದಲೇಬೇಕಾಗುತ್ತದೆ. ಅಷ್ಟು ದುಬಾರಿ ಇರುವ ಅವನ್ನು ವೈಯಕ್ತಿಕವಾಗಿ ಕೊಂಡುಕೊಳ್ಳುವುದೂ ಕಷ್ಟ. ಕೊಳ್ಳುವುದಿರಲಿ, ಅವುಗಳಲ್ಲಿ ಲೇಖನಗಳನ್ನು ಪ್ರಕಟಿಸುವುದೂ ಕಷ್ಟ. 'ನೇಚರ್' ಪತ್ರಿಕೆಯಲ್ಲಿ ಲೇಖನ ಅಥವಾ ಸುದ್ದಿ ಪ್ರಕಟಗೊಂಡರೆ ಪದ್ಮ ಪ್ರಶಸ್ತಿ ದೊರಕಿದಷ್ಟು ಪ್ರತಿಷ್ಠೆ ಹೆಚ್ಚುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು ಪ್ರಕಟಣೆಯ ರೀತಿ. ಪ್ರತಿಯೊಂದು ಪ್ರಬಂಧವೂ ಆಯಾ ಕ್ಷೇತ್ರದ ಪರಿಣತರಲ್ಲಿ ಕೆಲವರು ಓದಿ ಪರಾಮರ್ಶಿಸಿ, ತಿದ್ದುಪಡಿಯಾದ ಮೇಲಷ್ಟೇ ಪ್ರಕಟವಾಗುತ್ತದೆ. ಹೀಗಾಗಿ, ಇಂದಿನ ಸಂಶೋಧನೆಯ ವಿವರಗಳು ಪ್ರಕಟವಾಗುವಷ್ಟರಲ್ಲಿ ಮೂರೋ, ನಾಲ್ಕೋ ವರ್ಷಗಳು ಕಳೆದಿರುವುದು ಸಹಜ. ಜೊತೆಗೆ, ಎಷ್ಟೋ ಪ್ರಬಂಧಗಳು ಪ್ರಕಟಣೆಗೆ ಅರ್ಹವಲ್ಲ ಎಂದು ತಿರಸ್ಕಾರಕ್ಕೆ ಒಳಗಾಗುವುದೂ ಉಂಟು. ಇನ್ನೊಂದೆಡೆ, ಸಂಶೋಧನೆಯ ವಿವರಗಳು ಪ್ರಕಟವಾಗದಿದ್ದರೆ, ವಿಜ್ಞಾನಿಗಳಿಗೆ ಮುಂದಿನ ನಡೆಗೆ ಬೇಕಾದ ಧನಸಹಾಯವಾಗಲೀ, ಬಡ್ತಿಯಾಗಲೀ ದೊರೆಯುವುದಿಲ್ಲ. ಹೀಗಾಗಿ, ಹೇಗಾದರೂ ಮಾಡಿ ಪ್ರಕಟಿಸುವ ದರ್ದಿಗೆ ಸಂಶೋಧಕರು ಬೀಳುತ್ತಾರೆ.

Image
predatory science journals 8
ದರೋಡೆಕೋರ ವಿಜ್ಞಾನ ಪತ್ರಿಕೆಗಳ ಕುರಿತು 'ನೇಚರ್‌' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ

ಇತ್ತೀಚೆಗೆ ಈ ಸಮಸ್ಯೆಗಳೊಟ್ಟಿಗೆ ಇನ್ನೊಂದು ಸಮಸ್ಯೆಯೂ ಸೇರಿಕೊಂಡಿದೆ. ಪ್ರಕಟಣೆಯ ಹಾದಿ ಬಹಳ ಕ್ಲಿಷ್ಟ ಮತ್ತು ಪತ್ರಿಕೆಗಳ ಬೆಲೆ ದುಬಾರಿ ಎನ್ನುವುದಕ್ಕೆ ಪರಿಹಾರವಾಗಿ, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಕ್ತ ಪ್ರಕಾಶನ (ಓಪನ್ ಸೋರ್ಸ್) ಎನ್ನುವ ಪದ್ಧತಿಯನ್ನು ವಿಜ್ಞಾನಿಗಳು ಅಪ್ಪಿಕೊಂಡರು. ಸಂಶೋಧನೆಗಳ ವಿವರಗಳನ್ನು ಪ್ರಕಟಿಸಲು ತಗುಲುವ ವೆಚ್ಚವನ್ನು ಸಂಶೋಧಕರೇ ಭರಿಸುವುದು ಮತ್ತು ಪತ್ರಿಕೆಗಳನ್ನು ಯಾರು ಬೇಕಾದರೂ ಓದಲು ಒದಗುವಂತೆ ಮುಕ್ತವಾಗಿಸುವುದು ಈ ಪರಿಹಾರ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಈ ಹೊಸ ಚಳವಳಿ ಆರಂಭವಾಯಿತು. ಅದರೊಟ್ಟಿಗೇ ಕಳ್ಳ ಪ್ರಕಾಶಕರಂತಹ ಹೊಸ ಸಮಸ್ಯೆಗಳೂ ಹುಟ್ಟಿಕೊಂಡವು. ಈ ಪ್ರಕಾಶಕರು ತಮಗೆ ಹಣ ಕೊಟ್ಟವರ ಸಂಶೋಧನೆಯ ವಿವರಗಳನ್ನು ಪರಾಮರ್ಶೆಯೇ ಇಲ್ಲದೆ ಪ್ರಕಟಿಸತೊಡಗಿದರು. ಭಾರತ, ರಷ್ಯಾ, ಚೀನಾದಲ್ಲಿ ಇಂತಹ ಪ್ರಕಾಶಕರ ಹಾವಳಿ ಹೆಚ್ಚು. ಬಡ್ತಿಗಾಗಿಯೋ, ಸಂಶೋಧನಾ ವೇತನಕ್ಕಾಗಿಯೋ ಪ್ರಕಟಣೆಗಳು ಅಗತ್ಯವಾದಂತಹವರು ಇಂತಹ ಪತ್ರಿಕೆಗಳಿಗೆ ದುಡ್ಡು ಕೊಟ್ಟು ತಮ್ಮ ಪ್ರಬಂಧಗಳನ್ನು ಪ್ರಕಟಿಸುತ್ತಿದ್ದರು. ಹೈದರಾಬಾದಿನಲ್ಲಿ ಹೀಗೆ ಸ್ಥಾಪನೆಯಾಗಿದ್ದ ಸಂಸ್ಥೆಯೊಂದು ಕೋಟಿಗಟ್ಟಲೆ ಹಣ ಮಾಡಿದ ವರದಿ ಇದೆ.

ಇಂತಹ ಕಳ್ಳ ಪತ್ರಿಕೆಗಳನ್ನು ವಿಜ್ಞಾನಿಗಳು 'ಪ್ರಿಡೇಟರಿ ಪತ್ರಿಕೆ'ಗಳೆನ್ನುತ್ತಾರೆ. 'ಪ್ರಿಡೇಟರಿ' ಎಂದರೆ ಬೇಟೆಗಾರ ಎಂದರ್ಥ. ಕೇವಲ ಹಣ ಮಾಡುವುದಷ್ಟೇ ಇವುಗಳ ಉದ್ದೇಶ. ವಿಜ್ಞಾನ ಪ್ರಬಂಧಗಳ ಪ್ರಕಟಣೆಯ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿ, ಹಣ ಕೊಟ್ಟವರ ಪ್ರಬಂಧಗಳಲ್ಲಿರುವ ತಪ್ಪುಗಳನ್ನೂ ತಿದ್ದದೆಯೇ ಪ್ರಕಟಿಸುತ್ತವೆ. ಕೆಲವು ವರ್ಷಗಳಿಂದ ಇವುಗಳ ಹಾವಳಿ ಹೆಚ್ಚಾಗಿತ್ತು. ಭಾರತದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ), ಅಧ್ಯಾಪಕ ವೃತ್ತಿಯಲ್ಲಿರುವವರು ಬಡ್ತಿ ಪಡೆಯಬೇಕಾದರೆ ಇಂತಹ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರಬೇಕು ಎಂಬ ನಿಯಮವನ್ನು ಮಾಡಿದ ಮೇಲಂತೂ ಪ್ರಿಡೇಟರಿ ಪತ್ರಿಕೆಗಳ ಹೊಂಚಿಗೆ ಇಚ್ಛಾನುವರ್ತಿ ಬಲಿಯಾದವರ ಸಂಖ್ಯೆಯೂ ಹೆಚ್ಚಿತು. ಪ್ರಕಟಣೆಗೆ ಹಣ ಕೊಟ್ಟು, ನಂತರ ಅದನ್ನು ತಮ್ಮ ಸಂಶೋಧನೆಯೆಂದು ಹೇಳಿಕೊಳ್ಳುವವರ ಸಂಖ್ಯೆ ಕಡಿಮೆ ಏನಲ್ಲ. ಇಂತಹ ಸಂಶೋಧನೆಗಳು ವಿಶ್ವಾಸಾರ್ಹವಲ್ಲ ಎನ್ನುವುದು ಇನ್ನೊಂದು ಮಾತು. ಇವಕ್ಕೆ ಕೊಡುವ ಹಣ ಕೂಡ ವಿವಿಧ ಮೂಲಗಳಿಂದ ಸಂಶೋಧನೆಗೆಂದು ಪಡೆದ ಹಣದ ಅಂಶವೇ. ಅರ್ಥಾತ್ ಸಾರ್ವಜನಿಕರ ಹಣ! ಹೀಗಾಗಿ, ಯುಜಿಸಿ ಇಂತಹ ಪ್ರಿಡೇಟರಿ ಪತ್ರಿಕೆಗಳ ಪಟ್ಟಿಯನ್ನು ಮಾಡಿ, ಅಂತಹವುಗಳಲ್ಲಿ ಪ್ರಕಟಿಸುವ ಮುನ್ನ ಎಚ್ಚರ ವಹಿಸಬೇಕೆಂದು ಹೇಳಿದೆ.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಜೋಪಾನ... ಅಡುಗೆಮನೆಯ ಹೊಗೆ ನಿಮ್ಮ ದೃಷ್ಟಿ ಕಿತ್ತುಕೊಳ್ಳಬಹುದು

ಯಾರೇ ಎಚ್ಚರ ಹೇಳಿದರೂ ಹಳ್ಳಕ್ಕೆ ಬೀಳುವವರು ಬಿದ್ದೇ ಬೀಳುತ್ತಾರಷ್ಟೆ. ಹಾಗೆಯೇ, ಕಳ್ಳನ ಚಾಳಿ ಕಳ್ಳನೇ ಬಲ್ಲ. ಪ್ರೆಡೇಟರಿ ಪತ್ರಿಕೆಗಳ ಮೇಲೆ ಪ್ರಪಂಚದ ವಿವಿಧ ರಾಷ್ಟ್ರಗಳು ಎಚ್ಚರ ವಹಿಸಿ ನಿಯಂತ್ರಿಸಲು ಆರಂಭಿಸಿದ ನಂತರ ಆರಂಭವಾಗಿದ್ದೇ ಈ ನಕಲು ಪತ್ರಿಕೆಗಳು. 'ರಿಟ್ರಾಕ್ಷನ್ ವಾಚ್' ಪತ್ರಿಕೆಯು ಸುಮಾರು 150 ನಕಲು ಪತ್ರಿಕೆಗಳ ವಿವರಗಳನ್ನು ಪ್ರಕಟಿಸಿದೆ. ಇವನ್ನು 'ಹೈಜಾಕ್ ಮಾಡಿದ ಪತ್ರಿಕೆಗಳು' ಎಂದು ಹೆಸರಿಸಿದೆ. ಅಂದರೆ, ಅದುವರೆಗೂ ಇತರೆ ಪತ್ರಿಕೆಗಳಂತೆಯೇ ನಿಯಮಬದ್ಧವಾಗಿ ಪ್ರಕಟಣೆಯಾಗುತ್ತಿದ್ದಂತಹ ಪತ್ರಿಕೆಯ ಪ್ರತಿಷ್ಠೆಯ ಲಾಭವನ್ನು ಪಡೆಯುವುದಕ್ಕಾಗಿ ಅದರ ಹೆಸರನ್ನೇ ಹೊತ್ತೊಯ್ದ ಪತ್ರಿಕೆಗಳು ಎಂದರ್ಥ.

ಉದಾಹರಣೆಗೆ, ಕೊಲ್ಕತ್ತಾದಿಂದ ಪ್ರಕಟವಾಗುವ 'ಆಲೋಚನಾ ಚಕ್ರ' ಎನ್ನುವ ಸಾಹಿತ್ಯ ಪತ್ರಿಕೆಯೊಂದಿದೆ. ಸಾಹಿತ್ಯ, ವಿಚಾರ, ವಿಮರ್ಶೆಗಳನ್ನು ಪ್ರಕಟಿಸುವ ಪತ್ರಿಕೆ. ನೀವು ಗೂಗಲ್ ಮಾಡಿದರೆ ಇದೇ ಹೆಸರಿನ ಇನ್ನೊಂದು ಪತ್ರಿಕೆ ಸಿಗುತ್ತದೆ. ಇದರಲ್ಲಿ ಎಲ್ಲ ವಿಷಯಗಳೂ ಬೇಕಾಬಿಟ್ಟಿ ಪ್ರಕಟವಾಗುತ್ತವೆ. ನೀವು ಯಾವ ವಿಷಯದ ಬಗ್ಗೆ ಪ್ರಬಂಧ ಕಳಿಸಿದರೂ, ಅದನ್ನು ಪ್ರಕಟಿಸಿ ಒಂದು ಪ್ರಮಾಣ ಪತ್ರವನ್ನು ಕಳಿಸುತ್ತಾರೆ. ಪ್ರಕಟಣೆಯ ವೆಚ್ಚವನ್ನು ನೀವು ಕೊಡಬೇಕಷ್ಟೆ; ಅದು ಎಷ್ಟು ಎಂಬುದು ನಿಮ್ಮ ಪ್ರಬಂಧವನ್ನು ಅನುಸರಿಸಿ ಪತ್ರಿಕೆ ತಿಳಿಸುತ್ತದೆ. ವಿಶೇಷ ಎಂದರೆ, ಈ ಕಳ್ಳ ಪತ್ರಿಕೆಯ ಹೆಸರು 'ಆಲೋಚನಾ ಚಕ್ರ' ಎಂದೇ ಇದ್ದರೂ, ಪ್ರಕಟಣೆ ಬಂಗಾಳಿ ಭಾಷೆಯಲ್ಲಿ ಅಲ್ಲ, ಬದಲಿಗೆ ಇಂಗ್ಲೀಷಿನಲ್ಲಿ. ಇದರ ಐಎಸ್ಎಸ್ಎನ್ ಸಂಖ್ಯೆಯೂ, ವೆಬ್ ವಿಳಾಸವೂ ಹೆಚ್ಚೂ ಕಡಿಮೆ ಮೂಲ ಪತ್ರಿಕೆಯದ್ದರಂತೆಯೇ ಇದೆ. ಇದರಲ್ಲಿ ಇತ್ತೀಚೆಗೆ ಪ್ರಕಟವಾದ ವಿಷಯಗಳು ಎಂಜಿನಿಯರಿಂಗಿಗೆ ಸಂಬಂಧಿಸಿದವು. ಅದರಲ್ಲಿಯೂ ತೆಲಂಗಾಣದಲ್ಲಿರುವ ಒಂದು ಖಾಸಗಿ ಕಾಲೇಜಿನ ಪ್ರಕಟಣೆಗಳು!

'ನ್ಯಾಚುರಲ್ ಸೈನ್ಸ್' ಎನ್ನುವುದು ಇಂತಹ ಕಳ್ಳರ ದಾಳಿಗೆ ಸಿಲುಕಿದ ಇನ್ನೊಂದು ಪತ್ರಿಕೆ. ಇದೇ ಹೆಸರನ್ನೇ ದೊಡ್ಡಕ್ಷರಗಳಲ್ಲಿ ಬರೆದುಕೊಂಡ ಮತ್ತೊಂದು ಪತ್ರಿಕೆಯ ವೆಬ್ ತಾಣದ ವಿಳಾಸದಲ್ಲಿ ಒಂದು ಪುಟ್ಟ ಗೆರೆ ಹೆಚ್ಚು ಅಷ್ಟೇ! ಆದರೆ, ಎರಡರಲ್ಲಿಯೂ ಪ್ರಕಟವಾಗುವ ವಿಷಯಗಳಲ್ಲಿ ಮಾತ್ರ ಅಜಗಜಾಂತರ. ಮೂಲ ಪತ್ರಿಕೆಯು ಪ್ರಪಂಚದ ವಿವಿಧೆಡೆಗಳಲ್ಲಿ ಜೀವಜಗತ್ತಿನಲ್ಲಿ ಮತ್ತು ಭೂವಿಜ್ಞಾನದ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಪ್ರಕಟಿಸುತ್ತಿರುವ ಸುಪ್ರಸಿದ್ಧ ಪತ್ರಿಕೆ, ವಿಶ್ವಾಸಾರ್ಹ. ಆದರೆ ಇನ್ನೊಂದು, ವ್ಯಾಪಾರ ಸಂಬಂಧಿ ವಿವರಗಳನ್ನು ಪ್ರಕಟಿಸುವ ಪತ್ರಿಕೆ. ರಷ್ಯಾದ ಮಹಿಳೆಯೊಬ್ಬರು ಈ ವಿಷಯವನ್ನು ಗಮನಿಸಿ, ಸಂಶೋಧನೆ ಮಾಡಿ ಪತ್ರಿಕೆಗಳ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಬೇರೊಬ್ಬರು ಇದೇ ಬಾವಿಗೆ ಬೀಳದಿರಲಿ ಎನ್ನುವುದು 'ರಿಟ್ರಾಕ್ಷನ್ ವಾಚ್' ಸಂಸ್ಥೆಯ ಉದ್ದೇಶ.

Image
predatory science journals 1 NYT
ಚಿತ್ರ ಕೃಪೆ: 'ನ್ಯೂಯಾರ್ಕ್ ಟೈಮ್ಸ್'

ಅದರ ಉದ್ದೇಶವೇನೋ ಒಳ್ಳೆಯದೇ. ಆದರೆ, ಇದನ್ನು ಕಂಡು ಪಾಲಿಸುವವರು ಇರಬಹುದೇ? ದೆಹಲಿಯಲ್ಲಿ 'ಡೆಲ್ಲಿ ಮಾಲ್‌'ಗೆ ಇರುವ ಕಾರಣಗಳೇ ಈ ನಕಲಿ ಪತ್ರಿಕೆಗಳ ಹುಟ್ಟಿಗೂ ಕಾರಣವೆನ್ನಬಹುದು. ಇದ್ದವರಂತೆ ತಾವೂ ಬದುಕಬೇಕೆನ್ನುವ ಆಸೆ ಮತ್ತು ಸಂಪನ್ಮೂಲಗಳಲ್ಲಿ ಇರುವ ಕಂದರ. ಈ ಬೇಟೆಗಾರರಿಗೆ ಕೆಲವು ಗೊತ್ತಿದ್ದೂ, ಗೊತ್ತಿದ್ದೂ ಬಲಿಯಾದರೆ, ಇನ್ನು ಕೆಲವರು ಅಜ್ಞಾನದಿಂದ ಬಲಿಯಾಗುತ್ತಾರೆ. ಗೊತ್ತಿದ್ದೂ ಬಲಿಯಾಗುವವರ ಉದ್ದೇಶವೂ ಕಳ್ಳತನದ್ದೇ. ಇವರಲ್ಲಿ ಒಂದು ಬಗೆ ಅವೈಜ್ಞಾನಿಕ ಸಂಶೋಧನೆಗಳನ್ನೂ ವೈಜ್ಞಾನಿಕವೆಂದು ತೋರಿಸಬೇಕೆನ್ನುವ ಹಂಬಲ. 'ವಿಷ್ಣು ಸಹಸ್ರನಾಮವನ್ನು ಓದಿದರೆ ಹೃದಯಾಘಾತ ಆಗುವುದಿಲ್ಲ' ಎನ್ನುವ ವಿಷಯದ ಬಗ್ಗೆ ಅತಾರ್ಕಿಕವಾದ ಪ್ರಯೋಗಗಳನ್ನು ನಡೆಸಿ ಹೀಗೊಬ್ಬರು ಪ್ರಕಟಿಸಿದ್ದರು. ಅದು ಪ್ರಕಟವಾಗಿದ್ದು ಪ್ರಿಡೇಟರ್ ಪತ್ರಿಕೆಯೊಂದರಲ್ಲಿ. ಇನ್ನೊಂದು ಬಗೆಯ ಜನರೂ ಇದ್ದಾರೆ. ತಾವು ಹೇಗಾದರೂ ಪ್ರಬಂಧವನ್ನು ಪ್ರಕಟಿಸಿ ಬಡ್ತಿಯದ್ದೋ, ಉದ್ಯೋಗದ್ದೋ ಲಾಭ ಪಡೆಯುವುದು. ಇವರಲ್ಲಿ ಬಹಳಷ್ಟು ಮಂದಿ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸಂಶೋಧಕರು. ಇವರ ಈ ಕಳ್ಳತನಕ್ಕೆ ಕಾರಣ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸುವಂತಹ ಸಂಶೋಧನೆಗಳಿಗೆ ಬೇಕಾದ ಸಂಪನ್ಮೂಲಗಳು ಇಲ್ಲದ್ದು. ಅಥವಾ ಅಂತಹ ಪತ್ರಿಕೆಗೆ ಕೊಡುವಷ್ಟು ಹಣ ಇಲ್ಲದ್ದು. ಓಪನ್ ಸೋರ್ಸ್ ಎನ್ನುವ ಕೆಲವು ಪತ್ರಿಕೆಗಳಲ್ಲಿ ಒಂದು ಪ್ರಬಂಧ ಪ್ರಕಟಿಸಲು ಏನಿಲ್ಲವೆಂದರೂ ಒಂದೂವರೆ ಲಕ್ಷದಿಂದ ಐದು ಲಕ್ಷದವರೆಗೂ ವೆಚ್ಚವಾಗುತ್ತದೆ. ನಮ್ಮ ದೇಶದಲ್ಲಿ ಇದು ಕೇವಲ ಸಾಕಷ್ಟು ಧನಸಹಾಯ ದೊರಕುವ ಪ್ರತಿಷ್ಠಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಐಐಟಿ, ಟಿಐಎಫ್ಆರ್‌ನಂತಹ ಸಂಸ್ಥೆಗಳ ಸಂಶೋಧಕರಿಗಷ್ಟೇ ನಿಲುಕುವಂಥದ್ದು. ಉಳಿದವರಿಗೆ ಅಗ್ಗದ ಮಾಲೇ ಗತಿ. ಅಂತಹವರು ಇಂತಹ ನಕಲಿ ಪತ್ರಿಕೆಗಳಿಗೆ ಸುಲಭ ಬಲಿ. ಇನ್ನೊಂದು ಬಗೆ - ಮುಗ್ಧ ಸಂಶೋಧಕರದ್ದು. ಇಂತಹ ಕಳ್ಳ ಪತ್ರಿಕೆಗಳು ಇವೆ, ಅವು ಹೀಗೆ ತಮಗೆ ಮೋಸ ಮಾಡಬಲ್ಲವು ಎಂದು ತಿಳಿಯದೆಯೇ ಬಲಿಯಾಗುವವರದ್ದು. ಬಲಿ ಯಾರೇ ಆಗಿರಲಿ. ಒಟ್ಟಾರೆ ಪೆಟ್ಟು ಬೀಳುವುದು ಮಾತ್ರ ವಿಜ್ಞಾನಕ್ಕೆ ಮತ್ತು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳು ವಿಶ್ವಾಸಾರ್ಹ ಸಂಶೋಧನೆಗಳ ಫಲ ಎನ್ನುವ ನಮ್ಮ ನಂಬಿಕೆಯ ಬುಡಕ್ಕೆ.

ನಿಮಗೆ ಏನು ಅನ್ನಿಸ್ತು?
1 ವೋಟ್