ನುಡಿಚಿತ್ರ | ಪಾರಂಪರಿಕ ಸೇತುವೆಯ ಕೆಲಸ ಮಾಡಿದ ಬುರುಡೆ ಬೆಸ್ತರು

Nudichithra May 30 2

ಒಬ್ಬ ವ್ಯಕ್ತಿಯನ್ನು ಮುಳುಗದಂತೆ ತೇಲಿಸಲು ನಾಲ್ಕೈದು ಬುರುಡೆಗಳು ಸಾಕು. ಈ ಬುರುಡೆಗಳು ಎಷ್ಟು ಕಾಲ ನೀರಲ್ಲಿದ್ದರೂ ಮೆತ್ತಗಾಗುವುದಿಲ್ಲ. ಆದರೆ, ಈಗ ಮೀನುಗಾರಿಕೆಗೆ ಹರಿಗೋಲನ್ನು ಬಳಸುವರು. ಸೇತುವೆಗಳು ಬಂದ ಬಳಿಕ ನದಿ ದಾಟಿಸುವುದೂ ಕಡಿಮೆಯಾಗಿದೆ. ಆದರೆ, ಪ್ರವಾಹ ಬಂದಾಗ, ಸೇತುವೆ ಇಲ್ಲದ ಕಡೆ ಈಗಲೂ ಇವು ಬಳಕೆಯಲ್ಲಿವೆ

ಉತ್ತರ ಕರ್ನಾಟಕದಲ್ಲಿ ನದಿ ತೀರದ ಊರುಗಳಲ್ಲಿ ಬೆಸ್ತರು ವಾಸಿಸುತ್ತಾರೆ. ಇವರಲ್ಲಿ 'ಬುರುಡೆ ಬೆಸ್ತರು' ಎಂಬ ಒಂದು ಪಂಗಡವಿದೆ. ದೋಣಿ ಇಲ್ಲವೇ ತೆಪ್ಪವನ್ನು ಬಳಸುವಂತೆ, ಇವರು ದೊಡ್ಡ-ದೊಡ್ಡ ಸೋರೆಕಾಯಿಯ ಒಣಗಿದ ಬುರುಡೆಗಳನ್ನು ನೂಲಿನಲ್ಲಿ ಒಟ್ಟಾಗಿ ಕಟ್ಟಿ ತೆಪ್ಪವನ್ನಾಗಿ ಮಾಡಿಕೊಳ್ಳುತ್ತಾರೆ. ಅದರ ನೆರವಿನಿಂದ ನದಿ ದಾಟಿಸುವ ಮತ್ತು ಮೀನು ಹಿಡಿಯುವ ಕಾಯಕ ಮಾಡುವರು.

ಇದೊಂದು ಪಾರಂಪರಿಕ ವೃತ್ತಿ. ಒಬ್ಬ ವ್ಯಕ್ತಿಯನ್ನು ಮುಳುಗದಂತೆ ತೇಲಿಸಲು ನಾಲ್ಕೈದು ಬುರುಡೆಗಳು ಸಾಕು. ಈ ಬುರುಡೆಗಳು ಎಷ್ಟು ಕಾಲ ನೀರಲ್ಲಿದ್ದರೂ ನೆನೆದು ಮೆತ್ತಗಾಗುವುದಿಲ್ಲ. ಆದರೆ, ಈಗ ಮೀನುಗಾರಿಕೆಗೆ ಹರಿಗೋಲನ್ನು ಬಳಸುವರು. ಸೇತುವೆಗಳು ಬಂದ ಬಳಿಕ ನದಿ ದಾಟಿಸುವುದೂ ಕಡಿಮೆಯಾಗಿದೆ. ಆದರೆ, ಪ್ರವಾಹ ಬಂದಾಗ, ಸೇತುವೆ ಇಲ್ಲದ ಕಡೆ ಈಗಲೂ ಇವು ಬಳಕೆಯಲ್ಲಿವೆ. ನಾವು ಮಲಪ್ರಭಾ ಹೊಳೆಯ ನೆರೆಯಿಂದ ಪೀಡಿತವಾದ ಹಳ್ಳಿಗಳಲ್ಲಿ ಕೆಲಸ ಮಾಡುವಾಗ, ಹುನಗುಂದ ತಾಲೂಕಿನ ಒಂದು ಹಳ್ಳಿಯಲ್ಲಿ ಈ ಬುರುಡೆಗಳ ಸರವನ್ನು ನೋಡಿದೆವು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಕಾಳೇನಹಳ್ಳಿಯ ಮುದುಕಿ ಮತ್ತು ವರ್ತಮಾನದ ವಾಸ್ತವದ ಖಡ್ಗ

ಈ ಸೋರೆಯನ್ನು ಬೆಳೆವ ರೈತರು ಬೆಸ್ತರಿಗೂ ತಂಬೂರಿ ಮಾಡುವವರಿಗೂ ಸರಬರಾಜು ಮಾಡುವವರು. ರಾಜಪ್ರಭುತ್ವದ ಕಾಲದಲ್ಲಿ ಬುರುಡೆಬೆಸ್ತರು ಒಂದು ದಡದಿಂದ ಇನ್ನೊಂದು ದಡಕ್ಕೆ ಸೈನ್ಯವನ್ನೂ ಸೈನಿಕ ಸಾಮಗ್ರಿಗಳನ್ನೂ ದಾಟಿಸಲು ನೆರವಾಗುತ್ತಿದ್ದರು. ದಂಡಯಾತ್ರೆ ಹೊರಟಾಗ ಸೈನ್ಯದ ಜೊತೆ ಬಹುಶಃ ಬುರುಡೆ ಬೆಸ್ತರ ತಂಡವೂ ಇರುತ್ತಿತ್ತು. ಈ ಸೇವೆಯ ಭಾಗವಾಗಿ ಬೆಸ್ತರು ಸೈನ್ಯಕ್ಕೂ ಸೇರುತ್ತಿದ್ದರು. ಇದರಿಂದಾಗಿ ಮೈಸೂರು ಭಾಗದಲ್ಲಿ ಬೆಸ್ತರಿಗೆ 'ಪರಿವಾರದವರು' ಎಂಬ ಹೆಸರಿದೆ.

ಸಾಂಪ್ರದಾಯಿಕ ಚರಿತ್ರೆಯು ಯುದ್ಧ ಮತ್ತು ಸಾಮ್ರಾಜ್ಯಗಳ ಕಥನದಲ್ಲಿ ದೊರೆಗಳನ್ನೂ ಸೇನಾನಿಗಳನ್ನೂ ನೆನಪಿಡುತ್ತದೆ. ಆದರೆ, ಸೈನ್ಯದ ಜೊತೆಗೆ ಹೋಗುತ್ತಿದ್ದ ಅಡುಗೆಯವರು, ನದಿ ದಾಟಿಸುವವರು, ಚರ್ಮಕಾರರು, ಮನರಂಜಕರು, ಡೇರೆ ಹಾಕುವವರು, ದಾರಿ ಅಳೆಯುವವರು, ಕತ್ತಿ-ಗುರಾಣಿ ಮಾಡುವ ಕಮ್ಮಾರರು, ಮೇವು-ನೀರು ಸರಬರಾಜು ಮಾಡುವವರು, ವೈದ್ಯರು ಮುಂತಾದ ಕುಶಲ ಕಸುಬುದಾರರ ಸೇವೆಯನ್ನು ದಾಖಲಿಸಿದ್ದು ನನಗೆ ನೆನಪಿಲ್ಲ. ಹಾಗೆ ದಾಖಲಿಸಿದ್ದರೆ, ಸಾಮ್ರಾಜ್ಯಗಳ ಅಳಿವು-ಬೀಳುಗಳಲ್ಲಿ ಬುರುಡೆ ಬೆಸ್ತರ ಮತ್ತು ಸೋರೆಬುರುಡೆಗಳ ಪಾತ್ರವೇನೆಂದು ತಿಳಿಯುತ್ತಿತ್ತು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಟಿಪ್ಪು ಮೈಸೂರ ಹುಲಿ ಹೇಗಾದ' ಎಂಬ ಪ್ರಶ್ನೆಯ ಸುತ್ತ

'ವಾರ್ ಅಂಡ್ ಪೀಸ್' ಕಾದಂಬರಿಯು, ಸೇನೆಯ ಜೊತೆಗೆ ಹೋಗುತ್ತಿದ್ದ ಕತೆಗಾರರನ್ನು, ಬೂಟು ಹೊಲಿಯುವ ಚರ್ಮಕಾರರನ್ನು ದಾಖಲಿಸುತ್ತದೆ. 'ಪ್ರವಾಸಿ ಕಂಡ ಇಂಡಿಯಾ' ಸಂಪುಟಗಳಲ್ಲಿ ಕೂಡ ದೋಣಿಕಾರರ ವಿವರಗಳಿವೆ. ಕಾರವಾರದಿಂದ ರಸ್ತೆ ಮಾರ್ಗವಾಗಿ ಮಂಗಳೂರಿಗೆ ಬರಬೇಕಾದರೆ ಒಂದು ಕಾಲಕ್ಕೆ ಇಪ್ಪತ್ತಕ್ಕೂ ಹೆಚ್ಚು ಹೊಳೆಗಳನ್ನು ದಾಟಬೇಕಿತ್ತು. ಪ್ರತಿ ಕಡವಿನಲ್ಲಿ ದೋಣಿಕಾರರು ಇರುತ್ತಿದ್ದರು. ಬುರುಡೆ ಬೆಸ್ತರು ನಮ್ಮ ಪಾರಂಪರಿಕ ಸೇತುವೆಯ ಕೆಲಸ ಮಾಡಿದವರು.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
1 ವೋಟ್