ನುಡಿಚಿತ್ರ | ಜಾತಿಗಾರರು ಮತ್ತು ನಾಗರಿಕ ಸಮಾಜದ ಸೋಗು

Nudichithra JUNE 6

ಜಾತಿಗಾರರ ಛದ್ಮವೇಷ ಪ್ರತಿಭೆಗೆ ಒಂದು ಕತೆಯನ್ನು ಹೇಳಲಾಗುತ್ತದೆ: ಒಮ್ಮೆ ಒಬ್ಬ ಬಹುರೂಪಿಯು ಬಿಜಾಪುರದ ಆದಿಲಶಾಹಿ ಸುಲ್ತಾನನ ಮುಂದೆ ಅವನ ಗುರುವಿನ ಸೋಗನ್ನು ಹಾಕಿ ಹೋದನಂತೆ. ಸುಲ್ತಾನನು ತನ್ನ ಗುರುವೇ ಬಂದನೆಂದು ಗದ್ದಿಗೆಯಿಂದ ಇಳಿದು ಬಂದು ಕಾಲಿಗೆ ನಮಸ್ಕರಿಸಿದನಂತೆ. ನಂತರ ವಿಷಯ ಗೊತ್ತಾಗಿ ಜಾತಿಗಾರನನ್ನು ಶಿಕ್ಷಿಸಿದನಂತೆ

ಉತ್ತರ ಕರ್ನಾಟಕದ ಮುಸ್ಲಿಮರಲ್ಲಿ ಚಪ್ಪರಬಂದ್, ದರವೇಶ್, ಕರಡಿಖಲಂದರ್ ಮುಂತಾದ ಹಿಂದುಳಿದ ಪಂಗಡಗಳಿವೆ. ಅವುಗಳಲ್ಲಿ ಜಾತಿಗಾರವೂ ಒಂದು. ಇಲ್ಲಿರುವ ಚಿತ್ರವು ಒಬ್ಬ ಜಾತಿಗಾರ ಕಲಾವಿದನದು. ಇವರು ಹೆಚ್ಚಾಗಿ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ಇರುತ್ತಾರೆ. ಮೂಲತಃ  ಅಲೆಮಾರಿ ಕಲಾವಿದರು. ಇವರನ್ನು ಬಹುರೂಪಿಗಳು ಎಂದೂ ಕರೆವರು. ಬಹುರೂಪಿ ಚೌಡಯ್ಯನೆಂಬ ವಚನಕಾರನಿದ್ದಾನೆ.

ಇವರ ಕಾಯಕ ಯಾವುದಾದರೂ ಒಂದು ಊರಿಗೆ ಹೋಗಿ ನೆಲೆ ನಿಂತು, ಪ್ರತಿದಿನ ಗೌಡ, ಕುಲಕರ್ಣಿ, ಮಠಾಧೀಶ, ಸೈನಿಕ, ಜೋಗಿತಿ, ಬ್ರಿಟಿಶ್ ಅಧಿಕಾರಿ ಇತ್ಯಾದಿ ಸೋಗು ಹಾಕಿ ಜನರನ್ನು ರಂಜಿಸುವುದು. ಬುಡಗ ಜಂಗಮರು ಹೆಚ್ಚಾಗಿ ಪೌರಾಣಿಕ ವ್ಯಕ್ತಿಗಳ ಸೋಗನ್ನು ಹಾಕಿದರೆ, ಇವರ ಸೋಗುಗಳು ಲೌಕಿಕವಾಗಿರುತ್ತಿದ್ದವು.

ಇವರ ಛದ್ಮವೇಷ ಪ್ರತಿಭೆಗೆ ಒಂದು ಕತೆಯನ್ನು ಹೇಳಲಾಗುತ್ತದೆ: ಒಮ್ಮೆ ಒಬ್ಬ ಬಹುರೂಪಿಯು ಬಿಜಾಪುರದ ಆದಿಲಶಾಹಿ ಸುಲ್ತಾನನ ಮುಂದೆ ಅವನ ಗುರುವಿನ ಸೋಗನ್ನು ಹಾಕಿ ಹೋದನಂತೆ. ಸುಲ್ತಾನನು ತನ್ನ ಗುರುವೇ ಬಂದನೆಂದು ಗದ್ದಿಗೆಯಿಂದ ಇಳಿದು ಬಂದು ಕಾಲಿಗೆ ನಮಸ್ಕರಿಸಿದನಂತೆ. ನಂತರ ವಿಷಯ ಗೊತ್ತಾಗಿ ಜಾತಿಗಾರನನ್ನು ಶಿಕ್ಷಿಸಿದನಂತೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಪಾರಂಪರಿಕ ಸೇತುವೆಯ ಕೆಲಸ ಮಾಡಿದ ಬುರುಡೆ ಬೆಸ್ತರು

ಜಾತಿಗಾರರು ಬೀದಿಯಲ್ಲಿ ಆಡುತ್ತಿದ್ದ ಸಣ್ಣ-ಪುಟ್ಟ ನಾಟಕಗಳೇ 'ಹಗರಣ/ ಪಗರಣ' ಎಂದು ಹೆಸರಾಗಿದ್ದವು. ಬದುಕಿಗಾಗಿ ಜನತೆಯನ್ನೇ ನಂಬಿದ್ದ ಕರ್ನಾಟಕದ ಪ್ರಾಚೀನ ಬೀದಿ ಕಲಾವಿದರಾದ ಇವರಲ್ಲಿ ಕೆಲವರು ಲಿಂಗದೀಕ್ಷೆ ಪಡೆದರೆ, ಕೆಲವರು ಆದಿಲಶಾಹಿ ಕಾಲದಲ್ಲಿ ಇಸ್ಲಾಮನ್ನು ಸ್ವೀಕರಿಸಿದರು. ಆದರೆ, ಧಾರ್ಮಿಕ ನಿರ್ಬಂಧಗಳಿಂದಾಗಿಯೋ, ಸಾಮಾಜಿಕ ಗೌರವವನ್ನು ಕಳೆದುಕೊಂಡಿದ್ದರಿಂದಲೋ, ಇವರನ್ನು ಕರೆಸಿಕೊಂಡು ಮನರಂಜನೆ ಪಡೆದು ದವಸ, ಹಣ ಕೊಟ್ಟು ಆದರಿಸುತ್ತಿದ್ದ ಗ್ರಾಮೀಣ ವ್ಯವಸ್ಥೆ ಇಲ್ಲವಾಗಿ ಆಧುನಿಕ ಕಾಲದಲ್ಲಿ ಜೀವಿಸುವುದು ಕಷ್ಟವಾಗಿಯೋ, ಹೊಸ ತಲೆಮಾರು ಇದನ್ನು ಮುಂದುವರಿಸಲು ನಿರಾಕರಿಸಿದ್ದರಿಂದಲೋ, ಈ ಕಲೆ ನಿಂತುಹೋಯಿತು.

ಈ ಸಮುದಾಯದ ಕೆಲವರು ಕಂಪನಿ ನಾಟಕಗಳಲ್ಲೂ, ಸಣ್ಣಾಟ, ಪಾರಿಜಾತ ಮುಂತಾದ ಜನಪದ ರಂಗಭೂಮಿಯಲ್ಲೂ ಸೇರಿಹೋದಂತೆ ಕಾಣುತ್ತದೆ. ಈಗ ಜಾತಿಗಾರರು ಗೊಡ್ಡೆಮ್ಮೆಗಳನ್ನು ಸಾಕಿ, ಅವಕ್ಕೆ ಗರ್ಭ ಕೂಡಿಸಿ, ಕರು ಸಮೇತ ಮಾರುವ ಇಲ್ಲವೇ ಎಮ್ಮೆಗೆ ಶೇವ್ ಮಾಡುವ ಕೆಲಸದಲ್ಲಿ ತೊಡಗಿರುವರು. ಕೆಲವರು ಇದನ್ನೂ ಬಿಟ್ಟು, ಪ್ಲಾಸ್ಟಿಕ್ ಚಾಪೆ, ಕೊಡ ಮಾರುವರು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಕಾಳೇನಹಳ್ಳಿಯ ಮುದುಕಿ ಮತ್ತು ವರ್ತಮಾನದ ವಾಸ್ತವದ ಖಡ್ಗ

ಕಲೆಯನ್ನು ನೆಮ್ಮಿ ಅಲೆಮಾರಿಗಳಾಗಿ ಬದುಕಿದ ಈ ಜನರಿಗೆ ಭೂಮಿ, ಶಿಕ್ಷಣಗಳಿಲ್ಲದ ಕಾರಣ, ಸಿಕ್ಕ-ಸಿಕ್ಕ ವೃತ್ತಿಗಳಿಗೆ ಹೋದಂತೆ ಕಾಣುತ್ತದೆ. ಸಾಂಪ್ರದಾಯಿಕ ವೃತ್ತಿ ಸಮುದಾಯಗಳು ಆಧುನಿಕ ಕಾಲದಲ್ಲಿ ಅನಾಥಗೊಂಡು ದಿಕ್ಕಾಪಾಲಾಗಿ ಹೋದ ದಾರುಣ ಕತೆಗಳಲ್ಲಿ ಜಾತಿಗಾರರದೂ ಒಂದು. ಈ ಸಮುದಾಯವು ಕರ್ನಾಟಕ ಸಂಸ್ಕೃತಿಯ ವೈವಿಧ್ಯವನ್ನೂ, ಮುಸ್ಲಿಂ ಸಮುದಾಯದಲ್ಲಿರುವ ಪಂಗಡ ವ್ಯವಸ್ಥೆಯನ್ನೂ ಸೂಚಿಸುತ್ತದೆ.

ನಾವು ಏಕರೂಪಿ ಸಂಸ್ಕೃತಿ ಹೇರುವ ರಾಜಕಾರಣದ ಎದುರು, ವೈವಿಧ್ಯ ಮತ್ತು ಬಹುತ್ವವನ್ನು ನಮ್ಮ ಸಾಂಸ್ಕೃತಿಕ ವಿಶಿಷ್ಟತೆ ಎಂದು ಕೊಂಡಾಡುತ್ತೇವೆ. ಆದರೆ, ಈ ಬಹುತ್ವದ ಭಾಗವಾಗಿದ್ದ ಸಮಾಜಗಳ ಬದುಕು ಆಧುನಿಕ ಕಾಲದಲ್ಲಿ ಹೇಗೆ ಮೂರಾಬಟ್ಟೆಯಾಯಿತು ಎಂದು ಆಲೋಚಿಸುವುದಿಲ್ಲ. ಈ ಕಾರಣಕ್ಕಾಗಿ ನಿಜವಾದ ಸೋಗುಗಾರಿಕೆ ನಾಗರಿಕ ಸಮಾಜದ್ದು ಅನಿಸುತ್ತದೆ.

ನಿಮಗೆ ಏನು ಅನ್ನಿಸ್ತು?
3 ವೋಟ್