ನುಡಿಚಿತ್ರ | ಒಂದು ವಿಶೇಷ ಲಗ್ನಪತ್ರಿಕೆಯ ಕತೆ

Kempamma Nagavara Marriage Invitation

ಹೊಸ ಚೌಕಟ್ಟಿನಲ್ಲಿ ಮದುವೆ ಆಗುವುದು ಎಂದರೆ, ಕುಟುಂಬ, ಸಮುದಾಯ, ಊರುಗಳನ್ನು ಎದುರುಹಾಕಿಕೊಳ್ಳುವ ಕ್ರಿಯೆ ಕೂಡ. ಅಂತರ್ಜಾತಿ, ಅಂತರ್ಧರ್ಮೀಯ ಮದುವೆ ಆಗಿದ್ದರೆ ಈ ಎದುರುಹಾಕಿಕೊಳ್ಳುವ ಕ್ರಿಯೆ ಇನ್ನೂ ಸವಾಲಿನದಾಗುತ್ತದೆ. ಈ ಹಿನ್ನೆಲೆಯಲ್ಲಿ, ಕಾಳೇಗೌಡ ನಾಗವಾರ, ತೇಜಸ್ವಿ ಅವರ ಲಗ್ನಪತ್ರಿಕೆಗಳು, ಕರ್ನಾಟಕದ ಸಾಂಸ್ಕೃತಿಕ ದಾಖಲೆಗಳಾಗಿವೆ

ಮದುವೆಯು ಇಬ್ಬರು ವ್ಯಕ್ತಿಗಳ ವೈಯಕ್ತಿಕ ಬದುಕಿನ ಆರಂಭಕ್ಕೆ ಸಂಬಂಧಿಸಿದ ಘಟನೆ. ಆದರೆ, ಇದು ಘಟಿಸುವುದು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಇದಕ್ಕೆ ಇಬ್ಬರೂ ವ್ಯಕ್ತಿಗಳ ಕುಟುಂಬ, ಬಂಧು-ಬಳಗ, ಸಮುದಾಯ ಹಾಗೂ ಊರುಗಳು ಕೂಡಿಕೊಳ್ಳುತ್ತವೆ. ಹೀಗಾಗಿ, ಮದುವೆ ವ್ಯಕ್ತಿಗಳಿಗೆ ಸಂಬಂಧಿಸಿದರೂ ಸಾಮುದಾಯಿಕ ಕ್ರಿಯೆಯಾಗಿದೆ. ಸಮಾಜೋ-ಧಾರ್ಮಿಕ ಆಚರಣೆಯಾಗಿದೆ.

Eedina App

ಇಂತಹ ಸಾಮುದಾಯಿಕ ಆಚರಣೆಯಾಗಿರುವ ಚೌಕಟ್ಟನ್ನು ಮುರಿದು ಹೊಸ ಚೌಕಟ್ಟಿನಲ್ಲಿ ಮದುವೆ ಆಗುವುದು ಎಂದರೆ, ಕುಟುಂಬ, ಸಮುದಾಯ, ಊರುಗಳನ್ನು ಎದುರುಹಾಕಿಕೊಳ್ಳುವ ಕ್ರಿಯೆಯೂ ಆಗುತ್ತದೆ. ಮದುವೆಯು ಅಂತರ್ಜಾತಿಯ, ಅಂತರ್ಧರ್ಮೀಯ ಆಗಿದ್ದರೆ ಈ ಎದುರುಹಾಕಿಕೊಳ್ಳುವ ಕ್ರಿಯೆ ಇನ್ನೂ ಸವಾಲಿನದಾಗುತ್ತದೆ. ಕುಟುಂಬ, ಜಾತಿ-ಧರ್ಮ, ಸಂಪ್ರದಾಯಗಳ ಚೌಕಟ್ಟು ಹಾಗೂ ಪ್ರತಿಷ್ಠೆಯನ್ನು ಭಂಗ ಮಾಡಿದ ಕಾರಣಕ್ಕಾಗಿ ಪ್ರೇಮಿಗಳು/ ದಂಪತಿಯನ್ನು ಕೊಲ್ಲುವ ಚರಿತ್ರೆಯೂ ನಮ್ಮಲ್ಲಿರುವುದು ಸರ್ವವಿಧಿತ.  

ಈ ಹಿನ್ನೆಲೆಯಲ್ಲಿ ಕನ್ನಡದ ಇಬ್ಬರು ಲೇಖಕರಾದ ತೇಜಸ್ವಿ ಮತ್ತು ಕಾಳೇಗೌಡ ನಾಗವಾರ ಅವರ ಮದುವೆಯ ಲಗ್ನಪತ್ರಿಕೆಗಳು, ಕರ್ನಾಟಕದ ಸಾಂಸ್ಕೃತಿಕ ದಾಖಲೆಗಳಾಗಿವೆ. ನಾಗವಾರ-ಕೆಂಪಮ್ಮನವರ ಮದುವೆಗೆ (8.6.1972) ಅರ್ಧ ಶತಮಾನ ಮುಗಿದಿದೆ. ಈ ಮದುವೆಯ ಲಗ್ನಪತ್ರವು ಅರ್ಧ ಶತಮಾನದ ಹಿಂದಿನ ಅನೇಕ ಸಾಮಾಜಿಕ, ರಾಜಕೀಯ, ವೈಚಾರಿಕ ಸಂಗತಿಗಳನ್ನು ಕಾಣಿಸುತ್ತಿದೆ. ಲಗ್ನಪತ್ರಿಕೆಗಳು ನಾವು ಮದುವೆಯಾಗುವ ಘಟನೆಯನ್ನು ಮಾತ್ರ ಹೇಳುವುದಿಲ್ಲ; ಹೇಗೆ ಮದುವೆಯಾಗುತ್ತಿದ್ದೇವೆ, ನಮ್ಮ ಜೀವನದ, ಸಮಾಜದ ಕಲ್ಪನೆ ಯಾವುದು ಎಂಬುದನ್ನು ಕೂಡ ಸೂಚಿಸಬಲ್ಲವು.

AV Eye Hospital ad
Kuvempu 2
ಕುವೆಂಪು ಕೈಬರಹದಲ್ಲಿ ರಾಜೇಶ್ವರಿ-ತೇಜಸ್ವಿ ಲಗ್ನಪತ್ರಿಕೆ

ಎರಡು ಜೀವ, ಕುಟುಂಬ, ಊರು, ಸಮುದಾಯಗಳು ಸಂಬಂಧ ಸ್ಥಾಪಿಸಿಕೊಳ್ಳುವ ಘಟನೆಯಾಗಿರುವ ಮದುವೆಗಳು ಕ್ರಾಂತಿಕಾರಕವಾದರೆ ಸಂಬಂಧಗಳನ್ನು ಕಡಿದುಹಾಕಬಲ್ಲವು. ಈ ಸಂಬಂಧ ಕಡಿದುಕೊಳ್ಳುವಿಕೆಯು, ಪರ್ಯಾಯವಾಗಿ ಹೊಸ ಸಂಬಂಧಗಳನ್ನು, ಹೊಸ ಕುಟುಂಬ ಮತ್ತು ಸಮುದಾಯವನ್ನು ಕಟ್ಟಿಕೊಳ್ಳುತ್ತದೆ. ಈ ಲಗ್ನಪತ್ರಿಕೆಯಲ್ಲಿ ಇಂತಹ ಪರ್ಯಾಯ ಕುಟುಂಬ ಮತ್ತು ಸಮುದಾಯ, ಸಮಾಜದ ಪರಿಕಲ್ಪನೆ ಇದೆ. ಹೀಗಾಗಿ, ಗಂಡು-ಹೆಣ್ಣಿಗೆ ಹೊಸಬಾಳಿನ ಪ್ರವೇಶದ ಬಾಗಿಲಿನಂತಿರುವ ಮದುವೆಯು, ಹೊಸ ಸಮಾಜದ ಕಟ್ಟೋಣಕ್ಕೆ ಬುನಾದಿಯೂ ಆಗಬಯಸಿದೆ.

ಲೇಖಕರು, ಪತ್ರಕರ್ತರು, ರಾಜಕಾರಣಿಗಳು ಕೂಡಿರುವ ಈ ಮದುವೆಯು, ಮೂಢನಂಭಿಕೆ, ಸಂಪ್ರದಾಯ ವಿರೋಧಿ ಸಮ್ಮೇಳನದ ಭಾಗವಾಗಿದೆ. ಮದುವೆಯ ಅಂಗವಾಗಿ ಸಮ್ಮೇಳನವಲ್ಲ; ಸಮ್ಮೇಳನದ ಅಂಗವಾಗಿ ಮದುವೆ. ಕರಪತ್ರದಲ್ಲಿ ಕಂದಾಚಾರ, ಮೂಢನಂಬಿಕೆ, ಸಂಪ್ರದಾಯ,  ವಿರೋಧ, ಕ್ರಾಂತಿದಳ ಮುಂತಾದ ಶಬ್ದಗಳಿವೆ. ದಳ ಎಂದರೆ ಸೈನ್ಯವೆಂದರ್ಥ. ಬದಲಾವಣೆಗಾಗಿ ಸೈನ್ಯ ಕಟ್ಟಬೇಕು ಮತ್ತು ಕಂದಾಚಾರಗಳ ಮೇಲೆ ಸಾಮಾಜಿಕ ಯುದ್ಧ ಮಾಡಬೇಕು ಎಂಬ ಆಶಯದಲ್ಲಿ ಇವು ಬಂದಿವೆ. ಇವು ವೈಚಾರಿಕ ಪ್ರಜ್ಞೆಯ ಹೊಸ ಬಾಳನ್ನು, ಹೊಸ ಸಮಾಜವನ್ನು, ಹೊಸ ರಾಜಕಾರಣವನ್ನು ಕಟ್ಟುವುದರ ಪ್ರಾಮುಖ್ಯವನ್ನು ಸೂಚಿಸುತ್ತಿವೆ.

ಕೆಲವೊಮ್ಮೆ ವೈಚಾರಿಕ ಯುದ್ಧಗಳಲ್ಲಿ ಯಾವುದರ ವಿರುದ್ಧ ಎನ್ನುವುದು ಖಚಿತವಾಗಿರುತ್ತದೆ. ಯಾವುದರ ಪರ ಎನ್ನುವುದು ಅಸ್ಪಷ್ಟವಾಗಿರುತ್ತದೆ. ಇಲ್ಲಿ ವಿರೋಧ ಮತ್ತು ಪರ ಎರಡರ ಬಗ್ಗೆಯೂ ಸ್ಪಷ್ಟತೆ ಇದೆ. ಸಾಂಪ್ರದಾಯಿಕ ಹಳ್ಳಿಗಳಲ್ಲಿ ಭೂಮಾಲೀಕ ಶೂದ್ರ ಜಾತಿಗಳು ದಲಿತರ ವಿಷಯದಲ್ಲಿ ಅಸ್ಪೃಶ್ಯತೆ ಆಚರಿಸುತ್ತವೆ. ಆದರೆ, ಈ ಮದುವೆಗೆ ದಲಿತ ನಾಯಕರೇ ಪುರೋಹಿತರಾಗಿದ್ದಾರೆ. ದಲಿತರ ಸಹವಾಸವಿಲ್ಲದೆ ಸಮಾಜ ಬದಲಾವಣೆಗೆ ಅರ್ಥವಿಲ್ಲ ಎಂಬ ದನಿಯಿದೆ. ಕಂದಾಚಾರ ವಿರೋಧದ ಹೆಸರಲ್ಲಿ ಮದುವೆಯ ಜೊತೆಗೆ ಸಾಂಪ್ರದಾಯಿಕವಾಗಿ ಬಂದಿರುವ ಸಾಂಸ್ಕೃತಿಕ ಲೋಕ ಸಾಮಾನ್ಯವಾಗಿ ಕಳೆದುಹೋಗುತ್ತದೆ. ಮದುವೆ ಶುಷ್ಕವಾಗುತ್ತದೆ. ಆದರೆ, ಈ ಸಾಂಸ್ಕೃತಿಕ ಆಚರಣೆಗಳು ಜಾತಿ, ವರದಕ್ಷಿಣೆ, ಅಸ್ಪೃಶ್ಯತೆಯಂತಹ ಸಂಗತಿಗಳನ್ನು ಸಹಿಸಿಕೊಂಡಿರುತ್ತವೆಯಾದ್ದರಿಂದ, ಈ ಕುರಿತು ಇಲ್ಲಿ ಕತ್ತರಿಸಿಕೊಳ್ಳುವ ನಿಷ್ಠುರ ನಿಲುವು ತಳೆದಂತಿದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಕಾಳೇನಹಳ್ಳಿಯ ಮುದುಕಿ ಮತ್ತು ವರ್ತಮಾನದ ವಾಸ್ತವದ ಖಡ್ಗ

ಆಹಾರದ ವ್ಯವಸ್ಥೆ ಮಾಡಿಲ್ಲದಿರುವುದು ಸೌಜನ್ಯರಹಿತವಾಗಿ ಕಾಣುತ್ತದೆ. ಆದರೆ, ಆಹಾರಕ್ಕಾಗಿಯೇ ದುಂದು ವೆಚ್ಚ ಮಾಡಿಸುವ ಮದುವೆಗಳು ಹೆಣ್ಣಿನ ಮನೆಯವರ ಮೇಲೆ ಹೊರಿಸುವ ಭಾರವನ್ನು ಕಡಿಮೆಗೊಳಿಸುವ ಆಶಯ ಇಲ್ಲಿರುವಂತಿದೆ.  

ಅಸಾಂಪ್ರದಾಯಿಕ ವಿಧಾನದಲ್ಲಿ ಮದುವೆಯಾಗುವುದು ಪಟ್ಟಣಗಳಲ್ಲಿ ಸುಲಭ. ಹುಟ್ಟಿದ ಸಾಂಪ್ರದಾಯಿಕ ಹಳ್ಳಿಯಲ್ಲೇ ಆಗುವುದು ಕಷ್ಟ. ಊರು ತನ್ನ ಪ್ರಜೆಯು ನಿರ್ದಿಷ್ಟ ವಿಧಾನದಲ್ಲಿ ಮದುವೆಯಾಗಬೇಕೆಂದು ಬಯಸುತ್ತದೆ, ವಿಧಿಸುತ್ತದೆ. ಅದು ಸಾಂಪ್ರದಾಯಿಕ ಆಲೋಚನೆಯ ಜನರೇ ಬಹುಸಂಖ್ಯಾತರ ಹಿಡಿತದಲ್ಲಿರುವ ಪ್ರದೇಶ. ಹೀಗಾಗಿಯೇ, ಹೊಸ ರೀತಿಯಲ್ಲಿ ಮದುವೆ ಆಗುವವರು ಊರು ಬಿಟ್ಟು ಹೊರಹೋಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ, ಈ ಮದುವೆ ಸಾಂಪ್ರದಾಯಿಕ ಹಳ್ಳಿಯಲ್ಲೇ ಜರುಗುತ್ತಿದೆ. ಈ ಮೂಲಕ ಊರಿಗೆ ಹೊಸ ಸಂದೇಶ ಕೊಡುತ್ತಿದೆ. ಮದುವೆ ಕಾರ್ಯಕ್ರಮ ಆಯೋಜಿಸಿರುವುದು ಹೊರಗಿನಿಂದ ಬಂದ ಸಂಘಟನೆಯಲ್ಲ, ಊರಲ್ಲೇ ಹುಟ್ಟಿದ ಸಂಘಟನೆ. ಊರು ಮತ್ತು ಕುಟುಂಬಗಳ ಸಂಬಂಧಗಳು ಕಡಿತಗೊಂಡಿಲ್ಲ ಎಂಬುದನ್ನು ಸೂಚಿಸಲು ವಧು-ವರರ ತಂದೆಯರನ್ನು (ಇಲ್ಲಿ ತಾಯಂದಿರ ಹೆಸರಿಲ್ಲದಿರುವುದು ಒಂದು ಕೊರತೆ) ಅವರ ಮನೆತನದ ವಿಶೇಷಣಗಳ ಮೂಲಕ ಕಾಣಿಸಲಾಗಿದೆ.

ಸಮಾಜಕ್ಕೆ ಕಲ್ಯಾಣವಾಗಬೇಕು, ಕಲ್ಯಾಣ ರಾಷ್ಟ್ರ ಕಟ್ಟಬೇಕು ಎಂಬ ಆಶಯವು ವ್ಯಕ್ತಿಯ ಕಲ್ಯಾಣದ ಹೊತ್ತಲ್ಲಿ ಪ್ರಕಟವಾಗುತ್ತಿದೆ. ಮದುವೆಯಂತಹ ಕೌಟುಂಬಿಕ ವೈಯಕ್ತಿಕ ಸಂಗತಿಯು ಸಮಾಜ ಬದಲಾವಣೆಯ ಭಾಗವೆಂದು ಮನಗಾಣಿಸುವ ಈ ಮದುವೆಯು 'ಕಲ್ಯಾಣದ ಮದುವೆ'ಯನ್ನು ನೆನಪಿಸುತ್ತಿದೆ. ಇಲ್ಲಿ ವಧುವಿನ ಹೆಸರು ವರನ ಹೆಸರಿಗಿಂತ ಮೊದಲು ಇರುವುದು ಗಮನಾರ್ಹ.

Kempamma Nagavara
ಕೆಂಪಮ್ಮ-ಕಾಳೇಗೌಡ ದಂಪತಿಗೆ ಕೆ ಎಚ್ ರಂಗನಾಥ್ ಅವರಿಂದ ವಿವಾಹ ಸಂಹಿತೆ ಬೋಧನೆ

ಇಂತಹ ವಿಶಿಷ್ಟ ಕಲ್ಯಾಣಕ್ಕೆ, ಮದುವೆಗೆ ಸಮಾಜ ಕಲ್ಯಾಣ ಸಚಿವರು ಆಗಮಿಸಿದ್ದಾರೆ. ಪ್ರಭುತ್ವ ಕೂಡ ಇಂತಹ ಹೊಸ ಬಗೆಯ ಮದುವೆಗಳನ್ನು ಮಾನ್ಯ ಮಾಡಬೇಕು ಎಂಬ ಸೂಚನೆ ಇಲ್ಲಿರಬಹುದು. ಈ ಆಶಯಕ್ಕೆ ತಕ್ಕಂತೆ ವೈಚಾರಿಕ ಚಿಂತನೆಗಳನ್ನು ಪ್ರಕಟಿಸುವ ಪತ್ರಿಕೆಯ ಸಂಪಾದಕರಾದ ಕಲ್ಲೆ ಶಿವೋತ್ತಮರಾಯರು ಭಾಗವಹಿಸುತ್ತಿದ್ದಾರೆ. ಅವರ ಪತ್ರಿಕೆಯ ಹೆಸರಲ್ಲೇ 'ಜನಪಗ್ರತಿ'ಯಿದೆ. ಇದಕ್ಕೆ ಪೂರಕವಾಗಿ 'ಸಮಾಜದ ಪ್ರಗತಿಗೆ ಕಂಟಕಪ್ರಾಯವಾಗಿರುವ ಮೂಢನಂಬಿಕೆ ಮತ್ತು ಸಂಪ್ರದಾಯಗಳ’ ಮೇಲೆ ಭಾಷಣವಿದೆ.

ಮದುವೆ ಮತ್ತು ಸಮ್ಮೇಳನ ಸಂಘಟಿಸಿರುವುದು ಸಾಮಾಜಿಕ ಆರ್ಥಿಕ ಕ್ರಾಂತಿದಳ. ಬದಲಾವಣೆ ಎರಡೂ ಕ್ಷೇತ್ರದಲ್ಲಿ ಆಗಬೇಕು ಎಂಬ ಆಶಯವಿರಬಹುದು. ಮದುವೆ ಎಂಬ ವೈಯಕ್ತಿಕ ವಿದ್ಯಮಾನಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಮೂರೂ ಆಯಾಮಗಳು ಕೂಡಿವೆ. ಕರ್ನಾಟಕದ ಲೋಹಿಯಾವಾದಿಗಳ ವಿಶಿಷ್ಟತೆ ಎಂದರೆ, ಅವರಿಗೆ ಸಾಮಾಜಿಕ, ರಾಜಕೀಯ, ಸಾಹಿತ್ಯಾದಿ ಕಲಾಕ್ಷೇತ್ರಗಳ ಜೊತೆ ಸಮ-ಸಮವಾದ ಸಂಬಂಧಗಳಿರುವುದು. ಮದುವೆಯಲ್ಲಿ ರಾಜಕಾರಣಿಗಳು, ಲೇಖಕರು, ಪತ್ರಕರ್ತರು ಇದ್ದಾರೆ.

ನೆಂಟರಿಷ್ಟರಿಗೆ, ಬಂಧುಗಳಿಗೆ ಆಹ್ವಾನ ಮಾಡುವುದು ಪದ್ಧತಿ. ಆದರೆ, ಈ ಮದುವೆಗೆ 'ಪ್ರಗತಿಪರ ವಿಚಾರಗಳಲ್ಲಿ ನಂಬಿಕೆಯಿಟ್ಟ' ಎಲ್ಲರನ್ನೂ 'ಪ್ರೀತಿಯಿಂದ ಸ್ವಾಗತಿಸುತ್ತೇವೆ' ಎಂದು ಕಾಣಿಸಲಾಗಿದೆ. ಇಲ್ಲಿ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರು ಬರಬೇಕಾಗಿಲ್ಲ ಎಂಬ ಸಂದೇಶವೂ ಇದೆ. 'ಪ್ರೀತಿ' ಶಬ್ದವು ನಾಗವಾರರ ಬರೆಹ ಮತ್ತು ವೈಚಾರಿಕತೆಯಲ್ಲಿ ಪ್ರಮುಖವಾದ ಪರಿಕಲ್ಪನೆ. 'ಪ್ರೀತಿ ಮತ್ತು ನಿರ್ಭೀತಿ’ ಅವರ ಕೃತಿಯ ಹೆಸರು ಕೂಡ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app