ನುಡಿಚಿತ್ರ | 'ಆಂಗ್ಲೊ ಭಾರತಿ' ಎಂಬ ವಿಶಿಷ್ಟ ಸಂಕರ ನುಡಿಗಟ್ಟು

Nudichithra June 20 2022

ಸಾಮಾನ್ಯ ಕಾಯಿಲೆಗಳ ಜೊತೆ, 'ಮದ್ದೀಡು' ಎಂಬ ವಿಶೇಷ ಕಾಯಿಲೆಯ ಉಲ್ಲೇಖವೂ ಇಲ್ಲಿದೆ. ಮದ್ದೀಡು ಎಂದರೆ, ಹಳ್ಳಿಗಳಲ್ಲಿರುವ ನಂಬಿಕೆ ಪ್ರಕಾರ, ಕೆಲವು ಮಹಿಳೆಯರು ತಮಗೆ ಬೇಡವಾದವರಿಗೆ ತೊಂದರೆ ಕೊಡಲು ಹಾಕುವ ಮದ್ದು. ಅಂಥವರ ಮನೆಗೆ ಹೋಗಬಾರದು, ಹೋದರೂ ಆಹಾರ ಸ್ವೀಕರಿಸಬಾರದು ಎಂಬ ನಿರ್ಬಂಧಗಳಿವೆ. ಜೊತೆಗೆ, ರೋಚಕ ಕತೆಗಳಿವೆ

ಬೆಂಗಳೂರಿನ ನಗರ್ತಪೇಟೆಯಲ್ಲಿರುವ ಅಂಗಡಿಯೊಂದರ ಬೋರ್ಡು ಇದು. ಗಮನಿಸಿದರೆ, ನಾಟಿ ಔಷಧಿಗಳನ್ನು ಕೊಡುವ ಸ್ಥಳೀಯ ವೈದ್ಯಶಾಲೆ. ಇದಕ್ಕೆ ಬೇಕಾಗಿ ಔಷಧಿ ತಯಾರಿಸುವ ಪ್ರಸಿದ್ಧ ಪಂಡಿತರೊಬ್ಬರ ಹೆಸರಿದೆ. ಇಲ್ಲಿ ಎಣ್ಣೆ, ಲೇಹ್ಯ, ಮಾತ್ರೆ, ಕಾರ ಇತ್ಯಾದಿ ಶಬ್ದಗಳಿವೆ. 'ಕುಂತಿ ಸುಕುಮಾರ' ಹೆಸರಿನ ಎಣ್ಣೆಯಿದೆ.

ಬೇಧಿ, ಜ್ವರ, ಹೊಟ್ಟೆನೋವು ಮುಂತಾದ ಸಾಮಾನ್ಯ ಕಾಯಿಲೆಗಳ ಜೊತೆ, 'ಮದ್ದೀಡು' ಎಂಬ ವಿಶೇಷ ಕಾಯಿಲೆಯ ಉಲ್ಲೇಖವೂ ಇದೆ. ಮದ್ದೀಡು ಎಂದರೆ, ಹಳ್ಳಿಗಳಲ್ಲಿರುವ ನಂಬಿಕೆಯ ಪ್ರಕಾರ, ಕೆಲವು ಮಹಿಳೆಯರು ತಮಗೆ ಬೇಡವಾದವರಿಗೆ ತೊಂದರೆ ಕೊಡಲು ಹಾಕುವ ಮದ್ದು. ಅಂಥವರ ಮನೆಗೆ ಹೋಗಬಾರದು, ಹೋದರೂ ಪಾನೀಯ ಅಥವಾ ಆಹಾರ ಸ್ವೀಕರಿಸಬಾರದು ಎಂಬ ನಿರ್ಬಂಧಗಳಿವೆ. ಈ ಮದ್ದೀಡನ್ನು ತಯಾರಿಸುವ ವಿಧಾನದ ರೋಚಕ ಕತೆಗಳಿವೆ. ಸತ್ತ ಊಸರವಳ್ಳಿಯನ್ನು ಕಾದ ಹೆಂಚಿನ ಮೇಲೆ ಕಟ್ಟಿ, ಅದರಿಂದ ಜಿನುಗುವ ಎಣ್ಣೆಯನ್ನು ಮದ್ದನ್ನಾಗಿ ಬಳಸುತ್ತಾರಂತೆ. ಅವರು ಅವರಿವರಿಗೆ ಮದ್ದು ಹಾಕದಿದ್ದರೆ, ಯಾವುದೋ ಶಕ್ತಿ ಅವರಿಗೆ ಕಾಟ ಕೊಡತೊಡಗುತ್ತದೆ ಎಂದೂ ಹೇಳಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಹಳ್ಳಿಗಳಲ್ಲಿ ಮದ್ದನ್ನು ತೆಗೆಯುವ ಪರಿಣತರೂ ಇರುತ್ತಾರೆ. ಯುದ್ಧದಲ್ಲಿ ಸರ್ಪಾಸ್ತ್ರ ಬಿಟ್ಟರೆ ಎದುರಾಳಿಯಿಂದ ಗರುಡಾಸ್ತ್ರ ಬಿಟ್ಟಂತೆ ಇದು. ಅವರು, ಪೀಡಿತ ವ್ಯಕ್ತಿಯ ಮೂತ್ರದಲ್ಲಿ ಹುರುಳಿಯನ್ನು ನೆನೆಸಿ ಪತ್ತೆ ಮಾಡುತ್ತಾರೆ. ಮದ್ದು ವಾಂತಿಯಲ್ಲಿ ಹೊರಬಂದ ಬಳಿಕ, ಅದು ಗಡ್ಡೆಯ ರೂಪದಲ್ಲಿದ್ದು, ಅದರ ಮೇಲೆ ಕೂದಲು ಬೆಳೆದಿರುತ್ತದೆಯಂತೆ. ಹೀಗೆ, ವೈದ್ಯವಿಜ್ಞಾನವು ದೃಢಪಡಿಸದ ಕಾಲ್ಪನಿಕ ಕಾಯಿಲೆಗೂ ಇಲ್ಲಿ ಪರಿಹಾರ ಕೊಡುವುದಾಗಿ ಹೇಳಲಾಗಿದೆ. ಇದನ್ನು ಬೋರ್ಡಿನಲ್ಲಿ ಹೊಸದಾಗಿ ಬರೆದು ಸೇರಿಸಲಾಗಿದೆ. ಅಂದರೆ, ಮದ್ದೀಡಿನ ರೋಗಿಗಳು ನಂತರದ ಘಟ್ಟದಲ್ಲಿ ಹೆಚ್ಚಾದಂತೆ ತೋರುತ್ತದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಪಾರಂಪರಿಕ ಸೇತುವೆಯ ಕೆಲಸ ಮಾಡಿದ ಬುರುಡೆ ಬೆಸ್ತರು

ಅಂದರೆ, ಈ ವೈದ್ಯಶಾಲೆಯು ದೈಹಿಕ ಕಾಯಿಲೆಗಳಿಗೆ ಮಾತ್ರವಲ್ಲದೆ, ನಂಬಿಕೆಯ ಮೇಲೆ ಹುಟ್ಟಿದ ಅನುಮಾನಸ್ಥ ಕಾಯಿಲೆಗಳಿಗೂ ಮದ್ದನ್ನು ಕೊಡುತ್ತಿದೆ. ಬೋರ್ಡು ಮನೆದೇವತೆಗಳ ಹೆಸರಿನಿಂದ ಶುರುವಾಗುತ್ತಿದೆ. 'ಓಂ,' 'ಶ್ರೀ'ಗಳ ಮೇಲೆ ವಿಭೂತಿಯ ಧಾರಣೆಯಿದೆ. ಇದು ಇಡೀ ವೈದ್ಯಕ್ಕೆ ಒಂದು ಧಾರ್ಮಿಕ ಲೇಪವನ್ನು ಕೊಡುತ್ತಿದೆ. ಆಸ್ಪತ್ರೆಯ ಹೆಸರು ಸಂಸ್ಕೃತದ ಶಬ್ದಗಳಿಂದ ಕೂಡಿದ್ದು, ಈ ವೈದ್ಯಕೀಯಕ್ಕೆ ದೇಶೀಯ ಆಯಾಮ ಕೊಡುವ ಯತ್ನ ಮಾಡುತ್ತಿದೆ.

ಕುತೂಹಲವೆಂದರೆ, ಈ ದೇಶೀಯ ವೈದ್ಯ ವ್ಯವಸ್ಥೆಗೆ 'ಆಂಗ್ಲೋ' ಶಬ್ದ ಸೇರಿ, 'ಆಂಗ್ಲೊ ಭಾರತಿ' ಎಂಬ ವಿಶಿಷ್ಟ ಸಂಕರ ಸಮಾಸಪದವಾಗಿರುವುದು. ಇಲ್ಲಿ 'ಆಂಗ್ಲೊ' ಶಬ್ದವು, ಇಂಗ್ಲಿಷ್ ಮೆಡಿಸನ್ ಎಂದು ಕರೆಯಲಾಗುವ ಅಲೋಪತಿ ಬಂದೊಡನೆ, ಭಾರತದ ಸ್ಥಳೀಯ ಮದ್ದುಗಳು ಅನುಭವಿಸಿದ ಕೀಳರಿಮೆಯ ಚರಿತ್ರೆಯನ್ನು ಗರ್ಭದಲ್ಲಿ ಇಟ್ಟುಕೊಂಡಿದೆ. ಭಾರತದ ಅನೇಕ ಸ್ಥಳೀಯ ದೇಶೀಪದ್ಧತಿಗಳು ತಮಗೆ ಪಶ್ಚಿಮದ ಅಧಿಕಾರಸ್ಥ ಎದುರಾಳಿ ಪದ್ಧತಿಯು ಬಂದೊಡನೆ, ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಿದವು. ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಅವು ಯೂರೋಪಿನ ಪದ್ಧತಿಯನ್ನು ಅನುಕರಿಸತೊಡಗಿದವು. 'ಕಂಪ್ಯೂಟರ್ ಜ್ಯೋತಿಷ್ಯ' ಎನ್ನುವುದು ಇಂತಹ ಅನುಕರಣೆಯ ಫಲವೇ. ಹೀಗಾಗಿ, ದೇಶೀಯ ಪದ್ಧತಿಯನ್ನು ಸೂಚಿಸುವ ಪದಗಳಲ್ಲಿ ಆಂಗ್ಲ ಪದ್ಧತಿ ಸೂಚಕ ಶಬ್ದಗಳು ಸೇರಿಕೊಂಡವು. 'ಆಂಗ್ಲೊ ಭಾರತಿ' ಅಂತಹ ಸಂಕರ ಪದ. ಇದು, ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪಡೆದೂ ಸಾಂಪ್ರದಾಯಿಕ ವೇಷ, ಲಾಂಛನ, ಸಂಪ್ರದಾಯ ಕೈಬಿಡದ ಭಾರತೀಯರ ಹೊರಳಿಕೆಯ ರೂಪಕ ಕೂಡ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಒಂದು ವಿಶೇಷ ಲಗ್ನಪತ್ರಿಕೆಯ ಕತೆ

ಈಗ ಬ್ರಿಟಿಶರು ಹೋದರೂ ಅವರ ವಿದ್ಯಾಭ್ಯಾಸ, ಭಾಷೆ, ವೈದ್ಯಕೀಯವು ಭಾರತೀಯ ಸಮಾಜದಲ್ಲಿ ಪ್ರಭಾವಶಾಲಿಯಾಗಿಯೇ ಇದೆ. ವೈದ್ಯಕ್ಕೆ ಸಂಬಂಧಪಟ್ಟಂತೆ, ಇಂಗ್ಲಿಷ್ ಮೆಡಿಸನ್‍ನಿಂದ ಅನೇಕರು ಮರಳಿ ದೇಸೀ ವೈದ್ಯ ಪದ್ಧತಿಗೆ ಹೊರಳುತ್ತಿದ್ದಾರೆ. ಕೆಲವು ಪ್ರಖ್ಯಾತ ಆಲೊಪತಿಕ್ ವೈದ್ಯರೇ, ಇಂಗ್ಲಿಷ್ ವೈದ್ಯಕೀಯದ ಸೈಡ್‍ ಎಫೆಕ್ಟುಗಳ ಕುರಿತು ಮಾತಾಡತೊಡಗಿದ್ದಾರೆ ಮತ್ತು ಆರ್ಯುವೇದ, ಯುನಾನಿ ಇತ್ಯಾದಿ ದೇಸೀ ವೈದ್ಯಕ್ಕೆ ಹೋಗಲು ಸೂಚಿಸುತ್ತಿದ್ದಾರೆ.

ಆದ್ದರಿಂದ ಈ ಬೋರ್ಡು, ಎರಡು ಶತಮಾನದ ಅವಧಿಯಲ್ಲಿ ವೈದ್ಯಕೀಯದಂತಹ ಕ್ಷೇತ್ರದಲ್ಲಿ ನಡೆದ ಪಾಶ್ಚಿಮಾತ್ಯೀಕರಣ, ದೇಶೀಯ-ಪಾಶ್ಚಿಮಾತ್ಯಗಳ ಮಿಶ್ರಣ, ಮರಳಿ ದೇಶೀಯತೆಯತ್ತಲಿನ ಚಲನೆಯ ಮೂರೂ ಘಟ್ಟಗಳನ್ನು ಕುರಿತು ಆಲೋಚಿಸಲು ಪ್ರೇರಿಸುತ್ತಿದೆ. ಹಾಗೆ ಕಂಡರೆ, ಎರಡೂ ವೈದ್ಯ ಪದ್ಧತಿಗಳು ಜೊತೆಯಲ್ಲೇ ಹೋಗುತ್ತಿವೆ. ಭಾರತೀಯರೊಳಗಿನ ಯೂರೋಪಿತನವು ತೆಗೆಯಲಾಗದ ವಾಸ್ತವ ಸತ್ಯವಾಗಿರುವ ರೂಪಕದಂತೆಯೂ ಈ ಬೋರ್ಡು ಕಾಣುತ್ತದೆ.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
1 ವೋಟ್