ನುಡಿಚಿತ್ರ | ಕಡಕೋಳದ ಮಡಿವಾಳಪ್ಪನವರ ಜಾತ್ರೆ ಮತ್ತು ಕಟುಕಲ ರೊಟ್ಟಿ

Katukala Rotti

ನನಗೆ ಯಾವುದೇ ರೊಟ್ಟಿ ತಿನ್ನುವಾಗ, ಅದರ ಮೇಲಿನ ಬೆರಳ ಗುರುತುಗಳು ಪವಿತ್ರವಾಗಿ ಕಾಣುತ್ತವೆ. ಶಾಖ ಜಾಸ್ತಿಯಾಗಿ ಸುಟ್ಟ ಅದರ ಕಲೆಗಳು ಚಂದ್ರನೊಳಗಿನ ಕಪ್ಪುಮಚ್ಚೆಯಂತೆ ತೋರುತ್ತವೆ. ನಮ್ಮ ಆಹಾರ ಸಂಸ್ಕೃತಿಯಲ್ಲಿ ಜನರ ರುಚಿ-ಅಭಿರುಚಿಗಳು ಮಾತ್ರವಲ್ಲ, ಸಮುದಾಯಗಳ ಸಂಚಿತ ವಿವೇಕವೂ ಇರುತ್ತದೆ ಎಂಬುದಕ್ಕೆ ಈ ರೊಟ್ಟಿ ಜೀವಂತ ಸಾಕ್ಷಿ

ನಾನೊಮ್ಮೆ ದೆಹಲಿಯಿಂದ ಬರುತ್ತಿದ್ದೆ. ನಮ್ಮ ರೈಲು ಡಬ್ಬಿಯಲ್ಲಿ, ದೆಹಲಿಗೆ ಯಾವುದೋ ಕೆಲಸಕ್ಕೆಂದು ಹೋಗಿದ್ದ ರೈತನಾಯಕರೊಬ್ಬರು ಪರಿಚಯವಾದರು. ಮಧ್ಯಾಹ್ನ ನಾವು ರೈಲ್ವೆ ಊಟವನ್ನು ಖರೀದಿಸಿದೆವು. ಅವರು ಖರೀದಿಸಲಿಲ್ಲ. ತಮ್ಮ ಬುತ್ತಿಯನ್ನು ಬಿಚ್ಚಿದರು. ಊರಿಂದ ತಂದಿದ್ದ ಕಟುಕಲ ಜೋಳದ ರೊಟ್ಟಿಯ ಮೇಲೆ, ಶೇಂಗಾ ಹಿಂಡಿ, ಗುರೆಳ್ಳು ಪುಡಿಯನ್ನು ಹಾಕಿಕೊಂಡು, ಅದರ ಮೇಲೆ ರೈಲಿನಲ್ಲಿ ಕೊಂಡ ಒಂದು ಬಟ್ಟಲು ಮೊಸರನ್ನು ಸುರುವಿ, ಉಳ್ಳಾಗಡ್ಡೆ, ಸೌತೆಕಾಯಿ ಜೊತೆಗಿಟ್ಟುಕೊಂಡು ಊಟ ಮಾಡಿದರು.

Eedina App

ತಮಗೆ ರೈಲ್ವೆ ಊಟ ಸೇರುವುದಿಲ್ಲವೆಂತಲೂ ಮನೆಯೂಟವನ್ನು ಎಲ್ಲಿಗೆ ಹೋದರೂ ಒಯ್ಯುತ್ತೇನೆಂದೂ ಹೇಳಿದರು. ನಾವೂ ಅವರಿಂದ ಇಸಿದುಕೊಂಡು ತಿಂದೆವು. ಹುಬ್ಬಳ್ಳಿಯಲ್ಲಿ ಇಳಿಯುವಾಗ, ತಮ್ಮಲ್ಲಿದ್ದ 12 ರೊಟ್ಟಿಗಳನ್ನು ಆಹೇರಿಯಾಗಿ ಕೊಟ್ಟರು. ನನಗೆ ಕಟುಕಲ ರೊಟ್ಟಿಯ ಮಹತ್ವ ಮನವರಿಕೆಯಾಯಿತು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಒಂದು ವಿಶೇಷ ಲಗ್ನಪತ್ರಿಕೆಯ ಕತೆ

AV Eye Hospital ad

ಬಿಸಿ ರೊಟ್ಟಿಯನ್ನು ಮಾಡಿದ ದಿನವೇ ತಿನ್ನುವರು. ಆದರೆ, ಹೆಂಚಿನಲ್ಲಿ ಸುಟ್ಟ ರೊಟ್ಟಿಯನ್ನು ಬಳಿಕ ಕೆಂಡಕ್ಕೆ ಅಥವಾ ಒಲೆಯ ಬಿಸಿಯಲ್ಲಿಟ್ಟು ಹಪ್ಪಳದಂತೆ ಮಾಡಲಾಗುತ್ತದೆ. ತನ್ನ ಶೈತ್ಯಾಂಶ ಕಳೆದುಕೊಂಡು ಕಟುಕಲಾಗುವ ಇದು ಬಹಳ ದಿನಗಳವರೆಗೆ ಹಳಸದೆ ಇರುತ್ತದೆ. ಇದನ್ನು ಒಂದು ಬುಟ್ಟಿಯಲ್ಲಿಯೋ ಹಳೆಯ ಸೀರೆಯ ಜೋಲಿಯಲ್ಲಿಯೋ ಸಂಗ್ರಹಿಸಲಾಗುತ್ತದೆ. ತಿನ್ನುವಾಗ ಇದು ಸಪ್ಪಳ ಮಾಡುತ್ತದೆ.

ನೀಲಿ ಆಗಸದಿಂದ ಹಗಲ ಚಂದ್ರನನ್ನು ಕಿತ್ತು ತಂದು ಸೆರೆಗೆ ಹಾಕಿದಂತಿರುವ ಈ ರೊಟ್ಟಿಗಳ ಚಿತ್ರವನ್ನು ನಾನು ಕಲಬುರಗಿ ಜಿಲ್ಲೆಯ ಕಡಕೋಳದ ಮಡಿವಾಳಪ್ಪನವರ ಜಾತ್ರೆಗೆ ಹೋದಾಗ, ಒಂದು ಮನೆಯಲ್ಲಿ ತೆಗೆದಿದ್ದೆ. ಜಾತ್ರೆಗೆ ಬಹಳಷ್ಟು ಜನ ಮನೆಗೆ ಬರುವುದರಿಂದ ಈ ಸಿದ್ಧತೆ ಮಾಡಲಾಗಿತ್ತು. ಇದಕ್ಕೆ ಪಲ್ಯ ಮಾಡಿಕೊಂಡರೆ ಸಾಕು. ಕೆಲವು ಅಂಗಡಿಗಳಲ್ಲಿ ಕಟುಕಲನ್ನು ಮಾರಲಾಗುತ್ತದೆ. ಖಾನಾವಳಿಗಳಲ್ಲಿ ಕೇಳಿದರೆ ಕಟುಕಲನ್ನು ಬಡಿಸಲಾಗುವುದು. ತಿನ್ನುವಾಗ ಇದು ಸಪ್ಪಳ ಮಾಡುತ್ತದೆ. ಕೆಲವರು ಇದನ್ನು ಮತ್ತೊಮ್ಮೆ ಶಾಖಕ್ಕೆ ಒಡ್ಡಿಯೋ ಕುದಿವ ಸಾರಲ್ಲಿ ಅದ್ದಿಯೋ ತಾಜಾ ಮಾಡಿಕೊಂಡು ತಿನ್ನುವರು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಆಂಗ್ಲೊ ಭಾರತಿ' ಎಂಬ ವಿಶಿಷ್ಟ ಸಂಕರ ನುಡಿಗಟ್ಟು

ನನಗೆ ಯಾವುದೇ ರೊಟ್ಟಿ ತಿನ್ನುವಾಗ, ಅದರ ಮೇಲಿನ ಬೆರಳ ಗುರುತುಗಳು ಪವಿತ್ರವಾಗಿ ಕಾಣುತ್ತವೆ. ಶಾಖ ಜಾಸ್ತಿಯಾಗಿ ಸುಟ್ಟ ಅದರ ಕಲೆಗಳು ಚಂದ್ರನೊಳಗಿನ ಕಪ್ಪುಮಚ್ಚೆಯಂತೆ ತೋರುತ್ತವೆ. ಕಟುಕಲ ರೊಟ್ಟಿಯನ್ನು ನೋಡುವಾಗ ಅಕ್ಕನ ವಚನವೊಂದು ನೆನಪಾಗುತ್ತದೆ. ಅದರಲ್ಲಿ ಆಕೆ, "ಚಿನ್ನ ಸುಡಿಸಿ ಬಿಡಿಸಿಕೊಂಡು ಆಭರಣವಾಗುತ್ತದೆ. ಕಬ್ಬು ಹಿಂಡಿಸಿಕೊಂಡು, ಗಂಧ ತೇಯಿಸಿಕೊಂಡು, ರಸವನ್ನೂ ಗಂಧವನ್ನೂ ಕೊಡುತ್ತವೆ. ಇದರಂತೆ ಬಾಳಿನ ಕಷ್ಟವನ್ನು ಸಹಿಸಿದವರು ಶರಣರಾಗುತ್ತಾರೆ," ಎನ್ನುತ್ತಾಳೆ. ಈ ತರ್ಕ ಮಾತು ಕಟುಕಲ ರೊಟ್ಟಿಗೂ ಅನ್ವಯವಾಗುತ್ತದೆ. ಬಿಸಿ ರೊಟ್ಟಿಯ ಎದುರು ಕಟುಕಲ ರೊಟ್ಟಿಯು ಆದ್ಯತೆಯಲ್ಲಿ ಎರಡನೆಯ ಸ್ಥಾನ ಪಡೆದಿದೆ. ಆದರೆ ಯಾತ್ರೆ ಮಾಡುವಾಗ ಅದು ಸಂಗಾತಿಯಾಗುತ್ತದೆ. ಅಕಸ್ಮಾತ್ ನಂಟರು ಬಂದಾಗ, ಪರಿಸ್ಥಿತಿ ಸಂಭಾಳಿಸಿ, ಮರ್ಯಾದೆ ಉಳಿಸುತ್ತದೆ. ದೂರದ ಊರಲ್ಲೂ ಮನೆಯೂಟ ಒದಗಿಸುತ್ತದೆ. ಈ ಭಾಗ್ಯ ಮುದ್ದೆಗಿಲ್ಲ. ಅನ್ನಕ್ಕಿಲ್ಲ. ನಮ್ಮ ಆಹಾರ ಸಂಸ್ಕೃತಿಯಲ್ಲಿ ಜನರ ರುಚಿ-ಅಭಿರುಚಿಗಳು ಮಾತ್ರವಲ್ಲ, ಸಮುದಾಯಗಳ ಸಂಚಿತ ವಿವೇಕವೂ ಇರುತ್ತದೆ.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app