ನುಡಿಚಿತ್ರ | ವಾಡಿ, ಬಾಬಾಸಾಹೇಬರು ಹಾಗೂ ದಿಲ್‍ದಾರ್

nudichithra

ಬಾಬಾಸಾಹೇಬರು ಮುಂಬೈನಿಂದ ಹೈದರಾಬಾದಿಗೆ ಹೋಗಿಬರುವಾಗಲೆಲ್ಲ ವಾಡಿ ರೈಲು ನಿಲ್ದಾಣದಲ್ಲಿ ಇಳಿದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆಗೆಲ್ಲ ದಿಲ್‍ದಾರ್ ಹುಸೇನ್ ಅವರಿಂದ ಚಹಾ-ಪಾನಿ ಸೇವೆ ಸಿಗುತ್ತಿತ್ತು. ಜೊತೆಗೆ, ವಾಡಿಯ ದಲಿತರ ಭೇಟಿಯೂ. ಹೀಗಾಗಿ, ವಾಡಿಯಲ್ಲಿ ಅಂಬೇಡ್ಕರ್ ಜನ್ಮದಿನಕ್ಕಿಂತ (ಏ.14) ಅವರು ವಾಡಿಗೆ ಭೇಟಿ ನೀಡಿದ ಏ.27 (1952) ಜನಪ್ರಿಯ

ಈಚೆಗೆ ಕಲಬುರಗಿ ಜಿಲ್ಲೆಯ ವಾಡಿಗೆ ಹೋಗಿದ್ದೆ. ವಾಡಿ - ಮಧ್ಯ ರೈಲ್ವೆಯ ಪ್ರಖ್ಯಾತ ರೈಲ್ವೆ ಜಂಕ್ಷನ್. ಪುಣೆ-ಬೆಂಗಳೂರು ಮಾರ್ಗದ ರೈಲುಗಳು ಇಲ್ಲಿ ತಿರುವನ್ನು ಪಡೆದುಕೊಂಡು ಹೈದರಾಬಾದಿಗೆ ಹೋಗುತ್ತವೆ. ನಿಲ್ದಾಣದ ಬೋರ್ಡನ್ನು ನೋಡಿದೆ. ಅದನ್ನು ಕನ್ನಡ, ಹಿಂದಿ, ಇಂಗ್ಲೀಶು, ಉರ್ದುವಿನಲ್ಲಿ ಬರೆಯಲಾಗಿತ್ತು. ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ ದಿನಗಳಿಂದಲೂ ಉರ್ದು ಆಡಳಿತ ಭಾಷೆಯಾಗಿದ್ದರಿಂದಲೂ, ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದಲೂ ಉರ್ದು ಸಹಜವಾಗಿಯೇ ಇತ್ತು.

Eedina App

ವಾಡಿಯಲ್ಲಿ ಬಾಬಾಸಾಹೇಬರು ಭೇಟಿ ನೀಡಿದ ಏಪ್ರಿಲ್ 27-28ರಂದು ದೊಡ್ಡ ಕಾರ್ಯಕ್ರಮ ಏರ್ಪಡಿಸುವ ಪದ್ಧತಿಯಿದೆ. ನಾನು ಗೆಳೆಯ ವಿಕ್ರಮ್ ತೇಜಸ್ ಅವರಲ್ಲಿ ಉಳಿದುಕೊಂಡು, ವಾಡಿಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಇರುವ ನಂಟಿನ ಬೇರೆ-ಬೇರೆ ಎಳೆಗಳನ್ನು ಪರಿಶೀಲಿಸುತ್ತಿದ್ದೆ. ಅಂತಹ ಒಂದು ಎಳೆಗಳಲ್ಲಿ ವಾಡಿ ಸ್ಟೇಶನ್ನಿನಲ್ಲಿರುವ ಚಹಾ ಅಂಗಡಿಯೂ ಒಂದು. ಅದರ ಸನ್ನದನ್ನು ದಿಲದಾರ್ ಹುಸೇನ್ ಅವರು ಪಡೆದಿದ್ದರು. ಈಗ ಅವರ ಮೂರನೇ ತಲೆಮಾರು ಈ ಅಂಗಡಿಯನ್ನು ನಡೆಸುತ್ತಿದೆ. ದಿಲ್‍ದಾರ್ ಅವರು ಬಾಬಾಸಾಹೇಬರ ಗಾಢ ಅನುಯಾಯಿಗಳಲ್ಲಿ ಒಬ್ಬರಾಗಿದ್ದರು. ಅವರ ಅನುಯಾಯಿತನ ಬೆಳೆದ ಚರಿತ್ರೆ ಸ್ವಾರಸ್ಯಕರವಾಗಿದೆ.

ಹೈದರಾಬಾದ್ ನಿಜಾಮ ಸಂಸ್ಥಾನದ ರೈಲ್ವೆ ಇಲಾಖೆಗೆ (ನಿಜಾಮ ಗ್ಯಾರೆಂಟಿ ರೈಲ್ವೆ) ವಾಡಿ ನಿಲ್ದಾಣ ಸೇರಿತ್ತು. ಬ್ರಿಟಿಶರ ಆಳ್ವಿಕೆಯಲ್ಲಿದ್ದ ಗ್ರೇಟ್ ಇಂಡಿಯನ್ ಪೆನುನ್ಸಿಲಾ ರೈಲ್ವೆ ಇಲಾಖೆಗೆ ಸೇರಿದ ರೈಲುಗಳು ಮುಂಬೈನಿಂದ ವಾಡಿಗೆ ಬರುತ್ತಿದ್ದವು. ವಾಡಿಯಲ್ಲಿ ಹೈದರಾಬಾದ್, ಮುಂಬೈ ಹೋಗುವ ಪ್ರಯಾಣಿಕರು ರೈಲನ್ನು ಬದಲಿಸಬೇಕಿತ್ತು. ಹೀಗೆ ಗಾಡಿ ಬದಲಿಸುವಾಗ ಅವರು ಹಲವಾರು ಗಂಟೆಗಳನ್ನು ವಾಡಿ ನಿಲ್ದಾಣದಲ್ಲಿ ಕಳೆಯಬೇಕಾಗುತ್ತಿತ್ತು. ರೈಲಿನ ಎಂಜಿನ್ ಬದಲಾವಣೆ, ಅದಕ್ಕೆ ಕಲ್ಲಿದ್ದಲು ಮತ್ತು ನೀರು ತುಂಬುವುದು ಇತ್ಯಾದಿ ಕೆಲಸಗಳಿಗೆ ಸಮಯ ಹಿಡಿಯುತ್ತಿತ್ತು.

AV Eye Hospital ad

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಕಡಕೋಳದ ಮಡಿವಾಳಪ್ಪನವರ ಜಾತ್ರೆ ಮತ್ತು ಕಟುಕಲ ರೊಟ್ಟಿ

ಬಾಬಾಸಾಹೇಬರು ಶೆಡ್ಯೂಲ್ ಕಾಸ್ಟ್ ಫೆಡರೇಶನ್ನಿಗೆ ಮುಂಬೈನಿಂದ ಹೈದರಾಬಾದಿಗೆ ಹೋಗಿಬರುವಾಗಲೆಲ್ಲ ವಾಡಿ ನಿಲ್ದಾಣದಲ್ಲಿ ಇಳಿದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆಗ ಅವರಿಗೆ ಚಹಾ-ಪಾನಿ ಸೇವೆಯನ್ನು ದಿಲ್‍ದಾರ್ ಹುಸೇನ್ ಮಾಡುತ್ತಿದ್ದರು. ಅವರು ಬಾಬಾಸಾಹೇಬರು ಬಂದಾಗ, ವಾಡಿಯ ದಲಿತರಿಗೆ ಬಾಬಾಸಾಹೇಬರು ಬಂದಿದ್ದಾರೆಂದು ವಾರ್ತೆ ಕೊಡುತ್ತಿದ್ದರು ಮತ್ತು ಅವರನ್ನು ಭೇಟಿ ಮಾಡಿಸುತ್ತಿದ್ದರು. ಮುಂದೆ ಅವರು ಬಾಬಾಸಾಹೇಬರ ಅಭಿಮಾನಿಯಾದರು. ಹೀಗಾಗಿ, ವಾಡಿಯಲ್ಲಿ ಬಾಬಾಸಾಹೇಬರ ಜನ್ಮದಿನಕ್ಕಿಂತ (ಏಪ್ರಿಲ್ 14) ಅವರು ವಾಡಿಗೆ ಭೇಟಿ ನೀಡಿದ ಏಪ್ರಿಲ್ 27 (1952) ಮುಖ್ಯವಾಗಿದೆ. ಮುಂದೆ ಹುಸೇನರು ಬಾಬಾಸಾಹೇಬರು ವಾಡಿ ಊರಿನೊಳಗೆ ಬಂದು ವಿಶ್ರಾಂತಿ ಪಡೆದ ಸ್ಥಳವನ್ನು 'ಅಂಬೇಡ್ಕರ್ ಸರ್ಕಲ್' ಮಾಡುವುದಕ್ಕೆ ನೆರವಾದರು ಮತ್ತು ನೀಲಧ್ವಜವನ್ನು ನೆಡಲು ಧ್ವಜಸ್ಥಂಬಕ್ಕೆ ಬೇಕಾದ ಪೋಲನ್ನು ಕೊಟ್ಟರು ಎಂದು ವಿಕ್ರಮ್ ಹೇಳಿದರು.

ವಾಡಿಯಲ್ಲಿ ದಲಿತರು ಮತ್ತು ಮುಸ್ಲಿಮರ ಮನೆಗಳು ಒಟ್ಟೊಟ್ಟಿಗಿವೆ. ಇದನ್ನು ನೋಡುವಾಗ ನನಗೆ, ಈ ಎರಡೂ ಸಮುದಾಯಗಳು ಒಟ್ಟು ಸೇರಿದರೆ, ದೇಶದ ರಾಜಕೀಯ ನಕ್ಷೆಯನ್ನೇ ಬದಲಿಸಬಹುದಲ್ಲ ಎನಿಸಿತು. ಇದು ಕನಸು. ಆದರೆ, ಕನಸು ನನಸಾಗಲು ಎಷ್ಟೊಂದು ತೊಡಕು?

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
1 ವೋಟ್
eedina app