ನುಡಿಚಿತ್ರ | ನಮ್ಮ ವಾಹನಗಳಲ್ಲಿ ಬಳಸುವ 'ಹಾರ್ನ್' ಪದದ ಮೂಲ ಮತ್ತು ಅರ್ಥ ಸ್ವಾರಸ್ಯ

Nudichithra 16

ಬೇಟೆಯಾಡಿ ಮಾಂಸ ತಿನ್ನುವ ಪ್ರಾಣಿಗಳಿಗೆ (ಹುಲಿ, ಸಿಂಹ, ಚಿರತೆ) ಕೋಡು ಇರುವುದಿಲ್ಲ. ಬದಲಿಗೆ, ಹುಲ್ಲು-ಸೊಪ್ಪು ಮೇಯುವ ಮೇಕೆ, ಜಿಂಕೆ, ಟಗರು, ಕೋಣ, ಎತ್ತು, ಹಸುಗಳಿಗೆ ಮಾತ್ರ ಕೋಡು ಇರುತ್ತದೆ. ಇದು ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ಯಾಹಾರಿ ಪ್ರಾಣಿಗಳಿಗೆ ನಿಸರ್ಗ ಕಲ್ಪಿಸಿರುವ ಆಯುಧ. ಆದರೆ, ಈ ಆಯುಧವೇ ಮನುಷ್ಯರ ಆಚರಣೆಗಳಲ್ಲಿ ವಾದ್ಯವಾಗಿದೆ

ಇದು ಆದಿಚುಂಚನಗಿರಿಯಲ್ಲಿರುವ ಒಂದು ಉಬ್ಬುಶಿಲ್ಪ. ಇದರಲ್ಲಿ ಒಬ್ಬ ಜೋಗಿ ಕೊಂಬನ್ನು ಊದುತ್ತಿದ್ದಾನೆ. ಆದಿಚುಂಚನಗಿರಿಯು ಹಿಂದೆ ನಾಥರ ಮಠವಾಗಿತ್ತು. ನಾಥರು ತಮ್ಮ ಗುರುವಿನ ಪಾದಗಳಿಗೆ ನಮಸ್ಕರಿಸಲು ಬಾಗಿದಾಗ, ಸಿಂಗನಾದವನ್ನು ಬಾರಿಸುತ್ತಾರೆ. ಅದು ಕೃಷ್ಣಮೃಗದ ಕೊಂಬಿನ ತುದಿಯ ಭಾಗವಾಗಿದ್ದು, ಮೋಟಾದ ಪೆನ್ಸಿಲಿನಂತೆ ಇರುತ್ತದೆ. ಇದನ್ನು ಅವರು ಕೊರಳಲ್ಲೇ ಕಟ್ಟಿಕೊಳ್ಳುವರು. ಆದರೆ, ಇಲ್ಲಿ ಬಾರಿಸುತ್ತಿರುವುದು ಕೊರಳ ಸಿಂಗನಾದವಲ್ಲ. ಮೆರವಣಿಗೆ ಮಾಡುವಾಗ, ಆರಾಧನೆ ನಡೆಯುವಾಗ, ಗುರುವನ್ನು ಸ್ವಾಗತಿಸುವಾಗ ಮಾಡಿರಬಹುದಾದ - ಎಮ್ಮೆ ಇಲ್ಲವೇ ಎತ್ತಿನ ಕೊಂಬಿನ ಸಿಂಗನಾದ. ಇದನ್ನು ಬಾಬಾಬುಡನ್‌ಗಿರಿಯ ಸೂಫಿ ಫಕೀರರ ಮೆರವಣಿಗೆಗಳಲ್ಲಿಯೂ ಕಾಣಬಹುದು.

ಜಗತ್ತಿನ ಎಲ್ಲ ಬುಡಕಟ್ಟು ಸಂಸ್ಕೃತಿಗಳಲ್ಲಿ ಪ್ರಾಣಿಯ ದೇಹದ ಮಾಂಸವನ್ನು ಬಳಕೆ ಮಾಡಿದ ಬಳಿಕ ಉಳಿಯುವ ಕೊಂಬನ್ನು ವಾದ್ಯಕ್ಕಾಗಿ ಬಳಸಲಾಗುತ್ತದೆ. ಕೊಂಬು ಬಾರಿಸುತ್ತ ಬರುವುದು ದಿಗ್ವಿಜಯದ ಸಂಕೇತವೂ ಹೌದು. ಚೆನ್ನಮಲ್ಲಿಕಾರ್ಜುನನು ತನ್ನನ್ನು ಕಾಣಲು ಕೊಂಬನೂದುತ್ತ ಬರುವ ಚಿತ್ರವನ್ನು ಅಕ್ಕ ತನ್ನೊಂದು ವಚನದಲ್ಲಿ ತರುವುದುಂಟು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ವಾಡಿ, ಬಾಬಾಸಾಹೇಬರು ಹಾಗೂ ದಿಲ್‍ದಾರ್

'ಸಿಂಗ' ಶಬ್ದವು 'ಶೃಂಗ'ದಿಂದ ಬಂದಿದೆ. ಶೃಂಗವೆಂದರೆ ಕೋಡು, ತುದಿ, ಶಿಖರ. ಪ್ರಾಣಿಯನ್ನು ಬೇಟೆಯಾಡಿ ಮಾಂಸ ತಿನ್ನುವ ಪ್ರಾಣಿಗಳಿಗೆ (ಹುಲಿ, ಸಿಂಹ, ಚಿರತೆ) ಕೋಡುಗಳು ಇರುವುದಿಲ್ಲ. ಹುಲ್ಲು, ಸೊಪ್ಪು ಮೇಯುವ ಮೇಕೆ, ಜಿಂಕೆ, ಟಗರು, ಕೋಣ, ಎತ್ತು, ಹಸುಗಳಿಗೆ ಇರುತ್ತದೆ. ಇದು ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ಯಾಹಾರಿ ಪ್ರಾಣಿಗಳಿಗೆ ನಿಸರ್ಗ ಕಲ್ಪಿಸಿರುವ ಆಯುಧ. ಆದರೆ, ಈ ಆಯುಧವೇ ಮನುಷ್ಯರ ಆಚರಣೆಗಳಲ್ಲಿ ವಾದ್ಯವಾಗಿದೆ.

ಕೆಲವೆಡೆ ಕೃಷ್ಣಮೃಗದ ಚೂಪಾದ ಕೋಡನ್ನು ಆಯುಧವಾಗಿ ಬಳಸುವ ಪದ್ಧತಿಯೂ ಇತ್ತು. ಉತ್ತರ ಕರ್ನಾಟಕ, ಮೊಹರಂ ಮೆರವಣಿಗೆಯಲ್ಲಿ ಆಯುಧ ಪ್ರದರ್ಶನದ ಭಾಗವಿದ್ದು, ಅದರಲ್ಲಿ ಯುವಕರು ಕೃಷ್ಣಮೃಗದ ಕೊಂಬನ್ನು ಹಿಡಿಯುವರು. ಕೊಂಬು ಆಯುಧವಾಗಿ, ವಾದ್ಯವಾಗಿ ಬುಡಕಟ್ಟು ನಾಯಕರು ಧರಿಸುವ ಕಿರೀಟವಾಗಿ, ಮನೆಯಲ್ಲಿ ಅಲಂಕಾರದ ವಸ್ತುವಾಗಿ, ಕೋಟು-ಕೊಡೆ ಸಿಕ್ಕಿಸುವ ಮೊಳೆಯಾಗಿ ರೂಪಾಂತರಗೊಳ್ಳುವುದು ಒಂದು ವಿಸ್ಮಯ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಕಡಕೋಳದ ಮಡಿವಾಳಪ್ಪನವರ ಜಾತ್ರೆ ಮತ್ತು ಕಟುಕಲ ರೊಟ್ಟಿ

'ಕೊಂಬು-ಕಹಳೆ' ಎಂಬ ಜೋಡಿಶಬ್ದವನ್ನು ಗಮನಿಸಬೇಕು. ಪ್ರಾಣಿಯ ದೇಹದ ಅವಶೇಷವನ್ನು ನುಡಿಸುವುದಕ್ಕೆ ಮಡಿ ಅಡ್ಡ ಬಂದಾಗ, ಅದನ್ನು ಬಾಯಲ್ಲಿಡುವ ಭಾಗವನ್ನು ಮಾತ್ರ ಲೋಹದಲ್ಲಿ ಮಾಡಲಾಯಿತು. ಮುಂದೆ ಅದೇ ಆಕಾರದಲ್ಲಿ ಇಡೀ ಲೋಹದ ವಾದ್ಯ ತಯಾರಾಯಿತು. ಅದುವೇ ಕಹಳೆ. ಕಹಳೆ ಕೊಂಬಿನಾಕಾರದಲ್ಲೇ ಇರುವುದು ಗಮನಾರ್ಹ. ಕಹಳೆ ಬಂದ ಬಳಿಕವೂ ಕೊಂಬು ಹಾಗೆಯೇ ಉಳಿದುಕೊಂಡಿತು. ಮೂಲತಃ ಮಾಂಸಾಹಾರ ಸೇವನೆಯ ಸಮುದಾಯಗಳಲ್ಲಿದ್ದ ಕೊಂಬು, ಲೋಹರೂಪಕ್ಕೆ ಬಂದ ಬಳಿಕ ಇತರೆ ಸಮುದಾಯಗಳಿಗೂ ಹಬ್ಬಿತು.  

ವಾಹನಗಳ ಹಿಂದೆ 'ಹಾರ್ನ್ ಪ್ಲೀಸ್' ಎಂದು ಬರೆದಿರುತ್ತದೆ. ಆಧುನಿಕ ಕಾಲದಲ್ಲಿ 'ದಾರಿ ಬಿಡಿ' ಎಂದು ಶಬ್ದ ಮಾಡುವ ಹೊಸ-ಹೊಸ ಬಗೆಯ ವಾದ್ಯಗಳು ಬಂದಿವೆ. ಆದರೆ, ಹಾರ್ನ್ (ಕೊಂಬು) ಶಬ್ದವು ಹಾಗೆಯೇ ಉಳಿದುಕೊಂಡಿದೆ. ಕೆಲವು ಲಾರಿಗಳ ಹಿಂದೆ ಮಹಿಳೆಯೊಬ್ಬಳು ಕೊಂಬನ್ನೂದುವ ಚಿತ್ರವನ್ನೂ ಬರೆದಿರುವುದುಂಟು. ಆಚರಣೆ ನಿಂತುಹೋಗಿರುತ್ತದೆ. ಶಬ್ದವಿನ್ನೂ ಬದುಕಿ ಆಚರಣೆಯ ಚರಿತ್ರೆಯನ್ನು ಹೇಳುತ್ತಿರುತ್ತದೆ.

ನಿಮಗೆ ಏನು ಅನ್ನಿಸ್ತು?
5 ವೋಟ್