ನುಡಿಚಿತ್ರ | ಬೀಳಗಿಯ ಸಂತೆಯಲ್ಲಿ ಸಿಕ್ಕ ಪೈಲ್ವಾನ ಮತ್ತು ಪಟಗದ ಗುರುತು

Bilagi Man

ವಾಸ್ತವವಾಗಿ ಈ ಶಿರವಸ್ತ್ರಗಳು ಪ್ರದೇಶ, ಅಧಿಕಾರ, ಜಾತಿ, ವೃತ್ತಿ, ಧರ್ಮ, ಅಂತಸ್ತಿನ ಸಂಕೇತ. ಗಂಡು-ಹೆಣ್ಣುಗಳಿಗೆ ಅನುಸಾರವಾಗಿ ಇವು ಬೇರೆ-ಬೇರೆ ಆಗುವುದುಂಟು. ಪಂಜಾಬಂತೂ ಬಗೆಬಗೆಯ ಬಣ್ಣದ ಪೇಟಗಳಿಗೆ ಹೆಸರುವಾಸಿ. ಬಿಳಿ ಅಂಗಿ-ಪೈಜಾಮ, ಗಾಂಧಿ ಟೋಪಿ ಎಂದರೆ ಮಹಾರಾಷ್ಟ್ರದ ರೈತರು. ಕಪ್ಪನೆ ಟೋಪಿ ಎಂದರೆ ಉ.ಕರ್ನಾಟಕದ ಬಣಜಿಗರು... ಹೀಗೆ

ಇದು ಬಾಗಲಕೋಟ ಜಿಲ್ಲೆಯ ಬೀಳಗಿಯ ಸಂತೆಯಲ್ಲಿ ತೆಗೆದ ಫೊಟೊ. ಈ ಫೊಟೊ ತೆಗೆಯಲು ನನಗೆ ಮೂರು ಕಾರಣಗಳಿದ್ದವು. 1: ಈ ಅಜ್ಜ, ಹಲ್ಲೆ ಕಟ್ಟುವ ಸಾಬರ ಪಕ್ಕ ಲೋಕಾಭಿರಾಮವಾಗಿ ಎಷ್ಟೋ ಜನುಮದ ಗೆಳೆಯರಂತೆ ಪಟ್ಟಾಂಗ ಹೊಡೆಯುತ್ತ ಕೂತಿದ್ದು. 2: ಈತನ ಟಗರು ಮೀಸೆ ಮತ್ತು ಪ್ರಾಯದಲ್ಲಿ ಭಾರೀ ಆಳಾಗಿದ್ದಿರಬಹುದಾದ ಈತ ದುಡಿಮೆಯಲ್ಲಿ, ಕುಸ್ತಿಯಲ್ಲಿ, ಸೆಕ್ಸಿನಲ್ಲಿ ಮೆರೆದಿರಬಹುದಾದ ಊಹೆ. 3: ಈತನ ತಲೆಯ ಮೇಲಿದ್ದ ಪಟಗ.

ನಾನು ಯಾವುದೇ ಪ್ರದೇಶಕ್ಕೆ ಪ್ರವಾಸ ಹೋದರೆ, ಜನ ತಲೆಯ ಮೇಲೆ ಧರಿಸುವ ಶಿರವಸ್ತ್ರಗಳನ್ನು ಕುತೂಹಲದಿಂದ ಗಮನಿಸುತ್ತೇನೆ- ಅವು ಪೇಟಗಳಿರಬಹುದು, ಟೋಪಿ-ಹ್ಯಾಟುಗಳಿರಬಹುದು. ದೊರೆಗಳು ಧರಿಸುವ ಕಿರೀಟಗಳು ಮತ್ತು ಸುಲ್ತಾನರು ಧರಿಸುತ್ತಿದ್ದ ಸರಪೋಚ್‍ಗಳು ಕೂಡ ಇದೇ ಸಾಲಿನಲ್ಲಿ ಬರುತ್ತವೆ. ಧಾರ್ಮಿಕ ಗುರುಗಳು ಸಂತರು, ಸನ್ಯಾಸಿಗಳು ಧರಿಸುವ ತಮ್ಮದೇ ಆದ ಶಿರೋಕವಚಗಳನ್ನು ಧರಿಸುವರು. ಬುಡಕಟ್ಟು ಲೋಕದಲ್ಲಿ ಅವರದ್ದೇ ಆದ ಕೊಂಬು ಹಕ್ಕಿಗರಿಗಳ ಶಿರಪೇಚುಗಳಿವೆ. ಮಲೆನಾಡಿನವರು ಅಡಕೆ ಹಾಳೆಯ ಟೋಪಿ ಧರಿಸುವುದು ನಮಗೆ ತಿಳಿದಿದೆ. ಜಗತ್ತಿನಲ್ಲಿ ತಲೆಗೆ ಏನಾದರೊಂದು ವಸ್ತ್ರ ಧರಿಸದ ಸಮುದಾಯಗಳೇ ಇಲ್ಲವೆನ್ನಬಹುದು. ಆಫ್ಘಾನಿಸ್ಥಾನ, ಇರಾಕ್, ಇರಾನ್, ಸೌದಿ ಅರೇಬಿಯಾ, ಟರ್ಕಿ... ಹೀಗೆ ಇಡೀ ಮಧ್ಯ ಏಶಿಯಾ ಬಗೆಬಗೆಯ ಪೇಟಗಳಿಂದ ತುಂಬಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹ್ಯಾಟುಗಳ ಆಕಾರವು ಸಹಸ್ರಾರು ರೂಪದಲ್ಲಿದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ವಾಡಿ, ಬಾಬಾಸಾಹೇಬರು ಹಾಗೂ ದಿಲ್‍ದಾರ್

ವಾಸ್ತವವಾಗಿ ಈ ಶಿರವಸ್ತ್ರಗಳು ಪ್ರದೇಶದ, ಅಧಿಕಾರದ, ಜಾತಿಯ, ವೃತ್ತಿಯ, ಧರ್ಮದ ಹಾಗೂ ಅಂತಸ್ತಿನ ಸಂಕೇತಗಳಾಗಿವೆ. ಗಂಡು-ಹೆಣ್ಣುಗಳಿಗೆ ಅನುಸಾರವಾಗಿ ಇವು ಬೇರೆ-ಬೇರೆ ಆಗುವುದುಂಟು. ಪಂಜಾಬಂತೂ ಬಗೆಬಗೆಯ ಬಣ್ಣದ ಪೇಟಗಳಿಗೆ ಹೆಸರುವಾಸಿಯಾದುದು. ಬಿಳಿ ಅಂಗಿ-ಪೈಜಾಮ, ಗಾಂಧಿ ಟೋಪಿ ಎಂದರೆ ಮಹಾರಾಷ್ಟ್ರದ ರೈತರು. ಕಪ್ಪನೆಯ ಟೋಪಿ ಎಂದರೆ ಉತ್ತರ ಕರ್ನಾಟಕದ ಬಣಜಿಗರು... ಹೀಗೆ.

ಪೂರ್ವ ಭಾರತಕ್ಕೆ ಹೋಲಿಸಿದರೆ ಪಶ್ಚಿಮ ಭಾರತಕ್ಕೆ ಸೇರಿದ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನಗಳಲ್ಲಿ ನೂರಾರು ಬಗೆಯ ಪೇಟಗಳಿವೆ.  ಇಂತಹ ಪೇಟಗಳ ಮ್ಯೂಸಿಯಮ್ಮನ್ನು ನಾನು ಅಹಮದಾಬಾದಿನಲ್ಲಿಯೂ ಉದಯಪುರದಲ್ಲಿಯೂ ನೋಡಿದೆ. ಒಂದು ಜಾತಿಯವರು ಇನ್ನೊಂದು ಜಾತಿಯವರಂತೆ, ಒಂದು ಅಂತಸ್ತಿನವರು ಇನ್ನೊಂದು ಅಂತಸ್ತಿನವರಂತೆ ಪೇಟ ಸುತ್ತಿದರೆ ಶಿಕ್ಷೆ ಕೊಡುವ ಪದ್ಧತಿಯೂ ಇತ್ತಂತೆ. ಆದಿಲಶಾಹಿ ಕಾಲದಲ್ಲಿ ಉದ್ದನೆಯ ರೂಮಿಟೋಪಿ ಧರಿಸುವುದಕ್ಕೆ ಎಲ್ಲರಿಗೂ ಅವಕಾಶವಿರಲಿಲ್ಲ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ನಮ್ಮ ವಾಹನಗಳಲ್ಲಿ ಬಳಸುವ 'ಹಾರ್ನ್' ಪದದ ಮೂಲ ಮತ್ತು ಅರ್ಥ ಸ್ವಾರಸ್ಯ

ಈ ಶಿರವಸ್ತ್ರಗಳಿಗೆ ಜಾತಿ, ಮತ, ಅಂತಸ್ತು, ವೃತ್ತಿಗಳ ಅಸ್ಮಿತೆಯ ಆಚೆ ನಿಸರ್ಗದ ಜೊತೆಗಿನ ಸಂಬಂಧವೂ ಇದೆ. ಬಿಸಿಲು ಪ್ರದೇಶದಲ್ಲಿ ಸಾಮಾನ್ಯವಾಗಿ ಉದ್ದನೆಯ ಬಟ್ಟೆಯಿಂದ ಅಗಲವಾದ ಪೇಟವನ್ನು ಸುತ್ತುವರು- ಇಲ್ಲಿರುವ ಚಿತ್ರದಲ್ಲಿ ತೋರಿಸಿರುವಂತೆ. ಅದು ಕೊಡೆಯಂತೆ, ಹ್ಯಾಟಿನಂತೆ ತಲೆಯ ಮೇಲೆ ಆವರಿಸಿ ಬಿಸಿಲನ್ನು ತಡೆಯುವುದು.

ಪೇಟ ಸುತ್ತುವುದೊಂದು ಕಲೆ. ಅದನ್ನು ಮನಬಂದಂತೆ ಸುತ್ತುವುದಿಲ್ಲ. ಅದಕ್ಕೊಂದು ಕ್ರಮವಿದೆ. ಹೀಗಾಗಿ, ಜಾತಿ, ಮತ, ಅಂತಸ್ತು, ವೃತ್ತಿ ಹಾಗೂ ಪ್ರಕೃತಿಯ ಏನೇ ಕಾರಣವಿರಲಿ, ಅಲ್ಲೊಂದು ಕಲಾತ್ಮಕತೆ ಇದೆ. ಭೌತಿಕ ಅಗತ್ಯದ ವಸ್ತುವನ್ನೂ ಕಲಾತ್ಮಕಗೊಳಿಸುವುದು ಮಾನವ ಪ್ರತಿಭೆ ಮತ್ತು ಕಲ್ಪನಾಶೀಲತೆಯ ಪ್ರತೀಕ.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
2 ವೋಟ್