ನುಡಿಚಿತ್ರ | ಗೂಢವಿದ್ಯೆ ಕಲಿಕಾ ಕೇಂದ್ರಗಳಾಗಿದ್ದ ಈ ಜಾಗಗಳು ಯಾತ್ರಾಸ್ಥಳವಾಗಿ ಬದಲಾಗಿದ್ದೇಕೆ?

ಚುಂಚನಗಿರಿ, ಹಂಪಿ, ಶ್ರೀಶೈಲ, ಕಾಶಿ, ಕದ್ರಿ (ಮಂಗಳೂರು), ಕೊಲ್ಹಾಪುರ ಮೊದಲಾದ ಸ್ಥಳಗಳು ಪ್ರಸಿದ್ಧ ಜ್ಞಾನಕೇಂದ್ರಗಳಾಗಿದ್ದವು. ಇಲ್ಲಿ ಹಲವು ಶಾಸ್ತ್ರಗಳಲ್ಲಿ ಪಾರಂಗತರಾದ ಪಂಡಿತರಿದ್ದರು. ಇವರಲ್ಲಿ ವಿದ್ಯೆ ಕಲಿಯಲು ಆಸಕ್ತರು ಬರುತ್ತಿದ್ದರು. ಇಲ್ಲಿ ಹಲವು ಪಂಥಗಳಿಗೆ ಸೇರಿದ ಯೋಗಿಗಳು, ಅವಧೂತರು, ಸಿದ್ಧರು, ಆರೂಢರು, ಸಾಧಕರು, ಕಾಪಾಲಿಕರು ಇರುತ್ತಿದ್ದರು

ಇದು ಶ್ರೀಶೈಲದ ಮಲ್ಲಿಕಾರ್ಜುನ ಗುಡಿಯ ಸುತ್ತ ಕಟ್ಟಲಾಗಿರುವ ಕೋಟೆಗೋಡೆಯಂತಹ ಪ್ರಾಕಾರದಲ್ಲಿ ಇರುವ ಒಂದು ಉಬ್ಬುಶಿಲ್ಪ. ಇದರಲ್ಲಿ ಮೂವರು ಯೋಗಿಗಳು ಇದ್ದಾರೆ. ಅವರ ಭಂಗಿ ನೋಡಿದರೆ, ಅವರು ದೂರದಿಂದ ನಡೆಯುತ್ತ ಬಂದವರು.

ಇಂತಹ ಹಲವಾರು ಶಿಲ್ಪಫಲಕಗಳು ಶ್ರೀಶೈಲದಲ್ಲೂ ಹಂಪಿಯ ಗುಡಿ ಮತ್ತು ಮಂಟಪಗಳಲ್ಲೂ ಇವೆ. ಹಂಪಿ ಶ್ರೀಶೈಲ ಮೊದಲಾದವು ಪ್ರಸಿದ್ಧ ಶೈವಗುಡಿಗಳಿರುವ ಯಾತ್ರಾಸ್ಥಳಗಳು. ಇವಕ್ಕೆ ದೂರದಿಂದ ಭಕ್ತರು, ಯಾತ್ರಿಕರು ಬರುತ್ತಿದ್ದರು. ಆದರೆ, ಈ ಶಿಲ್ಪಗಳು ಯಾತ್ರಿಕರವಲ್ಲ, ಯೋಗಿಗಳವು. ಯಾಕೆ ಯೋಗಿಶಿಲ್ಪಗಳು ಇಲ್ಲಿವೆ? ಯಾಕೆಂದರೆ, ಚುಂಚನಗಿರಿ, ಹಂಪಿ, ಶ್ರೀಶೈಲ, ಕಾಶಿ, ಕದ್ರಿ (ಮಂಗಳೂರು), ಕೊಲ್ಹಾಪುರ ಮೊದಲಾದ ಸ್ಥಳಗಳು ಪ್ರಸಿದ್ಧ ಜ್ಞಾನಕೇಂದ್ರಗಳಾಗಿದ್ದವು. ಇಲ್ಲಿ ಹಲವು ಶಾಸ್ತ್ರಗಳಲ್ಲಿ ಪಾರಂಗತರಾದ ಪಂಡಿತರಿದ್ದರು. ಇವರಲ್ಲಿ ವಿದ್ಯೆಯನ್ನು ಕಲಿಯುವುದಕ್ಕೆ ಆಸಕ್ತರು ಬರುತ್ತಿದ್ದರು. ಇಲ್ಲಿ ಹಲವು ಪಂಥಗಳಿಗೆ ಸೇರಿದ ಯೋಗಿಗಳು, ಅವಧೂತರು, ಸಿದ್ಧರು, ಆರೂಢರು, ಸಾಧಕರು, ಕಾಪಾಲಿಕರು ಇರುತ್ತಿದ್ದರು. ಇದಕ್ಕೆ ಪೂರಕವಾಗಿ ಹಂಪಿ ಮತ್ತು ಶ್ರೀಶೈಲದಲ್ಲಿ ಗುಹೆಗಳಿವೆ. ಈ ಯೋಗಿಗಳಿಂದ ಯೋಗಸಾಧನೆ ಕಲಿಯಲು ಸಾಧಕರು, ಈ ಪಂಡಿತರಿಂದ ತಿಳುವಳಿಕೆ ಗಳಿಸಲು ಜ್ಞಾನಾಕಾಂಕ್ಷಿಗಳು ಬರುತ್ತಿದ್ದರು. ಕೆಲವರು ಈ ಯೋಗಿಗಳಿಗೆ ಪಂಡಿತರಿಗೆ ಪ್ರಶ್ನೆಗಳನ್ನೊಡ್ಡಿ ಇವರ ಸಾಧನೆ ಪಾಂಡಿತ್ಯ ಒರೆಗೆ ಹಚ್ಚುವುದಕ್ಕೆ ಕೂಡ ಬರುತ್ತಿದ್ದರು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಬೀಳಗಿಯ ಸಂತೆಯಲ್ಲಿ ಸಿಕ್ಕ ಪೈಲ್ವಾನ ಮತ್ತು ಪಟಗದ ಗುರುತು

'ಸಿದ್ಧರಾಮ ಚಾರಿತ್ರ'ದಲ್ಲಿ, 'ಪ್ರಭುಲಿಂಗಲೀಲೆ'ಯಲ್ಲಿ, ಅಕ್ಕಮಹಾದೇವಿಯ ರಗಳೆಯಲ್ಲಿ ಶ್ರೀಶೈಲದಲ್ಲಿದ್ದ ಈ ಯೋಗಿಗಳ ಚಿತ್ರ ಸಿಗುವುದು. 'ಪ್ರಭುಲಿಂಗಲೀಲೆಯಲ್ಲಿ ಅಲ್ಲಮನು ಇಲ್ಲಿ ಗೋರಖನಾಥನನ್ನು ಸೋಲಿಸುತ್ತಾನೆ. ಶಂಕರಾಚಾರ್ಯರು ಕೂಡ ಇಲ್ಲಿ ಕಾಪಾಲಿಕರನ್ನು ಮುಖಾಮುಖಿ ಮಾಡಿದ ಕತೆಯೊಂದು 'ಶಂಕರ ದಿಗ್ವಿಜಯ'ದಲ್ಲಿದೆ.

ಬಹಳ ಮುಖ್ಯವೆಂದರೆ, ಅಕ್ಕಮಹಾದೇವಿ, ಅಲ್ಲಮಪ್ರಭು, ಗಾಣಗಾಪುರದ ನರಸಿಂಹದತ್ತ ಯತಿ ಮುಂತಾದವರು, ತಮ್ಮ ದೇಹತ್ಯಾಗಕ್ಕೆ ಶ್ರೀಶೈಲಕ್ಕೆ, ಅದರಲ್ಲೂ ಅಲ್ಲಿನ ಕದಳಿಗುಹೆಗೆ ಹೋಗುವರು. ಈ ಅರ್ಥದಲ್ಲಿ ಶ್ರೀಶೈಲವು -ಇದನ್ನು ಶ್ರೀಪರ್ವತವೆಂದೂ ಕರೆಯಲಾಗುತ್ತದೆ- ಒಂದು ವಿಶ್ವವಿದ್ಯಾಲಯವಾಗಿತ್ತು ಮಾತ್ರವಲ್ಲ, ದೇಹತ್ಯಾಗದ ಸ್ಥಳವೂ ಆಗಿತ್ತು. ಪ್ರಶ್ನೆಯೆಂದರೆ, ಪ್ರಾಚೀನ ಗೂಢವಿದ್ಯೆಗಳ ಕಲಿಕೆಯ ಕೇಂದ್ರಗಳಾಗಿದ್ದ ಈ ಜಾಗಗಳು, ಕಾಲಕ್ರಮೇಣ ಕೇವಲ ಯಾತ್ರಾಸ್ಥಳಗಾಗಿ ಬದಲಾಗಿದ್ದು ಯಾಕೆ ಮತ್ತು ಹೇಗೆ? ಈ ಗೂಢವನ್ನು ಬಿಡಿಸಬೇಕಿದೆ.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
1 ವೋಟ್