ನುಡಿಚಿತ್ರ | ಬದುಕಿನ ರಾಜ್ಯವನ್ನು ಕಾಪಾಡಲು ಹೊರಟ ಸೈನಿಕರು

ಮನೆ, ಊರು, ಮಡದಿ, ಮಕ್ಕಳನ್ನು ತೊರೆದು, ಕುಲ ಸಂಘರ್ಷವನ್ನು ತಪ್ಪಿಸಲು ವಿರಾಗಿಯಾಗಿ ಹೋದ ಗೌತಮನು, ಲೋಕವನ್ನೆಲ್ಲ ಸುತ್ತಾಡಿ ಕಡೆಗೆ ಜ್ಞಾನೋದಯ ಪಡೆದ ಗಯೆಗೆ ನಾನು ಹೊರಟಿರುವೆ. ನನಗೆ - ಮನೆ, ಗಂಡ, ಮಕ್ಕಳನ್ನು ಬಿಟ್ಟು ದುಡಿಯಲು ಹೊರಟ ಈ ಮಹಿಳೆಯರು ಬಾಳಿನ ಇನ್ನೊಂದು ಮುಖವನ್ನು ಕಾಣಿಸಿದರು. ಇವರದೂ ಜ್ಞಾನೋದಯವೇ

ಇದು ನಾನು ಪಟ್ನಾದಿಂದ ಬೋಧಗಯೆಗೆ ರೈಲಿನಲ್ಲಿ ಹೋಗುವಾಗ ತೆಗೆದ ಚಿತ್ರ. ಆ ದಿನ ಭಯಂಕರ ಚಳಿ. ಭೂಮಿ-ಆಗಸಗಳನ್ನು ಮಂಜು ಆವರಿಸಿತ್ತು. ಈ ಮಂಜಿನ ಮಸುಕಿನಲ್ಲಿ ಚಳಿಗೆ ಮುಸುಕು ಹೊದ್ದು ಕೂತಿರುವ ಮಹಿಳೆಯರ ಗುಂಪು ಕಂಡಿತು. ಕಿಟಕಿಯಿಂದಲೇ ಅವರಿಗೆ ಅರಿವಾಗದಂತೆ ಪಟ ತೆಗೆದೆ.

ನಿಲ್ದಾಣದ ಇನ್ನೊಂದು ದಿಕ್ಕನ್ನು ದಿಟ್ಟಿಸುವುದನ್ನು ಕಂಡರೆ, ಬಹುಶಃ ಇವರು ಪಟ್ನಾ ಕಡೆ ಹೋಗುವ ರೈಲಿನಲ್ಲಿ ಹತ್ತಿಕೊಂಡು, ಗದ್ದೆ ಕೆಲಸಕ್ಕೋ ಮನೆಗೆಲಸಗಳಿಗೋ ಹೋಗಲು ಜಮೆಯಾದವರು. ಯಾರ ಮುಖವೂ ಸರಿಯಾಗಿ ಕಾಣಲಿಲ್ಲ. ಏನು ಮಾತಾಡುತ್ತಿದ್ದರೋ ಕೇಳುವ ಬಾಬತ್ತೇ ಇಲ್ಲ.

ಮನೆ, ಊರು, ಮಡದಿ, ಮಕ್ಕಳನ್ನು ತೊರೆದು, ಕುಲ ಸಂಘರ್ಷವನ್ನು ತಪ್ಪಿಸಲು ವಿರಾಗಿಯಾಗಿ ಹೋದ ಗೌತಮನು, ಲೋಕವನ್ನೆಲ್ಲ ಸುತ್ತಾಡಿ ಕಡೆಗೆ ಜ್ಞಾನೋದಯ ಪಡೆದ ಗಯೆಗೆ ನಾನು ಹೊರಟಿರುವೆ. ನನಗೆ - ಮನೆ, ಗಂಡ, ಮಕ್ಕಳನ್ನು ಬಿಟ್ಟು ದುಡಿಯಲು ಹೊರಟ ಈ ಮಹಿಳೆಯರು ಬಾಳಿನ ಇನ್ನೊಂದು ಮುಖವನ್ನು ಕಾಣಿಸಿದರು. ಇವರದೂ ಜ್ಞಾನೋದಯವೇ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಗೂಢವಿದ್ಯೆ ಕಲಿಕಾ ಕೇಂದ್ರಗಳಾಗಿದ್ದ ಈ ಜಾಗಗಳು ಯಾತ್ರಾಸ್ಥಳವಾಗಿ ಬದಲಾಗಿದ್ದೇಕೆ?

ಯಾವುದೇ ಊರಲ್ಲಿ ಸಂಜೆ, ಬೆಳಗ್ಗೆ ಕೂಲಿಗಾಗಿ ಬುತ್ತಿ ಹೊತ್ತು ಸಾಲಾಗಿ ಹೋಗಿಬರುವ ಮಹಿಳೆಯರನ್ನು ನೋಡುವಾಗ, ಇವರು ಬದುಕಿನ ರಾಜ್ಯವನ್ನು ಕಾಪಾಡಲು ಹೊರಟ ಸೈನಿಕರಂತೆ ಕಾಣುವರು. ಸಾಮಾನ್ಯವಾಗಿ ಇವರು ದುಡಿದುಡಿದು ತೆಳ್ಳಗಿರುತ್ತಾರೆ. ಆರೋಗ್ಯವಂತರಾಗಿರುತ್ತಾರೆ. ತಮ್ಮೊಳಗೇ ಏನನ್ನೋ ಕುಶಾಲು ಮಾಡಿಕೊಂಡು ನಗುತ್ತಿರುತ್ತಾರೆ. ತಮಗೆ ಬೇಡವಾದವರ ಖಂಡನೆ ನಡೆಯುತ್ತದೆ. ತಮ್ಮಲ್ಲಿರುವ ತಿಂಡಿಯನ್ನೋ ತಾಂಬೂಲವನ್ನೋ ಹಂಚಿಕೊಂಡು ತಿನ್ನುತ್ತಿರುತ್ತಾರೆ. ಕೆಲವೊಮ್ಮೆ ಇವರ ಹಿಂದೆ ಕುರಿಮರಿಯೋ ನಾಯಿಯೋ ಕರುವೋ ಇರುವುದು. ಇವರಲ್ಲಿ ಕೆಲವೊಮ್ಮೆ ಮುದುಕಿಯರೂ ಇರುವುದುಂಟು. ಇವರು ಕೊಂಚ ಹಿಂದೆ ಬರುತ್ತಿರುತ್ತಾರೆ.

ತಮ್ಮ ದುಡಿಮೆಯಿಂದ ಸಂಸಾರ ಸಂಭಾಳಿಸುವ ಈ ಧೀರೆಯರ ಹೆಸರು ಕಡೆಗೂ ಲೋಕಕ್ಕೆ ತಿಳಿಯುವುದಿಲ್ಲ. ಖಾನಾವಳಿಗಳಲ್ಲಿ ಹೊಗೆ ತುಂಬಿದ ಒಲೆಯ ಮುಂದೆ ಕೂತು ರೊಟ್ಟಿ ಬಡಿಯುವ ಹೆಂಗಸರೂ ಹೀಗೇ, ಹೊಗೆಯಲ್ಲಿ ಅವರ ಮುಖಮಾರಿ ಕಾಣುವುದಿಲ್ಲ. ಇವರು ಚರಿತ್ರೆಯಲ್ಲಿ ದಾಖಲಾಗದೆ ಮಂಜಿನ ಅಥವಾ ಕತ್ತಲೆಯ ಮರೆಯಲ್ಲೇ ಉಳಿದು ಬದುಕಿ ಇಲ್ಲವಾಗುತ್ತಾರೆ. ಆದರೆ, ಅವರ ದುಡಿಮೆಯ ಕಾಳಜಿಯ ಬೆಳಕಿನಲ್ಲಿ ಬದುಕು ಅರಳಿರುತ್ತದೆ. ಯಾರೂ ಅರಿಯದ ನೀರೆಯರಿವರು.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
6 ವೋಟ್