ನುಡಿಚಿತ್ರ | ಸ್ಥಳೀಯ ಸೈನಿಕರ ಕುತೂಹಲಕಾರಿ ವೇಷಭೂಷಣದ ಹಿಂದಿನ ಕತೆ

ವಿಶೇಷವೆಂದರೆ, ಲೌಕಿಕ ಶಿಲ್ಪ ಮತ್ತು ಚಿತ್ರಗಳಲ್ಲಿರುವ ವಿದೇಶಿ ಸೈನಿಕರು ಅಥವಾ ಅವರ ವೇಷ ತೊಟ್ಟ ಸ್ಥಳೀಯ ಸೈನಿಕರು ಧಾರ್ಮಿಕ ಸ್ತರಕ್ಕೂ ವರ್ಗಾವಣೆಯಾಗಿದ್ದು. ದೊರೆಗಳ ಇಲ್ಲವೇ ದೇವತೆಗಳ ಹಿಂದೆ ಬ್ರಿಟಿಶ್ ಸೈನಿಕರು ಪಹರೆ ಕೊಡುತ್ತ ದಂಡಧಾರಿಗಳಾಗಿ ನಿಂತಿರುವ ಗಾರೆಶಿಲ್ಪಗಳನ್ನು ಗುಡಿಗಳ ಗೋಪುರಗಳಲ್ಲಿ ಈಗಲೂ ನೀವು ನೋಡಬಹುದು

ಕರ್ನಾಟಕದ ಶಿಲ್ಪಕಲೆ, ಚಿತ್ರಕಲೆ ಹಾಗೂ ಐತಿಹಾಸಿಕ ಪಠ್ಯಗಳಲ್ಲಿ ಸ್ಥಳೀಯ ಸೈನಿಕರ ಚಿತ್ರಣಗಳಿರುವ ನೂರಾರು ಸನ್ನಿವೇಶಗಳಿವೆ. ಮುಂದೆ ಭಾರತಕ್ಕೆ ಬೇರೆ-ಬೇರೆ ದೇಶಗಳಿಂದ ಆಳುವ ವರ್ಗಗಳು ಬಂದವು. ಅವುಗಳ ಜೊತೆ ಸೈನಿಕರೂ ಬಂದರು. ಈ ಸೈನಿಕರ ಜೊತೆ ಹೊಸ-ಹೊಸ ಆಯುಧಗಳು, ಸೈನಿಕ ವೇಷಭೂಷಣಗಳು ಸಹ ಆಗಮಿಸಿದವು.

Eedina App

ಹೊಸ ಅಧಿಕಾರಸ್ಥರ ಸಂಕೇತವಾಗಿ ಬಂದ ಈ ಸೈನಿಕ ವೇಷ ಮತ್ತು ಆಯುಧಗಳು, ಸ್ಥಳೀಯ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಪ್ರತಿಬಿಂಬಿತ ಆಗಲಾರಂಭಿಸಿದವು. ಇವುಗಳಲ್ಲಿ ಸ್ಥಳೀಯ ಸೈನಿಕರು ಖಡ್ಗ, ಬಿಲ್ಲು, ಬಾಣ, ಈಟಿಗಳಿಗೆ ಬದಲಾಗಿ ತುಪಾಕಿಯನ್ನು ಧರಿಸಿರುವ ಸನ್ನಿವೇಶಗಳಿವೆ. ಹೀಗಾಗಿ, 18-19ನೇ ಶತಮಾನದಲ್ಲಿ ಊರನ್ನು ರಕ್ಷಿಸುತ್ತ ಮಡಿದ ಸ್ಥಳೀಯ ವೀರರ ಹೆಸರಲ್ಲಿ ನಿಲ್ಲಿಸಲಾದ ಸ್ಮಾರಕಗಳಲ್ಲಿ ಕೋವಿಧಾರಿಗಳನ್ನು ನೋಡಬಹುದು.

ವಿಶೇಷವೆಂದರೆ, ಸ್ಥಳೀಯ ಸೈನಿಕರ ಕೈಗೆ ಹೊಸ ಆಯುಧಗಳು ಮಾತ್ರವಲ್ಲದೆ, ಅವರ ಮೈಗೆ ವಿದೇಶಿ ಸೈನಿಕರ ವೇಷಭೂಷಣಗಳೂ ಆವರಿಸಿಕೊಂಡವು. ಅದರಲ್ಲೂ, ಬ್ರಿಟಿಶರ ಹ್ಯಾಟು ಮತ್ತು ತುರ್ಕಿ ಸೈನಿಕರ ಉದ್ದನೆಯ ಕುಲಾವಿಗಳು. ಇದೇ ಕಾಲಕ್ಕೆ ಭಾರತೀಯ ದೊರೆಗಳು ಮೊಗಲರು (ಉದಾಹರಣೆಗೆ, ಶಿವಾಜಿ) ಮತ್ತು ಬ್ರಿಟಿಶ್ ದೊರೆಗಳ ರೀತಿಯ ಪೋಷಾಕು ಧರಿಸುವ (ಉದಾಹರಣೆಗೆ, 19-20ನೇ ಶತಮಾನದ ಭಾರತೀಯ ಬಹುತೇಕ ದೊರೆಗಳು) ಪದ್ಧತಿಯೂ ಜಾರಿಗೆ ಬಂದಿತ್ತು. ಆಡಳಿತದಲ್ಲೂ ಮೊಗಲರು ಮತ್ತು ಬ್ರಿಟಿಶರ ಪದ್ಧತಿ ಜಾರಿಯಾಗುತ್ತಿತ್ತು.

AV Eye Hospital ad

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಬದುಕಿನ ರಾಜ್ಯವನ್ನು ಕಾಪಾಡಲು ಹೊರಟ ಸೈನಿಕರು

ಇನ್ನೂ ವಿಶೇಷವೆಂದರೆ, ಲೌಕಿಕ ಶಿಲ್ಪ ಮತ್ತು ಚಿತ್ರಗಳಲ್ಲಿರುವ ವಿದೇಶಿ ಸೈನಿಕರು ಅಥವಾ ಅವರ ವೇಷ ತೊಟ್ಟ ಸ್ಥಳೀಯ ಸೈನಿಕರು ಧಾರ್ಮಿಕ ಸ್ತರಕ್ಕೂ ವರ್ಗಾವಣೆಯಾಗಿದ್ದು. ದೊರೆಗಳ ಇಲ್ಲವೇ ದೇವತೆಗಳ ಹಿಂದೆ ಬ್ರಿಟಿಶ್ ಸೈನಿಕರು ಪಹರೆ ಕೊಡುತ್ತ ದಂಡಧಾರಿಗಳಾಗಿ ನಿಂತಿರುವ ಗಾರೆಶಿಲ್ಪಗಳನ್ನು ಗುಡಿಗಳ ಗೋಪುರಗಳಲ್ಲಿ ನೋಡಬಹುದು.

ಇಲ್ಲಿರುವ ಚಿತ್ರಗಳು ಉಡುಪಿ ಜಿಲ್ಲೆಯ ಮೆಕ್ಕೆಕಟ್ಟೆ ಎಂಬಲ್ಲಿರುವ ಗುಡಿಯೊಂದರಲ್ಲಿ, ಹರಕೆಗಾಗಿ ಭಕ್ತರು ನಿರ್ಮಿಸಿಕೊಟ್ಟ ಮರಗೆತ್ತನೆಯ ಪುತ್ಥಳಿಗಳು. ಇವುಗಳಲ್ಲಿ ಬ್ರಿಟಿಶರ ಹ್ಯಾಟೂ, ಟರ್ಕಿಯ ಫರ್‍ಕ್ಯಾಪೂ ಇರುವುದನ್ನು ಗಮನಿಬಹುದು. ಇವು ಏನನ್ನು ಸೂಚಿಸುತ್ತಿರಬಹುದು? ನಮ್ಮನ್ನು ಆಳುತ್ತಿರುವ ಬಿಳಿಯರು ನಮ್ಮ ದೇವತೆಗಳ ಸೇವಕರು ಎಂದು ಬಿಂಬಿಸುವ ಆಶಯವನ್ನೇ? ಹೊರಗಿನಿಂದ ಬಂದ ಅಧಿಕಾರಸ್ಥ ಚಹರೆಗಳನ್ನು ಸ್ಥಳೀಕರಿಸುವ ಸ್ಥಳೀಯ ಸಂಸ್ಕೃತಿಯ ಚಹರೆಯನ್ನೇ? ಹೊಸದಾಗಿ ಬಂದ ಎಲ್ಲವನ್ನೂ ಸ್ವೀಕರಿಸುವ ಭಾರತೀಯರ ಉಪಯುಕ್ತವಾದಿ ಗುಣವನ್ನೇ?

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಗೂಢವಿದ್ಯೆ ಕಲಿಕಾ ಕೇಂದ್ರಗಳಾಗಿದ್ದ ಈ ಜಾಗಗಳು ಯಾತ್ರಾಸ್ಥಳವಾಗಿ ಬದಲಾಗಿದ್ದೇಕೆ?

ವಿಜಯನಗರವು ವಿದೇಶಿ ಪ್ರವಾಸಿಗರನ್ನೂ ವ್ಯಾಪಾರಿಗಳನ್ನೂ ರಾಜಪ್ರತಿನಿಧಿಗಳನ್ನೂ ಸ್ವೀಕಾರ ಮಾಡುತ್ತಿದ್ದ ಕಾರಣದಿಂದ, ಹಂಪಿಯ ಬಹುತೇಕ ಮಂಟಪ ಮತ್ತು ಗುಡಿಗಳ ಕಂಬ ಮತ್ತು ಗೋಡೆಗಳ ಮೇಲೆ, ಅರಬರ, ಯೂರೋಪಿಯನರ ಉಬ್ಬುಶಿಲ್ಪಗಳಿವೆ. ಮಹಾನವಮಿ ದಿಬ್ಬವಂತೂ ನೂರಾರು ಅರಬರಿಂದ ತುಂಬಿಹೋಗಿದೆ. ವಿದೇಶಿಗರ ವೇಷಭೂಷಣ ಮತ್ತು ಜೀವನಕ್ರಮವನ್ನು ಕಂಡ ಸಮಕಾಲೀನ ಶಿಲ್ಪಿಗಳು, ಬೆರಗಿನಿಂದ ಅವರನ್ನು ಅಮರಗೊಳಿಸಿದರು.

ಭಾರತದ 'ಸ್ಥಳೀಯ ಸಂಸ್ಕೃತಿ’ಗಳು ಯಾವಾಗಲೂ ಸೀಮೆಯಿಂದ ಬರುವ ವೇಷ ಆಯುಧಗಳಿಂದ ಹಿಡಿದು ತರಕಾರಿ ಉಪಕರಣದ ತನಕ ಇತ್ಯಾದಿ ಯಾವುದೇ ಉಪಯುಕ್ತವಾದ ಸಂಗತಿಗಳನ್ನು ಕಂಡು ಬೆರಗಾಗುತ್ತವೆ. ಬೆರಗಿನಿಂದಲೇ ಸ್ವೀಕರಿಸಿ ಅವನ್ನು ತಮ್ಮದಾಗಿಸುತ್ತವೆ. ಜಗತ್ತಿಗೆ ತೆರೆದುಕೊಳ್ಳುವ ವಿಷಯದಲ್ಲಿ ಅವು ಎಂದೂ ಅಳುಕಿಲ್ಲ.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿಯಿದು
ನಿಮಗೆ ಏನು ಅನ್ನಿಸ್ತು?
1 ವೋಟ್
eedina app