ನುಡಿಚಿತ್ರ | ವೃತ್ತಾಕಾರ ರಾಜಕಾರಣದ ಕೆಲವು ಗುಟ್ಟುಗಳು

ನಾವು ಕೂರುವಾಗ ನಮ್ಮ ಆಜುಬಾಜಿನವರಿಂತ ಎಷ್ಟು ದೂರದಲ್ಲಿ ಮತ್ತು ಎತ್ತರದಲ್ಲಿ, ಯಾವ ದಿಕ್ಕಿನಲ್ಲಿ ಕೂರುತ್ತೇವೆ, ಕೂತಾಗ ಯಾವ ದೇಹಭಂಗಿಯಲ್ಲಿ ಇರುತ್ತೇವೆ ಎನ್ನುವುದು, ನಮ್ಮ-ಅವರ ನಡುವಿನ ಅಧಿಕಾರದ ಶ್ರೇಣೀಕರಣವನ್ನು ಅಥವಾ ಸಮಾನತೆಯನ್ನು ನಿರ್ವಚಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ, ವೃತ್ತಾಕಾರದಲ್ಲಿ ಕೂರುವ ವಿನ್ಯಾಸಗಳು ಗಮನಾರ್ಹ

ನಾವು ಸಭೆಯಲ್ಲೋ ಮನೆಯಲ್ಲೋ ತರಗತಿಗಳಲ್ಲೋ ಕೂರುವ ವಿನ್ಯಾಸಗಳನ್ನು ಗಮನಿಸಿ. ಅಧ್ಯಾಪಕರು ವೇದಿಕೆಯ ಮೇಲಿಂದ ಮುಖಾಮುಖಿಯಾಗಿ ಕೂತ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಗುಡಿ, ಚರ್ಚು, ಮಸ್ಜೀದುಗಳಲ್ಲಿ ಧಾರ್ಮಿಕ ನಾಯಕರು ಅನುಯಾಯಿಗಳನ್ನು ಉದ್ದೇಶಿಸಿ ಮಾತಾಡುವ ಸಭೆಗಳಲ್ಲೂ ಮುಖಾಮುಖಿ ಆಸನ ವ್ಯವಸ್ಥೆ ಇರುತ್ತದೆ.

ತರಗತಿಯಲ್ಲಿ ಪಾಠ ಮಾಡುವವರು ನಿಲ್ಲುವ ವೇದಿಕೆ ಎತ್ತರದಲ್ಲಿರುತ್ತದೆ. ಧಾರ್ಮಿಕ ಸ್ಥಳಗಳಲ್ಲಿ ಮಾತಾಡುವ ಧಾರ್ಮಿಕ ಗುರುವಿನ ಆಸನ ಮತ್ತು ವೇದಿಕೆ ಎರಡೂ ಎತ್ತರದಲ್ಲಿರುತ್ತವೆ. ಮಂತ್ರಿ ಅಥವಾ ಅಧಿಕಾರಿಗಳು ಸಭೆ ಸೇರುವ ಕೋಣೆಗಳಲ್ಲಿ ವೇದಿಕೆ ಸಮತಲದಲ್ಲಿ ಇರಬಹುದು. ಆದರೆ, ಅವರ ಆಸನವನ್ನು ಇಡಲಾದ ಜಾಗವೇ ಅದಕ್ಕೆ ಕೇಂದ್ರಸ್ಥಾನವನ್ನು ಒದಗಿಸುತ್ತದೆ. ಅವರು ತಮ್ಮ ಆಸನಕ್ಕೆ ಎಡ-ಬಲದಲ್ಲಿ ಸಾಲಾಗಿ ದೇಹದ ಪಾರ್ಶ್ವ ತೋರುವ ಭಂಗಿಯಲ್ಲಿ ಕೂತಿರುವ, ಕೆಳಸ್ತರದ ಅಧಿಕಾರವುಳ್ಳವರನ್ನು ನೋಡುತ್ತ ಸಭೆ ನಡೆಸುತ್ತಾರೆ. ಈ ಮೂರೂ ವಿನ್ಯಾಸಗಳಲ್ಲಿ ಮಾತಾಡುವವರ ಮತ್ತು ಕೇಳುವವರ ಸ್ಥಾನವೇ ಯಾರು ಹೆಚ್ಚು ಮುಖ್ಯರು ಮತ್ತು ಕಡಿಮೆ ಮುಖ್ಯರು ಎಂದು ಸೂಚಿಸುತ್ತಿರುತ್ತದೆ. ತರತಮದಿಂದ ಕೂಡಿದ ಅಧಿಕಾರದ ವ್ಯಾಖ್ಯಾನವಿರುವ ಆ ವ್ಯವಸ್ಥೆಯನ್ನು ಮುರಿಯಲೆಂದೇ ದುಂಡುಮೇಜಿನ ಪರಿಕಲ್ಪನೆ ಬಂದಿತು. ಅಲ್ಲಿ ವೃತ್ತಾಕಾರವಾಗಿ ಕೂತಾಗ, ಯಾರೂ ಮುಖ್ಯರಲ್ಲ - ಎಲ್ಲರೂ ಸಮಾನರೂ ಎಂಬ ಆಶಯವಿರುತ್ತದೆ.

Image

ಭಾರತದ ಬೇರೆ-ಬೇರೆ ಪ್ರತಿನಿಧಿಗಳನ್ನು ಒಟ್ಟಿಗೆ ಸೇರಿಸಲು ಇಂಗ್ಲೆಂಡಿನಲ್ಲಿ ಏರ್ಪಡಿಸಲಾಗುತ್ತಿದ್ದ ದುಂಡುಮೇಜಿನ ಪರಿಷತ್ತು, ಈ ಸಮಾನತೆಯ ಆಶಯವನ್ನು ವಾಸ್ತವವಾಗಿ ಹೊಂದಿತ್ತೇ ಇಲ್ಲವೇ ಬೇರೆ ಪ್ರಶ್ನೆ. ಆದರೆ, ಚೌಕಾಕಾರದಲ್ಲಿ ಇಲ್ಲದ ಒಂದು ಸಮಾನತೆಯ ಪರಿಕಲ್ಪನೆಯ ವೃತ್ತದಲ್ಲಿದೆ ಎನ್ನುವುದು ಸ್ಪಷ್ಟ. ಎಲ್ಲರ ಅಭಿಪ್ರಾಯಕ್ಕೂ ಸಮಾನ ಗೌರವವಿದೆ ಎಂಬುದಕ್ಕೂ ಚಿಂತನಾ ಗುಂಪುಗಳು ತಮ್ಮನ್ನು 'ಸ್ಟಡಿ ಸರ್ಕಲ್' ಎಂದು ಕರೆದುಕೊಳ್ಳುವುದಕ್ಕೂ ಸಂಬಂಧವಿರಬಹುದು. ಈ ಹಿನ್ನೆಲೆಯಲ್ಲಿ, ವೃತ್ತಾಕಾರದಲ್ಲಿ ಕೂರುವ ವಿನ್ಯಾಸಗಳು ದುಡಿಮೆ, ಆಹಾರ ಸೇವನೆ, ಸತ್ಸಂಗ, ಹಾಡಿಕೆ ಶಿಕ್ಷಣ ಲೋಕಗಳಲ್ಲಿದ್ದು, ಅವನ್ನು ಗಮನಿಸಬಹುದು.

1. ಕೆಲಸದ ಲೋಕ: ಬೀದಿಯ ಹೆಂಗಸರೆಲ್ಲ ಯಾವುದಾದರೂ ಮನೆಯಲ್ಲಿ ಸೇರಿ, ಮದುವೆಗೋ ಹಬ್ಬಕ್ಕೋ ಬೇಕಾದ ಶಾವಿಗೆಯನ್ನು ಹೊಸೆಯುವಾಗ, ಹಪ್ಪಳ ಲಟ್ಟಿಸುವಾಗ ದುಂಡಗೆ ಮುಖಾಮುಖಿ ಕೂತು ಮಾತಾಡುತ್ತ, ಪರಸ್ಪರ ನೋಡುತ್ತ ಕೆಲಸ ಮಾಡುವ ಪದ್ಧತಿಯಿದೆ. ಒಂದೇ ಕೆಲಸವನ್ನು ಹಂಚಿಕೊಂಡು ಮುಗಿಸುವ ಸಾಮೂಹಿಕ ಪ್ರಜ್ಞೆ ಅಲ್ಲಿರುತ್ತದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಶೌರ್ಯ ಎನಿಸಿಕೊಂಡದ್ದು ಕಾಲ ಬದಲಾದಂತೆ ಕ್ರೌರ್ಯವಾದ ಬಗೆ

2. ಆಹಾರ ಸೇವನೆ: ಕೆಲವು ತಾಂತ್ರಿಕ ಆಚರಣೆಗಳಲ್ಲಿ, ದೀಕ್ಷೆ ಪಡೆದವರು ಗುರುವಿನ ಜೊತೆ ದುಂಡಾಕಾರದಲ್ಲಿ ಕೂತು ಉಣ್ಣುವ ಪದ್ಧತಿಯಿದೆ. ಅರಬ್ಬರಲ್ಲಿ ಒಂದು ದೊಡ್ಡ ತಟ್ಟೆಯಲ್ಲಿ ಮಾಂಸದನ್ನವನ್ನು ಎಲ್ಲರೂ ಹಾಕಿ ತಿನ್ನುವಾಗ ದುಂಡಗೆ ಕೂರುವುದುಂಟು.

3. ಸಂತರ ಲೋಕ: ಸೂಫಿಗಳು ಪರಸ್ಪರ ಭೇಟಿಯಾಗಿ ಚರ್ಚೆ ಮಾಡುವಾಗ ದುಂಡಗೆ ಮುಖಾಮುಖಿ ಕುಳಿತು ಚರ್ಚಿಸುತ್ತಿರುವ ವರ್ಣಚಿತ್ರಗಳಿವೆ. ಇಂತಹದೊಂದು ಚಿತ್ರವುಳ್ಳ ಪಟವು ಹಿಂದೆ ಮುಸ್ಲಿಮರ ಮನೆಗಳಲ್ಲಿ ಕಾಣಸಿಗುತ್ತಿತ್ತು. ಬಹುತೇಕ ಸೂಫಿ ಸಂಗೀತದ ಮೆಹಫಿಲ್‌ಗಳಲ್ಲಿ ಈಗಲೂ ಹೀಗೆ ಕೂರುವ ವ್ಯವಸ್ಥೆ ಇರುತ್ತದೆ. ನುಸ್ರತ್ ಫತೇ ಅಲಿಖಾನರು ಉರುಸುಗಳಲ್ಲಿ ಹಾಡುವಾಗ, ಕೇಳುಗರು ಅವರ ಎದುರು ಮಾತ್ರವಲ್ಲ, ಅಕ್ಕಪಕ್ಕ ಹಿಂದೆ ಕೂಡ ಇರುತ್ತಾರೆ. ಇದು ಗಾಯಕರು ಮತ್ತು ಕೇಳುಗರು ಪರಸ್ಪರ ಬೇರೆಯಾಗದೆ ಕೂರುವ ಅದ್ವೈತ ವ್ಯವಸ್ಥೆ.

Image

4. ಈ ಬಗೆಯ ವೃತ್ತಾಕಾರದ ಕೂರುವಿಕೆಯನ್ನು ತತ್ವಪದ ಹಾಡಿಕೆಯ ಸಭೆಗಳಲ್ಲೂ, ನವನಾಥರು ಕೂತಿರುವ ಪಟಗಳಲ್ಲೂ, ಖವಾಲಿ ಹಾಡಿಕೆ ಮೇಳಗಳಲ್ಲೂ ಕಾಣಬಹುದು. ಇವರೆಲ್ಲರೂ ನೆಲದ ಮೇಲೆ ಕೂತಿರುತ್ತಾರೆ. ಇದು ಬೇರೆ-ಬೇರೆ ವಾದ್ಯ ನುಡಿಸುವವರು, ಹಾಡುವವರು, ಹಿಮ್ಮೇಳದಲ್ಲಿ ಪಲ್ಲವಿಗೆ ದನಿಗೂಡಿಸುವವರು ಹಾಗೂ ಕೇಳುಗರು ಎಲ್ಲರೂ ಸಮಾನರು ಎಂದು ಸೂಚಿಸುತ್ತಿರುತ್ತದೆ. ನಾಥ, ಸೂಫಿ, ತತ್ವಪದಗಳಿರುವ ಆರೂಢ ಪಂಥಗಳು ಮೂಲತಃ ಗುರುಪಂಥಗಳು. ಅಲ್ಲಿ ದೀಕ್ಷೆ ಪಡೆಯಲು, ಹಾಡಿಕೆಯಲ್ಲಿ ಭಾಗವಹಿಸಲು, ಆಹಾರ ಸ್ವೀಕರಿಸಲು ಜಾತಿ ಮತ್ತು ಧರ್ಮದ ಭೇದಗಳು ಅಷ್ಟಾಗಿ ಇರುವುದಿಲ್ಲ. ಈ ಬಗೆಯ ಸಮಾನತೆಯ ಆಶಯವು ಅವರು ದುಂಡಗೆ ಕೂರುವುದರಲ್ಲೂ ಸೂಕ್ಷ್ಮವಾಗಿ ಪ್ರಕಟವಾಗುತ್ತಿರಬಹುದು.

Image

ನಾವು ಕೂರುವಾಗ ನಮ್ಮ ಆಜುಬಾಜಿನವರಿಂತ ಎಷ್ಟು ದೂರದಲ್ಲಿ ಮತ್ತು ಎತ್ತರದಲ್ಲಿ, ಯಾವ ದಿಕ್ಕಿನಲ್ಲಿ ಕೂರುತ್ತೇವೆ, ಕೂತಾಗ ಯಾವ ದೇಹಭಂಗಿಯಲ್ಲಿ ಇರುತ್ತೇವೆ ಎನ್ನುವುದು, ನಮ್ಮ-ಅವರ ನಡುವಿನ ಅಧಿಕಾರದ ಶ್ರೇಣೀಕರಣವನ್ನು ಅಥವಾ ಸಮಾನತೆಯನ್ನು ಕೂಡ ನಿರ್ವಚಿಸುತ್ತಿರುತ್ತದೆ. ಈ ಅಧಿಕಾರವು ವಯಸ್ಸಿನಿಂದ, ಜ್ಞಾನದಿಂದ, ಜಾತಿಯಿಂದ, ಪದವಿಯಿಂದ ನಿರ್ವಚನಗೊಳ್ಳುತ್ತಿರುತ್ತದೆ.

ವೃತ್ತಾಕಾರವಲ್ಲದ ಭಂಗಿಯಲ್ಲಿ ಕೂತಿರದ ಸಭೆಗಳಲ್ಲಿಯೂ ಸಮಾನತೆಯ ಆಶಯವು ವ್ಯಕ್ತವಾಗುತ್ತಿರಬಹುದು. ಆದರೆ, ವೃತ್ತೀಯ ವಿನ್ಯಾಸದಲ್ಲಿ 'ಹೇಳತೇನ ಕೇಳು' ಎಂಬ ಅಧಿಕಾರಸ್ಥ ಭಾವಕ್ಕಿಂತ, 'ಕೇಳತೇನ ಹೇಳು' ಎಂಬ ನಮ್ರತೆಯ ಭಾವವೂ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಎದುರಿನವರಿಂದ ಕೇಳಿಸಿಕೊಳ್ಳದೆ, ಪಡೆದುಕೊಳ್ಳದೆ ಕೇವಲ ಕಲಿಸುವಿಕೆ ಎಂಬುದು ನಿಜವಾಗಿ ಇದೆಯೇ?

ನಿಮಗೆ ಏನು ಅನ್ನಿಸ್ತು?
3 ವೋಟ್