ನುಡಿಚಿತ್ರ | ಯರವಾಡಾ ಜೈಲಿನಿಂದ ಗಾಂಧಿ ಬರೆದ ಉರ್ದು ಪತ್ರ ಮತ್ತು ನಾಲ್ವಡಿಯವರ ಮೂರು ಭಾಷೆಯ ಆಹ್ವಾನ ಪತ್ರ

ಸ್ವತಂತ್ರ ಭಾರತದ ರಾಜಕಾರಣದಲ್ಲಿ ಕೂಡ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ತತ್ವದ ಭಾಗವಾಗಿ ಕೆಲವು ಆಚರಣೆಗಳಿವೆ. ಆದರೆ, ಮತೀಯ ದ್ವೇಷದ ಅಮಲು ಅವುಗಳನ್ನು ಮರೆಸುವುದುಂಟು; ರೈಲಿಗಿದ್ದ ಟಿಪ್ಪುವಿನ ಹೆಸರನ್ನು ಬದಲಿಸುವುದು, ಮೂಕಾಂಬಿಕೆ ಗುಡಿಯ ಸಲಾಂ ಆರತಿಯ ಹೆಸರು ಬದಲಿಸುವುದು ಇತ್ಯಾದಿಗಳಲ್ಲಿ ಅದು ಪ್ರಕಟವಾಗುತ್ತದೆ

ಗಾಂಧಿಯವರು ಯರವಾಡಾ ಜೈಲಿನಲ್ಲಿದ್ದಾಗ, ಕವಿ ಇಕ್ಬಾಲ್ ಅವರ ಸಾವಿನ ಸಂದರ್ಭದಲ್ಲಿ, ಮಹಮದ್ ಹುಸೇನ್ ಎನ್ನುವವರಿಗೆ ಶೋಕಪತ್ರವನ್ನು ಉರ್ದುವಿನಲ್ಲಿ ಬರೆದರು.  ವಿಶೇಷವೆಂದರೆ, ಇದರ ಭಾಷೆ ಉರ್ದುವಿನಲ್ಲಿರುವುದು. ಮಾತ್ರವಲ್ಲ, ಉರ್ದುವಿಗೆ ಬಳಸುವ ನಶ್ತಲಿಕ್ ಲಿಪಿಯಲ್ಲಿದೆ. ಇದೇ ಪತ್ರವನ್ನು ದೇವನಾಗರಿ ಲಿಪಿಯಲ್ಲಿ ಬರೆದರೆ ಇದು ಹಿಂದಿಯಾಗುತ್ತದೆ.

Eedina App

ಹಿಂದಿ-ಉರ್ದು ಎನ್ನುವುದು ಭಾಷಾವಿಜ್ಞಾನದ ಪ್ರಕಾರ ಎರಡು ಭಾಷೆಗಳೇ ಅಲ್ಲ. ಎರಡೂ ಇಂಡೋ ಆರ್ಯನ್ ಕುಟುಂಬಕ್ಕೆ ಸೇರಿದವು. ಇವುಗಳಲ್ಲಿ ಮಿಶ್ರವಾಗುವ ಸಂಸ್ಕೃತ ಮತ್ತು ಅರಬಿ-ಫಾರಸಿ ಮಿಲನಗಳ ಪ್ರಮಾಣದ ಕಾರಣದಿಂದ ಇವು ಬೇರೆ-ಬೇರೆ ತರಹ ತೋರುತ್ತವೆ. ಅಲ್ಲದೆ, ಬಳಸಲಾಗುವ ಲಿಪಿಯ ಕಾರಣದಿಂದ ಬೇರೆ ತರಹ ತೋರುತ್ತವೆ. ಈ ಅರ್ಥದಲ್ಲಿ 'ಹಿಂದಿ' ಎಂದು ಕರೆಯಲಾಗುವ ಸಿನಿಮಾಗಳ ಹಾಡುಗಳೆಲ್ಲ 'ಉರ್ದು' ಎಂದು ಕರೆಯಲಾಗುವ ಭಾಷೆಯ ಹಾಡುಗಳು ಎಂಬುದನ್ನು ಗಮನಿಸಬೇಕು. ಇವನ್ನು ಬರೆದ ಸಾಹಿರ್ ಲೂಧಿಯಾನ್ವಿ, ಶಕೀಲ್ ಬದಾಯೂನಿ ಮುಂತಾದವರು ಹೆಚ್ಚಾಗಿ ಉರ್ದು ಕವಿಗಳೆನಿಸಿಕೊಂಡವರಾಗಿದ್ದರು.

ಗಾಂಧಿ ಬರೆದ ಉರ್ದು ಪತ್ರ

ಹಿಂದೂ-ಮುಸ್ಲಿಮರ ಪ್ರಾತಿನಿಧ್ಯ ಪಡೆದುಕೊಂಡು, ಒಂದೇ ಭಾಷೆಯು ಉರ್ದು-ಹಿಂದಿಗಳೆಂದು ವಿಭಜಿತವಾಗಿದ್ದು ಗಾಂಧಿಯವರಿಗೆ ದುಃಖದ ಸಂಗತಿಯಾಗಿತ್ತು. ಅವೆರಡೂ ಹದವಾಗಿ ಬೆರೆಯುವ ಹಿಂದೂಸ್ತಾನಿಯನ್ನು ಅವರು ಭಾರತದ ಸಂಪರ್ಕ ಭಾಷೆಯಾಗಬೇಕೆಂದೂ ಬಯಸಿದ್ದರು. ಸಾಧ್ಯವಾದಾಗಲೆಲ್ಲ ಉರ್ದುವಿನಲ್ಲಿ ಅವರು ಮುಸ್ಲಿಂ ಸ್ವಾತಂತ್ರ್ಯ ಸಹಹೋರಾಟಗಾರರಿಗೆ ಪತ್ರ ಬರೆಯುತ್ತಿದ್ದರು. ಈ ಪತ್ರದ ಉರ್ದುವಿನ ಲಿಪ್ಯಂತರ ಹೀಗಿದೆ:

AV Eye Hospital ad

"9 ಜೂನ್, 1936... ಭಾಯಿ ಮಹಮದ್ ಹುಸೇನ್, ಆಪ್ ಕಾ ಖತ್ ಮಿಲಾ. ಡಾ.ಇಕ್ಬಾಲ್ ಮರಹೂಂ ಇಕ್ಬಾಲ್ ಕೆ ಬಾರೆ ಮೇ ಮೈ ಕ್ಯಾ ಲಿಖೂ? ಲೇಕಿನ್, ಇತನಾ ಮೈ ಕಹ್ ಸಕ್ತಾ ಹೂಂ - ಜಬ್ ಉನಕಿ ಮಶಹೂರ್ ನಝಂ 'ಹಿಂದೂಸ್ತಾನ್ ಹಮಾರ' ಪಡೀ ತೊ, ಮೇರ ದಿಲ್ ಉಬರ್ ಆಯ. ಔರ್ ಯರವಾಡಾ ಜೈಲ್ ಮೇ ತೊ, ಸೈಕಡೊ ಬಾರ್ ಇಸ್ ನಝಂ ಕೊ ಮೈನೆ ಗಾಯಾ ಹೋಗಾ. ಇಸ್ ನಝಂ ಕೆ ಅಲಫಾಜ್ ಮುಝೆ ಬಹುತ್ ಹೀ ಮೀಠೆ ಲಗೆ. ಔರ್ ಏ ಖತ್ ಲಿಖತಾ ಹೂಂ ತಬ್ ಭೀ, ಓ ನಝಂ ಮೇರೆ ಕಾನೋ ಮೇ ಗೂಂಜ್ ರಹೀ ಹೈ. ಆಪಕಾ ಎಂ ಕೆ ಗಾಂಧಿ..."

(ಸೋದರ ಮುಹಮದ್ ಹುಸೇನ್, ನಿಮ್ಮ ಪತ್ರ ಸಿಕ್ಕಿತು. ನಿಧನರಾಗಿರುವ ಡಾ.ಇಕ್ಬಾಲ್ ಅವರ ಬಗ್ಗೆ ಏನು ಬರೆಯಲಿ? ಆದರೆ, ಇಷ್ಟಂತೂ ಹೇಳುವೆ - ಯಾವಾಗೆಲ್ಲ ಅವರ ಪ್ರಸಿದ್ಧ ಕವಿತೆ 'ಹಿಂದೂಸ್ತಾನ್ ಹಮಾರ' ಓದುತ್ತೇನೋ, ಆವಾಗೆಲ್ಲ ನನ್ನ ಮನಸ್ಸು ತುಂಬಿ ಬಂದಿದೆ ಮತ್ತು ಈ ಯರವಾಡಾ ಜೈಲಲ್ಲಂತೂ, ಸಾವಿರ ಸಲವಾದರೂ ಈ ಕವಿತೆಯನ್ನು ನಾನು ಹಾಡಿಕೊಂಡಿರಬಹುದು. ಈ ಕವಿತೆಯ ಶಬ್ದಗಳು ನನಗೆ ಬಹಳ ಮಧುರವೆನಿಸಿವೆ. ಈ ಪತ್ರ ಬರೆಯುತ್ತಿರುವಾಗಲೂ ಆ ಕವಿತೆ ನನ್ನ ಕಿವಿಗಳಲ್ಲಿ ಅನುರಣಿಸುತ್ತಿದೆ. ನಿಮ್ಮ ಎಂ ಕೆ ಗಾಂಧಿ)

ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಇದು ಮುತ್ತಿನ ಚೆಂಡು, ಇದು ನೀಲಮ್ಮ ಬಾವಿ, ಇದು ಜೋಡಿ ಸರ್ಪ, ಇದು ಒಂಟಿ ಸರ್ಪ'

ಈ ಪತ್ರದಲ್ಲಿ ಉರ್ದು ಭಾಷೆ ಮತ್ತು ಲಿಪಿ ಮಾತ್ರವಲ್ಲ, ಉರ್ದು ಭಾಷಿಕರು ಬಳಸುವ ಅರೆಬಿಕ್ ಅಂಕಿಗಳೇ ಇವೆ. ಈ ಜವಾಬು ಪತ್ರಕ್ಕೆ ಮೂಲವಾಗಿರುವ ಮಹಮದ್ ಹುಸೇನರೂ ಬಹುಶಃ ಉರ್ದುವಿನಲ್ಲೇ ಪತ್ರ ಬರೆದಿರಬೇಕು. ತಮ್ಮ ಪತ್ರದಲ್ಲಿ ಗಾಂಧಿ ಹುಸೇನರನ್ನು ಭಾಯಿ ಎಂದು ಕರೆದಿರುವರು - ಎರಡೂ ಧರ್ಮದವರು ಸೋದರರು ಎಂಬರ್ಥವನ್ನು ಹೊರಡಿಸುವಂತೆ. ಇದಕ್ಕೆ ಕಾರಣವೂ ಇತ್ತು. ಸ್ವಾತಂತ್ರ್ಯ ಚಳವಳಿಗೆ ಮುಸ್ಲಿಮರ ಭಾಗವಹಿಸುವಿಕೆಯನ್ನು ಕಂಡು ಗಾಂಧಿ, ಖಿಲಾಫತ್ ಚಳುವಳಿಯನ್ನು ಕಾಂಗ್ರೆಸ್ ಚಳುವಳಿಯ ಭಾಗವಾಗಿಸಿದ್ದರು. ಮೌಲಾನಾ ಅಬ್ದುಲ್ ಕಲಾಂ ಆಜಾದ್, ಖಾನ್ ಅಬ್ದುಲ್ ಗಫಾರ್ ಖಾನರು ಅವರಿಗೆ ಪ್ರಿಯ ಸಂಗಾತಿಗಳಾಗಿದ್ದರು. ಆದರೆ, 1936ರ ಹೊತ್ತಿಗಾಗಲೇ ಎರಡು ರಾಷ್ಟ್ರಗಳ ಸಿದ್ಧಾಂತವು ಜನ್ಮ ತಳೆದಿತ್ತು. ಹಿಂದೂ-ಮುಸ್ಲಿಮರು ಒಂದಾಗಿ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಬಿರುಕು ಕಾಣಿಸಿತ್ತು. ಮಹಮದ್ ಆಲಿ ಜಿನ್ನಾರ ಮುಸ್ಲಿಂ ಲೀಗ್ ಜನ್ಮ ತಳೆದಿತ್ತು. ಹೀಗಾಗಿ, ಸ್ವಾತಂತ್ರ್ಯ ಹೋರಾಟವನ್ನು ದೇಶದ ಎರಡು ದೊಡ್ಡ  ಧಾರ್ಮಿಕ ಸಮುದಾಯಗಳನ್ನು ಮತ್ತು ಮುಂದೆ ಸ್ವತಂತ್ರಗೊಳ್ಳಲಿರುವ ದೇಶವನ್ನು ಒಡೆಯದಂತೆ ಒಟ್ಟಿಗಿಡಬೇಕಾದ ಅಗತ್ಯವಿತ್ತು.

ಗಾಂಧಿಯವರಿಗೆ ಭಾರತದ ಎಲ್ಲ ಭಾಷೆಗಳನ್ನು ಕಲಿಯುವ ಆಸೆಯಿತ್ತು. ಕರ್ನಾಟಕಕ್ಕೆ ಬಂದಾಗ ಅವರು ಕನ್ನಡದಲ್ಲಿ ತಮ್ಮ ಹೆಸರನ್ನು ಬರೆದಿರುವ ದಾಖಲೆಗಳಿವೆ. ಭಾರತದ ಏಕತೆಯು ಅದರ ಭಾಷಿಕ, ಧಾರ್ಮಿಕ, ಸಾಂಸ್ಕೃತಿಕ ಬಹುತ್ವವನ್ನು ರಕ್ಷಿಸುವುದರಲ್ಲೇ ಇದೆ. ಈ ರಕ್ಷಣೆ ಸಾಧ್ಯವಾಗುವುದು ಪ್ರತಿಯೊಂದು ಭಾಷೆಯ, ಪ್ರಾಂತ್ಯದ, ಧರ್ಮದ ಗೌರವದಿಂದಲೇ ಎಂದು ಅವರಿಗೆ ತಿಳಿದಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಮೂರು ಭಾಷೆಯಲ್ಲಿ ಬರೆದ ಪತ್ರ

ಆಡಳಿತಗಾರರು ಕೂಡ ಈ ಬಹುತ್ವ ತತ್ವವನ್ನು ಪಾಲಿಸುವರು. ರಾಜ್ಯದೊಳಗಿರುವ ಎಲ್ಲ ಧರ್ಮದ ಪ್ರಜೆಗಳನ್ನು ಒಳಗೊಳ್ಳುವ ಭಾಗವಾಗಿಯೂ, ಭಾವನಾತ್ಮಕವಾಗಿ ಎಲ್ಲ ಪ್ರಜೆಗಳನ್ನು ಸಮಾನ ದೃಷ್ಟಿಯಿಂದ ಕಾಣುವ ರಾಜಧರ್ಮದ ದೃಷ್ಟಿಯಿಂದಲೂ ಈ ತತ್ವವನ್ನು ಆಚರಿಸಲಾಗುತ್ತದೆ. ಈ ತತ್ವವನ್ನು ಸಾಂಕೇತಿಕವಾಗಿ ಆಯಾ ಧರ್ಮದ ಭಾಷೆಯನ್ನು ಬಳಸುವ ಮೂಲಕ, ಧಾರ್ಮಿಕ ಕಟ್ಟಡ ಕಟ್ಟಿಸುವ ಮೂಲಕ ಮಾಡುವುದುಂಟು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಯ ಸಮೀಪವೇ ಮಸೀದಿ ಕಟ್ಟಿಸುವಲ್ಲಿ; ಕೆಲವರ ವಿರೋಧವಿದ್ದರೂ ಮಿರ್ಜಾ ಇಸ್ಮಾಯಿಲರನ್ನು ತಮ್ಮ ದಿವಾನರನ್ನಾಗಿ ನೇಮಿಸಿಕೊಳ್ಳುವಲ್ಲಿ ಈ ತತ್ವವನ್ನು ಪಾಲಿಸಿದರು. ಈ ಸನ್ನಿವೇಶದಲ್ಲಿ ಅವರು ತಮ್ಮ ಪಟ್ಟಾಭಿಷೇಕ ಕಾರ್ಯಕ್ರಮದ ಆಹ್ವಾನ ಪತ್ರವನ್ನು ಮೂರು ಭಾಷೆಗಳಲ್ಲಿ ತಮ್ಮ ಸ್ವಹಸ್ತಾಕ್ಷರಗಳಲ್ಲಿ ಬರೆದು ಪ್ರಕಟಿಸಿದ್ದನ್ನು ಉಲ್ಲೇಖಿಸಬೇಕು. ಈ ಪತ್ರದಲ್ಲಿ ಸ್ವತಃ ಒಡೆಯರ್ ಅವರು ಬರೆದ ಉರ್ದು ಸಾಲುಗಳೂ, ಉರ್ದುವಿನಲ್ಲಿ ಮಾಡಿದ ಸಹಿಯೂ ಇದೆ.

ಸ್ವತಂತ್ರ ಭಾರತದ ರಾಜಕಾರಣದಲ್ಲಿ ಕೂಡ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ತತ್ವದ ಭಾಗವಾಗಿ ಕೆಲವು ಆಚರಣೆಗಳು ಇವೆ. ಆದರೆ, ಅವುಗಳಲ್ಲಿ ಮತಬ್ಯಾಂಕಿನ ಚಾಲಾಕಿ ಯುದ್ಧತಂತ್ರವೂ ಇರುವುದು. ಈ ಇದೇ ವೋಟುಬ್ಯಾಂಕಿನ ರಾಜಕಾರಣವು ಮತೀಯಗೊಂಡರೆ,  ಭಾರತದ ಮುಸ್ಲಿಂ ಸಮುದಾಯವನ್ನೂ, ಅದಕ್ಕೆ ಸಂಬಂಧಿಸಿದ ಚರಿತ್ರೆಯನ್ನೂ, ಉರ್ದುವನ್ನೂ ದ್ವೇಷಿಸಲಾಗುವುದು ಮತ್ತು ಹೊರಗಿಡಲಾಗುವುದು. ರೈಲಿಗಿದ್ದ ಟಿಪ್ಪುವಿನ ಹೆಸರನ್ನು ಒಡೆಯರ್ ಹೆಸರಿಗೆ ಬದಲಿಸಿರುವುದು; ಮೂಕಾಂಬಿಕೆಯ ಗುಡಿಯಲ್ಲಿ ಸಲಾಂ ಆರತಿಯ ಹೆಸರನ್ನು ಬದಲಿಸುವುದು, ಇತ್ಯಾದಿ ಕಾರ್ಯಕ್ರಮಗಳಲ್ಲಿ ಅದು ಪ್ರಕಟವಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app