
ತೇಜಸ್ವಿಯವರ ಬರಹ ಬೇರಾವುದೇ ಲೇಖಕರಿಗಿಂತ ಯುವಜನತೆಗೆ ಹೆಚ್ಚು ಆಪ್ತವೆನಿಸಿದೆ. ಆದರೆ, ಹೊಸ ತಲೆಮಾರನ್ನು ತೇಜಸ್ವಿ ಆವರಿಸಿಕೊಂಡದ್ದು ಹೇಗೆ? ಜಾತಿ ವಿನಾಶದ ಬಗ್ಗೆ ಆಸ್ಥೆಯುಳ್ಳ, ನವ್ಯ ಸಾಹಿತ್ಯದ ಬ್ರಾಹ್ಮನಿಕಲ್ ಆಯಾಮ ಮತ್ತು ಕಮ್ಯುನಿಸಂ ವಿರೋಧವುಳ್ಳ ಲೇಖಕನೊಬ್ಬನನ್ನು ಈ ತರುಣರು ಪರಿಸರದ ವಿಷಯದಲ್ಲಿ ಮಾತ್ರ ಹೇಗೆ ಸ್ವೀಕರಿಸಿದರು?
ನಾನು ಕುದುರೆಮುಖ ಶಿಖರದ ಚಾರಣ ಮಾಡುವಾಗ ಹಳೇ ಮೈಸೂರು ಭಾಗದಿಂದ ಬಂದ ಕೆಲವು ತರುಣರನ್ನು ಭೇಟಿಯಾದೆ. ಅವರು ವಿಶೇಷವಾದ ಟಿ-ಶರ್ಟುಗಳನ್ನು ಉಟ್ಟು ಬಂದಿದ್ದರು. ಮುಂಭಾಗದಲ್ಲಿ ‘ತಿನ್ನೋಣ, ತಿರುಗೋಣ, ಹತ್ತೋಣ, ನೋಡೋಣ’ ಎಂದು ಬರೆದ, ನಾಲ್ಕು ಕ್ರಿಯಾಸೂಚಕ ಶಬ್ದಗಳಿದ್ದ ಒಂದು ವೃತ್ತವಿತ್ತು. ಬೆನ್ನ ಭಾಗದಲ್ಲಿ ತೇಜಸ್ವಿಯ ಹೇಳಿಕೆಯೊಂದಿತ್ತು; "ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ."
ಇದನ್ನು ನೋಡುತ್ತ ನನಗೆ ಹಲವು ಘಟನೆಗಳು ನೆನಪಾದವು. ಮೊದಲನೆಯದಾಗಿ, ನಾನು 'ಕರ್ವಾಲೊ' ಕಾದಂಬರಿಯನ್ನು ಪಾಠ ಮಾಡುವಾಗ, ತರಗತಿಯಲ್ಲಿ ಪಿಯುಸಿ ವಿದ್ಯಾರ್ಥಿಗಳು ತೋರಿಸುತ್ತಿದ್ದ ಉತ್ಸಾಹದ ಸ್ಪಂದನೆ. ಅವರಲ್ಲಿ ಅನೇಕರು ವೈದ್ಯರೂ ಎಂಜಿನಿಯರೂ ವಕೀಲರೂ ಆದರು. ಆದರೆ, ಈಗಲೂ ಸಾಹಿತ್ಯದ ಆಸಕ್ತಿ ಉಳಿಸಿಕೊಂಡಿದ್ದಾರೆ. ಅದರಲ್ಲೂ, ತೇಜಸ್ವಿಯವರ ಅಭಿಮಾನಿಗಳಾಗಿದ್ದಾರೆ.

ಬಹಳ ಹಿಂದೆ ಕಾರಟಗಿಯಿಂದ ನನಗೆ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಹೋಗದ ನಾನು, ಸಂಘದ ಹೆಸರು ಕೇಳಿ ಕುತೂಹಲದಿಂದ ಹೋಗಿದ್ದೆ. ಆ ಪುಟ್ಟ ಊರಿನ ತರುಣರು ಸೇರಿ ಸಂಘಟನೆ ಕಟ್ಟಿಕೊಂಡಿದ್ದರು, ಎಲ್ಲರೂ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದರು.
ನನ್ನ ತಮ್ಮ ಕಲೀಮುಲ್ಲಾ ಕೂಡ ಪಿಯುಸಿಯಲ್ಲಿ ‘ಕರ್ವಾಲೊ’ ಓದಿದವನು. ಬಳಿಕ ತೇಜಸ್ವಿ ಹುಚ್ಚು ಹಿಡಿಯಿತು. ಅವರ ಸಾಹಿತ್ಯದ ಮೇಲೆ ಪಿಎಚ್.ಡಿ ಮಾಡಿದನು. ಅವರಂತೆಯೇ ವಿನೋದದಿಂದ ಕೂಡಿದ ಬರಹ ಬರೆದು ಲೇಖಕನಾದನು. ಅವರಂತೆಯೇ ಫೋಟೊಗ್ರಫಿಯಲ್ಲಿ ಆಸಕ್ತಿ ಬೆಳೆಸಿಕೊಂಡನು. ತೇಜಸ್ವಿ ಓದು ಅವನ ಬದುಕನ್ನೇ ಬದಲಿಸಿತು.

ಇವತ್ತಿಗೂ ಐಟಿ-ಬಿಟಿ ಕ್ಷೇತ್ರಗಳಲ್ಲಿ ಎಂಜಿನಿಯರುಗಳಾಗಿ ದುಡಿವ ಹೊಸ ತಲೆಮಾರಿನ ಅನೇಕರು, ಬೇರಾವ ಲೇಖಕರ ಬಗ್ಗೆಯೂ ತೋರದ ಒಲವನ್ನು ತೇಜಸ್ವಿ ಬಗ್ಗೆ ಬೆಳೆಸಿಕೊಂಡಿದ್ದಾರೆ. ಪುಸ್ತಕ ಮಾರಾಟಗಾರರಲ್ಲಿ ಮಾತಾಡಿದರೆ, ಅತ್ಯಂತ ಹೆಚ್ಚು ಮಾರಾಟವಾಗುವ ಪುಸ್ತಕಗಳು ತೇಜಸ್ವಿಯವರವು; ಅದರಲ್ಲೂ, ತರಣರು ಅವನ್ನು ಖರೀದಿಸುತ್ತಾರೆಂದು ಹೇಳುತ್ತಾರೆ.
ಈ ಎಲ್ಲ ಘಟನೆಗಳು ಒಂದು ಸತ್ಯವನ್ನು ಹೇಳುತ್ತವೆ. ಅದೆಂದರೆ, ತೇಜಸ್ವಿಯವರ ಬರಹ ಹೊಸ ತಲೆಮಾರಿನ ಜನತೆಗೆ ಬೇರಾವುದೇ ಲೇಖಕರಿಗಿಂತ ಹೆಚ್ಚು ಲಿಂಕ್ ಆಗಿದೆ. ಮಾತ್ರವಲ್ಲ, ಅವರ ಆಲೋಚನಾ ಕ್ರಮ, ಜೀವನ ವಿಧಾನ ಬದಲಿಸಿದೆ. ಕನ್ನಡ ಓದುಗರ ಲೋಕವನ್ನು ವಿಸ್ತರಿಸಿದೆ.

ಪ್ರಶ್ನೆಯೆಂದರೆ, ಹೊಸ ತಲೆಮಾರನ್ನು, ಅದರಲ್ಲೂ ತರುಣರನ್ನು ತೇಜಸ್ವಿ ಹೇಗೆ ಮತ್ತು ಯಾಕಾಗಿ ಆವರಿಸಿಕೊಂಡರು? ಜಾತಿ ವಿನಾಶದ ಬಗ್ಗೆ ಆಸ್ಥೆಯುಳ್ಳ, ಸಮಾಜವಾದಿ, ರೈತ ಚಳವಳಿ ಪರವಾದ, ನವ್ಯ ಸಾಹಿತ್ಯದ ಬ್ರಾಹ್ಮನಿಕಲ್ ಆಯಾಮ ಹಾಗೂ ಕಮ್ಯುನಿಸಂ ವಿರೋಧವುಳ್ಳ ಲೇಖಕನೊಬ್ಬನನ್ನು ಈ ತರುಣರು ಪರಿಸರದ ವಿಷಯದಲ್ಲಿ ಮಾತ್ರ ಹೇಗೆ ಸ್ವೀಕರಿಸಿದರು?
ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಯರವಾಡಾ ಜೈಲಿನಿಂದ ಗಾಂಧಿ ಬರೆದ ಉರ್ದು ಪತ್ರ ಮತ್ತು ನಾಲ್ವಡಿಯವರ ಮೂರು ಭಾಷೆಯ ಆಹ್ವಾನ ಪತ್ರ
ಇದರ ಉತ್ತರ, ಪರಿಸರದ ಜೊತೆಗಿನ ಸಂಬಂಧಕ್ಕಾಗಿ ಮನೆ ಬಿಟ್ಟು ಹೊರಬರಬೇಕು ಮತ್ತು ಕಾಡುಮೇಡುಗಳನ್ನು ಅಲೆಯಬೇಕು. ಇದು ಕೆಲ ಮಟ್ಟಿಗೆ ಜಾತ್ಯತೀತ ಗುಣವನ್ನೂ ಪ್ರೇರಿಸುತ್ತದೆ. ಗಂಡು-ಹೆಣ್ಣಿನ ಪ್ರೇಮವನ್ನೂ ಬಂಡುಕೋರತನವಾಗಿ ಕಾಣಿಸುತ್ತದೆ. ಪರಂಪರೆ, ಸಂಸ್ಕೃತಿ, ಧರ್ಮಗಳ ಹೆಸರಲ್ಲಿ ಹೊಸ ತಲೆಮಾರನ್ನು ಶ್ರದ್ಧೆ, ನಿಷ್ಠೆ, ವಿಧೇಯತೆಗೆ ಪ್ರೇರೇಪಿಸುವ ಬರಹಕ್ಕಿಂತ; ನಿರಂಕುಶಮತಿಗಳಾಗಿ ತಿರುಗುವ, ಜೀವನವನ್ನು ಎಂಜಾಯ್ ಮಾಡುವ, ಪ್ರೇಮಿಸುವ ಕಾರ್ಯಗಳನ್ನು, ಹಳೇ ಸಮಾಜದ ವಿರುದ್ಧ ದಂಗೆಯೇಳುವ ಮತ್ತು ಹೊಸ ಸಮಾಜದ ಕನಸನ್ನು ಕಾಣುವ ಪರಿಕಲ್ಪನೆಯನ್ನು ಅದು ಮುಂದಿಟ್ಟಿತು. ಯಾವುದೇ ಚಳವಳಿಯ ಭಾಗವಾಗುವುದಕ್ಕಿಂತ, ವೈಯಕ್ತಿಕ ನೆಲೆಯಲ್ಲಿ ಅರಾಜಕತೆಗೆ ಹತ್ತಿರವಾದ ಸ್ವಚ್ಛಂದತೆಯಲ್ಲಿ ವಿಹರಿಸಲು ಪ್ರೇರೇಪಿಸಿತು. ಇದರಲ್ಲಿ ಕಾಡು ತಿರುಗುವುದೂ ಒಂದು. 20ರ ಹರೆಯದ, ಬಿ.ಎ ಫೇಲಾದ ಹಾಸನ ಭಾಗದ ಹುಡುಗನೊಬ್ಬ ಧರಿಸಿದ ಟೀಶರ್ಟ್ ಬರಹವು ಇದರ ಭಾಗವಾಗಿ ಒಡಮೂಡಿದೆ ಅನ್ನಿಸಿತು. ತೇಜಸ್ವಿ ಈ ಕಾರಣಕ್ಕೆ ತತ್ವಶಾಸ್ತ್ರೀಯ ಚಿಂತನೆಯನ್ನು ಮಾಡಬಲ್ಲ ಗಂಭೀರ ಓದುಗರ ಲೇಖಕರೂ ಹೌದು; ಅಷ್ಟು ಗಂಭಿರವಲ್ಲದ, ಆದರೆ ಸಾಂಪ್ರದಾಯಿಕ ನಿಯಮ ಮುರಿಯುತ್ತ ತಮಗೆ ಬೇಕಾದಂತೆ ಬದುಕಲು ಯತ್ನಿಸುವ ಹೊಸ ತಲೆಮಾರಿನ ಲೇಖಕರೂ ಹೌದು.
ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಇದು ಮುತ್ತಿನ ಚೆಂಡು, ಇದು ನೀಲಮ್ಮ ಬಾವಿ, ಇದು ಜೋಡಿ ಸರ್ಪ, ಇದು ಒಂಟಿ ಸರ್ಪ'
ತೇಜಸ್ವಿ ಬರಹಗಳನ್ನು ಅತಿ ಹೆಚ್ಚು ಬಳಸಿಕೊಂಡಿರುವುದು ಅರಣ್ಯ ಇಲಾಖೆ. ನೇಚರ್ ಕ್ಯಾಂಪುಗಳಲ್ಲಿ, ಚಾರಣ ಮಾಡುವ ಜಾಗಗಳಲ್ಲಿ ತೇಜಸ್ವಿ ಬರಹದ ಸಾಲುಗಳನ್ನು ನೋಡಬಹುದು. ಕನ್ನಡದ ಗಂಭೀರ ಲೇಖಕರಲ್ಲಿ ಹೀಗೆ ಹಲವು ಸ್ತರಗಳಿಗೆ ಹರಿದುಹೋದ ಲೇಖಕರು ಬಹಳ ಕಡಿಮೆ.