ನುಡಿಚಿತ್ರ | ಧೀರೇಂದ್ರ ಗೋಪಾಲರ ಟಿಪ್ಪು ಪಾತ್ರ ಮತ್ತು ಸೀತಾರಾಮ ಶಾಸ್ತ್ರಿಗಳ 'ಟಿಪ್ಪೂ ಸುಲ್ತಾನ್' ನಾಟಕ

ಬ್ರಿಟಿಶರ ಕಾಲದಲ್ಲೇ ಅವರ ವೈರಿಯ ಕತೆಯ ನಾಟಕ ಮಾಡುವುದು ಸುಲಭವಾಗಿತ್ತು ಮತ್ತು ಈಗ ಕಷ್ಟವಾಗಿದೆ ಎಂಬುದೇ ನಮ್ಮ ಪ್ರಜಾಪ್ರಭುತ್ವದ ಸ್ವರೂಪವನ್ನು ನುಡಿಯುತ್ತಿದೆ. ಯಕ್ಷಗಾನದಂತಹ ಕಲೆಯು ಮತೀಯವಾದವನ್ನು ಹರಡುವ ಮಾಧ್ಯಮವಾಗಿ ಬದಲಾಗಿರುವ ಪ್ರದೇಶದಲ್ಲಿ ಇಂತಹ ರಂಗಪ್ರಯೋಗಗಳು 70 ವರ್ಷದ ಹಿಂದೆಯೇ ನಡೆದಿದ್ದು ವಿಶೇಷ

ಟಿಪ್ಪು 18ನೇ ಶತಮಾನದ ಕೊನೆಯಲ್ಲಿ ಹುತಾತ್ಮನಾದವನು. 19ನೇ ಶತಮಾನವಿಡೀ ಟಿಪ್ಪುವಿನ ಲಾವಣಿಗಳು ಕರ್ನಾಟಕದ ನಾನಾ ಭಾಗದಲ್ಲಿ ಹುಟ್ಟಿ ಹಾಡಲ್ಪಟ್ಟವು. 19ನೇ ಶತಮಾನದಲ್ಲಿ ಟಿಪ್ಪುವಿನ ಬದುಕನ್ನು ಕುರಿತ ನಾಟಕಗಳು ರಚಿತವಾದ ಮತ್ತು ಪ್ರದರ್ಶನಗೊಂಡ ಮಾಹಿತಿ ಸಿಗುವುದಿಲ್ಲ. ಒಡೆಯರು ಟಿಪ್ಪು-ಹೈದರರನ್ನು ತಮ್ಮ ರಾಜಕೀಯ ಎದುರಾಳಿ ಎಂದು ಭಾವಿಸಿದ್ದರಿಂದಲೂ, ಬ್ರಿಟಿಶರು ಅಪ್ಪ-ಮಕ್ಕಳ ಬಗ್ಗೆ ಮಚ್ಚರ ಇಟ್ಟುಕೊಂಡಿದ್ದರಿಂದಲೂ, ಮೈಸೂರು ಭಾಗದಲ್ಲಿ ಇದು ಸಾಧ್ಯವೂ ಇರಲಿಲ್ಲ. ಆದರೆ 20ನೇ ಶತಮಾನದಲ್ಲಿ ರಾಷ್ಟ್ರೀಯ ಚಳವಳಿ ಶುರುವಾದ ಬಳಿಕ, ಚೆನ್ನಮ್ಮ, ಟಿಪ್ಪು, ಸಂಗೊಳ್ಳಿ ರಾಯಣ್ಣ ಮೊದಲಾದ ಬ್ರಿಟಿಶ್ ವಿರೋಧಿಗಳೆಲ್ಲರೂ ನಾಟಕ ಮತ್ತು ಸಿನಿಮಾ ವಸ್ತುವಾದರು. ಬ್ರಿಟಿಶರ ನಿರ್ಬಂಧದಲ್ಲೂ ನಾಟಕ-ಸಿನಿಮಾ ತಯಾರಾದವು ಮತ್ತು ನಡೆದವು. ಇವು ಸ್ವಾತಂತ್ರ್ಯಾನಂತರ ಐವತ್ತು ವರ್ಷಗಳ ಕಾಲವೂ ತಯಾರಾದವು ಮತ್ತು ಪ್ರದರ್ಶನಗೊಂಡವು.  ಬ್ರಿಟಿಶರ ಜೊತೆ ಟಿಪ್ಪು ವಾಗ್ವಾದ ಮಾಡುವ ದೃಶ್ಯಗಳು ಶಾಲಾ-ಕಾಲೇಜುಗಳಲ್ಲಿ ಜನಪ್ರಿಯವಾಗಿದ್ದವು. ಕೆಲವು ನಟರು ಮೀರ್‌ ಸಾದಿಕ್, ಪೂರ್ಣಯ್ಯ, ಲಾರ್ಡ್ ಕಾರ್ನವಾಲಿಸ್, ಟಿಪ್ಪು ಪಾತ್ರಗಳಿಗೆ ಹೆಸರಾಗಿದ್ದರು. ಇವುಗಳಲ್ಲಿ ಮುಖ್ಯವಾದವು ಹಲಗೇರಿ ನಾಟಕ ಮಂಡಳಿಯ 'ಟಿಪ್ಪೂ ಸುಲ್ತಾನ್' ನಾಟಕ.

Image
ಹುಲಿಮನೆ ಸೀತಾರಾಮ ಶಾಸ್ತ್ರಿ | ಚಿತ್ರ ಕೃಪೆ: ಭಾರತಿ ಹೆಗಡೆ

ಈ ಹಿನ್ನೆಲೆಯಲ್ಲಿ, ಟಿಪ್ಪು ಪಾತ್ರ ಮಾಡುತ್ತಿದ್ದ ಸಿದ್ದಾಪುರದ ಹುಲಿಮನೆ ಸೀತಾರಾಮ ಶಾಸ್ತ್ರಿಗಳನ್ನು ಸ್ಮರಿಸಬೇಕಿದೆ. 'ಮೈಸೂರು ಹುಲಿ' ಎಂದು ಹೆಸರಾಗಿದ್ದ ಸುಲ್ತಾನನ ಪಾತ್ರಧಾರಿಯ ಊರ ಹೆಸರಲ್ಲಿಯೂ ಹುಲಿ ಇರುವುದು ಗಮನಾರ್ಹ. ಆಗ ಬ್ರಾಹ್ಮಣ ನಟನಿಗೆ ಮುಸ್ಲಿಂ ಸುಲ್ತಾನನ ಪಾತ್ರ ವಹಿಸುವುದು ಕೂಡ ಸಮಸ್ಯೆ ಆಗಿರಲಿಕ್ಕಿಲ್ಲ. ಯಾಕೆಂದರೆ, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೆಂದು ಜನಪ್ರೀತಿ ಗಳಿಸಿದ್ದನು ಮತ್ತು ಈಗಿನಂತೆ ಕೋಮುವಾದಿಗಳ ದೂಷಣೆಗೆ ತುತ್ತಾಗಿರಲಿಲ್ಲ. ಟಿಪ್ಪು ಬಗ್ಗೆ ವಿಮರ್ಶಾತ್ಮಕ ನೋಟವಿದ್ದರೂ, ಎಂ ಎಸ್ ಪುಟ್ಟಣ್ಣನವರು ಮತ್ತು ತಿ ತಾ ಶರ್ಮರು ಬರೆದಿರುವ ಲೇಖನಗಳೇ ಇದಕ್ಕೆ ಸಾಕ್ಷಿ. ಬಹುಶಃ ಶೃಂಗೇರಿ ಮಠಕ್ಕೆ ಟಿಪ್ಪು ತೋರಿದ ಭಕ್ತಿ ಮತ್ತು ಪೋಷಣೆಗಳು, ಸ್ಮಾರ್ತ ಬ್ರಾಹ್ಮಣರಲ್ಲಿ ಆದರವನ್ನು ಬೆಳೆಯಿಸಿರುವ ಸಾಧ್ಯತೆಯೂ ಇದೆ. ಶೃಂಗೇರಿ ಮಠಕ್ಕೆ ಸಂಬಂಧವಿದ್ದ ಕಾದಂಬರಿಕಾರ, ಪತ್ರಕರ್ತ ವೀರಕೇಸರಿ ಸೀತಾರಾಮಶಾಸ್ತ್ರಿಯವರು 'ದೌಲತ್' ಹೆಸರಿನಲ್ಲಿ ಟಿಪ್ಪುವಿನ ಮೇಲೆ ಕಾದಂಬರಿ ಬರೆದರು.

ಸದ್ಯಕ್ಕೆ ಸಿಗುತ್ತಿರುವ ಕಂಪನಿ ನಾಟಕಗಳು ಎರಡು. ಮೊದಲನೆಯದು, ಜಮಖಂಡಿಯ ಗಜಾನನ ನಾಟಕ ಮಂಡಳಿಯವರು ಪ್ರದರ್ಶಿಸುತ್ತಿದ್ದ 'ಟಿಪ್ಪು ಸುಲ್ತಾನ್.' ಇದರಲ್ಲಿ ಚಿತ್ರನಟರಾದ ಧೀರೇಂದ್ರ ಗೋಪಾಲರು ಟಿಪ್ಪುವಿನ ಪಾತ್ರ ವಹಿಸುತ್ತಿದ್ದರು. ಎರಡನೆಯದು ಹುಲಿಮನೆ ಸೀತಾರಾಮ ಶಾಸ್ತ್ರಿಗಳ 'ಟಿಪ್ಪೂ ಸುಲ್ತಾನ್.' ಹುಲಿಮನೆಯವರ ನಾಟಕಕ್ಕೆ ಬ್ರಿಟಿಶರು ನಿರ್ಬಂಧ ಹೇರಿದ್ದರು ಮತ್ತು ಅದರ ಟೆಂಟನ್ನು ಸುಡುವ ಪ್ರಕರಣವೂ ನಡೆದಿತ್ತು. ಆದರೂ ನಾಟಕವು ಜನಪ್ರಿಯವಾಗಿತ್ತು. ಹುಲಿಮನೆಯವರು ಮೂಡುಬಿದಿರೆಯಲ್ಲಿ 1951ರಲ್ಲಿ ಪ್ರದರ್ಶನ ಮಾಡಿದ ನಾಟಕದ ಕರಪತ್ರವು ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಒಳಗೊಂಡಿದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಪಾನಮತ್ತ ಮಹಿಳೆ ಮತ್ತು ಸಂಭಾಳಿಸುವ ಪುರುಷ

ಕರಪತ್ರವು ಕರ್ನಾಟಕ ಮಾತೆಗೂ ಸ್ವಾತಂತ್ರ್ಯ ಲಕ್ಷ್ಮಿಗೂ ಜೈಕಾರ ಹಾಕುವುದರೊಂದಿಗೆ ಶುರುವಾಗುತ್ತದೆ. ಮುನ್ನಡೆದು, ಟಿಪ್ಪುವಿನ ಗುಣಗಾನವನ್ನು ಮಾಡುತ್ತದೆ: "ಕರ್ನಾಟಕ ಸ್ವಾತಂತ್ರ್ಯಕ್ಕೆ ಆತ್ಮಾರ್ಪಣೆ ಮಾಡಿದ, ಶ್ರೀರಂಗನ ಪರಮಭಕ್ತ, ಮಹಮ್ಮದೀಯ ಬಾಂಧವ, ಹಿಂದುಗಳ ಮಾನರಕ್ಷಣೆಗಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟ, ಇಂಗ್ಲಿಶರು ಭಾರತವನ್ನೇ ಬಿಟ್ಟುಹೋಗಬೇಕೆಂದು ಹೋರಾಡಿದ ವೀರ, ಸಶಸ್ತ್ರನಾದರೂ ಹೆಬ್ಬುಲಿಯನ್ನು ಬರಿಗೈಲಿ ಸೀಳಿ ಒಗೆದ ಧೀರ! ವೀರ!! ಶೂರ!!! ಇವನ ಚರಿತ್ರೆಯನ್ನು ಕಣ್ಣಾರೆ ಕಂಡು ಆನಂದಿಸಿರಿ...’’ ಕರಪತ್ರದ ಕೊನೆಯಲ್ಲಿ, "ರಂಗದ ಮೇಲೆ ಬರುವ ಯೂರೋಪಿಯನರೂ ಸಹ ಕನ್ನಡ ಮಾತಾಡುತ್ತಾರೆ," ಎನ್ನುವ ವಿಶೇಷ ಸೂಚನೆಯೂ ಇದೆ.

1. ಈ ಕರಪತ್ರದಲ್ಲಿ ನಾಟಕದ ಕಲಾಭಿವ್ಯಕ್ತಿಯು ಮುಖ್ಯವಾಗಿಲ್ಲ. ಬದಲಿಗೆ, ಚರಿತ್ರೆ ಮುಖ್ಯವಾಗಿದೆ. ಅದನ್ನು ಪ್ರೇಕ್ಷಕರು ಕಣ್ಣಾರೆ ಕಂಡು ಆನಂದಿಸಬೇಕೆಂದು ಸೂಚಿಸಲಾಗಿದೆ. ಇದು - ಟಿಪ್ಪುವಿನ ಚರಿತ್ರೆಯಿಂದಲೇ ನಾಟಕಕ್ಕೆ ಶಕ್ತಿ, ನಟರಿಂದಲ್ಲ ಎಂಬ ನಿಲುವುಳ್ಳದ್ದಾಗಿದೆ. ಯಾಕೆಂದರೆ, ಕರಪತ್ರದಲ್ಲಿ ಯಾರು ಯಾವ ಪಾರ್ಟನ್ನು ಮಾಡುತ್ತಾರೆ ಎಂಬ ಕಲಾವಿದರ ವಿವರಗಳನ್ನು ಕೊಡಲಾಗಿಲ್ಲ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಇದು ಮುತ್ತಿನ ಚೆಂಡು, ಇದು ನೀಲಮ್ಮ ಬಾವಿ, ಇದು ಜೋಡಿ ಸರ್ಪ, ಇದು ಒಂಟಿ ಸರ್ಪ'

2. ಇಲ್ಲಿ, ಕರ್ನಾಟಕ ಮತ್ತು ಭಾರತದ ಸ್ವಾತಂತ್ರ್ಯವು ಸಮಾನವಾಗಿ ಮುಖ್ಯವಾಗಿದೆ. ಕರ್ನಾಟಕವು ಏಕೀಕರಣಗೊಂಡಿರದ ಕಾಲದಲ್ಲಿ ಈ ಆಶಯವು ಪ್ರಕಟವಾಗಿರುವುದು ಅರ್ಥಪೂರ್ಣವಾಗಿದೆ. ಕಂಪನಿಯು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಕರಾವಳಿಯಲ್ಲಿ ಈ ಕರಪತ್ರ ಹೊರಡಿಸಿದೆ ಎಂಬುದು ಗಮನಾರ್ಹ.

3. ಕಂಪನಿಯ ಮುಂದಿನ ನಾಟಕವು 'ಹರಿಶ್ಚಂದ್ರ’ವಾಗಿದ್ದು, ಇದು ಕೂಡ ದುಷ್ಟರಿಂದ ರಾಜ್ಯ ಕಳೆದುಕೊಂಡು ಕಷ್ಪಪಡುವ ದೊರೆಯೊಬ್ಬನ ಕತೆಯೇ ಆಗಿದೆ.

4. ಟಿಪ್ಪುವಿನ ವ್ಯಕ್ತಿತ್ವದ ಮೂರು ಸಂಗತಿಗಳು ಇಲ್ಲಿ ನಮೂದಾಗಿವೆ. ಒಂದು, ಸ್ವಾತಂತ್ರ್ಯಕ್ಕಾಗಿ ಆತ ಮಾಡಿದ ಆತ್ಮಾರ್ಪಣೆ; ಮುಸ್ಲಿಮನಾಗಿದ್ದೂ ಶ್ರೀರಂಗನ ಪರಮಭಕ್ತನಾಗಿದ್ದು, ಹಿಂದೂಗಳ ಮಾನರಕ್ಷಣೆಗಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟಿದ್ದು. ಎರಡು, ಕ್ವಿಟ್ ಇಂಡಿಯಾ ಚಳವಳಿಗೆ ನೂರೈವತ್ತು ವರ್ಷಗಳ ಹಿಂದೆ ಇಂಗ್ಲೀಶರು ಭಾರತದಿಂದ ತೊಲಗಿಸಲು ಸಂಕಲ್ಪ ಮಾಡಿದ್ದು ಹಾಗೂ ಮೂರನೆಯದು, ವೈಯಕ್ತಿಕವಾಗಿ ಹೆಬ್ಬುಲಿಯನ್ನು ಕೊಲ್ಲುವ ಶೌರ್ಯ ಪ್ರದರ್ಶನ ಮಾಡಿದ್ದು. ಈ ಶೌರ್ಯವನ್ನು "ಧೀರ! ವೀರ!! ಶೂರ!!!" ಎಂಬ ಸಮಾನಾರ್ಥಕವಾದಿ ಮೂರು ಶಬ್ದಗಳಲ್ಲಿ ಕ್ರಮವಾಗಿ ಆಶ್ಚರ್ಯಚಿಹ್ನೆಗಳನ್ನು ಹೆಚ್ಚಿಸುತ್ತ ಪ್ರಕಟಿಸಲಾಗಿದೆ.

Image

ಈಗ ಈ ಬಗೆಯ ಕರಪತ್ರವನ್ನು ಹೊರಡಿಸುವುದು ಮತ್ತು ನಾಟಕವನ್ನು ಆಡುವುದು ಸವಾಲಿನ ಸಂಗತಿಯಾಗಿದೆ. ಇದು ಕರ್ನಾಟಕದ ಕೋಮುವಾದವು ಮಾಡಿರುವ ಧ್ರುವೀಕರಣದ ಆಳವನ್ನು ಹೇಳುತ್ತಿದೆ. ಕಲಾಭಿವ್ಯಕ್ತಿಯ ಸ್ವಾತಂತ್ರ್ಯವು ಎಷ್ಟರಮಟ್ಟಿಗೆ ಕುಗ್ಗಿಹೋಗಿದೆ ಎಂಬುದನ್ನು ಸೂಚಿಸುತ್ತಿದೆ. ಬ್ರಿಟಿಶರ ಕಾಲದಲ್ಲೇ ಅವರ ವೈರಿಯ ಕತೆಯನ್ನು ನಾಟಕವಾಗಿ ಆಡುವುದು ಸುಲಭವಾಗಿದ್ದು, ಈಗ ಕಷ್ಟವಾಗಿರುವುದೇ ನಮ್ಮ ಪ್ರಜಾಪ್ರಭುತ್ವದ (ಡೆಮಾಕ್ರಸಿ) ಸ್ವರೂಪವನ್ನೂ ನುಡಿಯುತ್ತಿದೆ. ಯಕ್ಷಗಾನದಂತಹ ಕಲೆಯು ಮತೀಯವಾದವನ್ನು ಹರಡುವ ಮಾಧ್ಯಮವಾಗಿ ಬದಲಾಗಿರುವ ಪ್ರದೇಶದಲ್ಲಿ ಈ ನಾಟಕವು 70 ವರ್ಷಗಳ ಹಿಂದೆ ನಡೆದಿರುವುದು, ಇವೆಲ್ಲಕ್ಕೂ ವಿಷಾದದ ದನಿಯನ್ನು ಹಿನ್ನೆಲೆಯಲ್ಲಿ ನುಡಿಸುವಂತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180