ನುಡಿಚಿತ್ರ | ಚಿಂಚಲಿಯ ಮಾಯಕ್ಕದೇವಿ ಜಾತ್ರೆಯಲ್ಲಿ ಕಂಡ ಕುದುರೆಗಳ ಕತೆ

ಪ್ರಾಣಿಗಳಿಗೆ ಅವುಗಳ ಮಾಲೀಕರಿಂದ ಹೆಸರು ಬರುವುದು ಸಹಜ. ಆದರೆ, ಮನುಷ್ಯರ ಹೆಸರಿಗೆ ಪ್ರಾಣಿಗಳೂ ಕಾರಣವಾಗುವುದು ನಿಜಕ್ಕೂ ವಿಶೇಷ. ಇದೇ ಕಾರಣಕ್ಕೆ, ಬಹುತೇಕ ವಣಿಕರ ಮನೆತನದ ಹೆಸರುಗಳಲ್ಲಿ ಅವರಿಗೆ ಇಷ್ಟವಿದ್ದೋ ಇಲ್ಲದೆಯೋ, ಕೋಣನ, ಕುದುರೆಕಾರ, ಎತ್ತಿನವರ, ಎಂಟೆತ್ತಿನವರ, ಕತ್ತಿ ಇತ್ಯಾದಿ ಅಡ್ಡ ಹೆಸರು ಸೇರಿಕೊಂಡಿವೆ

ನಾನು ತಿರುಗಾಡಿದ ಕರ್ನಾಟಕದ ಜಾತ್ರೆಗಳಲ್ಲಿ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕನದೂ ಒಂದು. ಅಲ್ಲಿನ ಮೂರು ವಿಶೇಷತೆಗಳೆಂದರೆ, ಜನ ಅರಿಸಿಣದಲ್ಲಿ ಮಿಂದಂತೆ ಹಳದಿ ಭಂಡಾರವನ್ನು ಎರಚುತ್ತ ಇಡೀ ಜಾತ್ರೆ ಪೀತವರ್ಣದಲ್ಲಿ ಮುಳುಗಿಹೋಗುವುದು, ಮಹಿಳೆಯರು ಲಾಠಿ ಹಿಡಿದು ಆವೇಶಭರಿತರಾಗಿ ರಣಭಂಗಿಯಲ್ಲಿ ಕುಣಿಯುವುದು ಹಾಗೂ ಗಂಡಸರು ಬೆನ್ನ ಮೇಲೆ ಕುದುರೆಯ ಚಿತ್ರವಿರುವ ಅಂಗಿ ಧರಿಸುವುದು.

ಯಾವುದೇ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಅದೆಷ್ಟೋ ಕಾಲದಿಂದ ಬೇರೆ-ಬೇರೆ ಕ್ರಿಯಾಚರಣೆಗಳು ಸೇರಿಹೋಗಿರುತ್ತವೆ. ಅವುಗಳ ನಡುವೆ ಯಾವುದೋ ತಂತುಗಡಿಯದ ಸಾಂಕೇತಿಕ ಸಂಬಂಧವೂ ಇರುವುದು ಸಾಧ್ಯ. ಆದರೆ, ಆ ಸಂಬಂಧವನ್ನು ಇನ್ನೊಂದು ಕಾಲದಲ್ಲಿ ಖಚಿತಪ್ರಜ್ಞೆಯಲ್ಲಿ ಬಿಡಿಸಿ ವಿವರಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ, ಇಲ್ಲಿನ ಹಳದಿಗೂ ಲಾಠಿಧಾರಿ ಮಹಿಳೆಯರಿಗೂ ಕುದುರೆಯ ಚಿತ್ರಗಳಿಗೂ ಇರುವ ಅಂತರ್ ನಂಟಿನ ಗೂಢವನ್ನು ಇನ್ನೂ ಬಿಡಿಸಬೇಕಾಗಿದೆ. ಈ ಟಿಪ್ಪಣಿಯಲ್ಲಿ ಪಶುಪಾಲಕರಿಗೂ ಕುದುರೆಗೂ ಇರುವ ನಂಟಿನ ಮುಖವನ್ನಷ್ಟೇ ಗಮನಿಸಲಾಗಿದೆ.

ಚಿಂಚಲಿಯ ಜಾತ್ರೆಯಲ್ಲಿ ಮುಖ್ಯವಾಗಿ ಕರ್ನಾಟಕದ ಕುರುಬರು ಮತ್ತು ಮಹಾರಾಷ್ಟ್ರದ ಪಶುಪಾಲಕರಾದ ಧನಗರರು ಭಾಗವಹಿಸುವರು. ಮಾಯಕ್ಕನನ್ನು ಪೂಜಿಸುವ ಪೂಜಾರಿ ಕೂಡ ಕುರುಬರವನು. ಸಾಮಾನ್ಯವಾಗಿ ದನ, ಕುರಿ, ಮೇಕೆ ಮೊದಲಾದ ಕಾಲ್ನಡೆಗಳನ್ನು ಮೇಯಿಸುವವರು, ಅಲೆಮಾರಿಗಳು, ತಾವು ವಲಸೆ ಹೋದೆಡೆಯಲ್ಲೆಲ್ಲ ಅಡುಗೆಪಾತ್ರೆ, ದಿನಸಿ, ಬಿಡಾರಕ್ಕೆ ಬೇಕಾದ ಸಂರಂಜಾಮು ಹಾಗೂ ಬಟ್ಟೆಬರೆ-ಹೊದಿಕೆಗಳನ್ನು ಸಾಗಿಸಲು ಕುದುರೆಯನ್ನು ಬಳಸುವರು. ಈಗಲೂ ಬೆಳಗಾವಿ ಸೀಮೆಯಿಂದ ಹಂಪಿ ಸೀಮೆಗೆ ಬರುವ ಕುರಿಗಾಹಿಗಳ ಹಿಂಡಿನಲ್ಲಿ ಕುದುರೆ-ನಾಯಿ ಕಡ್ಡಾಯವಾಗಿರುತ್ತವೆ - ಒಂದು ಹೊರಲು, ಮತ್ತೊಂದು ಕಾಯಲು.

ನಮ್ಮ ಬಾಲ್ಯದಲ್ಲಿ ಕುರಿಯವರ ಹಿಂದೆ ಬರುತ್ತಿದ್ದ ಕಾರವಾನಿನಲ್ಲಿ ಹೇರು ಹೇರಿದ ಕುದುರೆಗಳೂ ಇದ್ದು, ಅವುಗಳ ಮೇಲೆ ನಡೆಯಲಾಗದ ಕೂಸು-ಕೋಳಿಗಳು ಇರುತ್ತಿದ್ದವು. ಅಲೆಮಾರಿಗಳಲ್ಲದಿದ್ದರೂ ಅಲೆಮಾರಿತನ ಅನಿವಾರ್ಯವಾಗಿದ್ದ ವಣಿಕರು, ಆಧುನಿಕಪೂರ್ವದ ಕಾಲದಲ್ಲಿ ಕುದುರೆಯ ಜೊತೆಗೆ ಎತ್ತು, ಕೋಣಗಳನ್ನು ಸಹ ಬಳಸುತ್ತಿದ್ದರು. ಇದರ ಪಳೆಯುಳಿಕೆಯಂತೆ ಅವರ ಮನೆತನದ ಹೆಸರುಗಳಲ್ಲಿ ಕೋಣನ, ಕುದುರೆಕಾರ, ಎತ್ತಿನವರ, ಎಂಟೆತ್ತಿನವರ, ಕತ್ತಿ ಇತ್ಯಾದಿ ಅಡ್ಡಹೆಸರು ಉಳಿದಿವೆ. ಲೇಖಕ ಕೊ ಚೆನ್ನಬಸಪ್ಪನವರ ಹೆಸರಿನ ಆದಿಯಲ್ಲಿರುವ ಅಕ್ಷರವು ಕೋಣನ ಮೇಲೆ ಹೇರನ್ನು ಒಯ್ಯುತ್ತಿದ್ದ ಕಾರಣದಿಂದ ಬಂದಿದೆ. ಪ್ರಾಣಿಗೆ ಅದರ ಮಾಲೀಕರಿಂದ ಹೆಸರು ಬರುವುದು ಸಾಮಾನ್ಯ. ಆದರೆ ಮನುಷ್ಯರ ಹೆಸರಿಗೆ ಪ್ರಾಣಿಗಳೂ ಕಾರಣವಾಗುವುದು ವಿಶೇಷ. 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ನಾಯಿಗುತ್ತಿ ಇದಕ್ಕೆ ಸಾಹಿತ್ಯದ ನಿದರ್ಶನ.

ಈ ಹಿನ್ನೆಲೆಯಲ್ಲಿ, ಚಿಂಚಲಿಯ ಜಾತ್ರೆಯಲ್ಲಿರುವ ಕುದುರೆಯ ಚಿತ್ರದ ಅಂಗಿಗಳಿಗೆ ಮೂರು ಕಾರಣ ಊಹಿಸಬಹುದು:

1. ವಲಸೆಗಾರ ಪಶುಗಾಹಿಗಳಾಗಿದ್ದ ಸಮುದಾಯಗಳು ವರ್ಷಕ್ಕೊಮ್ಮೆ ಸೇರುವ ಒಂದು ದಿನವೇ ಜಾತ್ರೆಯಾಗಿ ಪರಿಣಮಿಸಿದ್ದು, ಅವರನ್ನು ಈ ಸ್ಥಳಕ್ಕೆ ಮುಟ್ಟಿಸಿದ ಕುದುರೆಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿರಬಹುದು.

2. ಒಂದು ಕಾಲಕ್ಕೆ ಸೈನಿಕರಾಗಿದ್ದ ಸಮುದಾಯವೊಂದು ಪಶುಪಾಲನೆಗೋ ಬೇಸಾಯಕ್ಕೋ ಮರಳಿದಾಗ ಕುದುರೆಯನ್ನೂ ಉಳಿಸಿಕೊಂಡಿರಬಹುದು.

3. ಒಂದು ಪ್ರಾಣಿಸಂಸ್ಕೃತಿಗೆ ಹೊರಗಿನಿಂದ ಬಂದ ಕಾರಣದಿಂದ ಹುಟ್ಟಿಸುವ ವಿಸ್ಮಯವೂ ಅದರ ಸ್ಥಾನವನ್ನು ನಿರ್ಧರಿಸುತ್ತದೆ. ಡೈನೊಸರಸ್ ಬೊಂಬೆಗಳು ಈಗಿನ ಮಕ್ಕಳ ಆಟಿಕೆಗಳಲ್ಲಿ ಚಿತ್ರಪುಸ್ತಕಗಳಲ್ಲಿ ಪಡೆದಿರುವ ಸ್ಥಾನ ಗಮನಿಸಬೇಕು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಚರ್ಮದಿಂದ ಮಾಡಿದ ಚಪ್ಪಲಿಗಳ ಆರಾಧನೆ ಮತ್ತು ಹಿನ್ನೆಲೆ ಕಥನಗಳು

ಚಿಂಚಲಿಯ ಕುದುರೆಗಳು ಸಾಮಾನ್ಯವಾಗಿ ಹಳದಿ ಬಣ್ಣದ ದಾರದಿಂದ ನೇಯಲ್ಪಟ್ಟಿವೆ. ಕೆಲವು ಕಡೆ ಅವುಗಳ ಮೈ ಹಸಿರು/ಕೆಂಪು ಬಣ್ಣದಲ್ಲಿದ್ದು, ಕಾಲು ಬೇರೆ ಬಣ್ಣದಲ್ಲಿವೆ. ಕೆಲವು ಊರಲ್ಲಿ, ಕಾಡಲ್ಲಿ ಒಂಟಿಯಾಗಿವೆ. ಅಲ್ಲಿ ಮನುಷ್ಯರು ಕಾಣುತ್ತಿಲ್ಲ. ಹೆಚ್ಚಿನ ಕುದುರೆಗಳ ಬಾಗಿದ ಮುಂಗಾಲನ್ನು ಕಂಡರೆ... ಅವು ನಿಂತಿಲ್ಲ, ಚಲಿಸುತ್ತಿವೆ. ಅವು ಸವಾರರನ್ನು ಹೊತ್ತಿವೆ. ವಿಶೇಷವೆಂದರೆ, ಸವಾರರು ಕುದುರೆ ಹೋಗುತ್ತಿರುವ ಅಥವಾ ಹೋಗಬೇಕಾದ ದಿಕ್ಕನ್ನು ಸೂಚಿಸುತ್ತಿದ್ದಾರೆ.

ಜಗತ್ತಿನ ಎಲ್ಲ ನಾಗರಿಕತೆ ಮತ್ತು ಸಂಸ್ಕೃತಿಗಳು ಪ್ರಾಣಿ-ಪಕ್ಷಿಗಳ ಸಮೇತವಾಗಿಯೇ ಇವೆ. ಇವುಗಳಲ್ಲಿ ಸಿಂಹ, ಕುದುರೆ, ಗೂಳಿ, ಕೋಣ, ಆನೆ, ಹುಲಿ, ಜಿಂಕೆ, ಹಾವು, ಕತ್ತೆ, ಕುರಿ, ನವಿಲು, ಗಿಳಿ, ಹದ್ದು ಮುಖ್ಯವಾದವು. ಸಿಂಧೂ ಸಂಸ್ಕೃತಿಯಲ್ಲಿರುವ ಗೂಳಿಯ ಚಿತ್ರವು ಪ್ರಸಿದ್ಧವಾಗಿದೆ. ಭಾರತದ ಅಧಿಕೃತ ಚಿಹ್ನೆ ಅಶೋಕ ಚಕ್ರವೂ ಎಷ್ಟೊಂದು ಪ್ರಾಣಿಗಳನ್ನು ಒಳಗೊಂಡಿದೆ. ಯಾಕ್ ಪ್ರಾಣಿ ಟಿಬೆಟ್ ಸಂಸ್ಕೃತಿಯಲ್ಲಿ ಎದ್ದುಕಾಣುತ್ತದೆ. ಮರುಭೂಮಿಯ ಬದುಕಲ್ಲಿ ಒಂಟೆ ಮತ್ತು ಹೇಸರಗತ್ತೆಗಳು, ಅಲ್ಲಿನ ಕಾವ್ಯ, ಚಿತ್ರ, ಶಿಲ್ಪಗಳಲ್ಲಿ ಬಹಳ ಆದ್ಯತೆಯಿಂದ ಚಿತ್ರಿತವಾಗಿವೆ.

ನಾನು ಇಸ್ರೇಲ್, ಪ್ಯಾಲೆಸ್ತೇನ್, ಜೋರ್ಡಾನ್, ಈಜಿಪ್ಟ್‌ಗಳಿಗೆ ಹೋದಾಗ, ಕತ್ತೆಯ ಮೇಲೆ ಜನ ಸಾಮಗ್ರಿ ಸಾಗಿಸುವ, ತಮ್ಮ ಚರಿತ್ರೆ-ಪುರಾಣಗಳ ವ್ಯಕ್ತಿಗಳು ಕೂತಿರುವ ಶಿಲ್ಪ-ಚಿತ್ರಗಳನ್ನು ನೋಡಿದೆ. ಈಗಲೂ ಅಲ್ಲಿ ಹೇಸರಗತ್ತೆ ಬಹಳ ಜನಪ್ರಿಯ ಜಾನುವಾರು. ಸಮಾಜಕ್ಕೆ ಸರಕಿನ ಉತ್ಪಾದನೆ ಮತ್ತು ಸೇವೆಯಲ್ಲಿ ನೆರವಾಗುವ ಉಪಯುಕ್ತ ಪ್ರಾಣಿಗಳು ಕಲಾವಿದರ ವಸ್ತು, ಆರಾಧನೆಯ ಸ್ಥಾನವನ್ನು ಪಡೆಯುವುದು ಸಹಜ. ಆದರೆ, ಕಲಾವಿದರು ಆ ಪ್ರಾಣಿಯೊಟ್ಟಿಗೆ ಯಾವುದೇ ಉಪಯುಕ್ತ ಸಂಬಂಧವಿಲ್ಲದಿದ್ದಾಗಲೂ, ಅದನ್ನು ಚೆಲುವಿನ, ಕಾಮದ ಶಕ್ತಿಯ ಸಂಕೇತವಾಗಿ ಚಿತ್ರಿಸುತ್ತ ಹೋಗುವುದು ಇದೆ. ಎಂ ಎಫ್ ಹುಸೇನರಂತಹ ಚಿತ್ರಕಾರರು, ತಮ್ಮ ಬಾಳಿನ ಕೊನೆಯ ದಿನಗಳಲ್ಲಿ ಬೇರೆ-ಬೇರೆ ಬಗೆಯ ಕುದುರೆಗಳನ್ನು ಚಿತ್ರಿಸಿದರು. ಆದರೆ, ಚಿಂಚಲಿಯ ಕುದುರೆಗಳಿಗೆ ಹೀಗೆ ಕೇವಲ ಸೌಂದರ್ಯಾತ್ಮಕ ಆಯಾಮವಿಲ್ಲ. ಅವುಗಳ ಒಳಗೆ ಆ ಸಮುದಾಯದ ಚರಿತ್ರೆಯೂ ತೊಡಕಿಕೊಂಡಿದೆ.

ವಿಶೇಷವೆಂದರೆ, ಜಾತ್ರೆಯಲ್ಲಿ ಗುಡಿಯ ಆಡಳಿತದವರು ಸಾಕಿರುವ ಒಂದು ಮಜಬೂತಾದ ಕುದುರೆ ಬಿಟ್ಟರೆ, ಜನರ ಬಳಿ ಜೀವಂತ ಕುದುರೆ ಇರಲಿಲ್ಲ. ಹೆಚ್ಚಿನವರು ಎತ್ತಿನಬಂಡಿಯಲ್ಲಿ, ಕಾರು-ಟ್ಯಾಕ್ಟರುಗಳಲ್ಲಿ ಬಂದಿದ್ದರು. ಬಹುಶಃ ಒಂದು ಪ್ರಾಣಿಯನ್ನು ಕಳೆದುಕೊಂಡ ಕಾರಣದಿಂದಲೂ ಅದು ಹಳವಂಡದಂತೆ ಮುಖ್ಯಸ್ಥಾನದಲ್ಲಿ ಚಿತ್ರಿತವಾಗುತ್ತಿರಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app