ನುಡಿಚಿತ್ರ | ಕಾಳೇನಹಳ್ಳಿಯ ಮುದುಕಿ ಮತ್ತು ವರ್ತಮಾನದ ವಾಸ್ತವದ ಖಡ್ಗ

Nudichithra MAY 23

ಕಿವಿಯ ಆಭರಣವನ್ನು, ಅದು ಚಿನ್ನದ್ದೇ ಆಗಿದ್ದರೂ 'ಬೆಂಡೋಲೆ' ಎಂದು ಕರೆಯುವ ರೂಢಿ ಉಂಟು. ಹಿಂದಿನವರು ಓಲೆಗರಿಯಿಂದ ಮಾಡಿದ ಸುರುಳಿಯನ್ನು ಕಿವಿಗೆ ಇರಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ, ಕಿವಿತೂತವು ಮುಚ್ಚಬಾರದೆಂದು ಬೆಂಡನ್ನು ಇರಿಸಿಕೊಳ್ಳುವ ಅಭ್ಯಾಸ ಚಾಲ್ತಿಯಲ್ಲಿತ್ತು. ಹೀಗಾಗಿ, ಕಿವಿಯ ಒಡವೆಗೆ 'ಬೆಂಡೋಲೆ' ಎಂದು ಹೆಸರು ಬಂದಿತು

'ಪಂಪಭಾರತ'ದಲ್ಲಿ ಭೀಮನ ಜೊತೆ ಮಾತಾಡುತ್ತ ಹಿಡಿಂಬೆ, ಆ ಕಾಲದ ಒಂದು ಗಾದೆಮಾತನ್ನು ಉಲ್ಲೇಖಿಸುತ್ತಾಳೆ: "ಪಡೆ ನೋಡಲ್ ಬಂದವರಂ ಗುಡಿ ಹೊರೆಸಿದರ್." ಇದರ ಹಿನ್ನೆಲೆಯೆಂದರೆ, ಯಾರೋ ಒಬ್ಬ ತರುಣ, ಊರೊಳಗೆ ಹಾದುಹೋಗುತ್ತಿರುವ ದಂಡನ್ನು ನೋಡಲು ಕುತೂಹಲದಿಂದ ಬೀದಿಗೆ ಬಂದು ನಿಂತಿದ್ದನಂತೆ. ಅವನಿಗೆ ಗುಡಿ (ಸೈನ್ಯದ ಪತಾಕೆ) ಕೊಟ್ಟು, ಅವರು ಯುದ್ಧಕ್ಕೆ ಕರೆದುಕೊಂಡು ಹೋದರಂತೆ.

ನಿಜ ಬದುಕಿನಲ್ಲೂ ಹೀಗಾಗುತ್ತದೆ. ನಮಗೇ ಅರಿಯದೆ ನಮ್ಮ ಮೇಲೆ ಬೇರೆ ಯಾರೋ ಕೆಲಸ ಹೊರಿಸಿಬಿಡುತ್ತಾರೆ ಅಥವಾ ನಾವೇ ಏನನ್ನೋ ಮಾಡಲು ಹೋದರೆ ಮತ್ತೇನೋ ಆಗುವುದು. ಮೂಲ ಉದ್ದೇಶ ಮರೆತು ಅಥವಾ ಅದರ ಜೊತೆಯಲ್ಲಿ ಮತ್ತೊಂದು ಕೆಲಸದಲ್ಲಿ ತೊಡಗಿಬಿಡುತ್ತೇವೆ. ನಮ್ಮ ಹಳ್ಳಿಗಳಲ್ಲಿ ಕಳೆ ಕೀಳಲೆಂದೋ ಕುರಿ ಮೇಯಿಸಲೆಂದೋ ಹೋದವರು, ಬೆರಕೆಸೊಪ್ಪು ಮಡಿಲಲ್ಲಿ ತುಂಬಿಕೊಂಡು ಬಂದಂತೆ ಇದು. ಸಂಶೋಧನಾ ತಿರುಗಾಟಗಳಲ್ಲಿ ಇದು ನನ್ನ ಅನುಭವಕ್ಕೆ ಬಂದಿದೆ. ಸೂಫಿ, ನಾಥ, ಶಾಕ್ತ ಪಂಥಗಳ ಅಧ್ಯಯನಕ್ಕೆಂದು ಕ್ಷೇತ್ರಕಾರ್ಯಕ್ಕೆ ಹೋದೆ. ವಿಷಯಕ್ಕೆ ಸಂಬಂಧಪಡದ ಆಕರ್ಷಕ ಮಾಹಿತಿ ಸಿಕ್ಕು, ಹೊಸ ವಿಷಯಗಳಲ್ಲಿ ಆಸಕ್ತಿ ಹುಟ್ಟಿತು. 'ನಡೆದಷ್ಟೂ ನಾಡು' ಲೇಖನಗಳು, ಹೀಗೆ ಮುಖ್ಯಕತೆಯ ಭಾಗವಾಗಿ ಹುಟ್ಟಿದ ಉಪಕತೆಗಳು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಇವರು ಹಾಡನ್ನು ಮಾತ್ರವಲ್ಲ, ಬದುಕನ್ನೂ ಹಾಡುತ್ತಾರೆ

ಒಮ್ಮೆ ಕ್ಷೇತ್ರಕಾರ್ಯಕ್ಕೆ ಹೋದಾಗ ತೆಗೆದ ನನ್ನ ಚಿತ್ರಪಟಗಳ ಸಂಗ್ರಹವನ್ನು ತೆಗೆದು ನೋಡಿದೆ. ಅತಿ ಹೆಚ್ಚು ಪಟಗಳು ವೃದ್ಧರವಾಗಿದ್ದವು. ಯಾಕೆಂದು ತಿಳಿಯದು. ಅವರ ಅನುಭವ ಸಂಗ್ರಹದಲ್ಲಿ ನನ್ನ ವಿಷಯಕ್ಕೆ ಬೇಕಾದ ಮಾಹಿತಿ ಇರುತ್ತದೆಯೆಂದು ನಾನು ವಯಸ್ಸಾದವರನ್ನೇ ಹೆಚ್ಚು ಭೇಟಿ ಮಾಡಿರಬಹುದು. ವಯಸ್ಸಿನ ಒಂದು ಹಂತ ದಾಟಿದ ಬಳಿಕ ವೃದ್ಧರಲ್ಲಿ ಬರುವ ಮಗುತನ ನನ್ನನ್ನು ಆಕರ್ಷಿಸಿರಬಹುದು. ಬದುಕನೆಲ್ಲ ಮುಗಿಸಿ ಮರಣದ ಹೊಸ್ತಿಲಲ್ಲಿ ಇರುವ ಅವರಲ್ಲಿ ಕಾಣುವ ಸಮಾಧಾನ, ಪಕ್ವತೆ, ವಿವೇಕ ಆದರ ಹುಟ್ಟಿಸಿರಬಹುದು. ಈ ಅವಸ್ಥೆಯನ್ನು ನಾನೂ ಒಮ್ಮೆ ಮುಟ್ಟಬೇಕಲ್ಲ ಎಂಬ ಬೇಗುದಿ ಇರಬಹುದು. ಅಂತೂ, ಬಗೆಬಗೆಯ ವೃದ್ಧ-ವೃದ್ಧೆಯರ ಫೋಟೊಗಳು. ಈ ವೃದ್ಧರಲ್ಲಿ ನಿರ್ಗತಿಕರಿದ್ದಾರೆ. ಮನೆಯವರಿಂದ ಹೊರಹಾಕಲ್ಪಟ್ಟ ಅನಾಥರಿದ್ದಾರೆ. ತಮ್ಮ ಕೈಲಾಗದಿದ್ದರೂ ದುಡಿದು ತಿನ್ನಬೇಕೆಂಬ ಛಲವುಳ್ಳವರುಂಟು. ಮಕ್ಕಳನ್ನು ಕಳೆದುಕೊಂಡು, ಈ ಬದುಕಿನಲ್ಲೇನು ಅರ್ಥವಿದೆ ಎಂದು ವಿರಕ್ತರಾದವರಿದ್ದಾರೆ.

20 ವರ್ಷಗಳ ಹಿಂದಿರಬಹುದು. ನಾಥ ಪಂಥದ ಅಧ್ಯಯನಕ್ಕಾಗಿ ಅರಕಲಗೂಡಿನ ಕಾಳೇನಹಳ್ಳಿಗೆ ಹೋಗಿದ್ದೆ. ಅಲ್ಲಿರುವ ಜೋಗಿ ಸಮುದಾಯದ ಮನೆಗಳಿಗೆ ಭೇಟಿ ಕೊಟ್ಟು, ಅವರ ನಿತ್ಯ ಬದುಕಿನಲ್ಲಿ ನಾಥ ಪಂಥವು ಹೇಗೆ ರೂಪಾಂತರದಲ್ಲಿದೆ ಎಂದು ನೋಡುವುದು ನನ್ನ ಉದ್ದೇಶವಾಗಿತ್ತು. ಹಾಗೆ ತಿರುಗಾಡುವಾಗ ಬೀದಿಯಲ್ಲಿ ಒಬ್ಬರು ಮುದುಕಿ ಕೂತಿದ್ದರು. ಎಲೆಯಡಕೆ ಹಾಕಿ ಬಾಯಿ ಕೆಂಪಾಗಿತ್ತು. ಹಲ್ಲು ಕಪ್ಪು ಹಿಡಿದಿದ್ದವು. ತಲೆ ಎಂದು ಬಾಚಿದ್ದೋ ತಿಳಿಯದು. ರವಿಕೆ ಹರಿದಿತ್ತು. ಕುತ್ತಿಗೆಯ ಬಳಿ ಕಜ್ಜಿಯಿಂದ ಕೆರೆದು ಚರ್ಮ ದಡ್ಡುಗಟ್ಟಿ ಕಪ್ಪಗಾಗಿತ್ತು. ನನಗೆ ಕುತೂಹಲ ಹುಟ್ಟಿಸಿದ್ದು ಅಜ್ಜಿಯ ಕಿವಿಯಲ್ಲಿರುವ ಸುರುಳಿ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಟಿಪ್ಪು ಮೈಸೂರ ಹುಲಿ ಹೇಗಾದ' ಎಂಬ ಪ್ರಶ್ನೆಯ ಸುತ್ತ

ಕಿವಿಯ ಆಭರಣವನ್ನು, ಅದು ಚಿನ್ನದ್ದಾಗಿದ್ದರೂ 'ಬೆಂಡೋಲೆ' ಎಂದು ಕರೆಯುವರು. ಕಿವಿಗೆ ಹಿಂದಿನವರು ಓಲೆಗರಿಯಿಂದ ಮಾಡಿದ ಸುರುಳಿಯನ್ನು ಇರಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಕಿವಿತೂತವು ಮುಚ್ಚಬಾರದೆಂದು ಬೆಂಡನ್ನು ಇರಿಸಿಕೊಳ್ಳುತ್ತಿದ್ದರು. ಹೀಗಾಗಿ, ಕಿವಿಯ ಒಡವೆಗೆ 'ಬೆಂಡೋಲೆ' ಎಂದು ಹೆಸರು ಬಂದಿತು.

ಗೌರಿಪೂಜೆಗೆ ಒಯ್ಯುವ ಬಿಚ್ಚೋಲೆಯಲ್ಲಿ ಓಲೆಗರಿಯು ಈಗಲೂ ಬಳಕೆಯಾಗುತ್ತದೆ. ಓಲೆಯು ಗರತಿಯಾದವಳ ಪ್ರತೀಕ. ಮರವೊಂದರ ಎಲೆಯು ಮನುಷ್ಯರ ಆಭರಣವಾಗುವುದು ಯಾವ ಕಾಲದಿಂದ ನಡೆದುಬಂದಿದೆಯೋ, ಈಗ ಅಳಿದುಹೋಗಿದೆ. ತಾಡೋಲೆಯ ಮರಗಳೂ ಇಲ್ಲ. ಹೀಗಾಗಿ, ಅಜ್ಜಿಯ ಕಿವಿಯಲ್ಲಿದ್ದುದು ಓಲೆಗರಿಯಲ್ಲ, ಪ್ಲಾಸ್ಟಿಕ್ಕಿನ ಗರಿ.

ಅಜ್ಜಿಗೆ ಕಾಲಿರಲಿಲ್ಲ. ಹೀಗಾಗಿ, ಬೀದಿಯಲ್ಲಿ ಕೂತಿತ್ತು. ನನಗೆ, 'ಅಲ್ಲೇ ಕುಂತವರೇ' ಪದ್ಯ ನೆನಪಿಗೆ ಬಂದಿತು. ಆಕೆಯ ಹಿನ್ನೆಲೆ ವಿಚಾರಿಸಿದೆ. ಹೇಳಲಿಲ್ಲ. "ದೇವರಿದ್ದಾನೆ ಕಾಪಾಡ್ತಾನೆ," ಎಂದಳು. ಸೋಜಿಗ ಬರಿಸಿದ್ದು - ಬಂದದ್ದು ಬರಲಿ ಜಯಿಸುವೆ ಎಂಬ ಮುಖಭಾವದಲ್ಲಿದ್ದ ತುಂಟತನ, ಪ್ರಸನ್ನತೆ ಹಾಗೂ ಸಂತೋಷ.

ನಮ್ಮ ನಾಡಿನ ಪ್ರಾಚೀನ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಹುಡುಕಿಕೊಂಡು ಹೋದರೆ, ನಡುವೆ ಸಿಗುವ ಇಂತಹ ಜನ, ವರ್ತಮಾನದ ವಾಸ್ತವದ ಖಡ್ಗವನ್ನು ನಮ್ಮ ಹೆಗಲ ಮೇಲಿಟ್ಟು ಮತ್ತೆಲ್ಲಿಗೋ ಕಳಿಸಿಬಿಡುತ್ತಾರೆ.

ತಮ್ಮನ್ನು ಕಾಡುವ ಛಾಯಾಚಿತ್ರ, ಚಿತ್ರಕಲೆ, ಚಿತ್ರಣ ಇತ್ಯಾದಿಗಳ ಕುರಿತು ರಹಮತ್ ತರೀಕೆರೆ ಅವರು ಪ್ರತಿ ವಾರ ಬರೆಯುವ ಟಿಪ್ಪಣಿ ಸರಣಿ
ನಿಮಗೆ ಏನು ಅನ್ನಿಸ್ತು?
2 ವೋಟ್