ಸಂವಿದಾನ ಓದು - ಭಾಗ 1 | ಬಾರತವು ರಾಜ್ಯಗಳ ಸಂಯುಕ್ತ ಒಕ್ಕೂಟವೋ, ಒಕ್ಕೂಟ ವ್ಯವಸ್ತೆಯೋ? ಯಾವುದು ಸರಿ ಮತ್ತು ಏಕೆ?

ಅಂಕಣಕಾರರ ಟಿಪ್ಪಣಿ: ಈ ಸರಣಿಯಲ್ಲಿ ಸಂವಿದಾನದ ಪ್ರತೀ ಆರ್ಟಿಕಲ್‌ಗಳನ್ನು ಅರಿಯುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ. ಇಂಡಿಯಾ ಎಂಬುದು ರಾಜ್ಯಗಳ ಒಕ್ಕೂಟ ವ್ಯವಸ್ತೆ. ಯಾರಾದರೂ ನಿಮಗೆ ಇಂಡಿಯಾ ಅಥವಾ ಬಾರತ ಒಂದು ದೇಶ ಅಥವಾ ರಾಸ್ಟ್ರ ಅಂದರೆ, ಅವರಿಗೆ ಪ್ರೀತಿಯಿಂದ ಮನವರಿಕೆ ಮಾಡಿ; ಈ ಲೇಕನ ನಿಮಗೆ ಸಹಾಯಕ

ಕೆಲವು ವರುಶಗಳ ಹಿಂದೆ, 'India ಅಂದರೆ Independent nation declared in August' ಅನ್ನುವ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಡಲಾಗಿತ್ತು. 'India' ಅನ್ನುವುದು ಬ್ರಿಟಿಶರು ಇಟ್ಟ ಹೆಸರು; ನಾವುಗಳು ಇದನ್ನು ತಿರಸ್ಕರಿಸಿ ಬಾರತ ಅನ್ನುವ ಹೆಸರನ್ನು ಮಾತ್ರವೇ ಉಳಿಸಿಕೊಳ್ಳಬೇಕು ಅನ್ನುವ ಸುಳ್ಳು ಅಭಿಯಾನವನ್ನು ನಡೆಸಿ, "ಇಂಡಿಯಾ ಹೆಸರು ಬೇಡ, ಬಾರತ ಇರಲಿ," ಅನ್ನುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಹಾಕಿದ್ದರು. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಯಾವುದೇ ಮುಲಾಜು ನೋಡದೆ ತಿರಸ್ಕರಿಸಿತು.

ಹಾಗಾದರೆ, 'India' ಅನ್ನುವ ಹೆಸರು ಹೇಗೆ ಬಂತು ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ. ಉತ್ತರ-ಪಶ್ಚಿಮ ದಿಕ್ಕಿನಲ್ಲಿ ಹರಿಯುವ ನದಿಗೆ 'ಸಿಂದು' ಅನ್ನುವ ಸಂಸ್ಕೃತ ಪದದಿಂದ ಕರೆಯುತ್ತಿದ್ದೆವು. ಇರಾನಿಯನ್ನರು, ಗ್ರೀಕರು ಉತ್ತರ-ಪಶ್ಚಿಮ ದಿಕ್ಕಿನಿಂದ ನಮ್ಮ ಭೂಪ್ರದೇಶಕ್ಕೆ ಬಂದಾಗ ಸಿಂದೂ ನದಿಯ ಈ ಕಡೆಗೆ ಇರುವ ಭೂಪ್ರದೇಶವನ್ನು 2,500 ವರುಶಗಳ ಹಿಂದೆ Indos ಅಥವಾ Indus ಅಂತ ಕರೆಯಲು ಪ್ರಾರಂಬಿಸಿದರು. ಉಳಿದಂತೆ, Indos ಅಥವಾ Indus, India ಆಗಿ ಬದಲಾವಣೆ ಆಯಿತು. ಬ್ರಿಟಿಶರು ಇಲ್ಲಿಗೆ ಬರುವ ಮೊದಲೇ ಇಂಡಿಯಾ ಅನ್ನುವ ಹೆಸರು ಚಲಾವಣೆಯಲ್ಲಿ ಇತ್ತು. ಆನಂತರ ಬ್ರಿಟಿಷರು India ಅನ್ನುವ ಪದವನ್ನು ತಮ್ಮೆಲ್ಲ ವ್ಯವಹಾರಗಳಲ್ಲಿ ಉಪಯೋಗಿಸಲು ಪ್ರಾರಂಭಿಸಿದರು.

Image

ಸ್ವಾತಂತ್ರ್ಯಾ ನಂತರ ನಮ್ಮದೇ ಬೂಪ್ರದೇಶಕ್ಕೆ ಯಾವ ಹೆಸರಿನಿಂದ ಕರೆದುಕೊಳ್ಳಬೇಕು ಅನ್ನುವ ಚರ್ಚೆ ಬಂದಾಗ India ಅನ್ನುವ ಪದವೇ ಎಲ್ಲರಿಗೂ ಸೂಕ್ತ ಅನ್ನಿಸಿತ್ತು. ಆದರೂ, 15 ಮತ್ತು 17ನೇ ನವಂಬರ್ 1948 ಮತ್ತು 18ನೇ ಸಪ್ಟೆಂಬರ್ 1949ರ ಸಂವಿದಾನ ಸಭೆಯಲ್ಲಿ ಇಂಡಿಯಾ ಬದಲಿಗೆ 'ಭಾರತ' ʼಆರ್ಯರ್ವತ,' ʼಜಂಬೂ ದ್ವೀಪ,' ʼಹಿಂದುಸ್ತಾನʼ ಅನ್ನುವ ಹೆಸರನ್ನು ಇಡಬೇಕು ಅನ್ನುವ ಬಿಸಿ-ಬಿಸಿ ಚರ್ಚೆ ನಡೆಯಿತು. ಆ ಮೂರು ದಿನಗಳ ಸಂವಿದಾನ ಸಭೆಯ ಒಟ್ಟಾರೆ ಚರ್ಚೆಯ ಸಾರಾಂಶ ಏನು ಅಂದರೆ, ಇಂಡಿಯಾ ಅನ್ನುವ ಹೆಸರು ಮಾತ್ರ ಸ್ವಾತಂತ್ರ್ಯದ ನಂತರ ಭೂಪ್ರದೇಶವನ್ನು ಸಮರ್ಥವಾಗಿ ಹಿಡಿದುಕೊಳ್ಳಬಲ್ಲದೇ ಹೊರತು ಬೇರೆ ಹೆಸರುಗಳಿಂದ ಸಾಧ್ಯವಿಲ್ಲ ಅನ್ನುವ ತೀರ್ಮಾನಕ್ಕೆ ಬರಲಾಯಿತು. ಕೊನೆಗೆ, 'ಇಂಡಿಯಾ ಅರ್ತಾತ್ ಬಾರತವು' ಅನ್ನುವ ತಿದ್ದುಪಡಿಗೆ ಸಂವಿದಾನ ಸಭೆಯಲ್ಲಿ ಎಲ್ಲ ಸದಸ್ಯರು ಅನುಮೋದನೆ ನೀಡಿದರು.

ಸಾಂವಿದಾನಿಕ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಸಾರ್ವಜನಿಕವಾಗಿ ಇಂಡಿಯಾ ಅಂತಲೇ ಕರಿಯಬೇಕೇ ಹೊರತು ಭಾರತ ಎಂದಲ್ಲ. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಆಡಳಿತಾತ್ಮಕ ದಾಖಲೆಗಳಲ್ಲಿ ಇಂಡಿಯಾ ಅಂತಲೇ ಕರೆಯುತ್ತಾರೆಯೇ ಹೊರತು ಭಾರತ ಎಂದಲ್ಲ.

ಈ ಲೇಖನ ಓದಿದ್ದೀರಾ?: ಸ್ವಾತಂತ್ರ್ಯ 75 | ಸತ್ಯ ಹೇಳಿದವರನ್ನು, ಪ್ರಶ್ನೆ ಮಾಡಿದವರನ್ನು ಬೇಟೆಯಾಡಿದ ಕಾಲ!

ಸಂವಿಧಾನದ ಆರ್ಟಿಕಲ್ 1ರ ಪ್ರಕಾರ, ಇಂಡಿಯಾ ಅನ್ನುವುದು ದೇಶ ಅಥವಾ ರಾಸ್ಟ್ರ ಎಂದು ಕರೆದಿಲ್ಲ. ಆದ್ದರಿಂದ ಇಂಡಿಯಾ ಅನ್ನೋದು ದೇಶ ಅಥವಾ ರಾಸ್ಟ್ರ ಅಲ್ಲವೇ ಅಲ್ಲ. ಇಂಡಿಯಾ ಅನ್ನೋದು ರಾಜ್ಯಗಳ ಸಂಯುಕ್ತ ವ್ಯವಸ್ಥೆ (Union ೦f States).

ಸಂವಿದಾನ ಸಬೆಯಲ್ಲಿ 'ರಾಜ್ಯಗಳ ಸಂಯುಕ್ತ ವ್ಯವಸ್ಥೆ' ಅನ್ನುವ ಬದಲು 'ರಾಜ್ಯಗಳ ಒಕ್ಕೂಟ ವ್ಯವಸ್ಥೆ' ಎಂದು (federation of states) ಕರೆಯೋಣ ಅನ್ನುವ ದೊಡ್ಡ ಚರ್ಚೆ ನಡೆಯಿತು. ಸುದೀರ್ಗ ಚರ್ಚೆಯ ನಂತರ federation ಪದ ಬೇಡ Union ಪದವೇ ಇರಲಿ ಅನ್ನುವ ತೀರ್ಮಾನಕ್ಕೆ ಬರಲಾಯಿತು. ಈ ತೀರ್ಮಾನಕ್ಕೆ ಏಕೆ ಬಂದರು ಅಂದರೆ, ಇಂಡಿಯಾವನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆದರೆ ಭವಿಷ್ಯದಲ್ಲಿ ರಾಜ್ಯಗಳು ತಮ್ಮನ್ನು ತಾವೇ ಸ್ವತಂತ್ರ ದೇಶ ಅಥವಾ ರಾಸ್ಟ್ರ ಎಂದು ಘೋಶಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದರಿಂದ ಇಂಡಿಯಾವನ್ನು ರಾಜ್ಯಗಳ ಸಂಯುಕ್ತ ವ್ಯವಸ್ಥೆ ಎಂದು ಕರೆಯಲಾಯಿತು.

Image

ಆದರೆ, ಕಾಲ ಕಳೆದಂತೆ ಇಂಡಿಯಾ ಗಟ್ಟಿಯಾಗುತ್ತ ಹೋಯಿತು. ಈ ಕಾರಣದಿಂದ ಈಗ ಇಂಡಿಯಾವನ್ನು ರಾಜ್ಯಗಳ ಒಕ್ಕೂಟ ವ್ಯವಸ್ಥೆ ಎಂದು ಕರೆಯಲು ಪ್ರಾರಂಬಿಸಿದ್ದೇವೆ. ಸಂವಿದಾನದ ಕನ್ನಡ ಅನುವಾದದಲ್ಲೂ ಇಂಡಿಯಾವನ್ನು ರಾಜ್ಯಗಳ ಒಂದು ಒಕ್ಕೂಟವಾಗಿರತಕ್ಕದ್ದು ಎಂದೇ ಅನುವಾದಿಸಲಾಗಿದೆ.

ಮುಂದಿನ ಸರಣಿ ಲೇಖನಗಳಲ್ಲಿ - ಇಂಡಿಯಾ ಅನ್ನೋದು ರಾಜ್ಯಗಳ ಒಂದು ಒಕ್ಕೂಟ ವ್ಯವಸ್ಥೆ ಎಂದೇ ನಾನು ಬರೆಯುತ್ತೇನೆ. ಸಂವಿದಾನದಲ್ಲಿ ಇಂಡಿಯಾವನ್ನು ಒಂದು ದೇಶ ಅಥವಾ ರಾಸ್ಟ್ರ ಎಂದು ಏಕೆ ಕರೆಯಲಿಲ್ಲ ಅನ್ನುವ ಪ್ರಶ್ನೆ ಈಗಾಗಲೇ ನಮ್ಮೆಲ್ಲರಲ್ಲಿ ಮೂಡಿರಬಹುದು. ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸುವ ಪ್ರಯತ್ನ ಮಾಡುತ್ತೇನೆ. ಸಾಮಾನ್ಯವಾಗಿ ಒಂದು ಭಾಷೆ, ಒಂದು ಸಂಸ್ಕೃತಿ ಅನುಸರಿಸುವ ಬೂಪ್ರದೇಶವನ್ನು ದೇಶ ಎಂದು ಕರೆಯುತ್ತಾರೆ. ಇಂಡಿಯಾ ಅನ್ನುವ ಬೂಪ್ರದೇಶದಲ್ಲಿ ನೂರಾರು ಭಾಷೆ ಮಾತನಾಡುವ, ನೂರಾರು ಸಂಸ್ಕೃತಿಯನ್ನು ಅನುಸರಿಸುವ ಜನರು ಇದ್ದಾರೆ. ಇಂತಹ ಬಹು ವೈವಿದ್ಯತೆ ಇರುವ ಜನರ ಭೂಪ್ರದೇಶವನ್ನು ರಾಜಕೀಯ ತತ್ವಶಾಸ್ತ್ರದ ಮಾನದಂಡದಲ್ಲಿ ದೇಶ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಇಂಡಿಯಾವನ್ನು ರಾಜ್ಯಗಳ ಒಕ್ಕೂಟ ವ್ಯವಸ್ತೆಯೆಂದು ನಾವೆಲ್ಲರೂ ನಾಮಕರಣ ಮಾಡಿಕೊಂಡಿದ್ದೇವೆ. ಯಾರಾದರೂ ನಿಮಗೆ ಇಂಡಿಯಾ ಅಥವಾ ಬಾರತ ಒಂದು ದೇಶ ಅಥವಾ ರಾಸ್ಟ್ರ ಅಂದರೆ, ಅವರಿಗೆ ಪ್ರೀತಿಯಿಂದ 'ಇಂಡಿಯಾ ಅನ್ನುವುದು ರಾಜ್ಯಗಳ ಒಂದು ಒಕ್ಕೂಟ ವ್ಯವಸ್ತೆ' ಅನ್ನೋದನ್ನು ಮನವರಿಕೆ ಮಾಡಿ.

'ಎಲ್ಲರ ಕನ್ನಡ' ಎಂದು ಕರೆಯಲಾಗುವ, ಮಹಾಪ್ರಾಣಗಳ ಬಳಕೆ ಇಲ್ಲದ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್