ಅಪ್ರಮೇಯ | ಅವತ್ತು ಫಮಿ, ಕಾಜಲ್, ರಿಯಾ ಹಾಗೂ ಸೋನಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು!

ಹೋರಾಟದ ಹಾಡುಗಳು ಆದ ಮೇಲೆ ಪ್ರತಿಬಟನಾಕಾರರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡತೊಡಗಿದರು. ಸರದಿಯಲ್ಲಿ ಲೈಂಗಿಕ ಅಲ್ಪಸಂಕ್ಯಾತರನ್ನೂ ಕರೆದಾಗ ಫಮಿ ಮಾತನಾಡಲು ಮುಂದಾದಳು. “ನಾನು ಫಮಿಲ, ಬೈಸೆಕ್ಶುವಲ್, ಹಿಜ್ರಾ, ಸೆಕ್ಸ್‌ ವರ್ಕರ್...” ಅಂತ ಪರಿಚಯಿಸಿಕೊಂಡಳು. ಅಲ್ಲಿದ್ದ ಜನರು ಸ್ವಲ್ಪ ಶಾಕ್ ಹೊಡೆದಂತೆ ನೋಡತೊಡಗಿದರು

ಕರಪತ್ರ ಹಂಚ್ತಾ ಹಂಚ್ತಾ ಅವಳು ಬಸ್ಸಿನ ಕೆಳಗೆ ಹೋಗ್ಬಿಡ್ತಿದ್ಲು. ಈ ಕಡೆಯಿಂದ ಸೋನಿ ಜೋರಾಗಿ ಕೂಗಿದ್ಲು, “ಏ ಕಾಜಲ್, ಹುಶಾರ್ಕಣೆ, ನೋಡ್ಕೊ.” ಕಾಜಲ್, “ಆಯ್ತಾತಾಯ್ತು,” ಎಂದು ಹೇಳುತ್ತ ಎಲ್ಲಿಲ್ಲದ ಹುರುಪಿನಿಂದ ಕರಪತ್ರ ಜನರಿಗೆ ಹಂಚಲು ಮುಂದುವರಿದಳು. ನಾನೂ ಈ ಕಡೆ ಕರಪತ್ರ ಹಂಚುತ್ತ ಓಡಾಡ್ತಿದ್ದೆ. ಕಾರ್ಪೊರೇಷನ್ ಸರ್ಕಲ್‍ನ ಕಬ್ಬನ್ ಪಾರ್ಕ್ ಕಡೆಯಿಂದ ಎದುರು ಬಾಗದಲ್ಲಿದ್ದ ನನ್ನ ಹತ್ರ ಓಡಿ ಬಂದು ಹೇಳಿದಳು: “ಸುಂಸಿ, ಮಗಾ... ಇವತ್ತು ಏನೋ ಒಂತರ ತುಂಬಾ ಕುಶಿ ಕಣೊ ನಂಗೆ. ನಮ್ಮಂತವ್ರು ರೋಡ್ ಮೇಲೆ ರೆಸ್ಪಾನ್ಸಿಬಲ್ ಆಗಿ ನಿಂತು, ನೀವೂ ಈ ಪ್ರತಿಬಟನೆಯಲ್ಲಿ ಬಾಗಿಯಾಗಿ ಎಂದು ಹೇಳತಿದ್ರೆ ಮೈ ಗರ್ವದಿಂದ ಜುಂ ಅನ್ನುತ್ತೆ.” ಇಬ್ರೂ ಗಟ್ಟಿಗೆ ತಬ್ಕೊಂಡು ಮುಂದೆ ನಡೆದ್ವಿ.

ಕಾರ್ಪೊರೇಶನ್ ಸರ್ಕಲ್ ಮದ್ಯದಲ್ಲಿ ಟೆಂಟ್ ಹಾಕಿ ಎಲ್ಲ ಹೋರಾಟಗಾರರೂ ಸೇರಿ ಪ್ರತಿಬಟನೆ ಮಾಡ್ತಿದ್ರು - ಗುಜ್ರಾತ್ ನರಮೇದದ ಬಗ್ಗೆ. ಆಗ ಮೊದಲ ಬಾರಿಗೆ ಹಿಜ್ರಾ ಸಮುದಾಯದವರು ಕೋಮು ಸೌಹಾರ್ದತೆಗಾಗಿ ಮತ್ತು ನರಮೇದದ ವಿರುದ್ದ ಪ್ರತಿಬಟನೆ ಮಾಡಲು ತುಂಬಾ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ಕಾಜಲ್, ಫಮಿ, ಸುಮ, ಕಾಗೆ ರಂಜಿತ, ಶಕೀಲ, ಸ್ನೇಹ, ರಿಯಾ, ಸೋನಿ, ಸಂಜು ಇವ್ರೆಲ್ರೂ ತಮ್ಮ ಸಂಜೆಯ ಸೆಕ್ಸ್ ವರ್ಕ್ ಕೆಲಸ ಬಿಟ್ಟು ಬಂದು ಪ್ರತಿಬಟನೆಯಲ್ಲಿ ಬಾಗಿಯಾಗಿ, ಜೋರ್ ಜೋರಾಗಿ ಸ್ಲೋಗನ್ ಕೂಗ್ತಾ ಇದ್ರು.

Image

ಕರಪತ್ರ ಎಲ್ಲ ಹಂಚಿ ಸುಸ್ತಾಗಿ ಟೆಂಟತ್ರ ಬಂದು, ಅಲ್ಲೇ ಕೂತಿದ್ದ ಪ್ರತಿಬಾನ್ವಿತ ಹೋರಾಟಗಾರರ ಪಕ್ಕ ಕೂತಳು. ಅವಳಿಗೆ ಏನೋ ಸಂಬ್ರಮ. ಅವಳ ಪಕ್ಕ ಕೂತಿದ್ದ ಮತ್ತೊಬ್ಬ ಹೋರಾಟಗಾರರ ಮುಕ ನೋಡಿ, ತುಂಬು ಮುಕದ ನಗೆ ಬೀರಿದಳು. ಅವರೂ ಸ್ಪಂದಿಸಿದರು. ಒಂದು ನಿಟ್ಟುಸಿರು ಬಿಟ್ಟು ಹಾಗೇ ಸಂಜೆಗೆಂಪು ಬಣ್ಣದಲ್ಲಿ ವಿಲೀನವಾದಳು. ಅಶ್ಟು ಹೊತ್ತಗೆ ಆ ಟೆಂಟಿನಲ್ಲಿ ಸುತ್ತುವರಿದ ಜನರೆಲ್ಲ ಸೇರಿ ಹಾಡಲು ಶುರು ಮಾಡಿದರು. ಹೋರಾಟದ ಹಾಡುಗಳನ್ನು ಹಾಡುವವರು ಹೇಳಿದರು, “ನಮ್ ಜೊತೆಜೊತೆಗೆ ಹಾಡಿ,” ಅಂತ. ತಕ್ಶಣ ಕಾಜಲ್, ಫಮಿ ಇಬ್ರೂ ತುಂಬಾ ಹುರುಪಿನಿಂದ ರೆಡಿ ಆದ್ರು. ಹಾಡು ಶುರುವಾಯ್ತು: 'ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ...' ಫಮಿ ಮತ್ತು ಕಾಜಲ್ ಮೊದಮೊದಲಿಗೆ ಮತ್ತಗೆ ಸಣ್ಣ ದನಿಯಲ್ಲಿ ಅವರು ಹಾಡಿದ್ದನ್ನು ರಿಪೀಟ್ ಮಾಡಲು ಶುರು ಮಾಡಿದರು. ಅವರಿಬ್ಬರಿಗೂ ಏನೋ ಒಂದು ಹೊಸ ಅನುಬವ, ಹುರುಪು. ಹಾಡಿನ ಚೇತನ ಹೆಚ್ಚುತ್ತಿದ್ದಂತೆ ಅವರಿಬ್ಬರೂ ಜೋರಾಗಿ ಹಾಡತೊಡಗಿದರು. ತುಂಬು ಗಂಟಲಲ್ಲಿ ಮೈಮನಸುಗಳಲ್ಲಿ ಮಿಂಚನ್ನು ಅನುಭವಿಸಿ, ಆ ಒಂದು ಕ್ಶಣ-ಆ ಒಂದು ದಿನ ಅವಮಾನ, ಹೀಯಾಳಿಕೆ, ಹಿಂಸೆಯ ಸುಳಿವಿಲ್ಲದೆ ಗನತೆಯಿಂದ ನಿಂತು ಹಾಡುತ್ತಿದ್ದರು.

ಈ ಲೇಖನ ಓದಿದ್ದೀರಾ?: ಅಪ್ರಮೇಯ | ತಪ್ಪು ತಿಳ್ಕೊಳಲ್ಲಾ ಅಂದ್ರೆ ನಿಮ್ಮನ್ನ ಒಂದು ಮಾತು ಕೇಳ್ಲಾ?

ಹೋರಾಟದ ಹಾಡುಗಳು ಆದ ಮೇಲೆ ಪ್ರತಿಬಟನಾಕಾರರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡತೊಡಗಿದರು. ಸರದಿಯಲ್ಲಿ ಲೈಂಗಿಕ ಅಲ್ಪಸಂಕ್ಯಾತರನ್ನೂ ಕರೆದಾಗ ಫಮಿ ಮಾತನಾಡಲು ಮುಂದಾದಳು. “ನಾನು ಫಮಿಲ, ಬೈಸೆಕ್ಶುವಲ್, ಹಿಜ್ರಾ, ಸೆಕ್ಸ್‌ ವರ್ಕರ್...” ಅಂತ ಪರಿಚಯಿಸಿಕೊಂಡಳು. ಅಲ್ಲಿದ್ದ ಜನರು ಸ್ವಲ್ಪ ಶಾಕ್ ಹೊಡೆದಂತೆ ನೋಡಿದರು. “ಈ ಅನುಬವ ನಮಗೆ ಮೊದಲ ಬಾರಿ. ನಾವೂ ಸಾಮಾಜಿಕ ನ್ಯಾಯಕ್ಕೆ ಅಂದ್ರೆ ಸೆಕ್ಶುವಾಲಿಟಿ ಜೆಂಡರ್‌ನ ಸೇರಿಸಿಕೊಂಡು ಕೋಮುದ್ವೇಶವನ್ನು ಕಂಡಿಸುತ್ತೇವೆ. ನಮ್ ಕಮ್ಯುನಿಟಿಯಲ್ಲಿ ಎಲ್ಲ ಜಾತಿ, ದರ್ಮದವರೂ ಇದ್ದಾರೆ. ನಮ್ಮಲ್ಲಿ ಜಾತಿ-ದರ್ಮದ ಗಲಾಟೆ ಆಗಲ್ಲ ಅಂತ ಅಲ್ಲ. ಆದ್ರೆ, ನಾವಿರೋದೇ ಇಶ್ಟು ಕಡಿಮೆ ಜನ. ಹೀಗಾಗಿ, ಈ ಜಗಳಗಳು ನಮ್ಮಲ್ಲೇ ಇಟ್ಕೋತೀವಿ. ಜಗಳ ಆಡ್ತೀವಿ, ಆದ್ರೆ ಒಬ್ರನ್ನೊಬ್ರು ಸಾಯಿಸಲ್ಲ. ನಾವೆಲ್ಲ ಹೆಣಗಾಡೋದು ನಮ್ಮನ್ನ ನಮ್ ತರ ಒಪ್ಕೊಬೇಕು ಅಂತ. ಅದಾಗ್ಬಿಟ್ರೆ ಈ ಹಿಂಸೆ, ದ್ವೇಶ ಅನ್ನೋದೇ ಇರಲ್ಲ. ಇಲ್ಲೆಲ್ಲಾ, 'ನೀವು ಹೀಗಿದ್ರೆ ಮಾತ್ರ ಒಪ್ಕೊತೀವಿ, ಇದನ್ ಮಾತ್ರ ಮಾಡ್ಬೇಕು, ಈ ಲಿಮಿಟ್ನಲ್ಲೇ ಇರ್ಬೇಕು' ಅಂತ ಕಂಡೀಶನ್ ಹಾಕಿದರೆ ಅದು ಒಪ್ಪಿಗೆ, ಪ್ರೀತಿ ಅಲ್ಲ. ನಮಗೀಗ ಬೇಕಾಗಿರೋದು ಪ್ರೀತಿ-ವಿಶ್ವಾಸವನ್ನು ತಲುಪಿಸುವ ದರ್ಮ, ಒಳಗೊಳ್ಳುವ ದರ್ಮ, ಎಲ್ಲರ ಹಕ್ಕು-ಗನತೆಯನ್ನು ಗೌರವದಿಂದ ನೋಡುವ ದರ್ಮ. ನಮ್ಮ ಸಮುದಾಯಕ್ಕೆ ಅರ್ತ ಆಗಿರೋದು ಏನೆಂದರೆ, ಇಂತಹ ದರ್ಮ ಸಾದ್ಯ - ಅದು ನಮ್ಮ ಸಂವಿದಾನ," ಎಂದು ಹೇಳಿ ಕೈ ಮುಗಿದು ಅತ್ತ ಕಡೆ ಸರಿದು ರಿಯಾ ಪಕ್ಕ ನಿಂತಳು. ಜನರ ಚಪ್ಪಾಳೆ ಸದ್ದು. ಕಾಜಲ್, ಫಮಿ, ರಿಯಾ, ಸೋನಿ ಎಲ್ಲ ಎಂತದ್ದೋ ಸಾದನೆ ಮಾಡಿದ ಹಾಗೆ ಹೆಮ್ಮೆಯಿಂದ ನಿಂತಿದ್ದರು.

Image

ಕಬ್ಬನ್ ಪಾರ್ಕ್ ಕಡೆಯ ಕಾರ್ಪೊರೇಶನ್ ಸರ್ಕಲ್ ಹತ್ರ ಒಬ್ಬ ಪೊಲೀಸ್ ನಿಂತು ಸುಮಾರು ಹೊತ್ತು ನೋಡ್ತಾನೇ ಇದ್ದ. ಕಾಜಲ್ ತುಂಬಾ ಚುರುಕು. ಅವಳು ಹೇಳಿದ್ಲು, “ರಿಯಾ ನೋಡಲ್ಲಿ ಪೊಲೀಸ್. ಕಾಯ್ತವ್ನೆ - ನೋಡಿದ್ ತಕ್ಶಣ ದುಡ್ಡು ಕೀಳೋಕೆ. ನಾವು ಹೋಗುವಾಗ ಬತ್ತಾನೆ. ಆಗ ಸರೀಗ್ ಮಾತಾಡ್ಬೇಕು,” ಅಂದ್ಲು. ಅಶ್ಟು ಹೊತ್ತಿಗೆ ಪ್ರತಿಬಟನೆಯ ಸ್ತಳದಲ್ಲಿ ಇನ್ನೂ ಯಾರ್ಯಾರೋ ಮಾತಾಡಿದ್ರು. ಇವರೆಲ್ಲರ ಮಾತುಗಳನ್ನು ಕೇಳುತ್ತ ಇರುವಾಗ ಒಬ್ಬರು ಕಾರ್ಯಕರ್ತರು ಹೇಳಿದ್ರು: “ಗುಜರಾತಿನ ನರಮೇದದ ಬಗ್ಗೆ ನಮ್ ಸಿಟ್ಟನ್ನು ವ್ಯಕ್ತಪಡಿಸಲು ನಾವು ಚೆನ್ನಾಗಿ ಬೈಯ್ಯೋಣ.” ಅದು ಹೇಳಿದ್ದೇ ತಡ. ಫಮಿ, ಕಾಜಲ್, ರಿಯಾ, ಸೋನಿ ಆ ಗುಂಪಿನವರೆಲ್ಲಾ ಬಯಂಕರ ಕುಶಿಯಾದರು. ಅವರೂ ನ್ಯೂಸ್‍ನಲ್ಲಿ ನೋಡಿ, ಪೇಪರ್‍ನಲ್ಲಿ ನೋಡಿ ಓದಿ ತುಂಬಾ ಪೇಚಾಡಿದ್ದರು. ಕಾಜಲ್ ಹೇಳಿದಳು: “ದ್ವೇಶದಿಂದ ಸಾಯಿಸುವುದು, ಚೂರಿ ಆ ಕಡೆ ಹೋದರೂ ಈ ಕಡೆಯ ಆತ್ಮಸಾಕ್ಶಿಯೂ ಸಾಯುತ್ತದೆ.” ರಿಯಾ ಹೇಳಿದಳು - “ಕ್ಯಾಗೆ, ಮಾ, ಇನೋ ಐಸಾ ಸಬ್ಬೀಚ್ ಕರ್ತಿ. ನಾ ನಾ ನಾ ನಾ, ಖುದ ಮಾಫ್ ಕರ್‍ಸಕ್ತಿ ಮೈತೊ ನೈ ಬಾ, ಬಾ ಚೆನ್ನಾಗಿ ಬೈಯ್ಯೋಣ.” ಶುರು ಆಯ್ತು, ಎಲ್ಲ ಹೋರಾಟಗಾರರೂ ಸೇರಿ ಬೈಗುಳದ ಹಾಡನ್ನೇ ಹಾಡಿದರು.  

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಅಮ್ಮ ಹೇಳಿದ್ದು ನಿಜ - ಇವರೆಲ್ಲ 'ಮೊದಲೇ ತಿಪ್ಪೆ, ಅದ್ರ ಮೇಲೆ ಕೊಳೆತ ಹಲಸಿನ ಹಣ್ಣು'

ಆ ಪ್ರತಿಬಟನೆ ಮುಗೀತಾ-ಮುಗೀತಾ ಇವರೆಲ್ಲರೂ ಸೇರಿ ಗಾಡಿಗಳನ್ನು ಹತ್ತಿ ರೋಡಿನಲ್ಲಿ ಹೊರಟರು. ಕಬ್ಬನ್ ಪಾರ್ಕ್ ರಸ್ತೆಯಲ್ಲಿ ಪೊಲೀಸ್ ಇವರ ಗಾಡಿ ನಿಲ್ಲಿಸಿ, ಎಲ್ಲರನ್ನೂ ಸೈಡಿಗೆ ನಿಲ್ಲಿಸಿದರು. ಇವರು ಸಾಕಶ್ಟು ಹೇಳಿದರು: “ಇವತ್ತು ಪ್ರತಿಬಟನೆಗೆ ಬಂದಿದ್ದು, ಕೆಲಸಕ್ಕಲ್ಲ.” ಪೊಲೀಸ್ ಹೇಳಿದ್ದು: “ಓಹೋ...! ಕೆಲಸ! ಏನ್ ಕೆಲಸನೋ ಇವತ್ತು ಮಾಡದೆ ಇದ್ದದ್ದು.” ಕಾಜಲ್, “ಸಾರ್, ಅರ್ತ ಮಾಡ್ಕೊಳ್ಳಿ, ದಿನಾ ಬರೋ ಕೆಲಸಕ್ಕಲ್ಲ ನಾವು ಬಂದಿದ್ದು.” ಪೊಲೀಸ್ ಇನ್ನೂ ವ್ಯಂಗ್ಯವಾಗಿ ಕೆಟ್ಟದಾಗಿ “ದಿನ ಏನ್ ಕೆಲಸಕ್ಕೆ ಬರೋದು, ಇವತ್ತೇನೋ ವ್ಯತ್ಯಾಸ?” ಫಮಿಗೆ ಕೋಪ ಬಂದು ಸ್ವಲ್ಪ ಕಿರುಚಿದಳು “ಹೌದು ಸಾರ್! ನಾವು ದಿನಾ ಇಲ್ಲಿ ಬರೋದು ದಂದ ಮಾಡಲು. ಆದ್ರೆ ಇವತ್ತು, ಗುಜರಾತಿನಲ್ಲಿ ನಡೆದ ಕೋಮು ಗಲಬೆಯ ನರಮೇದದ ಎದುರು ಪ್ರತಿಬಟನೆಗೆ." ಪೊಲೀಸ್ ಕೂಡಲೇ, “ಥೋ ನಿಮ್ಮ ................ ಅಲ್ ಯಾರನ್ ಮಾಡಕ್ಕೆ ಹೊಗಿದ್ದೋ..." ರಿಯಾ ಸಹನೆ ಮೀರಿ ಹೇಳಿದ್ದಾಯ್ತು: "ಅಲ್ಲಿಗೆ ಪ್ರೊಟೆಸ್ಟ್ ಮಾಡಕ್ ಹೋಗಿದ್ದು ಸಾ! ನಮ್ಗುನೂ ಹಕ್ಕು ಐತೆ. ನಾವೂನೂ ಎಲ್ರಿಗೂ ನ್ಯಾಯ ಗೌರವ ಸಿಕ್ಲಿ ಅಂತ ಹೋರಾಡ್ತೀವಿ." "ಓಹೊಹೋ ಹೋ...ರಾ...ಟ, ನೀವು, ............... (ನನ್ ಮಕ್ಳಿಗೆ ಹೋರಾಟ ಬೇರೆ) ನಡೀರೋ ಸೂ... ಮಕ್ಳಾ,” ಅಂತ ನಾಕು ಜನಾನೂ ವದ್ದು ಪೊಲೀಸ್ ಜೀಪಿನಲ್ಲಿ ಹಾಕಿ ತಗೊಂಡೋದರು.

ಜೀಪು ಚಲಿಸುತ್ತಿದ್ದಾಗ ಹಿಂದೆ ಫಮಿ, ಕಾಜಲ್, ರಿಯಾ ಹಾಗೂ ಸೋನಿ ಮೊಕಗಳು ಮಿಕ್ಕ ದಿನಗಳಂತೆ ಕುಂದಿರಲಿಲ್ಲ. ಹೊಸದೊಂದು ಸ್ವಾತಂತ್ರ ಹೋರಾಟಗಾರರಾಗಿರುವ ಹುರುಪಿನಲ್ಲಿ ಕಣ್ಣಲ್ಲಿ ನೀರು ಬರುತ್ತಿದ್ದರೂ, ಒಬ್ಬರೊಬ್ಬರನ್ನು ನೋಡಿ ನಿಟ್ಟುಸಿರುಬಿಟ್ಟರು.

'ಎಲ್ಲರ ಕನ್ನಡ' ಎಂದು ಹೇಳಿಕೊಳ್ಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್