ಅರ್ಥ ಪಥ | ಬೆಲೆ ಏರುತ್ತಲೇ ಇದ್ದರೂ ಸರ್ಕಾರ ಸುಮ್ಮನಿರುವುದಕ್ಕೆ ಕಾರಣಗಳಿವೆ

Nirmala Sitharaman

ಜಾಗತಿಕ ಹಣಕಾಸಿನ ಹಿತಾಸಕ್ತಿ ಕಾಪಾಡುವುದಷ್ಟೇ ಸದ್ಯಕ್ಕೆ ಒಕ್ಕೂಟ ಸರ್ಕಾರದ ಆದ್ಯತೆ ಆಗಿದೆ. ಹಾಗಾಗಿಯೇ, ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದಕ್ಕಾಗಲೀ ಅಥವಾ ಲಾಭದ ಮೇಲೆ ತೆರಿಗೆ ಹೆಚ್ಚಿಸುವುದಕ್ಕಾಗಲೀ, ವಿತ್ತೀಯ ಕೊರತೆ ಹೆಚ್ಚಿದರೂ ಪರವಾಗಿಲ್ಲ ಜನರ ಕಲ್ಯಾಣ ಯೋಜನೆಯನ್ನು ಹಮ್ಮಿಕೊಳ್ಳುವುದಕ್ಕಾಗಲೀ ಬೇಕಾದ ಎದೆಗಾರಿಕೆ ಇಲ್ಲ

ಹಣದುಬ್ಬರ ಈಗ ಮತ್ತೆ ಒಂದು ಗಂಭೀರ ಸಮಸ್ಯೆಯಾಗಿ ತಲೆ ಎತ್ತಿದೆ. ಸಗಟು ಮಾರಾಟ ಸೂಚ್ಯಂಕ ದರ ೧೩.೧ರಷ್ಟು ಏರಿದೆ. ಚಿಲ್ಲರೆ ವ್ಯಾಪಾರ ಸೂಚ್ಯಂಕದಲ್ಲೂ ಏರಿಕೆ ಆಗಿದೆ. ಭಾರತದಲ್ಲಿ ಕೊರೋನ ಪಿಡುಗಿನ ಸಂದರ್ಭದಲ್ಲೂ ಹಣದುಬ್ಬರ ಶೇಕಡ ೬ಕ್ಕಿಂತಲೂ ಹೆಚ್ಚೇ ಇತ್ತು. ಈ ಸೂಚ್ಯಂಕಗಳ ಬಗ್ಗೆಯೇ ಅನುಮಾನಗಳಿವೆ. ಸಿಪಿಐ-ಬಳಕೆದಾರರ ಬೆಲೆ ಸೂಚ್ಯಂಕ ತೀರಾ ಹಳೆಯದು, ಅದು ವಾಸ್ತವವನ್ನು ಪ್ರತಿನಿಧಿಸುವುದಿಲ್ಲ ಅನ್ನುವ ಟೀಕೆ ಇದೆ. ಅದು ನಿಜ ಕೂಡ. ಅದನ್ನು ಲೆಕ್ಕ ಹಾಕಲು ಬಳಸುವ ಎಷ್ಟೋ ಪದಾರ್ಥಗಳು ಇಂದು ಬಳಕೆಯಲ್ಲಿಲ್ಲ. ಈಗ ಬಳಸುತ್ತಿರುವ ಎಷ್ಟೋ ಸರಕುಗಳು ಅದರಲ್ಲಿ ಸೇರಿಲ್ಲ. ಸದ್ಯಕ್ಕಂತೂ ಸರ್ಕಾರ ಅದನ್ನು ಪರಿಷ್ಕರಿಸುವ ಸೂಚನೆಗಳೂ ಕಾಣುತ್ತಿಲ್ಲ. ಅಕಸ್ಮಾತ್ ಪರಿಷ್ಕರಿಸಿದರೂ ಹಣದುಬ್ಬರದ ದರ ಹೆಚ್ಚಿರುತ್ತದೆಯೇ ಹೊರತು ಕಡಿಮೆ ಇರುವ ಸಾಧ್ಯತೆಗಳು ಕಡಿಮೆ. ಅದೇನೆ ಇರಲಿ. ಈಗ ಹಣದುಬ್ಬರಕ್ಕೆ ಕಾರಣಗಳೇನು ಅನ್ನೋದನ್ನು ನೋಡೋಣ.

Eedina App

ಸಾಮಾನ್ಯವಾಗಿ ಬೇಡಿಕೆ ಹೆಚ್ಚಾದಾಗ ಅಥವಾ ಪೂರೈಕೆ ಕಡಿಮೆ ಇದ್ದಾಗ ಪದಾರ್ಥಗಳ ಬೆಲೆ ಏರುತ್ತದೆ. ಭಾರತದ ಪರಿಸ್ಥಿತಿಯನ್ನು ಗಮನಿಸೋಣ. ಭಾರತದಲ್ಲಿ ಇಂದು ನಿರುದ್ಯೋಗ ವ್ಯಾಪಕವಾಗಿದೆ. ಉತ್ಪಾದನಾ ಸಾಮರ್ಥ್ಯವೂ ಸಂಪೂರ್ಣವಾಗಿ ಬಳಕೆಯಾಗದೆ, ಅಪಾರವಾಗಿ ವ್ಯರ್ಥವಾಗುತ್ತಿದೆ. ಸರ್ಕಾರದ ಗೋದಾಮಿನಲ್ಲಿ ಆಹಾರ ಧಾನ್ಯಗಳ ಶೇಖರಣೆ ಯಥೇಚ್ಛವಾಗಿದೆ. ಹಾಗಾಗಿ, ಕೊರತೆ ಈ ಬೆಲೆ ಏರಿಕೆಗೆ ಕಾರಣವಲ್ಲ. ಕೆಲವು ಪದಾರ್ಥಗಳಿಗೆ ಆಗ ಈಗ ಕೊರತೆ ಕಾಣಿಸಿಕೊಂಡಿರಬಹುದು. ಆದರೆ, ನಾವು ಈಗ ಕಾಣುತ್ತಿರುವ ಪ್ರಮಾಣದ ಹಣದುಬ್ಬರಕ್ಕೆ ಅದು ಕಾರಣವಲ್ಲ.

ಈಗ ನಾವು ಬೇಡಿಕೆಯಲ್ಲಿ ಕೊರತೆಯನ್ನು ಕಾಣುತ್ತಿದ್ದೇವೆ. ಹಾಗೆಯೇ, ಆರ್ಥಿಕತೆಯಲ್ಲಿ ಸಾಕಷ್ಟು ಬೇಡಿಕೆ ಇಲ್ಲದ ಸಂದರ್ಭದಲ್ಲಿ ಬೆಲೆ ಏರಿಕೆ ಕಂಡುಬಂದರೆ, ಅದಕ್ಕೆ ಆ ಪದಾರ್ಥಗಳ ಉತ್ಪಾದನಾ ವೆಚ್ಚದ ಹೆಚ್ಚಳ ಕಾರಣವಿದ್ದಿರಬೇಕು. ಇಲ್ಲಿ ನಿಜವಾಗಿ ಆಗಿರುವುದು ಅದೇ. ಪೆಟ್ರೋಲ್ ದರ ನಿರಂತರವಾಗಿ ಏರುತ್ತಲೇ ಇರುವುದರಿಂದ ಸರಕು ಹಾಗೂ ಸೇವೆಗಳ ಉತ್ಪಾದನೆ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಅನಿಲದ ದರ ಕುಸಿದಾಗಲೂ ಸರ್ಕಾರ ಬೆಲೆ ಇಳಿಸುವ ಪ್ರಯತ್ನ ಮಾಡಲಿಲ್ಲ. ಬದಲಾಗಿ, ಅದನ್ನೇ ತನ್ನ ಬಂಡವಾಳ ಸಂಗ್ರಹಣೆಯ ಪ್ರಮುಖ ಮೂಲವನ್ನಾಗಿಸಿಕೊಂಡಿತು.

AV Eye Hospital ad

ಇತ್ತೀಚಿನ ಉಕ್ರೇನ್ ಯುದ್ಧದಿಂದ ಅನಿಲ ಹಾಗೂ ಗೋಧಿಯೂ ಸೇರಿದಂತೆ ಇತರ ಪದಾರ್ಥಗಳ ಬೆಲೆ ಗಣನೀಯವಾಗಿ ಏರಿದೆ. ಜೊತೆಗೆ, ಪೂರೈಕೆಯ ಸಮಸ್ಯೆಗಳು ಸೇರಿಕೊಂಡು ಜಗತ್ತಿನ ಹಲವು ಭಾಗಗಳಲ್ಲಿ ಹಣದುಬ್ಬರ ಹೆಚ್ಚುತ್ತಿದೆ. ಭಾರತ ಇದಕ್ಕೆ ಹೊರತಲ್ಲ. ಸಗಟು ಮಾರಾಟ ಬೆಲೆಯ ಸೂಚ್ಯಂಕ ಹಲವು ತಿಂಗಳುಗಳಿಂದ ಎರಡು ಅಂಕಿ ದಾಟಿದೆ. ಸರ್ಕಾರದ ಹಲವು ನೀತಿಗಳು ಕೂಡ ಹಣದುಬ್ಬರಕ್ಕೆ ಕಾರಣ. ಹಾಗಾಗಿ, ಇದು ಸರ್ಕಾರಗಳ ನೀತಿಗಳ ಪ್ರೇರಿತ ಹಣದುಬ್ಬರ ಅನ್ನುವ ಟೀಕೆಯೂ ಸಂಪೂರ್ಣ ಸುಳ್ಳಲ್ಲ.

Petrol Price Hike

ಸಾಮಾನ್ಯವಾಗಿ ಹೀಗೆ ಬೆಲೆ ಏರಿ ಜನಸಾಮಾನ್ಯರಿಗೆ ತೊಂದರೆಯಾದಾಗ ಸರ್ಕಾರ ಜನರ ನೆರವಿಗೆ ಬರುತ್ತಿತ್ತು. ಉದಾಹರಣೆಗೆ, ರಾಸಾಯನಿಕ ಗೊಬ್ಬರದಂತಹ ಪೆಟ್ರೊ ಉತ್ಪನ್ನಗಳ ಬೆಲೆ ಹೆಚ್ಚಾದಾಗ ಕೇಂದ್ರ ಸರ್ಕಾರ ಗೊಬ್ಬರದ ಸಬ್ಸಿಡಿಯನ್ನು ಹೆಚ್ಚಿಸಿ ರೈತರ ನೆರವಿಗೆ ಬರುತ್ತಿತ್ತು. ಆದರೆ, ಇಂದು ಸರ್ಕಾರ ತಾನೇ ಜಾರಿಗೊಳಿಸಿದ ನೀತಿಗಳ ಕಾರಣದಿಂದಾಗಿ ಬೆಲೆಗಳು ಏರಿದಾಗಲೂ ರೈತರ ನೆರವಿಗೆ ಬರುತ್ತಿಲ್ಲ. ಜೊತೆಗೆ, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಸಾಲದೆಂಬಂತೆ ಸರ್ಕಾರ ಸಬ್ಸಿಡಿಯನ್ನೂ ಕಡಿತಗೊಳಿಸಿದೆ.

ಪೆಟ್ರೋಲಿಯಂ ಹಾಗೂ ಪೆಟ್ರೋ ಉತ್ಪನ್ನಗಳು ಸಾರ್ವತ್ರಿಕವಾಗಿ ಎಲ್ಲ ಉತ್ಪನ್ನಗಳಲ್ಲಿಯೂ ಬಳಕೆಯಾಗುವ ಪದಾರ್ಥಗಳು. ಬಹುಪಾಲು ಸರಕುಗಳ ಉತ್ಪಾದನೆಗೆ ಅದು ಅತ್ಯವಶ್ಯ. ಹಾಗಾಗಿ, ಪೆಟ್ರೊಲಿಯಂ ಬೆಲೆ ಏರಿದಾಗ ಉಳಿದೆಲ್ಲ ಪದಾರ್ಥಗಳ ಬೆಲೆಗಳೂ ಏರುತ್ತವೆ. ಒಂದು ಕಡೆ ಎಲ್ಲ ಪದಾರ್ಥಗಳ ಬೆಲೆ ಏರುತ್ತಿದೆ. ಇನ್ನೊಂದು ಕಡೆಯಿಂದ ಸಬ್ಸಿಡಿಯನ್ನು ಕಡಿತಗೊಳಿಸಲಾಗುತ್ತಿದೆ. ಎರಡೂ ಸೇರಿಕೊಂಡು ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಹಣದುಬ್ಬರ ಎಷ್ಟಿರಬಹುದು?

ಎಲ್ಲ ಆರ್ಥಿಕ ಸೂಚಿಗಳಿಗೂ ಒಂದು ಮಿತಿಯನ್ನು ಇಟ್ಟುಕೊಳ್ಳುವುದು ವಾಡಿಕೆ. ವಿತ್ತೀಯ ಕೊರತೆ ಮೂರನ್ನು ಮೀರಬಾರದು. ಹಣದುಬ್ಬರದ ದರ ಎರಡನ್ನು ಮೀರಬಾರದು ಹೀಗೆ. ಈ ಸಂಖ್ಯೆಗಳಿಗೆ ಏನು ಆಧಾರವೋ ಸ್ಪಷ್ಟವಿಲ್ಲ. ಯಾಕೆ ಶೇಕಡ ಎರಡು? ಯಾರು ಇದನ್ನು ನಿಗದಿ ಮಾಡಿದರು? ಗೊತ್ತಿಲ್ಲ. ಈಗಂತೂ ಈ ಮಿತಿಯನ್ನು ಕಾಪಾಡಿಕೊಳ್ಳುವುದು ಒಂದು ಆರ್ಥಿಕ ಧರ್ಮ ಅಂತ ಜಗತ್ತಿನ ಎಲ್ಲ ಕೇಂದ್ರ ಬ್ಯಾಂಕುಗಳು ಭಾವಿಸಿದಂತಿದೆ. ಮೊದಲಿಗೆ ಬಹುಶಃ ಇದನ್ನು ಘೋಷಿಸಿದವನು ನ್ಯೂಜಿಲ್ಯಾಂಡಿನ ರಿಸರ್ವ್ ಬ್ಯಾಂಕಿನ ಗೌರ್ನರ್ ಡಾನ್ ಬ್ರಾಷ್. ಶೇಕಡ ಎರಡರಷ್ಟು ಪ್ರಮಾಣವನ್ನು ಮೀರದಂತೆ ಹಣದುಬ್ಬರವನ್ನು ನೋಡಿಕೊಳ್ಳುವುದು ತನ್ನ ಧರ್ಮ ಎಂದು ನಂಬಿಕೊಂಡಿದ್ದ ಆತ. ಸಿಕ್ಕ-ಸಿಕ್ಕ ಕಡೆಯಲ್ಲೆಲ್ಲ ಅದನ್ನೇ ಹೇಳಿಕೊಳ್ಳುತ್ತಿದ್ದ. ಇದನ್ನು ಆಗಿನಿಂದಲೂ ಹಲವರು ವಿರೋಧಿಸುತ್ತಲೇ ಬಂದಿದ್ದರು. “ಇದು ತಪ್ಪು ನೀತಿ, ಅಷ್ಟೇ ಅಲ್ಲ ಪ್ರಜಾಸತ್ತಾತ್ಮಕವಲ್ಲದ್ದು,” ಅಂತ ಹಲವರು ವಿರೋಧಿಸಿದರು. ಒಬ್ಬ ರಿಯಲ್ ಎಸ್ಟೇಟ್ ಡೆವಲಪರ್ ಬ್ರಾಷ್‌ನ ತೂಕವನ್ನು ಘೋಷಿಸಬೇಕೆಂದು ಕೇಳಿಕೊಂಡ. ಅವನಿಗೆ ನ್ಯೂಜಿಲ್ಯಾಂಡಿನ ರಾಜಧಾನಿಯಲ್ಲಿ ಬ್ರಾಷ್ ಅನ್ನು ನೇಣಿಗೇರಿಸಲು ಸೂಕ್ತವಾದ ಹಗ್ಗವನ್ನು ಸಿದ್ದಪಡಿಸಿಕೊಳ್ಳಲು ಅವನ ತೂಕ ಬೇಕಿತ್ತಂತೆ!

ಶೇಕಡ ಎರಡೇ ಯಾಕೆ ಅನ್ನುವುದಕ್ಕೆ ಒಂದು ಬಲವಾದ ಸಮರ್ಥನೆ ಇಲ್ಲ. ಆದಾಗ್ಯೂ 'ಶೇಕಡ 2' ಎಂಬ ಒಂದಂಕಿಗೆ ಜಗತ್ತಿನ ಎಲ್ಲ ಕೇಂದ್ರ ಬ್ಯಾಂಕುಗಳು ಕಟ್ಟುಬಿದ್ದವು. ಹಣದುಬ್ಬರದ ನಿಯಂತ್ರಣ ಆರ್ಥಿಕ ಬೆಳವಣಿಗೆಗೆ ಅವಶ್ಯಕ ಎಂದು ವಾದಿಸಿದರು. ಹಣದುಬ್ಬರಕ್ಕೂ ಆರ್ಥಿಕ ಬೆಳವಣಿಗೆಗೆ ನೇರವಾದ ಸಂಬಂಧವಿಲ್ಲ ಅಂತ ಇವರ ಗುರು ಫ್ರೀಡ್‌ಮನ್ನೇ ಹೇಳಿದ್ದರೂ, ಇವರಿಗೆ ಒಪ್ಪಿಗೆಯಾಗಲಿಲ್ಲ. ಹಣದುಬ್ಬರದ ನಿಯಂತ್ರಣವನ್ನು ಗುರಿಯಾಗಿಟ್ಟುಕೊಳ್ಳುವುದು ಸರ್ವೇಸಾಮಾನ್ಯ ಆಗಿಬಿಟ್ಟಿತು. ಹಾಗೆ ಹಣದುಬ್ಬರವನ್ನು ಕಡಿಮೆ ಮಾಡುವುದಕ್ಕೆ ಬಡ್ಡಿದರವನ್ನು ಏರಿಸುವುದು ಒಂದು ಸಾರ್ವತ್ರಿಕ ಕ್ರಮವಾಗಿಬಿಟ್ಟಿದೆ. ಇಂತಹ ಕ್ರಮಗಳಿಗಿರುವ ಸಮಸ್ಯೆ ಏನೆಂದರೆ, ಅದು ನಿಜವಾದ ಕಾರಣಗಳನ್ನು ಎದುರಿಸುವುದಿಲ್ಲ. ಇಂದಿನ ಹಣದುಬ್ಬರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಹಾರ ಹಾಗೂ ಅನಿಲದ ಬೆಲೆಗಳು ಏರುತ್ತಿರುವುದು ಮುಖ್ಯ ಕಾರಣ. ಅದನ್ನು ನಿಯಂತ್ರಿಸುವುದಕ್ಕೂ ಈ ಹಣಕಾಸು ಅಧಿಕಾರಿಗಳಿಗೆ ಸಾಧ್ಯವಿಲ್ಲ. ಅವರ ಕೈಯಲ್ಲಿ ಅದು ಇಲ್ಲ. ಹಾಗಾಗಿ ಬಡ್ಡಿದರವನ್ನು ಏರಿಸುವುದು ಖಂಡಿತ ಪರಿಹಾರವಲ್ಲ.

vegetable market

ಇದನ್ನು ಓದಿದಿರಾ?: ಸಿರಿವಂತರು ಕೋವಿಡ್ ಬಯಸುತ್ತಾರಾ ಎಂಬ ಪ್ರಶ್ನೆಯ ಬೆನ್ನು ಹತ್ತಿ...

ಹೀಗೆ ಹಣದುಬ್ಬರವನ್ನು ನಿಯಂತ್ರಿಸುವುದರಿಂದ ಆರ್ಥಿಕ ಬೆಳವಣಿಗೆ ಸಾಧ್ಯ ಅನ್ನುವುದಕ್ಕೂ ಬಲವಾದ ಸಮರ್ಥನೆ ಇಲ್ಲ. ಜೊತೆಗೆ, ಲಾಕ್‌ಡೌನ್ ಅಥವಾ ಇತರ ನಿರ್ಬಂಧನೆ ಮತ್ತಿತರ ಕೆಲವು ಸಂದರ್ಭಗಳಲ್ಲಿ, ಉತ್ಪಾದನೆ ಮತ್ತು ವಿತರಣೆಯಲ್ಲಿ ತೊಂದರೆಯಾದಾಗ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಆಗ ಹಣದುಬ್ಬರವನ್ನು ನಿಯಂತ್ರಿಸುವುದಕ್ಕಾಗಿ ಬಡ್ಡಿದರವನ್ನು ಹೆಚ್ಚಿಸಿದರೆ ಆರ್ಥಿಕತೆಗೆ ತೊಂದರೆಯಾಗುತ್ತದೆ. ಅದರಿಂದ ಕುಟುಂಬಗಳಿಗೆ, ಉದ್ದಿಮೆಗಳಿಗೆ ಹಾಗೂ ಸರ್ಕಾರಕ್ಕೆ ಸಾಲದ ಹೊರೆ ಜಾಸ್ತಿಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಕೇಂದ್ರ ಬ್ಯಾಂಕ್ ಹಣದುಬ್ಬರದ ನಿಯಂತ್ರಣವನ್ನೇ ಆದ್ಯತೆಯ ವಿಷಯವಾಗಿ ಮಾಡಿಕೊಂಡಾಗ, ಗರಿಷ್ಠ ಉದ್ಯೋಗ ಸೃಷ್ಟಿಸುವುದು, ಆರ್ಥಿಕ ಬೆಳವಣಿಗೆ ಸಾಧಿಸುವುದು ಇತ್ಯಾದಿ ಆದ್ಯತೆಯ ವಿಷಯಗಳ ಕಡೆ ಗಮನ ಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಆ ಜವಾಬ್ದಾರಿಯಿಂದ ತಪ್ಪಿಸಿಕೊಂಡುಬಿಡುತ್ತದೆ. ಹಾಗಾಗಿ, ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ಹಾಗೆಯೇ, ಪ್ರಗತಿಯೂ ಕುಂಠಿತವಾಗುತ್ತಿದೆ. ಸರ್ಕಾರ ಈ ರೀತಿಯ ಹಣದುಬ್ಬರವನ್ನೇ ಗುರಿಯಾಗಿಟ್ಟುಕೊಂಡಿರುವ ಕ್ರಮವನ್ನು ಬಿಟ್ಟು, ಮಾನವನ ಪ್ರಗತಿಯತ್ತ ಗಮನ ಕೊಡಬೇಕು.

ಗೊತ್ತಿದ್ದೂ ಸರ್ಕಾರವೇಕೆ ಹೀಗೆ ಮಾಡುತ್ತಿದೆ?

ಸರ್ಕಾರ ಸಮಾನ್ಯ ಜನರ ಹಿತಕ್ಕೆ ವಿರುದ್ಧವಾದ ನೀತಿಗಳನ್ನೇ ಯಾಕೆ ಅನುಸರಿಸುತ್ತಿದೆ? ಒಂದು ಕಾರಣ, ಜನಪರವಾಗಿ ಕೆಲಸ ಮಾಡುವುದರ ಅವಶ್ಯಕತೆ ಅದಕ್ಕೆ ಕಾಣುತ್ತಿಲ್ಲ. ಅಧಿಕಾರದಲ್ಲಿ ಉಳಿಯಲು ಉದ್ಯೋಗವನ್ನು ಸೃಷ್ಟಿಸುವ, ಆಹಾರ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಒದಗಿಸುವ ಇತ್ಯಾದಿ ಕಷ್ಟದ, ಆದರೆ ಜನಪರವಾದ ಮಾರ್ಗ ಅದಕ್ಕೆ ಬೇಕಾಗಿಲ್ಲ. ಜನತೆಯಲ್ಲಿ ಭಾವೋದ್ವೇಗವನ್ನು, ದ್ವೇಷವನ್ನು ಹರಡಿ ಚುನಾವಣೆಯನ್ನು ಗೆಲ್ಲಬಹುದೆನ್ನುವ ಆತ್ಮವಿಶ್ವಾಸ ಅದಕ್ಕಿರುವಂತೆ ತೋರುತ್ತದೆ.

ಎರಡನೆಯದಾಗಿ, ಸರ್ಕಾರಕ್ಕೆ ಜಾಗತಿಕ ಹಣಕಾಸಿನ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ. ಅದು ಅದರ ಆದ್ಯತೆಯ ವಿಷಯವಾಗಿದೆ. ಹಾಗಾಗಿ, ಸರ್ಕಾರಕ್ಕೆ ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದಕ್ಕಾಗಲೀ ಅಥವಾ ಲಾಭದ ಮೇಲೆ ತೆರಿಗೆ ಹೆಚ್ಚಿಸುವುದಕ್ಕಾಗಲೀ, ವಿತ್ತೀಯ ಕೊರತೆ ಹೆಚ್ಚಿದರೂ ಪರವಾಗಿಲ್ಲ ಜನರ ಕಲ್ಯಾಣ ಯೋಜನೆಯನ್ನು ಹಮ್ಮಿಕೊಳ್ಳುವುದಕ್ಕಾಗಲೀ ಬೇಕಾದ ಎದೆಗಾರಿಕೆ ಇಲ್ಲ. ಜೊ ಬೈಡೆನ್ ಶ್ರೀಮಂತರ ಮೇಲೆ ತೆರಿಗೆ ಹಾಕಿ ಪರಿಹಾರ ನಿಧಿಗೆ ಬೇಕಾದ ಹಣವನ್ನು ಕೊಡೀಕರಿಸಿದ. ಆದರೆ, ನಮ್ಮ ಸರ್ಕಾರಕ್ಕೆ ಅದಕ್ಕೆ ಬೇಕಾದ ಧೈರ್ಯ ಕಾಣುತ್ತಿಲ್ಲ.

ಏನು ಮಾಡಬೇಕಿತ್ತು?

ಭಾರತದಲ್ಲಿ ಇಂದು ಹಣದುಬ್ಬರ ಹೆಚ್ಚುತ್ತಿದೆ. ಬೆಳವಣೆಗೆಯ ದರ ಕುಸಿಯುತ್ತದೆ. ಈ ಆರ್ಥಿಕತೆಯ ಬಿಕ್ಕಟ್ಟಿನಿಂದ ನಿರುದ್ಯೋಗದ ಮಟ್ಟ ಹಿಂದೆಂದೂ ಕಾಣದ ಹಂತ ತಲುಪಿದೆ. ಅಂದರೆ, ಹಣದುಬ್ಬರದ ಜೊತೆಯಲ್ಲೇ ಆರ್ಥಿಕ ಹಿಂಜರಿಕೆಯೂ ಆರ್ಥಿಕತೆಯನ್ನು ಕಾಡುತ್ತಿದೆ. ಇಂತಹ ಸ್ಥಿತಿಯನ್ನು 'ಸ್ಟಾಗ್‌ಫ್ಲೇಷನ್' ಎಂದು ಕರೆಯುವುದು ವಾಡಿಕೆ. ಹಲವು ವರ್ಷಗಳಿಂದ ನಮ್ಮ ಆರ್ಥಿಕತೆ ಬೇಡಿಕೆಯ ಕೊರತೆಯನ್ನು ಎದುರಿಸುತ್ತಿದೆ. ಹಣದುಬ್ಬರದಿಂದ ಅದು ಇನ್ನಷ್ಟು ಹೆಚ್ಚಬಹುದು. ಹಾಗಾಗಿ, ಇಂದು ನಾವು ತುರ್ತಾಗಿ ಒಟ್ಟಾರೆ ಬೇಡಿಕೆಯನ್ನು ಪ್ರಚೋದಿಸಬೇಕು ಹಾಗೂ ಕೆಲವು ಸೂಕ್ಷ್ಮ ಸರಕುಗಳ ಪೂರೈಕೆಯನ್ನು ನಿರ್ದಿಷ್ಟ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಅಂದರೆ, ಅವಶ್ಯಕತೆ ಬಂದಾಗ ಕೆಲವು ವಸ್ತುಗಳನ್ನು ಆಮದು ಮಾಡಿಕೊಂಡು, ಅದರ ಪೂರೈಕೆಯನ್ನು ಹೆಚ್ಚಿಸಬೇಕು. ಕೆಲವು ವಸ್ತುಗಳ ಬೆಲೆ ಹೆಚ್ಚಿಸಬೇಕು. ಹೀಗೆ, ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಜೊತೆಗೆ, ಆರ್ಥಿಕತೆಯಲ್ಲಿ ಬೆಳವಣಿಗೆ ಹಾಗೂ ಉದ್ಯೋಗವನ್ನು ಪ್ರಚೋದಿಸಲು ವಿತ್ತೀಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಇದಕ್ಕೆ ಬಂಡವಾಳ ಹೊಂದಿಸಲು ಸಂಪತ್ತಿನ ಮೇಲೆ ಅಥವಾ ಕಾರ್ಪೋರೆಟ್ ಲಾಭದ ಮೇಲೆ ತೆರಿಗೆ ಹಾಕಬೇಕು. ಕೊರೋನ ಸಂದರ್ಭದಲ್ಲಿ ತಮ್ಮ ಲಾಭವನ್ನು ಅಪಾರವಾಗಿ ಹೆಚ್ಚಿಸಿಕೊಂಡ ಈ ಕಾರ್ಪೋರೆಟ್‌ಗಳಿಗೆ, ಆರ್ಥಿಕ ಬೆಳವಣಿಗೆಯಲ್ಲಿ ನೆರವಾಗುವ ಜವಾಬ್ದಾರಿ, ನೈತಿಕ ಹೊಣೆಯೂ ಇರಬೇಕಲ್ಲವೇ? ಸರ್ಕಾರ ಅದನ್ನು ಸಂಗ್ರಹಿಸಿ, ಸಾಮಾನ್ಯ ಜನರ ಅವಶ್ಯಕತೆಗೆ ಸ್ಪಂದಿಸುವ ಸ್ಥೈರ್ಯವನ್ನು ತೋರಬೇಕು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app