ಜಾಗರ | ಸಿದ್ದಾರ್ಥ ಹೆಂಡತಿ, ಮಗುವನ್ನು ರಾತ್ರೋರಾತ್ರಿ ತೊರೆದುಹೋದದ್ದು ನಿಜವೇ?

Buddha 3

ಸಿದ್ದಾರ್ಥ ಬುದ್ಧನಾದದ್ದು ಹೇಗೆ ಎಂಬ ಕುರಿತು ಸಾಕಷ್ಟು ಕತೆಗಳಿವೆ. ಅದರಲ್ಲಿ ಬಹಳಷ್ಟು ಊಹಾಪೋಹಗಳೂ ಉಂಟು. ಇಂಥ ಕಾಲ್ಪನಿಕ ಕತೆಗಳಿಗೆ ಬೆನ್ನು ಹಾಕಿದಾಗ ಸಿಕ್ಕಿದ್ದು ಅಂಬೇಡ್ಕರ್ ಅವರ 'ಬುದ್ಧ ಮತ್ತು ಅವನ ಧಮ್ಮ’ ಪುಸ್ತಕ. ಇದನ್ನು ಓದುವ ಮೊದಲು ಇದ್ದ ತಿಳಿವಳಿಕೆ ಮತ್ತು ಓದಿದ ನಂತರ ಬಂದ ತಿಳಿವಳಿಕೆ ಕುರಿತ ಕುತೂಹಲಕರ ಬರಹವಿದು

“ಇದು ತೊಂದರೆ ಎನಿಸಿದರೆ, ನಾನೊಂದು ಸುಲಭ ದಾರಿಯನ್ನು ಸೂಚಿಸುವೆ. ನಾನು ಪರಿವ್ರಾಜಕನಾಗುತ್ತೇನೆ. ಅದೊಂದು ರೀತಿಯಲ್ಲಿ ಗಡಿಪಾರೂ ಹೌದು...”

- ತಾನು ಪ್ರತಿಪಾದಿಸಿದ ‘ಯುದ್ಧ ಸಲ್ಲ’ ಎಂಬ ಮಂಡನೆಯನ್ನು ಸೋಲಿಸಿ, ‘ಯುದ್ಧ ಬೇಕು’ ಎಂದು ಸೇನಾಧಿಪತಿ ಪ್ರತಿಪಾದಿಸಿದ ಮಂಡನೆಯನ್ನು ಬಹುಮತದಿಂದ ಗೆಲ್ಲಿಸಿದ ತನ್ನ ಕುಲದ ಸಂಘಕ್ಕೆ ಇಪ್ಪತ್ತೆಂಟರ ರಾಜಕುಮಾರನು ಹೇಳುವ ಮಾತುಗಳಿವು. ಆ ರಾಜಕುಮಾರನೇ ಸಿದ್ದಾರ್ಥ, ಮುಂದೆ ಬುದ್ಧನಾದವನು.

ಬಹಳಷ್ಟು ಜನ ಬಹಳಷ್ಟು ಕಾಲ ನಂಬಿಕೊಂಡು ಬಂದಿರುವ, ‘ಹೆಂಡತಿ ಮಗನನ್ನು ಮಧ್ಯರಾತ್ರಿಯಲ್ಲಿ ಸಿದ್ದಾರ್ಥ ತೊರೆದು ಹೋದ’ ಎಂಬುದು ಸರಿಯಲ್ಲ. ಇದನ್ನು ಬಿ ಆರ್ ಅಂಬೇಡ್ಕರ್ ಅವರು, ತಮ್ಮ ‘ಬುದ್ಧ ಮತ್ತು ಅವನ ಧಮ್ಮ' ಎಂಬ ಕೃತಿಯಲ್ಲಿ ಕೂಲಂಕಷವಾಗಿ ಚಿತ್ರಿಸಿದ್ದಾರೆ. ಅದನ್ನು ತಿಳಿಯುವ ಮೊದಲು, ನನಗೆ ಚಿಕ್ಕಂದಿನಿಂದ ಪರಿಚಯವಾಗಿರುವ ಬುದ್ಧನನ್ನು ನಿಮಗೆ ತಿಳಿಸಿಬಿಡುವೆ.

ಬಹಳ ಚಿಕ್ಕವನಿದ್ದಾಗಿನಿಂದಲೂ, ನನ್ನಲ್ಲಿ ಇರುವ ನೆನಪಿನ ದಿನಗಳಿಗಿಂತ ಹಿಂದಿನಿಂದಲೂ ನಮ್ಮ ಮನೆಯಲ್ಲಿ ಸಣ್ಣ-ಪುಟ್ಟ ಕಲಾತ್ಮಕ ಕೃತಿಗಳನ್ನು ಒಂದು ದೊಡ್ಡ ಮೇಜಿನ ಮೇಲೆ ಪ್ರದರ್ಶನಕ್ಕಿಟ್ಟಿದ್ದರು. ಅವುಗಳಲ್ಲಿ ಬಹುಶಃ ಒಂದೂ ಒಂದೂಕಾಲು ಅಡಿ ಎತ್ತರದ ಹಿಮಬಿಳಿಯ ಪಿಂಗಾಣಿಯ ಧ್ಯಾನಮೂರ್ತಿ ಬುದ್ಧನ ಪ್ರತಿಮೆ ಇನ್ನೂ ನನ್ನ ಮನಸ್ಸಿನಲ್ಲಿದೆ. ರಜಾ ದಿನಗಳಲ್ಲಿ ನಮ್ಮಜ್ಜಿ, ಆ ಬುದ್ಧ ಮೂರ್ತಿಯ ಮುಂದೆ ಒಂದಿಷ್ಟು ಗಂಧದ ಕಡ್ಡಿಗಳನ್ನು ನಮ್ಮಿಂದ ಹಚ್ಚಿಸಿ ಹೇಳುತ್ತಿದ್ದ ಬುದ್ಧನ ಕತೆಯ ಸಾರಾಂಶ: ಮಹಾರಾಜನಾಗಿದ್ದ ಬುದ್ಧನ ತಂದೆ, ದುಃಖ, ಮುದಿತನ ಮತ್ತು ಸಾವುಗಳನ್ನು ನೋಡಿಬಿಟ್ಟರೆ ತನ್ನ ಮಗ ಸನ್ಯಾಸಿ ಆಗಿಬಿಡುತ್ತಾನೆ ಎಂಬ ಭವಿಷ್ಯ ಹೇಳುವವರ ಮಾತುಗಳ ಭಯದಲ್ಲಿ, ಇವು ಯಾವುವೂ ಬುದ್ಧನ ಕಣ್ಣಿಗೆ ಬೀಳದಂತೆ ಬಹಳ ಕಟ್ಟುಕಟ್ಟಳೆಯಲ್ಲಿ ಬೆಳೆಸಿರುತ್ತಾನೆ. ಒಂದು ದಿನ ಬುದ್ಧ ಈ ಮೂರನ್ನೂ ನೋಡಿಬಿಡುತ್ತಾನೆ. ಅವತ್ತು ಅವನಿಗೆ ಸಂಸಾರದ ಬಗ್ಗೆ ವಿರಾಗ ಮೂಡಿ ಹೆಂಡತಿ, ಮಗ, ರಾಜ್ಯ, ಕೋಶಗಳನ್ನೆಲ್ಲ ಬಿಟ್ಟು ತಪಸ್ಸಿಗೆ ಹೊರಟುಬಿಡುತ್ತಾನೆ. ಅಂದಿನಿಂದ ಮೊನ್ನೆ ಮೊನ್ನೆವರೆಗೂ ‘ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಚಿತ್ರವೇ ಮನಸ್ಸಿನಲ್ಲಿತ್ತು. ಇದಕ್ಕೆ ಪುಷ್ಟಿ ಕೊಡುವಂತೆ, ಎಲ್ಲೋ ಚಿಕ್ಕಂದಿನಲ್ಲಿ ನೋಡಿದ್ದ, ಪಲ್ಲಂಗದ ಮೇಲೆ ಆ ಕಡೆ ತಿರುಗಿಕೊಂಡು ಮಲಗಿರುವ ಹೆಂಡತಿ ಮತ್ತು ಮಗುವನ್ನು ತ್ಯಜಿಸಿ ಹೋಗುತ್ತಿರುವ ಸಿದ್ಧಾರ್ಥನ ಚಿತ್ರವೂ ಪೂರಕವಾಗಿತ್ತು.

Image
Buddha 2

ಇದರ ನಡುವೆ, ಪ್ರೌಢಶಾಲೆಯಲ್ಲಿ ಸಣ್ಣ-ಪುಟ್ಟ ವಿಷಯಗಳ ಮೂಲಕ ನಮ್ಮನ್ನು ಚಿಂತನೆಗೆ ಹಚ್ಚುತ್ತಿದ್ದ ಪುರುಷೋತ್ತಮ ಎಂಬ ಮೇಷ್ಟ್ರು, "ದೇವರಿಲ್ಲ ಎಂದ ಬುದ್ಧನನ್ನೇ ಗೋಡೆಗೆ ಮೊಳೆ ಹೊಡೆದು ನೇತು ಹಾಕಿ ದೇವರನ್ನಾಗಿ ಮಾಡಿಬಿಟ್ಟವರು ನಾವು," ಎಂಬರ್ಥದ ವ್ಯಂಗ್ಯೋಕ್ತಿ, ಬುದ್ಧನನ್ನು ನನ್ನ ಮನಸ್ಸಿನಲ್ಲಿ ದೇವರ ಸಾಲಿನಲ್ಲಿ ಇರಗೊಟ್ಟಿರಲಿಲ್ಲ. ಅಹಿಂಸೆಯ ಪ್ರತಿಪಾದನೆ, ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ನುಡಿ, ಅಂಗುಲಿಮಾಲನ ಕತೆ, ಬೋಧಿಸತ್ವನ ಕತೆಗಳಲ್ಲಿನ ಜನ್ಮಾಂತರಗಳು ಇತ್ಯಾದಿ ವೈದೀಕರಣಗೊಂಡ ಕಲ್ಪನೆಗಳು ನನ್ನನ್ನು ಗೊಂದಲಕ್ಕೆ ಈಡುಮಾಡುತ್ತಿದ್ದುವು. ಆದ್ಯತೆಗಳು ಇಲ್ಲದ ನನ್ನ ಓದು, ನೋಡು ಮತ್ತು ಬದುಕಿನಲ್ಲಿ ಆಯಾಚಿತವಾಗಿ ಸಿಕ್ಕಿದ್ದನ್ನು ದಕ್ಕಿಸಿಕೊಂಡು ಬದುಕು ಸಾಗಿಸುತ್ತಿರುವವನು ನಾನಾದ್ದರಿಂದ, ಹಠಕ್ಕೆ ಬಿದ್ದು ಯಾವುದರ ಹಿಂದೆಯೂ ಬಿದ್ದವನಲ್ಲ. ಹೀಗಾಗಿ, ಬುದ್ಧನ ಬಗ್ಗೆಯಾಗಲೀ, ಅಂಬೇಡ್ಕರ್ ಅವರ ಬರಹಗಳ ಬಗ್ಗೆಯಾಗಲೀ ಅಧ್ಯಯನ ಮಾಡಿಲ್ಲ. ಕಿವಿಗೆ ಬಿದ್ದ ಮಾತುಗಳು ಮತ್ತು ಕಣ್ಣಿಗೆ ಬಿದ್ದ ಅಕ್ಷರಗಳಷ್ಟೇ ಇವರಿಬ್ಬರ ಕುರಿತಂತೆ ನನ್ನ ಅರಿವಿನ ಮೂಲ.

ಹೀಗಿರಲಾಗಿ, ಮೊನ್ನೆ ಏಪ್ರಿಲ್ 27ರಂದು ಹುಲಿಕುಂಟೆ ಮೂರ್ತಿಯವರು ಫೇ಼ಸ್‌ಬುಕ್ಕಿನಲ್ಲಿ, "ಬುದ್ಧ ನಡುರಾತ್ರಿಯಲ್ಲಿ ಹೆಂಡತಿ ಬಿಟ್ಟು ಹೋದ’ ಅನ್ನುವ ಬ್ರಾಹ್ಮಣ್ಯದ ಕುತಂತ್ರವನ್ನು ನಂಬುವ ಯಾರಾದರೂ ಬುದ್ಧನ ಬಗ್ಗೆ ಬರೆದರೆ, ಮಾತನಾಡಿದರೆ ನಗುವಿನ ಜತೆ ಸಿಟ್ಟು ಬರುತ್ತದೆ... ಬ್ರಾಹ್ಮಣ್ಯದ ವ್ಯಾಪ್ತಿ ಬಹಳ ದೊಡ್ಡದು,” ಎಂಬ ಮಾತು ಬರೆದಿದ್ದರು. ಈ ಮಾತು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳು ನನ್ನನ್ನು ಅಂಬೇಡ್ಕರ್ ಅವರು ಬರೆದಿರುವ 'The Buddha and His Dhamma' ಎಂಬ ಇಂಗ್ಲಿಷ್ ಕೃತಿಯಲ್ಲಿ, ಬುದ್ಧನ ಲೌಕಿಕ ಬದುಕಿನ ಪರಿತ್ಯಾಗ ಕುರಿತಂತೆ ಇರುವ ಭಾಗವನ್ನು ಓದಲು ತೊಡಗಿಸಿದವು.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಸಾಮರಸ್ಯ... ಹಾಗೆಂದರೇನು?

ಅಂಬೇಡ್ಕರ್ ಅವರು ತಮ್ಮ ‘ಬುದ್ಧ ಮತ್ತು ಅವನ ಧಮ್ಮ’ ಪುಸ್ತಕದಲ್ಲಿ ಗಮನ ಸೆಳೆಯುವ ಕೆಲವು ಸಂಗತಿಗಳಿವೆ. “ವಸ್ತುವಿಷಯಗಳನ್ನು ಹಲವಾರು ಪುಸ್ತಕಗಳಿಂದ ಸಂಗ್ರಹಿಸಲಾಗಿದೆ. ನಿರ್ದಿಷ್ಟವಾಗಿ ಅಶ್ವಘೋಷನ ‘ಬುದ್ಧವಿತ (ಬುದ್ಧಚರಿತ)’ ಹೆಸರಿಸಬೇಕು,” ಎಂದು ಪ್ರಸ್ತಾಪಿಸಿದ್ದಾರೆ. ಪೀಠಿಕೆಯಲ್ಲಿ, “ಧರ್ಮಗಳ ಸ್ಥಾಪಕರುಗಳೆಲ್ಲರ ಬದುಕು ಮತ್ತು ಬೋಧನೆಗಳ ಕುರಿತಂತೆ ಇರುವ ಆಖ್ಯಾಯಿಕೆಗಳಲ್ಲಿ ಬೌದ್ಧ ಧರ್ಮ ಸ್ಥಾಪಕರ (ಬುದ್ಧನ) ಆಖ್ಯಾಯಿಕೆಯು ದಿಗ್ಭ್ರಮೆಗೊಳಿಸದಿದ್ದರೂ, ಒಡಪಿನಂಥ ಸಮಸ್ಯೆಯನ್ನು ಒಡ್ಡುತ್ತದೆ. ಈ ಸಮಸ್ಯೆಗಳ ಕುರಿತಂತೆ ಚರ್ಚೆಯೊಂದರ ಆಸ್ಪದಕ್ಕಾಗಿ ಅವುಗಳನ್ನು ನಾನು ಇಲ್ಲಿ ಸೂಚಿಸಬಯಸುತ್ತೇನೆ..."

"...ಮೊದಲನೆಯ ಸಮಸ್ಯೆಯು ಬುದ್ಧನ ಜೀವನದ ಮುಖ್ಯ ಘಟನೆಯಾದ ಪರಿವ್ರಾಜಕನಾದ ಬಗ್ಗೆ. ಬುದ್ಧ, ಪರಿವ್ರಾಜಕತ್ವವನ್ನು ಏಕೆ ಪರಿಗ್ರಹಿಸಿದ? ಸಾಂಪ್ರದಾಯಿಕ ಉತ್ತರವೇನೆಂದರೆ, ಅವನು ಸತ್ತವನನ್ನು (ಹೆಣ), ರೋಗಗ್ರಸ್ಥನನ್ನು (ರೋಗಿ) ಮತ್ತು ವಯಸ್ಸಾದವನನ್ನು (ಮುದುಕ) ನೋಡಿದ್ದರಿಂದ. ಈ ಉತ್ತರವು ಅಸಂಬದ್ಧ ಅನ್ನುವುದು ಮುಖಕ್ಕೆ ಹೊಡೆದಂತೆಯೇ ಎದ್ದು ಕಾಣುತ್ತದೆ. ಬುದ್ಧ ಪರಿವ್ರಾಜಕನಾದದ್ದು 28ನೆಯ ವಯಸ್ಸಿನಲ್ಲಿ. ಈ ಮೂರು ನೋಟಗಳಿಂದಾಗಿ ಆತ ಪರಿವ್ರಾಜಕನಾದನೆಂದರೆ, ಇದಕ್ಕೆ ಮೊದಲು ಇಂಥ ದೃಶ್ಯಗಳನ್ನು ಹೇಗೆ ನೋಡಿರಲಿಲ್ಲ? (ಈ ಮೂರೂ ಸರ್ವೇಸಾಧಾರಣ ದೃಶ್ಯಗಳು). ಆದ್ದರಿಂದ ಈ ಸಾಂಪ್ರದಾಯಿಕ ವಿವರಣೆಯನ್ನು ಒಪ್ಪುವುದು ಸಾಧ್ಯವೇ ಇಲ್ಲ. ಈ ವಿವರಣೆಯು ಸಂಭವನೀಯವಲ್ಲ ಮತ್ತು ತರ್ಕಕ್ಕೆ ಈಡಾಗುವುದಿಲ್ಲ. ಹಾಗಿದ್ದರೆ ನಿಜವಾದ ಉತ್ತರವೇನು?” ಎಂಬುದು ಅಂಬೇಡ್ಕರ್ ಪ್ರಶ್ನೆ.

 “ಇದು ತೊಂದರೆ ಎನಿಸಿದರೆ, ನಾನೊಂದು ಸುಲಭ ದಾರಿಯನ್ನು ಸೂಚಿಸುವೆ. ನಾನು ಪರಿವ್ರಾಜಕನಾಗುತ್ತೇನೆ. ಅದೊಂದು ರೀತಿಯಲ್ಲಿ ಗಡಿಪಾರೂ ಹೌದು,” ಎಂದು 28 ವರ್ಷ ವಯಸ್ಸಿನ ಸಿದ್ದಾರ್ಥ, ತನ್ನ ಶಾಖ್ಯ ಕುಲದ ಸಂಘದವರ ಮುಂದೆ ಹೇಳಬೇಕಾಗಿ ಬಂದ ಸಂದರ್ಭವೇ ಆತ ಎಲ್ಲವನ್ನೂ ತೊರೆದುಹೋಗಲು ನಿಜವಾದ ಕಾರಣ. ಇದು ಮೇಲ್ನೋಟದಲ್ಲೇ ಸ್ಪಷ್ಟ.

ರೋಹಿಣಿ ನದಿಯ ನೀರನ್ನು ಕೃಷಿಗಾಗಿ ಬಳಸಿಕೊಳ್ಳುವ ವಿಷಯದಲ್ಲಿ ಶಾಖ್ಯರಿಗೂ ಪಕ್ಕದ ಕೊಲಿಯರಿಗೂ ಸಂಘರ್ಷವಾಗುತ್ತದೆ. ಎರಡೂ ಕುಲದವರು ಯುದ್ಧ ಸನ್ನದ್ಧರಾದ ಸಂದರ್ಭದಲ್ಲಿ, ತನ್ನ ಶಾಖ್ಯ ಕುಲದ ಸಂಘದ ಸಭೆಯಲ್ಲಿ ಶಾಖ್ಯ ಸೇನಾಪತಿಯು, ಸಂಘವು ಕೊಲಿಯರ ವಿರುದ್ಧ ಯುದ್ಧ ಘೋಷಿಸಬೇಕೆಂದು ಪ್ರತಿಪಾದಿಸಿದಾಗ, ಸಿದ್ದಾರ್ಥನು ಯುದ್ಧ ನಿರ್ಣಯವನ್ನು ವಿರೋಧಿಸುತ್ತಾನೆ. “ಶಾಖ್ಯರು ಮತ್ತು ಕೊಲಿಯರು ಹತ್ತಿರದ ಸಂಬಂ‍ಧಿಗಳು. ಪರಸ್ಪರರನ್ನು ನಾಶ ಮಾಡುವುದು ವಿವೇಕಯುತವಾದುದಲ್ಲ. ಆದ್ದರಿಂದ ಯುದ್ಧ ಘೋಷಿಸುವುದು ಬೇಡ,” ಎಂದು ಕೋರಿಕೊಳ್ಳುತ್ತಾನೆ. ಆದರೆ ಸೇನಾಪತಿಯು, “ಬಲಿ ಕೊಡುವುದು (ಯಜ್ಙ ಯಾಗ ನಿರ್ವಹಣೆ) ಬ್ರಾಹ್ಮಣರ ಕರ್ತವ್ಯ, ಯುದ್ಧ ಮಾಡುವುದು ಕ್ಷತ್ರಿಯರ ಕರ್ತವ್ಯ, ವ್ಯಾಪಾರ ಮಾಡುವುದು ವೈಶ್ಯರ ಕರ್ತವ್ಯ ಮತ್ತು ಸೇವೆ ಮಾಡುವುದು ಶೂದ್ರರ ಕರ್ತವ್ಯ,” ಎಂದು ವಾದಿಸುತ್ತಾನೆ. ಅದಕ್ಕೆ ಸಿದ್ದಾರ್ಥ, “ನಾನು ಅರ್ಥ ಮಾಡಿಕೊಂಡಂತೆ ಧರ್ಮ ಎಂದರೆ, ವೈರತ್ವವು ವೈರತ್ವದಿಂದ ಮಾಯವಾಗುವುದಿಲ್ಲ. ಅದನ್ನು ಪ್ರೇಮದಿಂದ ಜಯಿಸಬಹುದು,” ಎನ್ನುತ್ತಾನೆ. ಆದರೆ, ಸೇನಾಪತಿಯು ಅಸಹನೆಯಿಂದ, “ಈ ರೀತಿಯ ತಾತ್ವಿಕ ಚರ್ಚೆಯ ಅಗತ್ಯವಿಲ್ಲ,” ಎಂದು ದಬಾಯಿಸಿ, ತನ್ನ ಯುದ್ಧ ಘೋಷಣೆಯ ಮಂಡನೆಗೆ ಸಂಘದ ಅನುಮೋದನೆ ಕೇಳುತ್ತಾನೆ. ಯುದ್ಧ ಘೋಷಣೆಯ ಪರವಾಗಿ ಪ್ರಚಂಡ ಬಹುಮತ ದೊರೆಯುತ್ತದೆ.

Image
Buddha 4

ಮಾರನೆಯ ದಿನ, ಯುದ್ಧ ತಯಾರಿ ಸಭೆಯಲ್ಲಿ ಸಿದ್ದಾರ್ಥನು, “ಸ್ನೇಹಿತರೇ, ನಿಮ್ಮ ಇಷ್ಟದಂತೆ ನೀವು ಮಾಡಬಹುದು. ನಿಮ್ಮ ಕಡೆ ಬಹುಮತವಿದೆ. ಆದರೆ ಕ್ಷಮಿಸಿ, ಸೇನೆ ಒಗ್ಗೂಡಿಸುವುದನ್ನು ವಿರೋಧಿಸುತ್ತೇನೆ. ನಾನು ನಿಮ್ಮ ಸೇನೆಯನ್ನು ಸೇರುವುದಿಲ್ಲ, ನಿಮ್ಮ ಯುದ್ಧದಲ್ಲಿ ಭಾಗವಹಿಸುವುದಿಲ್ಲ,” ಎಂದು ಘೋಷಿಸುತ್ತಾನೆ. ನಿಯಮದ ಪ್ರಕಾರ, ಸಂಘದ ಯುದ್ಧನಿರ್ಣಯವನ್ನು ವಿರೋಧಿಸಿ ಯುದ್ಧದಲ್ಲಿ ಭಾಗವಹಿಸದ 20ರಿಂದ 50 ವರ್ಷದೊಳಗಿನ ಸದಸ್ಯರು ಸಾವನ್ನು ಅಥವಾ ದೇಶ ಬಹಿಷ್ಕಾರವನ್ನು ಎದುರಿಸಬೇಕು. ಆದರೆ, ಗಣರಾಜ್ಯವಾದ ಶಾಖ್ಯ ಕುಲವು ಏಕಛತ್ರಾಧಿಪತ್ಯದ ಕೋಸಲದ ಮಹಾರಾಜನಿಂದ ಈ ಶಿಕ್ಷೆಗಳಿಗೆ ಒಪ್ಪಿಗೆ ಪಡೆಯಬೇಕು. ಕೋಸಲ ಮಹಾರಾಜನು ಸಿದ್ಧಾರ್ಥನಿಗೆ ಈ ಶಿಕ್ಷೆ ವಿಧಿಸಲು ಒಪ್ಪಿಗೆ ಕೊಡುವ ಸಾಧ್ಯತೆ ಇರಲಿಲ್ಲ. ಅದಕ್ಕೆ, ಸೇನಾಪತಿಯು ಸಿದ್ದಾರ್ಥನಿಗೆ, “ನೆನಪಿಡು, ಸಂಘವು ನಿನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸಬಹುದು, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು,” ಎಂದು ಎಚ್ಚರಿಸುತ್ತಾನೆ.

ಆಗ, ಸಿದ್ದಾರ್ಥನು ತನ್ನಿಂದಾಗಿ ತನ್ನ ಮನೆಯವರು ಸಾಮಾಜಿಕ ಬಹಿಷ್ಕಾರಕ್ಕೊಳಗಾಗದಿರಲಿ, ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗದಿರಲಿ ಎಂದುಕೊಂಡು ಪರಿವ್ರಾಜಕನಾಗಿ ದೇಶ ಬಿಟ್ಟು ಹೋಗಲು ನಿರ್ಧರಿಸುತ್ತಾನೆ. ತಂದೆ-ತಾಯಿಯರನ್ನು ಒಪ್ಪಿಸುತ್ತಾನೆ. ಹೆಂಡತಿ ಯಶೋಧರಾ, “ನಿನ್ನ ಸ್ಥಾನದಲ್ಲಿ ನಾನಿದ್ದಿದ್ದರೆ ಬೇರಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ? ಕೊಲಿಯರ ವಿರುದ್ಧ ನಾನು ಖಂಡಿತವಾಗಿ ಯುದ್ಧದಲ್ಲಿ ಭಾಗವಹಿಸುತ್ತಿರಲಿಲ್ಲ. ನಿನ್ನ ನಿರ್ಧಾರ ಸರಿಯಿದೆ. ಅದನ್ನು ನಾನು ಒಪ್ಪಿರುವೆ ಮತ್ತು ಬೆಂಬಲಿಸುವೆ. ನಿನ್ನ ತಂದೆ-ತಾಯಿಗಳ ಬಗ್ಗೆ ಮತ್ತು ರಾಹುಲನ ಬಗ್ಗೆ ಚಿಂತಿಸಬೇಡ. ನನ್ನಲ್ಲಿ ಜೀವವಿರುವವರೆಗೆ ನಾನವರನ್ನು ನೋಡಿಕೊಳ್ಳುತ್ತೇನೆ,” ಎಂದು ಹೇಳುತ್ತಾಳೆ. ನಂತರ ರಾಹುಲನನ್ನು ಕರೆಸಿ, ಕಣ್ತುಂಬ ನೋಡಿ, ಸಿದ್ದಾರ್ಥನು ನಿರ್ಗಮಿಸುತ್ತಾನೆ.

(ಲೇಖಕರ ಟಿಪ್ಪಣಿ | ಬುದ್ಧನ ಬಗ್ಗೆಯಾಗಲೀ, ಅಂಬೇಡ್ಕರ್ ಅವರ ಬರವಣಿಗೆಯ ಬಗ್ಗೆಯಾಗಲೀ ನಾನು ಪರಿಣತನಲ್ಲ. ನನ್ನ ಈ ಬರವಣಿಗೆಯಲ್ಲಿ ಪಾರಿಭಾಷಿಕವಾಗಿಯಾಗಲೀ, ತಾತ್ವಿಕವಾಗಿಯಾಗಲೀ ಏನಾದರೂ ಲೋಪದೋಷಗಳಿದ್ದರೆ ತಿದ್ದಿಕೊಳ್ಳುವುದಕ್ಕೆ ಮತ್ತು ಹೆಚ್ಚಿನ ಅರಿವಿಗೆ ನಾನು ಸದಾ ತೆರೆದುಕೊಂಡಿರುತ್ತೇನೆ.)

ನಿಮಗೆ ಏನು ಅನ್ನಿಸ್ತು?
5 ವೋಟ್