ಜತೆಗಿರುವನೇ ಚಂದಿರ? | ಹಾರಂಗಿ ಹೊಳೆ ಬದಿಯಲ್ಲಿ ಸಿಕ್ಕ ಬಾಡಿಗೆ ಮನೆಗಳು

ಆ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ಬಲು ಚೆಲುವೆ ಎಂದು ನನಗನ್ನಿಸಿತ್ತು. ಏಳುಮಲೆಯ ಎರಡನೆಯ ಮಗ ರವಿಗೂ ಹಾಗೆಯೇ ಅನ್ನಿಸಿತ್ತು ಎಂದೆನಿಸುತ್ತದೆ... ಕ್ರಿಕೆಟ್ ನೆಪದಲ್ಲಿ ಆತ ಬಾಲ್ ಹೊಡೆಯುತ್ತಿದ್ದದ್ದು ಇದೇ ಸುಂದರ ಹುಡುಗಿಯ ಮನೆಯ ಹಿಂದಿನ ಬಾಗಿಲಿಗೆ. ಅವಳು ಬಾಗಿಲು ತೆರೆದು ಹೊರಬರಲಿ ಎಂಬುದು ಅವನ ಮನದಿಂಗಿತ - ನನ್ನ ಮನದಿಂಗಿತ ಕೂಡ

ಹಾರಂಗಿ ಹೊಳೆಗೆ ದಿನವೂ ಹಳೆಯ ನೀರು ಕೊಚ್ಚಿ ಹೋಗಿ ಹೊಚ್ಚ ಹೊಸ ನೀರು ಸೇರಿಕೊಂಡು ತಂಪಾಗಿ ಈ ಮೈ ಮನಸ್ಸುಗಳನ್ನು ತಾಗಿ ಪುಳಕಗೊಳಿಸುತ್ತ ಮುಂದೆ ಸಾಗುತ್ತಿತ್ತು. ನಾವು ತಾಯಿಯ ಮಡಿಲಿನಷ್ಟೇ ಆಪ್ತವಾಗಿ ಮನ ಬಂದಾಗ ಅವಳ ಒಡಲಲ್ಲಿ ಬಿದ್ದು ಮನಸ್ಸೋ ಇಚ್ಛೆ ಆಡುತ್ತಿದ್ದೆವು. ನಾವು ಅವಳ ಉದ್ದಗಲಕ್ಕೂ ಬಾಳಿದ ಬಾಡಿಗೆ ಮನೆಗಳ ಲೆಕ್ಕವೆಷ್ಟೋ. ಬಾಡಿಗೆಗೆ ಯಾವ ಗೂಡು ಹೊಕ್ಕರೂ ಅವಳು ಮಾರುದ್ದದಲ್ಲೇ ಕೈ ಬೀಸಿ ನಮ್ಮನ್ನು ಕರೆದು ಅಪ್ಪಿ ಮುದ್ದಿಸುತ್ತಿದ್ದಳು. ಕೂಡಿಗೆ ಸರ್ಕಲ್ಲಿನ ಸಮೀಪದಲ್ಲಿದ್ದ ಒಂದು ಬ್ರಿಟಿಷರ ಕಾಲದ ಗಟ್ಟಿಯಾದ ಕಬ್ಬಿಣದ ಸೇತುವೆಯ ಪಕ್ಕದಲ್ಲೇ ಹೊಸ ಕಾಲಕ್ಕೆ ಸೆಡ್ಡು ಹೊಡೆದಂತೆ ಕಟ್ಟಲ್ಪಟ್ಟಿದ್ದ 'ಹೊಸ ಸೇತುವೆ'ಗೆ ಅಬ್ಬನೂ ಕಲ್ಲು, ಮಣ್ಣು, ಇಟ್ಟಿಗೆ, ಮರಳನ್ನು ಹೊತ್ತಿದ್ದನಂತೆ. ಸರ್ಕಲ್ಲಿನಲ್ಲಿದ್ದ ಏಳುಮಲೈ ಅವರ ಮನೆಯೂ ಹಾರಂಗಿ ಹೊಳೆಯ ದಿಬ್ಬದಲ್ಲೇ ಇದ್ದು, ಮಲ್ಲೇನಹಳ್ಳಿಯ ಗುಡ್ಡದ ಗುಡಿಸಲನ್ನು ಬಿಡಿಸಿ ಅಬ್ಬ ನೇರ ಕರೆತಂದಿದ್ದು ಈ ಏಳುಮಲೈ ಅವರ ಸಾಲುಮನೆಗಳಲ್ಲಿ ಒಂದಕ್ಕೆ.

Eedina App

ಆ ಮನೆಯೂ ವಿನ್ಯಾಸದಲ್ಲಿ ನಾವಿದ್ದ ಎಲ್ಲ ಮನೆಗಳಿಗಿಂತ ವಿಶೇಷವಾಗಿಯೇನೂ ಇರಲಿಲ್ಲ. ಆ ಸಾಲಿನಲ್ಲಿ ನಾಲ್ಕೈದು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಪಕ್ಕದಲ್ಲೇ ಹೊಳೆಯ ಬದಿಗೆ ಬೆನ್ನು ಹಾಕಿದ್ದ ಏಳುಮಲೈ ಅವರ ಮನೆ. ಅಲ್ಲೊಂದು ಮಲೆಯಾಳಿ ಕುಟುಂಬ ಬಾಡಿಗೆಗಿತ್ತು. ಆ ಮನೆಯ ಹೆಂಗಸೊಬ್ಬರು ಆಡುತ್ತಿದ್ದ ನಮ್ಮನ್ನು ಕರೆದು ತಿನ್ನಲು ಉದುರುದುರಾದ ಪುಟ್ಟು ಕೊಡುತ್ತಿದ್ದರು. ಅದರ ಹಿಂದೆ ಮುಂದೆ ಕಾಯಿತುರಿಯನ್ನು ತುಂಬಿಸಿ ಕೊಡುತ್ತಿದ್ದ ಆ ತಿಂಡಿ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ನಾವು ಬೇಕಂತಲೇ ದಿನಾ ಅವರ ಮನೆಯ ಅಂಗಳದಲ್ಲಿ ಹೆಚ್ಚು ಹೊತ್ತು ಆಡಲು ಅಭ್ಯಾಸ ಮಾಡಿದೆವು. ಹಾಗಾಗಿ ನಮಗೆ ದಿನವೂ ತಿನ್ನಲು ಪುಟ್ಟು ಸಿಗುತ್ತಿತ್ತು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | 'ಇದು ಮುತ್ತಿನ ಚೆಂಡು, ಇದು ನೀಲಮ್ಮ ಬಾವಿ, ಇದು ಜೋಡಿ ಸರ್ಪ, ಇದು ಒಂಟಿ ಸರ್ಪ'

AV Eye Hospital ad

ಏಳುಮಲೈ ಅವರ ಇಬ್ಬರೂ ಗಂಡುಮಕ್ಕಳು ನಮ್ಮೊಂದಿಗೆ ಆಡಲು ಬರುತ್ತಿದ್ದರು. ದಿನಣ್ಣನಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಒಮ್ಮೊಮ್ಮೆ ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಹೋಗುತ್ತಿದ್ದವನು ಕತ್ತಲಾದರೂ ಹಿಂದಿರುಗದಿದ್ದಾಗ ಅಬ್ಬನಿಂದ ಬೀಳುತ್ತಿದ್ದ ಏಟುಗಳನ್ನು ನೆನೆದು ಅಮ್ಮಿ ಅವನು ಬರುವ ದಾರಿಯನ್ನೇ ನೋಡುತ್ತ ಕೈ-ಕೈ ಮಸೆದುಕೊಳ್ಳುತ್ತಿದ್ದಳು. ಹೀಗೆ, ನಾವೆಲ್ಲರೂ ಒಟ್ಟಿಗೆ ಇದ್ದಾಗ ಏಳುಮಲೈ ಅವರ ಮಕ್ಕಳು ಆಡಲು ತಮ್ಮ ಬಳಿ ಇದ್ದ ಬ್ಯಾಟು-ಬಾಲುಗಳನ್ನು ತರುತ್ತಿದ್ದರು.

ನಮ್ಮ ಮನೆಗೆ ಒಂದು ಹತ್ತಿಪ್ಪತ್ತು ಮಾರು ದೂರದಲ್ಲಿ ಒಬ್ಬರು ಆಂಟಿಯ ಮನೆಯಿತ್ತು. ನೋಡಲು ಬಹಳ ಸುಂದರಿ. ಅವರಿಗಿದ್ದ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ಬಲು ಚೆಲುವೆ ಎಂದು ನನಗನ್ನಿಸಿತ್ತು. ಹಾಗೆಯೇ, ಏಳುಮಲೆಯ ಎರಡನೆಯ ಮಗ ರವಿಗೂ ಅನ್ನಿಸಿತ್ತು ಎಂದೆನಿಸುತ್ತದೆ. ಕ್ರಿಕೆಟ್ ಆಟದ ನೆಪದಲ್ಲಿ ಆತ ಬಾಲ್ ಹೊಡೆಯುತ್ತಿದ್ದದ್ದು ಇದೇ ಸುಂದರ ಹುಡುಗಿಯ ಮನೆಯ ಹಿಂದಿನ ಬಾಗಿಲಿಗೆ. ಅವಳು ಬಾಗಿಲು ತೆರೆದು ಹೊರಬರಲಿ ಎಂಬುದು ಅವನ ಮನದ ಇಂಗಿತವಾದರೆ, ಆಕೆ ಹೊರಬಂದರೆ ನಾನೂ ಕೊಂಚ ನೋಡಬಹುದಲ್ಲ ಎಂಬುದು ನನ್ನ ಮನದ ಇಂಗಿತವೂ. ಆಕೆಯ ಸೌಂದರ್ಯವನ್ನು ನಾನು ಬಲು ಕುತೂಹಲದಿಂದ ನೋಡುತ್ತಿದ್ದೆ. ಅವನು ಅಷ್ಟೆಲ್ಲ ಬಾಲ್ ಹೊಡೆದರೂ ಆಕೆ ಒಮ್ಮೆಯೂ ಹೊರಬರುತ್ತಿರಲಿಲ್ಲ.

ನಾನು ಆ ಬಾಲ್ ತರಲು ಬಲು ಬೇಗ ಆಕೆಯ ಮನೆಯ ಹಿಂಬಾಗಿಲನ್ನು ಸಮೀಪಿಸುತ್ತಿದ್ದೆ. ಒಮ್ಮೊಮ್ಮೆ ಆಕೆಯ ಮನೆಯ ಹಿಂಬಾಗಿಲು ತೆರೆದಿದ್ದು, ಅಲ್ಲಿ ಆಕೆ ಕಾಣದೆ, ಆ ಬಾಗಿಲಿಗೆ ಹೊಂದಿಕೊಂಡಂತಿದ್ದ ಅಡುಗೆ ಕೋಣೆಯಲ್ಲಿ ಅವರಮ್ಮ ಕೆಲಸ ಮಾಡುತ್ತಿರುತ್ತಿದ್ದರು. ಅವರು ನನ್ನನ್ನು ನೋಡಿ ಹತ್ತಿರ ಕರೆದು, ದುಡ್ಡು ಕೊಟ್ಟು ಸಾಮಾನು ತರಲು ಅಂಗಡಿಗೆ ಕಳಿಸುತ್ತಿದ್ದರು. ಅವರು ಹೇಳಿದ್ದ ಸಾಮಾನುಗಳನ್ನು ಅಂಗಡಿಯವರೆಗೂ ಉರುಹೊಡೆಯುತ್ತ ಹೋಗುತ್ತಿದ್ದೆ. ಹಿಂದಿನ ಬಾಗಿಲಿನಿಂದಲೇ ಅಂಗಡಿಗೆ ಹೋಗಿ, ಅವರು ಹೇಳಿದ್ದ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ಬಂದು ಹಿಂದಿನ ಬಾಗಿಲಿನಿಂದಲೇ ಅವರಿಗೆ ಕೊಡುತ್ತಿದ್ದೆ. ಬದಲಿಗೆ, ಅವರು ತಿನ್ನಲು ತಟ್ಟೆಯಲ್ಲಿ ರುಚಿರುಚಿಯಾದ ಆಲೂಗಡ್ಡೆ ಪಲ್ಯದೊಂದಿಗೆ ಪೂರಿ ಕೊಡುತ್ತಿದ್ದರು. ನಾನು ಅದನ್ನು ಮನದಲ್ಲೇ ಚಪ್ಪರಿಸುತ್ತ ತಿನ್ನುತ್ತಿದ್ದೆ. ಆಲೂಗಡ್ಡೆ ಪಲ್ಯ ಮತ್ತು ಪೂರಿಯನ್ನು ನನ್ನ ಜೀವನದಲ್ಲಿ ಅದೇ ಮೊದಲ ಬಾರಿಗೆ ತಿಂದಿದ್ದು. ಇಂದಿಗೂ ಆಲೂಗಡ್ಡೆ ಪಲ್ಯ ಮತ್ತು ಪೂರಿಯನ್ನು ಕಂಡರೆ ಮೊದಲು ನೆನಪಾಗುವುದು ಅವರೇ. ಆ ರುಚಿಗಳು ನನ್ನ ನಾಲಿಗೆಯ ಕಣಕಣದಲ್ಲಿ ಇಂದಿಗೂ ಜೀವಂತ; ಅಂತೆಯೇ ಆ ಅಮ್ಮ ಮಗಳ ಸಂಬಂಧಗಳು ಕೂಡ.

ಎತ್ತರದ ದಿಬ್ಬದಲ್ಲಿದ್ದ ನಮ್ಮ ಮನೆಗೆ ಈ ಹಾರಂಗಿ ಹೊಳೆಯಿಂದಲೇ ಕುಡಿಯಲು ಮತ್ತು ಮನೆ ಬಳಕೆಗೆ ಬಿಂದಿಗೆಯಲ್ಲಿ ನೀರು ಹೊರಬೇಕಿತ್ತು. ಇಳಿಜಾರಾಗಿದ್ದ ಆ ದಿಬ್ಬದಿಂದ ಎಷ್ಟೋ ಸಲ ಜಾರಿ ಬಿದ್ದಿದ್ದೆವು. ಆ ಇಳಿಜಾರಿನಲ್ಲಿ ಅಲ್ಲಲ್ಲೇ ಹೆಜ್ಜೆಗಳು ಬಿದ್ದು-ಬಿದ್ದು ಗುಂಡಿಗಳು ಏರ್ಪಟ್ಟು, ಅವೇ ಮೆಟ್ಟಿಲುಗಳಂತಾಗಿದ್ದವು. ಆ ಹೆಜ್ಜೆಗಳೊಳಗೆ ಪಾದಗಳನ್ನು ಅಂಟಿಸಿ ಆ ಇಳಿಜಾರನ್ನು ಇಳಿದು ಹತ್ತುತ್ತಿದ್ದೆವು. ‌ಅಮ್ಮಿ ಕಾಫಿ ವರ್ಕ್ಸ್‌ನಿಂದ ಬರುವ ಹೊತ್ತಿಗೆ ನಾನು ಶಾಲೆಯಿಂದ ಬಂದು ಗಲೀಜಾದ ಪಾತ್ರೆಗಳನ್ನೆಲ್ಲ ಕೊಂಡೊಯ್ದು ಆ ಹೊಳೆಯಲ್ಲಿ ತೊಳೆದು, ಬಿಂದಿಗೆಯಲ್ಲಿ ನೀರು ಹೊತ್ತು ತಂದು, ಮನೆಯ ಕಸವನ್ನೆಲ್ಲ ಗುಡಿಸಿ ಸ್ವಚ್ಛವಾಗಿಡುತ್ತಿದ್ದೆ. ಅಮ್ಮಿ ಬಂದವಳೇ ಒಲೆ ಹಚ್ಚಿ ಅಡುಗೆಗೆ ತಯಾರಿ ಮಾಡುತ್ತಿದ್ದಳು. ಶಾಲೆಯ ರಜಾದಿನಗಳಲ್ಲಂತೂ ಬೆಳಗ್ಗೆಯಿಂದ ಸಂಜೆಯವರೆಗೆ ಆ ಹೊಳೆಯಲ್ಲಿಯೇ ಮುಳುಗಿ ಏಳುತ್ತಿದ್ದೆವು.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಲೋಕದ ಎಲ್ಲ ತಾಯಂದಿರು ಸ್ಮರಿಸಬೇಕಾದ 'ಒಆರ್‌ಎಸ್ ವೈದ್ಯ' ದಿಲೀಪ್ ಮಹಲನೋಬಿಸ್

ಮರಳಿನ ಲೋಡಿಂಗ್ ಕೆಲಸ ಮಾಡುತ್ತಿದ್ದ ಅಬ್ಬನಿಗೆ ಒಮ್ಮೆ ಇದ್ದಕ್ಕಿದ್ದಂತೆ ಹೊಳೆಯ ದಡದಲ್ಲಿದ್ದ ಮರಳಿನ ವ್ಯಾಪಾರ ಮಾಡುವ ಆಲೋಚನೆ ಬಂದು, ರಾತ್ರಿ ಮಲಗುವ ವೇಳೆಯಲ್ಲಿ ಅಮ್ಮಿಯ ಬಳಿ ಅದನ್ನು ಹೇಳಿದನು. ಅಮ್ಮಿಯೂ ಅದಕ್ಕೆ ಒಪ್ಪಿದಳು. ಮರುದಿನ ಬೆಳಗ್ಗೆ ಅಬ್ಬ ಒಂದೆರಡು ಸಿಮೆಂಟ್ ಚೀಲಗಳನ್ನು ಹಿಡಿದು ಆ ಹೊಳೆಯ ದಡದಲ್ಲಿದ್ದ ಮರಳನ್ನು ಗುದ್ದಲಿಯಿಂದ ಅಗೆದಗೆದು ಚೀಲದಲ್ಲಿ ತುಂಬಿಸಿ, ಹತ್ತಲಾರದ ದಿಬ್ಬವನ್ನು ತಡಕಾಡುತ್ತಲೇ ಹತ್ತುತ್ತ ದಿಬ್ಬದ ಮೇಲ್ಭಾಗಕ್ಕೆ ತಂದು ಸುರಿಯತೊಡಗಿದ. ಅಮ್ಮಿಯೂ ಅಬ್ಬನೊಂದಿಗೆ ಸೇರಿ, ಅಬ್ಬ ಅರ್ಧದಾರಿಗೆ ತಂದುಕೊಡುತ್ತಿದ್ದ ಮರಳಿನ ಚೀಲಗಳನ್ನು ದಿಬ್ಬದ ಮೇಲಿದ್ದ ಮರಳಿನ ಗುಡ್ಡೆಗೆ ಸುರಿಯುತ್ತಿದ್ದಳು. ಹೀಗೆ ಇಬ್ಬರೂ ಸೇರಿ ವಾರಗಟ್ಟಲೆ ಮರಳು ಹೊತ್ತರು. ಸುಮಾರು ಒಂದು ಲೋಡಿಗೆ ಸಾಕಾಗುವಷ್ಟು ಮರಳನ್ನು ಒಟ್ಟುಹಾಕಿದ್ದರು. ಅಷ್ಟರಲ್ಲಿ ಏಳುಮಲೈ ಬೇಕಂತಲೇ ಈ ವಿಷಯದಲ್ಲಿ ಕಾಲು ಕೆರೆದು ಜಗಳ ಶುರುಮಾಡಿದ್ದನು. ಇಬ್ಬರ ನಡುವೆ ದೊಡ್ಡ ಜಗಳವಾಗಿ, ಅಬ್ಬ ಒಂದು ಟ್ರಾಕ್ಟರ್ ಕರೆಸಿ ತಾನು ಒಟ್ಟಿದ್ದ ಮರಳನ್ನು ತುಂಬಿಸಿ ಕಳಿಸಿದವನು ಮತ್ತೆ ಆ ಕೆಲಸಕ್ಕೆ ಕೈ ಹಾಕಲಿಲ್ಲ. ಇದಾದ ಸ್ವಲ್ಪ ದಿನಗಳಲ್ಲೇ ಏಳುಮಲೈನ ಕಡೆಯ ಹತ್ತಾರು ಟ್ರಾಕ್ಟರ್‌ಗಳು ಆ ಹೊಳೆಯ ದಿಬ್ಬದ ಮೇಲೆ ಬಂದು ನಿಂತು ಹೊಳೆಯ ದಡದಲ್ಲಿ ಹತ್ತಾರು ಆಳುಗಳು ಮರಳನ್ನು ಬಗೆಯುತ್ತಿದ್ದರು. ಮುಂದೆ ಆತ ಅದನ್ನೇ ದೊಡ್ಡ ವ್ಯಾಪಾರ ಮಾಡಿಕೊಂಡು, ಹೊಳೆಯ ಉದ್ದಗಲಕ್ಕೂ ಮರಳು ತೋಡಿ, ಅಲ್ಲಲ್ಲಿ ದೊಡ್ಡ-ದೊಡ್ಡ ಹೊಂಡಗಳನ್ನೇ ಸೃಷ್ಟಿಸಿದ್ದನು.

ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ. ಬೇಸಿಗೆಯ ರಜಾದಿನಗಳ ಸಮಯ. ಬೈಲುಕುಪ್ಪೆಯ ಟಿಬೆಟ್ ಕ್ಯಾಂಪಿನಲ್ಲಿ ಜೋಳ ಮುರಿಯುವ ಕೆಲಸಕ್ಕೆ ಕೂಲಿಯಾಳುಗಳನ್ನು ಕೊಂಡೊಯ್ಯಲು ನಮ್ಮೂರಿಗೆ ಮಾರುತಿ ವ್ಯಾನ್‌ಗಳನ್ನು ಕಳುಹಿಸುತ್ತಿದ್ದರು. ಆಗ ಒಂದಷ್ಟು ದಿನ ಅಮ್ಮಿ ಮಾರುತಿ ವ್ಯಾನಿನಲ್ಲಿ ಕೂರಿಸಿಕೊಂಡು ಟಿಬೆಟ್ ಕ್ಯಾಂಪಿಗೆ ಜೋಳ ಮುರಿಯಲು ಕರೆದುಕೊಂಡು ಹೋಗುತ್ತಿದ್ದಳು. ವಿಶಾಲವಾದ ಬರಡು ಬರಡಾದ ಹೊಲದಲ್ಲಿ ಉರಿಬಿಸಿಲಿನಲ್ಲಿ ನೆತ್ತಿಗೊಂದು ಬಟ್ಟೆ ಕಟ್ಟಿಕೊಂಡು ಅಮ್ಮಿ ಕೆಲಸ ಮಾಡುತ್ತಿದ್ದರೆ, ನಾನು ಅವಳೊಂದಿಗೆ ಸೇರಿಕೊಂಡು ಜೋಳದ ಕುತ್ತಿಗೆ ಹಿಡಿದು ಲಟಕ್ಕನೆ ಮುರಿಯಲು ಬಲು ಮಜವೆನ್ನಿಸುತ್ತಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಬಹಳ ಹುಮ್ಮಸ್ಸಿನಿಂದ ಜೋಳವನ್ನು ಮುರಿಯುತ್ತಿದ್ದೆ. ಜೋಳ ಮುರಿದಾದ ಮೇಲೆ ಬಿಸಿಲಿನ ಝಳಕ್ಕೆ ಅಡ್ಡಲಾಗಿ ಉದ್ದಕ್ಕೆ ಕಟ್ಟಿದ್ದ ಟಾರ್ಪಲ್ಗಳ ಕೆಳಗೆ ಕುಳಿತು, ಅವರು ಸಂಜೆ ಹೊತ್ತಿಗೆ ಕೊಡುತ್ತಿದ್ದ ಚಹಾ-ಬಿಸ್ಕತ್ತನ್ನು ಎದುರು ನೋಡುತ್ತ, ಆ ಟಾರ್ಪಲ್ ಕೆಳಗೆ ಒಟ್ಟಿದ್ದ ಜೋಳದ ಸಿಪ್ಪೆ ಸುಲಿಯುತ್ತಿದ್ದೆವು. ಬಹಳ ಹೆಸರುವಾಸಿಯಾದ ನಮ್ಮೂರಿನ ಟಿಬೆಟ್ ಕ್ಯಾಂಪ್‌ನೊಂದಿಗೆ ನನ್ನ ಮೊದಲ ಭೇಟಿ ಹೀಗಿತ್ತು.

ಈ ನಡುವೆ ಅಮ್ಮಿಗೆ ಏನೋ ಒಂದು ರೀತಿಯ ಕಾಯಿಲೆಯಾಯಿತು. ಆದರೂ ಅಮ್ಮಿ ಹಗಲೆಲ್ಲ ನಮಗೆ ಬೇಯಿಸಿಟ್ಟು ಕೆಲಸಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ನಮ್ಮೊಂದಿಗೆ ಎಂದಿನಂತೆ ಸಹಜವಾಗೇ ಇರುತ್ತಿದ್ದ ಅಮ್ಮಿ, ಸರಿಯಾಗಿ ಮಧ್ಯರಾತ್ರಿಯ ಹೊತ್ತಿಗೆ ಅಬ್ಬನನ್ನು ಎಬ್ಬಿಸಿ ಮಾತಿಗೆ ತೊಡಗುತ್ತಿದ್ದಳು. ಪ್ರತಿದಿನ ಅರೆನಿದ್ರೆಯಲ್ಲಿರುತ್ತಿದ್ದ ನನಗೆ, ಅವರ ಮಾತುಗಳು ಅಸಂಬದ್ಧವೆನ್ನುವಂತೆ ಕೇಳುತ್ತಿದ್ದವು.

ಅಬ್ಬ ಅಲ್ಲಲ್ಲೇ ಮಾತಿನ ನಡುವೆ, "ಸರಿ ಮಲ್ಕೋ... ಬೆಳಗ್ಗೆ ಮಾತಾಡನಾ..." ಅನ್ನುತ್ತಿದ್ದನು. ಆ ದಿನ ರಾತ್ರಿ ಮಾತ್ರ ನಾನು ನಿಜಕ್ಕೂ ಭಯಗೊಂಡಿದ್ದೆ. ಮಧ್ಯರಾತ್ರಿ, ಆ ಅಡ್ಡಗೋಡೆಯ ಮಿಣುಕು ಬೆಳಕಲ್ಲಿ ಇಬ್ಬರ ನಡುವೆ ನಡೆಯುತ್ತಿದ್ದ ಮಾತುಕತೆ ನನ್ನನ್ನು ಸಂಪೂರ್ಣ ಎಚ್ಚರಿಸಿತು. ನಾನು ತಲೆ ತುಂಬಾ ಹೊದ್ದಿದ್ದ ಹೊದಿಕೆಯನ್ನು ಸ್ವಲ್ಪವೇ ಸರಿಸಿದಾಗ, ಅಮ್ಮಿ ಗೋಡೆಗೆ ಒರಗಿ ಅಬ್ಬನ ಬಳಿ ಗಡಸು ಧ್ವನಿಯಲ್ಲಿ, "ನಂಗೊಂದು ಬೀಡಿ ಬೇಕು," ಎಂದು ಕೇಳುತ್ತಿದ್ದಳು. ಅಬ್ಬ ಗೋಡೆಗೆ ನೇತುಹಾಕಿದ್ದ ಅಂಗಿಯ ಜೇಬಿನಿಂದ ಎರಡು ಬೀಡಿಗಳನ್ನು ತೆಗೆದು ಹಚ್ಚಿ, ತಾನೊಂದನ್ನು ಬಾಯಲ್ಲಿ ಕಚ್ಚಿಕೊಂಡು, ಮತ್ತೊಂದನ್ನು ಅಮ್ಮಿಯ ಬೆರಳ ಸಂದಿಗೆ ಸಿಕ್ಕಿಸಿದ. ಬೀಡಿ ಸೇದಿ ಹೊಗೆ ಬಿಡುತ್ತ ಮಾತನಾಡುತ್ತಿದ್ದ ಅಮ್ಮಿ ಥೇಟ್ ಒಬ್ಬ ಗಂಡಸಿನಂತೆಯೇ ನನಗೆ ಭಾಸವಾದಳು. ಅಬ್ಬ ಬಹಳ ಮೆದು ಧ್ವನಿಯಲ್ಲಿ, "ನೀನ್ಯಾರು? ಹೆಂಗ್ ಬಂದೆ? ಯಾಕ್ ಬಂದೆ?" ಎಂಬಿತ್ಯಾದಿ ಅದರ ಇತಿಹಾಸ ತಿಳಿಯಲು ಪ್ರಯತ್ನಿಸುತ್ತಿದ್ದ. ಅದು, "ನಾನು ಏಳು ವರ್ಷದ್ ಹಿಂದೆ ಇದೇ ಹಾರಂಗಿ ಹೊಳೆಗೆ ಬಿದ್ದು ಸತ್ತವನು. ಒಂದಿನ ನಾನು ಒಂದು ಮರದ ಮೇಲೆ ಕೂತಿದ್ದೆ. ಇವಳು ಹೊಳೇಲಿ ಸ್ನಾನ ಮಾಡ್ತಿದ್ಲು... ನಂಗೆ ತುಂಬಾ ಇಷ್ಟ ಆದ್ಲು. ಅದ್ಕೇ ಅವಳ್ಹಿಂದೆ ಬಂದೆ," ಎಂದು ಹೇಳಿತು. ಅಬ್ಬ ಅದರ ಮುಂದೆ ದೀನನಾಗಿ ಬಾಗಿ, "ನೋಡು... ನಾವು ಬಡುವ್ರು. ನಮಗೇನೂ ತೊಂದ್ರೆ ಕೊಡ್ಬೇಡ. ಅವ್ಳುನ್ನ ಬುಟ್ಬುಡು... ನಿನಗೇನು ಬೇಕೋ ಕೇಳು, ತಂದ್ಕೊಡ್ತೀನಿ," ಎನ್ನುತ್ತ ಪರಿಪರಿಯಾಗಿ ಬೇಡಿಕೊಂಡನು. ಮರುಕ್ಷಣವೇ, "ನಾನು ಚಿಕನ್ ತಿನ್ಬೇಕು," ಎಂದಿತು. ತನ್ನ ಬೇಕು-ಬೇಡಗಳನ್ನೆಲ್ಲ ಹೇಳಿ, "ನಾನು ಇವಳನ್ನು ಮಾತ್ರ ಬಿಡಲ್ಲ... ಎಷ್ಟೋ ದಿನ ಕಾದು ನಂತರ ಸಿಕ್ಕವ್ಳೆ. ಇವ್ಳನ್ನ ಕರ್ಕೊಂಡೋಗ್ದೆ ನಾನು ಇಲ್ಲಿಂದ ಹೋಗಲ್ಲ..." ಎನ್ನುತ್ತ ಹಠಬೀಳುತ್ತಿತ್ತು. ಅಬ್ಬ, ಅದು ತಿನ್ನಲು ಕೇಳಿದ್ದನ್ನೆಲ್ಲ ತಂದು ತಿನ್ನಿಸುತ್ತಿದ್ದ. ಅದು ಅಬ್ಬನ ಬಜೆಟನ್ನು ಮೀರಿ ಏನನ್ನೂ ಕೇಳುತ್ತಿರಲಿಲ್ಲ. ಹಗಲಿನಲ್ಲಿ ಯಾವ ರಗಳೆ ಇಲ್ಲದೆ ಇರುತ್ತಿದ್ದದ್ದು, ಪ್ರತಿದಿನ ಮಧ್ಯರಾತ್ರಿ ಸರಿಯಾಗಿ ಮೈಮೇಲೆ ಬರುತ್ತಿತ್ತು.

ಕುಶಾಲನಗರದಲ್ಲಿದ್ದ ವೆಂಕಟೇಶ್ವರ ಸಿನಿಮಾ ಟಾಕೀಸಿನ ಎದುರಿಗೆ ಒಬ್ಬರು ಸಾಬರು ಮೈಮೇಲೆ ದೆವ್ವ ಬರುವವರನ್ನು ಗುಣಪಡಿಸುತ್ತಾರೆಂದು ನಂಬಿ ಕುಶಾಲನಗರದ ಸುತ್ತ ಊರುಗಳಿಂದ  ದಂಡಿನೋಪಾದಿಯಲ್ಲಿ ಜನ ಬರುತ್ತಿದ್ದರು. ಆವತ್ತು ಅಬ್ಬ ಅಮ್ಮಿಯನ್ನೂ ನನ್ನನ್ನೂ ಕರೆದುಕೊಂಡು, ಒಂದು ಪ್ಲಾಸ್ಟಿಕ್ ಚೀಲದಲ್ಲಿ ತಡೆ ಹೊಡೆಯಲೆಂದು ಒಂದೆರಡು ಕೋಳಿ ಮೊಟ್ಟೆ, ನಿಂಬೆಹಣ್ಣು, ತೆಂಗಿನಕಾಯಿ, ಬೇವಿನ ಸೊಪ್ಪು ಎಲ್ಲವನ್ನೂ ತೆಗೆದುಕೊಂಡು ಕುಶಾಲನಗರದ ಸಾಬರ ಮನೆಯ ಸಮೀಪಿಸಿದ್ದನು. ರಸ್ತೆ ಬದಿಯ ಪುಟ್ಟ ಮನೆಯ ಎದುರು ಜನಜಂಗುಳಿಯೇ ನೆರೆದಿತ್ತು. ಅಲ್ಲಿ ನೆರೆದಿದ್ದ ಜನಜಂಗುಳಿ ಕರಗುವವರೆಗೂ ನಾವು ಕಾಯಲೇಬೇಕಿದ್ದರಿಂದ ನಾನು ಕುತೂಹಲಕ್ಕೆ ಅಲ್ಲಲ್ಲೇ ಜನರನ್ನು ಸರಿಸಿ, ಚೂರುಪಾರು ಕಾಣುತ್ತಿದ್ದ ದೃಶ್ಯಗಳನ್ನು ವೀಕ್ಷಿಸತೊಡಗಿದೆ. ಸಾಬರು ರೋಗಿಯ ಮುಂದಲೆಯ ನಾಲ್ಕೈದು ಕೂದಲೆಳೆಗಳನ್ನು ಹಿಡಿದುಕೊಂಡು, ಹಿಡಿಭಸ್ಮವನ್ನು ಭ್ರೂಮಧ್ಯಕ್ಕೆ ಹಿಡಿದು ಏನೋ ಮಂತ್ರ ಪಠಿಸಿ ರೋಗಿಯ ಮೇಲೆ ಎರಚಿದರೆ ರೋಗಿಯ ಮೈ ತಾನಾಗೆ ನಡುಗುತ್ತ ಜೋರಾಗಿ ಕಿರುಚಿ ಒದ್ದಾಡಲು ಶುರುಮಾಡುತ್ತಿತ್ತು. ಒಳಗಿದ್ದವರೆಲ್ಲ ಅವರನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ನಂತರ ಬೇವಿನ ಸೊಪ್ಪಿನಿಂದ ಚೆನ್ನಾಗಿ ಬಾರಿಸುತ್ತಿದ್ದರು. ಏಟು ತಿಂದ ನಂತರ ಅವು ಹದ್ದುಬಸ್ತಿಗೆ ಬಂದು, ಸಾಬರು ಹೇಳಿದ್ದಕ್ಕೆ ಒಪ್ಪಿಕೊಳ್ಳುತ್ತಿದ್ದವು.

ಎಷ್ಟು ಹೊತ್ತು ಕಳೆದಿತ್ತೋ ನನಗೆ ಸರಿಯಾಗಿ ನೆನಪಿಲ್ಲ. ಕಡೆಗೆ ನಮ್ಮನ್ನು ಒಳಗೆ ಕರೆದರು. ಅಮ್ಮಿಯನ್ನು ಆ ಸಾಬರ ಮುಂದೆ ಕೂರಿಸಿದಾಗ ಚೆನ್ನಾಗಿಯೇ ಇದ್ದವಳು. ಅವರು ಭಸ್ಮ ಮಂತ್ರಿಸಿ ಅಮ್ಮಿಯ ಮೇಲೆ ಎರಚಿ ಮುಂದಲೆಯ ನಾಲ್ಕು ಕೂದಲನ್ನು ಹಿಡಿದ ತಕ್ಷಣ ಅಮ್ಮಿ ಚೀರುತ್ತ ಮೈ ಕೊಡವಲು ಶುರು ಮಾಡಿದಳು. ಅವರು ಬೇವಿನ ಸೊಪ್ಪಿನಿಂದ ಅಮ್ಮಿಯನ್ನು ಚೆನ್ನಾಗಿ ಹೊಡೆದರು. ನಾನು ಹೆದರಿ ನಿಂತಲ್ಲೇ ಅಳತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಅಮ್ಮಿಯ ಒದರಾಟ ಕಡಿಮೆಯಾಯಿತು. ಆಗ ಸಾಬರು ಮಾತನಾಡಿಸಲು ಪ್ರಾರಂಭಿಸಿದರು. ಅವರ ಪ್ರಶ್ನೆಗೆಲ್ಲ ಉತ್ತರ ಕೊಟ್ಟಾದ ಮೇಲೆ, "ಈಗ ಬಿಟ್ಟು ಹೋಗ್ತೀಯಲ್ಲ...?" ಎಂದು ಕೇಳಿದರೆ, "ಇಲ್ಲಾ... ನಾನಿವ್ಳನ್ನ  ಬುಟ್ಟೋಗದಿಲ್ಲ," ಎನ್ನುತ್ತಾ ಹಠ ಮಾಡಿದ್ದರಿಂದ ಸಾಬರು ಇನ್ನಷ್ಟು ಹೊಡೆದರು. ಕಡೆಗೊಮ್ಮೆ, "ಓಯ್ತಿನಿ... ಇವ್ಳುನ್ನ ಬಟ್ಟೋಯ್ತೀನಿ... ಇನ್ಯಾವತ್ತೂ ಇವ್ಳ್ ಹಿಂದೆ ಬರಾದಿಲ್ಲ," ಎಂದು ಚೀರುತ್ತ ಪ್ರಜ್ಞೆ ತಪ್ಪಿ ಬಿದ್ದುಹೋಯಿತು. ಅಂದು ವಾಪಸು ಮನೆಗೆ ಬರುವಾಗ ತಡವಾಗಿತ್ತು ಮತ್ತು ಬರುವ ದಾರಿಯುದ್ದಕ್ಕೂ ಅಮ್ಮಿ ಗುಣವಾದವಳಂತೆ ಕಂಡಳು. ಅಂದು ಮಧ್ಯರಾತ್ರಿ ಎಂದಿನಂತೆ ಅದು ಮೈಮೇಲೆ ಬಂದು, "ನಾನು ಆ ಸಾಬರ ಮನೆ ಒಳಗಡೆ ಬರಲೇ ಇಲ್ಲ. ಮುಂದೆ ಇದ್ದ ಕಾಂಪೌಂಡಿನ ಮೇಲೆ ಕೂತಿದ್ದೆ. ಪುನಃ ನೀವು ವಾಪಸ್ ಬರುವಾಗ ನಿಮ್ಮ ಜೊತೆಯಲ್ಲೇ ಬಂದೆ," ಎಂದು ಹೇಳಿತು. ಅದಾದ ಮೇಲೂ ಅಬ್ಬ ಆರಕ್ಕೆ ಮೂರಕ್ಕೆ ಅಮ್ಮಿಯನ್ನು ಸಾಬರ ಬಳಿ ಕೊಂಡೊಯ್ಯುತ್ತಲೇ ಇದ್ದನು. ಸದ್ಯ... ನಮ್ಮ ಕುಟುಂಬಕ್ಕೆ ಸಾಬರೊಂತರ ನೈತಿಕ ಆಸರೆಯಂತಿದ್ದರು. ಇದರ ಮಧ್ಯೆ ಅಮ್ಮಿ ಗುಣವಾದದ್ದು ನನ್ನ ಅರಿವಿಗೆ ಬರಲೇ ಇಲ್ಲ. ಆದರೆ, ಆ ಸಮಯದಲ್ಲಿ ಮಾತ್ರ ಅಬ್ಬ ಕುಡಿಯದೆ, ದುಡಿದದ್ದರಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಶಿಸ್ತಿನ ಸಿಪಾಯಿಯಂತೆ ಮನೆಗೆ ಬರುತ್ತಿದ್ದ.

ಮುಂದುವರಿಯುವುದು...
ನಿಮಗೆ ಏನು ಅನ್ನಿಸ್ತು?
1 ವೋಟ್
eedina app