ಗ್ರಾಹಕಾಯಣ | ರೋಗಿಗಳಿಗೂ ಹಕ್ಕುಗಳುಂಟು; ಆದರೆ, ಈ ಕುರಿತ ಕಾನೂನು ರೂಪಿಸುವ ಅವಶ್ಯಕತೆಯೂ ಉಂಟು

ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಮಲೇಶಿಯಾ ಮುಂತಾದ ದೇಶಗಳಲ್ಲಿ ರೋಗಿಗಳ ಹಕ್ಕು, ಜವಾಬ್ದಾರಿಗೆ ಸಂಬಂಧಿಸಿದ ಪ್ರತ್ಯೇಕ ಮತ್ತು ನಿರ್ದಿಷ್ಟ ಕಾನೂನುಗಳಿವೆ. ನಮ್ಮಲ್ಲಿ ಸದ್ಯಕ್ಕೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಆಧರಿಸಿಯೇ ಈ ಹಕ್ಕುಗಳು ಜೀವಂತವಾಗಿವೆ. ಹಾಗಾಗಿ, ಈ ಕುರಿತು ಸರ್ಕಾರ ಆಲೋಚಿಸಬೇಕಾದ ಅಗತ್ಯವಿದೆ

ಅನಾರೋಗ್ಯ ಯಾರಿಗೂ ತಪ್ಪಿದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವಿತಾವಧಿಯಲ್ಲಿ ಅನಾರೋಗ್ಯದ ಕಾರಣ ಆಸ್ಪತ್ರೆ, ನರ್ಸಿಂಗ್ ಹೋಮ್ ಇತ್ಯಾದಿಗೆ ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ರೋಗಿಗಳು ಅಸಹಾಯಕರಾಗಿರುತ್ತಾರೆ. ವೈದ್ಯರು ಹೇಳಿದ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಅವರು ಸೂಚಿಸುವ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಶಿಕ್ಷಣ, ಬುದ್ದಿವಂತಿಕೆ, ಅನುಭವ ಹಾಗೂ ವೃತಿಪರತೆಯಲ್ಲಿ ವೈದ್ಯರು ಮೇಲ್ಮಟ್ಟದಲ್ಲಿರುವುದರಿಂದ ರೋಗಿ ಯಾವುದನ್ನೂ ಪ್ರಶ್ನಿಸಲು ಆಗುವುದಿಲ್ಲ. ಆದರೆ, ವೈದ್ಯರು ಮತ್ತು ರೋಗಿ ನಡುವಿನ ಸಂಬಂಧ ಇವತ್ತು ಕೇವಲ ಸೇವೆಯಾಗಿ ಉಳಿದಿಲ್ಲ. ಅದೊಂದು ವ್ಯಾಪಾರದ ಒಪ್ಪಂದವಾಗಿದೆ. ರೋಗಿ ಮತ್ತು ವೈದ್ಯರ ನಡುವಿನ ಸಂಬಂಧದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ರೋಗಿಗಳಿಗೆ ಕೆಲವೊಂದು ಹಕ್ಕುಗಳನ್ನು ನೀಡುವ ಅಗತ್ಯವಿದೆ.

ವಿದೇಶಗಳಲ್ಲಿ ಇರುವಂತೆ ರೋಗಿಗಳ ಹಕ್ಕು ಮತ್ತು ಜವಾಬ್ದಾರಿಗೆ ಪ್ರತ್ಯೇಕವಾದ ಕಾನೂನು ನಮ್ಮ ದೇಶದಲ್ಲಿ ಇಲ್ಲ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ ರೋಗಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳಿವೆ. ಮಲೇಶಿಯಾದಲ್ಲಿರುವ ಅಂತಾರಾಷ್ಟ್ರೀಯ ಗ್ರಾಹಕ ಸಂಸ್ಥೆಗಳ ಒಕ್ಕೂಟದ (ಸಿಐ) ಸತತ ಪ್ರಯತ್ನದಿಂದ ರೋಗಿಯ ಹಕ್ಕುಗಳಿಗೆ ಮಾನ್ಯತೆ ದೊರಕಿದೆ. ಆದರೆ, ಭಾರತದಲ್ಲಿ ಮಾತ್ರ ಈ ಕುರಿತು ಪ್ರಯತ್ನಗಳು ನಡೆದಿಲ್ಲ. ಕೆಲವು ವರ್ಷಗಳ   ಹಿಂದೆ ಪಾಂಡಿಚೇರಿಯಲ್ಲಿರುವ 'ಜವಹರಲಾಲ್ ನೆಹರು ಇನ್ಸ್‌ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್' ಈ ನಿಟ್ಟಿನಲ್ಲಿ ಒಂದು ಪ್ರಯತ್ನ ನಡೆಸಿತ್ತು. ಅದೇ ರೀತಿ, ಮುಂಬೈನಲ್ಲಿರುವ ಸಂಸ್ಥೆಯೊಂದು ಸಹ ರೋಗಿಯ ಹಕ್ಕುಗಳ ಬಗ್ಗೆ ಕಾನೂನು ಕರಡು ಸಿದ್ಧಪಡಿಸಿತ್ತು.

Image
ಸಾಂದರ್ಭಿಕ ಚಿತ್ರ

ಸುಪ್ರೀಂ ಕೋರ್ಟ್ ಮತ್ತು ಕೆಲವು ಹೈಕೋರ್ಟ್‍ಗಳು ಆಗಾಗ ನೀಡುತ್ತಿರುವ ಮಹತ್ವದ ತೀರ್ಪುಗಳನ್ನು ಗಮನಿಸಿದಾಗ, ರೋಗಿಯ ಹಕ್ಕುಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತೋರುತ್ತದೆ. ಉದಾಹರಣೆಗೆ, ರಸ್ತೆ ಅಪಘಾತಕ್ಕೆ ಸಿಕ್ಕಿರುವ ವ್ಯಕ್ತಿಗೆ ಹತ್ತಿರದ ಯಾವುದೇ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಮ್‍ಗಳು ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಅಂಥ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾಗಿರುವ ವ್ಯಕ್ತಿಯಿಂದ ಯಾವುದೇ  ಹಣವನ್ನು ನಿರೀಕ್ಷಿಸದೆ ಚಿಕಿತ್ಸೆ ನೀಡಬೇಕೆಂದು ಸಹ ಹೇಳಲಾಗಿದೆ. ತನಿಖೆ, ಪೊಲೀಸ್ ವರದಿ, ಕೋರ್ಟ್, ಕಚೇರಿ ಮುಂತಾದವುಗಳನ್ನು ಮುಂದಿಟ್ಟುಕೊಂಡು ಚಿಕಿತ್ಸೆ ನಿರಾಕರಿಸುವುದಾಗಲೀ ಅಥವಾ ವಿಳಂಬ ಮಾಡುವುದಾಗಲೀ ವೈದ್ಯಕೀಯ ನಿರ್ಲಕ್ಷವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ದೇಶದ ಯಾವುದೇ ಆಸ್ಪತ್ರೆ ಅಥವಾ ನರ್ಸಿಂಗ್‍ ಹೋಮ್‍ನಲ್ಲಿ ಚಿಕಿತ್ಸೆ  ಪಡೆಯುವುದು ನಾಗರಿಕರ ಹಕ್ಕು.

ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‍ ಹೋಮ್‍ಗಳು ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಇಲ್ಲವೇ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ  ನೀಡಬೇಕೆಂದು ಸಹ ಹೇಳಿದೆ. ಆಸ್ಪತ್ರೆಗೆ ಅಗತ್ಯವಾದ ಯಂತ್ರೋಪಕರಣ ಆಮದು ಮಾಡಿಕೊಳ್ಳುವಾಗ ಅದರ ಮೇಲೆ ವಿಧಿಸುವ ಸೀಮಾ ಸುಂಕಕ್ಕೆ ವಿನಾಯಿತಿ ನೀಡಿದ ಸರ್ಕಾರದ ಕ್ರಮವನ್ನು ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ಸಾರ್ವಜನಿಕ ಹಿತಾಸಕ್ತಿ ದೂರನ್ನು ಸಲ್ಲಿಸಿತ್ತು. ಈ ಪ್ರಕರಣದ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್, ಆಸ್ಪತ್ರೆಗಳಿಗೆ ಈ ರೀತಿ ಸೂಚನೆ ನೀಡಿತ್ತು. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಸಹ ಇದನ್ನೇ ಪುನರುಚ್ಚರಿಸಿದೆ. ಆದ್ದರಿಂದ ಇದು ಕೂಡ ರೋಗಿಯ ಹಕ್ಕು ಎಂದಾಯಿತು.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಮೊಬೈಲ್ ಆ್ಯಪ್‍ಗಳ ಮೂಲಕ ಸಾಲ ನೀಡುವ ಕಂಪನಿಗಳಿಗೆ ರಿಸರ್ವ್ ಬ್ಯಾಂಕ್ ಲಗಾಮು

ಪ್ರತಿಯೊಬ್ಬ ರೋಗಿಯೂ ಕೆಲವೊಂದು ಹಕ್ಕುಗಳಿಗೆ ಅರ್ಹರಾಗಿರುತ್ತಾರೆ. ಅದಕ್ಕೆ ಕಾನೂನಿನ  ಮಾನ್ಯತೆ ದೊರಕಿದೆಯೋ ಇಲ್ಲವೋ ಅದು ಮುಖ್ಯವಲ್ಲ. ಅವುಗಳಲ್ಲಿ ಮುಖ್ಯವಾದದ್ದು ಆರು  ಹಕ್ಕುಗಳು. ಪ್ರಥಮವಾಗಿ, ಒಬ್ಬ ರೋಗಿ ಅಥವಾ ಆತನ/ ಆಕೆಯ ಸಂಬಂಧಿಕರು ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾರೆ. ಚಿಕಿತ್ಸೆ ನೀಡುವ ವೈದ್ಯರ ಹೆಸರುಗಳು, ಅವರ ವಿದ್ಯಾರ್ಹತೆ, ಆರೋಗ್ಯದ ಸ್ಥಿತಿಗತಿ, ಚಿಕಿತ್ಸೆಯ ಫಲಶೃತಿ, ಅದಕ್ಕೆ ತಗಲುವ ವೆಚ್ಚ, ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮ ಇತ್ಯಾದಿ ಬಗ್ಗೆ ಮಾಹಿತಿ ಹೊಂದುವುದು ರೋಗಿಯ ಹಕ್ಕು. ಚಿಕಿತ್ಸೆ ಪಡೆಯುವ ಮುನ್ನ ಅದಕ್ಕೆ ಒಪ್ಪಿಗೆ ಸೂಚಿಸುವುದು ರೋಗಿಯ ಹಕ್ಕು ಮತ್ತು ಜವಾಬ್ದಾರಿ ಎರಡೂ ಆಗಿದೆ. ಆ ರೀತಿ ಒಪ್ಪಿಗೆ ನೀಡುವಾಗ ವೈದ್ಯರಿಂದ ಮಾಹಿತಿ ಪಡೆಯುವುದು ರೋಗಿಯ ಹಕ್ಕು. ರೋಗಿಯನ್ನು ವೈದ್ಯಕೀಯ ಸಂಶೋಧನೆಗೆ ಅಥವಾ ಪ್ರಯೋಗದ ಚಿಕಿತ್ಸೆಗೆ ಒಳಪಡಿಸಲು ಉದ್ದೇಶಿಸಿದ್ದರೆ ಅದಕ್ಕೆ ಸಮ್ಮತಿ ಸೂಚಿಸುವುದು ಇಲ್ಲವೇ ನಿರಾಕರಿಸುವುದು ರೋಗಿಯ ಹಕ್ಕು.

ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಂಬಂಧಪಟ್ಟ ವಿಷಯದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕು ಹೊಂದಿದ್ದಾನೆ. ಆಸ್ಪತ್ರೆಯು ರೋಗಿಯ ಆರೋಗ್ಯದ ಸ್ಥಿತಿಗತಿ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ಯಾರಲ್ಲೂ ಹಂಚಿಕೊಳ್ಳಬಾರದು. ಹಾಗೊಮ್ಮೆ ಬಹಿರಂಗಪಡಿಸಬೇಕಾದಲ್ಲಿ ರೋಗಿಯ ಅಥವಾ ಅವರ ಸಂಬಂಧಿಕರ ಅಪ್ಪಣೆ ಪಡೆಯಬೇಕು. ವಿಮಾ ಕಂಪನಿಗಳಿಗೆ ಮಾಹಿತಿ ಅಗತ್ಯವಿದ್ದಲ್ಲಿ ಅಥವಾ ಕಾನೂನಿನ ಪ್ರಕಾರ ಮಾತ್ರ ರೋಗಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಬಹುದು. ರೋಗಿಯನ್ನು ಒಬ್ಬ ಮಾನವ ಎಂಬ ದೃಷ್ಟಿಯಿಂದ ನೋಡಬೇಕೇ ಹೊರತು ಜಾತಿ, ಮತ, ಭಾಷೆ, ಲಿಂಗ ಇತ್ಯಾದಿ ಆಧಾರದ ಮೇಲೆ ತಾರತಮ್ಯ ತೋರಬಾರದು. ರೋಗಿಯಾದವರು ಒಬ್ಬ ವೈದ್ಯನಿಂದಲೇ ಚಿಕಿತ್ಸೆ ಪಡೆಯಬೇಕೆಂಬ ನಿಯಮವಿಲ್ಲ ಅಥವಾ ಒಬ್ಬ ವೈದ್ಯ ಹೇಳಿದ್ದೇ ಸತ್ಯವೆಂದು ಪರಿಗಣಿಸಬೇಕಿಲ್ಲ. ಪ್ರತಿಯೊಬ್ಬ ರೋಗಿಯೂ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸಿ ಅವರ ಅಭಿಪ್ರಾಯ (ಸೆಕೆಂಡ್ ಒಪೀನಿಯನ್) ಪಡೆಯುವ ಹಕ್ಕು ಸಹ ಹೊಂದಿರುತ್ತಾರೆ.

Image
ಸಾಂದರ್ಭಿಕ ಚಿತ್ರ

ಹಾಗೆಯೇ, ರೋಗಿಗಳು ಮತ್ತು ಅವರ ಸಂಬಂಧಿಕರು ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ. ಉದಾಹರಣೆಗೆ, ರೋಗಿಯನ್ನು ಆಸ್ಪತ್ರೆಗೆ ತಂದ ಕೂಡಲೇ ಆತ / ಆಕೆ ಸಾವನ್ನಪ್ಪಿದರೆ, ಸಂಬಂಧಿಕರು ಹಿಂದು-ಮುಂದು ನೋಡದೆ ವೈದ್ಯರನ್ನು ಥಳಿಸುವುದು, ಆಸ್ಪತ್ರೆ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು, ವಿನಾಕಾರಣ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸುವುದು ಇತ್ಯಾದಿ ಸಂಭವಿಸುತ್ತಲೇ ಇರುತ್ತದೆ. ಇದೆಲ್ಲವನ್ನೂ ನಿಯಂತ್ರಿಸುವುದು ಅಗತ್ಯ.

ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡೇ, ರೋಗಿಯ ಎಲ್ಲ ಹಕ್ಕು ಮತ್ತು ಜವಾಬ್ದಾರಿಗಳನ್ನು ಸೇರಿಸಿ ಅದಕ್ಕೊಂದು ಕಾನೂನಿನ ರೂಪ ನೀಡುವುದಕ್ಕೆ ಸರ್ಕಾರ ಮುಂದಾಗಬೇಕಿದೆ.

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
1 ವೋಟ್