ಕರುಣೆಯ ಕೃಷಿ | ರಾಬಿನ್ ಜಾಂಗೊಂ ಕವಿತೆ 'ಪಲಾಯನ'

ಸಂದೇಶದ ಮುಸುಕಲ್ಲಿ ಕಳಿಸಿದ್ದ ಎಚ್ಚರ

ತಲುಪಿತ್ತು ಊರು ಎದ್ದು ಓಡಾಡುವ ಮುನ್ನ.

ಅವರು ಹೊರಟಾಗ ಒಯ್ಯಲಿಲ್ಲ

ಪಾತ್ರೆಪಗಡೆಗಳನ್ನಾಗಲೀ, ಕಂಬಳಿಹೊದಿಕೆಯನ್ನಾಗಲೀ

ಕತ್ತಿಯನ್ನಾಗಲೀ.

 

ಹೊರಟಂತೆ ಅವರು ಪಾಳೆಗಾರರ ಹೊರಠಾಣೆಗೆ

ಬಿಟ್ಟು ಹೋಗಿದ್ದರು ಅಂಗಳದಲ್ಲಿ ಕೋಳಿಗಳನ್ನು

ಮೆಟ್ಟಿಲ ಮೇಲೆ ಮಲಗಿದ್ದ ನಾಯಿಯನ್ನು.

 

ಇಂತಹ ಪಲಾಯನಗಳಿಗೆ

ಇರುವುದಿಲ್ಲ ಗುರಿ;

ಒಮ್ಮೆ ಮಾತ್ರ ರೆಕ್ಕೆಗಳಿಗಾಗಿ ಹಂಬಲಿಸಿದರು ಅವರು.

 

ಮಂದೆಯ ಮನೋಭಾವ

ತಂದಿತ್ತು ಅವರನ್ನು ಕರಾಳ ಕೊಳಕು ಪಟ್ಟಣಗಳಿಗೆ ;

ಅಲ್ಲಿ ಅವರು ಹಳೇಬಟ್ಟೆ, ಕಾಡು ಬಾಡು, ಔಷಧಿ ಮೂಲಿಕೆಗಳನ್ನು

ಮಾರುವರು.

ತೀರಾ ದುರ್ಬಲರು ತಮ್ಮ ದೇಹಗಳನ್ನು.

 

ಯಾಕೆಂದರೆ ಲ್ಯಾಂಡ್‌ಮೈನುಗಳ ಹೊರತಾಗಿಯೂ

ಉಳಿದಿತ್ತು ಅವರ ಬಳಿ ಅಂಗಾಂಗ.

'ಚರಿತೆಯ ಕೊನೆ' ಎಂಬಂತಹ ಶಬ್ದಗಳೆಲ್ಲ

ಅವರ ಬದುಕಿನಲ್ಲಿ ಹೊಂದಿರಲಿಲ್ಲ ಏನೇನೂ ಅರ್ಥ.

 

ಕಳ್ಳ ವರದಿಗಾರರಿಗೆ ಕೊಡಲು

ಇರಲಿಲ್ಲ ಅವರ ಬಳಿ ಬಾಡು, ಲಿಕ್ಕರು.

 

ಅವರ ಪಾಲಿಗೆ ಪತ್ರಿಕೆಗಳು ಸತ್ತುಹೋಗಿದ್ದವು.

ಹಿಂದಿನಂತೆಯೇ, ಅವರ ಪಾಡು ವರದಿಯಾಗುವುದಿಲ್ಲ

ಯಾವುದೋ ಮೂಲೆಯೊಂದರಲ್ಲಿ ಇನಿತು ಕನಿಕರ ಮಾತ್ರ ಮೂಡಿಸಿ. 

* * * * * 

“Every beautiful poem is an act of resistance” - Mahmoud Darwish 

Image
ಕವಿ ರಾಬಿನ್ ಜಾಂಗೊಂ

 

ಮಣಿಪುರಿ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ಬರೆಯುವ ರಾಬಿನ್ ಜಾಂಗೊಂ, (Robin Ngangom, 1959) ಹೆಸರಾಂತ ಕವಿ ಹಾಗೂ ಅನುವಾದಕರು. ಉಪೇಕ್ಷೆಗೆ ಒಳಪಟ್ಟಿರುವ ಈಶಾನ್ಯ ಭಾರತದ ಸಾಹಿತ್ಯವನ್ನು ವಿಸ್ತೃತ ಓದುಗ ವರ್ಗದ ಎದುರು ಪ್ರಸ್ತುತಪಡಿಸುವಲ್ಲಿ ಅವರ ಕೊಡುಗೆ ಅಪಾರವಾದುದಾಗಿದೆ. ಶಿಲ್ಲಾಂಗ್‌ನ NEHU ನಲ್ಲಿ ಪ್ರಾಧ್ಯಾಪಕರಾಗಿರುವ ರಾಬಿನ್, ರಾಜಕೀಯ-ಆರ್ಥಿಕ ತಾರತಮ್ಯಕ್ಕೆ ಒಳಗಾಗಿರುವ, ಐತಿಹಾಸಿಕವಾಗಿ ದುರ್ಲಕ್ಷಿಸಲ್ಪಟ್ಟಿರುವ ಈಶಾನ್ಯ ಭಾರತದ ಸಮುದಾಯಗಳ ಓದುಗರಲ್ಲಿ ಜಾಗೃತಿ ಹುಟ್ಟಿಸುವುದೇ ತಮ್ಮ ಕವಿತೆಯ ಗುರಿ ಎನ್ನುತ್ತಾರೆ. 

ಈಶಾನ್ಯ ಭಾರತದ ಪ್ರಾದೇಶಿಕ ಸಮಸ್ಯೆಗಳು ಆ ಪ್ರದೇಶದ ಹಲವಾರು ಕವಿಗಳ ಪ್ರಾಥಮಿಕ ವಿಷಯಗಳು – ಜನಾಂಗೀಯ ಘರ್ಷಣೆಗಳು, ಬಂಡಾಯ, ಪ್ರಭುತ್ವದ ಹಿಂಸೆ, ಭ್ರಷ್ಟಾಚಾರ. ತಮ್ಮ ಕವನಗಳಲ್ಲಿ ಈ ವಿಷಯಗಳ ಕುರಿತು ತೀವ್ರ ಅಸಮಾಧಾನ ಹಾಗೂ ನೈತಿಕ ಆಕ್ರೋಶದಿಂದ ಬರೆಯುವ ರಾಬಿನ್ ಪ್ರಸ್ತುತ ಭೀಕರ ಸಂದರ್ಭದಲ್ಲಿ ಕವಿಯಾಗಿ ತಮ್ಮ ಹೊಣೆ ಸಮುದಾಯದ ಆತ್ಮಸಾಕ್ಷಿಯಾಗಿರುವುದೆಂದು ಭಾವಿಸುತ್ತಾರೆ. ಹಾಗಾಗಿಯೇ ರಾಬಿನ್ ಜಾಂಗೊಂ ಅವರಿಗೆ ಕವಿತೆಯೆನ್ನುವುದು ರೇಶಿಮೆಯ ನಾಜೂಕು ಶಬ್ದಚಾತುರ್ಯವಲ್ಲ, ವಿವಿಧ ಪರಿಮಳಗಳ ನುಡಿಯ ಒಗ್ಗರಣೆಯಲ್ಲ. ಅದೊಂದು ರೀತಿಯ ಅರ್ಥ ಮಾಡಿಕೊಳ್ಳುವ ಆಂತರಿಕ ಒತ್ತಾಯ, ಆಶಯ. 

ಈಶಾನ್ಯ ಭಾರತದ ಬಹುತೇಕ ಕವಿಗಳ ಕೃತಿಗಳಲ್ಲಿ ಕಾಣುವ 'ಅಶಾಂತಿ' ರಾಬಿನ್ ಅವರ ಕಾವ್ಯದಲ್ಲಿಯೂ ಕಾಣುತ್ತದೆ. ಅವರು ಕೇಳುತ್ತಾರೆ, “ಅವನ ಕವನಗಳಲ್ಲೇಕೆ ಅಷ್ಟೊಂದು ಬುಲೆಟ್ಟಿನ ತೂತುಗಳು?,” ಸಾಮಾಜಿಕ ಹಾಗೂ ಮಾನಸಿಕ ಗೊಂದಲಗಳನ್ನು ನಿರೂಪಿಸುವ ರಾಬಿನ್ ಅವರ ಕಾವ್ಯ ಓದುಗರೆದುರಿಗೆ ಅನೇಕ ನೈತಿಕ ಪ್ರಶ್ನೆಗಳನ್ನು ಇಡುತ್ತದೆ. 

 

ಈ ಲೇಖನ ಓದಿದ್ದೀರಾ? : ಕರುಣೆಯ ಕೃಷಿ | ಮಾರಿಯೋ ಬೆನೆದೆತ್ತಿ ಕವಿತೆ 'ಸುರಕ್ಷಿತವಾಗುಳಿವ ಆಟವಾಡದಿರು

ʼಪಲಾಯನʼ ಎಂಬ ಈ ಕವನದಲ್ಲಿ ರಾಬಿನ್ ನಿರೂಪಿಸುವ ಸ್ಥಿತಿ ಧೃತಿಗೆಡಿಸುವಂತಹದ್ದು. ಜನಾಂಗೀಯ ಸಂಘರ್ಷ, ದುರಾಡಳಿತ, ಹಿಂಸೆಗಳು ದೈನಂದಿನ ಪರಿಸ್ಥಿತಿಯೇ ಆಗಿಬಿಟ್ಟಿರುವ ಸನ್ನಿವೇಶವನ್ನು ಕವನ ನಮ್ಮ ಮುಂದಿಡುತ್ತದೆ. ಸಾಮಾನ್ಯ ಜೀವನವನ್ನೂ ಅಸಾಧ್ಯವಾಗಿಸುವ ಭೀಕರತೆಯಿಂದ ಜನ ಕೈಗೊಳ್ಳುತ್ತಿರುವ ಪಲಾಯನದ ದೃಶ್ಯವನ್ನು ಅವರು ಚಿತ್ರಿಸಿದ್ದಾರೆ. ಒಮ್ಮೊಮ್ಮೆ ಇಂತಹ ಪಲಾಯನ ಅದೆಷ್ಟು ತುರ್ತಾಗಿ ಮಾಡಬೇಕು ಎಂದರೆ, ರೆಕ್ಕೆಗಳಿಗಾಗಿ ಪರಿತಪಿಸುವಷ್ಟು. 

ಭಾರತದ ಇತರ ಭಾಗದ ಸಾರ್ವಜನಿಕ ಮಂಡಳಿ ಕಂಡೂ ಕಾಣದ ಇಲ್ಲಿಯ ಸಮಸ್ಯೆ-ಸಂಘರ್ಷಗಳು, ಆಕಾಂಕ್ಷೆ-ಹತಾಶೆಗಳು, ದುರವಸ್ಥೆ-ಅನಾಚಾರಗಳು, ಅಷ್ಟೇ ಅಲ್ಲದೆ ಈ ಭಾಗದ ಜನರ ವಿಶಿಷ್ಟ ಜೀವನ ಶೈಲಿ, ಸಾಂಸ್ಕೃತಿಕ ಆಚರಣೆಗಳು, ನಂಬಿಕೆಗಳು ರಾಬಿನ್ ಜಾಂಗೊಂ ಅವರಂತಹ ಕವಿಗಳ ಮುಖ್ಯ ಕಾಳಜಿಗಳಾಗಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್