ಅಪ್ರಮೇಯ | ನೀಲಿ ಎಂಬಾಕೆಯ ಪುಟ್ಟ ಆಕಾಶ, ಸಮಾಜದ ಲೆಕ್ಕವಿರದಷ್ಟು ಕ್ರೌರ್ಯ

ನೀಲಿ ಯೋಚ್ನೆ ಮಾಡ್ತಿದ್ಲು... "ಯಾಕೆ ಹೆಂಗ್ಸರಿಗೆ ಇಶ್ಟು ಬೇಗ ಮದ್ವೆ ಮಾಡ್ತಾರೆ? ಈಗ್ಲೂ ಎಲ್ಲಾದ್ರೂ ಗ್ರೌಂಡ್ ನೋಡಿದ್ರೆ ಕಬಡ್ಡಿ ನೆನಪಾಗುತ್ತೆ... ಎಶ್ಟೊಂದು ಕಪ್ ಗೆದ್ದಿದ್ದೆ! ಅಣ್ಣ ಫುಟ್ಬಾಲ್ ಆಡಿದ್ರೆ ಸೈ. ನನಗೆ ಹುಡ್ಗಿಯಾಗಿ ಗಂಡ್ಸರ ಆಟ ಆಡ್ತಿಯಾ ಅಂತ ಏಟು! ಅಪ್ಪ ಹೊಡೆಯುವಾಗ ಕೈಲಿ ಏನಿರುತ್ತೆ ಏನಿರಲ್ಲ ಗೊತ್ತೇ ಆಗಲ್ಲ....” ಹಾಗೇ ಒಂದು ನಿಟ್ಟುಸಿರು ಹೋಯಿತು

ನೀಲಿ ನಗರದ ಸಂಚಾರಿ ಬಸ್ ನಿಲ್ದಾಣದಲ್ಲಿ ಮನೆಗೆ ಹೋಗಲು ಬಸ್ಸಿಗಾಗಿ ಕಾಯ್ತಿದ್ಲು. ದಿನವಿಡೀ ಕೆಲಸ ಮಾಡಿ ಮೈಕೈ ತುಂಬಾ ನೋಯ್ತಾ ಇತ್ತು. ಅಶ್ಟೊತ್ತಿಗಾಗಲೆ ಟ್ರಾನ್ಸ್‌ಜೆಂಡರ್ ಪಿಂಕಿ ಬಂದ್ಬಿಡಬೇಕಾಗಿತ್ತು. ಆಗ ನೆನಪಾಯಿತು ಅವಳಿಗೆ - ಈ ಪಿಂಕಿ ಇವತ್ತಿಂದ ಜಾಸ್ತಿ ಕ್ಲೈಂಟ್ ಮಾಡತ್ತಿನಿ ಅಂದಿದ್ಲು. ಏಕಂದ್ರೆ ಅವಳು ನಿರ್ವಾಣ ಮಾಡ್ಬೇಕಂತಿದ್ದಾಳೆ. ಬೆಳಗ್ಗೆ ಶುರು ಮಾಡ್ದಾಗ ನೀಲಿಗೆ ಕತ್ತು ಸ್ವಲ್ಪ ನೋಯ್ತಾ ಇತ್ತು. ಈಗ ಆ ನೋವು ಇನ್ನೂ ಜಾಸ್ತಿ ಆಗಿತ್ತು. ಅವಳು ಕತ್ತನ್ನು ಸವರ್ಕೊತಾ ಏನೋ ಆಲೋಚನೆಯಲ್ಲಿ ಮುಳುಗಿಹೋದ್ಲು.

ಅವಳ ಕಣ್ ಮುಂದೆ ತನ್ನ ಹಿಂದಿನ ಜೀವನ ಹಾದುಹೋಗತೊಡಗಿತು. ಚಿಕ್ಕ ವಯಸ್ಸಿನಲ್ಲೇ ಓದನ್ನು ಬಿಡಿಸಿ ಮದ್ವೆ ಮಾಡಿದರು. ನೀಲಿ ಯೋಚ್ನೆ ಮಾಡ್ತಿದ್ಲು... "ಯಾಕೆ ಹೆಂಗ್ಸರಿಗೆ ಇಶ್ಟು ಬೇಗ ಮದ್ವೆ ಮಾಡ್ತಾರೆ? ಈಗ್ಲೂ ಎಲ್ಲಾದ್ರೂ ಗ್ರೌಂಡ್ ನೋಡಿದ್ರೆ ಕಬಡ್ಡಿ ನೆನಪಾಗುತ್ತೆ... ಎಶ್ಟೊಂದು ಕಪ್ ಗೆದ್ದಿದ್ದೆ! ಅಣ್ಣ ಫುಟ್ಬಾಲ್ ಆಡಿದ್ರೆ ಸೈ. ನನಗೆ ಹುಡ್ಗಿಯಾಗಿ ಗಂಡ್ಸರ ಆಟ ಆಡ್ತಿಯಾ ಅಂತ ಏಟು! ಅಪ್ಪ ಹೊಡೆಯುವಾಗ ಕೈಲಿ ಏನಿರುತ್ತೆ ಏನಿರಲ್ಲ ಗೊತ್ತೇ ಆಗಲ್ಲ....” ಹಾಗೇ ಒಂದು ನಿಟ್ಟುಸಿರು ಹೋಯಿತು. ಅಶ್ಟೊತ್ತಿಗೆ ಕೊನೆಯ ಬಸ್ಸು ತಡವಾಗತಿದೆ ಅಂತ ಅಕ್ಕಪಕ್ಕದವರು ಮಾತನಾಡಿದ್ದು ಕೇಳಿಸಿಕೊಂಡು, ಬಸ್ಟ್ಯಾಂಡ್ ಬೆಂಚ್ ಮೇಲೆ ಕೂತು ಕಾಲು ತಡವ್ಕೊತಾ ಇದ್ಲು.

Image

ಮತ್ತೆ ಮೈ ಮರ್ತು... “ಹುಂ... ಯಾರಗಾಗಿ ಮನೆಗೆ ದಾವಿಸ್ಬೇಕು?” ಅಂತ ಬಾಯಿಂದ ಬಂತು. ಪಕ್ಕದಿಂದ ಒಂದು ದನಿ, “ಮನೇಲಿ ಮಕ್ಳಿಲ್ವ?” ತಿರುಗಿ ನೋಡಿದಾಗ ಪರಿಚಿತ ಮಕ. ಅವಳು ಏನೋ ಹೇಳಲು ಹೋಗಿ ಸಡನ್ನಾಗಿ ಸುಮ್ಮನಾಗಿ ಇನ್ನೂ ಆ ಕಡೆ ಸರಿದು ಕೂತಳು. ಅವಳ ಮೈಯಲ್ಲಿ ಸಣ್ಣದಾಗಿ ನಡುಕ ಶುರುವಾಯಿತು. ಇವ್ನು ಗೊತ್ತಿದ್ದೂ ಯಾಕೆ ಕೇಳ್ತಿದ್ದಾನೆ? ಇವ್ನೆ ಅಲ್ವ ನನ್ನ ಆವತ್ತು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದು? ಕಣ್ ಮುಂದೆ ಎಲ್ಲ ನೋಡಿ, ಮಣ್ ಮಾಡೋವರ್ಗೂ ಇದ್ದ ಅಂತ ಅನ್ಕೊಂಡು ಮುಕ ಗಂಟಿಕೊಂಡು ಸರಿದ್ಲು. ಆ ದಿನದ ಬಗ್ಗೆ ಬಂದ ವಾಸನೆಯೂ ಅವಳಿಂದ ತಡೆಯಲಾಗಲಿಲ್ಲ. ತನಗರಿವಿಲ್ಲದೇ ಕಣ್ಣಂಚಿನಲ್ಲಿ ನೀರು ಬರುವ ಒತ್ತಡ. ಆದ್ರೆ, ಕಣ್ಣೀರು ಬರುವುದಿಲ್ಲ. ಆ ದಿನದಿಂದ ಹಿಡಿದು ಇಂದಿನವರೆಗೆ ಇದೇ ತೊಂದ್ರೆ. ಅವಳ ಕೆಲಸದ ಸ್ನೇಹಿತರೆಲ್ಲ ಹೇಳ್ತಾರೆ "ಅತ್ಬಿಡು ನೀಲಿ" ಅಂತ. ಅಳೋದು ಅಶ್ಟು ಸುಲಬ ಅಲ್ಲ. ಆ ದಿನದಿಂದ ಸಾಯುವ ಪಯಣದಲ್ಲಿ ದಿನೇದಿನೆ ಕಳೆಯುತ್ತಿದ್ದಾಳೆ. ಮಗಳಂತೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿಲ್ಲ ಅಂತ ಯೋಚ್ನೆ ಮಾಡ್ತಾಳೆ!

ಆ ಮನುಶ್ಯ ಸ್ವಲ್ಪ ಹೊತ್ತಾದ ಮೇಲೆ ಕೇಳಿದ, “ಆ ಒಬ್ಳೆ ಮಗಳಾ?” ಅವನ ಪ್ರಶ್ನೆ ನೇರ ನರಕ್ಕೆ ಚುಚ್ಚಿ ಅವಳು ಸಟ್ ಅಂತ ಎದ್ದು ನಿಂತಳು. ಅವಳಿಗೆ ಮಾತನಾಡಲು ಇಶ್ಟವಿಲ್ಲ ಎಂದು ಅವನಿಗನಿಸಿತು. ನೀಲಿ ಸುತ್ತಲೂ ನೋಡಿದಳು, ಯಾರೂ ಇರಲಿಲ್ಲ. ಕಣ್ಣು ಯಾರಿಗೂ ಸಲ್ಲದ ನೆಲೆಗಳಲ್ಲಿ ಅಲಿಯುತ್ತಿತ್ತು. ಮೆತ್ತಗೆ ಬಂದು ಬೆಂಚಿನ ಮೇಲೆ ಕುಳಿತು ಕೇಳಿದಳು, “ಅವತ್ತು ಯಾಕೆ ಪೋಲಿಸ್ ಸ್ಟೇಶನ್ನಲ್ಲಿ ಇದ್ದೆ. ನೀನೇ ಎಲ್ಲಾ ಕಡೆ ಕರ್ಕೊಂಡ್ ಹೋದೆ. ಆದ್ರೂ ಏನು ಗೊತ್ತಿಲ್ವ?”

ಅವನು: ಆವತ್ತು... ಹಮ್! ನನಗನ್ನಸ್ತು ಆ ಹುಡುಗಿ ಮೊದಲನೆ ಮಗಳು ಅಂತ...

ಇವಳು: ಒಬ್ಳೆ ಮಗ್ಳು...

ಅವನು: ಓ! ನಾನು ಮತ್ತೆ ನಿಮ್ಮನ್ನ ನೋಡ್ತೀನಿ ಅಂತ ಅಂದ್ಕೊಂಡಿಲ್ಲ. ಇನ್ನೂ ಕೆಲ್ಸ ಮಾಡ್ತಿದ್ದೀರ?

ಇವಳು: (ತುಂಬಾ ನೀರಸವಾಗಿ) ಬದುಕಬೇಕಲ್ಲ...

ಅವನು: ಎಲ್ಲರೂ ಅಶ್ಟೆ - ಸಾಯುವ ತನಕ ಬದುಕಬೇಕು. ಎಲ್ರ ಪರಿಸ್ತಿತಿನೂ ಒಂದಲ್ಲ ಒಂದು ರೀತೀಲಿ ಸಾವಿನ ಕಡೆ ಯಾತ್ರೆನೇ...

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಅವತ್ತು ಫಮಿ, ಕಾಜಲ್, ರಿಯಾ ಹಾಗೂ ಸೋನಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು!

ಅವಳು ಅಶ್ಟು ತಿಂಗಳವರೆಗೂ ಅಳಲೂ ಆಗದೆ ಎದೆ ಬಿಗಿದು ಬಿಗಿದೂ ಇಂದು ಕಟ್ಟೆ ಒಡೆದು ಬಿಕ್ಕುತ್ತಾ ಹೇಳಿದಳು: "ಆವತ್ತು ನೀನಿಲ್ದಿದ್ರೆ ಪೋಲಿಸರ ಕೈನಲ್ಲೆ ಇದ್ದು ನಾನು ಮಗಳ ಮುಕನೇ ನೋಡದೆ ಅವಳನ್ನು ಕಳ್ಕೊಬಿಡ್ತಿದ್ದೆ. ನೀನು ಯಾರು, ನೀನ್ ಯಾಕೆ ಅಲ್ಲಿದ್ದೆ, ಯಾಕೆ ನಂಗೆ ಅಶ್ಟು ಸಹಾಯ ಮಾಡ್ದೆ?” ಕಣ್ಣೊರಸ್ಕೊಂಡು ರಾತ್ರಿಯ ಆ ತಣ್ಣನೆ ಗಾಳಿಯನ್ನು ಗಾಡವಾಗಿ ಉಸುರಿದಳು ತನ್ನ ದೇಹವನ್ನು ಹಗುರ ಮಾಡ್ಕೊಳ್ಳಕ್ಕೆ.

ಅವನು ಸ್ವಲ್ಪ ಹೊತ್ತು ಅವಳನ್ನೇ ನೋಡಿ ಮತ್ತೆ ಜೋರಾಗಿ ನಕ್ಕ. “ಅದೆಲ್ಲ ಮುಂದಿನ ಸಾರಿ. ನೀನೂ ಕೆಲ್ಸ ಮಾಡೋವ್ಳು ನಾನು ಕೆಲಸ ಮಾಡೋವ್ನು. ಬೇಟಿ ಮಾಡ್ತಾನೇ ಇರ್ತೀವಿ, ಟೆನ್‍ಶನ್ ತಗೊಬೇಡಿ. ಸಮಾಧಾನ ಮಾಡ್ಕೊಳಿ," ಅಂತ ಹೇಳಿ ಅಲ್ಲಿಂದ ಹೊರಟ. ಅಶ್ಟೊತ್ತಿಗೆ ಇವಳ ಬಸ್ಸು ಬಂತು. ಇವಳು ಬಸ್ಸು ಹತ್ತಿ ಸೀಟಿಡಿದು ಕೂತು ಕಿಟಕಿಗೆ ತಲೆ ಆನಿಸಿ ಹಾಗೇ ಕಣ್ ಮುಚ್ಚಿದಳು. ನೀಲಿ ದಂದ ಮಾಡ್ತಿದ್ದಿದ್ದು ನಗರದ ಮುಕ್ಯ ಬಸ್‌ ನಿಲ್ದಾಣದ ಹತ್ತಿರ. ಅವಳು ತುಂಬಾ ವರ್ಶಗಳಿಂದ ಅಲ್ಲಿ ಕೆಲಸ ಮಾಡ್ತಿದ್ಲು. ಆ ಬಸ್‌ ನಿಲ್ದಾಣದ ಪೊಲೀಸ್ ಠಾಣೆಯವರು ಆಗಾಗ ಹಿಡಿಯುವುದು, ಹಿಂಸೆ ಮಾಡುವುದು, ದುಡ್ಡು ಕಿತ್ಕೊಳ್ಳೋದು ಎಲ್ಲ ನಡೀತಿತ್ತು.

Image

ಅಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್ ಇವಳ ಮನೆಯ ಹತ್ರದ ಟಾಣೆಗೆ ಟ್ರಾನ್ಸ್‌ಪರ್ ಆಯ್ತು. ಒಂದಿನ ಇವಳು ಮತ್ತು ಮಗಳು ಮಾರ್ಕೆಟ್‍ನಲ್ಲಿ ಶಾಪಿಂಗ್ ಮಾಡ್ತಾ ಇದ್ರು. ಆಗ ಈ ಪೊಲೀಸ್ ಕಾನ್ಸ್‌ಟೆಬಲ್ ಅವಳನ್ನು ನೋಡಿದ ಕೂಡ್ಲೆ ಜೋರಾಗಿ ಕೂಗಿ ಹೇಳಿದ... "ಏಯ್ ಸೂಳೆ, ಏನ್ ಈಗ ಇಲ್ಲಿ ದಂದಾ ಮಾಡ್ತಿದ್ದೀಯ? ಮಗಳನ್ನೂ ಲೈನ್‍ಗೆ ಕರ್ಕೊಂಡ್ ಬಂದ್ಯ? ನಾನ್ ಬೇಕಾದ್ರೆ ಬೋಣಿ ಮಾಡ್ತೀನಿ ಮಗಳಿಗೆ, ಏನಂತಿಯ?”

ಮಗಳು ಕರೆಂಟ್ ಹೊಡ್ದಂಗೆ ನಿಂತ್‍ಬಿಟ್ಳು. ಅಲ್ಲಿದ್ದವರೆಲ್ಲ ಇವಳನ್ನು ಹೇಗೆ ನೋಡ್ತಿದ್ರು ಅಂದ್ರೆ, ಇವಳಿಗೆ ಕಾಲಿನ ಕೆಳಗೆ ಬೂಮಿ ಇಲ್ಲಾ ಅನ್ನಿಸ್‌ಬಿಡ್ತು. ನೋಡೋ ಜನರ ಕಣ್ಣಿನ ಕ್ರೌರ್ಯಕ್ಕೆ ಯಾವ ಉತ್ತರವೂ ಇಲ್ಲ. ಇಬ್ರೂ ಮೌನವಾಗಿ ಮನೆಗೆ ಬಂದ್ರು. ಮಗಳು ಮಾತಾಡಲೇ ಇಲ್ಲ. ಒಂದಿನ ಆಯ್ತು, ಎರಡು ದಿನ ಆಯ್ತು, ಮೂರ್ನೆ ದಿನ ನೀಲಿ ಬೆಳಗ್ಗೆ ಎದ್ದು ಕೆಲಸಕ್ಕೆ ರೆಡಿ ಆಗಿ, ಮಗಳು ಹಾಗೇ ಮಲಗಿದ್ದನ್ನು ನೋಡಿ, ಅವಳನ್ನು ತಟ್ಟಿ ಎಬ್ಬಿಸಿ, “ಏನಾಗ್ತಿದೆ ಪುಟ್ಟಾ, ನನ್ ಹತ್ರ ಮಾತಾಡು, ನಾನು ಕೆಲಸಕ್ಕೆ ಹೋಗ್ಬೇಕು, ಇಲ್ಲಾಂದ್ರೆ ಇಬ್ರೂ ಬದಕಕ್ಕೆ ಆಗಲ್ಲ,” ಅಂದ್ಲು. ಮಗಳು ಎದ್ದು ಇವಳ್ನ ನೋಡಿ ಜೋರಾಗಿ ಅಳ್ತಾ ತಬ್ಕೊಂಡ್ಳು. ಆಗ್ಲೂ ಏನೂ ಮಾತಾಡಲಿಲ್ಲ. ಅವಳು ಮಗಳನ್ನು ಸಮಾಧಾನ ಮಾಡಲು ಬಹಳ ಪ್ರಯತ್ನ ಮಾಡಿದಳು. ಆದ್ರೆ, ಮಗಳು ಮತ್ತೆ ಮುದುರ್ಕೊಂಡು ಮಲಗಿದಳು. ಬಾರವಾದ ಹೆಜ್ಜೆ ಹಾಕ್ತಾ ನೀಲಿ ಕೆಲಸಕ್ಕೆ ಹೊರಟಳು.

ನೀಲಿ ಕೆಲಸದಲ್ಲಿ ಆ ದಿನ ಎಲ್ಲೋ ಕಳೆದುಹೋಗಿದ್ಲು. ಒಂದೊಂದು ಕ್ಲೈಂಟ್ ಹತ್ರನೂ ಹೋಗುವಾಗ, ತನ್ನ ಕತೆ ಹೇಳಿ ಸಮಾಧಾನ ಮಾಡಿಕೋಬೇಕು ಅನ್ನೋ ಯೋಚನೆಯಲ್ಲಿ ಕಳೆದುಹೋಗಿ, ಕ್ಲೈಂಟ್ ಜೊತೆ ಮಾಡಬೇಕಾದ ಸದ್ದು ಮಾಡದೆ ಇದ್ದಾಗ ಅದಕ್ಕೂ ದುಡ್ಡು ಕಡಿಮೆ ಸಿಕ್ತು. ಇನ್ನೇನು ಕಡೆಯ ಕ್ಲೈಂಟ್ ಮುಗಿಸಿ ಬೇಗ-ಬೇಗ ಮನೆಗೆ ಹೋಗುವುದರಲ್ಲಿರುವಾಗ ಪೊಲೀಸರು ಬಸ್‌ ನಿಲ್ದಾಣದ ಹತ್ರ ಬಂದು ಇವಳನ್ನೂ ಸೇರಿಸಿ ಆರು ಮಂದಿ ಹೆಂಗಸರನ್ನು ಬಂದಿಸಿ ಕರೆದುಕೊಂಡು ಸ್ಟೇಶನ್ಗೆ ಕರೆದೊಯ್ದರು. ಅಲ್ಲಿ, ಪೋಲೀಸರು ಹೊಡೆವಾಗ ಇವಳಿಗೆ ಫೋನ್ ಬಂದಿದ್ದು, ಮಗಳು ನೇಣಾಕ್ಕೊಂಡಿದ್ದಾಳೆ ಅಂತ! ಪಕ್ಕದ ಮನೆಯವ್ರು ನೋಡಿ ಇವಳಿಗೆ ಫೋನ್ ಮಾಡಿದಾಗ ಪೊಲೀಸೇ ಫೋನ್ ತೆಗೆದದ್ದು. ಆದ್ರೆ ಪೊಲೀಸನಿಗೆ ಅಸಡ್ಡೆ. ಅವರು ಫೋನ್ ಮಾಡ್ದಾಗ, ಪೊಲೀಸ್ ಪೋನನ್ನು ಹಾಗೇ ಹಿಡ್ಕೊಂಡು ಕೂಗಿದ... “ನೀಲಿ ಸೂಳೆ... ನಿನ್ ಮಗ್ಳು ನೇಣಾಕ್ಕೊಂಡ್ಳಂತೆ...!"

'ಎಲ್ಲರ ಕನ್ನಡ' ಎಂದು ಹೇಳಿಕೊಳ್ಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್