ಅಪ್ರಮೇಯ | 'ನನ್ ಮಗ್ಳೂ ಗುಲಾಬಿ ಆಗ್ಬಿಡ್ತಿದ್ಲೋ ಏನೋ, ಹೋಗಿದ್ದು ಒಳ್ಳೆದಾಯ್ತು'

Sex worker

ಸುಲಬವಾಗಿ ಯಾರನ್ನೂ ಮಾತಾಡ್ಸೋನಲ್ಲ ಅವನು. ಆದ್ರೆ, ಆವತ್ತು ಬಸ್‌ ನಿಲ್ದಾಣದಲ್ಲಿ ನೀಲಿನ ನೋಡಿದಾಗ ತನಗರಿವಿಲ್ಲದೆಯೇ ಮಾತಾಡಿಸಿದ. ನೀಲಿ ಗಾಬ್ರಿಪಟ್ಕೊಂಡದ್ದು ನೋಡಿ ಸುಮ್ಮನಾದ. ಅವನು ಮತ್ತೆ ಸಿಗಬಹುದು ಅಂತ ಐದಾರು ಸತಿ ಆ ಬಸ್ಟಾಂಡಿಗೆ ಹೋದ್ಲು ನೀಲಿ. ಆದ್ರೆ, ಅವನು ಸಿಗ್ಲೇ ಇಲ್ಲ. ಹಲವು ತಿಂಗಳ ಮೇಲೆ ಒಂದಿನ ಅಂವ ಸಿಕ್ಕಾಗ, ಅವಳೇ ಹೋಗಿ ಕೇಳಿದ್ಲು "ನಿನ್ನೆಸ್ರೇನು?"

ಆ ಮನುಶ್ಯನ ಕತೆ...

ಆವತ್ತು ನೀಲಿನ ಸ್ಟೇಶನ್‌ನಿಂದ ಪೊಲೀಸ್ ಹಾಗೇ ಬಿಟ್ರು. ಆ ರಾತ್ರಿಲಿ ಅವಳು ಆಸ್ಪತ್ರಗೆ ಹೇಗೆ ಹೋಗುವುದು ಅಂತ ನೋಡ್ತಿರ್ಬೇಕಾದ್ರೆ, ಆತ ಅದ್ಯಾರ ಹತ್ರನೋ ಬೈಕ್ ಇಸ್ಕೊಂಡು ಬಂದು, “ಬನ್ನಿ ನಾನ್ ಕರ್ಕೊಂಡ್ ಹೋಗ್ತಿನಿ,” ಅಂತ ಹೇಳ್ದಾಗ ಅದ್ಯಾವ ನಂಬಿಕೆಯಲ್ಲಿ ಅವನ ಜೊತೆ ಹೋದ್ಳೋ. ಆವತ್ತು ಅವಳಿಗೆ ಮುಂದೆ ಮತ್ತೇನು ಕಂಡಿಲ್ಲ. ಮಗಳು ನೇಣಾಕ್ಕೊಂಡಿದ್ದಾಳೆ ಅನ್ನೋದು ಮಾತ್ರ ಇತ್ತು. ಆಸ್ಪತ್ರೆಲಿ ಹೆಣವಾಗಿ ಬಿದ್ದ ಮಗಳನ್ನು ನೋಡಿ ನೀಲಿಯ ಕಣ್ಣು ಬತ್ತಿ ಹೋಯ್ತು. ಅವಳು ಗರ ಬಡಿದಂಗೆ ನಿಂತಿದ್ಲು. ಆನರು ಹೇಗೆ ಹೇಳ್ತಾರೋ ಹಾಗೆ ಮಾಡಿ ಮಗಳನ್ನು ಮಣ್ ಮಾಡಿದಳು. ಆವತ್ತು ಅವಳು ಎಶ್ಟು ಮಾತಿಲ್ಲದೇ ಆಗಿಬಿಟ್ಟಳೋ ಆತಾನೂ ಹಾಗೇ ಅವಳ ಜೊತೆ ನಿಂತಿದ್ದ. ನೀಲಿ ಕಣ್ಗಳಲ್ಲಿ ಕಾಲಿತನದ ರಕ್ತ ಹರಿಯುತ್ತಿದ್ದಂತಿತ್ತು. ಅವನ ಮಕ ಯಾರನ್ನೂ ದಿಟ್ಟಿಸುತ್ತಿರಲಿಲ್ಲ. ಕೊನೆಗೆ ಸುಡುಗಾಡಿಂದ ಹೋಗಬೇಕಾದರೆ ನೀಲಿ ತನ್ನ ಪಕ್ಕದ ಮನೆಯವರ ಜೊತೆ ಹೊರಟ ಮೇಲೆ ಇವನು ಅಲ್ಲಿಂದ ಹೊರಟ.

ಅವನು ಬಡ ಮಹಿಳೆಗೆ ಹುಟ್ಟಿದ ಒಬ್ಬ ಮನುಶ್ಯ. ಸಿಕ್ಕಾಪಟ್ಟೆ ಪುಸ್ತಕಗಳನ್ನು ಒದಿದವ. ಆದ್ರೆ, ಹೆಚ್ಚು ವಿದ್ಯಾಬ್ಯಾಸ ಮಾಡಿದವನಲ್ಲ. ಅಲ್ಲಿ ಇಲ್ಲಿ ಸಾಹಿತಿಗಳು, ಕಲಾಕಾರರು, ನಾಟಕದವರ ಜೊತೆ ಕಾಲ ಕಳೆದು, ತನ್ನಿಚ್ಚೆಯಿಂದ ಸಂಜೆ ಹೊತ್ತು, ಮಹಿಳೆಯರಿಗೆ ಲೈಂಗಿಕ ಸುಕ ಬೇಕಿದ್ದಲ್ಲಿ ಅವನ ಹತ್ರ ಸಾಮಾನ್ಯ ದರಕ್ಕೆ ಕೊಂಡ್ಕೊಬೋಹುದು ಎಂದು ಜೀವಿಸುತ್ತಿದ್ದ. ಅವನ ಕೆಲಸದ ಫೀಲ್ಡ್ ಮಹಿಳೆಯರ ಕೆಲಸದ ಫೀಲ್ಡ್ ತರ ಅಲ್ಲ. ಅವನಿಗೆ ಫೋನ್ ಬರುತ್ತಿತ್ತು, ವಿಳಾಸ ಕಳಿಸುತ್ತಿದ್ದರು ಆಗ ಅವನು ಅಲ್ಲಿಗೆ ಹೋಗುತ್ತಿದ್ದ. ಆತ ಈ ಕೆಲಸ ಮಾಡುತ್ತಾನೆ ಎಂದು ಹೇಳಿಕೊಳ್ಳಲು ಅವನಿಗೆ ಅವಮಾನವೇನೂ ಇರಲಿಲ್ಲ. ಆದ್ರೆ, ಈ ವಿಶಯವನ್ನು ಶೋಶಿತರ ಕತೆಗಳಂತೆಯೂ ಯಾವತ್ತೂ ಹಂಚಿಕೊಂಡಿಲ್ಲ. ಆಫೀಸಿಗೆ ಹೋಗಿ ಕೆಲಸ ಮಾಡುವಶ್ಟೆ ಗೌರವದಿಂದ ಈ ಕೆಲಸನೂ ಮಾಡುತ್ತಿದ್ದ. ಒಮ್ಮೊಮ್ಮೆ  ಪೊಲೀಸ್ ಕೈಗೆ ಸಿಕ್ಕಾಗ, ಅವರ ಲಾಟಿ ಏಟುಗಳ ಸುರಿಮಳೆಯ ನಡುವೆ ಅವನ ಗಂಡಸುತನಕ್ಕೆ ಅವನದ್ದು ಮಾತ್ರವಲ್ಲ ಇಡೀ ಗಂಡಸುತನಕ್ಕೆ ಅದರಲ್ಲೂ, ಪೊಲೀಸರ ಗಂಡಸುತನಕ್ಕೆ ದಕ್ಕೆ ಬರುವ ವಿಶಯದ ಬಗ್ಗೆ ಗಾಡವಾಗಿ ಆಲೋಚಿಸುತ್ತಿದ್ದ. ಹೊಡೆದು ಹೊಡೆದೂ ಕೋಲು ಮುರಿದರೂ ಅವನು ಸುಮ್ಮನೆ ನೇರವಾಗಿ ನಿಲ್ಲುತ್ತಿದ್ದ.

Image
Sad Men

ಸುಲಬವಾಗಿ ಯಾರನ್ನೂ ಮಾತಾಡ್ಸೋನಲ್ಲ. ಆದ್ರೆ, ಆವತ್ತು ಬಸ್‌ ನಿಲ್ದಾಣದಲ್ಲಿ ನೀಲಿನ ನೋಡಿದಾಗ ತನಗರಿವಿಲ್ಲದೇ ಹಾಗೇ ಮಾತಾಡಿಸಿದ. ನೀಲಿ ಗಾಬ್ರಿ ಪಟ್ಕೊಂಡದ್ದು ನೋಡಿ ಸುಮ್ಮನಾದ. ನೀಲಿ ಅವನು ಮತ್ತೆ ಸಿಗಬಹುದು ಅಂತ ಐದಾರು ಸತಿ ಆ ಬಸ್ಟಾಂಡಿಗೆ ಹೋದ್ಲು. ಆದ್ರೆ, ಅವನು ಸಿಗ್ಲೇ ಇಲ್ಲ. ಹಲವು ತಿಂಗಳ ಮೇಲೆ, ಒಂದಿವ್ಸ ಕೆಲಸದ ಸ್ತಳದಲ್ಲಿ ಅವಳು ದಣಿವಾರಿಸಿಕೊಳ್ಳಲು ಬಂದು ಕಾಫಿ ಕುಡಿತಿರುವಾಗ ಅವನೂ ಅಲ್ಲಿ ಒಂದು ಸಿಗರೇಟ್ ಹೊಡೀತ ನಿಂತಿದ್ದನ್ನು ನೋಡಿ ನೀಲಿ ಹೋಗಿ ಅವನ ಹತ್ರ ಕೇಳಿದ್ಲು ʼನಿನ್ನೆಸ್ರೇನು?ʼ

ಅವನು ಕಾಲಿತನದಲ್ಲಿ ನೋಡ್ತಾ, ಸ್ವಲ್ಪಾನೂ ಅಲ್ಲಾಡದೇ “ಗುಲಾಬಿ,” ಅಂದ.

ಅವಳು: “ಅದೆಂತಾ ಎಸ್ರು?”

ಅವನು: ತನ್ನ ಸಿಗರೇಟಿನ ಒಂದೊಂದೂ ಉಸಿರನ್ನು ಮೈಯೆಲ್ಲಾ ಅನುಬವಿಸುತ್ತಾ “ನಾನು ಹೆಣ್ಣಾಗಿದ್ರೆ ಅವ್ವ ನಂಗೆ ಈ ಹೆಸ್ರಿಡ್ಬೇಕು ಅಂತಿದ್ಲು.”

ನೀಲಿಗೆ ಏನೂ ಅರ್ತ ಆಗದೆ “ಕಾಪಿ ಕುಡಿತಿಯ, ಇರು ತತ್ತೀನಿ” ಅಂತ ಹೋಗಿ ಕಾಪಿ ತಂದುಕೊಟ್ಳು. 
ಅವನು ಕಾಪಿ ಕೈಗೆ ತಗೊಂಡು “ಎರ್ಡ್ ಮಾಡಿ ಈ ಕಡೆ ಬಂದೆ, ಸುಸ್ತಾಗ್ತಾ ಇತ್ತು. ತ್ಯಾಂಕ್ಸ್ ಕಾಪಿಗೆ,” ಅಂದ.

ನೀಲಿ: “ನೀನೂ ದಂದ ಮಾಡ್ತೀಯ, ಓಹ್! ಹಿಜ್ರಾನ, ಆಪ್ರೆಸನ್ ಆಗಿಲ್ಲ?”

ಅವನು: “ಅಲ್ಲ ಹಿಜ್ರ ಅಲ್ಲ. ಹೆಚ್ಚಿಗೆ ಹೆಂಗಸ್ರಿಗೆ ಮಾಡ್ತೀನಿ, ಕೆಲವೊಮ್ಮ ಗಂಡಸ್ರಿಗೂ ಮಾಡ್ತೀನಿ.”

ಅವಳು: “ಚೆನ್ನಾಗಿ ಓದ್ಕೊಂಡಿರೋಂಗೆ ಕಾಣುತ್ತೆ, ಮತ್ಯಾಕೆ ಈ ಲೈನು.”

ಅವನು: ಸಣ್ಣಕ್ಕೆ ನಕ್ಕು, ಮಾತಿಲ್ಲದೇ ಸ್ವಲ್ಪ ಹೊತ್ತು ಕಾಪಿ ಹೀರಿಕೊಂಡು ನಿಂತ. ಆಮೇಲೆ, “ಊಟ ಮಾಡಿದ್ಯ, ಇಲ್ದಿದ್ರೆ ಬಾ ಹೋಗಿ ಊಟ ಮಾಡ್ಕೊಂಡು ಬರಾನ.”

ನೀಲಿ: “ಸರಿ ನಡಿ.”

Image
Men And Women

ಅವರಿಬ್ರು ಒಂದು ಹೋಟ್ಳಿಗೆ ಹೋಗಿ ಕೂತು ಊಟಕ್ಕೆ ಹೇಳಿದ್ರು. ಆಗ ಅವನು, “ನಮ್ ಅಮ್ಮನೂ ದಂದ ಮಾಡಿನೇ ನನ್ನ ಸಾಕಿದ್ದು, ಓದ್ಸಿದ್ದು ಎಲ್ಲ. ಅವ್ವ ದಂದ ಮಾಡೀ ಮಾಡೀ ಸೆಕ್ಸ್ ಅಂದ್ರೆ ರೋಸೋಗಿದ್ಲು. ಅದ್ರಲ್ಲಿ ಅವ್ಳು ಕೆಲ್ಸ ಬಿಟ್ಟು ಬೇರೆನೂ ಸಿಗ್ಲಿಲ. ಒಬ್ಬನ್ ಇಟ್ಕೊಂಡಿದ್ಲು, ಅವ್ನೂ ಹಣ ಎಲ್ಲಾ ಕದ್ದು ಓಡೋದ,” ನೀಲಿ ಏನೂ ಉತ್ರ ಕೊಡ್ದೇ ಹಾಗೇ ಊಟಕ್ಕೆ ಕಾಯ್ತಾ ಕೇಳ್ಕೊತಿದ್ಲು.

ಅವನು: “ಅವ್ವಂಗೆ ಹೆಣ್ಮಗು ಬೇಕಿತ್ತು ನಾನ್ ಹುಟ್ದೆ. ನಾನು ಹುಟ್ಟಿದ ಮೇಲೆ ಅವ್ವ ಹೆಚ್ಚು ಮಾತಾಡ್ತಾನೆ ಇರ್ಲಿಲ್ಲ. ಮನೆಗೆ ಬಂದೋಗೋ ಜನನೆಲ್ಲಾ ನೋಡ್ತಿದ್ದೆ. ಅವಳು ಬ್ರಾತೆಲ್‌ನಲ್ಲೇ ಕೊನೇ ತಂಕ ಬದ್ಕಿದ್ಲು. ಮೊದ್ಲು ಇದೆಲ್ಲಾ ನಂಗೆ ಹೇಸಿಗೆ ಅನ್ಸಿ ಮನೆಬಿಟ್ಟೋಗಿದ್ದೆ. ಏನೋ ಅಂಗೂ ಇಂಗೂ ಓದ್ಕೊಂಡೆ ಒಂದು ಡಿಗ್ರಿ. ಓದೋಶ್ಟು ಕಾಲಾನೂ ಅಪ್ಪನ ಎಸ್ರು ಅಪ್ಪನ್ ಎಸ್ರೂ ಅಂತ ಹೊಡೆದಾಡಿದೆ. ಅವ್ವ ಜಪ್ಪೈಯ್ಯಾಂದ್ರೂ ಅವಳ ಎಸ್ರು ಬಿಟ್ಟು ಬೇರೆ ಎಸ್ರು ಕೊಡ್ತಿರ್ಲಿಲ್ಲ. ನಂಗೆ ಶಾಲೆ, ಕಾಲೇಜಿನಲ್ಲಿ ಇದಕ್ಕೆ ಹೋರಾಡೋದೇ ಆಗೋಯ್ತು. ಹೊರೋದು ಹೆರೋದು ಹೆಂಗ್ಸು, ಅಪ್ಪನ್ ಎಸ್ರು ಬೇಕಂತೆ ಅಪ್ಪನ್ ಎಸ್ರು ಅಂತ ಬೈತಿದ್ಲು ಅವ್ವ. ಅವ್ವ ತುಂಬಾ ಹಳೆ ಕಾಲದ ಹೆಂಗ್ಸು. ಸರ್ಕಾರ ಎಲ್ಲಂದ್ರಲ್ಲಿ ಅಪ್ಪನ್ ಎಸ್ರು ಕೇಳಿದ್ದಕ್ಕೆ ಸಿಟ್ಕೊಂಡ್ಳು. ಕೆಲ್ಸಕ್ಕೋದ್ರೂ ಅಲ್ಲೂ ಅಪ್ಪನ ಎಸ್ರು. ಒಂದುಡ್ಗೀನ ಪ್ರೇಮಿಸ್ದೆ. ಅವ್ಳು ನನ್ನವ್ವ ಈ ಕೆಲ್ಸ ಮಾಡ್ತಾಳೆ ಅಂತ ಗೊತ್ತಾದಾಗ, ಬಿಟ್ಟೋದ್ಲು. ಅವ್ವನ್ ನರ್ಳಾಟ ಕಿವಿ ಬಿಟ್ ಹೋಗೇ ಇಲ್ಲ. ಒಬ್ಬೊಬ್ರು ಬರುವಾಗ್ಲೂ ಅವ್ವನ ಮೈಮೇಲೆ ನೀಲಿಗಟ್ಟಿರ್ತಿತ್ತು. ಕೆಲ್ವರು ಅವ್ವನ್ನ ಹೊಡ್ದೂ ಹೊಡ್ದೂ ಮಾಡ್ದತಿದ್ರು. ಈ ಹಾಳ್ ಗಂಡ್ಸರಿಗೆ ಅವ್ರನ್ ಬಿಟ್ಟು ಬೇರೆ ಯೋಚ್ನೇನೇ ಇಲ್ಲ. ಕಡೆಗೆ ತೀರ್ಮಾನ ಮಾಡ್ದೆ, ಎಂಗ್ಸುರ್ಗೂ ಸುಕ ಕೊಡ್ಬೇಕು, ಅವರ್ಗೂ ಅವರ್ ಬಾಡಿನ ಅವ್ರದ್ದು ಅಂತ ಫೀಲ್ ಮಾಡ್ಬೇಕು. ಅವ್ವನಂತಾ ಸಾವ್ರಾರ್ ಎಂಗ್ಸರಿಗೆ ಸುಕ ಅನ್ನೋದೇ ಗೊತ್ತಿಲ್ಲ. ಆ ಪ್ರಾಯಚ್ಚಿತ್ತಾ ನಾನು ಮಾಡ್ಬೇಕು ಅಂತ ಈ ಲೈನ್ಗೆ ಬಂದೆ,” ಒಂದು ನಿಟ್ಟುಸಿರು ಬಿಟ್ಟು “ಅಂತೂ ನಾನು ಗುಲಾಬಿ ಆದೆ. ಚಿಟ್ಟೆಗಳ್ ಬಂದ್ ಕೂರೋ ಗುಲಾಬಿ.

ಈ ಲೇಖನ ಓದಿದ್ದೀರಾ: ಅಪ್ರಮೇಯ | ನೀಲಿ ಎಂಬಾಕೆಯ ಪುಟ್ಟ ಆಕಾಶ, ಸಮಾಜದ ಲೆಕ್ಕವಿರದಷ್ಟು ಕ್ರೌರ್ಯ

ನೀಲಿ: ವಿಶಾದದ ನಗೆ ನಕ್ಕು “ಹುಹ್! ಗುಲಾಬಿ... ನನ್ ಮಗ್ಳೂ ಗುಲಾಬಿ ಆಗ್ಬಿಡ್ತಿದ್ಲೋ ಏನೋ, ಒಳ್ಳೆದಾಯ್ತು ಹೋಗಿದ್ದು. ಅದೇನ್ ಸಮಾಜಾನೋ ಏನೋ... ಸಸಂತ್ರನೇ ಇಲ್ಲ. ಎಲ್ಲರಿಗೂ ಮಾಡಕ್ ಬೇಕು ಸೆಕ್ಸು ಆದ್ರೆ ಮಾತಾಡೋಂಗಿಲ್ಲ. ಗಿರಾಕಿ ಏನ್ ಮಾಡ್ದರೂ ಮಾಡಸ್ಕೋಬೇಕು ಅಂತ ಏನಿದೆ. ಹೊಟ್ಟೆ ತುಂಬುಸ್ಕೊಬೇಕಶ್ಟೆ. ಪೋಲೀಸು, ಗಂಡ್ಸುರು, ದುಡ್ಡು... ಇದನ್ ಬಿಟ್ಟು ಏನಿದೆ ಬದ್ಕು?” ಊಟ ತಿಂತಾ ಇಬ್ರೂ ಮೌನವಾಗಿ ಕಾಲಿ ಕಣ್ಣು ಕಾಲಿ ಆಕಾಶ ಹೊತ್ತು ಬಾರವಾಗಿ ಕೂತಿದ್ರು. ಸ್ವಲ್ಪ ಹೊತ್ತಾದ್ ಮೇಲೆ

ಅವನು: “ನೀಲಿ, ಜೊತೇಗ್ ಸುಕ ಕಾಣಾಣ ಬತ್ತೀಯ? ನನ್ ಮನೆಗ್ ಬಾ, ಒಳ್ಳೆ ಬಾಡೂಟ ಹಾಕ್ತೀನಿ, ರಂ ಕುಡ್ದು, ಹೊಟ್ಟೆ ತುಂಬಾ ಮಾತಾಡ್ತ ಸುಕ ಕಾಣಾಣ. ಕಳ್ದೋಗಿದ್ದೆಲ್ಲಾ ಮತ್ತೆ ನೋಡಾನ.

ನೀಲಿ: (ಶೂನ್ಯದಲ್ಲಿ ಕಣ್ ಸಿಕ್ಸಿ ನೋಡ್ತಾ, ಮೆಲ್ಲಗೆ) “ಹ್ಞೂಂ...”

'ಎಲ್ಲರ ಕನ್ನಡ' ಎಂದು ಹೇಳಿಕೊಳ್ಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್