ಅಪ್ರಮೇಯ | ಇಬ್ಬರು ಲೈಂಗಿಕ ಕಾರ್‍ಯಕರ್‍ತೆಯರ ಬದುಕಿನ ಕತೆ

Sex Workers 4

ಈ ಅಂಕಣದ ಕಳೆದ ಕಂತಿನಲ್ಲಿ, ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ 'ಟು ಸ್ಟಾರ್' ಅಧಿಕಾರಿಯೊಬ್ಬರ ಜೊತೆಗಿನ ವಾಗ್ವಾದ ಅನಾವರಣ ಮಾಡಿದ್ದ ಅಂಕಣಕಾರರು, ಈ ಬಾರಿ ಇಬ್ಬರು ಲೈಂಗಿಕ ಕಾರ್‍ಯಕರ್‍ತೆಯರ ಅತ್ಯಂತ ಅಸಹಾಯಕ ಬದುಕನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಗೌಪ್ಯತೆ ಕಾಪಾಡುವ ಸಲುವಾಗಿ ಇಬ್ಬರ ಹೆಸರನ್ನೂ ಬದಲಿಸಲಾಗಿದೆ


ಪ್ರೀತಮ್ಮನ ಕತೆ

ತನ್ನ ಹಳ್ಳಿಯಲ್ಲಿ ಓದಲಾಗದೆ, ಮಾದಿಗರ ಕೇರಿಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು, ತಂದೆ ದಿನಗೂಲಿ ಕೃಷಿ ಮಾಡಿ ತರುತ್ತಿದ್ದಂತ ಆದಾಯಕ್ಕೆ ತಾನೂ ಸ್ವಲ್ಪ ಹಣ ಸೇರಿಸುತ್ತಿದ್ದಳು. ಇಂತಹ ಚುರುಕಿನ ಹುಡುಗಿಗೆ, ಸಂಬಂದಿಕರೆಲ್ಲ ಸೇರಿ ನೆಂಟಸ್ತಿಕೆಯಲ್ಲೇ ಮದುವೆ ಮಾಡಿಸಿದರು. ಆಗಿನ್ನೂ ಆಕೆಗೆ ಎಂಟು ವರ್ಷ ವಯಸ್ಸು!

ಗಂಡನ ಮನೆಗೆ ಹೋದಾಗ ಅವಳಿಗೊಂದು ಆಗಾತ ಕಾದಿತ್ತು; ಗಂಡ ಎನಿಸಿಕೊಂಡವನು ಅದಾಗಲೇ ಒಬ್ಬರು ಹೆಂಗಸಿನ ಜೊತೆ ಬದುಕುತ್ತಿದ್ದ! ಇವಳನ್ನು ಮದ್ವೆ ಮಾಡ್ಕೊಂಡಿದ್ದೇ ಮನೆಗೆಲಸಕ್ಕಾಗಿತ್ತು. ಅಲ್ಲಿ ಆಕೆ ಅನುಬವಿಸಿದ ಹಿಂಸೆ, ಆಕೆಯ ಮೇಲಾದ ಅತ್ಯಾಚಾರ ಅಶ್ಟಿಶ್ಟಲ್ಲ. ಮನೆಯವರಿಗೆ ಕಾಗದ ಹಾಕಲೂ ಬಿಡದೆ, ಕಿರುಕುಳ ಕೊಟ್ಟೂ ಕೊಟ್ಟು ಮನೆಗೆಲಸ ಮಾಡಿಸಲಾಗ್ತಿತ್ತು. ಊಟವನ್ನೂ ಸರಿಯಾಗಿ ಕೊಡದೆ, ಓದಲೂ ಬಿಡದೆ ನಿರಂತರ ದೌರ್ಜನ್ಯ.

ಇದನ್ನೆಲ್ಲ ತಡೆಯಲಾಗಲಿಲ್ಲ. ತನ್ನ ತಂದೆಯ ಮನೆಗೆ ಹೋದರೆ, ಅವರು ಮತ್ತೆ ಗಂಡನ ಮನೆಗೇ ಕಳಿಸುತ್ತಾರೆಂದು ಅಂದಾಜಾಯಿತು. ಬಸ್ ಹತ್ತಿ ಬೆಂಗಳೂರು ಬಂದುಬಿಟ್ಟಳು. ಆಗ ಅವಳಿಗೆ 13 ವರ್ಶ. ಇತ್ತ ಬೆಂಗಳೂರಿನಲ್ಲಿ ಇರಲು ಜಾಗ ಇಲ್ಲ. ಬಸ್ ನಿಲ್ದಾಣದ ಹತ್ತಿರದ ಒಂದು ಟಾಯ್ಲೆಟ್ ಬಳಿ ಇದ್ದ ಹಿಜ್ರಾ ಒಬ್ಬಳು, ಈ ಮಗುವನ್ನು ನೋಡಿ ಮರುಕಪಟ್ಟು ಆಕೆಯನ್ನು ತನ್ನ ಕಾವಲಿನಲ್ಲಿ ಇರಿಸಿಕೊಂಡು ಪ್ರೀತಿ ಕೊಟ್ಟಳು. ಒಂದು ದಿವಸ ಹಿಜ್ರಾಳ ಕಣ್ಣು ತಪ್ಪಿಸಿ, ಹುಡುಗಿಯನ್ನು ಕರೆದೊಯ್ದ ಮೂರು ಮಂದಿ ಪೊಲೀಸಿನವರು, ಸಾಮೂಹಿಕ ಅತ್ಯಾಚಾರ ಮಾಡಿ, ತೋಪೊಂದರಲ್ಲಿ ಎಸೆದುಹೋದರು. ಹಿಜ್ರಾ ಮಹಿಳೆಗೆ ಈ ಹುಡುಗಿಯನ್ನು ಹುಡುಕಲು ನಾಲ್ಕು ದಿವಸ ಬೇಕಾಯಿತು. ಚಿದ್ರವಾದ ಆಕೆಯ ದೇಹ ಸುದಾರಿಸಿಕೊಳ್ಳಲು ಆರು ತಿಂಗಳು ಹಿಡಿಯಿತು.

Image
Sex Workers Protest 1

ಎಲ್ಲೂ ದೂರು ಕೊಡಲಾಗಲಿಲ್ಲ. ಈ ಮದ್ಯೆ ಅವಳು ಗಾರ್ಮೆಂಟ್ಸ್ ಕೆಲಸ, ಮನೆಗೆಲಸ, ಕಟ್ಟಡ ನಿರ್ಮಾಣ ಕೆಲಸ ಮಾಡಿದ್ದಲ್ಲದೆ, ಅಲ್ಲೆಲ್ಲ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು. ಕಡೆಗೆ ಪೊಲೀಸರೇ ಅವಳನ್ನು ದಂದೆಗೆ ಸೇರಿಸಿದರು. ಆಗ ಆರಂಭದಲ್ಲಿ ಅವಳು ಅನುಬವಿಸಿದ ನೋವು, ಸಂಕಟದ ಬಗ್ಗೆ ಮಾತಾಡ್ತಾ ಈಗಲೂ ಅಳುತ್ತಾಳೆ ಆಕೆ.

ಕೊನೆಗೆ, ಬದುಕಲು ಮತ್ತೆ ಬೇರೆ ದಾರಿ ನೋಡಿ ಪ್ರಯೋಜನವಿಲ್ಲ ಅನ್ನಿಸಿ ಲೈಂಗಿಕ ಕೆಲಸವನ್ನೇ ಜೀವನೋಪಾಯ ಮಾಡಿಕೊಂಡಳು. ಲೈಂಗಿಕ ಕಾರ್ಮಿಕರ ಮೇಲೆ ಪೊಲೀಸಿನವರ ಹಿಂಸೆ ಆ ಕಾಲದಲ್ಲಿ ತುಂಬಾ ಹೆಚ್ಚಿತ್ತು ಎಂಬುದು ಆಕೆಯ ಅನುಭವ ಸತ್ಯ. "ಗುಪ್ತಾಂಗಗಳಿಗೆ ಎಲೆಕ್ಟ್ರಿಕ್ ಶಾಕ್ ಕೊಡೋರು, ಜೋರ್ ಜೋರಾಗಿ ಕೆಟ್ಟ-ಕೆಟ್ಟ ಪದಗಳಲ್ಲಿ ಬಯ್ಯೋರು, ಮೈ-ಕೈ ಮೇಲೆ ಬೊಬ್ಬೆ ಎದ್ದರೂ, ರಕ್ತ ಬಂದರೂ ಬಿಡದೆ ಹೊಡೆಯುವುದು, ಅತ್ಯಾಚಾರ ಮಾಡುವುದು ಸರ್ವೇಸಾಮಾನ್ಯ ಆಗಿತ್ತು," ಎನ್ನುವಾಗ ಅವಳ ನೋವೇ ಕಣ್ಣೀರಾಗುತ್ತಿತ್ತು.

ಈ ರೀತಿಯ ಹಿಂಸೆ ತಡೆಯಲಾರದೆ ಅವಳು ಮತ್ತು ಈ ಕೆಲಸದಲ್ಲಿರುವವರು ಸೇರಿ ಸಂಗ ಕಟ್ಟಿ, ಪೊಲೀಸರ ಮತ್ತು ಗೂಂಡಾಗಳ ಅತ್ಯಾಚಾರ, ಹಿಂಸೆ ಕಿರುಕುಳಕ್ಕೆ ಪ್ರತಿರೋದ ತೋರಲು ಮುಂದಾದರು. ಕಾನೂನು ತಗ್ನರ ಸಹಾಯ ಪಡೆದು, ಕೋರ್ಟುಗಳಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಕಲಿಸಿದರು. ಪ್ರತಿಬಟನೆಗಳನ್ನು ಮಾಡಿದರು.

ರೆಹೆನುಮಾ ಕತೆ

ಚಿಕ್ಕ ವಯಸ್ಸಿನಿಂದ ಒಳ್ಳೆಯ ಹೆಂಡತಿ ಅನ್ನಿಸಿಕೊಂಡವಳು. ಪ್ರೇಮಿಸುವ ಗಂಡ ಮತ್ತು ಮುದ್ದು-ಮುದ್ದು ಮಕ್ಕಳು. ಆದ್ರೆ, ದುರಂತವೊಂದು ಸಂಬವಿಸಿತು. ಪ್ರೇಮದ ಹೆಸರಿನಲ್ಲಿ ಅವಳನ್ನು ಬಳಸಿಕೊಂಡವನೊಬ್ಬ, ಆಕೆ ಗರ್ಬಿಣಿ ಎಂದು ತಿಳಿಯುತ್ತಲೇ ಬಿಟ್ಟು ಹೋಗಿಬಿಟ್ಟ. ಅವನೊಟ್ಟಿಗೆ ನಿಕಾ ಕೂಡ ಮಾಡ್ಕೊಂಡಿರಲಿಲ್ಲ. ಮನೇಲಿ ಸೇರಿಸಿಕೊಳ್ಳಲಿಲ್ಲ. ಬೀದಿಗೆ ಬಂದ ಅವಳು, ಮಗುವನ್ನು ಹೆತ್ತು, ಬೀದಿಯಲ್ಲೇ ಹೊಸ ಬದುಕು ಶುರು ಮಾಡಿದಳು.

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಉಪ್ಪಾರ್ ಪೇಟೆ ಪೊಲೀಸ್ ಠಾಣೆಯ 'ಟು ಸ್ಟಾರ್' ಜೊತೆಗಿನ ಒಂದು ವಾಗ್ವಾದ

ಊಟಕ್ಕಾಗಿ ಸಿರಿವಂತರ ಮನೆಗಳಲ್ಲಿ ನಾಯಿಗಳಿಗೆ ಹಾಕುವ ಊಟವನ್ನು ಕದ್ದು ತಾನೂ ತಿಂದು, ತನ್ನ ಮಗುವಿಗೂ ತಿನ್ನಿಸಿದಳು. ಕಡೆಗೆ ತಡೆಯಲಾರದೆ ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದಳು. ಕೆಲಸದ ಜಾಗಕ್ಕೇ ತನ್ನ ಮಗುವನ್ನೂ ಕರೆದೊಯ್ಯುತ್ತಿದ್ದಳು.

ಅಲ್ಲಿದ್ದ ಸೂಪರ್‌ವೈಸರ್ ಇವಳನ್ನು ದುರುಪಯೋಗ ಮಾಡಿಕೊಳ್ಳಲು ಶುರುಮಾಡಿದ. ಏಳು ಬಾರಿ ಅಬಾರ್ಶನ್ ಮಾಡಿಸಿಕೊಂಡು ಆರೋಗ್ಯ ಕೆಡಿಸಿಕೊಂಡಳು. ನಂತರ ಒಂದು ತೀರ್ಮಾನಕ್ಕೆ ಬಂದು, ಸೀದಾ ಬೆಂಗಳೂರು ತಲುಪಿ ಲೈಂಗಿಕ ವ್ರುತ್ತಿಗೆ ಸೇರಿಕೊಂಡಳು. ಬೀದಿಯಲ್ಲಿ ಅನಾತರಾಗಿ ಸಿಗುವ ಮಕ್ಕಳನ್ನು ಮನೆಗೆ ತಂದು ಸಾಕಿ, ಅವರ ಹೊಟ್ಟೆಯನ್ನೂ ತುಂಬಿಸುತ್ತಿದ್ದಳು.

2000ನೇ ಇಸ್ವಿಯಲ್ಲಿ ಪೊಲೀಸಿನವರು ನೂರಾರು ಲೈಂಗಿಕ ಕಾರ್ಮಿಕರನ್ನು ಬಂದಿಸಿ ಕೋರ್ಟ್‍ಗೆ ಹಾಜರುಪಡಿಸುವಾಗ, ಪೊಲೀಸರಿಂದ ಅಶ್ಟೆಲ್ಲ ಹಿಂಸೆ, ಕಿರುಕುಳ ಅನುಬವಿಸಿದರೂ, ಕಟಕಟೆಯಲ್ಲಿ ನಿಂತು, ತಲೆಯ ಮೇಲೆ ಮುಸುಕು ಹಾಕಿಕೊಂಡು, "ತಪ್ಪಾಯ್ತು ಮಹಾಸ್ವಾಮಿ," ಅಂತ ಹೇಳಿ ಫೈನ್ ಕಟ್ಟಿ ಬರಬೇಕಿತ್ತು. ಈಯಮ್ಮ ಕೋರ್ಟ್‍ನಲ್ಲಿ ಮುಕಕ್ಕೆ ಮುಸುಕು ಹಾಕದೆ ದೈರ್ಯದಿಂದ ಮುಕ್ತವಾಗಿ ನಿಂತಳು. ಜಡ್ಜು ಕೆಟ್ಟ-ಕೆಟ್ಟ ಮಾತಲ್ಲಿ, "ಇಂತಾ ತಪ್ಪು ಮಾಡಿದ್ಯಾ?" ಕೇಳಿದರು. ನಮ್ ರೆಹೆನುಮಾ ಜೋರು ಸ್ವರದಲ್ಲಿ, "ಇಲ್ಲ, ನಾನೇನೂ ತಪ್ಪು ಮಾಡಿಲ್ಲ. ನನ್ನ ಮತ್ತು ಮಕ್ಕಳ ಹೊಟ್ಟೆ ತುಂಬಿಸಿಕೊಳ್ಳೋಕ್ಕೆ ನಾನು ಈ ಕೆಲಸ ಮಾಡ್ತಿದ್ದೀನಿ. ಇದು ನನಗೆ ತಪ್ಪಾಗಿ ಕಂಡಿಲ್ಲ,” ಎಂದಳು. ನಂತರವೂ, ಕಳ್ಳಸಾಗಾಣಿಕೆಯಲ್ಲಿ ಸಿಕ್ಕ ಮಕ್ಕಳನ್ನು ಅವರವರ ಮನೆ ಹುಡುಕಿ ಸೇರಿಸುವ ಮತ್ತು ಮನೆ ಇಲ್ಲದವರನ್ನು ಅನಾತಾಶ್ರಮಕ್ಕೆ ಸೇರಿಸುವ ಕೆಲಸ ಮಾಡಿದಳು.

Image
Sex Workers 2

ಇದು ಈ ಇಬ್ಬರ ಕತೆ. ಈ ಪ್ರೀತಮ್ಮ  ಇರಬಹುದು, ರೆಹೆನುಮಾ ಇರಬಹುದು, ಮತ್ಯಾರೇ ಇರಬಹುದು, ಇವರನ್ನೆಲ್ಲ ಈ ದಂದೆಗೆ ಸೇರಿಸಿದ್ದು ತಮ್ಮದೇ ಕುಟುಂಬದ ಜನ, ಅವರು ನಂಬಿದವರು, ಪೊಲೀಸರು. ಇಶ್ಟೆಲ್ಲ ಅನುಬವಿಸಿ, ತಾವು ಕೆಲಸ ಮಾಡುವ ಬೀದಿಗಳಲ್ಲಿ ಯಾರನ್ನೂ ಅನಾತವಾಗಿ ಬಿಡದೆ ಎಲ್ಲರನ್ನೂ ದಡ ಸೇರಿಸುವ ಲೈಂಗಿಕ ಕಾರ್‍ಮಿಕರ ಈ ಸಂಗಟನೆಯನ್ನು ಹೆಚ್ಚು ಜನ ಗಮನಿಸಲೇ ಇಲ್ಲ.

ರೆಹೆನುಮಾ ಆಗಲೀ, ಪ್ರೀತಮ್ಮ ಆಗಲೀ, ಯಾವ ಗಂಗೂಬಾಯಿ ಕಾಟಿಯವಾಡಿಗಿಂತ ಕಡಿಮೆ ಇಲ್ಲ. ಹಂಗ್ ನೋಡಿದ್ರೆ ರೆಹೆನುಮಾಗೆ ನಮ್ಮ ರಾಜ್ಯ ಪ್ರಶಸ್ತಿ ಸಿಗಬೇಕಾಗಿತ್ತು. ಅವಳು ಕಳ್ಳಸಾಗಣೆಯಿಂದ ಬಚಾವ್ ಮಾಡಿರುವ ಮಕ್ಕಳು ಅದೆಶ್ಟೋ ಮಂದಿ. ಆದರೆ, ಕೊನೇತನಕ ದಂದೆ ಮಾಡಿಯೇ ತನ್ನ ಮಕ್ಕಳನ್ನು ಓದಿಸಿದಳು.

ಲೈಂಗಿಕ ಕೆಲಸವನ್ನು 'ಶೋಶಣೆ' ಅಂತ ಮಾತ್ರ ನೋಡಿ, ಈ 'ಜಗತ್ತಿನ'ವರಿಗೆ ಏನೂ ಸಹಾಯ ಮಾಡದೆ, ಈ ಮಹಿಳೆಯರಿಗೆ ಎಳ್ಳಷ್ಟೂ ಗೌರವ ಕೊಡದೆ, ಸಾಮಾಜಿಕ ಹೋರಾಟಗಳಲ್ಲಿ ಸೇರಿಸಿಕೊಳ್ಳಲು ಮಡಿವಂತಿಕೆ ಮಾಡುವ, ಆದರೂ ಮಾತು-ಮಾತಿಗೂ 'ಮಹಿಳಾ ಶೋಶಣೆ' ಎಂದೇ ಹೇಳುವ ಪ್ರತಿಯೊಬ್ಬ ಪ್ರಗತಿಪರ ಗಂಡಸರಿಗೂ, ಮನೆಯಲ್ಲಿ ಹೆಣ್ಣುಮಕ್ಕಳು ಹುಟ್ಟಿದಾಗ ಅವರನ್ನು ಮದುವೆಗಾಗಿ ತಯಾರು ಮಾಡುವುದಷ್ಟೇ ತನ್ನ ಹೊಣೆ ಎಂದು ಭಾವಿಸುವ ಪ್ರತಿ ಅಪ್ಪನಿಗೂ ರೆಹೆನುಮಾಳ ಕೂಗುಮಾತಿದು:

"ಮಹಿಳೆ ತನ್ನ ಕೊನೆಯ ಆಯ್ಕೆಯಾಗಿ ಈ ವ್ರುತ್ತಿಯನ್ನು ತೆಗೆದುಕೊಳ್ಳುತ್ತಾಳಷ್ಟೆ. ಪ್ರತಿನಿತ್ಯ ಮನೆಯಲ್ಲಿ ಬಿಟ್ಟಿ ಸಿಗುವ ಹೆಂಡತಿಯಿಂದ ಸುಕ ಅನುಬವಿಸಿದ ನಂತರ ಯಾವತ್ತಾದರೂ, 'ನಿನಗೆ ಸಂತೋಶವಾಯಿತಾ?' ಅಂತ ಒಂದು ಮಾತು ಕೇಳಿದ್ದೀರಾ? ನಮ್ಮನ್ನಂತೂ ಕೇಳಲ್ಲ ಬಿಡಿ; ಯಾಕಂದ್ರೆ ನಾವು ಕೇಳಿದ್ದನ್ನು ಕೊಡಬೇಕು, ಅದಕ್ಕೊಂದು ರೇಟು. ಇಲ್ಲದಿದ್ರೆ ಈ ಗಂಡಸರೆಲ್ಲ ತಮ್ಮ ವಿಕ್ರುತಿಗಳನ್ನ ಯಾರ್ ಹತ್ರ ತೀರಿಸ್ಕೊತಾರೆ? ಇಶ್ಟೆಲ್ಲ ಆದರೂ, ನಮ್ ಸಮಾಜ, ಪ್ರಗತಿಪರರು, ಮುಸ್ಲಿಂ, ದಲಿತ, ಆದಿವಾಸಿ, ಹಳ್ಳಿ ಹೆಂಗಸರ ಜೀವನ ಕಟ್ಟುವುದರಲ್ಲಿ ಪುರುಶಪ್ರದಾನ ಆಲೋಚನೆಗಳನ್ನು ಕಿತ್ತೆಸೆಯದೆ ಇದ್ದರೆ, ಮತ್ತೆ ನಾವು ಇದೇ ಬದುಕು ಬದುಕಬೇಕು. ಆದ್ರೆ ಈ ಬದುಕನ್ನೇ ಬದುಕಬೇಕೂಂದ್ರೆ ನಮಗೆ ಗೌರವ, ಗನತೆ ಬೇಕು. ನಾವು ಕೊಲೆ ಮಾಡುತ್ತಿಲ್ಲ, ಸುಲಿಗೆ ಮಾಡುತ್ತಿಲ್ಲ, ಗಂಡಸರ ತೀಟೆ ತೀರಿಸುತ್ತಿದ್ದೇವೆ. ನಾವು ಯಾರೂ ಆಸೆಯಿಂದ ಈ ವ್ರುತ್ತಿಗೆ ಬಂದಿಲ್ಲ. 'ಮಹಿಳೆ-ಶೋಷಣೆ' ಅಂತ ಎಶ್ಟೆಲ್ಲ ಮಾತನಾಡುವ ನೀವು, ನಮ್ಮ ಜೊತೆ ಒಂದು ಹೊತ್ತು ಊಟ ಮಾಡಿ ಗೌರವದಿಂದ ಮಾತನಾಡಲು ಸಾದ್ಯವೇ? ಅಸ್ಪ್ರುಶ್ಯತೆಯ ಬಗ್ಗೆ ಮಾತನಾಡುವವರು, ನಮ್ಮ ಜೊತೆ ಕೂಡ ಒಮ್ಮೆ ಮಾತನಾಡಿ ನೋಡಿ, ನಾವೂ ನಿಮ್ಮ ತರಾನೇ - ಮನುಷ್ಯರು..."

ಇನ್ನು ನನಗೆ ಹೇಳಲು ಏನೂ ಇಲ್ಲ...

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್