ಜತೆಗಿರುವನೇ ಚಂದಿರ? | ಇವತ್ತಿಗೂ ಕಾಡುತ್ತದೆ ಅಂದು ಗಣಿತ ಕ್ಲಾಸಿನಲ್ಲಿ ಕಳೆದುಹೋದ ಕಿವಿಯೋಲೆ

School 3

ಪಾಠ ಕೇಳುತ್ತಿದ್ದ ನಾವಿಬ್ಬರೂ, ಮೇಷ್ಟ್ರಿಗೆ ತಿಳಿಯದಂತೆ ಪುಸ್ತಕದ ಕಡೇ ಪುಟದಲ್ಲಿ ಒಂದೊಂದು ಮನುಷ್ಯನ ಚಿತ್ರ ಬರೆಯುವ ಆಟಕ್ಕಿಳಿದೆವು. ಆ ಚಿತ್ರಗಳಲ್ಲಿ ಕೆದರಿದ ಕೂದಲಿನ ಇಬ್ಬರು ಮನುಷ್ಯರು ಗೊಣ್ಣೆ ಸುರಿಸುತ್ತ ಕಕ್ಕಸ್ಸಿಗೆ ಕೂತಿರುವಂತೆ ಚಿತ್ರ ಬರೆದೆವು. ಅವಳ ಚಿತ್ರದ ಕೆಳಗೆ 'ಇದು ನಿಮ್ಮಪ್ಪ' ಅನ್ನುವ ಅಡಿಬರಹ. ನನ್ನ ಚಿತ್ರದ ಕೆಳಗೆ 'ಇದು ನಿಮ್ಮಪ್ಪ' ಅನ್ನುವ ಅಡಿಬರಹ!

ಇತ್ತೀಚೆಗೆ ಯಾಕೋ ಕೂಡಿಗೆಯಲ್ಲಿ ನಾನು ಓದಿದ್ದ ಶಾಲೆಯನ್ನು ನೋಡಬೇಕೆಂಬ ಬಯಕೆ ಅತೀವವಾಯಿತು. ಸ್ವಲ್ಪ ದಿನಗಳ ಹಿಂದಷ್ಟೇ ನನ್ನವನ ಜೊತೆ ಹೋಗಿ ಬಂದಿದ್ದರೂ ಮನಸ್ಸಿಗೆ ತೃಪ್ತಿ ಎನಿಸಿರಲಿಲ್ಲ. ಮತ್ತೂ ಒಂದಷ್ಟು ಹೊತ್ತು ಅಲ್ಲಿರಬೇಕು, ನಾನು ಕೂತು, ನಿಂತು, ಬಿದ್ದು, ಒದ್ದಾಡಿ ಆಡಿದ್ದ ಆ ವಿಶಾಲವಾದ ಮೈದಾನದಲ್ಲಿ ಒಂದು ಹುಲ್ಲುಕಡ್ಡಿಯಂತೆ ನಿಂತು ಎಲ್ಲವನ್ನೂ ನೆನೆಯಬೇಕು, ಮೈಮರೆಯಬೇಕು ಎಂದೆಲ್ಲ ಅನ್ನಿಸಿತು. ಊರು ಬಿಟ್ಟು ಇಪ್ಪತ್ತು ವರ್ಷಗಳ ನಂತರ ಕೊರೋನದ ಕಾರಣದಿಂದ ಮತ್ತೆ ನಾನು ಹುಟ್ಟಿ ಬೆಳೆದ ಊರನ್ನೇ ಆಶ್ರಯಿಸಬೇಕಾಯಿತು. ಈಗ ಕೊರೋನಾ ಹಾವಳಿ ಕಡಿಮೆಯಾಗಿ ಮತ್ತೆ ನಮ್ಮ ಸಹಜ ಬದುಕಿಗೆ ಮರಳಬೇಕಿತ್ತು. ಹಾಗಾಗಿ, ಊರು ಬಿಡಲು ನಿರ್ಧರಿಸಿದ್ದೆವು. ನನ್ನ ಬಳಿ ಇದ್ದ ಬೆರಳೆಣಿಕೆಯಷ್ಟು ದಿನಗಳ ಧಾವಂತವು ನನ್ನನ್ನು ಆ ಶಾಲೆಯ ಕಡೆಗೆ ತೀವ್ರವಾಗಿ ಸೆಳೆಯತೊಡಗಿತು. ಪುಟ್ಟ ಮಗನನ್ನು ಗಾಡಿಯಲ್ಲಿ ಕೂರಿಸಿಕೊಂಡು ನನ್ನ ಶಾಲೆಯಿದ್ದ ದಿಕ್ಕಿಗೆ ಹೊರಟೇಬಿಟ್ಟೆ. ನಾನು ಆಡಿದ್ದ ಮೈದಾನದಲ್ಲಿ ನಿಂತು, ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ನನ್ನ ಮಗ ಅದೇ ಮಣ್ಣಿನೊಂದಿಗೆ ನನ್ನ ಭಾವನೆಗಳನ್ನೇ ಹೊತ್ತವನಂತೆ, ನನ್ನಂತೆಯೇ ಅವನೂ ಆಡುತ್ತಿದ್ದ ದೃಶ್ಯಗಳನ್ನು ನೋಡಿ ಕಣ್ಣಾಲಿಗಳು ತುಂಬಿದವು.

Eedina App

ನಾನು ಮೂರನೆಯ ತರಗತಿಯಿಂದ ಏಳನೇ ತರಗತಿಯವರೆಗೆ ಕೂಡಿಗೆಯ ಫಾರಂ ಸ್ಕೂಲಲ್ಲೇ ಓದಿದ್ದು. ದಿನಣ್ಣ ಐದರಿಂದ ಆರಕ್ಕೆ ಮತ್ತು ನಾನು ಎರಡರಿಂದ ಮೂರಕ್ಕೆ ಪಾಸಾಗಿದ್ದೆವು. ಹಳೇ ಕೂಡಿಗೆಯ ಪ್ರಾಥಮಿಕ ಶಾಲೆಯಿಂದ ಫಾರಂ ಸ್ಕೂಲ್‌ಗೆ ಇಬ್ಬರನ್ನೂ ಒಟ್ಟಿಗೇ ಸೇರಿಸಿದ್ದರು. ಆ ಶಾಲೆಯ ಆವರಣದ ಸುತ್ತಮುತ್ತಲೂ ದನದ ಫಾರಂ, ಹಂದಿ ಫಾರಂ, ಪೌಲ್ಟ್ರಿ ಫಾರಂಗಳಿದ್ದದ್ದರಿಂದ ನಮ್ಮ ಶಾಲೆಗೆ ಅದು ಸರ್ಕಾರಿ ಶಾಲೆಯಾಗಿದ್ದರೂ 'ಫಾರಂ ಸ್ಕೂಲ್' ಅಂತಲೇ ಹೆಸರಿತ್ತು. ಈಗ ಆ ಶಾಲೆಯ ಸುತ್ತಮುತ್ತ ಸೈನಿಕ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ತಲೆ ಎತ್ತಿ ನಿಂತು ಹೆಚ್ಚು ಪ್ರಸಿದ್ಧಿ ಪಡೆದಿವೆ. ಪ್ರಾಣಿಗಳ ಫಾರಂಗಳಲ್ಲದೆ, ಸೀಬೆ, ಮಾವು, ಹಲಸು, ಸಪೋಟ ಹಣ್ಣುಗಳ ದೊಡ್ಡ-ದೊಡ್ಡ ತೋಟಗಳೂ ಅಲ್ಲಿದ್ದವು. ಎಷ್ಟೋ ಬಾರಿ ನಾವು ಮಧ್ಯಾಹ್ನದ ಊಟ ಕೊಂಡೊಯ್ಯದೆ ಇದ್ದಾಗ ದಿನಣ್ಣ ಆ ತೋಟಗಳ ಬೇಲಿ ಹಾರಿಯೋ, ಬೇಲಿ ನುಸುಳಿಯೋ ಹೋಗಿ ತನ್ನ ಎರಡೂ ಜೇಬುಗಳಲ್ಲೂ ಹಣ್ಣುಗಳನ್ನು ತುಂಬಿ ತಂದು ನನ್ನ ಮಡಿಲಲ್ಲಿ ಸುರಿಯುತ್ತಿದ್ದ. ನಾನು ಎಷ್ಟೋ ಸಲ ಅವನ್ನೇ ತಿಂದು ತರಗತಿಗಳಿಗೆ ಹೋಗಿದ್ದಿದೆ.

ನಮ್ಮ ಶಾಲೆಯ ವಿಶಾಲವಾದ ಮೈದಾನದಲ್ಲಿ ಕುಳಿತು ಆಟಗಳನ್ನು ನೋಡಲೆಂದು ನಾಲ್ಕೈದು ಉದ್ದುದ್ದದ ಮೆಟ್ಟಿಲುಗಳ ಸಾಲುಗಳನ್ನು ನಿರ್ಮಿಸಿದ್ದರು. ಅವು ಈಗಲೂ ಹಾಗೆಯೇ ಇವೆ. ಆಗ ನನ್ನೊಂದಿಗಿನ ಮಕ್ಕಳು ಪುಟ್ಟ-ಪುಟ್ಟ ರಬ್ಬರ್ ಬಾಲ್‌ಗಳನ್ನು ತಂದು ಆ ಬಾಲ್‌ಗಳಿಂದ ಮೆಟ್ಟಿಲುಗಳಿಗೆ ಹೊಡೆದು ಕ್ಯಾಚ್ ಹಿಡಿಯುವ ಆಟ ಆಡುತ್ತಿದ್ದರು. ನನ್ನ ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೆಲ್ಲರೂ ಒಂದೊಂದು ಬಾಲ್‌ಗಳನ್ನು ತರುತ್ತಿದ್ದರು. ಆಟದ ಪೀರಿಯಡ್‌ಗಳಲ್ಲಿ ಅವರೆಲ್ಲರೂ ಆ ಆಟವನ್ನು ಆಡುತ್ತಿದ್ದರೆ, ನಾನು ಮಾತ್ರ, ನನಗೆ ಒಮ್ಮೆಯಾದರೂ ಯಾರಾದರೂ ಆ ಬಾಲ್ ಕೊಡುಬಹುದೇ ಎಂದು ಆಸೆಗಣ್ಣುಗಳಿಂದ ಕಾದು ಕೂರುತ್ತಿದ್ದೆ.

AV Eye Hospital ad
School 2
ಸಾಂದರ್ಭಿಕ ಚಿತ್ರ

ಆಗ ಆ ಬಾಲ್‌ಗೆ ಕೇವಲ ಆರು ರೂಪಾಯಿ ಇತ್ತೆಂಬ ನೆನಪು. ಆದರೆ, ಅಮ್ಮಿಗೆ ನಾನು ಎಷ್ಟೆಲ್ಲ ಕಾಡಿ ಬೇಡಿದರೂ ಕೊಡಿಸಲು ಸಾಧ್ಯವಾಗಿರಲಿಲ್ಲ. ನಾನು ಆ ಬಾಲ್‌ಗೋಸ್ಕರ ಮನೆಗೆ ಬಂದು ದಿನವೂ ಅಳುತ್ತಿದ್ದೆ. ಕೊನೆಗೂ, ಆ ಬಾಲ್ ನನ್ನ ಕೈ ಸೇರಲೇ ಇಲ್ಲ. ಆ ನೆನಪು ನನ್ನ ಎದೆಯೊಳಗೆ ಈಗಲೂ ಅಡಗಿಕೊಂಡೇ ಇದೆ. ಇಂದು ಅದೇ ಮೆಟ್ಟಿಲುಗಳ ಮೇಲೆ ನನ್ನ ಮಗ ನನ್ನ ಬಾಲ್ಯದ ಆಸೆಯನ್ನು ಚಿಗುರಿಸುವವನಂತೆ ಒಂದರಿಂದಿನ್ನೊಂದಕ್ಕೆ ಜಿಗಿಯುತ್ತ ಆಡುತ್ತಿದ್ದ. ನಾನಾಡಿದ್ದ ಮಣ್ಣನ್ನು ಮುಟ್ಟಿ ಮುಟ್ಟಿ, ನಾನಾಡಿದ್ದ ಜಾಗಗಳಲ್ಲಿ ನಿಂತು ಮನಸ್ಸಿಗೆ ಜೋತುಬಿದ್ದ ಕತೆಗಳನ್ನು ಮಗನೊಂದಿಗೆ ಹಂಚಿಕೊಳ್ಳುತ್ತ ಇದ್ದೆ. ಅಷ್ಟರಲ್ಲಿ ಮೋಡವೂ ನನ್ನೊಂದಿಗೆ ಸ್ಪಂದಿಸಿತೆಂಬಂತೆ ಚುಮುಚುಮು ಮಳೆಯಾಗಲು ತೊಡಗಿತು. ನಾವಿಬ್ಬರೂ ಬೇಕಂತಲೇ ಮಳೆಯಲ್ಲಿ ನೆನೆಯುತ್ತ ಮೈದಾನವ ದಾಟಿ ಶಾಲೆಯ ಮುಂಭಾಗಕ್ಕೆ ಬಂದೆವು.

ಶಾಲೆಯ ಗೇಟಿನಲ್ಲಿ ಹಿರಿಯರೊಬ್ಬರು ನಿಂತಿದ್ದರು. ಅವರು ಆ ಶಾಲೆಯ ಶಿಕ್ಷಕರು ಎಂದು ಮೇಲುನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿತ್ತು. ನಾವು ಗೇಟಿನ ಬಳಿ ಹೋಗುತ್ತಲೇ ಅವರು, "ಯಾರು...? ಏನಾಗ್ಬೇಕಿತ್ತು...?" ಎಂದು ಆತ್ಮೀಯವಾಗಿ ಕರೆದು ಮಾತಾಡಿಸಿದರು. "ನಾನು ಇದೇ ಶಾಲೆಯಲ್ಲಿ ಓದಿದ್ದು... ಹಾಗೆಯೇ ಒಮ್ಮೆ ಶಾಲೆಯನ್ನು ನೋಡಬೇಕೆನ್ನಿಸಿ ಬಂದೆ," ಎಂದೆ. ನನಗೆ ಆಗಲೂ ಅವರ ಗುರುತು ಹತ್ತಿರಲಿಲ್ಲ. ಆದರೆ, ಆ ಧ್ವನಿ ಮಾತ್ರ ನನ್ನನ್ನು ಮತ್ತೆ ನನ್ನ ಶಾಲಾ ದಿನಗಳಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿತ್ತು.

ಅಷ್ಟರಲ್ಲಿ ಅವರು, "ಯಾವ ಇಸವಿ...?" ಎಂದು ಕೇಳಿದರು. ನಾನು, "ಬಹುಶಃ 1994 ಅನ್ಸುತ್ತೆ ಸರ್..." ಅಂದೆ. "ನಾನು... ಯೋಗೇಶ್ ಮಾಸ್ಟರ್... ಗೊತ್ತಿದ್ಯಾ?" ಅಂದ್ರು. ನನ್ನ ದೃಷ್ಟಿ ಅಚಾನಕ್ಕಾಗಿ ಅವರು ಕೈಗಳ ಮೇಲೆ  ಬಿತ್ತು. ಅವರಲ್ಲಿದ್ದ ವಿಶೇಷತೆ ಎಂದರೆ, ಅವರ ಒಂದು ಕೈಯಲ್ಲಿ ಆರು ಬೆರಳುಗಳಿದ್ದವು. ಆ ಕೈಯನ್ನು ನೋಡಿದ ಕೂಡಲೇ ನನಗೆ ಅವರ ಗುರುತು ಹತ್ತಿ, ಕ್ಷಣಮಾತ್ರದಲ್ಲಿ ದೇಹದಲ್ಲಿ ಮಿಂಚೊಂದು ಹರಿದಂತಾಗಿ ಅವರ ಕಾಲುಗಳಿಗೆ ನಮಸ್ಕರಿಸಿದೆ. ಕಾಲದ ಹೊಡೆತದಲ್ಲಿ ನನ್ನಂತೆ ಅವರೂ ಸಾಕಷ್ಟು ಬದಲಾಗಿದ್ದರು. ನನ್ನನ್ನು ಆತ್ಮೀಯವಾಗಿ ಮಾತನಾಡಿಸಿ, ಇಡೀ ಶಾಲೆಯ ಆವರಣವನ್ನೆಲ್ಲ ಪರಿಚಯಿಸಿದರು. ಶಾಲೆಯ ಸುತ್ತ ಕಾಂಪೌಂಡ್ ಹಾಕಿಸಿದ್ದು, ಬಿದ್ದುಹೋದ ಕಟ್ಟಡಗಳನ್ನು ಮತ್ತೆ ಕಟ್ಟಿಸಿದ್ದು ಎಲ್ಲವನ್ನೂ ವಿವರಿಸುತ್ತ ಶಾಲೆಯಲ್ಲಿನ ಮಕ್ಕಳ ಸಂಖ್ಯೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನ್ನ ಬಗ್ಗೆಯೂ ಬಹಳ ಕುತೂಹಲದಿಂದ ವಿಚಾರಿಸಿದರು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಮೈಸೂರಿನ ಟಿಪ್ಪು ಸುಲ್ತಾನ ಅಬ್ಬನ 'ಟಿಪ್ಪು'ವಾದ ಸೋಜಿಗ

ಮೇಷ್ಟ್ರು ಒಮ್ಮೊಮ್ಮೆ ನನ್ನ ಓದನ್ನು ಉದಾಹರಣೆ ಕೊಟ್ಟು, ನನ್ನ ಜೊತೆಗೆ ಉಳಿದ ಮಕ್ಕಳನ್ನೂ ಪ್ರೋತ್ಸಾಹಿಸುತ್ತಿದ್ದರು. ಶಾಲೆಗೆ ಹೋದ ತಕ್ಷಣ ಶಾಲಾ ಆವರಣದಲ್ಲಿ ನನ್ನ ಕಣ್ಣುಗಳು ಹುಡುಕುತ್ತಿದ್ದ ವ್ಯಕ್ತಿ ಅವರು. ಒಟ್ಟಿನಲ್ಲಿ ನನ್ನ ಬಾಲ್ಯದ ಶಾಲಾ ದಿನಗಳ ಹೀರೋ. ತೆಳ್ಳಗೆ ಬೆಳ್ಳಗಿದ್ದ ಸುಂದರ ಯುವಕ ಆಗ. ಶಿಸ್ತಿನಿಂದ ಕೂಡಿದ್ದ ಅವರ ಪಾಠ ತುಂಬಾ ಇಷ್ಟವಾಗುತ್ತಿತ್ತು. ಅವರ ತರಗತಿಯ ವೇಳೆಯಲ್ಲಿ ಯಾರೂ ಮಾತಾಡುವಂತಿರಲಿಲ್ಲ. ಹಾಗಾಗಿ, ಅವರು ಬೋರ್ಡಿನ ಮೇಲೆ ಬರೆದು ವಾಪಸ್ ತಿರುಗುವಷ್ಟರಲ್ಲಿ ನಮ್ಮ ಭೂಗತ ಲೋಕದ‌ ವ್ಯವಹಾರಗಳನ್ನು ಮುಗಿಸಿಬಿಡುತ್ತಿದ್ದೆವು. ಆದರೆ, ಅವರು ಬೋರ್ಡೇ ಹೇಳಿಕೊಟ್ಟಿತೆಂಬಂತೆ ಅಥವಾ ಬೋರ್ಡೆಂಬ ಕನ್ನಡಿಯೊಳಗಿನಿಂದ ನೋಡಿಕೊಂಡವರಂತೆ ನಮ್ಮ ಕಳ್ಳ ಕೆಲಸಗಳ ವಾಸನೆ ಹಿಡಿದುಬಿಡುತ್ತಿದ್ದರು. ಬೋರ್ಡಿನ ಮೇಲೆ ಬರೆದು ಮುಗಿಸಿ, ತರಲೆ ಮಾಡಿದವರು ಯಾರೆಂದು ಖಚಿತವಾಗಿ ಗೊತ್ತಿದ್ದರೂ ಬೇಕಂತಲೇ ಬೇರೆಲ್ಲೋ ನೋಡುತ್ತ ಹೋಗಿ, ಮತ್ತೆ ಹಿಂದಿನಿಂದ ಬಂದು ಆ ಆರು ಬೆರಳಿದ್ದ ಕೈಯಿಂದ ಮುಷ್ಟಿ ಬಿಗಿ ಹಿಡಿದು ಬೆನ್ನಿನ‌ ಮೇಲೆ ಧಿಡ್ಡನೆ ಗುದ್ದುತ್ತಿದ್ದರು. ಗುದ್ದಿಸಿಕೊಂಡವನಿಗೆ ಉಸಿರುಗಟ್ಟಿ ಮಾತೇ ಹೊರಡುತ್ತಿರಲಿಲ್ಲ.

ನಾನಾಗ ಏಳನೇ ತರಗತಿ ಇರಬೇಕು. ಒಮ್ಮೆ ಅಮ್ಮಿಗೆ ತಾನು ಕೆಲಸಕ್ಕೆ ಹೋಗುತ್ತಿದ್ದ ಟಾಟಾ ಕಾಫಿ ವರ್ಕ್ಸ್‌ನಲ್ಲಿ ಬೋನಸ್ ಸಿಕ್ಕಿತ್ತು. ಅಮ್ಮಿಗೆ ಅಪರೂಪಕ್ಕೊಮ್ಮೆ ಸಿಗುತ್ತಿದ್ದ ಬೋನಸ್ ಹಣದಲ್ಲಿ ನಾನು ಆಸೆಪಡುತ್ತಿದ್ದ ಕೆಲವು ವಸ್ತುಗಳನ್ನು ಕೊಡಿಸಿಬಿಡುತ್ತಿದ್ದಳು. ಅವುಗಳಲ್ಲಿ ಪೌಡರ್, ಸ್ನೋ, ಉಗುರು ಬಣ್ಣ, ರಿಬ್ಬನ್, ಹೇರ್ ಪಿನ್, ಕಿವಿಯೋಲೆಗಳೆಲ್ಲ ಸೇರಿರುತ್ತಿದ್ದವು. ಆ ದಿನ ಅಮ್ಮಿ ನಾನೇ ಆರಿಸಿದ್ದ ಒಂದು ಉದ್ದದ ಕಿವಿಯೋಲೆಯೊಂದನ್ನು ಕೊಡಿಸಿದ್ದಳು.

ನಾನು ಐದಾರನೇ ಕ್ಲಾಸಿನಲ್ಲಿ ಓದುತ್ತಿದ್ದರೂ ಇನ್ನೂ ಕಿವಿ ಚುಚ್ಚಿಸಿರಲಿಲ್ಲ. ಕಿವಿಯೋಲೆ ಹಾಕಬೇಕೆಂಬ ಆಸೆಯಿಂದ ನಾನೇ ಸೇಫ್ಟಿ ಪಿನ್ನಿನಲ್ಲಿ ಕಿವಿಗಳನ್ನು ಚುಚ್ಚಿಕೊಂಡಿದ್ದೆ. ಅದನ್ನು ನೋಡಿ ಅಮ್ಮಿಗೆ ಏನನ್ನಿಸಿತೋ, ನನ್ನನ್ನು ಆಕೆಯ ಗೆಳತಿಯ ಮಗಳ ಹತ್ತಿರ ಕೊಂಡೊಯ್ದು, ಕೈವಾರದಲ್ಲಿ ಕಿವಿ ಚುಚ್ಚಿಸಿದ್ದಳು. ಅದು ರಣವಾಗಿ, ಎರಡೂ ಕಿವಿಗಳಲ್ಲೂ ಗಂಟಾಗಿ ಕೀವು ಸುರಿಯುತ್ತಿದ್ದರೆ, ಅಮ್ಮಿ ವಾಸಿಯಾಗಲೆಂದು ಗಾಯದ ಮೇಲೆ ಸೀಮೆಎಣ್ಣೆ ಸುರಿಯುತ್ತಿದ್ದಳು. ಹೇಗೋ ಸಾಹಸ ಮಾಡಿ ಕಿವಿಗಳ ಗಾಯವನ್ನು ವಾಸಿ ಮಾಡಿಕೊಂಡಿದ್ದೆ.

School 1
ಸಾಂದರ್ಭಿಕ ಚಿತ್ರ

ನಾಳೆ ನಾನು ಶಾಲೆಗೆ ಹಾಕಿಕೊಂಡು ಹೋಗುವ ಆ ಉದ್ದನೆಯ ಕಿವಿಯೋಲೆಯನ್ನು ನೆನೆದೇ ಅಂದು ನನಗೆ ರಾತ್ರಿಯಿಡೀ ನಿದ್ರೆ ಹತ್ತಲಿಲ್ಲ. ಏನೋ ಒಂಥರಾ ಹೊಸದರ ಬಗೆಗಿನ ಪುಳಕ. ಬೆಳಗ್ಗೆ ಬಲು ಸಂಭ್ರಮದಿಂದಲೇ ಅವನ್ನೆಲ್ಲ ತೊಟ್ಟು ಶಾಲೆಗೆ ಹೋದೆ. ಆ ಉದ್ದ ಕಿವಿಯೋಲೆ ತೊಟ್ಟು ಹೋದ ನನಗೆ ನಾನೇ ಸುಂದರಿ ಅನ್ನುವ ನವೀನ ಭಾವ. ಅಂದು ಯೋಗೇಶ್ ಮೇಷ್ಟ್ರರ ಗಣಿತದ ಕಂಬೈನ್ಡ್ ಕ್ಲಾಸ್ ಇತ್ತು. ನಾನು ಮತ್ತು ನನ್ನ ಸ್ನೇಹಿತೆ ಸರೀನಾ ಇಬ್ಬರೂ ಮೊದಲ ಸಾಲಿನ ಕೊನೆಯಲ್ಲಿ ಗೋಡೆ ಬದಿಯಲ್ಲಿ ನೆಲದ ಮೇಲೆ ಕೂತಿದ್ದೆವು.

ಪಾಠ ಕೇಳುತ್ತಿದ್ದ ನಾವಿಬ್ಬರೂ ಮೇಷ್ಟ್ರಿಗೆ ತಿಳಿಯದಂತೆ ಪುಸ್ತಕದ ಕಡೆಯ ಪುಟಗಳಲ್ಲಿ  ಇಬ್ಬರೂ ಒಂದೊಂದು ಮನುಷ್ಯನ ಚಿತ್ರ ಬರೆಯುವುದರೊಂದಿಗೆ ಆಟಕ್ಕಿಳಿದೆವು. ಆ ಚಿತ್ರಗಳಲ್ಲಿ ಕೆದರಿದ ಕೂದಲಿನ ಇಬ್ಬರು ಮನುಷ್ಯರು ಗೊಣ್ಣೆ ಸುರಿಸುತ್ತ ಕಕ್ಕಸ್ಸಿಗೆ ಕೂತಿರುವಂತೆ ಚಿತ್ರ ಬರೆದೆವು. ಆ ಚಿತ್ರಗಳಿಗೆ ಅಡಿಬರಹವನ್ನೂ ಕೊಟ್ಟೆವು. ಅವಳ ಚಿತ್ರದ ಕೆಳಗೆ 'ಇದು ನಿಮ್ಮಪ್ಪ' ಅನ್ನುವ ಅಡಿಬರಹ. ನನ್ನ ಚಿತ್ರದ ಕೆಳಗೆ 'ಇದು ನಿಮ್ಮಪ್ಪ' ಅನ್ನುವ ಅಡಿಬರಹ ಕೊಟ್ಟು, ಎರಡೂ ಚಿತ್ರಗಳನ್ನು ಪಾಸ್ ಮಾಡಿಕೊಂಡು, ಅದನ್ನು ಓದಿಕೊಂಡು ನಗುವಿನ ಹೊನಲಿನಲ್ಲಿ ತೇಲಾಡುತ್ತಿದ್ದೆವು. ಅಷ್ಟರಲ್ಲಿ ನಾವು ಕುಳಿತ್ತಿದ್ದ ಗಣಿತ ಕ್ಲಾಸ್ ರೂಮ್ ನಿಜಕ್ಕೂ ಒಂದು ಕಾಲ್ಪನಿಕ ಜಗತ್ತೇ ಆಗಿ ಬದಲಾಗಿತ್ತು. ನಾವು ಮೈಮರೆತಿದ್ದೆವು. ಜೊತೆಗೆ, ಯೋಗೇಶ್ ಮೇಷ್ಟ್ರ ಕಣ್ಣ ಕಠಿಣ ನೋಟಕ್ಕೂ ಬಲಿಯಾಗಿದ್ದೆವು. ಮೇಷ್ಟ್ರು ತಮ್ಮ ಆರು ಬೆರಳಲ್ಲೂ ಮುಷ್ಟಿ ಬಿಗಿ ಹಿಡಿದು ಬೆನ್ನಿನ ಮೇಲೆ ಗುದ್ದಿದಾಗಲೇ ನಮಗೆ ವಾಸ್ತವ ಜಗತ್ತಿನ ಅರಿವಾದದ್ದು.

ನಮ್ಮನ್ನು ಎಬ್ಬಿಸಿ ನಿಲ್ಲಿಸಿ, ನಮ್ಮಿಂದ ಆ ಪೇಪರ್‌ಗಳನ್ನು ಕಸಿದುಕೊಂಡರು. ಅದನ್ನು ಓದಿ ಅವರು ತುಂಬಾ ಬೇಸರಪಟ್ಟುಕೊಂಡರು. "ಹೀಗೆಲ್ಲ ಅಪ್ಪ-ಅಮ್ಮನ ಚಿತ್ರ ಬರೆದು ಅವರಿಗೆ ಅವಮಾನ ಮಾಡ್ತೀರಾ?" ಎನ್ನುತ್ತ, ನನ್ನ ಕಪಾಳಕ್ಕೆ ಚಟ್ಟೆಂದು ಬಿಗಿದೇಬಿಟ್ಟರು. ನಾನು ತೊಟ್ಟಿದ್ದ ಉದ್ದನೆಯ ಕಿವಿಯೋಲೆ ಹಾರಿಹೋಗಿ ಹಿಂದೆ ಬೆಂಚಿನ ಮೂಲೆಯಲ್ಲಿ ಬಿದ್ದು ಟಪ್ಪೆಂದು ಸದ್ದಾಯಿತು. ಐವತ್ತು-ಅರವತ್ತು ಮಕ್ಕಳಿದ್ದ ಆ ಕಂಬೈನ್ಡ್ ಕ್ಲಾಸ್ ರೂಮಲ್ಲಿ ಆ ಓಲೆಯನ್ನು ಎಲ್ಲೆಂದು ಹುಡುಕಲಿ? ಮೇಷ್ಟ್ರು ನಮ್ಮಿಬ್ಬರಿಗೂ ಕಟುವಾಗಿ ವಾರ್ನಿಂಗ್ ಕೊಟ್ಟು ಕೂರಿಸಿದರು. ಆದರೆ, ನನ್ನ ಜೀವವೆಲ್ಲ ಆ ಎಗರಿಹೋದ ಓಲೆಗೇ ಸುತ್ತಿಕೊಂಡಿತ್ತು. ಎಷ್ಟು ಹೊತ್ತಿಗೆ ಕ್ಲಾಸ್ ಮುಗಿಯುವುದೋ ಅಂತ ಕಾದು ಕೂತಿದ್ದೆ. ಕ್ಲಾಸ್ ಮುಗಿದ ನಂತರ ಎಷ್ಟು ಹುಡುಕಿದರೂ ಸಿಗದ ಆ ಓಲೆ ಇಂದಿಗೂ ಮೇಷ್ಟ್ರು ಹೊಡೆದ ಏಟಿಗಿಂತಲೂ ತೀಕ್ಷ್ಣವಾಗಿ ನವಿರಾಗಿ ಎದೆಯ ಮೂಲೆಯನ್ನು ಕುಟುಕುತ್ತಲೇ ಇದೆ.

ಮುಂದುವರಿಯುವುದು
ನಿಮಗೆ ಏನು ಅನ್ನಿಸ್ತು?
2 ವೋಟ್
eedina app