ಪಾಟಿ ಚೀಲ | ತಲೆಯ ಮೇಲೊಂದು ಅಣಬೆ ಮೊಳೆತು...

ಈ ವೆಜ್ ಕಟ್, ಮಶ್ರೂಮ್ ಕಟ್ ಮಾಡಿಕೊಳ್ಳದ ಮಕ್ಕಳನ್ನು ತೋರಿಸಿ, "ಅವನು ಎಷ್ಟು ಚೆನ್ನಾಗಿ ಕಾಣ್ತಾನೆ ನೋಡು..." ಎನ್ನುವಾಗ, ಆ ಸಾಂಪ್ರದಾಯಿಕ ಕಟ್‌ನವರೂ, ಉದ್ದ ಕೂದಲಿನವರೂ, ಚಿತ್ರ-ವಿಚಿತ್ರ ಹೇರ್ ಸ್ಟೈಲ್ ಎಂದು ನಾವು ಭಾವಿಸುವ ಮಕ್ಕಳೂ ಒಬ್ಬರಿಗೊಬ್ಬರು ನೋಡಿಕೊಂಡು ಮುಸಿಮುಸಿ ನಗುತ್ತಿದ್ದುದು ಯಾಕೆಂದು ಗೊತ್ತಾಗಿರಲಿಲ್ಲ. ಆದರೆ...

ಆ ಹುಡುಗನಿಗೆ ಫೋನ್ ಮಾಡಿ, "ನಿನ್ನ ಫೋಟೊ ಮತ್ತು ಸಹಿ ಬೇಕಾಗಿದೆ, ಶಾಲೆಗೆ ಬಾ," ಎಂದೆ. ದಸರಾ ರಜೆ ಶುರುವಾಗಿತ್ತಷ್ಟೆ. "ವಾಟ್ಸಾಪ್ ಮಾಡಿದರೆ ಆಗ್ಬಹುದಾ?" ಎಂದು ಕೇಳಿದ. "ಇಲ್ಲೇ ಮನೆಯಲ್ವಾ? ಬಂದುಹೋಗು," ಎಂದೆ. ಯಾಕೋ ಆ ಹುಡುಗ ಬರುವ ಮನಸ್ಸು ಮಾಡ್ತಿಲ್ಲ ಅನಿಸಿತು. ಪೋಷಕರಿಗೆ ತಿಳಿಸಿದೆ. ಮಾರನೆಯ ದಿನ ಆ ಹುಡುಗ ಶಾಲೆಗೆ ಬಂದ. ತಲೆಗೂದಲನ್ನು ಕಿವಿಯ ಮೇಲ್ಗಡೆ ನುಣ್ಣಗೆ ಬೋಳಿಸಿದ್ದ. ನೆತ್ತಿಯ ಮೇಲೆ ಮಾತ್ರ ಕೂದಲಿತ್ತು. ಅದೇ ಹುಡುಗ ಹೌದೋ ಅಲ್ವೋ ಎನಿಸಿತು.

Eedina App

ರಜೆ ಶುರುವಾಗುವ ಹದಿನೈದು ದಿನಗಳ ಹಿಂದೆಯೇ ಆತನಿಗೆ ತಲೆಕೂದಲು ತೆಗೆದುಕೊಳ್ಳಲು ಸೂಚಿಸಿದ್ದೆ. ಆತ ರವಿವಾರ ತೆಗೆಸುವೆ ಎನ್ನುತ್ತ ಎರಡು ರವಿವಾರ ಕಳೆದುಬಿಟ್ಟಿದ್ದ. ಕೇಳಿದರೆ ಏನೇನೋ ಕಾರಣ ಹೇಳ್ತಿದ್ದ. ಕಳೆದ ವಾರ ಜ್ವರ ಇತ್ತು ಎಂದಿದ್ದ. ಸಂಜೆಯ ಮೇಲೆ ತೆಗೆಸಲು ಮನೆಯಲ್ಲಿ ಒಪ್ಪುವುದಿಲ್ಲ ಅಂತಿದ್ದ. ಈಗ ಅವನ ಅವತಾರ ಕಂಡು, "ನೀನು ಮುಂಚೆಯೇ ಚಂದ ಕಾಣ್ತಿದ್ದೆ," ಎಂದಷ್ಟೇ ಹೇಳಿದೆ. ಆದರೆ, ಹಾಗೆ ಹೇಳುವಾಗ ಅವನು ಚಂದ ಕಾಣಬೇಕೆಂದೇ ಹಾಗೆ ಮಾಡಿಕೊಂಡಿರುವುದಲ್ಲವೇ ಎಂಬ ಯೋಚನೆ ಕೂಡ ಬಂತು. ಇದು ಅವನೊಬ್ಬನ ಕತೆಯಲ್ಲ. ಅನೇಕ ಮಕ್ಕಳು ತಲೆಗೂದಲು ತೆಗೆಸಲು ಹಿಂದೇಟು ಹಾಕುತ್ತಾರೆ.

ಸಾಂದರ್ಭಿಕ ಚಿತ್ರ

ಒಬ್ಬ ಹುಡುಗ ನನ್ನ ಬಳಿ ಬಂದು, "ಎರಡು ತಿಂಗಳಲ್ಲಿ ಮತ್ತಷ್ಟೇ ಬರುತ್ತದೆ ಸರ್," ಎಂದಿದ್ದ. "ಹೇರ್ ಕಟಿಂಗ್‌ಗೆ ಎಷ್ಟು ತಕೋತಾರೆ?" ಎಂದು ಕೇಳಿದೆ. "ನೂರು..." ಎಂದು ದೂರಿನ ಧ್ವನಿಯಲ್ಲಿ ಹೇಳಿದ್ದ. ನಾನು ಆಮೇಲೆ ಅಷ್ಟಾಗಿ ಒತ್ತಾಯಿಸುತ್ತಿರಲಿಲ್ಲ. ಆದರೂ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ನಿಂತಾಗ - ಶಾಲೆಗಳಲ್ಲಿ ಯಾರಾದರೊಬ್ಬರು - ಉದ್ದಕ್ಕೆ ಬೆಳೆದಿರೋ ತಲೆಕೂದಲು, ಬೇರೆ ಬಣ್ಣದ ರಿಬ್ಬನ್ ಧರಿಸಿರುವುದು, ಅಗತ್ಯಕ್ಕಿಂತ ಹೆಚ್ಚಿಗೆ ಕ್ಲಿಪ್ಪುಗಳನ್ನು ಹಾಕಿಕೊಂಡಿರುವುದು ಇತ್ಯಾದಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹೇಗೆ ಬೇಕೋ ಹಾಗಿರಲು ಬಿಟ್ಟರೆ ಶಾಲೆಯೆನ್ನುವುದು ಅಶಿಸ್ತಿನ ತಾಣವಾಗುತ್ತದೆ ಎಂಬ ಅಭಿಪ್ರಾಯವನ್ನು ಅಲ್ಲಗಳೆಯುವುದಾದರೂ ಹೇಗೆ? ಒಬ್ಬ ವೆಜ್ ಕಟ್ಟು, ಇನ್ನೊಬ್ಬ ಮಶ್ರೂಮ್ ಕಟ್ಟು, ಒಬ್ಬಾಕೆ ತಿಳಿಗುಲಾಬಿ ಲಿಪ್ ಸ್ಟಿಕ್ಕು, ಇನ್ನೊಬ್ಬಾಕೆಯದು ಕಡುಕೆಂಪು ತುಟಿಬಣ್ಣ, ನೂಡಲ್ಸ್ ಸ್ಟ್ರಿಪ್ಪು, ಹೈ ಹೀಲ್ಡು, ಹುಡುಗರಂತೂ ಮುಕ್ಕಾಲು ಪ್ಯಾಂಟು- ಅದೂ ಇನ್ನೇನು ಕಳಚಿಯೇಹೋಗುವ ಹಾಗಿರುವುದು.. ಹೀಗೆಲ್ಲ ಆದ್ರೆ? ಈ ಎಲ್ಲ ಪ್ರಶ್ನೆಗಳೂ ಎದುರಾಗುತ್ತವೆ. ಎದುರಾಗುವುದೇನು? ನನ್ನಲ್ಲೇ ಹುಟ್ಟಿಕೊಳ್ಳುತ್ತವೆ.

AV Eye Hospital ad

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಮುಟ್ಟು, ಮೈಲಿಗೆ ಮತ್ತು ಶಾಲಾ ಮಕ್ಕಳ ಮುಕ್ತ ಮಾತು

ಈ ಚರ್ಚೆಯನ್ನು ಮುಂದುವರಿಸುವ ಮೊದಲು ಇನ್ನೊಂದು ಘಟನೆಯನ್ನು ಉಲ್ಲೇಖಿಸುವೆ. ಒಂದು ಸಭೆಯಲ್ಲಿ ಭಾಗವಹಿಸಲು ಮೊನ್ನೆ ಬೆಂಗಳೂರಿಗೆ ಹೋದಾಗ ವಿಜ್ಞಾನ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಶಿಕ್ಷಕರಾದ ಚೇಗರೆಡ್ಡಿಯವರು ಒಂದು ಮೋಟಾರ್ ಬೈಕನ್ನು ತೋರಿಸಿ, "ಇದು ನಿಮಗೆ ಮೋಟಾರ್ ಬೈಕ್ ತರಾ ಕಾಣಿಸ್ತದಾ?" ಎಂದು ಕೇಳಿದರು. ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಜ್ಞಾನ ರಮ್ಯಕತೆಗಳ ಜೊತೆಯಲ್ಲಿ ಮುಂದಿನ ನೂರಾರು ವರ್ಷಗಳ ನಂತರ ಬರಲಿರುವ ವಾಹನಗಳನ್ನು ಕಲಾವಿದರು ತಮ್ಮದೇ ಕಲ್ಪನೆಯಲ್ಲಿ ಚಿತ್ರಿಸಿರುತ್ತಾರಲ್ಲ, ಹಾಗಿತ್ತು. ಹೆಡ್ ಲೈಟು ಮತ್ತು ಪೆಟ್ರೋಲ್ ಟ್ಯಾಂಕು ಎಲ್ಲಿವೆ ಎಂದು ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕಾಯ್ತು. "ನನಗಿದು ಒಂಚೂರೂ ಇಷ್ಟವಾಗುವುದಿಲ್ಲ," ಎಂದೆ. ಅದಕ್ಕವರು "ನಿಮಗೆ ಯಾವ ಥರದ್ದು ಇಷ್ಟವಾಗುತ್ತದೆ?" ಎಂದು ಕೇಳಿದರು. " ನನಗೆ ಯಮಹಾ ಆರ್.ಎಕ್ಸ್ 100 ಇತ್ತಲ್ಲ, ಅದು ಇಷ್ಟವಾಗುತ್ತದೆ," ಎಂದೆ. "ಯಾಕೆ?" ಎಂದು ಕೇಳಿದರು. ಯೋಚಿಸಬೇಕಾಯ್ತು. ಯಾಕಿರಬಹುದು...? ನನ್ನ ಕಾಲೇಜು ದಿನಗಳಲ್ಲಿ ಬಹುಶಃ ಎಲ್ಲರಿಗೂ ಅದು ಇಷ್ಟವಾಗುತಿತ್ತು. ಆಗಿನ ಹಿರಿಯರು ಬಜಾಜ್ ಸ್ಕೂಟರನ್ನು ಕೊಳ್ಳುತ್ತಿದ್ದರು. ನನ್ನ ತಂದೆ ರಾಜದೂತ್ ಬೈಕನ್ನು ಕೊಂಡಾಗ ನನಗೆ ನಿರಾಸೆಯಾಗಿತ್ತು. ನನಗೆ ಈಗಿನ ಸ್ಪೋರ್ಟ್ಸ್ ಬೈಕುಗಳು ವಿಚಿತ್ರ ವಿನ್ಯಾಸ ಎನಿಸಿದಂತೆ ಅವರಿಗೆಲ್ಲ ಯಮಹಾ ಬೈಕು ನೋಡಿದಾಗ ಎನ್ನಿಸಿರಬಹುದು. ಶಿಸ್ತಿನ ವಿಚಾರದಲ್ಲಿ ನಮಗೆ ಇರುವ ನಂಬಿಕೆಗಳನ್ನು ವಿಮರ್ಶೆಗೊಳಪಡಿಸಬೇಕು ಎನಿಸಿತು.

ನಾನು ಇಲ್ಲಿ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತಿರುವೆ. ಈ ಘಟನೆಗಳನ್ನು ಸರಿ-ತಪ್ಪುಗಳ ಬೈನರಿಯಲ್ಲಿ ನೋಡಲು ಹೋಗುವುದಿಲ್ಲ. ಈ ಘಟನೆಗಳಿಗೆ ದೊರೆತ ಪ್ರತಿಕ್ರಿಯೆಗಳ ಬೆಳಕಿನಲ್ಲಿ  ನನ್ನೊಳಗನ್ನು ನೋಡಿಕೊಳ್ಳಬಹುದೆಂಬ ಆಸೆಯಷ್ಟೆ.

ಸಾಂದರ್ಭಿಕ ಚಿತ್ರ

2015ರಲ್ಲಿ ಮಹಾರಾಷ್ಟ್ರದ ಶಾಲೆಯೊಂದರ ಮುಖ್ಯ ಶಿಕ್ಷಕರು ವಿದ್ಯಾರ್ಥಿಯ ತಲೆಗೂದಲು ಉದ್ದವಾಯ್ತು ಎಂದು ತಾನೇ ಕ್ಷೌರಿಕರನ್ನು ಕರೆಸಿ ಕೂದಲು ತೆಗೆಸಿದರು. ಈ ಪ್ರಕರಣವನ್ನು ಪರಾಂಬರಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಶಾಲೆಯ ಶಿಸ್ತು ಮಗುವಿನ ಇಚ್ಛೆ ಮತ್ತು ಒಪ್ಪಿಗೆಯನ್ನು ಮೀರಬಾರದು ಎಂದು ತಿಳಿಸಿತು. ತೀರಾ ಇತ್ತೀಚೆಗೆ ಉತ್ತರ ಪ್ರದೇಶದ ಹಾಪುರ ಎಂಬಲ್ಲಿನ ಶಾಲೆಯ ಪ್ರಿನ್ಸಿಪಾಲರು ಎಂಬತ್ನಾಲ್ಕು ವಿದ್ಯಾರ್ಥಿಗಳ ತಲೆಗೂದಲನ್ನು ಪ್ರಾರ್ಥನಾ ಸಭೆಯಲ್ಲಿ ಕತ್ತರಿಸಿದರು. ಅದರ ವಿಡಿಯೊವನ್ನೂ ಮಾಡಿದ್ದರು. ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಜನರು ವ್ಯಾಪಕ ಆಕ್ರೋಶ ಪಡಿಸಿದರು. ಆದರೆ, ಆ ಶಾಲೆಯ ಎಲ್ಲ ಶಿಕ್ಷಕರೂ ಪ್ರಿನ್ಸಿಪಾಲರ ಕ್ರಮವನ್ನು ಸಮರ್ಥಿಸಿಕೊಂಡರು. ಆ ಎಂಬತ್ನಾಲ್ಕು ವಿದ್ಯಾರ್ಥಿಗಳ ಪಾಲಕರಲ್ಲಿ ಹೆಚ್ಚಿನವರು ಪ್ರಿನ್ಸಿಪಾಲರ ಕ್ರಮದ ಬಗ್ಗೆ ತಮ್ಮ ಸಮ್ಮತಿ ಸೂಚಿಸಿದರು. ಹದಿನೈದು-ಹದಿನಾರು ವರ್ಷದ ವಿದ್ಯಾರ್ಥಿಗಳಿಗೆ ತನ್ನ ತಲೆಗೂದಲು ಹೇಗಿರಬೇಕೆಂದು ನಿರ್ಧರಿಸುವಷ್ಟು ಸ್ವಾತಂತ್ರ್ಯ ಮತ್ತು ವಿವೇಕ ಇರಲಾರದೇ ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಇದೇ ಕಾಲಕ್ಕೆ ಅನೇಕರು ಎತ್ತಿದರು. ಇದನ್ನೆಲ್ಲ ಓದಿದ ನನಗೆ, ಆ ಪ್ರಿನ್ಸಿಪಾಲರು ಬೊಕ್ಕ ತಲೆಯವರಾಗಿರಬಹುದೇ ಎಂಬ ಸಂಶಯ ಬಂದು ಗೂಗಲ್ ಮಾಡತೊಡಗಿದೆ...

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಆಗ ಒಂದು ಪದ್ಯವನ್ನೂ ಬಾಯಿಪಾಠ ಮಾಡದಿದ್ದವ ಈಗ ಪ್ರಸಂಗ ಪುಸ್ತಕ ನೋಡದೆ ಭಾಗವತಿಕೆ ಮಾಡುತ್ತಿದ್ದ!

ಈ ವೆಜ್ ಕಟ್, ಮಶ್ರೂಮ್ ಕಟ್ ಮಾಡಿಕೊಳ್ಳದ ಮಕ್ಕಳನ್ನು ತೋರಿಸಿ, "ಅವನು ಎಷ್ಟು ಚೆನ್ನಾಗಿ ಕಾಣಿಸುತ್ತಾನೆ, ನೋಡು..." ಎನ್ನುವಾಗ, ಆ ಸಾಂಪ್ರದಾಯಿಕ ಕಟ್‌ನವರೂ, ಉದ್ದುದ್ದ ಕೂದಲಿನವರೂ, ಚಿತ್ರ-ವಿಚಿತ್ರ ಹೇರ್ ಸ್ಟೈಲ್ ಎಂದು ನಾವು ಭಾವಿಸುವ ಮಕ್ಕಳೂ ಒಬ್ಬರಿಗೊಬ್ಬರು ನೋಡಿಕೊಂಡು ಮುಸಿಮುಸಿ ನಗುತ್ತಿದ್ದುದು ಯಾಕೆಂದು ಗೊತ್ತಾಗೇ ಇರಲಿಲ್ಲ. ಹತ್ತನೇ ತರಗತಿಯ ಶಾಲಾ ದಿನಗಳು ಮುಗಿದು, ಪರೀಕ್ಷಾ ಸಿದ್ಧತೆಗಾಗಿ ರಜೆ ನೀಡುವ ಹಿಂದಿನ ದಿನ ಬೀಳ್ಕೊಡುಗೆ ಸಭೆ ನಡೆಸಿ, ಗ್ರೂಪ್ ಫೋಟೊ ತೆಗೆಸುವಾಗ ನೋಡಿದರೆ, 'ಎಷ್ಟು ಚೆನ್ನಾಗಿ ಕಾಣ್ತಿದ್ದಾರೆ ನೋಡು' ಎಂದು ಬೆರಳು ತೋರಿಸ್ತಿದ್ದೆವಲ್ಲ ಆ ಮಕ್ಕಳೂ ಎಲ್ಲರ ಜೊತೆ ಮಶ್ರೂಮ್ ಕಟ್ ಮಾಡಿಸಿಕೊಂಡು ಬಂದಿದ್ದರು!

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
3 ವೋಟ್
eedina app