ಪಾಟಿ ಚೀಲ | ಪರೀಕ್ಷೆಯ ಮೌಲ್ಯಮಾಪನ ನಡೆಸಿದ ಬಚ್ಚಲುಮನೆ ಪ್ರಕರಣ

School Children

ಮಾಹಿತಿಯನ್ನೇ ಜ್ಞಾನವೆಂದು ತಪ್ಪಾಗಿ ಭಾವಿಸುವುದರಿಂದ ಬಾಯಿಪಾಠವೇ ಪರೀಕ್ಷೆ ಆಗುತ್ತಿದೆ. ಇಂತಹ ಪರೀಕ್ಷೆಗಳಿಗಾಗಿ ಉರು ಹೊಡೆಯುತ್ತ ವಿದ್ಯಾರ್ಥಿ ಬದುಕಿನ ಅತ್ಯಂತ ಚೈತನ್ಯಶೀಲ ವರ್ಷಗಳನ್ನು ವ್ಯರ್ಥ ಮಾಡಲಾಗುತ್ತಿದೆ. ಎಲ್ಲಿಯವರೆಗೆ ಪರೀಕ್ಷೆಗಳೆಂದರೆ ಮಾಹಿತಿಯನ್ನು ಮರುಸೆಳೆಯುವುದಷ್ಟೇ ಆಗಿರುತ್ತದೋ ಅಲ್ಲಿವರೆಗೂ ಪಠ್ಯಕ್ರಮ ಕಲಿಕೆ ವ್ಯರ್ಥವಾಗುತ್ತದೆ

ಸಹೋದ್ಯೋಗಿಯೊಬ್ಬರು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದುತ್ತಿದ್ದರು. ಮೌಲ್ಯಮಾಪನವು ವಿದ್ಯಾರ್ಥಿಯನ್ನು ಅರ್ಥ ಮಾಡಿಕೊಳ್ಳುವ ಮತ್ತೊಂದು ಅವಕಾಶ. ಕಲಿಕೆಯ ಪ್ರಕ್ರಿಯೆಯ ಕುರಿತು ಅರ್ಥಪೂರ್ಣವಾದ ಹಿಮ್ಮಾಹಿತಿಯನ್ನು ಈ ಕ್ರಿಯೆ ಒದಗಿಸುತ್ತದೆ. ಲಿಖಿತ ಪರೀಕ್ಷೆಯೊಂದೇ ಮೌಲ್ಯಮಾಪನವನ್ನು ನಡೆಸಲಿರುವ ತಂತ್ರವಲ್ಲ ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ ನೆಲಗಟ್ಟು ಬಲವಾಗಿ ಪ್ರತಿಪಾದಿಸುತ್ತದೆ. ಅದರ ಪ್ರಕಾರ, ಮೌಖಿಕ ಪರೀಕ್ಷೆ, ಗುಂಪು ಕಾರ್ಯದ ಅವಲೋಕನ, ತೆರೆದ ಪುಸ್ತಕ ಪರೀಕ್ಷೆ... ಹೀಗೆ, ಬೇರೆ-ಬೇರೆ ಮಾರ್ಗಗಳನ್ನು ರೂಪಿಸಬೇಕು. ವಿದ್ಯಾರ್ಥಿಯ ಸ್ಮರಣೆಯನ್ನು ಪರೀಕ್ಷಿಸುವ ಪದ್ಧತಿಗಳನ್ನು ಮೀರಿ ವ್ಯಾಖ್ಯಾನ, ವಿಶ್ಲೇಷಣೆ, ಸಮಸ್ಯಾ ಪರಿಹಾರದ ಕೌಶಲಗಳನ್ನೊಳಗೊಂಡ ಪ್ರಶ್ನೆಪತ್ರಿಕೆಗಳನ್ನು ರೂಪಿಸಬೇಕು. ಲಿಖಿತ ಪರೀಕ್ಷೆ ಒಂದು ತಂತ್ರವಷ್ಟೇ. ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಮಗ್ಗಿ ಕೋಷ್ಟಕ, ಆವರ್ತಕ ಕೋಷ್ಟಕ, ಸೂತ್ರಗಳ ಪಟ್ಟಿ, ಭೂಪಟ, ಐತಿಹಾಸಿಕ ಮಹತ್ವದ ದಿನಗಳು ಇತ್ಯಾದಿಗಳನ್ನು ಲಗತ್ತಿಸಬಹುದು. ವಿದ್ಯಾರ್ಥಿಯ ಕಲಿಕೆಯ ಸ್ವರೂಪ ಬದಲಾದಂತೆ ಮೌಲ್ಯಮಾಪನದ ಸ್ವರೂಪವೂ ಬದಲಾಗಬೇಕಾಗುತ್ತದೆ. ಪ್ರತಿ ವಿದ್ಯಾರ್ಥಿಯೂ ಒಂದೇ ಬಗೆಯ ಸಾಮರ್ಥ್ಯವನ್ನು ಸಾಧಿಸಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ನಗರ-ಹಳ್ಳಿಗಳ ವಿದ್ಯಾರ್ಥಿಗಳು, ಭಿನ್ನ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳ ನಡುವೆ ಕಂದರವಿರುವುದು ವಾಸ್ತವ. ಈ ವಾಸ್ತವವನ್ನು ಪರಿಗಣಿಸಿದಾಗ, ಎಲ್ಲರಿಗೂ ಒಂದೇ ಪರೀಕ್ಷೆ ಎಂಬ ಸಾಂಪ್ರದಾಯಿಕ ಪರೀಕ್ಷಾ ಕ್ರಮ ಹಿಂಚಲನೆ ಉಂಟುಮಾಡಬಲ್ಲದು. ಆದರೆ, ಪಠ್ಯಕ್ರಮ ನೆಲಗಟ್ಟು ಇದನ್ನೆಲ್ಲ ಹೇಳಿ ಹತ್ತಿರ-ಹತ್ತಿರ ಎರಡು ದಶಕಗಳಾದರೂ ಪರೀಕ್ಷಾ ವಿಧಾನದಲ್ಲಿ ಅಂತಹ ಬದಲಾವಣೆ ಆಗಲೇ ಇಲ್ಲ. ಸ್ಮರಣೆಯನ್ನು ಆಧರಿಸಿದ ಅದೇ ಲಿಖಿತ ಪರೀಕ್ಷೆಗಳದ್ದೇ ಕಾರುಬಾರು. ಉತ್ತರ ಬರೆಯುವ ಮಕ್ಕಳಿಗಷ್ಟೇ ಅಲ್ಲ, ಉತ್ತರ ಪತ್ರಿಕೆ ತಿದ್ದುವ ಶಿಕ್ಷಕರಿಗೂ ಈ ಪ್ರಕ್ರಿಯೆ ನೀರಸ.

Eedina App

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಜೀವಪ್ರೀತಿಯ ಕೊಡೆಯೊಂದು ಸದಾ ನೆರಳಾಗಲಿ

ಆದರೆ, ಉತ್ತರ ಪತ್ರಿಕೆಯನ್ನು ತಿದ್ದುತ್ತಿದ್ದ ನನ್ನ ಸಹೋದ್ಯೋಗಿ ತಾವೊಬ್ಬರೇ ನಗುತ್ತಿದ್ದರು. ಈ ಕೆಲಸ ಉಂಟುಮಾಡುವ ಏಕತಾನವನ್ನು ಕಡಿಮೆ ಮಾಡಿ, ವಾತಾವರಣವನ್ನು ಉಲ್ಲಸಿತಗೊಳಿಸಲು ಸ್ಟಾಫ್ ರೂಮಿನಲ್ಲಿ ಕುಳಿತು ಉತ್ತರ ಪತ್ರಿಕೆ ತಿದ್ದುವಾಗ ಒಬ್ಬರಿಗೊಬ್ಬರು ಕಾಲೆಳೆಯುತ್ತಲೋ, ಜೋಕುಗಳನ್ನು ಹಂಚಿಕೊಳ್ಳುತ್ತಲೋ ಇರುವುದು ಸಾಮಾನ್ಯ. ಕೆಲವು ಉತ್ತರ ಪತ್ರಿಕೆಗಳ ಆಯ್ದ ಭಾಗಗಳನ್ನು ಉದ್ಧರಿಸಿಯೂ ಮನರಂಜನೆ ಪಡೆದುಕೊಳ್ಳುವುದಿದೆ. ಮಕ್ಕಳ ಉತ್ತರ ಪತ್ರಿಕೆಗಳನ್ನು ನೋಡಿ ಆಡಿಕೊಳ್ಳುವಾಗ, ಇದು ನಮ್ಮನ್ನೇ ಅಣಕಿಸುವಂತದ್ದು ಅಂತ ಅನ್ನಿಸದೆ ಇರಲು ಕಲಿಕೆಯ ಸಂಪೂರ್ಣ ಜವಾಬ್ದಾರಿಗಳನ್ನು ಮಗುವಿಗೇ ವರ್ಗಾಯಿಸಿರುವುದು ಕಾರಣವಿರಬಹುದು. ಪ್ರಶ್ನೆಪತ್ರಿಕೆಯನ್ನೇ ಮೇಲಿನಿಂದ ಕೆಳಗಿನವರೆಗೆ ಎರಡು-ಮೂರು ಬಾರಿ ಬರೆದಿಟ್ಟು ಬರುವವರಿದ್ದಾರೆ. ತೀರಾ ತರಲೆ ಉತ್ತರಗಳನ್ನು ನೀಡುವವರಿದ್ದಾರೆ. ಇಲಿಗಿಂತಲೂ ಚಿಕ್ಕ ಗಾತ್ರದ ಸ್ತನಿ ಯಾವುದು ಎಂದು ಪ್ರಶ್ನೆ ಇದ್ದರೆ, 'ಇಲಿಯ ಮರಿ' ಎಂದು ಉತ್ತರಿಸುವವರಿದ್ದಾರೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಬಲ ಯಾವುದು ಎಂಬ ವಿಜ್ಞಾನದ ಪ್ರಶ್ನೆಗೆ, 'ಪ್ರೀತಿ' ಎಂದು ಉತ್ತರಿಸಿ ವಿಜ್ಞಾನವನ್ನು ತತ್ವಜ್ಞಾನವಾಗಿಸುವವರಿದ್ದಾರೆ. ಇಂಥದ್ದೆಲ್ಲ ನಗು ತರಿಸುತ್ತದೆ. ಉತ್ತರ ಪತ್ರಿಕೆಗಳನ್ನು ತಿದ್ದುತ್ತಿದ್ದ ಸಹೋದ್ಯೋಗಿ ಒಬ್ಬರೇ ನಗಲಾರಂಭಿಸಿದಾಗ ನಾವೆಲ್ಲ ಅವರತ್ತ ತಲೆ ಎತ್ತಿ ನೋಡಿದೆವು. ಅವರು ಮಾತಿಗೆ ಹೊರಳುವ ಲಕ್ಷಣಗಳು ಕಾಣಿಸಲಿಲ್ಲ. ನಗುತ್ತಲೇ ಇದ್ದರು. ಎರಡು-ಮೂರು ನಿಮಿಷಗಳ ನಂತರ ಸಾವರಿಸಿಕೊಂಡು ನಗುವಿನ ಕಾರಣಗಳನ್ನು ಬಿಚ್ಚಿಟ್ಟರು.

AV Eye Hospital ad
School Children 3
ಸಾಂದರ್ಭಿಕ ಚಿತ್ರ

ಎಂಟನೆಯ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ, ಕುಟುಂಬ ಮತ್ತು ಇತರೆ ಸಾಮಾಜಿಕ ಸಂಸ್ಥೆಗಳ ಕುರಿತು ಒಂದು ಅಧ್ಯಾಯವಿತ್ತು. ಪರೀಕ್ಷೆಯಲ್ಲಿ ಆ ಅಧ್ಯಾಯದ ಮೇಲೆ ಅವರು ಒಂದೆರಡು ಪ್ರಶ್ನೆಗಳನ್ನು ಕೇಳಿದ್ದರು. 'ಅವಿಭಕ್ತ ಕುಟುಂಬದಲ್ಲಿ ಉಂಟಾಗುವ ಸಮಸ್ಯೆಗಳು ಯಾವುವು' ಎಂಬುದು ಅವುಗಳಲ್ಲೊಂದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ಪುಸ್ತಕದಲ್ಲಿ ನಾಲ್ಕು ಅಂಶಗಳಿವೆ ಎಂದು ಭಾವಿಸಿ, ಆ ಎಲ್ಲ ಅಂಶಗಳನ್ನು ಪುಸ್ತಕದಲ್ಲಿದ್ದ ಹಾಗೆ, ಅದೇ ವಾಕ್ಯರಚನೆಯಲ್ಲಿ ಮತ್ತು ಅದೇ ಅನುಕ್ರಮಣಿಕೆಯಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪೂರ್ತಿ ಅಂಕ ಮತ್ತು ಶಹಬ್ಬಾಸ್ ದೊರೆಯುತ್ತದೆ. ಗುಡ್ ಎಂಬ ಒಕ್ಕಣೆ, ಸ್ಟಾರ್ ಮಾರ್ಕುಗಳು ಎಲ್ಲವೂ ಉಂಟು. ಅದೇ ಉತ್ತರವನ್ನು ತನ್ನದೇ ವಾಕ್ಯದಲ್ಲಿ ಬರೆದರೆ ಪೂರ್ತಿ ಅಂಕ ಸಿಗುವ ಖಾತರಿ ಇಲ್ಲ. 'ಜಾಣʼ ವಿದ್ಯಾರ್ಥಿಗಳು ಸ್ವತಃ ಯೋಚಿಸಲಾರರು ಎನ್ನುವಂತಿದೆ ನಮ್ಮ ಮೌಲ್ಯಮಾಪನ. ಪುಸ್ತಕದಲ್ಲಿ ನೀಡಿದ ನಾಲ್ಕಂಶಗಳಲ್ಲಿ ಎರಡೆರಡನ್ನು ಜೋಡಿಸಿ ಎರಡು ವಾಕ್ಯದಲ್ಲಿ ಬರೆದರೂ ಪೂರ್ತಿ ಅಂಕಗಳು ಸಿಗುವ ಸಾಧ್ಯತೆ ಕಡಿಮೆ. ಉತ್ತರ ತುಂಬಾ ಸರಳವಾಗಿದ್ದರೂ ನಿರ್ದಿಷ್ಟ ವಾಕ್ಯ ವಿನ್ಯಾಸದಲ್ಲಿ ಅದನ್ನು ಬರೆಯಬೇಕಾದ ಕಾರಣಕ್ಕಾಗೇ ಅನೇಕ ವಿದ್ಯಾರ್ಥಿಗಳು ಕಷ್ಟಪಡುತ್ತಾರೆ. ಅವಿಭಕ್ತ ಕುಟುಂಬದ ಕುರಿತಾದ ಪ್ರಾಥಮಿಕ ಅನುಭವ ಇಲ್ಲದಿರುವುದರಿಂದ ಅವರಿಗೆ ಇವೆಲ್ಲವೂ ಅರ್ಥಹೀನ ಪದಪುಂಜಗಳಷ್ಟೇ.

ನನ್ನ ಸಹೋದ್ಯೋಗಿಯ ನಗುವಿಗೆ ಕಾರಣವಾದ ಉತ್ತರಕ್ಕೆ ಬರೋಣ. ಅವಿಭಕ್ತ ಕುಟುಂಬದ ಸಮಸ್ಯೆಗಳ ಕುರಿತಾದ ಆ ಪ್ರಶ್ನೆಗೆ ಉತ್ತರಿಸುತ್ತ, "ಅವಿಭಕ್ತ ಕುಟುಂಬದಲ್ಲಿ ಬಚ್ಚಲುಮನೆ, ಕಕ್ಕಸು ಕೋಣೆಗಳನ್ನು ಬಳಸಲು ಪೈಪೋಟಿ ಇರುತ್ತದೆ. ಇದರಿಂದ ಶಾಲೆಗೆ ಬರಲು ದಿನವೂ ತಡವಾಗುತ್ತದೆ,” ಎಂದು ಒಬ್ಬ ವಿದ್ಯಾರ್ಥಿ ಬರೆದಿದ್ದ. ನನಗೆ ಸಹೋದ್ಯೋಗಿಯ ನಗು ಅರ್ಥವಾಯ್ತು. ಆದರೆ, ಆ ಮಗುವಿಗೆ ಎಷ್ಟು ಅಂಕ ಕೊಡುತ್ತಾರೆಂಬ ಕುತೂಹಲವಿತ್ತು. ಅವರನ್ನು ವಿಚಾರಿಸಿದೆ. "ಆತನ ಉತ್ತರ ಮಾದರಿ ಉತ್ತರಕ್ಕೆ ಸ್ವಲ್ಪವೂ ಹೋಲುವುದಿಲ್ಲ,” ಎಂದರು. ಬಹುಶಃ, ಆ ವಿದ್ಯಾರ್ಥಿಯನ್ನು ಹೊರತುಪಡಿಸಿರೆ ಇನ್ಯಾವ ವಿದ್ಯಾರ್ಥಿಯೂ ಅವಿಭಕ್ತ ಕುಟುಂಬದಲ್ಲಿ ವಾಸಿಸುವರಾಗಿಲ್ಲವೆನಿಸುತ್ತದೆ. ಉತ್ತರ ಪತ್ರಿಕೆ ತಿದ್ದುತ್ತಿದ್ದ ಸಹೋದ್ಯೋಗಿಯೂ ಅವಿಭಕ್ತ ಕುಟುಂಬದಿಂದ ಬಂದವರಾಗಿರಲಿಲ್ಲ. ಆ ಪಠ್ಯಪುಸ್ತಕ ರಚಿಸಿದವರಲ್ಲಿ ಆ ಅನುಭವ ಇದೆಯೋ ಇಲ್ಲವೋ! ಆದರೆ, ಆ ಮಗುವಿನ ಮಟ್ಟಿಗೆ ಅವಿಭಕ್ತ ಕುಟುಂಬವು ನಿಜದ ಅನುಭವ.

School Children 2
ಸಾಂದರ್ಭಿಕ ಚಿತ್ರ

ಇದು ಸಮಾಜ ವಿಜ್ಞಾನದ ಉದಾಹರಣೆ. ವಿಜ್ಞಾನ, ಗಣಿತ, ಭಾಷೆಗಳಲ್ಲೂ ಇಂಥದ್ದು ನಡೆಯುತ್ತವೆ. ಮಾಹಿತಿಯನ್ನೇ ಜ್ಞಾನವೆಂದು ತಪ್ಪಾಗಿ ಭಾವಿಸುವುದರಿಂದ ಬಾಯಿಪಾಠವೇ ಪರೀಕ್ಷೆಯಾಗುತ್ತಿದೆ. ಇಂತಹ ಪರೀಕ್ಷೆಗಳಿಗಾಗಿ ಉರು ಹೊಡೆಯುತ್ತ ವಿದ್ಯಾರ್ಥಿ ಬದುಕಿನ ಅತ್ಯಂತ ಚೈತನ್ಯಶೀಲ ವರ್ಷಗಳನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಪಠ್ಯಕ್ರಮ ಚೌಕಟ್ಟು ಅಭಿಪ್ರಾಯಪಡುತ್ತಿದೆ. ಎಲ್ಲಿಯವರೆಗೆ ಪರೀಕ್ಷೆಗಳೆಂದರೆ ಮಾಹಿತಿಯನ್ನು ಮರುಸೆಳೆಯುವುದಷ್ಟೇ ಆಗಿರುತ್ತದೋ ಅಲ್ಲಿಯವರೆಗೂ ಪಠ್ಯಕ್ರಮವನ್ನು ಕಲಿಕೆಯತ್ತ ನಿರ್ದೇಶಿಸುವುದು ವ್ಯರ್ಥವಾಗುತ್ತದೆ ಎಂದು ಪಠ್ಯಕ್ರಮ ನೆಲಗಟ್ಟು (3.11.5) ಹೇಳುತ್ತದೆ.

ಕಲಿಯುವವರು ಮತ್ತು ಶಿಕ್ಷಕರು ತಮ್ಮ-ತಮ್ಮ ಗುರಿಯನ್ನು ಸಾಧಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದ್ದಾರೆ ಎಂಬ ಕುರಿತು ಅರ್ಥಪೂರ್ಣ ಹಿಮ್ಮಾಹಿತಿಯನ್ನು ಒದಗಿಸುವುದೇ ಮೌಲ್ಯಮಾಪನದ ಉದ್ದೇಶ. ಆದುದರಿಂದಲೇ, ಶಾಲೆಯಿಂದ ಹೊರಹೋದ ನಂತರ ಎದುರಾಗುವ ಬದುಕಿನ ಪರೀಕ್ಷೆಗಳು - ಮೌಲ್ಯಮಾಪನವು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ 'ಫೇಲ್' ಆಗಿದೆ ಎಂದು ಸಾರಿ ಹೇಳುತ್ತವೆ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app