ಅಪ್ರಮೇಯ | ತಪ್ಪು ತಿಳ್ಕೊಳಲ್ಲಾ ಅಂದ್ರೆ ನಿಮ್ಮನ್ನ ಒಂದು ಮಾತು ಕೇಳ್ಲಾ?

gabriella clare marino photo

ಬಹಳಷ್ಟು ಮೂರ್‍ಖರಿಗೆ ಗೊತ್ತಿಲ್ಲ - ಲೈಂಗಿಕ ಸುಕ ಅನ್ನೋದು ದೇಹದ ಕೆಲವು ಬಾಗಗಳಲ್ಲಿ ಮಾತ್ರ ಸಿಗೋದಲ್ಲ ಅಂತ. ಲೈಂಗಿಕ ಸುಕ ಅನ್ನೋದನ್ನ ನಾನು ತೀವ್ರವಾಗಿ ಹಾಡಿದಾಗ ಕೂಡ ಅನುಬವಿಸಿದ್ದೀನಿ. ಲೈಂಗಿಕತೆಯ ವ್ಯಾಪ್ತಿ ಮನಸ್ಸು, ತಲೆ, ಚರ್ಮ, ಹ್ರುದಯ, ಕಲ್ಪನೆ, ಸ್ನೇಹ, ಸೌಹಾರ್ದ, ಬಾವನೆ, ಮುಖಭಾವ, ಗನತೆ, ಗೌರವ, ಇನ್ನೂ ಏನೇನೆಲ್ಲ ಒಳಗೊಂಡಿದೆ

ನೀವು ತಪ್ಪು ತಿಳ್ಕೊಳಲ್ಲಾ ಅಂದ್ರೆ ನಿಮ್ಮನ್ನ ಒಂದು ಮಾತು ಕೇಳ್ಲಾ? - ಈ ಮಾತು ಕೇಳಿದ್ ಕೂಡ್ಲೇ ನಂಗೆ ನೆತ್ತೀಲಿ ಬೆಂಕಿ ಹತ್ದಂಗ್ ಆಗುತ್ತೆ. ಅದಕ್ಕೆ ಕಾರಣವೂ ಇದೆ.

ಜನಸಾಮಾನ್ಯರಿಂದ ಹಿಡಿದು ದೊಡ್ಡ-ದೊಡ್ಡ ಜ್ನಾನಿಗಳವರೆಗೆ ಯಾರೇ ಆಗ್ಲಿ, ಲಿಂಗತ್ವ ಅಲ್ಪಸಂಖ್ಯಾತರ ವಿಷಯ ಅಂದ ತಕ್ಶಣ ಮೂರು ಬಗೆಯ ಪ್ರತಿಕ್ರಿಯೆ ಇರುತ್ತೆ.

ಒಂದು: ಸಂಪೂರ್ಣ ಮೌನ... ಒಂದು ಸಣ್ಣ ನಗು. ಆಮೇಲೆ, ನಮ್ಮಂತವ್ರು ಇರುವ ವಿಶಯ ಆಗ್ಲೀ, ನಮ್ಮ ಉಸಿರೂ ಬೇರೆ-ಬೇರೆ ಹೋರಾಟದಲ್ಲಿ ಇದೆ ಅನ್ನೋದ್ರಿಂದ ಹಿಡಿದು ಎಲ್ಲಕ್ಕೂ ಮೌನ ಒಂದೇ ಉತ್ರ.

ಎರಡು: ಕುತೂಹಲ... ತುಂಬಾ ಸಹಜವಾದ ಕುತೂಹಲದಿಂದ ಹಿಡಿದು ತುಂಬಾ ತುರಿಕೆಯಂತ ಕುತೂಹಲ! ಲಿಂಗತ್ವ ಅಲ್ಪಸಂಕ್ಯಾತರೆಲ್ಲರೂ ಅನುಬವಿಸಿರುವ ದೌರ್ಜನ್ಯ ಇದು.

ಮೂರು: ಹೃದಯವಂತಿಕೆ... ಮುಕ್ತ ಹ್ರುದಯದಿಂದ ಒಪ್ಪಿಕೊಂಡು, ಒಂದ್ ನಿಮಿಶವೂ ಆ ಕಡೆ ಈ ಕಡೆ ಯೋಚನೆ ಮಾಡದೆ, ನೋಡಿದ ತಕ್ಶಣ ಅಪ್ಪಿ, ಅವರ ಆ ನಗುವಿನ ವ್ಯಾಪ್ತಿಗೆ ನಮ್ಮನ್ನೂ ಕರೆದುಕೊಂಡು, ಮನಸ್ಸಿನೊಳಗೆ ನೆಲೆಸುತ್ತಾರೆ.

Image
mohammad alizade Photo

ಹೀಗೆಯೇ ಪರಿಚಯ ಆದ ಪ್ರೋಗ್ರೆಸಿವ್ ಯುವ ಹೋರಾಟಗಾರರು (ಒಂದು ಸರ್ತಿ ಮನೆಗೆ ಬಂದಿದ್ರು), ಮೊನ್ನೆ ಫೋನ್ ಮಾಡಿ, "ಹೇಗಿದ್ದೀರಿ? ಏನ್ ಮಾಡ್ತಾ ಇದ್ದೀರಿ?" ಅಂತ ಕೇಳೋ ನೆವದಲ್ಲಿ ಶುರು ಮಾಡಿದ್ರು: “ನಿಮಗ ಮನೆಗೆ ನಿಮ್ಮವ್ರೆಲ್ಲಾ ಬಂದಾಗ ನಮ್ಮನ್ನೂ ಕರೀರಿ.” ಅದಕ್ಕೆ ನಾನು, "ನಮ್ಮವ್ರು ಅಂದ್ರೆ... ನೀವೂ ನಮ್ಮವ್ರೇ ಅಲ್ವಾ?” ಅದಕ್ಕೆ ಅವರು, "ಅಲ್ಲ... ನಾನು ಹೇಳಿದ್ದು ನಿಮ್ಮ ಸಮುದಾಯದವರು ಮನೆಗೆ ಬಂದಾಗ ನಮ್ಮನ್ನೂ ಕರಿರೀ ಅಂತ." ಅದಕ್ಕೆ ನಾನು, "ಓಹ್... ನಮ್ ಸಮುದಾಯ ಅಂದ್ರೆ ಟ್ರಾನ್ಸ್‌ಜೆಂಡರ್ಸ್ ಬಗ್ಗೆ ಹೇಳ್ತಿದ್ದೀರಿ... ಕಂಡಿತ. ಅದರಲ್ಲೇನಿದೆ?" ಅಂತ ಸಾದಾರಣವಾಗಿ ಹೇಳಿದೆ. ಆಗ ಆ ಮನುಶ್ಯ ತಕ್ಶಣ, "ಲೆಸ್ಬಿಯನ್ಸ್ ಬಂದಾಗ ಹೇಳ್ತಿರಾ?" ಅಂದ. ನನಗೆ ತಕ್ಶಣ ಕರೆಂಟ್ ಹೊಡೆದಂಗಾಗಿ, ಈ ಮನುಶ್ಯನ ದಿಕ್ಕು ಎಲ್ಲಿಗೆ ಹೋಗ್ತಾ ಇದೆ ಅಂತ ಗೊತ್ತಾಯ್ತು. ಆಗ ಕೇಳಿದೆ, "ಯಾಕೆ ಲೆಸ್ಬಿಯನ್ಸ್ ಬಗ್ಗೆ ಕೇಳ್ತಿದ್ದೀರ?" ತಕ್ಷಣ ಆ ಮಾತನ್ನು ಮರೆಸಿ, "ಮತ್ತೆ ಏನ್ ಮಾಡ್ತಿದ್ದೀರ?” ಅಂತ ಶುರುವಾಯ್ತು. ಈ 'ಏನ್ ಮಾಡ್ತಿದ್ದೀರ?' ಅಂತ ಒಂದು 20 ಸರ್ತಿ ಕೇಳಿದ ಮೇಲೆ ಈ ಮಾತು ಬಂದದ್ದು: "ನೀವು ತಪ್ ತಿಳ್ಕೊಳಲ್ಲಾಂದ್ರೆ ನಿಮ್ಮನ್ನು ಒಂದು ಮಾತ್ ಕೇಳ್ಲಾ?"  ಅಲ್ಲಿಗೆ, ಈ ಗಾಡಿ ಯಾವ ಕಡೆ ಹೋಗ್ತಿದೆ ಅಂತ ಗೊತ್ತಾಯ್ತು.

ಹೌದು, ನಾನು ಹಾದುಬಂದಿರುವ, ನನಗೆ ಅನುಬವ ಇರುವ, ನಾನು ಕೆಲಸ ಮಾಡುವ ಕ್ಷೇತ್ರ 'ಲೈಂಗಿಕ ರಾಜಕೀಯ' (ಸೆಕ್ಶುವಾಲಿಟಿ ಪಾಲಿಟಿಕ್ಸ್). ಇದರ ಮೊದಲ ಆದ್ಯತೆ ಎಂದರೆ, ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು. ಹೀಗೆಂದರೆ, ಯಾರೋ ಒಬ್ಬರಿಗೆ ಮುಜುಗರ ಮಾಡುವುದು ಅತವಾ ಅಸಹ್ಯ ಹುಟ್ಟಿಸುವುದು ಅತವಾ ಮಾತಿನಲ್ಲೇ ನಿಂದಿಸುವುದೂ (ಅಬ್ಯೂಸ್) ಅಲ್ಲ. ಬದಲಿಗೆ, ಆರೋಗ್ಯಕರವಾಗಿ ಲೈಂಗಿಕತೆಯ ಬಗ್ಗೆ ಮಾತನಾಡುವುದು. ಇದರ ಅಗತ್ಯವನ್ನು ಅರ್ತ ಮಾಡಿಕೊಳ್ಳುವುದು ಅವಶ್ಯ. ಲೈಂಗಿಕ ವಿಶಯಗಳ ಸುತ್ತ ಇರುವ ಎಲ್ಲ ಬಗೆಯ ಮಾತುಕತೆಗಳೂ, ಅಂದರೆ, ಲೈಂಗಿಕ ಆರ್ತಿಕತೆ, ಲೈಂಗಿಕ ಒಲವು, ನಿಲುವು, ಹಿಂಸೆ, ಕಿರುಕುಳ, ಸ್ಪರ್ಶ, ಬ್ಲಾಕ್‌ಮೇಲ್, ಮಾಧ್ಯಮ, ಪೋರ್ನ್, ಸುಕ, ಸಂತೋಶ, ನೋವು, ಹೀಗೆ ಅನೇಕ ವಿಶಯಗಳು ಇಲ್ಲಿನ ಚರ್ಚೆ ಆಗಬೇಕು.

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಇಬ್ಬರು ಲೈಂಗಿಕ ಕಾರ್‍ಯಕರ್‍ತೆಯರ ಬದುಕಿನ ಕತೆ

ಇಂತೆಲ್ಲ ವಿಷಯಗಳ ಬಗ್ಗೆ ಕುತೂಹಲ ಇರುತ್ತದೆ ಸರಿ; ಆದ್ರೆ, ಕುತೂಹಲದ ಹಿಂದಿರುವ ಮನೋಬಾವ ನಮಗೆ ಗೊತ್ತಾಗಲ್ಲ ಅಂತ ಅಲ್ಲ. ಈ ನಡುವೆ, ಲೈಂಗಿಕ ರಾಜಕೀಯವನ್ನು ಒಪ್ಪಿಕೊಂಡು, ಸಂಶೋಧನೆ ಹೆಸರಲ್ಲೂ ಇನ್ನಶ್ಟು 'ಕುತೂಹಲ'ದ ಪ್ರಶ್ನೆಗಳನ್ನು ಸೇರಿಸಲಾಗಿದೆ! ಕೇಳೋ ಪ್ರಶ್ನೆಗಳಲ್ಲೇ ಅಂತರಗಳನ್ನು ಕಟ್ಟಿಬಿಡುತ್ತಾರೆ; ಬಹಳ ಸ್ಪಷ್ಟವಾಗಿ, ‘ನೀವು, ನಿಮ್ಮ, ನಿಮಗೆ’ ಅಂತಾನೇ ಪ್ರಶ್ನೆ ಕಟ್ಟಲಾಗುತ್ತದೆ. ಏನೋ ಹೇಸಿಗೆಯನ್ನು ಒಪ್ಪಿಕೊಳ್ಳುವ ರೀತಿಯಲ್ಲಿ, “ಅಲ್ಲ ‘ನಮಗೆ’ ಇದರ ಬಗ್ಗೆ ಏನೂ ಗೊತ್ತಿಲ್ಲ. ತಿಳ್ಕೊಳ್ಳಕ್ಕೆ ಕೇಳಿದ್ದು. ತಪ್ ತಿಳ್ಕೊಬೇಡಿ," ಅಂತ ಸಮರ್ಥನೆ ಬೇರೆ! ಲೈಂಗಿಕತೆ ಎಶ್ಟು ವೈಯಕ್ತಿಕವೋ ಅಶ್ಟೇ ಮುಕ್ತವಾಗಿದ್ದು ನಿಜ. ಹಾಗಂತ, ಅದರ ಬಗ್ಗೆ ಹೇಳುವಾಗ ಅಥವಾ ಕೇಳುವಾಗ ಯಾರ ಗನತೆಗೂ ದಕ್ಕೆ ಬಾರದಂತೆ ಇರಬೇಕು. ಅದನ್ನು ಬಿಟ್ಟು ಕುತೂಹಲದ ಹೆಸರಲ್ಲಿ, "ನಿಮ್ಗೆ ಸೆಕ್ಸ್ ಬೇಕಂದ್ರೆ ಏನ್ ಮಾಡ್ತೀರ?" ಅತವಾ "ನಿಮಗೆ ಲೈಂಗಿಕ ಸುಕ ಹೆಂಗೆ?” “ಹೇಗೆ ಮಾಡ್ತೀರ?” ಅಂತೆಲ್ಲ ಕೇಳುವುದು ಎಷ್ಟರ ಮಟ್ಟಿಗೆ ಸರಿ? ತಿಳ್ಕೊಳ್ಳೋ ನೆಪದಲ್ಲಿ ಏನ್ ಬೇಕಾದ್ರೂ ಕೇಳ್ಬಿಡ್ಬೋದು ಅನ್ನೋ ದೋರಣೆ ಇದು. ಮರ್‍ಯಾದೆ ಕೊಟ್ಟು ಮರ್‍ಯಾದೆ ತಗೊಳೋಕೆ ಬಾರದವರೆಲ್ಲ ಆನ್‌ಲೈನಲ್ಲಿ ಎಲ್ಲಾ ವಿಶಯ ತಿಳಿದುಕೊಳ್ಳಬಹುದಲ್ಲ? ನಮ್ಮನ್ನು ಕೇಳಿ ತಿಳ್ಕೊಳ್ಳೋ ಚಟ ಯಾಕೆ?

Image
zoe Wvbcr Photo

ಹೌದು... ನಮ್ಮ ಅನುಬವ, ನಮ್ಮ ಜೀವನಗಳ ಬಗ್ಗೆ ಬರೆಯುವುದು, ಹೇಳುವುದು, ಚರ್ಚೆ ಮಾಡುವುದು ಬಹಳ ಮುಕ್ಯ. ಆದ್ರೆ, ಅದಕ್ಕೂ ಮುಕ್ಯವಾದದ್ದು ನಮ್ ಗನತೆ. ನನ್ನ ಆ ತರ ತುಂಬಾ ಸೇಫ್ ಆಗಿ ಮೊದಲನೆ ಸರ್ತಿ ಮಾತಾಡಿಸಿ, ನಂದೂ ಒಂದು ಜೀವನ ಕತೆ ಇದೆ ಅನ್ನೋ ಭಾವ ಮೂಡಿಸಿದ್ದು ಚಯನಿಕ ಶಾ. ಅವಳು ನನ್ನ ಲೈಂಗಿಕತೆ ಕುರಿತು ಪ್ರತ್ಯೇಕವಾಗಿ ಮಾತಾಡಿಸಲಿಲ್ಲ. ನನ್ನ ಚರ್ಮದಲ್ಲಿ ಅನುಬವವಾಗುವ ಪ್ರೀತಿ, ಆ ಸೂಫಿ, ಬಣ್ಣಗಳು, ಆವಾಜು, ನನ್ನ ಅವಿಬಾಜ್ಯ ಅಂಗವಾಗಿರುವ ಕಂಕು, ಅವನ ಕಲ್ಲು, ಸುನಿಲ್ ಮತ್ತು ಅವನ ಅಗಾದ ಚರ್ಚೆಗಳ ಒರ್‍ಗ್ಯಾಸಮ್... ಹೀಗೆ, ನಾನು ಬರೀ ಲೈಂಗಿಕತೆಗೆ ಮಾತ್ರ ಸೀಮಿತವಾಗಿಲ್ಲ. ಅದನ್ನು ಆಕೆ ಸೂಕ್ಶ್ಮವಾಗಿ ಕೇಳಿದಳು.

ಬಹಳಷ್ಟು ಮೂರ್‍ಖರಿಗೆ ಗೊತ್ತಿಲ್ಲ - ಲೈಂಗಿಕ ಸುಕ ಅನ್ನೋದು ದೇಹದ ಕೆಲವು ಬಾಗಗಳಲ್ಲಿ ಮಾತ್ರ ಸಿಗೋದಲ್ಲ ಅಂತ. ಲೈಂಗಿಕ ಸುಕ ಅನ್ನೋದನ್ನ ನಾನು ತೀವ್ರವಾಗಿ ಹಾಡಿದಾಗ ಅನುಬವಿಸಿದ್ದೀನಿ. ಸುನಿಲ್ ಮತ್ತು ಅರ್ವಿಂದ್ ಗನತೆಯ ಬಗ್ಗೆ ಚರ್ಚೆ ಮಾಡುವಾಗ ಫೀಲ್ ಆಗಬಹುದು. ಲೈಂಗಿಕತೆ ವ್ಯಾಪ್ತಿ ಮನಸ್ಸು, ತಲೆ, ಚರ್ಮ, ಹ್ರುದಯ, ಕಲ್ಪನೆ, ಸ್ನೇಹ, ಸೌಹಾರ್ದ, ಬಾವನೆ, ಮುಖಭಾವ, ಗನತೆ, ಗೌರವ, ಇನ್ನೂ ಏನೇನೆಲ್ಲ ಒಳಗೊಂಡಿದೆ.

Image
milan popovic photo

ಉನ್ಮತ್ತ ...
ಅದನ್ನು ನೀನು ಓದುವ
ಆವಾಜಿನಲ್ಲಿ ಮುಟ್ಟಿದ್ದೇನೆ;
ಅವನು ಹಾಡುವ ಸ್ವರದಲ್ಲಿ
ಮೀರಿದ್ದೇನೆ
ಅವರ ಕಣ್ಣೋಟದಲ್ಲಿ ಅನುಬವಿಸಿದ್ದೇನೆ
ಬಿಯರಿನ ಮತ್ತಿನಲ್ಲಿ ಕಂಡಿದ್ದೇನೆ
ಕಂಕುನ ಕೆಂಪು ಕಲ್ಲಿನಲ್ಲಿ
ಸುನಿಲಿನ ಕಿವಿ ಅಂಚಿನಲ್ಲಿ
ಹೆಬ್ಬಾರರ ಲೈನುಗಳಲ್ಲಿ
ಹುಸೇನರ ಮೀನಾಕ್ಶಿಯಲ್ಲಿ
ಮನ್ಸೂರರ 'ಅಕ್ಕ ಕೇಳವ್ವ'ದಲ್ಲಿ ಸೇವಿಸಿದ್ದೀನಿ
ಮತ್ತು ಫಮೀಲಾಳ ಕಣ್ಣಲ್ಲಿ.
ಲೈಂಗಿಕ ಮಾತಿಗೆ ಲಿಂಗ ಯೋನಿಯ ಹಂಗಿಲ್ಲ.
ಬೇಕಿರುವುದು
ಸೂಫಿಯ
ತಿರುಗುವ ಉನ್ಮತ್ತ ಆವೇಶ.
ಬೇಕಿರುವುದು
ಅಕ್ಕನ ಚನ್ನಮಲ್ಲಿಕಾರ್ಜುನ;
ಸುಟ್ಟು ಬೂದಿಯಾದ
ಮರ್ಯಾದೆಗೇಡು ಹತ್ಯೆಗಳ
ಆಕ್ರೋಶ
ಸತ್ತ ಹೆಣದ ಉಸಿರಾಟ
ಮತ್ತೆ
ನೀವು.

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
5 ವೋಟ್