ಜಾಗರ | ಶೇಕ್ಸ್‌ಪಿಯರ್‌ನ ‘ಟೈಟಸ್ ಆ್ಯಂಡ್ರೋನಿಕಸ್’ ಮತ್ತು ಬೋರ್‌ಲಿನ್‌ ಚಟರ್ಜಿಯ ‘ಹಂಗ್ರಿ’

The Hungry 2

ತುಲ್ಸಿ, ಮೇಕೆಯ ರೀತಿ ಮಾಂಸದ ತುಂಡುಗಳನ್ನು ಚಾಚಿದ ನಾಲಿಗೆಯ ಮೂಲಕ ಸೆಳೆದು ಚಪ್ಪರಿಸಿಕೊಂಡು-ಚಪ್ಪರಿಸಿಕೊಂಡು ಮೈಮರೆತು ತಿನ್ನುತ್ತಾಳೆ. “ಅದ್ಭುತ! ಆಹಾ! ನಿಮ್ಮ ಅಡುಗೆಯ ಗುಟ್ಟೇನು?” ಎಂದು ಕೇಳುತ್ತಾಳೆ. ಆಗ ತಥಾಗತ, ಅಲ್ಲಿಯೇ ಇದ್ದ ತಟ್ಟೆಯೊಂದರ ಮುಚ್ಚಳ ತೆಗೆದು, ಅವಳ ಮಗ ಚಿರಾಗನ ಕತ್ತರಿಸಿದ ತಲೆಯನ್ನು ತೋರಿಸುತ್ತಾನೆ!

‘ಟೈಟಸ್ ಆ್ಯಂಡ್ರೋನಿಕಸ್’ ಎಂಬುದು ಅಷ್ಟೇನೂ ಪ್ರಚಲಿತವಿಲ್ಲದ, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳಿಗೂ ಅಷ್ಟೇನೂ ಪರಿಚಯವಿರದ, ಕರಾಳತೆಯೇ ಮೂರ್ತಗೊಂಡಿರುವಂಥ, ಶೇಕ್ಸ್‌ಪಿಯರನ ಒಂದು ನಾಟಕ. ಈ ನಾಟಕದಿಂದ ಅದರಲ್ಲಿರುವ ಕರಾಳತೆಯನ್ನು ಮತ್ತು ಐದೂ ಮತ್ತೊಂದು ಪಾತ್ರವನ್ನು ಎತ್ತಿಕೊಂಡು ನಿರ್ದೇಶಕಿ ಬೋರ್‌ಲಿನ್ ಚಟರ್ಜಿ ಹಿಂದಿಯಲ್ಲಿ ‘ದಿ ಹಂಗ್ರಿ’ ಎಂಬ ಚಿತ್ರ ಮಾಡಿದ್ದಾರೆ. ಶೇಕ್ಸ್‌ಪಿಯರನ ನಾಟಕದ ಕತೆಯನ್ನು ತಮಗೆ ಬೇಕಾದಂತೆ ತಿರುಚಿಕೊಂಡಿದ್ದಾರೆ. ಚಿತ್ರವನ್ನು ಚೆನ್ನಾಗಿಯೇ ಮಾಡಿದ್ದಾರೆ. ಆದರೆ, ಶೇಕ್ಸ್‌ಪಿಯರನ ನಾಟಕ ಆಧಾರಿತ ಎಂದು ಹೇಳಿಕೊಳ್ಳಬಾರದಿತ್ತು. ಅಷ್ಟೊಂದು ತಮ್ಮ ಸ್ವಂತ ಕಲ್ಪನೆಯನ್ನು ಬಳಸಿಕೊಂಡಿದ್ದಾರೆ.

ಶೇಕ್ಸ್‌ಪಿಯರನ ಮೂಲ ಕತೆ ಹೀಗಿದೆ

ಟೈಟಸ್ ಒಬ್ಬ ರೋಮನ್ ಸೇನಾಪತಿ. ಅವನು ದಂಡೆತ್ತಿ ಹೋಗಿ ಗೋತ್ಸ್ ಎಂಬ ದೇಶವನ್ನು ಜಯಿಸಿ, ಅಲ್ಲಿಯ ರಾಣಿಯಾದ ತಮೋರಾ, ಅವಳ ಮೂರು ಗಂಡುಮಕ್ಕಳು ಹಾಗೂ ಅವಳ ಆಪ್ತ ಸೇವಕನಾದ ಮೂರ್ ಜನಾಂಗದವನಾದ ಅರೋನ್, ಒಟ್ಟು ಐದು ಜನರನ್ನು ಸೆರೆಹಿಡಿದು ತರುತ್ತಾನೆ. ತನ್ನ ಮಗನ ಅಂತ್ಯಕ್ರಿಯೆಯ ವಿದ್ಯುಕ್ತ ಭಾಗವಾಗಿ ತಮೋರಳ ಒಬ್ಬ ಮಗನನ್ನು, ತಮೋರಾ ಎಷ್ಟೇ ಬೇಡಿಕೊಂಡರೂ ಆಹುತಿ ಕೊಡುತ್ತಾನೆ.

ನಂತರ ಚಕ್ರವರ್ತಿ ಪಟ್ಟ ನಿರಾಕರಿಸಿ, ಉಳಿದ ಸೆರೆಯಾಳುಗಳನ್ನು ತಾನೇ ಸೂಚಿಸಿ ನೇಮಿಸಿದ ಹೊಸ ಚಕ್ರವರ್ತಿಗೆ ಒಪ್ಪಿಸುತ್ತಾನೆ. ತಮೋರಾಳ ಉಳಿದ ಇಬ್ಬರು ಗಂಡುಮಕ್ಕಳು ಪ್ರತೀಕಾರವಾಗಿ ಟೈಟಸ್‌ನ ಮಗಳಾದ ಲವಿನಿಯಾಳನ್ನು ಅತ್ಯಾಚಾರ ಮಾಡಿ, ಅವಳ ನಾಲಿಗೆಯನ್ನು ಕುಯ್ದುಬಿಡುತ್ತಾರೆ. ಹೊಸ ಚಕ್ರವರ್ತಿಯು ಸೆರೆಯಾಳಾಗಿ ಬಂದಿರುವ ತಮೋರಾಳನ್ನು ಬಿಡುಗಡೆಗೊಳಿಸಿ ತಾನೇ ಮದುವೆಯಾಗುತ್ತಾನೆ. 

Image
titus andronicus 2
‘ಟೈಟಸ್ ಆ್ಯಂಡ್ರೋನಿಕಸ್’ ನಾಟಕದ ದೃಶ್ಯ

ಟೈಟಸ್‌ನ ಇಬ್ಬರು ಗಂಡುಮಕ್ಕಳ ಮೇಲೆ, ತಾನು ಮಾಡಿದ ಕೊಲೆಯ ಆರೋಪ ಬರುವಂತೆ ತಮೋರಾಳ ಸೇವಕ ಅರೋನ್ ಮಾಡುತ್ತಾನೆ. ಟೈಟಸ್ ಎಷ್ಟೇ ಬೇಡಿಕೊಂಡರೂ, ಚಕ್ರವರ್ತಿಯು ಟೈಟಸ್‌ನ ಇನ್ನೊಬ್ಬ ಮಗ ಲುಷಿಯಸ್‌ನನ್ನು ಗಡಿಪಾರು ಮಾಡಿ, ಉಳಿದಿಬ್ಬರನ್ನು ಕೊಲೆಯ ಆಪಾದನೆಯ ಮೇಲೆ ಶಿರಚ್ಛೇದನ ಮಾಡಿಸಿ, ಅವರಿಬ್ಬರ ತಲೆಗಳನ್ನು ಟೈಟಸ್‌ನಿಗೆ ಕಳಿಸಿಕೊಡುತ್ತಾನೆ. 

ಟೈಟಸ್, ಚಕ್ರವರ್ತಿ ಮತ್ತು ತಮೋರಾರನ್ನು ಒಂದು ಔತಣಕೂಟಕ್ಕೆ ಮುಖ್ಯ ಆತಿಥಿಗಳಾಗಿ ಆಹ್ವಾನಿಸಿ ತಮೋರಾಳ ಇಬ್ಬರೂ ಮಕ್ಕಳನ್ನು ಕೊಂದು ಅಡುಗೆ ಮಾಡಿ ಉಣಬಡಿಸಿ ತಿನ್ನಿಸುತ್ತಾನೆ. ಇದಿಷ್ಟೂ ಶೇಕ್ಸ್‌ಪಿಯರನ ನಾಟಕದ ‘ಹಂಗರ್’ ಚಿತ್ರಕ್ಕೆ ಸಂಬಂಧಿಸಿದ ಕತೆ.

‘ದಿ ಹಂಗ್ರಿ’ ಚಿತ್ರದ ಕತೆ

ಚಿತ್ರದಲ್ಲಿ ಟೈಟಸ್‌ನ ಸ್ಥಾನದಲ್ಲಿ ತಥಾಗತ ಅಹುಜ, ಟೈಟಸ್‌ನ ಮಗಳಾದ ಲವಿನಿಯಾಳ ಸ್ಥಾನದಲ್ಲಿ ಲವ್ಲೀನ್, ತಮೋರಾಳ ಸ್ಥಾನದಲ್ಲಿ ತುಲ್ಸಿ ಜೋಷಿ, ತಮೋರಾಳ ನಾಲ್ಕು ಗಂಡುಮಕ್ಕಳ ಬದಲಿಗೆ ಚಿರಾಗ್ ಮತ್ತು ಅಂಕುರ್ ಎಂಬ ಇಬ್ಬರು ಗಂಡುಮಕ್ಕಳು, ಸೇವಕ ಅರೋನ್‌ನ ಸ್ಥಾನದಲ್ಲಿ ಅರುಣ್ ಕುಮಾರ್ ಎಂಬ ಪಾತ್ರಗಳಿವೆ.

‘ಟೈಟಸ್ ಆ್ಯಂಡ್ರೋನಿಕಸ್’ನ ಕಥಾಹಂದರವು ರೋಮನ್ ಸಾಮ್ರಾಜ್ಯದ ರಾಜಕಾರಣದೊಳಗೆ ಇದ್ದರೆ, ‘ಹಂಗ್ರಿ’ಯ ಕಥಾಹಂದರವು ಆಧುನಿಕ ಭಾರತೀಯ ಉದ್ಯಮಪತಿಗಳ ಸಾಮ್ರಾಜ್ಯದೊಳಗೆ ಹರವಿಕೊಂಡಿದೆ. ತಥಾಗತ, ಅಹುಜ ತನ್ನ ಪಾಲುದಾರಿಣಿ ತುಲ್ಸಿ ಜೋಷಿಯ ಮಗ ಅಂಕುರ್‌ನನ್ನು ಕೊಲ್ಲಿಸುತ್ತಾನೆ. ಕಾರಣವೇನೆಂದರೆ, ಅಮೆರಿಕದಲ್ಲಿ ವಿದ್ಯಾಭ್ಯಾಸ ಪಡೆದುಕೊಂಡು ಹಿಂತಿರುಗಿರುವ ಅಂಕುರ್, ಸಚಿವ ಪೋದ್ದಾರ್‌ಗೆ ಲಂಚ ಕೊಟ್ಟು ಯೋಜನೆಯೊಂದನ್ನು ಗಿಟ್ಟಿಸಿಕೊಳ್ಳುವ ಮಾತುಕತೆಯನ್ನು ತಥಾಗತನ ಅರಿವಿಗೆ ಬಾರದಂತೆ ಮೊಬೈಲ್‌ನಲ್ಲಿ ಸೆರೆಹಿಡಿದಿರುತ್ತಾನೆ. ಅಲ್ಲೇ ಪೋದ್ದಾರನ ಜನ ಅಂಕುರ್‌ನನ್ನು ಹಿಡಿಯುತ್ತಾರೆ. ಇದರಿಂದ ತಥಾಗತ, ಅಂಕುರನನ್ನು ಕೊಲ್ಲುವಂತೆ ಅರುಣ್ ಕುಮಾರ್‌ಗೆ ಆಜ್ಞಾಪಿಸುತ್ತಾನೆ. ಅದರಂತೆ ಅರಣ್, ಅಂಕುರನ ಕುತ್ತಿಗೆಯ ಮೇಲೆ ಪಿಸ್ತೂಲು ಇಟ್ಟು ಅವನ ಕೈಯಲ್ಲಿ ಒಂದು ಆತ್ಮಹತ್ಯಾ ಪತ್ರ ಬರೆಸಿ, ನಂತರ ಉಸಿರುಗಟ್ಟಿಸಿ ಕೊಂದು, ಸ್ನಾನದ ತೊಟ್ಟಿಯಲ್ಲಿ ಮುಂಗೈ ನರ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಹೆಣವನ್ನು ಮಲಗಿಸಿಬಿಡುತ್ತಾನೆ. 

ಈ ಲೇಖನ ಓದಿದ್ದೀರಾ? ಜಾಗರ | ಸಿದ್ದಾರ್ಥ ಹೆಂಡತಿ, ಮಗುವನ್ನು ರಾತ್ರೋರಾತ್ರಿ ತೊರೆದುಹೋದದ್ದು ನಿಜವೇ?

ಕೊಲೆ ಮಾಡಿದ ಅರುಣ್, ಇದು ತಥಾಗತನೇ ಮಾಡಿಸಿರುವ ಕೊಲೆ ಎಂದು ಹೇಳಿ, ತುಲ್ಸಿ ಜೋಷಿಯನ್ನು ಸೇಡು ತೀರಿಸಿಕೊಳ್ಳಲು ಪ್ರೇರೇಪಿಸುತ್ತಾನೆ, ತಾನೂ ಕೈಜೋಡಿಸುತ್ತಾನೆ. ಅವರ ಪಿತೂರಿಯಂತೆ, ವಿಧವೆಯಾಗಿರುವ ತುಲ್ಸಿ ಜೋಷಿ ತನಗಿಂತ ಬಹಳ ಚಿಕ್ಕವನಾದ, ತಥಾಗತನ ಮಗ ಸನ್ನಿಯನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಅವನ ಮಾದಕದ್ರವ್ಯ ವ್ಯಸನವನ್ನು ಉತ್ತೇಜಿಸಿ ಅವನು ಔತಣಕೂಟವೊಂದರಲ್ಲಿ, "ನನ್ನ ತಂದೆ ತನ್ನನ್ನು ಚೆನ್ನಾಗಿ ಬೆಳೆಸಿದ್ದಾರೆ. ಅವರನ್ನು ಬಹಳ ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಆದರೆ, ತುಲ್ಸಿ ನನಗೆ ಬಹಳ ಹತ್ತಿರದವಳು, ತಾನು ಬದುಕುವುದಕ್ಕೆ ಕಾರಣಳು," ಎಂಬಂಥ ಮಾತುಗಳನ್ನು ಹೇಳುವಂಥ ಸ್ಥಿತಿಗೆ ಅವನನ್ನು ತಲುಪಿಸುತ್ತಾಳೆ. ತುಲ್ಸಿ ಮತ್ತು ಸನ್ನಿ ಮದುವೆ ನಿರ್ಧಾರವಾಗುತ್ತದೆ.

ನಿಶ್ಚಿತಾರ್ಥದ ವೇಳೆಗೆ ತುಲ್ಸಿಯ ಇನ್ನೊಬ್ಬ ಮಗ ಚಿರಾಗ್ ಅಮೆರಿಕದಲ್ಲಿ ಓದುತ್ತಿರುವವನು ಬರುತ್ತಾನೆ. ಒಂದು ಕಡೆ ಕೆಳಗೆ ಚಿರಾಗನ ಅಮ್ಮ ತುಲ್ಸಿಯ ಎರಡನೆಯ ಮದುವೆಯು ಲವ್ಲೀನ್‌ನ ಅಣ್ಣ ಸನ್ನಿಯ ಜೊತೆಗೆ ನಿಶ್ಚಿತವಾಗುತ್ತಿದ್ದರೆ, ಹಲವು ಮಹಡಿಗಳ ಮೇಲೆ ತಾರಸಿಯಲ್ಲಿ ಚಿರಾಗ್ ಮತ್ತು ಲವ್ಲೀನ್ ಕುಡಿತದ ಅಮಲಿನಲ್ಲಿದ್ದಾರೆ. ಎರಡೂ ಸನ್ನಿವೇಶಗಳನ್ನು ಸರಾಗವಾದ ಕ್ರಾಸ್‌ಕಟ್ ಸಂಕಲನದ ಮೂಲಕ ಬಹಳ ಚೆನ್ನಾಗಿ ಚಿತ್ರತಂಡ ನಿರ್ವಹಿಸಿದೆ.

ತನ್ನ ಸಹೋದರನನ್ನು ಕೊಂದಿರುವ ಕುಟುಂಬದವರನ್ನೇ ತನ್ನ ತಾಯಿ ಮದುವೆ ಆಗುತ್ತಿರುವುದು, ಅದೂ ಎರಡನೆಯ ಮದುವೆಯಾಗುತ್ತಿರುವುದರ ಬಗ್ಗೆ ಚಿರಾಗನಿಗೆ ಅಸಹನೆ. ಲವ್ಲೀನ್‌ಗೆ ತನ್ನ ಅಣ್ಣ, ಐವತ್ತು ವರ್ಷದ ಮುದುಕಿಯನ್ನು ಮದುವೆಯಾಗುತ್ತಿರುವುದು ಒಂದಿಷ್ಟೂ ಇಷ್ಟವಿಲ್ಲ. ಲವ್ಲೀನ್ ತನ್ನ ಪ್ರಿಯಕರನಾಗಿದ್ದ ಅಂಕುರನ ಆತ್ಮಹತ್ಯೆಯಿಂದ ಬಹಳ ನೋವಿನಲ್ಲಿರುತ್ತಾಳೆ. ಆದರೂ, ಅವಳ ಸಹಜ ಲವಲವಿಕೆಯ ಜೀವಂತಿಕೆಯ ಸ್ವಭಾವದಿಂದಾಗಿ ಅಂಕುರನ ಸಹೋದರನಾದ ಚಿರಾಗ್‌ನನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಾಳೆ. 

Image
The Hungry
'ದಿ ಹಂಗ್ರಿ’ ಚಿತ್ರದ ದೃಶ್ಯ

ಒಂದು ಘಟ್ಟದಲ್ಲಿ ಚಿರಾಗ್, "ಅಂಕುರನದ್ದು ಆತ್ಮಹತ್ಯೆಯಲ್ಲ, ಕೊಲೆ. ನಿಮ್ಮಪ್ಪನೇ ಮಾಡಿಸಿದ್ದು," ಎಂದು ಜೋರು ಮಾಡುತ್ತಾನೆ. "ನನ್ನ ತಮ್ಮನ ಸಾವು ಆತ್ಮಹತ್ಯೆಯಲ್ಲ ಎನ್ನುವುದಕ್ಕೆ ಕುರುಹು ಇದೆ. ನಾವೆಂದೂ, ನಮ್ಮ ತಂದೆಯನ್ನು 'ಡ್ಯಾಡಿ' ಎಂದು ಕರೆಯುತ್ತಿರಲಿಲ್ಲ. ಅವನು ಬರೆದಿರುವ ಅತ್ಮಹತ್ಯಾ ಪತ್ರದಲ್ಲಿ ಅವರನ್ನು ಡ್ಯಾಡಿ ಎಂದು ಸಂಬೋಧಿಸಿ ಬರೆದಿರುವುದೇ ಅವನು ನಮಗೆ ಕೊಟ್ಟಿರುವ ಕುರುಹು," ಎನ್ನುತ್ತಾನೆ. ಲವ್ಲೀನ್, "ನಮ್ಮನೇಗೇ ಬಂದು ನಮ್ಮಪ್ಪನನ್ನು ದೂಷಿಸುತ್ತಿದ್ದೀಯ?" ಎಂದು ಜೋರು ಮಾಡುತ್ತಾಳೆ. ಸಿಟ್ಟಿನಲ್ಲಿ ಚಿರಾಗ್, ಅವಳ ನಾಲಿಗೆಯನ್ನು ಕಿತ್ತುಹಾಕಿ ಬಿಡುತ್ತಾನೆ. ಸಾಯುವ ಮೊದಲು ಒಂದು ದೀಪವನ್ನು ಲವ್ಲಿನ್ ಹಚ್ಚಿಡುತ್ತಾಳೆ. ಇದು ಅವಳ ಅಪ್ಪ ತಥಾಗತನಿಗೆ, ತನ್ನನ್ನು ಕೊಂದಿದ್ದು ಚಿರಾಗ್ (ದೀಪ) ಎಂದು ಕೊಡುವ ಕುರುಹು.

ಮದುವೆಯಾಗಿರುವ ಹೊಸ ಗಂಡು-ಹೆಣ್ಣಿಗೆ, ತಥಾಗತ ತಾನೇ ತಯಾರಿಸಿದ ಅಡುಗೆಯ ಭಾರೀ ಔತಣ ನೀಡುತ್ತಾನೆ. ತಥಾಗತನು ಯಶಸ್ವಿ ಉದ್ಯಮಿ ಮಾತ್ರವಲ್ಲ, ನುರಿತ ಪಾಕ ಪ್ರವೀಣನೂ, ಕವಿಯೂ ಹೌದು. ಚಿತ್ರದ ಕೊನೆಯ ಮುಖ್ಯ ದೃಶ್ಯವು, ತಥಾಗತನು ಭಕ್ಷ್ಯಭೋಜನಗಳನ್ನು ಕಲಾತ್ಮಕವಾಗಿ ತಯಾರಿಸುತ್ತಿರುವ ವಿವರಗಳಿಂದ ತುಂಬಿದೆ. ನಡು-ನಡುವೆ ಕ್ರಾಸ್‌ಕಟ್ ಆಗುವ ಚಿರಾಗ್, ಮರಳಿ ಅಮೆರಿಕಕ್ಕೆ ಓಡಿಹೋಗುವ ಪ್ರಯತ್ನದ ಷಾಟ್‌ಗಳು. ಆದರೆ, ತಥಾಗತನ ಕೈಗೆ ಚಿರಾಗ್ ಸಿಕ್ಕಿಕೊಳ್ಳುತ್ತಾನೆ. 

ವಿಶಾಲವಾದ ಮೇಜಿನ ಮೇಲೆ ಹರಡಿ ಇಟ್ಟಿರುವ ಮಾಂಸದ ನಾನಾ ಬಗೆಯ ಭಕ್ಷ್ಯಗಳು. ತುಲ್ಸಿ ಜೋಷಿ ಮತ್ತು ಸನ್ನಿ ಚಪ್ಪರಿಸಿಕೊಂಡು ಆ ಭಕ್ಷ್ಯಗಳನ್ನು ಆಸ್ವಾದಿಸುತ್ತಾರೆ. ತುಲ್ಸಿ, ಚಪ್ಪರಿಸಿಕೊಂಡು-ಚಪ್ಪರಿಸಿಕೊಂಡು ಮೈಮರೆತು, ಮೇಕೆಯ ರೀತಿಯಲ್ಲಿ ಚಾಚಿದ ನಾಲಿಗೆಯ ಮೂಲಕ ಮಾಂಸದ ತುಂಡುಗಳನ್ನು ಸೆಳೆದು ತಿನ್ನುತ್ತಾಳೆ. “ಅದ್ಭುತ! ಆಹಾ! ನಿಮ್ಮ ಅಡುಗೆಯ ಗುಟ್ಟೇನು?” ಎಂದು ಕೇಳುತ್ತಾಳೆ. ತಥಾಗತ, ಮುಚ್ಚಿರುವ ತಟ್ಟೆಯೊಂದರಲ್ಲಿರುವ, ಅವಳ ಮಗ ಚಿರಾಗನ ತಲೆಯನ್ನು ಮುಚ್ಚಳ ತೆಗೆದು ತೋರಿಸುತ್ತಾನೆ. ಈ ದೃಶ್ಯವನ್ನು ಕಲಾವಿದರು, ಛಾಯಾಗ್ರಾಹಕ, ಸಂಕಲಿಸಿದವರು ಹಾಗೂ ನಿರ್ದೇಶಕಿ ನಿರ್ವಹಿಸಿರುವ ರೀತಿ ಅದ್ಭುತವಾಗಿದೆ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಡೆನಿಸ್ ಬ್ರೂಟಸ್ ಕವಿತೆ 'ಗಲ್ಲಿಗೇರಿಸಿದರು ಅವನನ್ನು - ನಾನೆಂದೆ ತಿರಸ್ಕಾರದಿಂದ'

ಕೊನೆಯ ಷಾಟ್‌ಗಳಲ್ಲಿ ಚಲಿಸುವ ನೆರಳುಗಳಂತೆ ಕರಾಳವಾಗಿ ಕಾಣುವ ಮೇಕೆಗಳು ಊಟದ ಮೇಜಿನ ಮೇಲೆ ಹರಡಿರುವ ನರಮಾಂಸದ ವಿವಿಧ ಭಕ್ಷ್ಯಗಳನ್ನು ಮೇಯುವಾಗ, ಅದೀಗ ಕೆಲವೇ ಕ್ಷಣಗಳ ಹಿಂದೆ ನೋಡಿದ್ದ, ತನ್ನ ಮಗನ ಮತ್ತು ಪ್ರಿಯಕರನ ಮಾಂಸದ ತುಂಡುಗಳನ್ನು ಮೇಯುತ್ತಿದ್ದ ತುಲ್ಸಿ ಮನಸ್ಸಿಗೆ ಬರುತ್ತಾಳೆ.

ತಥಾಗತ ಅಹುಜನಾಗಿ ನಾಸಿರುದ್ದೀನ್ ಷಾ ಮತ್ತು ತುಲ್ಸಿ ಜೋಷಿಯಾಗಿ ಟಿಸ್ಕಾ ಚೋಪ್ರಾ ಅದ್ಭುತವಾಗಿ ನಿರ್ವಹಿಸಿರುವುದನ್ನು ನೋಡುವುದಕ್ಕಾಗಿಯೇ ಈ ಚಿತ್ರವನ್ನು ನೋಡಬೇಕು. ಬೋರ್ಲಿನ್ ಚಟರ್ಜಿಯವರ ಸಿನಿಕಥನ ಪ್ರತಿಭೆಗಾಗಿಯೂ ಈ ಚಿತ್ರವನ್ನು ನೋಡಬೇಕು. ವಿವರಗಳು ಬೇಕಿತ್ತು ಅನ್ನಿಸುವ ಕಡೆಗಳಲ್ಲಿ ಕಥನವನ್ನು ಲಂಘಿಸಿ, ವಿವರಗಳು ಅಷ್ಟೊಂದು ಬೇಕಿಲ್ಲ ಅನ್ನಿಸುವ ಕಡೆಗಳಲ್ಲಿ ಕಥನವನ್ನು ಲಂಬಿಸಿದ್ದರೂ, ನಿಧಾನಗತಿಯ ಕಥನಶೈಲಿ ದೃಶ್ಯಗಳನ್ನು ಪೇಲವ ದೃಶ್ಯಗಳನ್ನಾಗಿ ಮಾಡದೆ, ಮನುಷ್ಯರೊಳಗಿರುವ ಬೀಭತ್ಸ್ಯವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ರವಾನಿಸುತ್ತದೆ ಸಿನಿಮಾ.

ನಿಮಗೆ ಏನು ಅನ್ನಿಸ್ತು?
1 ವೋಟ್