ಮುಳ್ಳುಹಾದಿಗೆ ಮಣ್ಣು ಹೊತ್ತವರು | ಧೈರ್ಯವೇ ಮೈವೆತ್ತ ದಾರಿದೀಪ - ಶಾಂತಮ್ಮ

HSA 4

ಕೋಲಾರದ ಆಸುಪಾಸಿನ ಯಾವುದೇ ಹೆಣ್ಣುಜೀವ, "ನೊಂದೆ..." ಎಂದುಕೊಂಡರೆ, ಸಹಾಯಕ್ಕೆ ಧಾವಿಸುವವರಲ್ಲಿ ಶಾಂತಮ್ಮ ಮೊದಲಿಗರು. ದಿಕ್ಕಿಲ್ಲದ ಹೆಣ್ಣುಗಳಿಗೆ ಸಾಯುವುದೊಂದೇ ದಾರಿ ಅಲ್ಲ, ಬೇರೆ ದಾರಿಗಳೂ ಇವೆ ಎಂದು ಸ್ವಾನುಭವದಿಂದ ತಿಳಿಸಿ ಹೇಳುವ ಅವರು, ಹೆಣಿಗೆ, ಹೊಲಿಗೆ, ಕುಂಬಾರಿಕೆ ಮೊದಲಾದ ಕೌಶಲ ಕಲಿಸಿ, ಸ್ವಾವಲಂಬಿ ಬದುಕನ್ನು ಪ್ರೋತ್ಸಾಹಿಸುತ್ತಾರೆ

ಕೊನೆಮೊದಲಿರದ ದೈಹಿಕ ಹಿಂಸೆ, ದೌರ್ಜನ್ಯ, ಅವಮಾನಗಳ ನಡುವೆ ಅವರ ವಿವಾಹ ಬಂಧನದಲ್ಲಿ ಯಾವುದೇ ಸಂಬಂಧ ಉಳಿದಿರಲಿಲ್ಲ. ಬರಿಯ ಅನುಮಾನ, ಅವಮಾನ, ಸುಳ್ಳುಗಳ ಮೇಲೆ ನಿಂತ ದಾಂಪತ್ಯದಲ್ಲಿ ಸತಿ-ಪತಿಯರು ಒಮ್ಮೆಯೂ ಅಕ್ಕ-ಪಕ್ಕ ಕುಳಿತು ಮಾತನಾಡಿರಲಿಲ್ಲ. ಒಂದು ದಿನದ ಮಟ್ಟಿಗೂ ಅವ ಕೈ ಹಿಡಿದು ಬಂದವಳ ಮೇಲೆ ಕಕ್ಕುಲಾತಿ ತೋರಿಸಿರಲಿಲ್ಲ. ಮದುವೆಯಾಗಿ ವಾರದೊಳಗೇ ವಧುವಿನ ಗೆಳತಿಯೊಡನೆ ದೈಹಿಕ ಸಂಬಂಧಕ್ಕೆ ಹಾತೊರೆಯುವಷ್ಟು ಹೆಣ್ಣುಮರುಳು ವರ ಅವನು. ಆದರೂ ನೂರೆಂಟು ದಿಕ್ಕಿನ ಒತ್ತಡಗಳಿಗೆ ಸಿಲುಕಿ ಗಂಡನೆಂದು ಅವಳು ಒಪ್ಪಿಕೊಳ್ಳಬೇಕಾಗಿತ್ತು. ಇಬ್ಬರು ಮಗಂದಿರನ್ನೂ ಹೆತ್ತದ್ದಾಯಿತು. ಆದರೆ, ಗೆಳೆತನವಿರದ ಶುಷ್ಕ, ಅರ್ಥಹೀನ, ಯಾತನಾಮಯ ದಾಂಪತ್ಯ ಸಂಬಂಧವನ್ನೇ ಕೊನೆತನಕ ಸಹಿಸಿ ಇರುವುದು ಹೇಗೆ? ಏನು ಮಾಡಲಿ? ಏನು ಮಾಡಲಿ?

ಆ ಜೀವ ಪದೇ-ಪದೇ ಈ ಪ್ರಶ್ನೆ ಕೇಳಿಕೊಳ್ಳುತ್ತಿತ್ತು. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದು ಓದಿದರೂ ಮನೆಯ ಸಾಂಪ್ರದಾಯಿಕ ವಾತಾವರಣದ ಕಾರಣದಿಂದ ಹತ್ತನೆಯ ತರಗತಿಗೇ ಆಕೆ ಓದು ನಿಲ್ಲಿಸಿದ್ದಳು. ಮದುವೆಯಾಗಿ ಎರಡು ಮಗಂದಿರ ತಾಯಿಯಾಗಿದ್ದಳು. ಚಂದದ ಹೆಂಡತಿಯ ಮೇಲೆ ಗಂಡನಿಗೆ ನಿರಾಧಾರ ಅನುಮಾನ. ಬರಿದೇ ಅನುಮಾನ. ಸ್ವತಃ ತಾನು ಲೆಕ್ಕವಿಲ್ಲದಷ್ಟು ಹೆಣ್ಣುಗಳ ಸಂಗದಲ್ಲಿ ಬಿದ್ದೆದ್ದು ಬಂದವನು, ಮನೆಗೆ ಬಂದರೆ ಹೆಂಡತಿಯನ್ನು ಹೊಡೆಯಲಿಕ್ಕೊಂದು ನೆಪ ಹುಡುಕುತ್ತಿದ್ದ. ಎರಡು ಚಿಕ್ಕ ಮಗಂದಿರ ಸಂಭಾಳಿಸುತ್ತ, ಮನೆಗೆಲಸ ಮಾಡುತ್ತ, ಮನೆಯ ಗೋಡೆಗಳಾಚೆ ಹೋಗದ ಎಳೆಯ ಹೆಂಡತಿಯ ಮೇಲೆ ಅನುಮಾನ ಪಡುವಂಥದ್ದು ಏನೂ ಇರದಿದ್ದರೂ, ತನಗೆ ಹೆದರಿ, ಬೆದರಿ ವಿಧೇಯಳಾಗಿರುವಂತೆ ಮಾಡಬೇಕೆಂದರೆ ಹೊಡೆಯುತ್ತ ಬಡಿಯುತ್ತ ಇರಬೇಕು ಎಂಬ ತಪ್ಪು ಪಾಠವನ್ನು ಆ ಗಂಡಿಗೆ ಸಮಾಜ ಹೇಳಿಕೊಟ್ಟಿತ್ತು. ಮೂರನೆಯ ಬಾರಿ ಬಸುರಾದವಳ ಎದುರು ಅವ ಈಗ ಹೊಸ ವರಾತ ತೆಗೆದಿದ್ದ: ಬಲವಂತದ ದೈಹಿಕ ಸಂಬಂಧದಲ್ಲಿ ಸಿಲುಕಿ ದೇಹವಾಂಛೆಗಳನ್ನೇ ಕಳೆದುಕೊಂಡಂತಿದ್ದವಳಿಗೆ, "ಅದು ನನ್ನ ಮಗು ಅಲ್ಲ, ನೀನು ಇನ್ನಾರಿಗೋ ಬಸುರಾಗಿರುವೆ," ಎನ್ನುವ ಬಿರುದನ್ನು ಅವ ಕೊಟ್ಟಿದ್ದ! ಹಾಗಲ್ಲ ಎಂದು ಸಾಧಿಸಿ ತೋರಿಸುವುದು ಹೇಗೆ? ಹೇಳಿದ್ದೇನನ್ನೂ ನಂಬಬಾರದೆಂದು ಪೂರ್ವ ನಿಶ್ಚಯ ಮಾಡಿಕೊಂಡವನೆದುರಿಗೆ ಆಡುವ ಒಂದೊಂದು ಮಾತೂ, ಅನುನಯದ ಒಂದೊಂದು ನುಡಿಯೂ ಹೊಡೆತಗಳಿಗೆ ದಾರಿ ಮಾಡುತ್ತಿದ್ದವು. ಬಸುರಿ ಹೆಂಡತಿಯನ್ನು ಆಸ್ಪತ್ರೆಗೊಯ್ಯುವುದು, ತಪಾಸಣೆ ಮಾಡಿಸುವುದರ ಯಾವ ಯೋಚನೆಯೂ ಆತನಿಗಿರಲಿಲ್ಲ. ತವರಿಗೂ ಹೋಗುವಂತಿಲ್ಲ. ಮನೆಯಿಂದಾಚೆ ಕಾಲಿಡುವಂತಿಲ್ಲ. ಸಣ್ಣ ಮಕ್ಕಳ, ಮನೆಗೆಲಸದ ಹೊರೆ ಒಂದು ಕಡೆಯಾದರೆ, ಬಸುರಿನ ಸುಸ್ತು, ಸಂಕಟಗಳ ನಡುವೆ ಗಂಡನ ಅನುಮಾನದ ಹೊಡೆತ-ಬಡಿತ ಮತ್ತೊಂದು ಕಡೆ. ಆ ಬಸುರಿನಲ್ಲಿ ಅವಳನುಭವಿಸಿದ್ದು ಯಾವ ಸೀತಾ ಸಂಕಟಕ್ಕೂ ಕಡಿಮೆಯಿರಲಿಲ್ಲ.

ಅದರ ನಡುವೆ ಮೂರನೆಯ ಮಗು, ಹೆಣ್ಣು ಮಗು, ಹುಟ್ಟಿತು. ಹೆರಿಗೆ ತುಂಬ ಕಷ್ಟವಾಯಿತು. ಹೇಗೋ ಒಂದು ಜೀವ ಎರಡಾಗಿ ನಿಟ್ಟುಸಿರು ಬಿಟ್ಟು ಮಗುವನ್ನು ಮುದ್ದಿಸಿದಳು. "ಮಗುವೇ, ನಿನ್ನ ಅಳುವಿನ ಜೊತೆಗೆ ನನ್ನ ಅಳುವೂ ಕೊನೆಗೊಳ್ಳಲಿ, ನಿನ್ನ ಬೆಳವಣಿಗೆಯ ಜೊತೆಗೆ ನನ್ನನ್ನೂ ಬೆಳೆಸು," ಎಂದು ಮುತ್ತಿಕ್ಕಿ, ತನಗೆ ತಾನೇ ಹಾರೈಸಿಕೊಂಡಳು. ಆದರೆ, ಅವ ಮಗುವನ್ನು ನೋಡಲು ತಾನು ಬರದೆ ಮತ್ಯಾರನ್ನೋ ಕಳಿಸಿದ. ನೋಡಿಬಂದವರು ಅದರ ಮೂಗು, ಮುಖ, ಕೈಕಾಲು ಅವನನ್ನು ಹೋಲುವಂತಿದೆ ಎಂದ ಮೇಲೆ ಮನೆಯ ಬಾಗಿಲುಗಳು ತೆರೆದುಕೊಂಡವು. ದಿನನಿತ್ಯ ಮತ್ತದೇ ಹಳೆಯ ರಾಗ.

Image
HSA 2

ಅಮ್ಮ ಸಂತಸದಲ್ಲಿದ್ದಾಳೋ, ನೊಂದಳೋ ಎಂಬ ಪರಿವೆಯಿಲ್ಲದೆ ಮಗು ಬೆಳೆಯತೊಡಗಿತು. ಮಗುವಿನ ಜೊತೆಗೆ ಮಗುವಿನ ಅಮ್ಮನ ಆತ್ಮಗೌರವ ಪುಟಿದೆದ್ದಿತು. ಹೆಣ್ಣು ಎಂದರೆ 'ನನ್ನ ಕಾಲಿನ ಚಪ್ಪಲಿಗೆ ಸಮ' ಎನ್ನುವವನ ಜೊತೆ ಬದುಕಬೇಕೇ ಎಂಬ ಪ್ರಶ್ನೆ ಧುತ್ತನೆದ್ದಿತು. ಆದರೆ, ಒಬ್ಬಳೇ ಬದುಕುವುದು ಹೇಗೆ? ಎರಡು ರೂಪಾಯಿ ಕೊಡಲಿಕ್ಕೂ ಹಂಗಿಸುವ ಅವನ ದುಡ್ಡಿಗಂತೂ ಕೈ ಚಾಚಲೇಬಾರದು; ಅವನನ್ನಷ್ಟೇ ಅಲ್ಲ, ಯಾರನ್ನೂ ದುಡ್ಡು ಕೇಳಬಾರದು. ಹಾಗೆ ಏನಾದರೊಂದು ಕೆಲಸ ಮಾಡಿ ಬದುಕುವುದೇ ಸರಿ ಎಂಬ ನಿರ್ಧಾರ ಹುಟ್ಟಿತು. 'ಮನೆಬಿಟ್ಟು ಹೊರಡಬೇಕು, ನನ್ನದನ್ನು ನಾನೇ ದುಡಿದುಕೊಳ್ಳಬೇಕು. ಹಂಗಿನರಮನೆ ಇನ್ನು ಸಾಕು' ಎಂದು ಒಂದು ದಿನ ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಮನೆ ಬಿಟ್ಟು ಬಂದಳು. 1972ರಲ್ಲಿ ಮದುವೆಯಾಗಿದ್ದವಳು, 17 ವರ್ಷ ಮನೆಯೆಂಬ ಸೆರೆವಾಸ ಅನುಭವಿಸಿ, 1989ರಲ್ಲಿ ಹೊರಬಂದಳು.

ಬೀದಿ ಅಪರಿಚಿತವೇ ಆಗಿದ್ದರೂ ಮನೆಯಷ್ಟು ಭಯ ಹುಟ್ಟಿಸಲಿಲ್ಲ. ಇಲ್ಲಿ ಕೊನೇಪಕ್ಷ ಆ ಹಿಂಸಾರೂಪಿ ಅವನಿಲ್ಲ ಎಂಬ ನೆಮ್ಮದಿಯಲ್ಲಿ ನಿರಾಳ ಅನುಭವಿಸಿದಳು.

* * *

ತಂದೆ ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ಚೀಫ್ ಎಕ್ಸಾಮಿನರ್ ಆಗಿ ನಿವೃತ್ತರಾಗಿದ್ದರು. ಎಸ್ ಶಾಂತಾಬಾಯಿ ಅಥವಾ ಶಾಂತಮ್ಮ ಕೋಲಾರ ಅಥವಾ ಕುಟೀರದ ಶಾಂತಮ್ಮ ಗಂಡನ ಮನೆ ಬಿಟ್ಟು ಬಂದಾಗ ತವರ ಮನೆಯವರು ಮೊದಲು ಆತಂಕಕ್ಕೊಳಗಾದರು. ಬೇರೆ ದಾರಿಯೇ ಅವಳಿಗಿರಲಿಲ್ಲವೆಂದು ತಿಳಿದಾಗ ಬೆಂಬಲ ನೀಡಿದರು. "ಎಲ್ಲಿಯೇ ಆಗಲಿ, ಹಣಕ್ಕೆ ಕೈಯೊಡ್ಡುವಂತಾದಾಗ ಅವಮಾನ, ದೌರ್ಜನ್ಯ, ನೋವು ಸಹಿಸಬೇಕಾಗುತ್ತದೆ. ರಾಜಿ ಆಗಬೇಕಾಗುತ್ತದೆ. ಅವರ ಜೇಬಿಗೆ ನಾವು ಕೈ ಹಾಕಿದರೆ ಅವರು ನಮ್ಮ ಮೈ ಮೇಲೆ ಕೈ ಹಾಕುತ್ತಾರೆ; ಅದಕ್ಕೆ ಆಸ್ಪದವೇ ಕೊಡಬಾರದು ಎಂದರೆ ತನ್ನ ಹಣ ತಾನೇ ದುಡಿದುಕೊಳ್ಳಬೇಕು," ಎಂದು ನಿರ್ಧರಿಸಿ ಶಾಂತಮ್ಮ ಕೆಲಸ ಹುಡುಕತೊಡಗಿದರು.

ಉದ್ಯೋಗ ಸಿಗುವುದು ಅಷ್ಟು ಸುಲಭವಲ್ಲ. ಆದರೆ, ಸ್ವಾವಲಂಬಿ ಆಗಲೇಬೇಕೆಂದು ಮನಸ್ಸು ಮಾಡಿದರೆ, ಬದುಕುವ ಒಂದಲ್ಲ ಒಂದು ದಾರಿ ತೆರೆದುಕೊಳ್ಳುತ್ತದೆ. ತವರಿನ ರಕ್ತಸಂಬಂಧದ ನಂಟು ಇಟ್ಟುಕೊಂಡರೂ, ಆರ್ಥಿಕವಾಗಿ ತನ್ನ ಕಾಲ ಮೇಲೆ ನಿಲ್ಲಬೇಕು ಎಂದು ಮಕ್ಕಳಿಗೆ ಟ್ಯೂಷನ್ ಹೇಳತೊಡಗಿದರು. ಒಂದನೆಯ ಕ್ಲಾಸಿನ ಮಕ್ಕಳಿಗೆ ಒಂದು ರೂಪಾಯಿ, ಎರಡನೆಯ ಕ್ಲಾಸಿನವರಿಗೆ ಎರಡು ರೂಪಾಯಿ. ಮೊದಲ ತಿಂಗಳು ತಾನೇ ದುಡಿದು ಗಳಿಸಿದ 18 ರೂಪಾಯಿ ಕೈಗೆ ಬಂದಾಗ ಅತೀವ ಆನಂದ ಅನುಭವಿಸಿದರು. ಅದು ತಿಂಗಳ ಬದುಕಿಗೆ ಸಾಲದು, ಆದರೆ ದುಡಿಮೆಗೆ ತಕ್ಕಂತೆ ಬದುಕತೊಡಗಿದರು. "ನಮ್ಮಪ್ಪ ಸೋನಾ ಮಸೂರಿ ಅನ್ನ ತಿನ್ನಿಸಿದ್ದ, ಅಮ್ಮ ಹಾಲು-ತುಪ್ಪ ಹಾಕೋಳು, ಈಗ ಹಿಂಗಾಯ್ತು ಅಂತ ಅಳ್ತಾ ಕೂರಕ್ಕಾಗುತ್ತ? ನಾವು ದುಡಿದಿದ್ರಲ್ಲಿ ಹೆಚ್ಚು ಇದ್ದರೆ ಅನ್ನ ತಿನ್ನು, ಕಡಿಮೆ ಇದ್ರೆ ಬನ್ನು ತಿನ್ನು ಅಷ್ಟೇ. ಯಾರ್ಗೂ ಮೋಸ ಮಾಡದೆ, ಯಾರ ಹೊಟ್ಟೆ ಮೇಲೂ ಹೊಡೀದೇ ಕಷ್ಟಪಟ್ಟು ದುಡಿದು ಗಂಜಿ ಕುಡುದ್ರೂ ಪರ್ವಾಗಿಲ್ಲ, ಆ ಸುಖದ ಮುಂದೆ ಬೇರೆ ಯಾವ ಸುಪ್ಪತ್ತಿಗೇನೂ ಇಲ್ಲ," ಎಂದು ಅರಿತುಕೊಂಡರು.

Image
HSA 3

"ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ, ವೃದ್ಧಾಪ್ಯದಲ್ಲಿ ಮಗ - ಹೀಗೆ ಹೆಣ್ಣು ಸದಾ ಕಾಲ ಒಬ್ಬ ಗಂಡಿನ ಅಧೀನದಲ್ಲಿಯೇ ಬದುಕಬೇಕು," ಎಂಬ ಮನುಧರ್ಮಶಾಸ್ತ್ರದ ನಿರ್ಬಂಧವನ್ನು ಅವರು ಒಡೆಯಲೇಬೇಕಿತ್ತು. ಟ್ಯೂಷನ್ ಜೊತೆಗೆ ಕಸೂತಿ, ಹೆಣಿಗೆಯನ್ನೂ ಕಲಿತರು. ಅವರಿಗೇ ಅಚ್ಚರಿಯಾಗುವಂತೆ, ಜೊತೆಯಿದ್ದ ಇಬ್ಬರು ಮಗಂದಿರ ಮತ್ತು ತಮ್ಮ ಬದುಕು ನಡೆಯುವಷ್ಟು ಸಂಪಾದನೆ ಆಗತೊಡಗಿತು. ಗಂಡನ ಬಳಿಯಿದ್ದ ಹತ್ತು ವರ್ಷದ ಮಗಳ ಕಸ್ಟಡಿಗಾಗಿ, ಮಗಂದಿರನ್ನು ತಮ್ಮ ಬಳಿಯಿಟ್ಟುಕೊಳ್ಳುವ ಹಕ್ಕಿಗಾಗಿ ಹೋರಾಟ ಆರಂಭಿಸಿದರು. ಆ ಕಾನೂನು ಹೋರಾಟವೇ, ಕೌಟುಂಬಿಕ ಮಹಿಳೆಯಾಗಿದ್ದ ಶಾಂತಾಬಾಯಿ, 'ಸಾಮಾಜಿಕ ಹೋರಾಟಗಾರ್ತಿ ಶಾಂತಮ್ಮ' ಆಗಿ ರೂಪುಗೊಳ್ಳಲು ದಾರಿ ಮಾಡಿತು.

ಆಗ ಪರಿಚಯವಾದ ಸಂಸ್ಥೆ 'ಸೆಂಟರ್ ಫಾರ್ ಇನ್‍ಫಾರ್ಮಲ್ ಎಜುಕೇಷನ್ ಅಂಡ್ ಡೆವೆಲಪ್‍ಮೆಂಟ್ ಸ್ಟಡೀಸ್' (ಸಿಯೆಡ್ಸ್). ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ, ಮಹಿಳೆಯರ ರಕ್ಷಣೆಗಾಗಿ ಕೇಂದ್ರಗಳನ್ನು ನಡೆಸುವ, ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳ ಬಗೆಗೆ ಕೆಲಸ ಮಾಡುವ ಆಶಯದೊಂದಿಗೆ ಹುಟ್ಟಿಕೊಂಡ ಸರ್ಕಾರೇತರ ಸಂಸ್ಥೆ ಅದು. ಸಾಮಾಜಿಕ ಹೊಣೆಗಾರಿಕೆ ಇರುವ ಉದಾತ್ತ ಮನಸುಗಳಿಂದ ಆರಂಭವಾದ ಸಂಸ್ಥೆಯು, ದೌರ್ಜನ್ಯ ಎದುರಿಸಿದವರಿಗೆ, ನೊಂದವರಿಗೆ ಸಾಂತ್ವನ ಹೇಳುವ ಕೈಯಾಗಿ, ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ಬೆಳಕಾಗಿ ಕೆಲಸ ಮಾಡತೊಡಗಿತ್ತು. ತುರ್ತು ಪರಿಸ್ಥಿತಿಯ ವೇಳೆ ಹುಟ್ಟಿಕೊಂಡ ಸಂಸ್ಥೆಯಲ್ಲಿ ದೌರ್ಜನ್ಯ ಎದುರಿಸಿ ಗೆದ್ದು ಬಂದ ಛಲಗಾತಿಯರೇ ಕೆಲಸ ಮಾಡುತ್ತ ಮುನ್ನಡೆಸುತ್ತಿದ್ದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹೇಗಿದ್ದವಳು ಹೀಗಾದಳು - ಸೀಮಾ ಪರಿಹಾರ್

ಅಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಲೇ ಶಾಂತಮ್ಮ ತನ್ನ ಬದುಕಿನ ಮಾರ್ಗಗಳನ್ನು ಗಟ್ಟಿ ಮಾಡಿಕೊಂಡರು. ನೊಂದವಳು ತಾನೊಬ್ಬಳಷ್ಟೇ ಅಲ್ಲ, ತನ್ನಂತೆ ಹಲವರು ಅಗ್ನಿಪರ್ವತದ ಬಾಯಿಯಲ್ಲಿ ಬದುಕು ನಡೆಸುತ್ತಿರುವವರು ಎಂದು ಅರಿವಾಯಿತು. ಆ ವೇಳೆಗೆ ಮುಂಬೈನ ಕಾಮಾಟಿಪುರಕ್ಕೆ ವೇಶ್ಯಾವೃತ್ತಿಗೆಂದು ಕಳ್ಳಸಾಗಾಟವಾಗಿ ಮಾರಲ್ಪಟ್ಟ 400 ಹೆಣ್ಣುಮಕ್ಕಳನ್ನು ಕೇಂದ್ರ ಸರ್ಕಾರ ರಕ್ಷಿಸಿ ಕರೆತಂದಿತು. ಬೇರೆ-ಬೇರೆ ರಾಜ್ಯಗಳಿಗೆ ಸೇರಿದ ಹೆಣ್ಣುಮಕ್ಕಳಲ್ಲಿ 92 ಮಕ್ಕಳು ಕರ್ನಾಟಕದವರು. ಅವರಲ್ಲಿ ಕೆಲವರಾಗಲೇ ಬಸುರಿಯರಾಗಿದ್ದರು. ಅವರನ್ನು ಬೆಂಗಳೂರಿನ ಸ್ಟೇಟ್ ಹೋಂಗೆ ಕಳಿಸುವ ಮುನ್ನ ಮುಂಬೈ ಉಚ್ಚ ನ್ಯಾಯಾಲಯವು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತೆಯರನ್ನೂ ಮಕ್ಕಳ ಮೇಲ್ವಿಚಾರಣೆಗೆ ನೇಮಿಸಬೇಕು ಎಂದು ಹೇಳಿತು. ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆಯ ಮೇಲ್ವಿಚಾರಣೆ ಕೆಲಸ ವಹಿಸಿಕೊಂಡ ಶಾಂತಮ್ಮ, ಪ್ರತಿ ಶನಿವಾರ ಅಲ್ಲಿಗೆ ಹೋಗುತ್ತಿದ್ದರು. ತಿಂಡಿ, ಊಟ, ಹಣ್ಣು-ಹಂಪಲು, ಜೊತೆಗೆ ಸಮೃದ್ಧ ಪ್ರೀತಿಯನ್ನು ಹೊತ್ತು ತರುತ್ತಿದ್ದ ಅವರನ್ನು ಮಕ್ಕಳು, "ಅಮ್ಮ..." ಎಂದೇ ಕರೆಯತೊಡಗಿದರು. ಅವರಲ್ಲಿ ಹೋದಾಗ ಮಕ್ಕಳು ಮೈಮೇಲೆ ಬೀಳುವುದೇನು, ಕಣ್ಣಾಮುಚ್ಚಾಲೆ ಆಡುವುದೇನು, ಮುತ್ತಿಕ್ಕುವುದೇನು... ಆ ಮಕ್ಕಳ ಪ್ರೀತಿಯೆದುರು ಕರಗಿಹೋದರು. ಮಕ್ಕಳಿಗೆ ಸಿಗದ ಸೌಲಭ್ಯಗಳಿಗಾಗಿ ಹೋರಾಡಿದರು. ತಮ್ಮ ತಾಯ್ತನವನ್ನೆಲ್ಲ ಮಕ್ಕಳಿಗೆ ಧಾರೆ ಎರೆದರು. ಬಾಣಂತನ, ಕೂಸಿನ ನಾಮಕರಣ ಎಲ್ಲವನ್ನೂ ಸಂಭ್ರಮದಿಂದ ನಡೆಸಿದರು.

ಆ ವೇಳೆಗೆ ನ್ಯಾಯಾಲಯದಲ್ಲಿ ತನ್ನ ಕಸ್ಟೋಡಿಯನ್ ಯಾರಾಗಿರಬೇಕು ಎಂದು 15 ವರ್ಷ ವಯಸ್ಸಿನವಳಾದ ಮಗಳೇ ನಿರ್ಧರಿಸುವ ಕಾಲ ಬಂತು. ಅಂದು ನ್ಯಾಯಾಲಯದ ಕಟಕಟೆಯಲ್ಲಿ ನಿಂತ ಮಗಳು, ಅಮ್ಮನ ಕಡೆಗೂ ನೋಡದೆ, "ಅಮ್ಮನ ಜೊತೆ ಹೋಗಲು ಇಷ್ಟವಿಲ್ಲ. ನನಗೆ ಅಮ್ಮ ಬೇಡ. ಅಪ್ಪನ ಜೊತೆಗೇ ಇರುವೆ," ಎಂದು ಹೇಳಿಬಿಟ್ಟಳು.

ಹೆತ್ತ ಅಮ್ಮನನ್ನು ಮಗಳು ಬೇಡ ಎನ್ನುವುದೇ? ಶಾಂತಮ್ಮ ತಮ್ಮ ಬದುಕಿನ ಅತಿ ಕಠೋರ ಆಘಾತ ಎದುರಿಸಿದರು. ತನ್ನ ಹೋರಾಟ, ದುಡಿಮೆ ಎಲ್ಲ ವ್ಯರ್ಥವಾಯಿತೇ ಎಂಬ ಭಾವ ಸುಳಿದುಹೋಯಿತು. ಆದರೆ, ಅದನ್ನು ಅರಗಿಸಿಕೊಂಡ ಮರುಕ್ಷಣ ಮಿಂಚಿನಂಥ ನಿರ್ಧಾರವೊಂದು ಸುಳಿಯಿತು. "ಅಮ್ಮ ಬೇಡ ಎನ್ನುವ ಮಗಳಿಗಾಗಿ ತಾನೇಕೆ ಹೋರಾಡಬೇಕು? ಅಮ್ಮ ಬೇಕು ಎನ್ನುವ, ಅಮ್ಮನಿಲ್ಲದ, ತನ್ನಲ್ಲಿ ಅಮ್ಮನನ್ನು ಕಾಣುವ ಸಾವಿರಾರು ಮಕ್ಕಳಿರುವಾಗ ಅವರಿಗೆ ಅಮ್ಮನಾಗುತ್ತೇನೆ. ಹೆತ್ತ ಮಕ್ಕಳಷ್ಟೇ ಮಕ್ಕಳಲ್ಲ. ಇನ್ನು ನನ್ನ ಮಕ್ಕಳಿಗಾಗಿ ಅಳುವುದಿಲ್ಲ," ಎಂದು ನಿಶ್ಚಯಿಸಿದರು. ಇದುವರೆಗೆ ಯಾವ ತಂದೆ, ಆ ಮಗಳು ತನ್ನ ಮಗಳಲ್ಲ ಎಂದು ಅನುಮಾನಿಸುತ್ತಿದ್ದನೋ, ಈಗ ಅದೇ ಮಗಳ ಕಸ್ಟಡಿಯನ್ನು ತಾಯಿಗೆ ಕೊಡಲಾರೆ ಎಂದು ಸಾಧಿಸಿದ್ದ; ಮತ್ತವಳನ್ನು ನಿಜವಾಗಿಯೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಶಾಂತಮ್ಮನವರಿಗೆ ಇದೂ ಒಂದು ತರಹದ ವಿಜಯವೇ ಅನಿಸಿ ಕೂಡಲೇ ವಿಚ್ಛೇದನ ಪಡೆದುಕೊಂಡರು.

Image
HSA 5

ಸ್ಟೇಟ್ ಹೋಂನ ಮಕ್ಕಳು ಶಾಂತಮ್ಮ ಅವರ ತಾಯ್ತನವನ್ನು ಜಾಗೃತಗೊಳಿಸಿದ್ದರು. ಈಗದರ ವ್ಯಾಪ್ತಿ ವಿಸ್ತಾರಗೊಳ್ಳುತ್ತ ಹೋಯಿತು. ಅದಕ್ಕೆ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಕೆಲಸ ಕಾರ್ಯಗಳು ನೀರೆರೆದವು. ಕೋಲಾರದ ಹೊರಭಾಗದಲ್ಲಿರುವ ಅಂದ್ರ ಹಳ್ಳಿಯಲ್ಲಿ ಸಂಸ್ಥೆಯ ವತಿಯಿಂದ ಶುರುವಾದ ಕುಟೀರವು, ಗತಿಯಿಲ್ಲ ಎಂದುಕೊಂಡು ಬಂದ, ದೌರ್ಜನ್ಯಕ್ಕೊಳಗಾದ, ಅಸಹಾಯಕರಾದ ಸಾವಿರಾರು ಹೆಣ್ಣುಮಕ್ಕಳಿಗೆ ಆಶ್ರಯತಾಣವಾಗಿ ನ್ಯಾಯದ ದಾರಿ ತೋರಿಸಿತು. ಹೆಣ್ಣು ಕಣ್ಣೀರುಗರೆಯುತ್ತ ಸುಮ್ಮನೆ ಕೂರದಂತೆ ತಡೆದು, ಬದುಕುವ ಧೈರ್ಯವನ್ನು ತಂದುಕೊಟ್ಟಿತು. ಆ ಸಂಸ್ಥೆಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿ ಶಾಂತಮ್ಮ ಬೆಳೆದರು. ಶಾಂತಕ್ಕ, ಶಾಂತಾ, ಶಾಂತಾಬಾಯಿ, ಶಾಂತಮ್ಮ, ಶಾಂತಜ್ಜಿ ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಅವರಿಂದ ಮಮತೆ, ಧೈರ್ಯ, ವಿಶ್ವಾಸ, ಸಹಾಯಗಳನ್ನು ಸಾವಿರಾರು ಜೀವಗಳು ಪಡೆದವು.

ಬದುಕಿನ ಮತ್ತೊಂದು ಮುಖ ಅಲ್ಲಿ ತೆರೆದುಕೊಂಡಿತು. ಮನೆ ಬಿಟ್ಟು ಬರುವವರು ಎಲ್ಲವನ್ನು ಅಲ್ಲಿಯೇ ಬಿಟ್ಟು ಬಂದು, ಯಾವುದೂ ದಾಖಲೆಯಿಲ್ಲದೆ ಪರದಾಡುತ್ತಿದ್ದರು. ಮದುವೆ, ಗಂಡನ ಮನೆಯ ವಾಸವೇ ಹೆಣ್ಣು ಬದುಕಿನ ಆತ್ಯಂತಿಕ ಗುರಿ; ಎಂದಿದ್ದರೂ ತಾವು ಮತ್ತೆ ಅಲ್ಲಿಗೆ ಹೋಗಬೇಕಾದವರೆಂಬ ಒತ್ತಡಕ್ಕೊಳಗಾಗುತ್ತಿದ್ದರು. ಹಾಗೆಂದು ಅವರಷ್ಟೇ ಅಲ್ಲ, ಕೌಟುಂಬಿಕ ನ್ಯಾಯಾಲಯ, ಮಹಿಳಾ ಪರ ಇಲಾಖೆ- ಸಂಸ್ಥೆ- ಸರ್ಕಾರಗಳೂ ನಂಬಿದ್ದವು. ಮನೆ ಬಿಟ್ಟು ಬಂದ ಹೆಣ್ಣುಮಕ್ಕಳ ಪ್ರಕರಣ ದಾಖಲಿಸಿ, 'ಗುರುತು ಪತ್ತೆ ಮಾಡಿ ಪಾಲಕರಿಗೆ ಒಪ್ಪಿಸಲಾಗಿದೆ,' 'ಗುರುತು ಪತ್ತೆ ಮಾಡಿ ಗಂಡನಿಗೆ ಒಪ್ಪಿಸಲಾಗಿದೆ,' 'ಗುರುತು ಪತ್ತೆ ಮಾಡಿ ಮಗನಿಗೆ ಒಪ್ಪಿಸಲಾಗಿದೆ' ಎಂದು ಒಪ್ಪಿಸಿಬಿಡುತ್ತಿದ್ದರು. ಹೊಸಿಲು ದಾಟುವುದು ಹೆಣ್ಣಿಗೆ ಅತಿ ಕಷ್ಟದ ಕ್ಷಣ. ಆ ಸಮಯದ ಹೆಣ್ಣಿನ ಮನಃಕ್ಲೇಷ, ಪರಿಸ್ಥಿತಿಯನ್ನು ಅವಲೋಕಿಸದೆ, ಮನೆಯ ಮರ್ಯಾದೆ ಕಾಪಾಡುವ ಸಲುವಾಗಿ ಮತ್ತೆ ಅವರನ್ನು ಅದೇ ಕೂಪಕ್ಕೆ ತಳ್ಳಿ 'ಒಪ್ಪಿಸಿಬಿಡುವ' ಕ್ರಮ ಸರಿಯಲ್ಲ ಎಂದು ಶಾಂತಮ್ಮ ಮತ್ತವರ ಸಹವರ್ತಿಗಳಿಗೆ ಅನಿಸುತ್ತಿತ್ತು. ಮನೆಯಿಂದ ಬಂದವಳಿಗೆ ಮರಳಿ ಹೋಗುವ ಇಷ್ಟವಿದೆಯೋ ಇಲ್ಲವೋ ಎಂದು ತಿಳಿದು ಒಪ್ಪಿಸಬೇಕೆಂದು ಹೋರಾಡಿದರು.

ಶಾಂತಮ್ಮ ಮತ್ತು ಸಂಗಾತಿಗಳು ತಮ್ಮ ಕೆಲಸದಲ್ಲಿ ಎದುರಿಸಿದ ಅಡೆ-ತಡೆ ಒಂದೆರೆಡಲ್ಲ. ನೊಂದವರೂ ಇವರನ್ನು ಬಡಪೆಟ್ಟಿಗೆ ನಂಬಿಬಿಡಲಿಲ್ಲ. ಅಲ್ಲೂ ಅಗ್ನಿದಿವ್ಯಗಳ ಅಂಗೈಲಿ ಹಿಡಿದು ದಾಟಿದರು. ಗಂಡ-ಹೆಂಡತಿಯರನ್ನು ಕೂಡಿಸುವ ಬದಲು, ಹೆಂಡತಿ ಬೇರೆ ಇರಲು ಸಹಾಯ ಮಾಡುವ 'ಮನೆಹಾಳಿ'ಯರೆಂದು ಕೆಲವರು ಜರೆದರು. ಹೀಗೊಂದು ಸಂಸ್ಥೆ, ಒಂದು ಮಹಿಳಾ ಗುಂಪು ಯಾರೂ ಕೇಳದ ತಮ್ಮನ್ನು ಬೇಷರತ್ತಾಗಿ ಬೆಂಬಲಿಸುತ್ತಿದೆ, ಸಹಾಯಕ್ಕೆ ಒದಗುತ್ತದೆ ಎನ್ನುವುದನ್ನು ಅರಗಿಸಿಕೊಳ್ಳಲಿಕ್ಕೇ ನೊಂದ ಮಹಿಳೆಯರಿಗೆ ಕಷ್ಟವಾಗುತ್ತಿತ್ತು. ಇವರ ಮೇಲೇ ಅನುಮಾನಗೊಂಡು ಹೇಳದೆ-ಕೇಳದೆ ಹಿಂತಿರುಗಿ ಹೋಗಿ ಮತ್ತೆ ದೌರ್ಜನ್ಯಕ್ಕೊಳಗಾಗುವುದೂ ಇತ್ತು. ಅಪಾರ ತಾಳ್ಮೆಯಿಂದ, ದಿಟ್ಟತನದಿಂದ, ಆತ್ಮಸ್ಥೈರ್ಯದಿಂದ ಶಾಂತಮ್ಮ ಅಂಥದ್ದನ್ನೆಲ್ಲ ಎದುರಿಸಿದರು. ಅವರಿಗೆ ಉದ್ದಕ್ಕೂ ಜೊತೆ ನೀಡಿದ ಗೆಳತಿಯರು, ಸಂಘ-ಸಂಸ್ಥೆಗಳ ಬೆಂಬಲದಿಂದ ಒಂದೇ ಸಮ ಮುನ್ನಡೆದರು. ಜೊತೆಗಾರಿಕೆಯೂ ಸರಳವಾಗಿರಲಿಲ್ಲ. ಎಲ್ಲ ಸಂಘ-ಸಂಸ್ಥೆಗಳಲ್ಲಿರುವವರಿಗೂ ಹೋರಾಟಗಾರರಿಗೂ ಆವಾಗಿವಾಗ ಹೆಡೆಯೆತ್ತುವ ಅಹಂ ನಿಸ್ಪೃಹವಾಗಿರುವ, ನೇರವಾಗಿರುವ ಶಾಂತಮ್ಮನಂಥವರನ್ನು ಬಿಕ್ಕಟ್ಟಿಗೆ ಈಡುಮಾಡುತ್ತಿತ್ತು. ಆದರೆ, ಯಾವುದಕ್ಕೂ ಅಂಜದೆ, ಅಳುಕದೆ ತಮ್ಮ ಗುರಿಯತ್ತ ಪ್ರಾಮಾಣಿಕವಾಗಿ ಒಂದೇ ಸಮ ನಡೆದರು. 

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ ದಾಕ್ಷಾಯಿಣಿ ವೇಲಾಯುಧನ್

ಹೀಗೆ... ಒಳಗೂ, ಹೊರಗೂ ಕನ್ನಡಿ ಹಿಡಿದು ಕಪ್ಪು-ಬಿಳಿ ಯಾವುದೆಂದು ಗುರುತಿಸುತ್ತ, ದಾರಿಯನ್ನು ನೇರ್ಪುಗೊಳಿಸಿಕೊಳ್ಳುತ್ತ 71ರ ಹರೆಯ ತಲುಪಿರುವ ಶಾಂತಮ್ಮ, ಈಗ ಕೋಲಾರದಲ್ಲಿ ನೆಲೆಸಿದ್ದಾರೆ. ಸಂಘಟನೆ, ಹೋರಾಟದ ನಡುವೆ ತಮ್ಮೊಡನಿದ್ದ ಇಬ್ಬರು ಗಂಡುಮಕ್ಕಳನ್ನು ಓದಿಸಿದ್ದಾರೆ. ಉದ್ಯೋಗ ಹಿಡಿದು ನೆಲೆಯಾದ ಮೇಲೆ ಇಬ್ಬರಿಗೂ ಮದುವೆ ಮಾಡಿದ್ದಾರೆ.

ಅವರ 60ನೆಯ ವಯಸ್ಸಿನಲ್ಲಿ ಸೊಸೆಯಂದಿರು ಪ್ರೀತಿಯ ಒತ್ತಾಯ ತಂದರೂ ಕೇಳದೆ, ಒಬ್ಬರೇ ಬದುಕುವ ನಿರ್ಧಾರ ಮಾಡಿದರು. ಮನುಧರ್ಮಶಾಸ್ತ್ರ ಹೇಳಿದಂತೆ ಮುಪ್ಪಿನಲ್ಲಿ ಮಗಂದಿರ ಆಸರೆಯಲ್ಲಿ ಬದುಕಬೇಕೆನ್ನುವುದನ್ನು ಮುರಿಯಬಯಸಿ ಬೇರೆ ಮನೆ ಮಾಡಿದರು. ತಮ್ಮ ಮನೆಯಲ್ಲಿ ತಾವೇ ಆಗಿ ಒಬ್ಬರೇ ಇರತೊಡಗಿದರು. "ಮನೆಗೆಲಸಕ್ಕೆ ಇದ್ದರೆ ಅವರು ಅದು ಮಾಡಲಿಲ್ಲ, ಇದು ಮಾಡಲಿಲ್ಲ, ಲೇಟ್ ಬಂದರು, ರಜೆ ತಗೊಂಡರು ಮುಂತಾಗಿ ಗೊಣಗುತ್ತೇವೆ. ಒಬ್ಬರೇ ಇದ್ದರೆ? ಏಳಲು ಆದರೆ ಎದ್ದು ಕಾಫಿ ಮಾಡಿ ಕುಡಿಯುವುದು, ಅಡುಗೆ ಮಾಡುವುದು. ಇಲ್ಲದಿದ್ದರೆ ಗಾಡಿಯಲ್ಲಿ ಬರುವ ಇಡ್ಲಿಯೋ, ಬನ್ನೋ ತಿನ್ನುವುದು," ಎಂದು ತಮ್ಮ ಎಲ್ಲ ಅವಶ್ಯಕತೆಗಳನ್ನು ಅತಿ ಮಿತಗೊಳಿಸಿಕೊಂಡು ಬದುಕತೊಡಗಿದರು. ಕೋಲಾರ ಜಿಲ್ಲಾ ಕಾನೂನು ಸಲಹಾ ಪ್ರಾಧಿಕಾರದಲ್ಲಿ ಪ್ಯಾರಾಲೀಗಲ್ ವಾಲಂಟಿಯರ್ ಆಗಿ, ನೊಂದ ಮಹಿಳೆಯರ ಆಸರೆಯಾಗಿ ಮಾಡಬೇಕಾದ ಕೆಲಸ ಕೈ ತುಂಬ ಇರುವುದರಿಂದ ಏಕಾಂಗಿತನ, ಭಯದ ಪ್ರಶ್ನೆಯೇ ಅವರಿಗಿಲ್ಲ. ಇದುವರೆಗೆ ಹತ್ತು ಶಸ್ತ್ರಚಿಕಿತ್ಸೆಗಳನ್ನು ಕಂಡ ಅವರು ಆತ್ಮವಿಶ್ವಾಸ, ಧೈರ್ಯದಿಂದ ಸ್ವಾವಲಂಬಿಯಾಗಿ, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಮಾಡದ ಕೆಲಸಗಳು ಇನ್ನೂ ಎಷ್ಟು ಉಳಿದಿವೆಯಲ್ಲ ಎಂಬ ಅತೃಪ್ತಿ ಸದಾ ಕೊರೆಯುತ್ತಿದ್ದರೂ, ಅಂದುಕೊಂಡ ಹಾಗೆ ಬದುಕುತ್ತಿರುವ ಬಗೆಗೆ ಅವರಿಗೆ ತೃಪ್ತಿ ಇದೆ.

Image
HSA 1

ಈಗ ಕೋಲಾರದ ಆಸುಪಾಸಿನ ಯಾವುದೇ ಹೆಣ್ಣುಜೀವ, "ನೊಂದೆ..." ಎಂದುಕೊಂಡರೆ, ನೆನಪಿಗೆ ಬರುವ ಹೆಸರುಗಳಲ್ಲಿ, ಸಹಾಯಕ್ಕೆ ಧಾವಿಸುವವರಲ್ಲಿ ಶಾಂತಮ್ಮ ಮೊದಲಿಗರಾಗಿದ್ದಾರೆ. ದಿಕ್ಕಿಲ್ಲದ ಹೆಣ್ಣುಗಳಿಗೆ ಸಾಯುವುದೊಂದೇ ದಾರಿ ಅಲ್ಲ, ಬೇರೆ ದಾರಿಗಳೂ ಇವೆ ಎಂದು ಸ್ವಾನುಭವದ ಮಾತುಗಳಿಂದ ತಿಳಿಸಿ ಹೇಳುವ ಅವರು, ಹೆಣಿಗೆ, ಕಸೂತಿ, ಹೊಲಿಗೆ, ಕುಂಬಾರಿಕೆ, ಮಡಕೆ ಮೇಲೆ ಚಿತ್ರ ಬರೆಯುವುದೇ ಮೊದಲಾದ ಕೈ ಕೆಲಸ ಕಲಿಸಿ, ಸ್ವಾವಲಂಬಿ ಬದುಕನ್ನು ಪ್ರೋತ್ಸಾಹಿಸುತ್ತಾರೆ. "ಮನೆಬಿಟ್ಟು ಬರುವ ಮುನ್ನ ಯೋಚಿಸಿ ಬನ್ನಿ; ಬರಿಗೈಯಲ್ಲಿ ಬರದೆ, ನಿಮ್ಮ ಎಲ್ಲ ದಾಖಲೆಗಳನ್ನು ಎತ್ತಿಕೊಂಡು ಬನ್ನಿ; ಮೊದಲು ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಗತ ಸ್ವಾತಂತ್ರ್ಯ ಪಡೆದುಕೊಳ್ಳಿ. ಬಳಿಕ ಉಳಿದ ಬಿಡುಗಡೆಯ ದಾರಿಗಳು ತಾವೇ ತೆಗೆದುಕೊಳ್ಳುತ್ತವೆ," ಎಂದು ಹೆಣ್ಣುಜೀವಗಳಿಗೆ ಸಲಹೆ ಕೊಡುತ್ತಾರೆ. ಜೀವನ ಶಾಲೆಯ ಪಾಠಗಳನ್ನು ಸಂಘ-ಸಂಸ್ಥೆಗಳ ಜೊತೆಗೆ, ಹಂಪಿ ಕನ್ನಡ ವಿವಿ, ವಿಜಯಪುರ ಮಹಿಳಾ ವಿವಿ ಮೊದಲಾದೆಡೆ ಹಂಚಿಕೊಂಡಿದ್ದಾರೆ. ಕೋಲಾರಮ್ಮನ ಮಗಳು, ಕೋಲಾರದ ಅಮ್ಮ ಶಾಂತಮ್ಮ ಸಹಾಯ ಕೇಳಿ ಬರುವವರಿಗೆಲ್ಲ ಆಸರೆಯಾಗಿದ್ದಾರೆ. ತಾಯ್ತನದ ಜೊತೆಗೆ ದಿಟ್ಟತನ, ಸ್ವಾವಲಂಬನೆ, ಆತ್ಮಸ್ಥೈರ್ಯವನ್ನು ಹಂಚುತ್ತ ಕ್ರಿಯಾಶೀಲರಾಗಿದ್ದಾರೆ.

* * * *

ಟಿಪ್ಪಣಿ | ಪ್ರಶಸ್ತಿಗಳನ್ನು ಅವರು ಬಯಸದಿದ್ದರೂ ಪ್ರಶಸ್ತಿಗಳೇ ಅವರನ್ನು ಅರಸಿ ಬರುವಂತೆ ಬದುಕಿದ್ದಾರೆ. ಇಂತಹ ದಿಟ್ಟ ಮಹಿಳೆಯ ಹೋರಾಟದ ಕೆಚ್ಚನ್ನು, ಉದಾತ್ತ ಗುಣಗಳನ್ನು, ಸಾಮೂಹಿಕತೆಯ ಸ್ಫೂರ್ತಿಯನ್ನು ಗುರುತಿಸಿ, 'ಮೇ ಸಾಹಿತ್ಯ ಮೇಳ-2022'ರ ಬಳಗವು, 'ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ -2022' ಅನ್ನು ಶಾಂತಮ್ಮ ಅವರಿಗೆ ನೀಡಿ ಗೌರವಿಸಲು ಬಯಸಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್