ಹೊಸಿಲ ಒಳಗೆ-ಹೊರಗೆ | ಹೆಣ್ಣು, ಲೆಸ್ಬಿಯನ್, ಗೇ, ಕ್ವೀರ್, ಗಂಡು... ಯಾರಿಗೇ ಆಗಲಿ, ಮನೆಗೆಲಸ ಹೊರೆಯಾಗದಿರಲಿ

ಹೋಟೆಲಿನಲ್ಲಿ ಅಡುಗೆ ಕೆಲಸ ಮಾಡುವ ಯುವಕನೊಬ್ಬನಿಗೆ ಪ್ರತೀ ಭಾನುವಾರದಂದು ರಜೆ. ಆಗೆಲ್ಲ ಆತ ಮನೆಗೆ ಹೋಗಿ ಬಿದ್ದುಕೊಳ್ಳುತ್ತಿದ್ದ. ಆದರೆ, ಅದೊಂದು ದಿನ ಆತನಿಗೆ ಥಟ್ಟನೆ ಹೊಳೆಯಿತು - ಇಡೀ ವಾರ ತಾನು ಹೋಟೆಲಿನಲ್ಲಿ ದುಡಿಯುತ್ತಿದ್ದಂತೆಯೇ ಅಮ್ಮ ಮನೆಯಲ್ಲಿ ದುಡಿಯುತ್ತಾಳಲ್ಲವೇ? ನಂತರ ಆತನೂ ಅಮ್ಮನೊಟ್ಟಿಗೆ ಅಡುಗೆ ಮಾಡತೊಡಗಿದ

ಮನೆಗೆಲಸದ ಬಗ್ಗೆ ಮಾತಾಡಿದಷ್ಟೂ ಮುಗಿಯುವುದಿಲ್ಲ. ಯಾಕೆಂದರೆ, ಅದು ಮಾಡಿದಷ್ಟೂ ಮುಗಿಯುವುದಿಲ್ಲ. (ಇಲ್ಲಿ ಮಾತಾಡುತ್ತಿರುವುದು ಸ್ವಂತ ಮನೆಗೆಲಸದ ಬಗ್ಗೆ, ಮನೆಗೆಲಸದ ಉದ್ಯೋಗದ ಬಗ್ಗೆ ಅಲ್ಲ.) ಅಡುಗೆ ಕೆಲಸವನ್ನೇ ತೆಗೆದುಕೊಂಡರೂ, ಮನೆಮಂದಿಗೆಲ್ಲ ಬೇಕಾದ ಹಾಗೆ ಅದನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಬೆಳಗ್ಗೆಗೆ ಏನು, ಮಧ್ಯಾಹ್ನಕ್ಕೆ ಏನು, ಸಂಜೆಗೆ ಏನು, ರಾತ್ರಿಗೆ ಏನು ಎನ್ನುವಷ್ಟರ ಮಟ್ಟಿಗೆ ಹೋಗುತ್ತದೆ ಕೆಲವು ಮನೆಗಳಲ್ಲಿ. ಪ್ರತಿಯೊಂದು ಹೊತ್ತು ಹೊಚ್ಚ ಹೊಸ ಆಹಾರ ಸಿದ್ಧವಿರಬೇಕು. ಬೆಳಗಿನಿಂದ ರಾತ್ರಿ ತನಕ ಈ ಮಾಡಿ, ಮಾಡಿ, ಮಾಡಿ ಹಾಕುವ ಕೆಲಸವು ಕಬಳಿಸುವ ಸಮಯ, ಶ್ರಮ, ಚೈತನ್ಯವನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ. "ಆಹಾ, ಚೆನ್ನಾಗಿದೆ,” ಅಂತ ಮನೆ ಮಂದಿ ಮಕ್ಕಳು ರುಚಿ-ರುಚಿಯಾಗಿ ಸವಿದು ಉಣ್ಣುವುದರಲ್ಲಿ ಆಕೆಯ ‘ಬದುಕಿನ ಸಾರ್ಥಕತೆ’ ಅಡಗಿದೆ ಅಂತ ಬಹಳ ಮಂದಿ ತಿಳಿದುಕೊಂಡದ್ದೂ ಇದೆ.

ಇದರ ಅರ್ಥ ಹೆಣ್ಣುಮಕ್ಕಳು ಈ ಕೆಲಸ ಮಾಡಲೇಬಾರದು ಎಂದಲ್ಲ ಅಥವಾ ಈ ಕೆಲಸದಲ್ಲಿ ಖುಷಿ ಕಂಡುಕೊಳ್ಳಬಾರದು ಎಂದೂ ಅಲ್ಲ. ನಮ್ಮವರಿಗಾಗಿ ನಾವು ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವುದು, ಅವರುಗಳು ಅದನ್ನು ಸವಿದು ಉಣ್ಣುವುದು ಒಂದು ಚಂದದ ಅನುಭವ. ಪ್ರೀತಿ, ಮಮತೆ ತೋರಿಸುವ ಹಲವಾರು ರೀತಿಗಳಲ್ಲಿ ಇದೂ ಒಂದು ಅಂತ ಒಪ್ಪಿಕೊಳ್ಳೋಣ. ಸಾಮಾಜಿಕವಾಗಿ ಹೇರಲ್ಪಟ್ಟ ಕೆಲಸವಾಗಿದ್ದರೂ, ಅದೆಷ್ಟೋ ಮಂದಿ ಹೆಣ್ಣುಮಕ್ಕಳು ಇದನ್ನು ತಮ್ಮ ಕೆಲಸವೆಂದು ಸ್ವೀಕರಿಸಿ, ಯಾವುದೇ ಗೊಣಗಾಟ ಮಾಡದೆ, ಮನಸಾರೆ ಈ ಕೆಲಸವನ್ನು ಮಾಡುವುದನ್ನೂ ಕಂಡಿದ್ದೇವೆ. ಅಂತೆಯೇ, ಈ ಕೆಲಸದಲ್ಲೇ ಬದುಕು ಸವೆಸಬೇಕಲ್ಲ ಎಂದು ಮೌನವಾಗಿ ಸಹಿಸಿಕೊಂಡು ತಮ್ಮನ್ನು ತಾವು ಕಳೆದುಕೊಂಡಂತೆ ಪರಿತಪಿಸುವುದನ್ನೂ ಕಂಡಿದ್ದೇವೆ. ಏನೇ ಇರಲಿ, ಈ ಕೆಲಸದಲ್ಲಿ ಹೆಣ್ಣುಮಕ್ಕಳು ಸಂಪೂರ್ಣ ಬಂಧಿತರಾಗಿಬಿಡುವುದು ನ್ಯಾಯ ಅಲ್ಲ ತಾನೇ? ಆಕೆಯ ಬದುಕಿನ ಸಾರ್ಥಕತೆಯನ್ನು ಅದರಲ್ಲಿಯೇ ಮುಳುಗಿಸಿಬಿಡಬಾರದು ತಾನೇ? ಅದೆಷ್ಟೋ ಮಂದಿ ಹೆಣ್ಣುಮಕ್ಕಳು, ತಮ್ಮ ಉದ್ಯೋಗದಲ್ಲಿ ಬಡ್ತಿ ಸಿಕ್ಕರೂ ತೆಗೆದುಕೊಳ್ಳುವುದಿಲ್ಲ, ತಮ್ಮ ಆಸಕ್ತಿ-ಹವ್ಯಾಸಗಳನ್ನು ಮುಂದುವರಿಸುವುದಿಲ್ಲ ಅಥವಾ ಆಸಕ್ತಿ-ಹವ್ಯಾಸಗಳನ್ನು ಮನೆಯ ಸೀಮಿತ ಚೌಕಟ್ಟಿಗೆ ಅನುಕೂಲವಾಗುವಂತೆ ಬೆಳೆಸಿಕೊಳ್ಳುತ್ತಾರೆ. ಇಂತಹ ಹೆಣ್ಣುಮಕ್ಕಳ ಎಂತೆಂತಹ ಕನಸುಗಳು, ಆಶಯಗಳು, ಸಾಧ್ಯತೆಗಳು ಕಮರಿಹೋಗಿರಬಹುದು ಎಂಬುದು ಊಹೆಗೆ ಮೀರಿದ್ದು. ಇಂತಹ ಸೂಕ್ಷ್ಮಗಳನ್ನು ಮನೆಯ ಇತರ ಸದಸ್ಯರು ನಿಜವಾದ ಕಾಳಜಿಯಿಂದ ಗಮನಿಸಿದರೆ, ಅವಳ ಬದುಕು ಮನೆಯಿಂದಾಚೆಗೂ ವಿಸ್ತರಿಸಿಕೊಳ್ಳುವ ಅವಕಾಶ ತೆರೆಯಬಹುದಲ್ಲವೇ?

Image
ಸಾಂದರ್ಭಿಕ ಚಿತ್ರ

"ಪುರುಷರು ಯಾಕೆ ಸಲೀಸಾಗಿ ಮನೆಗೆಲಸ ಮಾಡುವುದಿಲ್ಲ?” ಎಂದು ಪ್ರಶ್ನೆ ಎತ್ತಿದರೆ, "ಅವರಿಗೆ ರೂಢಿ ಆಗಿಲ್ಲ, ಹಿಂದಿನಿಂದಲೂ ನಡೆದುಬಂದಿಲ್ಲ, ಹೊರಗೆ ಕೆಲಸ ಮಾಡುತ್ತಾರೆ ತಾನೇ, ಅದರಲ್ಲೇ ಸಾಕಾಗಿ ಹೋಗಿರುತ್ತದೆ, ಕೆಲವೊಮ್ಮೆ ಗಂಡಸರು ಕೆಲಸ ಮಾಡುವಾಗ ನೋಡಿದವರು ತಮಾಷೆ ಮಾಡುತ್ತಾರೆ, ಹೆಂಡ್ತಿ ಗುಲಾಮ ಅಂತ ಹೇಳ್ತಾರೆ...” – ಎಂಬಿತ್ಯಾದಿ ಸಾಮಾನ್ಯ ಉತ್ತರಗಳು ಬರುತ್ತವೆ. ಎಂಟನೇ ತರಗತಿಯ ಒಬ್ಬ ಪುಟ್ಟ ಹುಡುಗನಿಗೆ ಕೂಡ ತಾನು ನೆಲ ಒರೆಸುತ್ತಿರಬೇಕಾದರೆ ಯಾರೋ ಬಂದರೆಂದರೆ ನಾಚಿಕೆ ಎನಿಸಿ ಅಡಗಿಕೊಳ್ಳುವ ಹಾಗೆ ಆಗುತ್ತದೆ! ಮನೆಗೆಲಸ ಗಂಡಸರಿಗೆ ರೂಢಿ ಆಗಿಲ್ಲ ಎಂಬುದು ಒಂದಾದರೆ, ಮನೆಗೆಲಸ ಮಾಡುವುದು ಅವಮಾನಕರ ಅಂತಾಗಿರುವುದು ಇನ್ನೊಂದು. ‘ಅವಮಾನಕರ’ ಅಂತ ಹೇಳುವುದು ಏನು ಸಂದೇಶ ಕೊಡುತ್ತದೆ? ಮನೆಗೆಲಸಕ್ಕೆ ಯಾವುದೇ ಘನತೆ ಇಲ್ಲ, ಈ ಕೆಲಸಗಳನ್ನು ಮಾಡುವ ಹೆಣ್ಣುಮಕ್ಕಳಿಗೂ ಘನತೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ ತಾನೇ? ಬದುಕಲು ತೀರಾ ಅಗತ್ಯವಾಗಿರುವ ಕೆಲಸ ಮನೆಗೆಲಸ. ಇದನ್ನು ಮರುಉತ್ಪಾದಕ/ ರಿಪ್ರೊಡಕ್ಟಿವ್ ಕೆಲಸ ಅಂತ ಕೂಡ ಹೇಳುತ್ತಾರೆ. ಇದಕ್ಕೆ ಯಾಕೆ ಸಿಗಬೇಕಾದ ಗೌರವ ಸಿಗುವುದಿಲ್ಲ ಎಂಬುದು ದೊಡ್ಡ ವಿಪರ್ಯಾಸ.  

ಪುರುಷರು ಮನೆಗೆಲಸ ಮಾಡುವುದೇ ಇಲ್ಲ ಎಂದೇನೂ ಇಲ್ಲ. ಹೆಚ್ಚಾಗಿ ಅದು ಅವರ ಆಯ್ಕೆಯಾಗಿ ಇರುತ್ತದೆ. ಮರ್ಜಿ ಇದ್ದಾಗ ಖುಷಿಗಾಗಿ ಮಾಡುವುದು, ತಮ್ಮ ದೈನಂದಿನ ಕೆಲಸದಿಂದ ಸ್ವಲ್ಪ ಆಚೆ ಇರುವುದಕ್ಕಾಗಿ ಮಾಡುವುದು ಇದೆ. ಇಂತಹವರಿಗೆ ಇದರ ಏಕತಾನತೆಯ ಅನುಭವ ಆಗಿರುವುದಿಲ್ಲ. ಮನೆಗೆಲಸಗಳಲ್ಲಿ, ಇಷ್ಟು ಕೆಲಸ ನನ್ನ ಹೊಣೆ, ಎಂದು ಒಪ್ಪಿಕೊಂಡು ಅದನ್ನು ನಿರಂತರವಾಗಿ ಮಾಡುವ ಗಂಡಸರು ಬಹಳ ಅಪರೂಪ. ಗಂಡಸರು ಮನೆಗೆಲಸ ಮಾಡಹೊರಟರೆ ಅವರ ಹೆಂಡತಿಯರು ಕೊಂಕುನುಡಿಗಳನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ಇನ್ನು, ಮನೆಗೆಲಸ ಮಾಡುವ ಅವಮಾನವನ್ನು ಮೀರಿ ಗಂಡಸರು ಈ ಕೆಲಸ ಮಾಡತೊಡಗಿದರೆಂದರೆ, ಅವರು ‘ಮಹಾನ್’ ಅನಿಸಿಕೊಂಡುಬಿಡುತ್ತಾರೆ. ಹೆಂಡತಿ ಮಹಾ ಅದೃಷ್ಟವಂತೆ ಅನಿಸಿಕೊಂಡುಬಿಡುತ್ತಾಳೆ. ಶತಮಾನಗಳಿಂದ ಜೀವನವಿಡೀ ಮನೆಗೆಲಸಕ್ಕೇ ಮುಡಿಪಾಗಿಟ್ಟ ಹೆಣ್ಣುಕುಲಕ್ಕೆ ಈ ಕೆಲಸಕ್ಕಾಗಿ ‘ಮಹಾನ್’ ಪಟ್ಟ ಲಭಿಸಲೇ ಇಲ್ಲ. ಅದು ಬೇಕಾಗಿಯೂ ಇಲ್ಲ ಎಂಬುದು ಬೇರೆಯೇ ವಿಷಯ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿಗೂ ಗಂಡಿಗೂ ಇರಬಹುದಾದ ಕಟ್ಟುಪಾಡಿನ ರಗಳೆಗಳು

ಲಿಂಗತ್ವದ ಹೆಸರಿನಲ್ಲಿ ಎದುರಾಗುವ ಸಾಮಾಜಿಕ ನಿರೀಕ್ಷೆಗಳನ್ನು ಮೀರಿ ಬದುಕುವ ಆಶಯ ಹೊಂದಿರುವ ಲೆಸ್ಬಿಯನ್ ಅಥವಾ ಗೇ ಸಂಬಂಧಗಳಲ್ಲೂ ಮನೆಗೆಲಸದ ಅಂಶ ಬಂದೇ ಬರುತ್ತದೆ. ಸಮತೆಯಿಂದ ಬದುಕಬೇಕು ಎಂಬ ಆಶಯ ಇಲ್ಲಿದೆ. ಆದರೂ ಕೆಲವೊಮ್ಮೆ ಬೆಳೆದುಬಂದಿರುವ ಹಿನ್ನೆಲೆಯ ಕಾರಣಕ್ಕಾಗಿ ಲಿಂಗತ್ವದ ಛಾಯೆಗಳು ಇಲ್ಲಿಯೂ ಪ್ರಭಾವ ಬೀರಬಹುದು. ಇನ್ನು, ಕೆಲವೊಮ್ಮೆ ಲಿಂಗದ ಆಧಾರದ ಮೇಲೆ ಅಲ್ಲದೆ ಹೋದರೂ, ಜೊತೆಯಲ್ಲಿ ಬದುಕುವ ಇಬ್ಬರಲ್ಲಿ ಒಬ್ಬರ ಅಥವಾ ಗುಂಪಿನಲ್ಲಿ ಕೆಲವರ ಮೇಲೆ ಈ ಕೆಲಸಗಳ ಹೊರೆ ಬೀಳುವ ಸಾಧ್ಯತೆಯೂ ಇದೆ. ಪರಸ್ಪರ ಸಹಕರಿಸಿಕೊಂಡು ಬಹಳ ನಿರಾಳವಾಗಿ ಬದುಕು ಸಾಗಿಸುವ ಸಾಧ್ಯತೆಯೂ ಇದೆ.

ಮನೆಗೆಲಸಕ್ಕೂ ಮೌಲ್ಯ ಕಟ್ಟುವ ಕೆಲವು ಘಟನೆಗಳು ನಡೆದಿವೆ. ಜಿಡಿಪಿಯಲ್ಲೂ ಮಹಿಳೆಯರು ಮಾಡುವ ಮನೆಗೆಲಸವನ್ನು ಗುರುತಿಸಲಾಗಿದೆ. "ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಇತ್ತೀಚೆಗೆ ಮಾಡಿದ –'ಭಾರತದಲ್ಲಿ ಸಮಯದ ಬಳಕೆ -2019 (Time Use in India-2019) ವರದಿಯ ಪ್ರಕಾರ, ಮಹಿಳೆಯರು ವೇತನರಹಿತ ಮನೆಗೆಲಸಕ್ಕಾಗಿ ದಿನದಲ್ಲಿ ಸರಾಸರಿ 299 ನಿಮಿಷ ಬಳಸಿದರೆ, ಪುರುಷರು 97 ನಿಮಿಷ ವಿನಿಯೋಗಿಸುತ್ತಾರೆ. ಸುಪ್ರೀಂ ಕೋರ್ಟ್ 2014ರಲ್ಲಿ, ದಂಪತಿಗಳ ಸಾವಿನ ನಂತರ ಅವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸುವ ಹೊತ್ತಿಗೆ ಆಕೆ ಮಾಡುತ್ತಿದ್ದ ಮನೆಗೆಲಸಕ್ಕೂ ಆರ್ಥಿಕ ಮೌಲ್ಯ ನಿಗದಿಪಡಿಸಿ ಪರಿಹಾರ ನಿಧಿ ಹೆಚ್ಚಿಸುವಂತೆ ನೋಡಿಕೊಂಡಿದೆ. ಮಹಿಳೆಯರಿಗೆ ಸಮಾನತೆ ಮತ್ತು ಘನತೆ ನೀಡುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆ ಎಂದು ಆ ಹೊತ್ತಿಗೆ ಸುಪ್ರೀಂ ಕೋರ್ಟ್ ಹೇಳಿಕೊಂಡಿತ್ತು (ಬರ್ಷಾ ನಾಗ್ ಭೌಮಿಕ್, 'ಟೈಮ್ಸ್ ಆಫ್ ಇಂಡಿಯಾ' ವರದಿ, ಜುಲೈ 30, 2021)."

Image
ಸಾಂದರ್ಭಿಕ ಚಿತ್ರ

ತರಬೇತಿ ಸಂದರ್ಭಗಳಲ್ಲಿ ಮನೆಗೆಲಸದ ಸುತ್ತಮುತ್ತಲಿನ ಮಾತುಕತೆ ಬಹಳ ಹಗುರವಾಗಿ, ತಮಾಷೆ ಎಂಬಂತೆ ಶುರುವಾಗುತ್ತದೆ; ಮುಂದುವರಿದಾಗ ಅರಿವಿಲ್ಲದಂತೆಯೇ ಗಂಭೀರ ಆಗಿಬಿಡುತ್ತದೆ. "ನಾನು ಇದರ ಬಗ್ಗೆ ಹೀಗೆ ಯೋಚಿಸಿಯೇ ಇರಲಿಲ್ಲ," ಅಂತ ಪ್ರಾಮಾಣಿಕವಾದ ಉದ್ಗಾರಗಳು ಬರುತ್ತವೆ. ಹೋಟೆಲಿನಲ್ಲಿ ಅಡುಗೆ ಕೆಲಸವನ್ನೇ ಮಾಡುವ ಒಬ್ಬ ಯುವಕ, ಭಾನುವಾರ ರಜೆ ಸಿಕ್ಕಂದು, ಮನೆಗೆ ಹೋಗಿ ಬಿದ್ದುಕೊಳ್ಳುತ್ತಿದ್ದನು. ಇಡೀ ವಾರ ತಾನು ಹೋಟೆಲಿನಲ್ಲಿ ದುಡಿಯುತ್ತಿದ್ದಂತೆಯೇ, ಅಮ್ಮ ಮನೆಯಲ್ಲಿ ದುಡಿಯುತ್ತಿದ್ದ ಸತ್ಯ ಅರ್ಥವಾದ ಮೇಲೆ, ಭಾನುವಾರ ತಾನೂ ಅಡುಗೆ ಕೆಲಸದಲ್ಲಿ ಭಾಗಿಯಾಗತೊಡಗಿದ. ಇಬ್ಬರೂ ಜೊತೆಗೆ ಮಧ್ಯಾಹ್ನ ಆರಾಮ ಮಾಡುವಾಗ ಆದ ಸಂತೋಷವನ್ನು ಹೇಳಿಕೊಂಡ. "ದಿನವಿಡೀ ಮನೆಯೊಳಗೇ ಇರುತ್ತೇನೆ. ಸಂಜೆ, 'ಸ್ವಲ್ಪ ಸ್ಕೂಟರಿನಲ್ಲಿ ಸುತ್ತಾಡಿಸಿ ಬಾ' ಅಂತ ಅಮ್ಮ ಆಗಾಗ ಹೇಳುತ್ತಿದ್ದ ಮಾತು ಕಿವಿಗೇ ಹಾಕಿಸಿಕೊಂಡಿರಲಿಲ್ಲ. ನಿನ್ನೆ ತರಬೇತಿಯಲ್ಲಿ ಈ ಮಾತುಕತೆ ನಡೆದ ಮೇಲೆ, ಸಂಜೆ ಅಮ್ಮನನ್ನು ಸುತ್ತಾಡಿಸಿ ಬಂದೆ,” ಅಂತ ಯುವಕನೊಬ್ಬ ಹೆಮ್ಮೆಯಿಂದ ಹೇಳಿಕೊಂಡಿದ್ದ. ಆಪ್ತವಾದ ಈ ಮಾತುಕತೆ ಸಹಭಾಗಿಗಳ ಮನಸ್ಸನ್ನು ಒಂದು ಕ್ಷಣವಾದರೂ ತಟ್ಟುವುದನ್ನು ಕಂಡಿದ್ದೇವೆ.

ಅಂದಹಾಗೆ, ಮನೆಗೆಲಸವನ್ನು ಬಿಟ್ಟುಹಾಕುವುದೇ ಸ್ತ್ರೀವಾದ, ಸ್ತ್ರೀವಾದಿಗಳು ಮನೆಗೆಲಸವನ್ನು ಆನಂದಿಸುವ ಹಾಗೆ ಇಲ್ಲ ಎಂದು ಹೇಳುವುದು ಇಲ್ಲಿಯ ಉದ್ದೇಶ ಅಲ್ಲ. ಹೆಣ್ಣಾಗಲೀ, ಲೆಸ್ಬಿಯನ್ ಆಗಲೀ, ಗೇ ಆಗಲೀ, ಕ್ವೀರ್ ಆಗಲೀ, ಗಂಡಾಗಲೀ... ಯಾರಿಗೂ ಇದು ಹೊರೆಯಾಗದಿರಲಿ. ಇವರಲ್ಲಿ ಕೆಲವರಿಗೆ ಈ ಕೆಲಸದಲ್ಲಿ ‘ಆನಂದ’ ಸಿಗಬಹುದು. ಆನಂದ ಸಿಕ್ಕರೆ ಆನಂದದಿಂದ ಮಾಡುವುದು, ಸಿಗದಿದ್ದರೆ ಜೊತೆಗಿರುವವರಿಗೆ ಹೊರೆಯಾಗಬಾರದು ಎಂಬ ಕರ್ತವ್ಯನಿಷ್ಠೆಯಿಂದ, ಮಾಡಲೇ ಬೇಕಾದ ಕೆಲಸ ಅಂತ ತಿಳಿದು ಮಾಡಿ ಮುಗಿಸುವುದು... ಅಷ್ಟಿದ್ದರೆ ಸಾಕು.

ನಿಮಗೆ ಏನು ಅನ್ನಿಸ್ತು?
11 ವೋಟ್