ಹೆಣ್ಣೆಂದರೆ... | ರಂಗಾಯಣದ ರಂಗದಲ್ಲಿ ರೂಪುಗೊಂಡ ಶಿಲ್ಪಾ

Shilpa Rangayana 1

"ಕಲೆಯನ್ನೂ ಸಾಮಾಜಿಕ ಜವಾಬ್ದಾರಿಯನ್ನೂ ಬೇರೆ-ಬೇರೆಯಾಗಿ ನೋಡದೆ, ಇವೆರಡರ ನಡುವೆ ಬಂಧವನ್ನು ಬೆಸೆದುಕೊಂಡವರು ನಿಜವಾದ ಕಲಾವಿದರಾಗುತ್ತಾರೆ," ಎನ್ನುವ ಶಿಲ್ಪಾ, ರಂಗಾಯಣದ ಪ್ರತಿಭೆ. ಈಗಾಗಲೇ ಸಿನಿಮಾಗಳಲ್ಲಿ ಸಹನಿರ್ದೇಶನದ ಅನುಭವ ಪಡೆದಿರುವ ಅವರು, ರಂಗಭೂಮಿಯ ಕಸುವನ್ನು ಸಿನಿಮಾ ಕ್ಷೇತ್ರದಲ್ಲಿ ಬಳಸುತ್ತಿರುವ ಕನಸುಗಾರ್ತಿ

ರಂಗಾಯಣದಲ್ಲಿ ರಂಗ ತರಬೇತಿ ಪಡೆದು ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಶಿಲ್ಪಾ, ಉಡುಪಿಯವರು. ನಟನೆ ಮತ್ತು ನಿರ್ದೇಶನದ ಕುರಿತ ಉದಾತ್ತ ಆಲೋಚನೆಗಳಿಂದ ಶಿಲ್ಪಾ ನಮ್ಮನ್ನು ಬೆರಗುಗೊಳಿಸುತ್ತಾರೆ. ಕಲೆಯ ಸತ್ವ, ಶಕ್ತಿ, ಉದ್ದೇಶದ ಕುರಿತು ಅವರಿಗಿರುವ ಸ್ಪಷ್ಟವಾದ ನಿಲುವುಗಳೇ ಅವರ ವಿಭಿನ್ನತೆ. ಸಹನಿರ್ದೇಶಕಿಯಾಗಿ 'ಸ್ಟ್ರಾಬೆರಿ,' 'ಪುಟ್ಟ ಭಯ,' '19.20.21' ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ. 'ಸ್ಟ್ರಾಬೆರಿ' ಮತ್ತು '19 20 21' ಸಿನಿಮಾ ತಾಂತ್ರಿಕ ತಂಡದಲ್ಲಿದ್ದ ಏಕೈಕ ಹುಡುಗಿ ಕೂಡ. ಚಿತ್ರೀಕರಣದ ವೇಳೆ ಕಾಡು, ನಾಡು, ಬೆಟ್ಟ-ಗುಡ್ಡಗಳಲ್ಲಿ ಹಗಲು- ರಾತ್ರಿ ತಂಡದ ಜೊತೆ ಕೆಲಸ ಮಾಡಿದ ಶಿಲ್ಪಾ, "ರಂಗಭೂಮಿಯಲ್ಲಿ ಗಂಡು-ಹೆಣ್ಣೆಂಬ ಬೇಧ ಮಾಡದ ತರಬೇತಿ ಇದಕ್ಕೆಲ್ಲ ಕಾರಣ," ಎನ್ನುತ್ತಾರೆ.

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲೆಂದೇ ಇರುವ ಎನ್ನೆಸ್ಸೆಸ್ ಶಿಲ್ಪಾ ಬದುಕಿಗೆ ಹೊಸ ತಿರುವು ನೀಡಿತಂತೆ. ಪಿಯುಸಿಯಲ್ಲಿ ತನ್ನ ಬದುಕಿನ ಗುರಿಯ ಬಗ್ಗೆ ಅರಿತುಕೊಂಡು ಅದಕ್ಕೆ ಪೂರಕ ಓದನ್ನು ಆಯ್ಕೆ ಮಾಡಿಕೊಂಡರು. ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್‌ನಲ್ಲಿ ಪದವಿ ಪಡೆದರು. ಆ ನಂತರ ರಂಗಾಯಣದಲ್ಲಿ ರಂಗಕಲೆ ಕಲಿತರು. ರಂಗಾಯಣದ ಕಲಾವಿದೆಯಾಗಿ ಕರ್ನಾಟಕದಲ್ಲಿ ಹಲವಾರು ಕಡೆ ನಾಟಕ ಪ್ರದರ್ಶನ ನೀಡಿದರು. ಸಿನಿಮಾಗಳಿಗೆ ಕೆಲಸ ಮಾಡುತ್ತಲ್ಲೇ ತಮ್ಮ ಕನಸುಗಳನ್ನು ಬೆನ್ನತ್ತಿ, 'ಮಾಸ್ಟರ್ ಇನ್ ಪರ್ಫಾರ್ಮಿಂಗ್ ಆರ್ಟ್‌' ಅಧ್ಯಯನದಲ್ಲಿ ನಿರತರಾಗಿದ್ದಾರೆ. "ಕಲೆಯನ್ನೂ ಸಾಮಾಜಿಕ ಜವಾಬ್ದಾರಿಯನ್ನೂ ಬೇರೆ-ಬೇರೆಯಾಗಿ ನೋಡದೆ, ಇವೆರಡರ ನಡುವೆ ಬಂಧವನ್ನು ಬೆಸೆದುಕೊಂಡವರು ನಿಜವಾದ ಕಲಾವಿದರಾಗುತ್ತಾರೆ," ಎಂಬ ನಿಲುವು ಶಿಲ್ಪಾ ಅವರದ್ದು.

Image
Shilpa Rangayana 2

"ರಂಗಭೂಮಿಯ ತರಬೇತಿಯು ಶಿಸ್ತುಬದ್ಧ ಅಧ್ಯಯನದ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅಡಿಪಾಯ ಹಾಕಿಕೊಡುತ್ತದೆ. ಯಾವುದೇ ಬಗೆಯ ಕಲೆಯಾಗಲಿ, ಜನರ ಬದುಕಿಗೆ ಮತ್ತು ಬದುಕಿನ ಘಟನೆಗಳಿಗೆ ಮುಖಾಮುಖಿಯಾಗಬೇಕು. ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ಹಿಡಿಯಬೇಕು. ನಾಟಕಗಳು ಇದನ್ನು ಮಾಡುತ್ತಲೇ ಬಂದಿವೆ. ಅಭಿವ್ಯಕ್ತಿಯಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಇಟ್ಟುಕೊಳ್ಳದಿದ್ದರೆ ವ್ಯರ್ಥವೆಂದೇ ಅನಿಸುತ್ತದೆ. ನೀನಾಸಂ, ರಂಗಾಯಣ ಇನ್ನಿತರ ರಂಗಶಾಲೆಗಳಲ್ಲಿ ಕಲಿತವರು ಸಿನಿಮಾ ನಟನೆಯಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ಹಾಗೆಯೇ, ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನಿರ್ದೇಶನ ಮತ್ತು ತಾಂತ್ರಿಕ ತಂಡದಲ್ಲಿ ಕಾರ್ಯನಿರ್ವಹಿಸಿದರೆ ಕನ್ನಡ ಚಿತ್ರರಂಗಕ್ಕೆ ಮತ್ತು ಸಾಮಾಜಿಕವಾಗಿ ಉತ್ತಮ ಕೊಡುಗೆ ಕೊಡಬಲ್ಲರು. ನಾಟಕ ಬೇಡುವ ಶಿಸ್ತಿಗೆ ಸರಿಸಾಟಿಯಿಲ್ಲ ಎಂಬುದು ಸತ್ಯ. ಜನರನ್ನು ತಲುಪಲು ಸಿನಿಮಾ ಬಹುದೊಡ್ಡ ಮಾಧ್ಯಮವಾಗಿರುವುದರಿಂದ, ರಂಗಭೂಮಿಯವರು ಎರಡೂ ಕಡೆ ತೊಡಗಿಕೊಳ್ಳಬೇಕು," ಎನ್ನುತ್ತಾರವರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹಳ್ಳಿಯತ್ತ ಚಿತ್ತ ನೆಟ್ಟ ಡಾಕ್ಟರ್ ಕಾವೇರಿ ನಂಬೀಶನ್

"ರಂಗದ ಕತೆಗಳು ಜನಸಾಮಾನ್ಯರ ಬದುಕಿಗೆ ನೇರವಾಗಿ ಮುಖಾಮುಖಿ ಆಗುವಂತಹವು. ಇಲ್ಲಿ ಕಲಿತವರು ಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಜನರ ಹೃದಯಕ್ಕೆ ಮತ್ತು ಪ್ರಜ್ಞೆಯನ್ನು ಮುಟ್ಟುವ ಸಿನಿಮಾ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ನಿಸ್ಸಂಶಯ. ತಪ್ಪುಗಳನ್ನೇ ಸರಿ ಎಂದು ತೋರಿಸುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಪ್ರಜ್ಞೆಯ ಧ್ವನಿಗಳು ಗಟ್ಟಿಯಾಗಲು ರಂಗಭೂಮಿಯ ಪ್ರತಿಭೆಗಳು ಮುಖ್ಯ. ಕೆಲ ನಾಟಕ ಶಾಲೆಗಳು ಇಂದು ಬೇರೆಯದೇ ದಿಕ್ಕಿನೆಡೆ ಹೊರಟಿರುವಾಗ, ಸದಾಶಯ ಇರುವವರು ತಮ್ಮ ಧ್ವನಿಯನ್ನು ಬಲಪಡಿಸಲು ಹೆಚ್ಚು-ಹೆಚ್ಚು ಕೆಲಸ ಮಾಡಬೇಕು," ಎನ್ನುತ್ತಾರೆ ಶಿಲ್ಪಾ.

"ಯಾರಾದರೂ ಯಾವುದೇ ಕೆಲಸಕ್ಕಾದರೂ 'ಏಯ್ ಹುಡುಗಿ... ನಿನಗಾಗಲ್ಲʼ ಎನ್ನುವುದು ನನ್ನನ್ನು ಕುಗ್ಗಿಸುವುದಿಲ್ಲ. ಅದಕ್ಕೆ ವಿರುದ್ಧವಾಗಿ ನಾನು ಇನ್ನಷ್ಟು ಹಿಗ್ಗುತ್ತೇನೆ. ಹೆಣ್ಣು ಮುಖ್ಯ ಭೂಮಿಕೆಯಲ್ಲಿರುವ ಕತೆಯನ್ನು ಸಿನಿಮಾ ಮಾಡಬೇಕು, ಆ ತಂಡದಲ್ಲಿ ಹುಡುಗಿಯರೂ ಇರಬೇಕು. ಈ ಪ್ರಜ್ಞೆ ನಿರ್ದೇಶಕರುಗಳಿಗೆ ಬಂದಿರುವುದನ್ನು ನಾವು ಆರಂಭಿಕ ಹೆಜ್ಜೆ ಎಂದು ಪರಿಗಣಿಸಬೇಕು. ಆರ್ಟ್ ಸಿನಿಮಾ ನಿರ್ದೇಶಕರುಗಳ ಜೊತೆ ಕೆಲಸ ಮಾಡುವುದು ಸುಲಭ. ಏಕೆಂದರೆ, ಅವರು ಓದು ಮತ್ತು ಸಮಾನತೆಯ ಪರಿಕಲ್ಪನೆಗೆ ತಮ್ಮನ್ನು ಆಗಲೇ ಒಡ್ಡಿಕೊಂಡಿರುತ್ತಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಕೆಲಸ ಮಾಡುವ ಇಷ್ಟವಿದೆ. ಉತ್ತಮ ತಂಡ ಸಿಗಬೇಕು," ಎಂಬುದು ಅವರ ಮನದಾಳದ ಮಾತು.

Image
Shilpa Rangayana 4

"ಸ್ಟ್ರಾಬೆರಿ' ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿ ಹೆಣ್ಣಾಗಿದ್ದರಿಂದ ನನಗೆ ಸಹನಿರ್ದೇಶಕಿಯಾಗಿ ಕೆಲಸ ಮಾಡುವ ಅವಕಾಶ ಒದಗಿಬಂತು. ಮಂಸೋರೆ ನಿರ್ದೇಶನದ '19 20 21' ಸಿನಿಮಾದಲ್ಲಿ ತುಳು ಭಾಷೆಯ ಕಾರಣಕ್ಕೆ ಮತ್ತು ತಮ್ಮ ಸಿನಿಮಾದ ತಂಡದಲ್ಲಿ ಹುಡುಗಿಯರು ಇರಬೇಕು ಎಂಬ ಉದ್ದೇಶ ಅವರಿಗಿತ್ತು. ಆದ್ದರಿಂದ ನಾನು ಕೆಲಸ ಮಾಡಿದೆ. ಭಿನ್ನ ರೀತಿಯಲ್ಲಿ ಆಲೋಚಿಸುವುದು ಮತ್ತು ಹೊಸ ಪ್ರಯೋಗಗಳನ್ನು ಮಾಡುವ ತಂಡಗಳ ಜೊತೆ ಕೆಲಸ ನಿರ್ವಹಿಸುವುದು ನಮ್ಮನ್ನು ಜೀವಂತವಾಗಿಡಬಲ್ಲದು," ಎಂಬುದು ಅವರ ವೃತ್ತಿ ಅನುಭವ.

"ಸಿನಿಮಾ ಮೂಲಕ ಕೆಲವು ಜನರೊಳಗೆ ಪ್ರೀತಿ, ನಗು, ಮಾನವೀಯತೆ, ಸಾಮಾಜಿಕ ಕಳಕಳಿ, ಪ್ರಶ್ನಿಸುವ ಮತ್ತು ಪ್ರಶ್ನಿಸಿಕೊಳ್ಳುವ ಗುಣಗಳನ್ನು ಬೆಳೆಸಿದರೆ ಸಾರ್ಥಕ ಎಂದು ಭಾವಿಸಿದ್ದೇನೆ. ಅದೇ ಹಾದಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ರಂಗಭೂಮಿಯ ಕಲಿಕೆಯನ್ನು ಸಿನಿಮಾದಲ್ಲಿ ಬಳಸುವ ಕಲೆಯನ್ನು ಕಲಿಯುವ ಪ್ರಯತ್ನ ಸಾಗುತ್ತಿದೆ. ಶಿಸ್ತು, ಸಿಂಗಲ್ ಟೇಕ್, ಸಮಯ ಪಾಲನೆ, ಒಗ್ಗೂಡಿ ಕೆಲಸ ಮಾಡುವುದನ್ನು ರಂಗಭೂಮಿಯಿಂದ ಕಲಿತು ಬಂದರೆ, ಸಿನಿಮಾ ಮಾಧ್ಯಮಕ್ಕೆ ತಯಾರಿ ಸಿಕ್ಕಂತೆ ಕಲಿಯುವ, ಅದನ್ನು ಅಳವಡಿಸಿಕೊಳ್ಳುವ ಹಾಗೂ ಪ್ರಯೋಗ ಮಾಡುವ ಮನಸ್ಸನ್ನು ಹೆಣ್ಣುಮಕ್ಕಳು ಹೊಂದಿದರೆ ಏನನ್ನಾದರೂ ಸಾಧಿಸಬಹುದು ಎಂಬುದು ನನ್ನ ಅನುಭವ," ಎನ್ನುವುದು ಅವರ ಶಿಲ್ಪಾ ಅವರ ಆತ್ಮವಿಶ್ವಾಸದ ಮಾತು.

ನಿಮಗೆ ಏನು ಅನ್ನಿಸ್ತು?
12 ವೋಟ್