ಹಳ್ಳಿ ಹಾದಿ | 26 ಎಕರೆ ಭೂಮಿ, 14 ರೈತರು, ಒಂದೇ ಬಾವಿ, ಸಮೃದ್ಧ ಫಸಲು

Aruna Balekundri

ನ್ಯಾನೋ ತಂತ್ರಜ್ಞಾನದಿಂದ ನೀರೆತ್ತುವ ಆಕರ್ಷಕ ವ್ಯವಸ್ಥೆಯ ಕತೆ ಇದು. ಬಾವಿ ತೋಡಿ, ಹೊಸ ತಂತ್ರಜ್ಞಾನದ ಪಂಪ್ ಅಳವಡಿಸಲಾಗುತ್ತದೆ. ಭೂಮಿಯಲ್ಲಿ ತೇವಾಂಶ ಎಷ್ಟಿದೆ, ಯಾವ ಬೆಳೆ, ಆ ಬೆಳೆಗೆ ಈಗ ಎಷ್ಟು ನೀರು ಬೇಕು ಎಂದು ಅದೇ ನಿರ್ಧರಿಸುತ್ತದೆ; ಅಷ್ಟು ಪ್ರಮಾಣದ ನೀರಷ್ಟೇ ಹರಿದುಹೋಗುತ್ತದೆ. ಮೊಬೈಲ್‌ನಲ್ಲಿನ ಸಾಫ್ಟ್‌ವೇರ್ ಮೇಲ್ವಿಚಾರಣೆ ನೋಡಿಕೊಳ್ಳುತ್ತದೆ

ಅನೇಕ ವರ್ಷಗಳ ಹಿಂದೆ ಪುಣೆಯ ಬಳಿಯ ಒಂದು ಹಳ್ಳಿಯಲ್ಲಿ ವಿಲಾಸ ರಾವ್ ಸಾಳುಂಕೆ ಎಂಬವರನ್ನು ಭೇಟಿಯಾಗಿದ್ದೆ. ‘ಪಾಣಿ ಪಂಚಾಯತ್’ ವಿಚಾರದ ಜನಕ ಅವರು. ಇತ್ತೀಚೆಗೆ, "ಬೆಳಗಾವಿಯ ಸಮೀಪ ಒಂದು ಹಳ್ಳಿಯಲ್ಲಿ 'ಪಾಣಿ ಪಂಚಾಯತ್' ಮಾಡುತ್ತಿದ್ದೇವೆ," ಎಂದು ಶಿವಾಜಿ ಕಾಗಣೀಕರ್ ಹೇಳಿದಾಗ ಹೋಗದೆ ಇರಲು, ನೋಡದೆ ಇರಲು ಸಾಧ್ಯವಾಗಲೇ ಇಲ್ಲ.

ವಿಲಾಸರಾವ್ ಸಾಳುಂಕೆ ಅವರ ಪೂರ್ತಿ ವಿಚಾರ ಇಲ್ಲಿ ಜಾರಿಯಾಗಿಲ್ಲದಿದ್ದರೂ, ಪ್ರಯತ್ನವಂತೂ ಸಾಗಿದೆ. ಮೂಲತಃ ಒಂದೇ ಮನೆಯ 14 ಕುಟುಂಬಗಳಿಲ್ಲಿ ಒಟ್ಟಿಗೆ ಬಂದಿವೆ. ಒಬ್ಬೊಬ್ಬರೂ ಬರಿಯ ಒಂದೆಕರೆ, ಅರ್ಧ ಎಕರೆ, ಹತ್ತು ಗುಂಟೆಯ ರೈತರು. ನೀರಿನ ಸೌಲಭ್ಯವಿಲ್ಲದೆ, ಅಷ್ಟು ಚಿಕ್ಕ ಭೂಮಿಯಲ್ಲಿ ಏನೂ ಮಾಡಲಾಗದೆ, ಬೇಕಾದಷ್ಟು ಬೆಳೆಯನ್ನೂ ತೆಗೆಯಲಾಗದೆ ಸಂಕಷ್ಟದಲ್ಲಿದ್ದ ರೈತರು ಈಗ, ಒಂದೇ ನೀರಿನ ಮೂಲವನ್ನು ಬಳಸಿ ಒಟ್ಟಿಗೆ ಕೃಷಿಯನ್ನು ಮಾಡಲು ಮುಂದೆ ಬಂದಿದ್ದಾರೆ.

ಇಂಥದ್ದನ್ನು ಸಾಧ್ಯವಾಗಿಸಿದ್ದು ಇಬ್ಬರು. ಒಬ್ಬರು ವಿಚಾರವನ್ನು ತಂದು ಬಿತ್ತಿದ ಶಿವಾಜಿ ಕಾಗಣೀಕರ. ಎರಡನೆಯವರು, ಬಿತ್ತಿದ ವಿಚಾರವನ್ನು ಕೃತಿಗಿಳಿಸಿದ ತರುಣ ಅರುಣ ಬಾಳೇಕುಂದ್ರಿ.

Aruna Balekundri 2

ಅರುಣ ಬಾಳೇಕುಂದ್ರಿ, ಬೆಳಗಾವಿ ಸಮೀಪದ ಮಾಳೇನಟ್ಟಿ ಗ್ರಾಮದ ಯುವಕ. ಮಾಳೇನಟ್ಟಿ ಗ್ರಾಮ ಮಹಾರಾಷ್ಟ್ರದ ಗಡಿಯಲ್ಲಿ ಬರುವ ಹಳ್ಳಿ. ಈ ಗಡಿ ಹಳ್ಳಿಗಳ ಮನೆಗಳು ಕರ್ನಾಟಕದಲ್ಲಿದ್ದರೆ, ಹೊಲಗಳು ಮಹಾರಾಷ್ಟ್ರದಲ್ಲಿವೆ. "ಅಡುಗೆ ಮನೆ ಕರ್ನಾಟಕದಲ್ಲಿ, ಶೌಚಾಲಯಕ್ಕೆ ಮಹಾರಾಷ್ಟ್ರಕ್ಕೆ ಹೋಗಬೇಕು," ಎಂದು ಇಲ್ಲಿಯ ಜನ ಕುಶಾಲು ಮಾಡುತ್ತಾರೆ. ರಸ್ತೆಗಳು ಕರ್ನಾಟಕದಲ್ಲಿದ್ದರೆ, ಗಟಾರಗಳು ಮಹಾರಾಷ್ಟ್ರದಲ್ಲಿವೆ. ಒಂದು ಕಾಲದಲ್ಲಿ ಕನ್ನಡದ ನಾಡಾಗಿದ್ದ ಹಳ್ಳಿಗಳು, ಗಡಿಯಾಚೆಗಿನ ಜನ ಭೂಮಿ ಖರೀದಿ ಮಾಡುತ್ತ ಬಂದು ನೆಲೆಸುತ್ತ ಹೋದಂತೆ ಮರಾಠಿ ರಿಂಗಣಿಸುವ ಹಳ್ಳಿಗಳಾಗಿವೆ. ಕನ್ನಡ ಬರುವುದೇ ಇಲ್ಲ. ಶಾಲೆಗಳೂ ಮರಾಠಿ. ಇರಲಿ, ಇಲ್ಲಿನ ವಿಷಯವದಲ್ಲ.

ಅರುಣ ಅವರಿಗೆ ಚಿಕ್ಕಂದಿನಿಂದಲೂ ಹೊಲದ ಕೆಲಸಗಳಲ್ಲಿ ಆಸಕ್ತಿ. ಆದರೆ, ಕೃಷಿಯಲ್ಲಿ ಭವಿಷ್ಯವಿಲ್ಲ ಎಂಬುದನ್ನು ನೋಡುತ್ತಿದ್ದ ತಂದೆ-ತಾಯಿ, ಮಗನನ್ನು ಹೊರಗೇ ಇಟ್ಟು ಓದಿಸಿದರು. ಎಮ್.ಎ ಓದಿದ ನಂತರ ಪುಣೆಯಲ್ಲಿ ಕೆಲಸ ಸಿಕ್ಕಾಗ ಅವರ ಮನಸ್ಸಿಗೆ ಸಮಾಧಾನ.

ಆದರೆ, ಅರುಣ ಅವರನ್ನು ಭೂಮಿ ಕರೆಯುತ್ತಲೇ ಇತ್ತು. ಪುಣೆಯಲ್ಲಿಯೇ ಕೃಷಿಯ ಮೇಲೆ ಕೆಲಸ ಮಾಡುತ್ತಿದ್ದ ಜ್ಞಾನೇಶ್ವರ ಬೋಖಡೆ ಅವರ ‘ಅಭಿನವ್ ಫಾರ್ಮರ್ಸ್ ಕ್ಲಬ್’ ಆಶ್ರಮಕ್ಕೆ ಹೋಗಲಾರಂಭಿಸಿದರು. ನೌಕರಿಯಲ್ಲಿ ಆಸಕ್ತಿ ಕಡಿಮೆ ಆಯಿತು. ಕೃಷಿಯಲ್ಲೇ ಉಜ್ವಲ ಭವಿಷ್ಯವಿದೆ ಎಂದು ತೀರ್ಮಾನಿಸಿ, ರಾಜಿನಾಮೆ ಕೊಟ್ಟು, 2009ರಲ್ಲಿ ಹಳ್ಳಿಗೆ ಹಿಂದಿರುಗಿಬಿಟ್ಟರು. ತಾಯ್ತಂದೆಗಳಿಗೆ ಅಘಾತ. ಮಗ ನೌಕರಿ ಬಿಟ್ಟುಬಂದನಲ್ಲ ಎಂದು ಇಂದೂ ಮರುಗುವುದನ್ನು ಅವರು ಬಿಟ್ಟಿಲ್ಲ.

Shivaji Kaganikar
ಶಿವಾಜಿ ಕಾಗಣೀಕರ್

ಸ್ವಲ್ಪ ಕಾಲ ರಾಸಾಯನಿಕ ಕೃಷಿಯನ್ನೇ ಮಾಡುತ್ತಿದ್ದ ಅರುಣ ಅವರನ್ನು ಪ್ರಭಾವಿಸಿದವರು ಶಿವಾಜಿ ಕಾಗಣೀಕರ್. ಸದಾ ಹಳ್ಳಿ-ಹಳ್ಳಿಗೆ ಫಕೀರನಂತೆ ತಿರುಗುತ್ತ ಇರುವ ಶಿವಾಜಿ ಅಣ್ಣಾ, ಬಾಳೇಕುಂದ್ರಿ ಕುಟುಂಬಕ್ಕೆ ಬಹಳ ವರ್ಷಗಳಿಂದಲೂ ಪರಿಚಿತರು. ಅವರ ಮಕ್ಕಳಿಗೆ ರಾತ್ರಿ ಶಾಲೆ ಮಾಡಿದವರಿವರು. ಊರಿಗೆ ಶಾಲೆ ಮಾಡಿಕೊಟ್ಟವರಿವರು. ಅರುಣ ಅವರಷ್ಟೇ ಅಲ್ಲ, ಭೇಟಿಯಾದ ಎಲ್ಲ ರೈತರಿಗೂ ಸಾವಯವ ಕೃಷಿ ಮಾಡುವ ಅವಶ್ಯಕತೆಯ ಬಗ್ಗೆ ಮಾತಾಡಿಯೇ ಮುಂದಡಿ ಇಡುವವರು. ಕೃಷಿ ಮಾಡಲೆಂದು ನೌಕರಿ ಬಿಟ್ಟು ಬಂದಿದ್ದ ಯುವಕನ ಬಗ್ಗೆ ಬಲು ಪ್ರೇಮವುಂಟಾಗಿ ಶಿವಾಜಿಯವರು ಅವರ ಭೇಟಿಗೆಂದು ಓಡಿ ಬಂದರು. ಅರುಣ ಅವರಿಗೆ ಕೃಷಿಯಲ್ಲಿ ತೊಡಗಿಕೊಳ್ಳಲು ಮನೆಯಲ್ಲಿ ಬಹಳ ವಿರೋಧವಿತ್ತು. ಆದರೆ, ಅವರ ನಿರ್ಧಾರ ಅಚಲವಾಗಿತ್ತು. ಬರಿಯ ಕೃಷಿಯಿಂದ ಏಳಿಗೆ ಸಾಧ್ಯವಿಲ್ಲವೆಂದರಿತ ಅರುಣ, ದನ, ಎಮ್ಮೆ, ಕುರಿ, ಕೋಳಿ ಎಲ್ಲವನ್ನೂ ಸಾಕಿದರು. ಮನೆಯಲ್ಲೇ ಹಾಲು, ಹೊಲಕ್ಕೆ ಸಗಣಿ ಎಲ್ಲವೂ ಸಿಗತೊಡಗಿದಾಗ ಪ್ರತಿರೋಧ ಅಷ್ಟಷ್ಟೇ ಕಡಿಮೆಯಾಗತೊಡಗಿತು. ರಾಸಾಯನಿಕ ಕೃಷಿಯಲ್ಲಿ ಉಳಿಗಾಲವಿಲ್ಲ ಎಂದರಿತ ಅರುಣ, ನಿಧಾನವಾಗಿ ಸಾವಯವದತ್ತ ಹೊರಳಿದ್ದರು.

2019-20ರಲ್ಲಿ ಬೆಳಗಾವಿಯ ರೋಟರಿ ಕ್ಲಬ್ ಮತ್ತು ಪುಣೆಯ ‘ಸನ್ಮೋಕ್ಷಾ ಪ್ರೈವೇಟ್ ಲಿಮಿಟೆಡ್’ ಕಂಪನಿಗಳು ಸೇರಿ ಮಹತ್ವದ ಯೋಜನೆ ರೂಪಿಸಿದವು. ನ್ಯಾನೋ ಟೆಕ್ನಾಲಜಿ ಬಳಸಿ ಸಾವಯವ ಕೃಷಿ ಮಾಡುವ ರೈತರ ಗುಂಪಿಗೆ ಹಣಕಾಸಿನ ನೆರವು ನೀಡುವುದು ಆ ಯೋಜನೆಯಾಗಿತ್ತು.

ರೋಟರಿಯವರಿಗೆ ಕೆಲವು ಕಾಲದ ಸಮಯ ಕೇಳಿದ ಶಿವಾಜಿ ಅವರು, ತಮಗೆ ಪರಿಚಯವಿದ್ದ ಎಲ್ಲ ಸಾವಯವ ಕೃಷಿಕರನ್ನೂ ತುಲನೆ ಹಾಕಿ ನೋಡಿದರು. ಬೇರೆ-ಬೇರೆ ಗುಂಪುಗಳಲ್ಲಿ ಮಾತನಾಡಿದರು. ಬಾಳೆಕುಂದ್ರಿ ಕುಟುಂಬಗಳ ಜೊತೆಗೆ ಮಾತನಾಡಿದಾಗ, ಇಲ್ಲಿ ನೀರು ಹಂಚಿಕೊಂಡು ಕೃಷಿ ಮಾಡಲು ಒಂದೇ ಕುಟುಂಬದ ಕೃಷಿಕರು ತಯಾರಾದರು.

Aruna Balekundri 3

ಒಟ್ಟಿಗೆ ಬಂದ ಈ 14 ರೈತರಲ್ಲಿ ಆರು ಜನ ಮಹಿಳೆಯರು. ಯಾರದ್ದೂ ಎರಡು ಎಕರೆಗಿಂತ ಹೆಚ್ಚು ಭೂಮಿ ಇಲ್ಲ. ಒಂದು, ಒಂದೂವರೆ, ಹತ್ತು ಗುಂಟೆ, ಹೀಗೆ ಚೂರು-ಚೂರು ಭೂಮಿ. ಆದರೆ, ಎಲ್ಲರದ್ದೂ ಒಂದೇ ಕಡೆ ಭೂಮಿ ಇದ್ದುದು ಮೊದಲನೇ ಮುಖ್ಯ ಅಂಶ. ಭೂಮಿಗೆ ಮಳೆಗಾಲದಲ್ಲಿ ಬಿಟ್ಟರೆ ನೀರಿನ ಆಸರೆ ಇಲ್ಲ. ರೈತರಿಗೆ ತಾವಾಗಿಯೇ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಎರಡನೇ ಮುಖ್ಯ ಅಂಶವಾಗಿತ್ತು. ಗುಡ್ಡದ ಏರಿಯಲ್ಲಿ ಭೂಮಿ ಇದೆ. ಎತ್ತರದಿಂದ ಇಳಿಜಾರಿನತ್ತ ಹೋಗುವ ಭೂಮಿ ಒಂದು ಹಳ್ಳದಲ್ಲಿ ಕೊನೆಗೊಳ್ಳುತ್ತದೆ. ಹಳ್ಳಕ್ಕೆ ಚೆಕ್ ಡ್ಯಾಂ ಇದ್ದರೂ ನೀರು ನಿಲ್ಲಿಸುವ ವ್ಯವಸ್ಥೆ ಆಗಿಲ್ಲ.

14 ರೈತರು ಒಟ್ಟಿಗೆ ಬಂದರು. ಆರು ಜನರು ಮಹಿಳಾ ರೈತರು. ಕೃಷಿ ಧನ ಸಹಯೋಗಿ ಸಂಘ ಸ್ಥಾಪನೆ ಆಯಿತು. ಗುಡ್ಡದ ಭೂಮಿಯಲ್ಲಿ ನೀರು ಎಲ್ಲಿ ಇದೆ ಎಂದು ಹುಡುಕಲು ಪುಣೆಯ ಫರ್ಗ್ಯುಸನ್ ಕಾಲೇಜಿನ ಭೂಶಾಸ್ತ್ರಜ್ಞರು ಬಂದರು. ಈ 26 ಎಕರೆಯಲ್ಲಿ ನೀರಿನ ಮೂಲ ಎಲ್ಲಿದೆ ಎಂದು ಹುಡುಕಿದಾಗ ಅರುಣ ಅವರ ಹೊಲದಲ್ಲಿಯೇ ಜಲಮೂಲ ಸಿಕ್ಕಿತು. ಬಾವಿ ತೋಡಿ, ಪಕ್ಕದಲ್ಲಿಯೇ ಸೋಲಾರ್ ಪ್ಯಾನೆಲ್‌ಗಳನ್ನು ಹಾಕಲು ಹಿರಿಯರ ಒಪ್ಪಿಗೆ ಪಡೆದು ಅರುಣ ತಮ್ಮ ಜಾಗವನ್ನು ಕೊಟ್ಟರು. ಬಾವಿಯಿಂದ ಎಲ್ಲರ ಹೊಲಕ್ಕೂ ಪೈಪ್ ಹೋಗಿದೆ.

ಇದನ್ನು ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೇಳಿ, ಈ ಕತೆಯಲ್ಲಿ ಹೆಣ್ಣು ಕಪ್ಪೆ ಯಾವುದು ಮತ್ತು ಗಂಡು ಕಪ್ಪೆ ಯಾವುದು?

‘ಸನ್ಮೋಕ್ಷ ಪವರ್ ಲಿಮಿಟೆಡ್’ ಸಂಸ್ಥೆಯವರದ್ದು ನ್ಯಾನೋ ತಂತ್ರಜ್ಞಾನದಿಂದ ನೀರೆತ್ತುವ ವ್ಯವಸ್ಥೆ. ಬಾವಿ ತೋಡಿ, ಅದಕ್ಕೆ ನ್ಯಾನೋ ತಂತ್ರಜ್ಞಾನದ ಪಂಪ್ ಅಳವಡಿಸಲಾಗುತ್ತದೆ. ಆಯಾ ಭೂಮಿಯಲ್ಲಿ ತೇವಾಂಶ ಎಷ್ಟಿದೆ, ಯಾವ ಬೆಳೆ, ಎಷ್ಟು ನೀರು ಬೇಕು ಎಂದು ತಾನೇ ನಿರ್ಧರಿಸಿ, ಅಷ್ಟೇ ನೀರು ಹರಿದುಹೋಗುತ್ತದೆ. ಮೊಬೈಲ್‌ನಲ್ಲಿ ಒಂದು ಸಾಫ್ಟ್‌ವೇರ್ ಅಳವಡಿಸಿ, ಅದರಲ್ಲಿ ಎಲ್ಲ ರೈತರ ಹೆಸರುಗಳು, ಅವರ ಜಮೀನಿನ ಚೆಕ್ಕುಬಂದಿ, ಯಾವ ಬೆಳೆ ಇದೆ, ನೀರಿನ ಅವಶ್ಯಕತೆ ಎಷ್ಟಿದೆ ಇವೆಲ್ಲ ನಮೂದಿತವಾಗಿರುತ್ತದೆ. ರೈತರಿಗೆ ಒಂದು ಲೀಟರಿಗೆ ಹತ್ತು ಪೈಸೆಯಂತೆ ದರ ನಿರ್ಧರಿಸಲಾಗಿದೆ. ಭೂಮಿಗೆ ಅವಶ್ಯಕತೆ ಇರುವುದಕ್ಕಿಂತ ಹೆಚ್ಚು ನೀರು ಹೋಗುವುದಿಲ್ಲ. ಸಾವಯವ ಪದ್ಧತಿಯಲ್ಲೇ ಬೆಳೆ ತೆಗೆಯಬೇಕೆಂಬ ನಿಯಮಕ್ಕೆ ಎಲ್ಲರೂ ಬದ್ಧರಾಗಿದ್ದಾರೆ. ಭೂಮಿ ಇಲ್ಲದವರಿಗೂ ನೀರಿನ ಪಾಲಿದೆ ಎನ್ನುವುದೇ 'ಪಾಣಿ ಪಂಚಾಯತ್‌'ನ ಮೂಲಧ್ಯೇಯ. ಭೂಹೀನರಿಗೂ ಭೂಮಿ ಕೊಟ್ಟು, ಅವರ ಪಾಲಿನ ನೀರನ್ನು ಹಂಚಿಕೊಳ್ಳುವ ಘನ ಗುರಿ ಅಲ್ಲಿ ಇದೆ.

'ಪಾಣಿ ಪಂಚಾಯತ್‌'ನ ಮೂಲ ಧ್ಯೇಯ ತಲುಪಲು ಈ ಗುಂಪು ಇನ್ನೂ ಬಹಳ ಕೆಲಸ ಮಾಡಬೇಕಾಗಿದೆ. ಇರಲಿ, ಭೂಮಿ ಇದ್ದವರು ನೀರನ್ನು ಸಮನಾಗಿ ಹಂಚಿಕೊಂಡು, ಕಡಿಮೆ ನೀರನ್ನು ಬೇಡುವ ಬೆಳೆ ತೆಗೆಯುವುದು ಕೂಡ ಕೃಷಿಯಲ್ಲಿ ಹೊಸದೊಂದು ಅಧ್ಯಾಯವೇ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app