ಈಚೆ ದಡದಿಂದ | ಆಗಿನ ಸಿಎಂ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ ಮಾಡಿದ ನಿರ್ಣಾಯಕ ಕೆಲಸ ಮಣ್ಣುಪಾಲು?

ನಾಲ್ಕು ತಿಂಗಳ ಹಿಂದೆ ಅವಿವೇಕಿ ಅರಣ್ಯಾಧಿಕಾರಿಯೊಬ್ಬರು ರೈತರ ಕೈಗೆ ಸ್ಲೇಟು ಹಿಡಿಸಿದ್ದು ದೊಡ್ಡ ಹೋರಾಟಕ್ಕೆ ಕಾರಣವಾಗಿತ್ತು. ಕಣಿವೆ ಜನರು 22 ಕಿಮೀ ಪಾದಯಾತ್ರೆ ನಡೆಸಿದಾಗ, ಮಧು ಬಂಗಾರಪ್ಪ ಕಾಣಿಸಿಕೊಂಡಿರಲೇ ಇಲ್ಲ. ಆದರೆ, ಕಾಂಗ್ರೆಸ್ ಸೇರಿದ ನಂತರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆಯ ನಂತರವೂ ಪರಿಸ್ಥಿತಿ ಹೀಗೆಯೇ ಇರಲಿದೆಯೇ?

ನನ್ನ ನೆಲದ ನದಿ ಶರಾವತಿ ಮುಳುಗಡೆ ರೈತರಿಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ 'ರಾಜಕೀಯ' ಮುನ್ನೆಲೆಗೆ ಬಂದಿದೆ. ಚುನಾವಣಾ ವರ್ಷವೇ ಅದಕ್ಕೆ ಒಂದು ಮುಖ್ಯ ಭೂಮಿಕೆ ಸಿಕ್ಕಿದೆ. ಸರ್ಕಾರ ಈಚೆಗೆ ಶರಾವತಿ ಸಂತ್ರಸ್ತರ ಭೂ ಮಂಜೂರಾತಿ ಸಂಬಂಧಿಸಿದಂತೆ ಈ ಹಿಂದಿನ ಅವಧಿಗಳಲ್ಲಿ ಯೋಜನಾ ನಿರಾಶ್ರಿತರಿಗೆ ಪರಿಹಾರ ಮತ್ತು ನ್ಯಾಯದ ಭಾಗವಾಗಿ ನೀಡಿದ ಭೂಮಿಯ ಡಿನೋಟಿಫೈ ಆದೇಶ ರದ್ದು ಮಾಡಿದೆ. ರಾಜ್ಯದ ಬೆಳಕಿಗೆ ಭೂಮಿ, ಮನೆ, ಬದುಕು ಬಲಿಗೊಟ್ಟ ತಲೆಮಾರಿನ ಕುಟುಂಬಗಳು ಈಗ ಇನ್ನಷ್ಟು ಅಭದ್ರತೆಗೆ ನೂಕಲ್ಪಟ್ಟಿವೆ.

Eedina App

ಅದೊಂದು ವಿಚಾರ ಕೈ ತಪ್ಪು ಆಗಿದೆಯಂತೆ... ಮರೆತುಬಿಟ್ಟರಂತೆ... ಹಾಗೆಯೇ ಉಳಿದಿದೆಯಂತೆ... ಮಾಡಬೇಕಿತ್ತು - ಆದರೆ ಮಾಡಿರಲಿಲ್ಲವಂತೆ... ಹೈಕೋರ್ಟು ಈಗ ಅದನ್ನು ಕೇಳಿ ಕಾನೂನು ಚಾಟಿ ಬೀಸಿದೆಯಂತೆ... ಹಾಗಾಗಿ ಸದ್ಯದ ಡೈಲಾಗು - "ನಾವೇನು ಮಾಡುವುದು ಹೇಳಿ?" ಇದು ಸರ್ಕಾರ ನಡೆಸುವ ರಾಷ್ಟೀಯ ಪಕ್ಷಗಳ ಮಾತಿನ ವರಸೆ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಮಾಡುತ್ತ ಚುನಾವಣೆ ವರ್ಷದ ಮತ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಬಿಜೆಪಿ ಹಳ್ಳಿ-ಹಳ್ಳಿಗಳಲ್ಲಿ ಮುಳುಗಡೆ ರೈತರ ಸಭೆ ನಡೆಸಿದರೆ, ಕಾಂಗ್ರೆಸ್ ಈ ತಿಂಗಳ ಕೊನೆಯ ವಾರದಲ್ಲಿ ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಿದೆ. ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಾಳಯದ ಮಾರ್ಗದರ್ಶನವನ್ನು ಹಿರಿಯ ರಾಜಕಾರಣಿ ಮತ್ತು 2017ರಲ್ಲಿ ಮುಳುಗಡೆ ರೈತರಿಗೆ ಡಿನೋಟಿಫೈ ಮಾಡಿ, ಭೂಮಿ ಹಕ್ಕು ದೊಡ್ಡ ಮಟ್ಟದಲ್ಲಿ ಸಿಗಲು ಕಾರಣರಾದ ಕಾಗೋಡು ತಿಮ್ಮಪ್ಪನವರು ನೀಡುತ್ತಿದ್ದು, ಮಧು ಬಂಗಾರಪ್ಪ ಮುನ್ನೆಲೆಯಲ್ಲಿ ನಿಂತಿದ್ದಾರೆ.

ಇದು ರಾಜಕೀಯ ವಿದ್ಯಮಾನವಾದರೂ, ನನಗೆ ನೋವು ಇರುವುದು ಬೇರೆಯದೇ ಮಾದರಿಯದು. ಸರ್ಕಾರ ಮುಳುಗಡೆ ರೈತರನ್ನು ಮರೆತು ದಶಕಗಳೇ ಕಳೆದಿವೆ. ನಾನು ಈ ಹಿಂದಿನ ಬರಹದಲ್ಲಿ ಉಲ್ಲೇಖ ಮಾಡಿದ ಹಾಗೆ, ಸರ್ಕಾರ ಹೃದಯದಿಂದ ಯೋಚಿಸುವ ಬದಲು, ಮೆದುಳಿನಿಂದ ಲೆಕ್ಕಾಚಾರ ಹಾಕಿ ಕಟುಕನ ರೀತಿ ವರ್ತಿಸುತ್ತಿದೆ. ಅದರ ಪ್ರಕಾರ, ಕೇವಲ 500 ಕೋಟಿ ರೂಪಾಯಿ ಹೂಡಿಕೆ ಮಾಡಿ ಜಲಾಶಯ ಮತ್ತು ವಿದ್ಯುತ್ ಸ್ಥಾವರ ಕಟ್ಟಿ, ಹಲವು ಲಕ್ಷ ಕೋಟಿ ಆದಾಯ ಪಡೆದದ್ದು ಯಶಸ್ಸು, ಸಾಧನೆ. ಆ ಅಭಿವೃದ್ಧಿಯ ಕಿರೀಟದ ಅಮಲಿನಲ್ಲಿ ಅದು ಅದರ ಗರ್ಭದಲ್ಲಿ ಅಡಗಿರುವ ನಿಜದ ನೋವನ್ನು ಬೇಕೆಂದೇ ಮರೆತಿದೆ. ಪಕ್ಷದ ನೆಲೆಯಲ್ಲಿ ಹೇಳಬೇಕು ಎಂದರೆ, ಈ ಖ್ಯಾತಿ ಕಾಂಗ್ರೆಸ್‌ಗೆ ಸಲ್ಲಬೇಕು.

AV Eye Hospital ad

ಇದೇ ಕಾರಣಕ್ಕೆ ಈಚೆ ದಡದಿಂದ ನಾವು ಮೊನ್ನೆ-ಮೊನ್ನೆ ತನಕವೂ ಕೇಳುತ್ತಿದ್ದ ಪ್ರಶ್ನೆ ಎಂದರೆ, "ಕರ್ನಾಟಕ ರಾಜ್ಯದ ಬೊಕ್ಕಸದಿಂದ, ಸಂತ್ರಸ್ತರು ಎನ್ನುವ ಮಾನವೀಯ ನೆಲೆಯಲ್ಲಿ ನೀವು ಯಾವತ್ತಾದರೂ ಒಂದು ತುತ್ತು ನಮಗೆ ಕಾಯ್ದಿರಿಸಿ ಕೊಟ್ಟಿದ್ದು ಇದ್ದರೆ ಹೇಳಿ?" ಈ ಮಾತನ್ನು ನಾವು ಕೇಳಿದಾಗಲೆಲ್ಲ, ಶರಾವತಿ ನದಿ ದಂಡೆಯನ್ನು ಅತಿ ಹೆಚ್ಚು ಪ್ರತಿನಿಧಿಸಿದ ಕಾಗೋಡು ತಿಮ್ಮಪ್ಪನವರು ವೈಯಕ್ತಿಕವಾಗಿ ಸ್ವೀಕರಿಸಿ ಬೇಸರ, ಕೋಪ ಮಾಡಿಕೊಳ್ಳುತ್ತಾರೆ. ಆದರೆ, ಇದು ವ್ಯಕ್ತಿಕೇಂದ್ರಿತ ಪ್ರಶ್ನೆ ಅಲ್ಲ. ಕಾಗೋಡು ಅವರು ಪ್ರತಿನಿಧಿಸಿದ ಕಾರಣಕ್ಕೆ ನಮ್ಮ ನೆಲ ಈಗ ಇಷ್ಟಾದರೂ ಅಭಿವೃದ್ಧಿ ಕಂಡಿದೆ. ಆದರೆ, ಇದು ವಾಸ್ತವವಾದರೂ ನಮ್ಮ ಮೂಲ ಪ್ರಶ್ನೆಗೆ ಉತ್ತರವಂತೂ ಅಲ್ಲ. 

ಈ ಲೇಖನ ಓದಿದ್ದೀರಾ?: ಈಚೆ ದಡದಿಂದ | ಸಾಗರ ತಾಲೂಕಿನ ಉರುಳುಗಲ್ಲಿನ ಮಂದಿಗೆ ಆಸ್ಪತ್ರೆಗೆ ಹೋಗಲು ದಡಿಗೆಯೇ ಗತಿ!

ರಾಜ್ಯದ ಬಜೆಟ್ ಅಥವಾ ಕೆಪಿಸಿ ಲಾಭದಲ್ಲಿ ಪ್ರತಿಶತ 10ರಷ್ಟು ಪಾಲು ನೀಡಿದ್ದರೂ ಬೆಳಕು ಕೊಟ್ಟವರ ಕಗ್ಗತ್ತಲಿನ ಉರುಳುಗಲ್ಲು ಎನ್ನುವ ಬೆಳಕು ಮತ್ತು ರಸ್ತೆ ಕಾಣದ ಊರು ಈಚೆ ದಡದಲ್ಲಿ ಉಳಿಯುತ್ತಿರಲಿಲ್ಲ. ಮತ್ತೆ-ಮತ್ತೆ ಹೇಳುವೆ - 'ಉರುಳುಗಲ್ಲು' ಎಂಬ ಊರು - ಶರಾವತಿ ಯೋಜನೆಗೆ ಬರೆದ ಕಟು ವಿಮರ್ಶೆಯಾಗಿ ಎಲ್ಲರ ಕಣ್ಣೆದುರಿಗಿದೆ.

ಈ ಮೇಲಿನ ನಮ್ಮ ವಾದವನ್ನು ಹಿಡಿದು, ಕಾಗೋಡು ಅವರು ಈ ಹಿಂದಿನ ಸರ್ಕಾರದ ಮೂಲಕ ಎರಡು ಮುಖ್ಯ ನಿರ್ಧಾರ ಹೊರಬರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರು. ಮೊದಲಿಗೆ ರೂಪುಗೊಂಡಿದ್ದೇ, ಹಸಿರುಮಕ್ಕಿಯಲ್ಲಿಗೆ ನೂರು ಕೋಟಿ ರೂಪಾಯಿ ಅನುದಾನದ ಸೇತುವೆಗೆ ಸಿದ್ದರಾಮಯ್ಯ ಸರ್ಕಾರ ಅನುಮತಿ ನೀಡಿ ಟೆಂಡರ್ ಕರೆದು ಕೆಲಸ ಆರಂಭ ಮಾಡಿದ್ದು. ಶೆಟ್ಟಿಹಳ್ಳಿ ಅಭಯಾರಣ್ಯ ಸೇರಿದಂತೆ ಶಿವಮೊಗ್ಗ ಜಿಲ್ಲಾ ಕೇಂದ್ರದ ಆಸುಪಾಸು ಇರುವ ಸಾವಿರಾರು ಎಕರೆ ಸಂತ್ರಸ್ತರ ಭೂಮಿಯನ್ನು ಡಿನೋಟಿಪೈ ಮಾಡಿ ಆದೇಶ ಹೊರಡಿಸಿ, ಸಂತ್ರಸ್ತರ ಎದುರಿದ್ದ ಕಾರ್ಮೋಡ ಸರಿಸಿದ್ದು ಎರಡನೇ ಕೆಲಸ.

ಸಿದ್ದರಾಮಯ್ಯ

ಈಗ ಅದೇ ಭೂಮಿ ಸೇರಿದಂತೆ ಈ ಹಿಂದಿನ 56 ಡಿನೋಟಿಪೈ ಆದೇಶಗಳನ್ನೂ ರದ್ದು ಮಾಡಲು ಕರ್ನಾಟಕ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ, ಸರ್ಕಾರ ಅದೇ ದಿಕ್ಕಿನಲ್ಲಿ ಮುಂದುವರಿದಿದೆ. ಈ ಹಿಂದೆ ರಾಜ್ಯ ಪಟ್ಟಿಯಲ್ಲಿ ಇದ್ದ ಅರಣ್ಯ ವಿಷಯ ಈಗ 'ಸಮವರ್ತಿ ಪಟ್ಟಿ' ಸೇರಿದಾಗಲೂ ರಾಜ್ಯ ತನ್ನ ಡಿನೋಟಿಪೈ ಮಾಡುವ ಮುನ್ನ ಕೇಂದ್ರ ಅನುಮತಿ ಪಡೆಯದೆ ಇರುವ ಆಡಳಿತಾತ್ಮಕ ನ್ಯೂನತೆ ಪರಿಗಣಿಸಿ ಈಗಿನ ಮತ್ತು ಹಿಂದಿನ ಎಲ್ಲ ಸರ್ಕಾರದ ಆದೇಶ ರದ್ದುಗೊಳಿಸಲಾಗಿದೆ - ಎಂಬ ಕಾರಣ ಮುಂದಿಡಲಾಗಿದೆ.

ಅಚ್ಚರಿ ಎಂದರೆ, ಹೈಕೋರ್ಟ್ ತೀರ್ಪಿನಲ್ಲಿ ಇರುವ ಅಂಶಗಳದ್ದು. ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ಕಟ್ಟುವ ಕಾಮಗಾರಿ ಆರಂಭವಾಗಿದ್ದು 1962ರಲ್ಲಾದರೂ, ಅದರ ಆಡಳಿತಾತ್ಮಕ ಪ್ರಕ್ರಿಯೆ ಶುರುವಾಗಿದ್ದು 1955ರ ಹೊತ್ತಿಗೆ. ಅದೇ ಹೊತ್ತಿನಲ್ಲಿ ಸಂತಸ್ತ ಕುಟುಂಬಗಳಿಗೆ ಬದಲಿ ಭೂಮಿ ಗುರುತಿಸಿ ಸ್ಥಳಾಂತರ ಪ್ರಕ್ರಿಯೆ ನಡೆದಿತ್ತು. ಆಗ ಅರಣ್ಯ ವಿಷಯ ರಾಜ್ಯ ಪಟ್ಟಿಯಲ್ಲಿತ್ತು. ಸಂವಿಧಾನದತ್ತ ಅಧಿಕಾರ ಬಳಸಿಯೇ ಈ ಪ್ರಕ್ರಿಯೆ ನಡೆದಿದೆ. ಇದನ್ನು ಹೈಕೋರ್ಟ್‌ಗೆ ಮನನ ಮಾಡಲು ರಾಜ್ಯ ಸರ್ಕಾರ ಈಗ ವಿಫಲವಾಗಿರುವುದು ಸ್ಪಷ್ಟ. ಈ ವೈಫಲ್ಯದಿಂದಲೇ, 1970ರ ಮುಂಚಿನ ಭೂಮಿ ವಿಷಯದಲ್ಲೂ ಈಗ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ. ರಾಜ್ಯಪಾಲರ ಆದೇಶ ಇದ್ದರೂ, ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂ ವರ್ಗಾವಣೆ ಆಗದೆ ಇಷ್ಟು ವರ್ಷ ಸಾಗಿ ಬರುವುದು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಅಲ್ಲದೆ ಮತ್ತೇನೂ ಅಲ್ಲ.

ಕಾಗೋಡು ತಿಮ್ಮಪ್ಪ

2016-17ರ ಡಿನೋಟಿಫೈ ಕೂಡ ಮತ್ತದೇ ಆಡಳಿತಾತ್ಮಕ ನ್ಯೂನತೆಯ ಮುಂದುವರಿದ ಭಾಗವಾಯ್ತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರಾಗಿ ಕಾಗೋಡು ಮಾಡಿದ ನಿರ್ಣಾಯಕ ಕೆಲಸ ಗುರಿ ಮುಟ್ಟದೆ ಹಾಗೆಯೇ ಉಳಿದಿದೆ. ಈ ನಡುವೆ ಕಾಗೋಡು ಹೋರಾಟಕ್ಕೆ ಇಳಿಯುವುದಾಗಿ ತಿಳಿಸುತ್ತ, ಮತ್ತೆ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ತುಂಬಾ ಜೋರಾಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತ ಮಿಂಚುತ್ತಿರುವುದು, ಕಾಂಗ್ರೆಸ್ ಸೇರಿರುವ ಹುಮ್ಮಸಿನಲ್ಲಿ ಇರುವ ಮತ್ತು "ಮುಂದಿನ ವಿಧಾನಸಭೆಯಲ್ಲಿ ಸೊರಬದಿಂದ ಗೆದ್ದು ಮಂತ್ರಿ ಆಗುವೆ," ಎಂದು ಘೋಷಣೆ ಮಾಡಿರುವ ಮಧು ಬಂಗಾರಪ್ಪನವರು. ಈ ಹಿಂದೆ ಅವರು ಸಂಸತ್ ಚುನಾವಣೆಗೆ ನಿಂತಾಗ ಮುಳುಗಡೆ ರೈತರು ಬೆಂಬಲ ನೀಡಿದ್ದರು. ಹಾಗಾಗಿ, ಶಿವಮೊಗ್ಗ ಜಿಲ್ಲೆಯ ರಾಜಕೀಯದಲ್ಲಿ ಮುಳುಗಡೆ ರೈತರ ಪರವಾಗಿ ಅವರ ದ್ವನಿ ಎತ್ತರವಾಗುವುದು ನಿರೀಕ್ಷಿತ.

ಮಧು ಬಂಗಾರಪ್ಪ

ರಾಜಕೀಯ ಅನ್ನೋದನ್ನು ಲಾಭ-ನಷ್ಟದ ವ್ಯವಹಾರದ ಮಟ್ಟಕ್ಕೆ ತಂದು ನಿಲ್ಲಿಸಿಯಾಗಿದೆ ಎಂಬುದು ಲೋಕಾದ್ಯಂತ ಸತ್ಯ. ಆದರೆ, ಮಧು ಬಂಗಾರಪ್ಪನವರಿಂದ ನನ್ನಂಥವರು ಬೇರೆಯದೇ ನಿರೀಕ್ಷೆ ಮಾಡುತ್ತೇವೆ. ಅವರ ಹೆಸರಿನೊಂದಿಗೆ ಇರುವ 'ಬಂಗಾರಪ್ಪ' ಎಂಬ ಪದ ಇದಕ್ಕೆ ಮುಖ್ಯ ಕಾರಣ. ಚುನಾವಣೆ ವರ್ಷದ ಮತ ಲೆಕ್ಕಾಚಾರದ ನಡುವೆಯೂ ನದಿ ಪಾತ್ರದ ಜನರ ಬಗ್ಗೆ ನಿಜವಾದ ಕಾಳಜಿ ವ್ಯಕ್ತವಾಗಬೇಕಾದ್ದು ಉಳಿದ ಹೊತ್ತಿನಲ್ಲಿ ಇರುವ ನಮ್ಮ ನಡವಳಿಕೆಯಿಂದ. ಮೂರು ವರ್ಷದ ಹಿಂದೆ ನಮ್ಮ ನದಿ ದಂಡೆಯಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿತ್ತು. ಜನ ಜೀವಭಯದಿಂದಲೇ ಬದುಕಿ ಅದನ್ನು ಎದುರಿಸಿದರು. ಅದೇ ಹೊತ್ತಿನಲ್ಲಿ ಕೊರೊನಾ ಕೂಡ ಇತ್ತು. 50 ವರ್ಷದ ನಂತರ ಮಂಗನ ಕಾಯಿಲೆ ವಿಪರೀತ ಏರಿಕೆ ಕಂಡು, ನಾಲ್ಕು ತಿಂಗಳ ಅವಧಿಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ 18 ಮಂದಿಯನ್ನು ಬಲಿ ತೆಗೆದುಕೊಂಡಿತು. ನೂರಾರು ಜನ ಆಸ್ಪತ್ರೆ ಸೇರಿದರು. (ನಾನಾಗ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿದ್ದೆ.) ಮಧು ಬಂಗಾರಪ್ಪ ಅವರಿಗೆ ನೂರಾರು ಬಾರಿ ಕರೆ ಮಾಡಿದರೂ ಕರೆ ಸ್ವೀಕಾರ ಮಾಡಿರಲಿಲ್ಲ. ಜಾಲತಾಣದಲ್ಲಿ ಪ್ರಶ್ನೆ ಮಾಡಿ ಸುದ್ದಿ ಆದಾಗ, ಎರಡು ತಿಂಗಳ ನಂತರವಷ್ಟೇ ಅರಲಗೊಡಿಗೆ ಒಂದು ದಿನ ಭೇಟಿ ನೀಡಿದ್ದರು.

ಈಗ ನಾಲ್ಕು ತಿಂಗಳ ಹಿಂದೆ ಉರುಳುಗಲ್ಲು ಘಟನೆಯಲ್ಲಿ ಅವಿವೇಕಿ ಅರಣ್ಯಾಧಿಕಾರಿಯೊಬ್ಬರು ರೈತರ ಕೈಗೆ ಸ್ಲೇಟು ಹಿಡಿಸಿದ್ದು ದೊಡ್ಡ ಹೋರಾಟಕ್ಕೆ ಕಾರಣವಾಯಿತು. ಕಣಿವೆ ಜನರು 22 ಕಿಲೋಮೀಟರ್ ಪಾದಯಾತ್ರೆ ನಡೆಸಿದಾಗ, ನದಿ ದಡದ ಜನರ ಜೊತೆ ಮಧು ಬಂಗಾರಪ್ಪ ಕಾಣಿಸಿಕೊಳ್ಳಲೇ ಇಲ್ಲ. ಆದರೆ, ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಹೋರಾಟದ ನಂತರ 90 ವರ್ಷದ ಕಾಗೋಡು ತಿಮ್ಮಪ್ಪ ಗ್ರಾಮಕ್ಕೆ ಭೇಟಿ ನೀಡಿ ಜೊತೆ ಇರುವುದಾಗಿ ತಿಳಿಸಿದ್ದರು.

ಅರಣ್ಯ ಇಲಾಖೆಯವರ 'ಸಾಹಸ'

ಈಗ ಪ್ರಶ್ನೆ ಬಹಳ ಸ್ಪಷ್ಟವಿದೆ...

ರಾಜಕೀಯ ಲೆಕ್ಕಾಚಾರ ಇರುವ ಈ ಡಿನೋಟಿಫೈ ವಿಷಯ ಚುನಾವಣಾ ವರ್ಷದಲ್ಲೇ ಮುನ್ನೆಲೆಗೆ ಬಂದಿರುವುದರಿಂದ, ಎಲ್ಲ ಪಕ್ಷದ ನೇತಾರರು ಈ ವಿಷಯದಲ್ಲಿ ಆಸಕ್ತಿ ತೋರುವುದು ನಿರೀಕ್ಷಿತ. ಆದರೆ, ಅಸಲು ಪ್ರಶ್ನೆ ಇರುವುದು - ನಾಡಿಗೆ ಬೆಳಕು ಕೊಟ್ಟು 5ಜಿ ಯುಗದಲ್ಲಿಯೂ ವಿದ್ಯುತ್, ರಸ್ತೆ, ಶಾಲೆ ಇಲ್ಲದೆ ದಡಿಗೆ ಮೇಲೆ ರೋಗಿ ಹೊತ್ತು ಹೋಗುವ ಉರುಳುಗಲ್ಲು ಸಂತ್ರಸ್ತರದ್ದು! ಇರುವುದು ಅರವತ್ತು ಮನೆಗಳು ಮಾತ್ರ. ಸಂಖ್ಯಾಬಲ ಇಲ್ಲದ ಈ ಸಂತ್ರಸ್ತರ ಪರ ಚುನಾವಣಾಸಕ್ತ ಜನನಾಯಕರು ದನಿ ಎತ್ತುವುದು ಯಾವಾಗ? ಮಧು ಬಂಗಾರಪ್ಪನವರು ಮತ್ತೆ ಮಂತ್ರಿಯಾಗಬಹುದು, ಹಿರಿಯರಾದ ಕಾಗೋಡು ತಿಮ್ಮಪ್ಪನವರು ಮತ್ತೆ ವಿಧಾನಸಭೆ ಪ್ರವೇಶ ಮಾಡಿ ಕಂದಾಯ ಮಂತ್ರಿ ಆಗಲೂಬಹುದು.

ಆದರೆ, ಉರುಳುಗಲ್ಲಿನ ಉರುಳು? ಇಲ್ಲಿನ ಜನರ ಕತೆ?

ಆ ಬಗ್ಗೆ ಜನನಾಯಕರ ಜಾಣಮೌನ ಏನನ್ನು ಹೇಳುತ್ತಿದೆ?

'ಈಚೆ ದಡದಿಂದ' ಈ ಹೊತ್ತಿನ ಪ್ರಶ್ನೆ ಇದು.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app