ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪ್ರತ್ಯಕ್ಷವೇ ಪ್ರಮಾಣ: ಸರಸ್ವತಿ ಗೋರಾ

Saraswati Gora 4

ವಿಜಯವಾಡದಲ್ಲಿ 'ನಾಸ್ತಿಕ ಕೇಂದ್ರ’ವನ್ನು ದಶಕಗಟ್ಟಲೆ ಯಶಸ್ವಿಯಾಗಿ ಮುನ್ನಡೆಸಿ, ಜಾತಿ ಪದ್ಧತಿ, ಅಸ್ಪೃಶ್ಯತೆಗಳ ವಿರುದ್ಧ ಹೋರಾಡಿದವರು ಈ ಸರಸ್ವತಿ. 'ಸತ್ಯಶೋಧಕ ಸಮಾಜ’ವನ್ನು ಮುನ್ನಡೆಸಿದ ಸಾವಿತ್ರಿಬಾಯಿ ಫುಲೆಯವರ ಬದುಕನ್ನು ನೆನಪಿಸುವಂತೆ ಬದುಕಿದ, ಕುಟುಂಬದ ಜೊತೆಗೆ ಸುತ್ತಲಿನ ಸಮಾಜವನ್ನೂ ನಾಸ್ತಿಕ ಚಿಂತನೆಯೆಡೆಗೆ ಒಯ್ದ ಪ್ರಭಾವಶಾಲಿ

ಜಾತಿಮತಗಳ ಕಟ್ಟುಪಾಡುಗಳನ್ನು ಮುಂದುವರಿಸುವ, ಅವುಗಳ ಶುದ್ಧತೆಯನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿಯನ್ನು ಮನುಷ್ಯ ಸಮಾಜ ಮಹಿಳೆಯರ ಮೇಲೆ ಹೇರಿದೆ. ಅನಾದಿಯಿಂದ ಬಂದ ರೂಢಿ, ಸಂಪ್ರದಾಯಗಳು ತನ್ನ ವಿರುದ್ಧವಾಗಿದ್ದರೂ ಮುಂದುವರಿಸಿಕೊಂಡು ಹೋಗುವುದು ತನ್ನದೇ ಹೊಣೆ ಎಂಬ ತಪ್ಪು ಕಲ್ಪನೆಯಲ್ಲಿ ಮಹಿಳಾ ಸಮುದಾಯ ಮುಳುಗಿಹೋಗಿದೆ. ಸ್ವಾತಂತ್ರ್ಯ ದೊರೆತರೂ ಅದನ್ನು ಅನುಭವಿಸಲಾಗದ ಅಸ್ವತಂತ್ರ ಮನಃಸ್ಥಿತಿಯಲ್ಲಿ ಹೆಣ್ಣುಗಳಿರುವುದಕ್ಕೆ ಇದೇ ಕಾರಣ.

ಬೌದ್ಧಿಕವಾಗಿ ಮಹಿಳೆಯರ ಮೇಲೆ ಹೊರಿಸಲಾದ, ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕಾದ ಹಲವು ಸಂಗತಿಗಳಲ್ಲಿ 'ದೇವರಲ್ಲಿ ನಂಬಿಕೆ’ ಮುಖ್ಯವಾದದ್ದು. ಭಾವುಕರಾದರೂ ವಾಸ್ತವವಾದಿಗಳಾಗಿರುವ ಹೆಣ್ಣುಗಳಿಗೆ ಸೃಷ್ಟಿಕರ್ತ ದೇವರ ಇರುವಿಕೆಯ ಬಗೆಗೆ ಸ್ಪಷ್ಟ ಅಭಿಪ್ರಾಯವಿರುತ್ತದೆ. ದೇವರಿಗೆ ಕೊಟ್ಟಿರುವ ಹಿರಿಮೆಯ ಹಿಂದಿನ ಸತ್ಯಾಂಶದ ಅರಿವಿರುತ್ತದೆ. ತಮ್ಮ ಅಭಿಪ್ರಾಯಗಳನ್ನು ಹೇಳುವ ಧೈರ್ಯ, ಅವಕಾಶವಿಲ್ಲದ ಕಾರಣ ಆಸ್ತಿಕತೆಯನ್ನು ಹೇರಿಕೊಂಡು ಬದುಕುತ್ತಾರೆ. ಅಧ್ಯಯನವೊಂದು ತಿಳಿಸುವಂತೆ, ನಾಸ್ತಿಕರಲ್ಲಿ ಹೆಣ್ಣುಮಕ್ಕಳೇ ಅಧಿಕ. ಆದರೂ ಮತ, ಧರ್ಮ, ದೇವರುಗಳ ಬಗೆಗೆ ಮನ ತೆರೆದು ಮಾತನಾಡುವ, ತಮ್ಮಿಷ್ಟದಂತೆ ಬದುಕುವ ಅವಕಾಶವನ್ನು ಅವರಿಗೆ ನಿರಾಕರಿಸಲಾಗಿದೆ. ವಿಶ್ವಾದ್ಯಂತ ನಾಸ್ತಿಕ ಮಹಿಳೆಯರು ದಮನಕ್ಕೆ ಒಳಗಾಗಿದ್ದಾರೆ.

ಇಂಥವರ ನಡುವೆ ನಾಸ್ತಿಕ ಗಂಡನ ಸಂಪರ್ಕಕ್ಕೆ ಬಂದು, ಅವರ ವಿಚಾರಗಳನ್ನರಿತು ತಾನೂ ಬೌದ್ಧಿಕವಾಗಿ ವಿಕಾಸಗೊಂಡು, ಸಮಾಜಕ್ಕೆ ತೆತ್ತುಕೊಂಡ ಮಹಿಳೆ ಸರಸ್ವತಿ ಗೋಪರಾಜು. ಆಂಧ್ರದ ವಿಜಯವಾಡದಲ್ಲಿ 'ನಾಸ್ತಿಕ ಕೇಂದ್ರ’ವನ್ನು ದಶಕಗಟ್ಟಲೆ ಯಶಸ್ವಿಯಾಗಿ ಮುನ್ನಡೆಸಿ, ಜಾತಿ ಪದ್ಧತಿ, ಅಸ್ಪೃಶ್ಯತೆಗಳ ವಿರುದ್ಧ ಯುದ್ಧೋಪಾದಿಯಲ್ಲಿ ಹೋರಾಡಿದವರು ಸರಸ್ವತಿ ಗೋಪರಾಜು ರಾಮಚಂದ್ರರಾವ್. 'ಸತ್ಯಶೋಧಕ ಸಮಾಜ’ವನ್ನು ಮುನ್ನಡೆಸಿದ ಸಾವಿತ್ರಿಬಾಯಿ ಫುಲೆಯವರ ಬದುಕನ್ನು ನೆನಪಿಸುವಂತೆ ಬದುಕಿದ, ತಮ್ಮ ಒಂಬತ್ತು ಮಕ್ಕಳ ಕುಟುಂಬವನ್ನು ನಾಸ್ತಿಕ ಚಿಂತನೆಯೆಡೆಗೆ ಒಯ್ದಾಕೆ ಸರಸ್ವತಿ ಗೋರಾ (1912-2006).

* * * * *

Image
Saraswati Gora 3
ಸರಸ್ವತಿ ಗೋರಾ ದಂಪತಿ

1912ರ ಸೆಪ್ಟೆಂಬರ್ 28ರಂದು ಆಂಧ್ರದ ವಿಜಯನಗರಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿದ ಹುಡುಗಿ ಸರಸ್ವತಿ. ಎಲ್ಲ ಸಾಂಪ್ರದಾಯಿಕ ಮನೆಗಳಲ್ಲಿ ಹೇಗೋ ಹಾಗೆ ಅವಳ ಮನೆಯ ಹೆಣ್ಣುಗಳು ಹಾಡು-ಹಸೆ, ಮನೆಗೆಲಸ, ರಂಗೋಲಿ ಕಲಿಯುತ್ತ ಬೆಳೆಯುತ್ತಿದ್ದರು. ಸರಸ್ವತಿಯಾದರೋ, 'ಹೀಗೇ ಮಾಡು' ಎಂದು ಯಾರಾದರೂ ನಿರ್ಬಂಧಿಸಿದರೆ ಅದು ಇಷ್ಟವಾಗದೆ, ಒಂದಲ್ಲ ಒಂದು ರೀತಿ ಪ್ರತಿರೋಧ ಒಡ್ಡುತ್ತಿದ್ದಳು. ಶಾಲೆಗೆ ಹೋಗತೊಡಗಿ ಓದು-ಬರಹ ಕಲಿತಳು. ಹತ್ತು ವರ್ಷವಾದಾಗ ಅಂದಿನ ವಾಡಿಕೆಯಂತೆ ಮದುವೆಯಾಯಿತು. ಅವಳ ಬಾಳಸಂಗಾತಿ ಒಡಿಶಾದ ಛತ್ರಪುರದಲ್ಲಿ ಹುಟ್ಟಿದ ಗೋಪರಾಜು ರಾಮಚಂದ್ರರಾವ್. ಅವಳಿಗಿಂತ ಹತ್ತು ವರ್ಷ ದೊಡ್ಡವ. ವಿಜ್ಞಾನ ಪದವಿ ಪಡೆಯಲು ಓದುತ್ತಿದ್ದ. ದೇವರು ಎಂಬ ಪದವನ್ನು ಎಳ್ಳುಕಾಳಿನಷ್ಟೂ ನಂಬದವ. ಪೂಜೆ ಮಾಡದ, ವ್ರತಕತೆಗಳಲ್ಲಿ ಭಾಗಿಯಾಗದ, ಗುಡಿ, ಮಠಕ್ಕೆ ಹೋಗದ ಅವನಿಗೆ ಸದಾ ಒಂದೇ ಕೆಲಸ - ಓದು, ಓದು, ಓದು. ಅಂಥವ ಮದುವೆಯಾಗಿ ಮನೆಗೆ ಬಂದ ಹೆಂಡತಿಯಲ್ಲಿ ಪುಟ್ಟ ಗೆಳತಿಯನ್ನು ಕಂಡ. ತನ್ನನ್ನು ಹೆಸರು ಹಿಡಿದು ಕರೆಯುವಂತೆ ಒತ್ತಾಯಿಸಿದ. ಎಲ್ಲಾದರೂ ಉಂಟೇ? ಕೊನೆಗೆ ಹೆಸರಿನ ಹ್ರಸ್ವ ರೂಪ 'ಗೋರಾ’ ಎಂದು ಕರೆಯುವುದು ಎಂದಾಯಿತು. ಸರಸ್ವತಿಗೆ ತವರಿನಲ್ಲಿ ಬರಿಯ ನಿರ್ಬಂಧಗಳೇ ತುಂಬಿದ್ದರೆ, ಇಲ್ಲಿ ಗಂಡ ಮುಕ್ತವಾಗಿರು ಎನ್ನುತ್ತಿದ್ದ. ಅವಳನ್ನು ಯೋಚಿಸಲು ಹಚ್ಚುತ್ತಿದ್ದ. ಎಲ್ಲ ವಿಷಯಗಳನ್ನು ಮಾತನಾಡುತ್ತಿದ್ದ. ಅವ ಹೇಳುವುದೆಲ್ಲ ಚೆನ್ನ, ಹೇಳುವುದೆಲ್ಲ ನಿಜ ಎನಿಸುತ್ತಿತ್ತು. ತನ್ನ ಗಂಡ ಎಷ್ಟು ವಿಚಾರವಂತ ಎಂದು ಹೆಮ್ಮೆಯಾಗುತ್ತಿತ್ತು.

ಇರುವುದನ್ನು ಇರುವ ಹಾಗೆಯೇ ಒಪ್ಪಿಕೊಳ್ಳಲು, ಏನನ್ನೂ ಪ್ರಶ್ನಿಸಬಾರದೆನ್ನುವ ಮನಸ್ಥಿತಿಯನ್ನು ರೂಪಿಸಲು ಸಾಂಪ್ರದಾಯಿಕತೆಯು ಒತ್ತಡ ಹೇರುತ್ತಿರುತ್ತದೆ. ಬಾಲ್ಯದಲ್ಲಿ ದಿನನಿತ್ಯ ಒಳಪಡುವ ಸಾಂಪ್ರದಾಯಿಕ ಚೌಕಟ್ಟಿನ ಬಗೆಗೆ ಹದಿಹರೆಯದಲ್ಲಿ ಹಿಂಜರಿಕೆ, ಅಪಕರ್ಷಣೆ, ವಿರೋಧ ಮೊಳೆಯುವ ಸಾಧ್ಯತೆಯಿರುತ್ತದೆ. ಅಭಿವ್ಯಕ್ತಿಯ ಮೇಲಿನ ಒತ್ತಡ ಹುಟ್ಟಿಸುವ ಅಸ್ವತಂತ್ರ ಭಾವ ಬಿಡುಗಡೆಗಾಗಿ ಮಗದೊಂದರತ್ತ ಸೆಳೆಯುತ್ತದೆ. ಅತಿ ಸಾಂಪ್ರದಾಯಿಕ ಮನೆಗಳಲ್ಲೇ ಕ್ರಾಂತಿಕಾರಿಗಳು, ನಾಸ್ತಿಕರು, ವಿಚಾರವಾದಿಗಳು ಹುಟ್ಟುವುದು ಹೀಗೆ. ಗೋಪರಾಜುವಿನದೂ ಸಾಂಪ್ರದಾಯಿಕ ಮನೆತನವೇ. ಆದರೆ, ಅವನು ಮೊದಲಿನಿಂದ ನಾಸ್ತಿಕ ಭಾವ ಹೊಂದಿದ್ದವ. ಬೆಳೆಯುತ್ತ ಹೋದಂತೆ ವಿಜ್ಞಾನ ವಿಷಯ ಸೆಳೆಯತೊಡಗಿತು. ಏಕೆ, ಹೇಗೆ ಎಂದು ಪ್ರಶ್ನಿಸತೊಡಗಿದ. ವಿಸ್ತೃತ ಓದಿಗೆ ತೆತ್ತುಕೊಂಡ.

ಸಸ್ಯಶಾಸ್ತ್ರದಲ್ಲಿ ಪದವಿ ಮತ್ತು ಮದರಾಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಗೋಪರಾಜು ವಿಚಾರವಾದಿಯಾಗಿ ಬೆಳೆಯತೊಡಗಿದರು. ತಮ್ಮ ವಿಚಾರಗಳ ಬೆಳಕಿನಲ್ಲಿ ಸ್ವತಂತ್ರ ವೈಚಾರಿಕ ಅಸ್ತಿತ್ವ ರೂಪಿಸಿಕೊಂಡರು. ಮೂಢ ಆಚರಣೆಗಳ ಕೈಬಿಡುವಂತೆ ಮನೆಯವರ ಮನವೊಲಿಸಲು ಯತ್ನಿಸುತ್ತಿದ್ದರು. ಸಮಾಜ ಬದಲಿಸಲು ಹೊರಡುವವರು ಮೊದಲು ತಮ್ಮ ಮನೆ ಬದಲಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಗಾಢವಾಗಿ ನಂಬಿದ್ದ ಗೋರಾ, ಅದನ್ನು ಹೆಂಡತಿಯ ತನಕ ಮುಂದುವರಿಸಿದರು. ಆದರೆ, ಪರಂಪರಾನುಗತವಾಗಿ ಬಂದದ್ದನ್ನು ಬಿಡಿಸುವುದು ಅಷ್ಟು ಸುಲಭವೇ? ಒಮ್ಮೊಮ್ಮೆ ತನ್ನ ಜನ್ಮಜಾತ ರೂಢಿಯಂತೆ ದೈವದ, ದೇವರ ಹೆಸರು ತೆಗೆದು ಸರಸ್ವತಿ ಗಂಡನ ಟೀಕೆ, ಕೀಟಲೆಗೆ ಪಾತ್ರಳಾಗುತ್ತಿದ್ದಳು. ಬಡಪೆಟ್ಟಿಗೆ ಬಿಡದೆ ಗೋರಾ, ತಮ್ಮ ವಿಚಾರಗಳನ್ನು ಹೆಂಡತಿಗೆ ಎಳೆಎಳೆಯಾಗಿ ಬಿಡಿಸಿ ಹೇಳಿದರು. ತನ್ನ ಸಂಗಾತಿ ತೋರಿಸಿದ ಹಾದಿ ಸಮಂಜಸ ಎನಿಸಿದ ಬಳಿಕ ಸರಸ್ವತಿ ಮನಃಪೂರ್ವಕ ಒಪ್ಪಿಕೊಂಡಳು. ಯಾವುದು ಮೌಢ್ಯ, ಯಾವುದು ನಿಜ, ಯಾವುದು ಪ್ರಾಕೃತಿಕ ಎನ್ನುವುದನ್ನು ಸ್ಪಷ್ಟವಾಗಿ ಅರಿತಳು.

Image
Saraswati Gora 1
ಜಪಾನಿನ ಕೃಷಿ ವಿಜ್ಞಾನಿಗಳೊಂದಿಗೆ ಸ್ವರಸ್ವತಿ-ಗೋರಾ

ನಾಸ್ತಿಕತೆ, ವಿಚಾರವಾದವನ್ನು ಒಪ್ಪಿಕೊಂಡ ಮೇಲೆ ದೇವರು, ಕರ್ಮ, ವಿಧಿ, ಪುನರ್ಜನ್ಮ ಮೊದಲಾದವು ಹುಸಿ ಕಲ್ಪನೆಗಳೆನಿಸತೊಡಗುತ್ತದೆ. ಆಗ ಸಮಾಜದ ಅನ್ಯಾಯಗಳು ಕಣ್ಣಿಗೆ ರಾಚತೊಡಗುತ್ತವೆ. ಅವಕ್ಕೆ ಯಾರು ಹೊಣೆ ಎಂಬ ಅರಿವಾಗುತ್ತದೆ. ನ್ಯಾಯದ ಕಣ್ಣಿರುವ ಕ್ರಿಯಾಶೀಲ ಮನಸ್ಸು ಹೊರದಾರಿ ಹುಡುಕುತ್ತದೆ. 'ಮೇಲ್ಜಾತಿ’ ಎನಿಸಿಕೊಂಡ ಸಮುದಾಯದಲ್ಲಿ ಹುಟ್ಟಿದ ಸರಸ್ವತಿ-ಗೋರಾ, ಸರ್ವೋದಯ ಸಾಧ್ಯವಾಗುವುದು ವಿಚಾರವಾದ ಮತ್ತು ನಾಸ್ತಿಕತೆಯಿಂದ ಎಂದು ನಂಬಿ ಸಮಾಜದ ಅನ್ಯಾಯಗಳ ವಿರುದ್ಧ ದನಿಯೆತ್ತಿದರು. ನಿವಾರಣೆಯ ಕ್ರಮಗಳಿಗೆ ಮುಂದಾದರು.

"ದೇವರು ಇಲ್ಲ ಎನ್ನುವ ನಿರೀಶ್ವರವಾದಕ್ಕೂ ನಾಸ್ತಿಕತೆಗೂ ತುಂಬ ವ್ಯತ್ಯಾಸವಿದೆ. ನಿರೀಶ್ವರವಾದ ನೇತ್ಯಾತ್ಮಕ. ಆದರೆ, ನಾಸ್ತಿಕವಾದ ರಚನಾತ್ಮಕವಾದದ್ದು. ದೇವರಿಲ್ಲದ ಸ್ಥಿತಿಯ ಫಲಿತಾಂಶಗಳನ್ನು ಅದು ವಿಶ್ಲೇಷಿಸುತ್ತದೆ. ಬದುಕಿನಲ್ಲಿ ಇತ್ಯಾತ್ಮಕ ಹೆಜ್ಜೆಗಳನ್ನಿಡಲು ಧೈರ್ಯ ತುಂಬುತ್ತದೆ. ಜಾತಿ, ಧರ್ಮದ ಕಂದಕಗಳನ್ನು ದಾಟಲು ಸಹಾಯ ಮಾಡುತ್ತದೆ. ತಮ್ಮ ಸ್ಥಿತಿ ಕರ್ಮದಿಂದಲ್ಲ, ದೇವರಿಚ್ಛೆಯಿಂದಲೂ ಅಲ್ಲ, ಸ್ವಇಚ್ಛೆ, ಸ್ವಪ್ರಯತ್ನದಿಂದ ಸಂಭವಿಸಿದ್ದೆಂದು ತಿಳಿಯುವಂತೆ ಮಾಡುತ್ತದೆ. ಭಾರತದಲ್ಲಿ ಅಸ್ಪೃಶ್ಯರೆನಿಸಿಕೊಂಡ ಜನರು ತಾವು ನಿಜವಾಗಿಯೂ 'ಅಸ್ಪೃಶ್ಯ’ರಲ್ಲವೆಂದು, ತಮ್ಮ ಹುಟ್ಟು ವಿಧಿಲಿಖಿತ ಅಲ್ಲವೆಂದು ನಂಬಲು ನಾಸ್ತಿಕತೆಯಿಂದ ಸಾಧ್ಯ. ವಾಸ್ತವದ ಅರಿವು ಅವರನ್ನು ಬಿಡುಗಡೆಯತ್ತ ಕರೆದೊಯ್ಯುತ್ತದೆ," ಎಂದು ಗೋರಾ ದಂಪತಿಗಳು ಪ್ರತಿಪಾದಿಸಿದರು. ಎಲ್ಲ ಜಾತಿ-ಮತದ ಜನರೊಡನೆ ಇರತೊಡಗಿದರು. ಸಭೆ, ಸಮಾರಂಭ, ಚರ್ಚೆಯೆಂದು ಯಾವ ಊರಿಗೇ ಹೋಗಲಿ, ದಲಿತ ಕೇರಿಗಳ ಪರಿಚಯದ ಮನೆಗಳಲ್ಲೇ ಉಳಿದುಕೊಳ್ಳತೊಡಗಿದರು.

ಸರಸ್ವತಿ ಗರ್ಭಿಣಿಯಿರುವಾಗ ಖಗ್ರಾಸ ಸೂರ್ಯಗ್ರಹಣ ಬಂತು. ಧಗಧಗಿಸುವ ಸೂರ್ಯನಿಗೆ ಚಂದ್ರ ಅಡ್ಡ ಬಂದು ಹಗಲಲ್ಲೇ ಕತ್ತಲಾಗತೊಡಗಿತು. ಹಕ್ಕಿಗಳು ಗೂಡಿಗೆ ಮರಳಲಾರಂಭಿಸಿದವು. ಊರಿಡೀ ಭಣಭಣ, ಸ್ಮಶಾನ ಮೌನ. ಯಾರೆಂದರೆ ಯಾರೂ ಬೀದಿಯಲ್ಲಿ ಕಾಣಿಸುತ್ತಿಲ್ಲ. ಸೂರ್ಯನೆನ್ನುವ ಸರ್ವಶಕ್ತನನ್ನು ರಾಹು-ಕೇತು ಎಂಬ ದುಷ್ಟರು ನುಂಗುತ್ತಿರುವ ಸಂಕಟದ ಹೊತ್ತಿನಲ್ಲಿ ಮನುಷ್ಯರಿಗೆ ಮಹಾ ಅಪಾಯ ಸಂಭವಿಸುವ ಸಾಧ್ಯತೆಯಿದೆ; ಕೀಳು ದೈವ, ದೆವ್ವಗಳು ಮೆಟ್ಟಿಕೊಳ್ಳುತ್ತವೆ ಎಂದು ಹೆದರಿ ಜನ ಮನೆಯೊಳಗೇ ಪೂಜೆ ಮಾಡುತ್ತ, ಉಪವಾಸ ಮಾಡುತ್ತ, ಬಾಗಿಲು-ಕಿಟಕಿಗಳನ್ನು ಮುಚ್ಚಿಕೊಂಡು ಕುಳಿತಿದ್ದರು. ಜನರ ಹೆದರಿಕೆಯನ್ನೇ ಬಂಡವಾಳ ಮಾಡಿಕೊಂಡವರು ತಂತಮ್ಮ ಶಕ್ತ್ಯಾನುಸಾರ ದೋಚಲು ಸಿದ್ಧರಾಗಿದ್ದರು. ಅಂಥ ಹೊತ್ತಿನಲ್ಲಿ ಸರಸ್ವತಿ ಮತ್ತು ಗೋರಾ ಮನೆಯಾಚೆ ಬಿಡುಬೀಸಾಗಿ ತಿರುಗಾಡಿದರು. ಎಲ್ಲರಿಗೂ ಗೊತ್ತಾಗುವ ಹಾಗೆ ಎಂದಿಗಿಂತ ಗಡದ್ದಾಗಿ ಊಟ ಮಾಡಿದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಮರೆವಿಗೆ ಸಲ್ಲಬಾರದ ಚೇತನ - ಉಮಾಬಾಯಿ ಕುಂದಾಪುರ

ಮೊದಲೇ ವಿಚಿತ್ರ ಮನುಷ್ಯರಂತೆ ಕಾಣುತ್ತಿದ್ದವರು ಈಗ ಇನ್ನಷ್ಟು ವಿಚಿತ್ರವೆನಿಸಿದರು. ಬಾಡಿಗೆ ಹೋಗಲಿ, ಪುಕ್ಕಟೆ ಕೊಟ್ಟರೂ ಉಳಿದವರು ಒಳಹೋಗಲು ಹೆದರುತ್ತಿದ್ದ ಪಾಳುಬಿದ್ದ 'ದೆವ್ವದ ಮನೆ'ಗಳಲ್ಲಿ ಮಕ್ಕಳೊಡನೆ ವಾಸಿಸಿದರು. ದೇವರಿಲ್ಲ, ದಿಂಡಿರಿಲ್ಲ; ಗ್ರಹಣ, ದೆವ್ವ, ಪಿಶಾಚಿ, ವಾಸ್ತು, ಮುಹೂರ್ತ, ಉಪವಾಸ, ವ್ರತ, ಹಬ್ಬ ಎಂಥದೂ ಇಲ್ಲ. ಈ ಸಂಸಾರ ಎಕ್ಕುಟ್ಟಿ ಹೋಗುವುದೆಂದು ಎಲ್ಲರೂ ಕಾದೇ ಕಾದರು. ಏನಾಶ್ಚರ್ಯ! ಅವರಿಗೆ ಏನೂ ಆಗಲಿಲ್ಲ. ಒಂದಾದ ಮೇಲೊಂದು ಒಂಬತ್ತು ಆರೋಗ್ಯವಂತ ಮಕ್ಕಳನ್ನು ಸರಸ್ವತಿ ಹಡೆದರು.

ದೇವರನ್ನು ನಂಬದೆ ಇಷ್ಟು ನೆಮ್ಮದಿಯಿಂದಿರಲು ಹೇಗೆ ಸಾಧ್ಯ ಎಂದು ಉಳಿದವರು ಅಚ್ಚರಿಗೊಳ್ಳುತ್ತಿದ್ದರೆ, ಇತ್ತ ತಮ್ಮ ನೆರವಿಗೆ ದೇವರು ಎಂಬ ಸಂಗತಿ ಬೇಡ ಎಂಬ ಅಸೀಮ ಆತ್ಮವಿಶ್ವಾಸದಿಂದ ಸರಸ್ವತಿಯ ಕುಟುಂಬ ಬದುಕತೊಡಗಿತು. ಆತ್ಮವಿಶ್ವಾಸವು ದುರಹಂಕಾರವಾಗದಂತೆ ಸತಿ-ಪತಿಯರಿಬ್ಬರೂ ಜನಸೇವೆಯಲ್ಲಿ ತಮ್ಮ ಜಾತಿ, ವರ್ಗಗಳ ಮರೆತು ತೊಡಗಿಕೊಂಡರು. ಗೋರಾ ತಮ್ಮ ಬರಹ, ಭಾಷಣ, ಕ್ರಿಯೆಗಳಲ್ಲಿ 'ಧನಾತ್ಮಕ ನಾಸ್ತಿಕತೆ’ಯನ್ನು ಪ್ರತಿಪಾದಿಸುತ್ತಿದ್ದರು. ಸಂಸ್ಕೃತಿ, ಪರಂಪರೆಗಳ ಪಿಳ್ಳೆನೆವ ಹೂಡಿ ಕುಟುಂಬದೊಳಗೆ, ಮನೆಯೊಳಗೆ ಮೌಢ್ಯಾಚರಣೆಗಳು ನುಸುಳದಂತೆ ಸರಸ್ವತಿ ಎಚ್ಚರ ವಹಿಸುತ್ತಿದ್ದರು.

ಸಂಕಷ್ಟಗಳು ಎಲ್ಲರಿಗೆ ಹೇಗೋ ಹಾಗೆ ಅವರಿಗೂ ಬಂದವು. ಮದುರೈ, ಕೊಯಮತ್ತೂರು, ಕಾಕಿನಾಡ, ಕೊಲಂಬೋಗಳಲ್ಲಿ 15 ವರ್ಷ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ನಡೆಸಿದ ಗೋರಾ, ಹೋದಲ್ಲೆಲ್ಲ ನಾಸ್ತಿಕವಾದಿ ಚಟುವಟಿಕೆಗಳ ಕಾರಣವಾಗಿ ತೊಂದರೆ ಎದುರಿಸಿದರು. ಕಾಕಿನಾಡದ ಪಿ ಆರ್ ಕಾಲೇಜು ಅವರನ್ನು ಉಚ್ಛಾಟಿಸಿತು. 1939ರಲ್ಲಿ ಮಚಲೀಪಟ್ಟಣದ ಹಿಂದೂ ಕಾಲೇಜಿನಿಂದಲೂ ಹೊರಹಾಕಲ್ಪಟ್ಟರು. ಇನ್ನು ಅವರಿವರ ಕೈಕೆಳಗೆ ದುಡಿದಿದ್ದು ಸಾಕೆನಿಸಿ, 1940ರಲ್ಲಿ ದಂಪತಿ ಆಂಧ್ರದ ಕೃಷ್ಣಾ ಜಿಲ್ಲೆಯ ಮುಡುನೂರು ಎಂಬ ಹಳ್ಳಿಗೆ ಬಂದರು. ಸರಳ, ಸ್ವಾಯತ್ತ ಬದುಕಿಗೆ ಆಧಾರವಾಗುವಂತಹ ನೆಲೆ ಕಂಡುಕೊಂಡು ಹೊಸ ಬದುಕು ಆರಂಭಿಸಿದರು. ಬಂದ ಶುರುವಿಗೇ 'ನಾಸ್ತಿಕ ಕೇಂದ್ರ’ ('ಅಥೇಯಿಸ್ಟ್ ಸೆಂಟರ್’) ಆರಂಭಿಸಿದರು. 'ನಾಸ್ತಿಕ ತತ್ವ: ದೇವರು ಇಲ್ಲ' ಎಂಬ ಪುಸ್ತಕವನ್ನು ಗೋರಾ ಬರೆದರು. ಪತ್ರಿಕೆ ಆರಂಭಿಸಿ ವಿಚಾರವಾದ ಹರಡತೊಡಗಿದರು. ಅಂತರ್ಜಾತಿ, ಅಂತರ್ಧರ್ಮೀಯ ಮದುವೆ ಮಾಡಿಸಿದರು. ಶಾಸ್ತ್ರಗಳಿಲ್ಲದ ಸರಳ ವಿವಾಹಗಳನ್ನು ಏರ್ಪಡಿಸಿದರು. ದೇವದಾಸಿಯರ ಜೊತೆ ಮಾತನಾಡಿ, ಅವರ ಬದುಕಿಗೊಂದು ಮಾರ್ಗ ಕಲ್ಪಿಸಿ ಮದುವೆ ಮಾಡಿಸಿದರು. ವಿಧವೆಯರಿಗೆ ಮರುವಿವಾಹ ಏರ್ಪಡಿಸಿದರು.

Image
Saraswati Gora 62
ಪವಾಡ ವಿರೋಧಿ ಅಭಿಯಾನವೊಂದರ ನಾಯಕತ್ವ ವಹಿಸಿದ್ದ ಸ್ವರಸ್ವತಿ ಗೋರಾ

ಇವರ ಬಗೆಗೆ ತಿಳಿದ ಗಾಂಧೀಜಿ, 1944ರಲ್ಲಿ ಸೇವಾಗ್ರಾಮಕ್ಕೆ ಆಹ್ವಾನಿಸಿದರು. ಎರಡು ವಾರ ಗೋರಾ ಮತ್ತು ಗಾಂಧೀಜಿ ನಡುವೆ ಬಿರುಸಿನ ಚರ್ಚೆಗಳು ನಡೆದವು. ಆಸ್ತಿಕರಾಗಿದ್ದ ಗಾಂಧಿ ನಾಸ್ತಿಕ ಗೋರಾರ ವಾದವನ್ನು ಒಪ್ಪದಿದ್ದರೂ, ಇಬ್ಬರ ನಡುವೆ ಸಹಮತವಿರುವ ವಿಷಯಗಳು ಸಾಕಷ್ಟಿದ್ದವು. ಆ ಭೇಟಿಯ ಫಲವಾಗಿ ಗೋರಾ ಜೀವಮಾನವಿಡೀ ಗಾಂಧಿ ಅನುಯಾಯಿಯಾಗಿ ಬದಲಾದರು. ಗಾಂಧಿಯವರೊಡನೆ ದೀರ್ಘ ಸಂವಾದ ನಡೆಸಿದ್ದನ್ನು ಪುಸ್ತಕವಾಗಿ ದಾಖಲಿಸಿದರು. ಸ್ವಾತಂತ್ರ್ಯ ಹೋರಾಟ ಕಾವೇರುತ್ತಿದ್ದ ಕಾಲದಲ್ಲಿ ಸತಿ-ಪತಿಯರಿಬ್ಬರೂ ಚಳವಳಿಗೆ ಧುಮುಕಿದರು. 'ಭಾರತ ಬಿಟ್ಟು ತೊಲಗಿ' ಚಳವಳಿಯ ಸಂದರ್ಭದಲ್ಲಿ ಸರಸ್ವತಿ ಎರಡೂವರೆ ವರ್ಷದ ಮಗ ನಿಯಂತನೊಂದಿಗೆ ರಾಯವೆಲ್ಲೋರಿನ ಜೈಲಿಗೆ ಹೋದರು. 1947ರಲ್ಲಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶವಿದ್ದಾಗ 'ನಾಸ್ತಿಕ ಕೇಂದ್ರ'ವನ್ನು ವಿಜಯವಾಡಕ್ಕೆ ಸ್ಥಳಾಂತರಿಸಿದರು.

ಸ್ವಾತಂತ್ರ್ಯ ಬಂದ ಬಳಿಕ ವಿಚಾರವಾದಿ ಪ್ರಜೆಗಳಾಗಿ ಮೂಲಭೂತ ಕರ್ತವ್ಯವನ್ನು ಅಕ್ಷರಶಃ ಪಾಲಿಸಿದ ಗೋರಾ ಜೋಡಿ ಅಂತರ್ಜಾತಿ, ಅಂತರ್ಧರ್ಮೀಯ ಮದುವೆಗಳನ್ನು ನಿರಂತರ ಏರ್ಪಡಿಸಿದರು. ಅಂತಾರಾಷ್ಟ್ರೀಯ ನಾಸ್ತಿಕ ಸಮ್ಮೇಳನಗಳನ್ನು ಸಂಘಟಿಸಿದರು. ಸರ್ವೋದಯ ಚಳವಳಿ, ಭೂದಾನ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಸರಸ್ವತಿ 1953ರಲ್ಲಿ ಕರಿವೆನ ಈಣಂ ಭೂಹೋರಾಟದಲ್ಲಿ ತೊಡಗಿದ್ದಾಗ ಬಂಧನಕ್ಕೊಳಗಾಗಿ ಸೆರೆಮನೆಗೆ ಹೋದರು.

ಗೋರಾ, ಪಕ್ಷಗಳಿಲ್ಲದ ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದರು. ಅದನ್ನು ಪ್ರತಿಪಾದಿಸುತ್ತ 1952ರ ಲೋಕಸಭಾ ಚುನಾವಣೆಗೆ ನಿಂತರು. 1967ರ ವಿಧಾನಸಭಾ ಚುನಾವಣೆಯಲ್ಲೂ ನಿಂತರು. ಗೆಲುವು ದೂರವಾಗಿತ್ತು. ಆಗೆಲ್ಲ ಸರಸ್ವತಿ ಗಂಡನ ಹೆಗಲಿಗೆ ಹೆಗಲಾಗಿ ನಿಂತರು.

Image
Saraswati Gora 52
'ನಾಸ್ತಿಕ ಕೇಂದ್ರ'ದಲ್ಲಿ ನಡೆದ ಕೈದಿಗಳ ಸುಧಾರಣಾ ಸಮ್ಮೇಳನದಲ್ಲಿ ಸರಸ್ವತಿ ಗೋರಾ ಮಾತು

ಗೋರಾ ದಂಪತಿಗಳು ಪ್ರತಿ ಹುಣ್ಣಿಮೆಯಂದು ಮಿಶ್ರಾಹಾರದ ಭೋಜನಕೂಟ ಏರ್ಪಡಿಸುತ್ತಿದ್ದರು. ಎಲ್ಲ ಮತ-ಧರ್ಮ, ಜಾತಿಗಳ ಜನರೂ ಬಂದು ಸ್ವಇಚ್ಛೆಯಿಂದ ತಮಗೆ ಬೇಕಿದ್ದನ್ನು ಉಣ್ಣಬಹುದಿತ್ತು. ಆಗಸ್ಟ್ 15, 1972; ಭಾರತ ಸ್ವಾತಂತ್ರ್ಯದ ರಜತ ಮಹೋತ್ಸವ ದಿನದಂದು ವಿಜಯವಾಡದಲ್ಲಿ ದನದ ಮಾಂಸ ಮತ್ತು ಹಂದಿ ಮಾಂಸಗಳೆರಡೂ ಇರುವ ಮಿಶ್ರಾಹಾರಿ ಭೋಜನದ ಯೋಜನೆ ಹಾಕಿದರು. ಸಮಾಜ ಸಂಚಲನಗೊಂಡಿತು. ಪುರಿಯ ಶಂಕರಾಚಾರ್ಯ ಸೇರಿದಂತೆ ಹಲವರು ವಿರೋಧಿಸಿದರು. ಕಾರ್ಯಕ್ರಮವನ್ನು ಭಂಗಗೊಳಿಸುವುದಾಗಿ ಕೆಲವರು ಧಮಕಿ ಹಾಕಿದರು. ಸರ್ಕಾರ ಪೊಲೀಸ್ ರಕ್ಷಣೆ ಒದಗಿಸಿತು. ಸಾವಿರಾರು ಜನ ನೆರೆದರು. ಸಮಾಜದಲ್ಲಿ ಬೆಸುಗೆ ಉಂಟುಮಾಡುವುದೇ ಈ ಭೋಜನಕೂಟದ ಉದ್ದೇಶ ಎಂದು ದಂಪತಿಗಳು ತಿಳಿಸಿದಾಗ, ನೆರೆದವರಲ್ಲಿ 138 ಜನ ಮುಂದೆ ಬಂದು, ದಫ್ತರದಲ್ಲಿ ಸಹಿ ಮಾಡಿ, ಮಾಂಸ ಮತ್ತು ಸಸ್ಯಾಹಾರಗಳನ್ನು ಜೊತೆಜೊತೆಗೇ ಸೇವಿಸಿದರು. ಊಟ ಮಾಡಿದವರಲ್ಲಿ ನಾಸ್ತಿಕರು, ಸನಾತನ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಎಲ್ಲರೂ ಇದ್ದರು. ಇಂಥದೇ ಕೂಟ ಗುಡಿವಾಡ, ಸೂರ್ಯಪೇಟ, ವಿಶಾಖಪಟ್ಟಣಂಗಳಲ್ಲಿಯೂ ನಡೆದವು. ತಮಿಳುನಾಡಿನಲ್ಲಿ ವೈಚಾರಿಕತೆ, ಆತ್ಮಗೌರವದ ಅಡಿಪಾಯದ ಮೇಲೆ ಆಗಲೇ ಕ್ರಾಂತಿಕಾರಿ ಚಳವಳಿಯನ್ನು ಹುಟ್ಟುಹಾಕಿ ದಂತಕತೆಯಾಗಿದ್ದ ಪೆರಿಯಾರ್, ಕೊಯಮತ್ತೂರಿನಲ್ಲಿ ಗೋರಾ ತಂಡದವರು ಏರ್ಪಡಿಸಿದ ಭೋಜನಕೂಟದಲ್ಲಿ ಪಾಲ್ಗೊಂಡರು.

ಗೋರಾ 1975ರಲ್ಲಿ ಮರಣಿಸಿದ ಬಳಿಕ 'ನಾಸ್ತಿಕ ಕೇಂದ್ರ'ವನ್ನು ಸರಸ್ವತಿ ಯಶಸ್ವಿಯಾಗಿ ಮುನ್ನಡೆಸಿದರು. ಒಂಬತ್ತು ಮಕ್ಕಳ ಸಂಸಾರ ನಿಭಾಯಿಸುತ್ತ, ಜನಪ್ರಿಯವಲ್ಲದ, ಸಾಮಾನ್ಯವಲ್ಲದ, ಸರಳವಲ್ಲದ ಗುರಿಯತ್ತ ನಡೆಯುವುದು ಯಾವುದೇ ಹೆಣ್ಣಿಗೆ ಸವಾಲಿನ ಸಂಗತಿ. ಅದನ್ನು ದೃಢ ಹೆಜ್ಜೆಗಳೊಂದಿಗೆ ಸರಸ್ವತಿ ಯಶಸ್ವಿಯಾಗಿ ತಲುಪಿದರು. ವಿಜಯವಾಡಾದಲ್ಲಿ ನೆಲೆಸಿದ್ದ ಅವರು, 'ಗೋರಾ ಜೊತೆಗಿನ ಬದುಕು’ ಎಂಬ ಆತ್ಮಕತೆ ಬರೆದರು. 1992ರಲ್ಲಿ ಅವರ 80ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅದು ಪ್ರಕಟವಾಯಿತು. ಕರ್ನಾಟಕ ಸರ್ಕಾರ ಕೊಡಮಾಡುವ ಮೊದಲ 'ಬಸವ ಪುರಸ್ಕಾರ' ಅವರಿಗೆ 2000ನೇ ಇಸವಿಯಲ್ಲಿ ದೊರೆಯಿತು. 2006ರಲ್ಲಿ ತಮ್ಮ 94ನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆಯುವ ತನಕ ಕ್ರಿಯಾಶೀಲರಾಗಿಯೇ ಇದ್ದ ಅವರನ್ನು ಹಲವಾರು ಮನ್ನಣೆಗಳು ಅರಸಿ ಬಂದವು. ಮರಣಾನಂತರ ಸ್ವೇಚ್ಛಾ ಗೋರಾ ಕಣ್ಣುನಿಧಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು.

ಸರಸ್ವತಿ-ಗೋರಾ ತಮ್ಮ ಮಕ್ಕಳ ಮೇಲೆ ನಾಸ್ತಿಕತೆಯನ್ನು ಹೇರಲಿಲ್ಲ. ಆದರೆ, ಮೊದಲಿನಿಂದ ಬೆಳೆದುಬಂದ ವೈಚಾರಿಕ, ಮುಕ್ತ ಚಿಂತನೆಯ ವಾತಾವರಣವು ಎಲ್ಲ ಮಕ್ಕಳನ್ನೂ ನಾಸ್ತಿಕರನ್ನಾಗಿಯೇ ರೂಪಿಸಿತು. 1949ರಲ್ಲಿ ಸೇವಾಗ್ರಾಮದಲ್ಲಿ ಮಗಳು ಮನೋರಮಾ ಮದುವೆಯನ್ನು ದಲಿತ ತರುಣ ಅರ್ಜುನ ರಾವ್ ಜೊತೆಗೆ ನೆರವೇರಿಸಿದರು. ಹಿರಿಯ ಮಗ ಲವಣಂ ಖ್ಯಾತ ತೆಲುಗು ದಲಿತ ಕವಿ ಗುರ್ರಂ ಜಾಶುವಾರ ಮಗಳನ್ನು ಮದುವೆಯಾದ. ಕಿರಿಯ ಮಗ ಸಮರಂ ಗೋಪರಾಜು ವೈದ್ಯರಾಗಿದ್ದರು. ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಮಗಳು ಚೆನ್ನುಪಟಿ ವಿದ್ಯಾ 1980, 1989ರಲ್ಲಿ ಲೋಕಸಭೆಗೆ ಆಯ್ಕೆಯಾದರು. ತಾಯಿಯ ಬಳಿಕ ಲವಣಂ ಗೋರಾ 'ನಾಸ್ತಿಕ ಕೇಂದ್ರ’ವನ್ನು ಮುನ್ನಡೆಸಿದ್ದರು. ಈಗ ಮೂರನೆಯ ತಲೆಮಾರು ಅವರ ಕೆಲಸವನ್ನು ಮುಂದುವರಿಸಿಕೊಂಡು ಬಂದಿದೆ; 'ನಾಸ್ತಿಕ ಕೇಂದ್ರ'ವನ್ನು ಮುನ್ನಡೆಸುತ್ತ, ಪತ್ರಿಕೆ-ಬ್ಲಾಗ್ ನಡೆಸುತ್ತ, ಅಂತಾರಾಷ್ಟ್ರೀಯ ನಾಸ್ತಿಕ ಸಮ್ಮೇಳನಗಳನ್ನು ಸಂಘಟಿಸುತ್ತ ವಿಜಯವಾಡ ನಾಸ್ತಿಕ ಚಿಂತನೆಗಳಿರುವವರ ಕೇಂದ್ರವಾಗಿರುವಂತೆ ನೋಡಿಕೊಂಡಿದೆ.

* * * * *

Image
Saraswati Gora 82
ಸರ್ಕಾರದ ವತಿಯಿಂದ ಸರ್ವರಿಗೂ ಸಮನಾಗಿ ಆಹಾರ ಪದಾರ್ಥ ವಿತರಣೆ ನಡೆಯಬೇಕೆಂದು ಆಗ್ರಹಿಸಿ ನಡೆದ ಅಭಿಯಾನದಲ್ಲಿ ಸರಸ್ವತಿ ಗೋರಾ (ಬಲತುದಿ)

33 ಕೋಟಿಗಿಂತ ಮಿಗಿಲಾದ ಸಂಖ್ಯೆಯ ದೇವತೆಗಳಿರುವ ನಾಡಿನಲ್ಲಿ ನಾಸ್ತಿಕರಾಗಿ ಬದುಕುಳಿಯುವುದು ಸುಲಭವಲ್ಲ. ಆದರೆ, ಭಾರತದಲ್ಲಿ ಎಷ್ಟು ದೇವಾನುದೇವತೆಗಳಿದ್ದರೇನು, ಅದನ್ನು ನಂಬದ ಚಾರ್ವಾಕರು ಅನಾದಿಯಿಂದ ಇದ್ದೇ ಇದ್ದಾರೆ. ಭಾರತದ ಹಿಂದೂ, ಜೈನ, ಬೌದ್ಧ ಧರ್ಮಗಳು ನಾಸ್ತಿಕತೆಯನ್ನು ಸ್ವೀಕಾರಾರ್ಹ ಎಂದುಕೊಂಡಿದ್ದವು. "ಸ್ವರ್ಗವಿಲ್ಲ, ಮೋಕ್ಷವಿಲ್ಲ, ಪರಲೋಕ, ಆತ್ಮವೂ ಇಲ್ಲ. ನಾಲ್ಕು ವರ್ಣ, ಕುಲಗಳ ಆಚರಣೆಯು ವಾಸ್ತವದಲ್ಲಿ ಯಾವ ಪ್ರತಿಫಲವನ್ನೂ ನೀಡುವುದಿಲ್ಲ," ಎಂದು ಬೃಹಸ್ಪತಿ ಸೂತ್ರ ಹೇಳುವುದೆಂದು 'ಸರ್ವದರ್ಶನ ಸಂಗ್ರಹ'ದಲ್ಲಿ ಉಲ್ಲೇಖಿಸಲಾಗಿದೆ. ಪ್ರತ್ಯಕ್ಷ ಪ್ರಮಾಣವಲ್ಲದೆ ಮತ್ತೇನನ್ನೂ ನಂಬದ ಚಾರ್ವಾಕರು ದೇವರು, ಆತ್ಮಗಳನ್ನು ನಿರಾಕರಿಸಿದವರು. ಭೂಮಿ, ನೀರು, ಗಾಳಿ, ಬೆಂಕಿ ಎಂಬ ನಾಲ್ಕು ಧಾತುಗಳಿಂದ ಎಲ್ಲ ಸೃಷ್ಟಿಯೂ ಆಗಿದೆ ಎಂದು ನಂಬಿದ್ದರೇ ಹೊರತು, ಬ್ರಹ್ಮ ಸೃಷ್ಟಿಕರ್ತನೆಂದು ಒಪ್ಪಲಿಲ್ಲ. ಅದಕ್ಕಾಗಿಯೇ ಇರಬೇಕು, 'ಬೃಹಸ್ಪತಿ ಸ್ಮೃತಿ'ಯೂ ಸೇರಿದಂತೆ ಹೆಚ್ಚೂಕಡಿಮೆ ಚಾರ್ವಾಕ ಪರಂಪರೆಯ ಎಲ್ಲ ಗ್ರಂಥಗಳೂ ನಾಶವಾಗಿವೆ. ನಂತರ ಬಂದ ಉಲ್ಲೇಖ, ವ್ಯಾಖ್ಯಾನ, ಭಾಷ್ಯ, ಟೀಕುಗಳ ಮೂಲಕ ಅವುಗಳ ಇರುವಿಕೆಯ ಬಗೆಗೆ ತಿಳಿಯಬೇಕಾಗಿದೆ.

ರಾಮಾಯಣದಲ್ಲಿ ಭರತನ ಜೊತೆಗೆ ರಾಮನನ್ನು ಮನವೊಲಿಸಿ ಕರೆತರಲು ಕಾಡಿಗೆ ಹೋದನೆಂದು ಉಲ್ಲೇಖಿಸಲ್ಪಟ್ಟ ಜಾಬಾಲಿ ನಾಸ್ತಿಕ. ಅವನು ರಾಮನನ್ನು ತರ್ಕದ ಮೂಲಕ ಒಪ್ಪಿಸಲು ನೋಡುತ್ತಾನೆ. ರಾಮ ಅವನನ್ನು ನಾಸ್ತಿಕ ಅಧರ್ಮಿ ಎಂದು ಹೀಯಾಳಿಸುತ್ತಾನೆ. ಮಹಾಭಾರತದಲ್ಲಿಯೂ ಹಸ್ತಿನಾಪುರದಲ್ಲಿದ್ದ ಚಾರ್ವಾಕ ಬ್ರಾಹ್ಮಣನೊಬ್ಬನ ಉಲ್ಲೇಖ ಬರುತ್ತದೆ. ಆದರೆ, ಎಲ್ಲೆಡೆ ಅವರನ್ನು ಅಧರ್ಮಿಗಳೆಂದೋ, ವರ್ಣಸಂಕರ ಮಾಡುವ ವೇದವಿರೋಧಿಗಳೆಂದೋ ಜರೆಯಲಾಗಿದೆ. ವರ್ತಮಾನವು ಅದಕ್ಕಿಂತ ಭಿನ್ನವಾಗಿಲ್ಲ. ಪುಣೆಯ ಡಾ.ನರೇಂದ್ರ ದಾಭೋಲ್ಕರ್ ಅವರಂತಹ ಜನಸ್ನೇಹಿಯ ಹತ್ಯೆಯಾದದ್ದು ಇಂತಹ ಚಿಂತನೆಗಳಿಗಾಗಿಯೇ.

2011ರಲ್ಲಿ ನಡೆದ ಭಾರತದ ಜನಗಣತಿಯ ಪ್ರಕಾರ, 28,70,000 ಜನ ತಾವು ಯಾವ ಧರ್ಮಕ್ಕೂ ಸೇರಿದವರಲ್ಲವೆಂದು ಹೇಳಿದರು. ಅದು ದೇಶದ ಜನಸಂಖ್ಯೆಯ ಶೇಕಡ 0.27. ಅವರಲ್ಲಿ 33,000 ನಾಸ್ತಿಕರಿದ್ದಾರೆ. 2012ರ 'ವಿನ್-ಗ್ಯಾಲಪ್ ಗ್ಲೋಬಲ್ ಇಂಡೆಕ್ಸ್ ಆಫ್ ರಿಲಿಜನ್ ಅಂಡ್ ಅಥೇಯಿಸಂ' ಹೇಳುವಂತೆ, ಭಾರತದ ಶೇಕಡ 3ರಷ್ಟು ಜನ ನಾಸ್ತಿಕರು. ಕೆಲವರಷ್ಟೇ ಅದನ್ನು ಪ್ರಕಟಪಡಿಸಿದ್ದಾರೆ. ಇವತ್ತಿನ ಭಾರತ ಅಥವಾ ವಿಶ್ವದ ಯಾವುದೇ ದೇಶದ ಪರಿಸ್ಥಿತಿ ಹೇಗಿದೆಯೆಂದರೆ, 'ನಾನು ನಾಸ್ತಿಕ' ಎಂದು ಹೇಳುವುದು ಧರ್ಮದ್ರೋಹವಾಗಿಯೂ, ದೇಶದ್ರೋಹವಾಗಿಯೂ ಕೇಳಿಸುತ್ತದೆ. ಪೂಜೆ ಮಾಡದ, ಧಾರ್ಮಿಕ ಕುರುಹು-ಶ್ರದ್ಧೆಯನ್ನು ಢಾಳಾಗಿ ಪ್ರದರ್ಶಿಸದ, ವ್ರತಕತೆಯಾತ್ರೆ ನೆರವೇರಿಸದ, ಗುಡಿ, ಮಠ, ಮಸೀದಿ, ಚರ್ಚುಗಳಿಗೆ ಹೋಗದ ಜನರನ್ನು 'ವಿಚಿತ್ರ’ ಎಂಬಂತೆ ನೋಡುವುದು ಮುಂದುವರಿದಿದೆ. ಬರುವ ಜನ್ಮದಲ್ಲಿ ಪ್ರತಿಫಲ ಅನುಭವಿಸುತ್ತಾರೆ ಎಂದು ಗುಟ್ಟಾಗಿ ಒಳಗೊಳಗೇ ಶಾಪ ಹಾಕುವುದೂ, ಬಾಹ್ಯವಾಗಿ ಆಕ್ರಮಣ ಮಾಡುವುದೂ ನಡೆಯುತ್ತಿದೆ. ಆದರೂ, ಮೇಘನಾದ ಸಾಹಾ, ಭಗತ್ ಸಿಂಗ್, ಜವಾಹರಲಾಲ್ ನೆಹರೂ, ಅಮರ್ತ್ಯ ಸೇನ್, ನರೇಂದ್ರ ದಾಭೋಲ್ಕರರೇ ಮೊದಲಾದ ನಾಸ್ತಿಕರು ಈ ನೆಲದ ಜ್ಞಾನಸಮೃದ್ಧಿಯನ್ನು ಹೆಚ್ಚಿಸಿದ್ದಾರೆ. ಈಗ ನಾಸ್ತಿಕ ಸ್ತ್ರೀವಾದಿಗಳು, ನಾಸ್ತಿಕ ಮುಸ್ಲಿಮರು, ನಾಸ್ತಿಕ ಕ್ರೈಸ್ತರು ಎಂದು ಹೊಸ-ಹೊಸ ಗುಂಪುಗಳು ರೂಪುಗೊಳ್ಳುತ್ತಿವೆ.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

ತನ್ನ ಕಷ್ಟಗಳಿಗೂ ಒಂದು ಅಲೌಕಿಕ ಕಾರಣವಿದೆ (ದೇವರ ಪರೀಕ್ಷೆ) ಎಂದು ನಂಬುವುದರಿಂದ ಮತ್ತು ಅದನ್ನು ಪರಿಹರಿಸಲು ದೇವರು ಶಕ್ತನೆಂದು ನಂಬುವುದರಿಂದ ಬಹಳ ಜನರಿಗೆ ದೇವರು-ಧರ್ಮ ಎಂಬ ಕಲ್ಪನೆಗಳು ಆಪ್ಯಾಯಮಾನವಾಗಿ ಕಾಣುತ್ತವೆ. ಜೊತೆಗೆ, ಧರ್ಮವು ಸಾವಿನ ನಂತರವೂ ಒಂದು ಬದುಕಿದೆ ಎಂದು ಹೇಳುತ್ತ, ಸಾವಿನ ಭಯವನ್ನು ದೂರ ಮಾಡುತ್ತದೆ. ಸಾವಿನ ಕುರಿತ ಭಯವನ್ನು ಧರ್ಮಗಳು ತನ್ನನ್ನು ನಂಬುವವರನ್ನು ಒಟ್ಟಿಗೆ ಇಡಲು ಬಳಸಿಕೊಂಡಿವೆ. ಆದರೆ, ದೇವರು ತನ್ನ ಸೃಷ್ಟಿ ಕಾರಣದಿಂದಾಚೆ ಎಲ್ಲೆಲ್ಲಿಗೋ ಹಬ್ಬಿ ತಾನು ಸೃಷ್ಟಿಸಿದ ಜೀವಿಗಳ ನಡುವೆಯೇ ಹಗೆ, ಯುದ್ಧ, ರಕ್ತಪಾತಕ್ಕೆ ಕಾರಣವಾಗಿರುವುದನ್ನು ನೋಡುವಾಗ; ಅತಿ ಹೆಚ್ಚು ಯುದ್ಧ, ಸಾವು-ನೋವುಗಳು ದೇವರು-ಧರ್ಮದ ಸಲುವಾಗಿಯೇ ಸಂಭವಿಸಿರುವ ವಾಸ್ತವದೆದುರು ನಾವು ನಿಂತಿರುವಾಗ, ಆರೋಗ್ಯಕರ ನಾಸ್ತಿಕತೆಯ ಅಗತ್ಯ ಮನದಟ್ಟಾಗುತ್ತದೆ. ಹಾಗಂತ ನಾಸ್ತಿಕತೆಯೇ ಶ್ರೇಷ್ಠ ಎನ್ನುವ ಹಠಕ್ಕೆ ಬಿದ್ದರೆ ಸಮಾಜದ ಆರೋಗ್ಯ ಕೆಡುತ್ತದೆ. ಬಹುತ್ವದ, ವೈವಿಧ್ಯಮಯ ಚಿಂತನೆಗಳ ಸಮಾಜದಲ್ಲಿ ಆಸ್ತಿಕರೂ, ನಾಸ್ತಿಕರೂ ಒಟ್ಟೊಟ್ಟು ಗೌರವದಿಂದ ಬದುಕಲು ಸಾಧ್ಯವಾಗಬೇಕು. ಕಡಿಮೆ ಸಂಖ್ಯೆಯವರಾದರೂ ನಾಸ್ತಿಕರಿಗೆ, ಅವರ ಅಭಿಪ್ರಾಯಗಳಿಗೆ ಗೌರವಯುತ ಅವಕಾಶ ಸಿಗಬೇಕು. ದೇವರು, ಮತ-ಧರ್ಮಗಳ ಅನುಯಾಯಿತ್ವದ ಹೆಸರಿನಲ್ಲಿ ನಡೆದು ಬಂದ ದಾರಿ ರಕ್ತಸಿಕ್ತವಾಗಿದ್ದು, ಮತ್ತೊಮ್ಮೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲು ಆರೋಗ್ಯಕರ ಆಸ್ತಿಕತೆ ಅವಶ್ಯ. ಅದಕ್ಕಾಗಿ ವೈಚಾರಿಕ ಸತ್ಯಗಳನ್ನು ಪ್ರತಿಪಾದಿಸುವ ನಾಸ್ತಿಕ ತತ್ವಗಳು ಅವಶ್ಯವಾಗಿ ಚಲಾವಣೆಯಲ್ಲಿರಬೇಕು.

ಈ ನಿಟ್ಟಿನಲ್ಲಿ, ಗಾಂಧಿಯವರ ಆಸ್ತಿಕತೆಯನ್ನು ಮರುರೂಪಿಸಿರಬಹುದಾದ ನಾಸ್ತಿಕ ಜೋಡಿ ಸರಸ್ವತಿ-ಗೋರಾ ಅವರ ಬದುಕು ಪರಿಶೀಲಿಸಲು ಒಂದು ಉತ್ತಮ ಮಾದರಿ ಎನ್ನಬಹುದು.

ನಿಮಗೆ ಏನು ಅನ್ನಿಸ್ತು?
3 ವೋಟ್