ಅರ್ಥ ಪಥ | ಪ್ರೀತಿ, ಸಹನೆ ನಮ್ಮ ಆರ್ಥಿಕತೆಯ ಬುನಾದಿ ಆಗದಿದ್ದರೆ ಮುಂದಿನ ಹಾದಿ ಕಠಿಣ

Nupur and Naveen

ಭಾವನಾತ್ಮಕ, ಧಾರ್ಮಿಕ ಸಂಗತಿಗಳನ್ನು ಮುಂದು ಮಾಡಿ ರಾಜಕೀಯ ಲಾಭ ಸೂರೆ ಮಾಡಲು ಹವಣಿಸುವ ಬಿಜೆಪಿಗೆ, ನೂಪುರ್ ಶರ್ಮಾ- ನವೀನ್ ಜಿಂದಾಲ್ ಪ್ರಕರಣ ಪೆಟ್ಟು ಕೊಟ್ಟಿದೆ. ಜೊತೆಗೆ, ಈಗಾಗಲೇ ಸುಸ್ಥಿತಿಯಲ್ಲಿ ಇಲ್ಲದ ದೇಶದ ಅರ್ಥ ವ್ಯವಸ್ಥೆಯು ಕೊಲ್ಲಿ ರಾಷ್ಟ್ರಗಳ ಮುನಿಸಿನಿಂದ ಮತ್ತಷ್ಟು ಹದಗೆಡಬಹುದು ಎಂಬ ಆತಂಕವೂ ಎದುರಾಗಿದೆ

ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಇತ್ತೀಚೆಗೆ, ಪ್ರವಾದಿ ಮೊಹಮ್ಮದ್ ಅವರಿಗೆ ಅಪಮಾನವಾಗುವಂತೆ ನೀಡಿದ್ದ ಹೇಳಿಕೆ ಮತ್ತು ನವೀನ್ ಜಿಂದಾಲ್ ಅವರ ಟ್ವೀಟ್ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಸೌದಿ ಅರೇಬಿಯಾ, ಬಹರೇನ್, ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಇಂಡೋನೇಷ್ಯಾ, ಜೋರ್ಡಾನ್, ಆಫ್ಘಾನಿಸ್ತಾನ ಇತ್ಯಾದಿ ದೇಶಗಳು ಇದನ್ನು ಖಂಡಿಸಿವೆ. ಪ್ರಾರಂಭದಲ್ಲಿ ಪ್ರತಿಕ್ರಿಯೆ ತೋರದಿದ್ದ ಸರ್ಕಾರ, ವಿರೋಧ ಹೆಚ್ಚಾದಂತೆ ಆ ಹೇಳಿಕೆಗಳನ್ನು ವಿರೋಧಿಸಿದೆ. ನೂಪುರ್ ಶರ್ಮಾ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ನವೀನ್ ಜಿಂದಾಲ್ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. "ನೂಪುರ್ ಅವರ ಹೇಳಿಕೆ ಮತ್ತು ನವೀನ್ ಜಿಂದಾಲ್ ಅವರ ಟ್ವೀಟ್‍ ಯಾವುದೇ ರೀತಿಯಲ್ಲಿಯೂ ಸರ್ಕಾರದ ನಿಲುವುಗಳಲ್ಲ. ಇವು ಅಂಧಾಭಿಮಾನಿ ಗುಂಪುಗಳ ನಿಲುವುಗಳು," ಎಂದು ಕತಾರ್ ಮತ್ತು ಕುವೈತ್‍ನಲ್ಲಿರುವ ಭಾರತದ ರಾಯಭಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ, ಈ ಸಮಜಾಯಿಷಿ ಅವರಲ್ಲಿ ವಿಶ್ವಾಸ ಮೂಡಿಸುತ್ತದೆ ಅನ್ನುವುದು ಅನುಮಾನ. ನೂಪುರ್ ಶರ್ಮಾ ಬಿಜಿಪಿಯ ಅಧಿಕೃತ ವಕ್ತಾರರು. ಆಕೆಯನ್ನು ಒಬ್ಬ ಅಂಧಾಭಿಮಾನಿ ಎಂದು ತಳ್ಳಿಹಾಕುವುದಕ್ಕೆ ಹೇಗೆ ಸಾಧ್ಯ? ಸರ್ಕಾರಕ್ಕೆ ಆಕೆಯ ಹೇಳಿಕೆಯಿಂದ ದೂರ ಉಳಿಯುವುದಕ್ಕೆ ಇದು ತಕ್ಷಣಕ್ಕೆ ಹೊಳೆದಿರುವ ವಿವರಣೆಯಾಗಿರಬಹುದು.

ಪ್ರವಾದಿ ಮೊಹಮ್ಮದ್ ಭಾರತದ ಮುಸ್ಲಿಮರಿಗೆ ಮಾತ್ರ ಪವಿತ್ರರಲ್ಲ. ಜಗತ್ತಿನ ಎಲ್ಲ ಮುಸ್ಲಿಮರಿಗೂ ಪವಿತ್ರವಾದವರು. ಇಂದಿನ ಜಾಗತಿಕ ಯುಗದಲ್ಲಿ ಇಲ್ಲಿ ಹೇಳಿದ ಮಾತು ಜಗತ್ತಿನ ಎಲ್ಲ ಕಡೆಗೂ ತಲುಪುತ್ತದೆ. ಹಾಗಾಗಿ, ಜಾಗತಿಕ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುವುದು ಸಹಜ. ಆದರೆ, ವಿರೋಧ ಇಷ್ಟೊಂದು ಪ್ರಬಲವಾಗಿ ವ್ಯಕ್ತವಾಗುತ್ತದೆ ಅನ್ನುವುದನ್ನು ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಮುಸ್ಲಿಮರ ವಿರುದ್ಧದ ಹೇಳಿಕೆಗಳು ತೀರಾ ಮಾಮೂಲಿಯಾಗಿರುವ ಇಂದಿನ ಪರಿಸರದಲ್ಲಿ ಇದೂ ಹತ್ತರಲ್ಲಿ ಒಂದಾಗಿಬಿಡಬಹುದು ಎನ್ನುವ ನಿರೀಕ್ಷೆಯೂ ಇದ್ದಿರಬಹುದು.

ಆದರೆ, ವಿರೋಧ ವ್ಯಾಪಕವಾದಾಗ ಸಹಜವಾಗಿಯೇ ಸ್ವಲ್ಪ ಆತಂಕ ಮೂಡಿದೆ. ಹಲವು ದೇಶಗಳು ಭಾರತದ ರಾಯಭಾರಿಗಳನ್ನು ಕರೆದು ತಮ್ಮ ವಿರೋಧವನ್ನು ದಾಖಲಿಸಿದ ಮೇಲೆ, ಅಲ್ಲಿಯ  ಸೂಪರ್ ಮಾರ್ಕೆಟ್‌ಗಳಿಂದ ಭಾರತದ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದ ಸುದ್ದಿಗಳು, ಕುವೈತ್ ನಗರದ ಅಲ್ ಅರ್ದಿಯಾ ಸಹಕಾರ ಸಂಘದಲ್ಲಿ ಮಾರಾಟಕ್ಕೆ ಇಟ್ಟಿದ್ದ ಭಾರತದ ಅಕ್ಕಿ, ಸಾಂಬಾರ ಪದಾರ್ಥಗಳನ್ನು ತೆರವುಗೊಳಿಸಿ, 'ಭಾರತದ ಉತ್ಪನ್ನಗಳನ್ನು ತೆರವುಗೊಳಿಸಲಾಗಿದೆ' ಎಂಬ ಚೀಟಿಗಳನ್ನು ಅಂಟಿಸಿರುವ ವರದಿಗಳು ಬರತೊಡಗಿದ ಮೇಲೆ ಆತಂಕ ಮತ್ತಷ್ಟು ತೀವ್ರವಾಗಿದೆ. ಕೊನೆಗೂ ಇಬ್ಬರನ್ನೂ ಅಮಾನತು ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಆದರೆ, ದುರದೃಷ್ಟವೆಂದರೆ, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಪರವಾಗಿ ಹೇಳಿಕೆಗಳು, ಟ್ವೀಟ್‍ಗಳು ಇನ್ನೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಲೇ ಇವೆ. ಹಾಗಾಗಿ, ಒಟ್ಟಾರೆಯಾಗಿ ನಮ್ಮಲ್ಲಿ ಬೆಳೆಯುತ್ತಿರುವ ಮುಸ್ಲಿಂ ಸಮುದಾಯದ ಬಗೆಗಿನ ದ್ವೇಷ ವ್ಯಾಪಕವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಜಾಗತಿಕವಾಗಿ ನಮ್ಮ ನಾಯಕರು ಕೊಡುತ್ತಿರುವ ಹೇಳಿಕೆಯ ಮೇಲೆ ವಿಶ್ವಾಸ ಮೂಡಬೇಕಾದರೆ, ಆ ನಿಟ್ಟಿನಲ್ಲಿ ಧೈರ್ಯದಿಂದ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸೌಹಾರ್ದಯುತ ವಾತಾವರಣಕ್ಕಾಗಿ ನಿಜವಾಗಿಯೂ ಕೆಲಸ ಮಾಡಬೇಕು.

Image
Narendra Modi
ಪ್ರಧಾನಿ ನರೇಂದ್ರ ಮೋದಿ

ಅವರಿಬ್ಬರ ಮಾತುಗಳು ವ್ಯಾಪಕವಾಗಿ ಪ್ರಚಾರವಾಗುತ್ತಿರುವಾಗ ಸರ್ಕಾರ ಅದನ್ನು ವಿರೋಧಿಸಲಿಲ್ಲ. ಅದರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿದ್ದ ದ್ವೇಷ ಮತ್ತು ಹಿಂಸೆಗೆ ನೀಡಲಾಗಿದ್ದ ಪ್ರಚೋದನೆ ಟೀಕೆಗೆ ಗುರಿಯಾಗಲಿಲ್ಲ. ನಂತರ ಕಾನ್ಪುರದಲ್ಲಿ ನಡೆದ ಹಿಂಸೆಯೂ ನಮ್ಮ ನಾಯಕರನ್ನು ಅಲ್ಲಾಡಿಸಲಿಲ್ಲ. ಜಗತ್ತಿನ ಹಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಎಚ್ಚರಿಸಿದರೂ ನಾವು ಜಾಗೃತರಾಗಲಿಲ್ಲ. ಕೊನೆಗೆ, ಕತಾರ್‌ನಂತಹ ರಾಷ್ಟ್ರಗಳ ವಿರೋಧ ವ್ಯಕ್ತವಾದ ಮೇಲಷ್ಟೇ ನಾವು ಎಚ್ಚೆತ್ತುಕೊಂಡೆವು.  

ಹಲವರು ಗುರುತಿಸುವಂತೆ, ನಮಗೆ ನಿಜವಾಗಿ ಗಾಬರಿ ಹುಟ್ಟಿಸಿರುವುದು ಆರ್ಥಿಕ ಕಾರಣಗಳು. ಸೌದಿ ಅರೇಬಿಯಾ, ಕತಾರ್, ಇರಾನ್, ಇರಾಕ್, ಬಹರೇನ್, ಕುವೈತ್, ಅರಬ್ ಸಂಯುಕ್ತ ಸಂಸ್ಥಾನ, ಒಮನ್, ಜೋರ್ಡಾನ್ ಹಾಗೂ ಯೆಮೆನ್ ದೇಶಗಳಲ್ಲಿ ಒಟ್ಟು ಜಗತ್ತಿನ ಮುಸ್ಲಿಂ ಜನಸಂಖ್ಯೆಯ ಶೇಕಡ 20ರಷ್ಟು ಇದ್ದಾರೆ. ಮುಸ್ಲಿಂ ಜಗತ್ತಿನಲ್ಲಿ ಇವು ಪ್ರಬಲ ಶಕ್ತಿಗಳು. ಇಂತಹ ಬಹುತೇಕ ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತಕ್ಕೆ ಒಳ್ಳೆಯ ಸಂಬಂಧವಿದೆ. ಈ ದೇಶಗಳು ನಮಗೆ ಎರಡು ಕಾರಣಕ್ಕೆ ಮುಖ್ಯವಾಗುತ್ತವೆ. ಒಂದು, ಅಲ್ಲಿಂದ ತೈಲ ಮತ್ತು ನೈಸರ್ಗಿಕ ಅನಿಲ ನಮಗೆ ಬರುತ್ತದೆ. ಈ ಸಂದರ್ಭದಲ್ಲಿ ಅದು ನಮಗೆ ತುಂಬಾ ಮುಖ್ಯ. ಜೊತೆಗೆ, ಆರ್ಥಿಕತೆಯ ದೃಷ್ಟಿಯಿಂದ ಆ ದೇಶಗಳ ಜೊತೆ ನಮ್ಮ ವ್ಯಾಪಾರ-ವ್ಯವಹಾರವೂ ಮುಖ್ಯ. ಎರಡನೆಯದು, ಅಲ್ಲಿ ಸಾಕಷ್ಟು ಮಂದಿ ಭಾರತೀಯರು ದುಡಿಯುತ್ತಿದ್ದು, ಅವರು ಭಾರತಕ್ಕೆ ಕಳುಹಿಸುವ ಹಣ ನಮ್ಮ ವಿದೇಶಿ ವಿನಿಮಯದ ಮೀಸಲಿಗೆ ಒಂದೊಳ್ಳೆಯ ಆಸರೆ. ಭಾರತದ ವಿದೇಶಿ ವ್ಯವಹಾರಗಳ ಮಂತ್ರಾಲಯದ ಅಂಕಿ-ಅಂಶಗಳ ಪ್ರಕಾರ, 13.46 ಮಿಲಿಯನ್ ಭಾರತೀಯರು ಹೊರದೇಶಗಳಲ್ಲಿ ದುಡಿಯುತ್ತಿದ್ದಾರೆ. ಅದರಲ್ಲಿ ಸುಮಾರು ಅರ್ಧದಷ್ಟು ಜನ ಕೊಲ್ಲಿ ರಾಷ್ಟ್ರಗಳಲ್ಲಿ ಇದ್ದಾರೆ. ಜಾಗತಿಕ ಬ್ಯಾಂಕಿನ ವರದಿಯ ಪ್ರಕಾರ, 2020ರಲ್ಲಿ ವಿದೇಶಗಳಲ್ಲಿ ದುಡಿಯುವ ಭಾರತೀಯರಿಂದ 83.15 ಬಿಲಿಯನ್ ಡಾಲರ್ ಸಂದಾಯವಾಗಿತ್ತು. ಇದರ ಅತಿ ದೊಡ್ಡ ಪಾಲು ಬರುವುದು ಕೊಲ್ಲಿ ರಾಷ್ಟ್ರಗಳಿಂದ.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

ಹಾಗೆಯೇ ವ್ಯಾಪಾರದ ವಿಷಯಕ್ಕೆ ಬಂದರೆ, ಕುವೈತ್ ಶೇಕಡ 95ರಷ್ಟು ಆಹಾರ ಪದಾರ್ಥಗಳನ್ನು ನಮ್ಮಿಂದ ಆಮದು ಮಾಡಿಕೊಳ್ಳುತ್ತದೆ. ಅರಬ್ ಸಂಯುಕ್ತ ಸಂಸ್ಥಾನ (ಯುಎಇ) 2021-22ರಲ್ಲಿ ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಭಾರತದಿಂದ ಸುಮಾರು 28 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳು ಅಲ್ಲಿಗೆ ರಫ್ತಾಗುತ್ತವೆ. ಭಾರತ ಅಲ್ಲಿಂದ 45 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗ ಅದರ ಪ್ರಮಾಣ ಶೇಕಡ 68.4ರಷ್ಟು ಹೆಚ್ಚಾಗಿದೆ.

ಯುಎಇ ಬಿಟ್ಟರೆ ನಂತರದ ಸ್ಥಾನ ಸೌದಿ ಅರೇಬಿಯಾದ್ದು. ಅಲ್ಲಿಂದ ನಾವು ಶೇಕಡ 34.1 ಬಿಲಿಯನ್ ಡಾಲರ್‌ ಮೌಲ್ಯದಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಹಾಗೆಯೇ ಇರಾಕ್, ಕತಾರ್ ದೇಶಗಳಿಂದಲೂ ನಾವು ಧಾರಾಳವಾಗಿ ಆಮದು ಮಾಡಿಕೊಳ್ಳುತ್ತೇವೆ, ರಫ್ತು ಕೂಡ ಮಾಡುತ್ತೇವೆ. ಕತಾರ್‌ನಿಂದ ಶೇಕಡ 41ರಷ್ಟು ಎಲ್‍ಪಿಜಿ ಆಮದಾಗುತ್ತದೆ. ನಾವು ಒಟ್ಟಾರೆ ಆಮದು ಮಾಡಿಕೊಳ್ಳುವ ಪೆಟ್ರೋಲಿನ ಶೇಕಡ 60ರಷ್ಟು ಬರುವುದು ಕೊಲ್ಲಿ ರಾಷ್ಟ್ರಗಳಿಂದ. ಹಾಗಾಗಿಯೇ, ಪ್ರಧಾನ ಮಂತ್ರಿ ಮೋದಿಯವರು ಈ ದೇಶಗಳಿಗೆ ಹಲವು ಬಾರಿ ಹೋಗಿ ಬಂದಿದ್ದಾರೆ. ಹಲವು ದೊಡ್ಡ ಮಸೀದಿಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿಂದಲೂ ವರಿಷ್ಠರು ನಮ್ಮ ದೇಶಕ್ಕೆ ಬಂದಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ, ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು ಸದ್ಯಕ್ಕಂತೂ ಒಳ್ಳೆಯದಲ್ಲ ಅನ್ನುವ ತಿಳಿವಳಿಕೆ - ನೂಪುರ್ ಮತ್ತು ಜಿಂದಾಲ್ ವಿರುದ್ಧದ ಕ್ರಮಗಳ ಹಿಂದೆ ಕೆಲಸ ಮಾಡುತ್ತಿರಬಹುದು.

ನಮ್ಮ ಆರ್ಥಿಕತೆ ಸದ್ಯಕ್ಕೆ ಅಂತಹ ಒಳ್ಳೆಯ ಪರಿಸ್ಥಿತಿಯಲ್ಲೇನಿಲ್ಲ. ಜೆ ಪಿ ಮೋರ್ಗನ್ ಪ್ರಕಾರ, ನಮ್ಮ ದೇಶದ ಜಿಡಿಪಿ ಕೊರೋನಾ ಪಿಡುಗಿನ ಪೂರ್ವ ಸ್ಥಿತಿಗಿಂತ ಶೇಕಡ 6-7ರಷ್ಟು ಕಡಿಮೆಯೇ ಇದೆ. ನಿರುದ್ಯೋಗ ಹೆಚ್ಚುತ್ತಿದೆ. ಬಡತನದ ವಿಷಯದಲ್ಲೂ ಸಮಸ್ಯೆ ಇದೆ. ಬಹುಪಾಲು ಆರ್ಥಿಕ ಸೂಚಿಗಳು ಆಶಾದಾಯಕವಾಗೇನೂ ಇಲ್ಲ. ಹಾಗಾಗಿ, ಜನರ ಗಮನವನ್ನು ಈ ಕಠಿಣ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಈ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ ಅನ್ನುವ ಆರೋಪವನ್ನು ಸುಳ್ಳು ಎಂದು ತಳ್ಳಿಹಾಕಲಾಗುವುದಿಲ್ಲ.

Image
Jai Shankar
ವಿದೇಶಾಂಗ ಸಚಿವ ಎಸ್ ಜಯಶಂಕರ್

ಜೊತೆಗೆ, ಈ ಎಲ್ಲ ಪ್ರಕರಣಗಳಲ್ಲೂ ಒಂದು ಸಮಾನ ವಿನ್ಯಾಸ ಕಾಣುತ್ತದೆ. ಬಹುಶಃ ಅದು ಆಕಸ್ಮಿಕವಿರಲಿಕ್ಕಿಲ್ಲ. ಈ ಎಲ್ಲ ಪ್ರಕರಣಗಳೂ ಇಸ್ಲಾಂ ವಿರುದ್ಧ ಒಂದು ಹೇಳಿಕೆಯಿಂದಲೋ ಅಥವಾ ಭಾಷಣದಿಂದಲೋ ಪ್ರಾರಂಭವಾಗುತ್ತದೆ. ಒಂದು ರಾಜಕೀಯ ವಿವಾದ ಇಸ್ಲಾಂ ವಿರುದ್ಧದ ಸೈದ್ಧಾಂತಿಕ ದಾಳಿಯ ರೂಪ ಪಡೆದುಕೊಳ್ಳುತ್ತದೆ. ಅದಕ್ಕೆ ಅಂತಹ ವಿರೋಧ ಬರದೇ ಹೋದರೆ, ಅದು ಹಿಂದೂಗಳ ಸಾಮರ್ಥ್ಯದ ದ್ಯೋತಕವಾಗಿ ಪ್ರತಿಬಿಂಬಿತವಾಗುತ್ತದೆ ಮತ್ತು ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ವಿರೋಧ ವ್ಯಕ್ತವಾಗಿ ಹಿಂದಕ್ಕೆ ಸರಿಯಬೇಕಾಗಿ ಬಂದಾಗ, ತಾವು ಬಲಿಪಶುಗಳಾಗಿದ್ದೇವೆ ಎನ್ನುವಂತೆ ವರ್ತಿಸುತ್ತ ಸಹಾನುಭೂತಿ ಪಡೆಯುವ ಪ್ರಯತ್ನ ನಡೆಯುತ್ತದೆ. "ಹಿಂದೂ ದೇವರುಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು. ಬೇರೆ ಧರ್ಮದ ದೇವರುಗಳಿಗೆ ಇಡೀ ಜಗತ್ತೇ ರಕ್ಷಣೆಗಿದೆ," ಎನ್ನುವ ಮಾತುಗಳು ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತವೆ. ಈ ಎರಡೂ ಬಗೆಯ ಸಂದರ್ಭಗಳಲ್ಲೂ ಮುಸ್ಲಿಮರ ವಿರುದ್ಧದ ದ್ವೇಷ ಬೆಳೆಯುತ್ತ ಹೋಗುತ್ತದೆ. ರಾಜಕೀಯ ಪಕ್ಷಗಳಿಗೆ ಚುನಾವಣೆ ಗೆಲ್ಲುವುದಕ್ಕೆ ಇದು ಹೆಚ್ಚು ಸಲೀಸಾದ ಮಾರ್ಗವಾಗಿ ಕಂಡಿದೆ. ಪ್ರವಾದಿಯ ವಿರುದ್ಧ ಮಾತನಾಡುವುದರಲ್ಲಿ ಇನ್ನೊಂದು ರಾಜಕೀಯ ಇದೆ. ಅದೇನೆಂದರೆ, ವಾಕ್‍ ಸ್ವಾತಂತ್ರ್ಯದ ಪರವಾಗಿ ಮಾತನಾಡುವವರನ್ನು ಸಲೀಸಾಗಿ ಅಷಾಢಭೂತಿಗಳು ಎಂದು ಬಿಂಬಿಸಿಬಿಡಬಹುದು.

ಆದರೆ, ಜನರನ್ನು ಇಂತಹ ಭಾವನೆಗಳ ಆಧಾರದಲ್ಲಿ ಒಟ್ಟಿಗೆ ತರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಎಲ್ಲರನ್ನೂ ಒಟ್ಟಿಗೆ ಮುನ್ನಡೆಸುವುದಕ್ಕೆ ಬೇರೆ ಆರೋಗ್ಯಕರ ಮಾರ್ಗಗಳನ್ನು ಹುಡುಕಬೇಕು. ಇಂದಿನ ಪರಿಸ್ಥಿತಿಯಲ್ಲಿ ಆರ್ಥಿಕ ಕಾರಣಗಳಿಗಾಗಿ ಒಂದಾಗುವುದು ಒಂದು ಒಳ್ಳೆಯ ಪರ್ಯಾಯವಾಗಬಹುದು. ನಮ್ಮ ಆರ್ಥಿಕ ಸಾಧನೆಗಳ ಸುತ್ತ ನಮಗೆ ಐಕ್ಯತೆ ಸಾಧ್ಯವಾದರೆ ಹೆಚ್ಚಿನ ಏಳ್ಗೆ ಸಾಧ್ಯವಾಗಬಹುದು. ಎಲ್ಲರನ್ನೂ ಸೇರಿಸಿಕೊಂಡು, ಸುಸ್ಥಿರವಾದ ಸಾಮುದಾಯಿಕ ಬೆಳವಣಿಗೆಯ ಮಾರ್ಗವನ್ನು ಕಂಡುಕೊಳ್ಳುವುದು ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಅತ್ಯವಶ್ಯ. ಅದು ಭಾರತವನ್ನು ಹೆಚ್ಚು ಸುಭದ್ರವಾಗಿಸುತ್ತದೆ. 'ಎಲ್ಲರನ್ನೂ ಒಳಗೊಂಡು' ಅನ್ನುವುದು ಇಲ್ಲಿ ತುಂಬಾ ಮುಖ್ಯ. ಮುಸ್ಲಿಮರನ್ನೋ, ದಲಿತರನ್ನೋ, ಮಹಿಳೆಯರನ್ನೋ, ಅಂಚಿಗೆ ಸರಿದ ಇತರರನ್ನೋ ಆಚೆಗಿಟ್ಟು ಆರ್ಥಿಕ ಬೆಳವಣಿಗೆಯ ಕುರಿತು ಯೋಚಿಸುವುದು ಸಾಧ್ಯವಿಲ್ಲ. ಎಲ್ಲರನ್ನೂ ಒಳಗೊಂಡ ಬೆಳವಣಿಗೆ ನಮ್ಮ ಪ್ರಗತಿಗೆ ಕಾರಣವಾಗುವುದಷ್ಟೇ ಅಲ್ಲದೆ, ನಮಗೆ ಸುರಕ್ಷೆಯನ್ನೂ ನೀಡುತ್ತದೆ. ಅಪಾಯಕಾರಿ, ವಿಚ್ಛಿದ್ರಕಾರಿ ಭವಿಷ್ಯದಿಂದ ನಮ್ಮನ್ನು ರಕ್ಷಿಸುತ್ತದೆ.

ನಿಮಗೆ ಏನು ಅನ್ನಿಸ್ತು?
2 ವೋಟ್