ಹಿತ್ತಿಲ ಗಿಡ | ಹಿಂದಿನ ದಿನ ಹಾರರ್ ಸಿನಿಮಾ ನೋಡಿದ್ದ ಹುಡುಗಿಗೆ ಈ ಮರದಲ್ಲಿ ರಕ್ತ ಕಂಡಿತ್ತು!

ತೊಗಟೆಯದು ಬಿಳಿಮಿಶ್ರಿತ ಕಪ್ಪು ಬಣ್ಣ. ತೊಗಟೆಯ ಆಳವಾದ ಬಿರುಕುಗಳ ಮೂಲಕವೂ ಮರಕ್ಕೆ ಆಮ್ಲಜನಕ ಪೂರೈಕೆಯಾಗುವುದು ಇದರ ವಿಶೇಷಗಳಲ್ಲೊಂದು. ಕೊಡವರ ಭಾಷೆಯಲ್ಲಿ 'ಬೇಂಗ ಮರ'ವಾಗಿರುವ ಇವುಗಳ ಸಂಖ್ಯೆ ಒಂದೊಮ್ಮೆ ನಮ್ಮ ರಾಜಧಾನಿಯಲ್ಲಿ ಹೆಚ್ಚಿದ್ದ ಕಾರಣಕ್ಕೇ 'ಬೆಂಗ ಊರು' ಕ್ರಮೇಣ 'ಬೆಂಗಳೂರು' ಆಯಿತು ಎಂಬ ವಾದವೂ ಇದೆ

ಆ ಮರದ ಹತ್ತಿರ ಹೋಗುತ್ತಿದಂತೆ ಸೌಮ್ಯಾ ಎಂಬ ಹುಡುಗಿ ಕಿಟಾರನೆ ಕಿರುಚಿ ನಡುಗುತ್ತ ನಿಂತಳು. "ಮೇಡಮ್, ನಿನ್ನೆ ಯಾವುದೋ ದೆವ್ವದ ಇಂಗ್ಲಿಷ್ ಫಿಲ್ಮ್ ನೋಡಿದಾಗಿಂದ ಹೀಗೆ ಆಡ್ತಿದಾಳೆ," ಎಂದಳು ಅವಳ ಸಹಪಾಠಿ. ಏನೆಂದು ಹತ್ತಿರ ಹೋಗಿ ನೋಡಿದರೆ, ಆ ಮರಕ್ಕೆ ಯಾರೋ ಮೊಳೆ ಹೊಡೆದಿದ್ದ ಜಾಗದಿಂದ ಮನುಷ್ಯರ ರಕ್ತದಂತಿರುವ ಅಂಟಿನ ದ್ರಾವಣ ಒಸರುತ್ತಿತ್ತು.

ಕ್ಷಣಾರ್ಧದಲ್ಲಿ ವಿದ್ಯಾರ್ಥಿಗಳೆಲ್ಲ ಆ ಮರದೆದುರು ಗುಂಪುಗೂಡಿ, ಅವರವರಲ್ಲೇ ಮಾತು ಜೋರಾಗಿ, ಮರವನ್ನೇ ಕೆಕರಮಕರವಾಗಿ ನೋಡುತ್ತ ನಿಂತುಬಿಟ್ಟರು. ಇದ್ದಕ್ಕಿದ್ದಂತೆ ಆದ ಈ ಗಲಿಬಿಲಿಯಿಂದ ಸಾವರಿಸಿಕೊಂಡು ಸೂಕ್ಷ್ಮವಾಗಿ ಗಮನಿಸಲು ನನಗೂ ಸ್ವಲ್ಪ ಸಮಯ ಹಿಡಿಯಿತು. ನಂತರವೇ ಗೊತ್ತಾಗಿದ್ದು, ನಾವೆಲ್ಲ ನಿಂತಿದ್ದದ್ದು ರಕ್ತಹೊನ್ನೆ ಮರದೆದುರು.

Image

ಇದೆಲ್ಲ ನಡೆದದ್ದು, ಸಸ್ಯಶಾಸ್ತ್ರದ ಪಠ್ಯೇತರ ಚಟುವಟಿಕೆಯ ಭಾಗವಾಗಿ ಕಾಲೇಜಿನ ಸುತ್ತಮುತ್ತ ಹರಡಿರುವ ಸಸ್ಯವೈವಿಧ್ಯತೆಯನ್ನು ಪರಿಚಯಿಸುವ ಸಂದರ್ಭದಲ್ಲಿ. ಅಂಕೋಲೆ, ಅಶೋಕ, ಆಲ, ತೇಗ, ಹತ್ತಿ... ಹೀಗೆ ಹತ್ತು ಹಲವು ಮರಗಿಡಗಳ ಬಗ್ಗೆ ವಿವರಿಸುತ್ತ, ಅವುಗಳ ವೈಶಿಷ್ಟ್ಯತೆ, ಉಪಯೋಗಗಳನ್ನು ಹೇಳುತ್ತಿದ್ದೆ. ವಿದ್ಯಾರ್ಥಿಗಳು ಸಹ ಅಷ್ಟೇ ಆಸಕ್ತಿಯಿಂದ ಬರೆದುಕೊಳ್ಳುತ್ತಿದ್ದರು. ಒಬ್ಬನಂತೂ ಒಂದು ಕಿರು ಕತ್ತಿ ಮತ್ತು ಬುಟ್ಟಿಯೊಟ್ಟಿಗೆ ಹೂವು, ಎಲೆ, ಬಳ್ಳಿ, ಮರದ ಕಿರು ಟೊಂಗೆಗಳನ್ನು ಹರ್ಬೇರಿಯಮ್ (Herbarium) ತಯಾರಿಸಲು ಶೇಖರಿಸಿಕೊಳ್ಳುತ್ತಿದ್ದ. ಆತನ ಉತ್ಸಾಹ ನೋಡಿ ನನಗೆ ಖುಷಿಯಾದರೂ, ಅವನ ಅವಸ್ಥೆ ಕಂಡು ಇನ್ನಿತರ ವಿದ್ಯಾರ್ಥಿಗಳು ನಗೆಗಡಲಲ್ಲಿ ತೇಲುತ್ತಿದ್ದರು. ಅದೇ ಹೊತ್ತಿಗೆ, ರಕ್ತಹೊನ್ನೆಯ ದರ್ಶನ ಈ ಪರಿ ಆಗಿತ್ತು. ಬೇರೆ ಎಲ್ಲ ಮರಗಳಿಗಿಂತ, (ಅವರ ಲೆಕ್ಕದಲ್ಲಿ) ರಕ್ತ ಕಾರುತ್ತಿದ್ದ ಈ ಮರವೇ ವಿದ್ಯಾರ್ಥಿಗಳ ಗಮನ ಸೆಳೆದು, ಅಲ್ಲಿಯೇ ಹೆಚ್ಚು ಗಮನವೂ, ಸಮಯವೂ ಹೋಗತೊಡಗಿತು.

ಕನ್ನಡದಲ್ಲಿ ಸುರಹೊನ್ನೆ, ವಿಜಯಸರ ಎಂದೂ ಕರೆಸಿಕೊಳ್ಳುವ ಈ ಮರದ ವೈಜ್ಞಾನಿಕ ಹೆಸರು 'ಟೆರೋಕರ್ಪಸ್ ಮಾರ್ಸುಪಿಯಮ್.' ಲೆಗುಮಿನೊಸೆ (ಫಾಬಿಯೇಸಿ) ಕುಟುಂಬದ, ಟೆರೋಕರ್ಪಸ್ ಕುಲದ 35 ಜಾತಿಯ ಸಸ್ಯಗಳಲ್ಲಿ ಇದೂ ಒಂದು.

Image

ಈ ಹೊನ್ನೆಮರದ ಮೂಲವು ನಮ್ಮ ಭಾರತವೇ. ಕರ್ನಾಟಕ, ಕೇರಳ ರಾಜ್ಯಗಳಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟದ ಕಾಡುಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತವೆ. ಸರಿಸುಮಾರು 30 ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಈ ಮರಗಳು ಮಧ್ಯ ಭಾರತದ ಉಷ್ಣವಲಯ ಕಾಡುಗಳಲ್ಲೂ, ಎಲೆ ಉದುರುವ ಕಾಡುಗಳಲ್ಲೂ ಕಂಡುಬರುತ್ತವೆ.

ಮರದ ತೊಗಟೆಯದು ಬಿಳಿಮಿಶ್ರಿತ ಕಪ್ಪು ಬಣ್ಣ. ತೊಗಟೆಯ ಆಳವಾದ ಬಿರುಕುಗಳ ಮುಖೇನ ಸಹ ವೃಕ್ಷಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ. ತೊಗಟೆಯನ್ನು ಕೆತ್ತಿದಾಗ ಸ್ರವಿಸುವ ಕೆಂಪು ಬಣ್ಣದ ಅಂಟು ಆಯುರ್ವೇದ ಔಷಧ ತಯಾರಿಕೆಯ ಬಳಕೆಯಲ್ಲಿದೆ. ಹೀಗೆ ಕೆಂಪು ಬಣ್ಣದ ದ್ರವ ಒಸರುವುದರಿಂದಲೇ ಇದಕ್ಕೆ 'ಬ್ಲೀಡಿಂಗ್ ಟ್ರೀ' ಎಂಬ ಹೆಸರು ಬಂದಿದೆ.

ಮರದ ಕಾಂಡವು ಬಲು ಗಟ್ಟಿ. ಹಾಗಾಗಿ, ಮನೆಯ ಹೆಬ್ಬಾಗಿಲು, ಕಿಟಕಿಗಳ ತಯಾರಿಕೆಯಲ್ಲಿ ಭಾರೀ ಬೇಡಿಕೆ. ಮರದ ಕಾಂಡವು ರುಚಿಯಲ್ಲಿ ಕಹಿ ಇರುವುದರಿಂದ ಗೆದ್ದಲು ಹುಳುಗಳು ಈ ಮರದತ್ತ ತಲೆ ಹಾಕುವುದಿಲ್ಲ.

Image

ಆಯರ್ವೇದ ಚಿಕಿತ್ಸೆಯಲ್ಲಿ, ಈ ಮರದ ಕಾಂಡದಿಂದ ತೆಗೆದ ಸಾರವನ್ನು ಮಧುಮೇಹ, ಬೊಜ್ಜು ನಿವಾರಣೆಗಾಗಿ ಉಪಯೋಗಿಸುತ್ತಾರೆ. ಕಾಂಡದಿಂದ ತಯಾರಿಸಿದ ಮರದ ಲೋಟದಲ್ಲಿ ನೀರನ್ನು ತುಂಬಿಸಿಟ್ಟು ಮುಂಜಾನೆ ಕುಡಿಯುವುದರಿಂದ ಮೇದೋಜೀರಕ ಗ್ರಂಥಿಗಳನ್ನು ಪುನಶ್ಚೇತನಗೊಳಿಸಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ಬರುತ್ತದೆಂದು ಸಾಬೀತಾಗಿದೆ. ಮರದ ಕಡ್ಡಿಗಳನ್ನು ಬೇವಿನ ಕಡ್ಡಿಯಂತೆ ಹಲ್ಲುಜ್ಜಲು ಬಳಸುವುದು ಸಹ ಚಾಲ್ತಿಯಲ್ಲಿತ್ತು.

ಹೊನ್ನೆ ಎಲೆಗಳು ಸಹ ಕಹಿಯಾಗಿದ್ದು, ಹಿಂದಿನ ಕಾಲದಲ್ಲಿ ಅಂಕಣದ ಮರಗಳನ್ನು ಕಟ್ಟುವಾಗ ಮಣ್ಣಿನ ಮತ್ತು ಹಲಗೆಗಳ ನಡುವೆ ಹೊನ್ನೆಯ ಸೊಪ್ಪನ್ನು ಹರಡಿ ಜೋಡಿಸುತ್ತಿದ್ದರು. ಹೀಗೆ, ಹರಡಿದ ಎಲೆಗಳು ಗೆದ್ದಲು ಹುಳಗಳಿಂದ ಹಲಗೆಗಳನ್ನು ಸಂರಕ್ಷಿಸುತ್ತಿದ್ದವು. ಹೊನ್ನೆ ಎಲೆಗಳನ್ನು ಇನ್ನಿತರೆ ಎಲೆಗಳೊಟ್ಟಿಗೆ ಸೇರಿಸಿ  ಕುರಿ ಮೇಕೆಗಳಿಗೆ ಮೇವಾಗಿಯು ಸಹ ಕೊಡುತ್ತಾರೆ.

ಕೊಡವರ ಭಾಷೆಯಲ್ಲಿ 'ಬೇಂಗ ಮರ'ವಾಗಿರುವ ಹೊನ್ನೆಯ ಮರಗಳ ಸಂಖ್ಯೆ ಒಂದೊಮ್ಮೆ ನಮ್ಮ ರಾಜಧಾನಿಯಲ್ಲಿ ಅಧಿಕವಾಗಿದ್ದ ಕಾರಣಕ್ಕೇ 'ಬೆಂಗ ಊರು' ಎಂಬುದು ಕ್ರಮೇಣ 'ಬೆಂಗಳೂರು' ಆಯಿತು ಎಂಬ ವಾದವೂ ಇದೆ.

ಈ ಲೇಖನ ಓದಿದ್ದೀರಾ?: ಹಿತ್ತಿಲ ಗಿಡ | ನಮ್ಮ ನಡುವೆಯೇ ಉಂಟು ನೀರಿನ ಕೊಳವೆ ಹೊಂದಿದ ಅತ್ಯಪರೂಪದ ಮರ

ಮಾರ್ಚ್ ತಿಂಗಳಲ್ಲಿ ಹಳದಿ ಹೂವುಗಳನ್ನು ಹೊತ್ತು ನಿಲ್ಲುವ ಹೊನ್ನೆಯು, ಡಿಸೆಂಬರ್ ತಿಂಗಳಷ್ಟೊತ್ತಿಗೆ ಒಂದೇ ಬೀಜವನ್ನೊಳಗೊಂಡ ಪೂರ್ಣವೃತ್ತದ, ರೆಕ್ಕೆಯಂತಹ ಚಪ್ಪಟ್ಟೆಯಾಕಾರದ, ಹಸಿರು ಬಣ್ಣದ ಹಣ್ಣು ಬಿಡುತ್ತದೆ. ಹಣ್ಣು ಒಣಗಿ ನೆಲದ ಮೇಲೆ ಬಿದ್ದು, ಗಾಳಿಯ ಸಹಾಯದಿಂದ ದೂರದೂರಕ್ಕೆ ತೂರಿಕೊಂಡು ಸಾಗಿ, ಮುಂಗಾರಿನ ಮಳೆಗೆ ಮೊಳಕೆಯೊಡೆದು ಹೊಸ ಗಿಡವಾಗಿ ಬೆಳೆದು ಮತ್ತೆ ಹೆಮ್ಮರವಾಗುತ್ತದೆ.

ಇಷ್ಟೆಲ್ಲ ವಿವರಣೆ ಹೇಳಿ ಮುಗಿಸುವಷ್ಟರಲ್ಲಿ, ಈ ವರ್ಷದ ಬೀಜದುಂಡೆಗೆ ಇದರ ಬೀಜವನ್ನು ಸಂಗ್ರಹಿಸಿ ರಸ್ತೆ ಬದಿಗಳಲ್ಲಿ, ಪ್ರವಾಸಕ್ಕೆಂದು ಹೋದಾಗ ಕಾಡುಗಳಲ್ಲಿ ಎಸೆಯೋಣ ಎಂದು ಕೊನೇ ಬೆಂಚಿನ ನೆಚ್ಚಿನ ವಿದ್ಯಾರ್ಥಿಗಳ ಸಲಹೆ ಬಂತು. ಅವರ ಮುಂದಾಲೋಚನೆ ಕಂಡು ಖುಷಿಯಾಯಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180