ಊರ್ಬದಿ | ಗುಡ್ಲು ಕಾವಲಿನ ರೋಚಕ ರಾತ್ರಿ ಮತ್ತು ಹೊಳಗೋಡು ಸಾಬರ ಮೋಡಿ ಬೇಟೆ

ಒಮ್ಮೆ ನಮ್ಮನೆಯಂಚಿನ ಕಾಡಿನಲ್ಲಿ ಬೇಟೆಗೆ ಬಂದಿದ್ದ ಹೊಳಗೋಡು ಸಾಬ್ರು, ಭಾರೀ ಜಿಂಕೆ ಹೊಡೆದುರುಳಿಸಿದ್ದರು. ಆದರೆ, ಅಷ್ಟು ಗಾತ್ರದ ಜಿಂಕೆಯನ್ನು ಹೊತ್ತುಕೊಂಡು ಹೋಗಲು ಜನರಿಲ್ಲ! ಏನು ಮಾಡುವುದು? ಯಾವುದೋ ಸೊಪ್ಪು ತಂದು ಅಂಗೈಯಲ್ಲಿ ತಿಕ್ಕಿ ರಸವನ್ನು ಸತ್ತ ಜಿಂಕೆ ಕಿವಿಯಲ್ಲಿ ಹಿಂಡಿದರಂತೆ. ಕೆಲವೇ ಕ್ಷಣಗಳಲ್ಲಿ ಜಿಂಕೆ ಕಿವಿ ಬಡಿದು ಎದ್ದುನಿಂತಿತು!

ಅದು ತುಂಬು ಬೆಳದಿಂಗಳ ರಾತ್ರಿ...

ಕೆರೆಯಂಚಿನ ಗದ್ದೆಯ ಗುಡ್ಲಿನ ಮೇಲೆ ಕಂಬಳಿ ಹಾಸಿ ಮಲಗಿದ್ದ ನಮಗೆ ಗುಡ್ಲಿನ ಅಟ್ಲಿನ ಅಡಿಗೆ ಹರಿಯುತ್ತಿದ್ದ ಅಳಿವೆ ನೀರಿನ ಜುಳುಜುಳು, ಮೀನು, ಕಪ್ಪೆಗಳ ಹಾರಾಟ ಸದ್ದು, ದೂರದ ಕಾಡಿನ ಕಡೆಯಿಂದ ಜೀರುಂಡೆಯ ಕೀರಲು ಸದ್ದು... ಎಲ್ಲವೂ ಒಂದು ಲಯಬದ್ಧ ಮೇಳದಂತೆ ಕಿವಿ ತುಂಬುತ್ತಿದ್ದವು.

ರಾತ್ರಿ ಎಂಟು ಗಂಟೆಗೇ ಹಂದಿ ಹಿಂಡು ಒಡೆ ಬಂದ (ತೆನೆಗಟ್ಟಿದ) ಗದ್ದೆಗೆ ನುಗ್ಗಿ ದಿವಾಳಿ ಎಬ್ಬಿಸುತ್ತಿದ್ದರಿಂದ, ರಾತ್ರಿ ಊಟ ಮಾಡಿದವರೇ ಕಂಬಳಿ ಕೊಪ್ಪೆ ಹಾಕಿ, ಕೈಯಲ್ಲಿ ಒಂದು ಬ್ಯಾಟರಿ (ಟಾರ್ಚ್), ಒಲೆ ಉರಿಸಲು ಒಂದು ಬೆಂಕಿ ಕೊಳ್ಳಿ ಹಿಡಿದು ಗದ್ದೆಯ ಕಾವಲು ಗುಡ್ಲು (ಗುಡಿಸಲು) ಕಡೆ ಹೆಜ್ಜೆ ಹಾಕಬೇಕಿತ್ತು. ಗೌರಿ ಹಬ್ಬ ಕಳೆಯುತ್ತಲೇ ಭತ್ತದ ಸಸಿ ಒಡೆ ತುಂಬತೊಡಗುತ್ತಿದ್ದವು. ಒಡೆಯಾಡುವ ಹೊತ್ತಿಗೇ ಶುರುವಾಗುತ್ತಿದ್ದ ಹಂದಿ ಕಾಟ, ಕಾರ್ತೀಕದ ಭತ್ತದ ಕೊಯ್ಲಿನವರೆಗೂ ಮುಂದುವರಿಯುತ್ತಿತ್ತು. ಹಾಗಾಗಿ, ಗೌರಿ ಹಬ್ಬ ಉಂಡವರೇ ಗದ್ದೆಯಲ್ಲಿ ನಾಲ್ಕೈದು ಬದುಗೊಂದು ಕಾವಲು ಗುಡ್ಲು ಹಾಕಲು ಕಂಬ ನೆಟ್ಟು, ಅಟ್ಲು ಕಟ್ಟಿ, ಮಾಡು ಮಾಡಿ, ಸೋಗೆ ಹಚ್ಚಿ ಸಜ್ಜು ಮಾಡುವುದು ವಾಡಿಕೆ.

ನನಗೆ ಈ ಗುಡ್ಲು ಕಟ್ಟುವುದು, ಅದರ ಅಟ್ಲು ಮಾಡುವುದು, ಅಟ್ಲು ಮೇಲೆ ಕೆಸರುಮಣ್ಣು ಹಾಕಿ ಒಲೆ ಮಾಡುವುದು, ಅಟ್ಲು ಹತ್ತಲು ಮೆಟ್ಟಿಲು ಕಟ್ಟುವುದು... ಇವೆಲ್ಲ ಬಹಳ ಮೋಜಿನ ಕೆಲಸಗಳು. ಹಾಗಾಗಿ, ಎಂಟು, ಒಂಬತ್ತನೇ ತರಗತಿ ಓದುವಾಗಲೇ ಶನಿವಾರ, ಭಾನುವಾರ ಈ ಮೇಸ್ತ್ರಿ ಕೆಲಸ ಶುರು ಮಾಡ್ತಿದ್ದೆ.

Image

ಆ ಗುಡ್ಲು ಕೂಡ ನಾನೇ ಮಾಡಿದ್ದೆ. ಅವತ್ತು ಎಂದಿನಂತೆ ನಾನು ಮತ್ತು ಅಣ್ಣ (ದೊಡ್ಡಪ್ಪನ ಮಗ) ಇಬ್ಬರೂ ಗದ್ದೆ ಕಾಯಲು ಹೋಗಿದ್ದೆವು. ಅವರ ಗದ್ದೆ, ನಮ್ಮ ಗದ್ದೆ ನಡುವೆ ಗುಡ್ಲು ಹಾಕಿ, ಇಬ್ಬರೂ ಕಾಯುವುದು ಪ್ರತೀ ವರ್ಷದ ವಾಡಿಕೆ. ಹಾಗಾಗಿ, ನಾವಿಬ್ಬರು ಬಹುಶಃ ಆರೇಳನೇ ತರಗತಿಯಿಂದಲೇ ಗುಡ್ಲು ಕಾಯೋದು ಶುರುವಾಗಿತ್ತು.

ಮಳೆ, ಥಂಡಿ ಬಯಲು, ಕೆಸರು ಗದ್ದೆ, ನೊರ್ಜು (ಸೊಳ್ಳೆ) ಕಾಟ, ಅಮವಾಸ್ಯೆ, ಹುಣ್ಣಿಮೆ ದಿನ ದೊಡ್ಡವರ ಕತೆಗಳು ಹುಟ್ಟಿಸುತ್ತಿದ್ದ ಭೀತಿ, ಆಗಾಗ ಕೆರೆಯಂಗಳಕ್ಕೆ ದಾಳಿ ಇಡುತ್ತಿದ್ದ ಹಂದಿ, ಜಿಂಕೆಗಳ ಹೊಂಚಿ ಬಂದು ಕಾಡಂಚಲಿ ಗಡರು ಹೊಡೀತಿದ್ದ ಹುಲಿರಾಯನ ಭಯ... ಎಲ್ಲ ತಾಪತ್ರಯಗಳ ನಡುವೆಯೂ ಒಂದು ದಿನವೂ ತಪ್ಪದೆ ಗುಡ್ಲು ಕಾಯಬೇಕಿತ್ತು. ಅಪ್ಪಿತಪ್ಪಿ ಒಂದು ದಿನ ಹೋಗಿಲ್ಲ ಎಂದರೂ, ಅಂದೇ ಹಂದಿ ಹಿಂಡು ಗದ್ದೆಗೆ ನುಗ್ಗಿ ಹುಡಿಹಾರಿಸುತ್ತಿದ್ದವು.

ನನಗೆ ಗುಡ್ಲಿಗೆ ಹೋಗೋ ಮುಂಚೆ ಆ ದಿನದ ಹೋಂ ವರ್ಕ್, ಓದು ಮುಗಿಸಬೇಕಿತ್ತು. ಮನೆಯಲ್ಲಿ ಓದಿದವರು ಇಲ್ಲದ್ದರಿಂದ ನಾನು ಓದಿದ್ದೇ, ಬಿಟ್ಟಿದ್ದೇ... ಆದರೂ ಓದು ನನ್ನ ಹುಚ್ಚು ಆಗ. ಮನೆಯಲ್ಲೂ ಬುಡ್ಡಿ ದೀಪದಲ್ಲೇ (ಸೀಮೆ ಎಣ್ಣೆ ದೀಪ) ಓದಬೇಕಾದ್ದರಿಂದ ಕೆಲವೊಮ್ಮೆ ಗುಡ್ಲಿಗೆ ದೀಪ ತಗೊಂಡುಹೋಗಿ ಅಲ್ಲೇ ಓದುತ್ತಿದ್ದುದೂ ಇತ್ತು.

Image

ಅವತ್ತೂ ಗದ್ದೆ ಬಯಲ (ನಮ್ಮದು ಸುತ್ತು ಕಾಡಿನ ನಡುವಿನ ಗದ್ದೆ ಕೋವು) ಗಾಳಿಯ ನಡುವೆ ದೀಪ ಹಚ್ಚಿಟ್ಟುಕೊಂಡೇ ನೋಟ್ಸ್ ಬರೆದು ಮಲಗಲು ಕಂಬಳಿ ಹಾಸಿ, ಮತ್ತೊಂದು ಕಂಬಳಿ ಹೊದ್ದು ಅಡ್ಡಾಗುತ್ತಿದ್ದೆ. ಅಷ್ಟರಲ್ಲಿ ದೂರದ ಕುರ್ಕಿ ಗುಡ್ಡದ ವಾರೆಯಿಂದ ಹುಲಿಯ ಗಡರು (ಹುಲಿಯ ಘರ್ಜನೆ) ಮೊಳಗಿತು. ರಾತ್ರಿಯ ನೀರವತೆಯ ಲಯದ ಸುತ್ತಮುತ್ತಲ ಸದ್ದುಗಳ ಮೇಳದ ನಡುವೆ ಆ ಗಡರು ಸಿಡಿಲಂತೆ ಗದ್ದೆಕೋವಿಗೆ ಅಪ್ಪಳಿಸಿತು.

ಆ ಸದ್ದಿಗೆ ಅರೆನಿದ್ದೆಗೆ ಜಾರಿದ್ದ ಅಣ್ಣ ದಢಕ್ಕನೆ ಎದ್ದು ಕೂತ. “ಹುಡ್ಗಾ... ಏನೋ ಅದು?" ಅಂದ. "ಹುಲಿ ಕಣಾ... ಕುರ್ಕಿ ಗುಡ್ಡದ ವಾರೆ ಕಡೆಯಿಂದ..." ಎಂದು ನಾನು, ಭಯಬಿದ್ದಿದ್ದರೂ ಮಹಾ ಧೈರ್ಯಸ್ಥನ ಥರ ಪೋಸು ಕೊಟ್ಟೆ. ತಿಂಗಳಲ್ಲಿ ಎರಡು-ಮೂರು ಬಾರಿಯಾದರೂ ರಾತ್ರಿ ಹೊತ್ತಲ್ಲಿ ಹೀಗೆ ಹುಲಿ ಕೂಗು ಮೊಳಗುತ್ತಿದ್ದರಿಂದ ನಮಗೆ ಅದೇನೂ ತೀರಾ ಭಯಪಡುವ ವಿಷಯ ಆಗಿರಲಿಲ್ಲ. ಆದರೂ ಪ್ರತಿ ಬಾರಿ ಹುಲಿ ಗಡರು ಕೇಳುತ್ತಲೇ ಹೆದರಿಕೆಯಾಗುವುದು, ಆಮೇಲೆ ನಾವಿಬ್ಬರೂ ನಮಗೆ ನಾವೇ ಧೈರ್ಯ ತಂದುಕೊಂಡು, ಬೇರೇನೋ ವಿಷಯ ತೆಗೆದು ಮಾತಾಡಿ ಹೆದರಿಕೆ ಮರೆಮಾಚುವುದೋ, ಅಥವಾ ನಾಲ್ಕು ಗದ್ದೆ ಬದುವಿನಾಚೆಯ ಗುಡ್ಲು ಕಾಯುವ ಚಿಕ್ಕಪ್ಪನಿಗೆ ಎಚ್ಚವಿದ್ದರೆ ಅವನು ನಮಗೆ ಅಲ್ಲಿಂದಲೇ ಧೈರ್ಯ ಹೇಳಿ, "ಹುಡ್ರಾ ಕೇಳುಸ್ತನ್ರೋ... ಅದೇನು ಇಲ್ಲೇ ಹತ್ರ ಅನ್ಕೊಂಡ್ರನಾ... ಏನಿಲ್ಲ ಅಂದ್ರೂ ಅದು ಪೈಟಾಣೆ ವಾರೆ (ಕುರ್ಕಿ ಗುಡ್ಡದ ಆಚೆಯ ಮತ್ತೊಂದು ಗುಡ್ಡ) ಇರಬಹುದು... ಹೆದ್ರಕೋಬ್ಯಾಡ್ರಾ... ಮಲಗ್ರಿ ಮಲಗ್ರಿ... ನಾನು ಎಚ್ಚರಾಗಿದೀನಿ..." ಎಂದು ನಮ್ಮ ಹೆದರಿಕೆ ಕಳೆಯುವ ಯತ್ನ ಮಾಡುವುದು ಎಲ್ಲ ಮಾಮೂಲಿಯಾಗಿತ್ತು.

Image

ಅವತ್ತು ಹೀಗೆ ಚಿಕ್ಕಪ್ಪ ಧೈರ್ಯ ಹೇಳಬಹುದು ಎಂಬ ನಿರೀಕ್ಷೆ ಇಬ್ಬರಲ್ಲೂ ಇತ್ತು. ಅವರು ಮಲಗಿದ್ದರಿಂದ ಅವರಿಗೆ ಹುಲಿಯ ಕೂಗಾಗಲೀ, ಅದರಿಂದ ಬೆಚ್ಚಿದ ನಮ್ಮ ಪಾಡಾಗಲೀ ನೆದರಿಗೆ ಬಂದಿರಲಿಲ್ಲ.

ನಮ್ಮ ಮಾತುಕತೆಯ ನಡುವೆಯೇ ಹುಲಿ ಮತ್ತೊಂದು ಗಡರು ಹಾಕಿತು. ಮೊದಲು ಕೇಳಿಸಿದ್ದಕ್ಕಿಂತ ಈ ಬಾರಿ ಸದ್ದು ಕ್ಷೀಣವಾಗಿತ್ತು.. ಅಂದರೆ, ಹುಲಿ ನಮ್ಮಿಂದ ಇನ್ನಷ್ಟು ದೂರ ಹೋಗಿತ್ತು. ಹಾಗಾಗಿ ನಮಗೆ ಒಂದಿಷ್ಟು ಧೈರ್ಯ ಬಂದಿತ್ತು. ಈ ನಡುವೆ, ಪಕ್ಕದೂರಿನ ಹೊಳಗೋಡು ಸಾಬ್ರು ಹುಲಿ ಬೇಟೆಯಾಡ್ತಿದ್ದ ಕತೆಗಳನ್ನು ಅಣ್ಣ ಹೇಳುತ್ತಾ, ನಮ್ಮೂರಿನ ದಂತಕತೆಯಾಗಿದ್ದ ಆ ಸಾಹೇಬರ ಕುರಿತು ಕುತೂಹಲ ಹೆಚ್ಚಿಸಿದ್ದ.

ಹೊಳಗೋಡು ಸಾಬ್ರು ಮೋಡಿ ಸೊಪ್ಪು ಹಾಕಿ ಬೇಟೆಯಾಡುತ್ತಿದ್ದರಂತೆ. ಕಾಡಿನಲ್ಲಿ ತಾಜಾ ಹೆಜ್ಜೆ ಗುರುತಿನ ಮೇಲೆ ಸೊಪ್ಪು ಇಟ್ಟು ಮೆಟ್ಟಿ ನಿಂತು, ಆ ಹೆಜ್ಜೆಯ ಪ್ರಾಣಿಯನ್ನು ಸಮ್ಮೋಹನಗೊಳಿಸಿ ವಾಪಸು ಬಂದು ತಮ್ಮೆದುರು ನಿಲ್ಲುವಂತೆ ಮಾಡುತ್ತಿದ್ದರಂತೆ. ಹಾಗೆ ಬಂದು ಎದುರು ನಿಂತ ಪ್ರಾಣಿಗೆ ಗುರಿ ಇಟ್ಟು ಜೋಡಿ ನಳಿಕೆಯ ತೋಟಾ ಕೋವಿಯಿಂದ ಬಲಿ ಬೀಳಿಸುತ್ತಿದ್ದರಂತೆ. ಅಷ್ಟೇ ಅಲ್ಲ, ಗುಂಡೇಟು ತಿಂದು ಸತ್ತುಬಿದ್ದ ಪ್ರಾಣಿಯನ್ನು ಮತ್ತಾವುದೋ ಸೊಪ್ಪಿನ ರಸ ಹಿಂಡಿ ಎದ್ದು ನಿಲ್ಲುವಂತೆ ಮಾಡುವ ಮೋಡಿ ವಿದ್ಯೆಯೂ ಅವರಿಗೆ ಗೊತ್ತಿತ್ತಂತೆ. ಒಮ್ಮೆ ಹೀಗೆ ನಮ್ಮ ಮನೆಯಂಚಿನ ಕಾಡಿನಲ್ಲಿ ಬೇಟೆಗೆ ಬಂದಿದ್ದ ಅವರು, ಭಾರೀ ಜಿಂಕೆಯನ್ನು ಹೊಡೆದುರುಳಿಸಿದ್ದರಂತೆ. 

Image

ಜಿಂಕೆಯೇನೂ ಬಿತ್ತು. ಆದರೆ, ಅಷ್ಟು ಗಾತ್ರದ ಜಿಂಕೆಯನ್ನು ಹೊತ್ತುಕೊಂಡು ಹೋಗಲು ಜೊತೆಗೆ ಜನರಿಲ್ಲ! ಏನು ಮಾಡುವುದು? ತಾನು ಮತ್ತು ಜೊತೆಗಾರ ಇಬ್ಬರೇ ಅದನ್ನು ಹೊತ್ತುಕೊಂಡು ಹೋಗುವುದಿರಲಿ, ಅತ್ತಿತ್ತು ನಾಲ್ಕು ಮಾರು ಎಳೆದುಕೊಂಡು ಹೋಗುವುದು ಕೂಡ ಸಾಧ್ಯವಿರಲಿಲ್ಲ. ಹಾಗಾಗಿ ಅವರು ತಮ್ಮ ಮತ್ತೊಂದು ಮಾಯಾವಿದ್ಯೆ ಪ್ರಯೋಗಿಸಿದರಂತೆ. ಯಾವುದೋ ಸೊಪ್ಪು ತಂದು ಅಂಗೈಯಲ್ಲಿ ತಿಕ್ಕಿ ಅದರ ರಸವನ್ನು ಸತ್ತ ಜಿಂಕೆಯ ಕಿವಿಯಲ್ಲಿ ಹಿಂಡಿದರಂತೆ. ಕೆಲವೇ ಕ್ಷಣಗಳಲ್ಲಿ ಜಿಂಕೆ ಮತ್ತಿನಲ್ಲಿ ಇರುವಂತೆ ಕಣ್ಣು ತೇಲಿಸಿ ಕಿವಿ ಬಿಡಿಯಿತು! 

ಸಾಬ್ರು ಅದರ ಕಿವಿ ಹಿಡಿದು ಎತ್ತಿ ನಿಲ್ಲಿಸಿದರು. ಜಿಂಕೆ ಎದ್ದು ನಿಂತಿತು! ಆಮೇಲೆ ನಿಧಾನಕ್ಕೆ ಅದರ ಕಿವಿ ಹಿಡಿದುಕೊಂಡೇ ನಡೆಸಿಕೊಂಡು ಮನೆಯತ್ತ ಹೊರಟರು. ಜಿಂಕೆ ಅಮಲಿನಲ್ಲಿ ತೇಲುತ್ತಿರುವಂತೆ ಯಪರಾತಪರಾ ಹೆಜ್ಜೆ ಹಾಕುತ್ತ ನಡೆದುಕೊಂಡು ನಾಯಿಮರಿಯಂತೆ ಸಾಬರ ಜೊತೆ ಹೊರಟಿತು!

ಹೀಗೆ ರೋಚಕ ಕತೆಗಳು ನಮ್ಮೂರಿನಲ್ಲಿ ಆಗ ಹುಡುಗರಾದ ನಮ್ಮ ಕಣ್ಣರಳಿಸುತ್ತಿದ್ದವು. ಅವತ್ತು ಅಣ್ಣ ಕೂಡ ಇದೇ ಕತೆಯನ್ನು ತಿರುಗಾಮುರುಗಾ ಹೇಳುತ್ತಲೇ ಇದ್ದ. ಪ್ರತೀ ಬಾರಿ ಹೇಳುವಾಗಲೂ ಜಿಂಕೆ ಬದಲು, ಕಾಡುಕುರಿ ಅಥವಾ ಹಂದಿಯೋ ಆಗಿ ಪ್ರಾಣಿ ಬದಲಾಗುತ್ತಿತ್ತು. ಇನ್ನು, ಒಮ್ಮೆ ಕುರ್ಕಿ ಗುಡ್ಡ, ಮತ್ತೊಮ್ಮೆ ಪಾಟಾಣೆ ವಾರೆ, ಮತ್ತೊಮ್ಮೆ ಕಾವಿ ಕಲ್ಲಾಣೆ, ಮಗದೊಮ್ಮೆ ಭಟ್ರು ಸವಳು... ಹೀಗೆ ಬೇಟೆ ಬೇಟೆಯ ಜಾಗ ಕೂಡ ಬದಲಾಗುತ್ತಿದ್ದವು. ಒಟ್ಟಾರೆ ಸಾರಾಂಶ ಮಾತ್ರ ಸಾಬರ ಮೋಡಿ ವಿದ್ಯೆಯ ಚಮತ್ಕಾರಗಳೇ ಆಗಿರುತ್ತಿದ್ದವು. ಇದೇ ಕತೆಯನ್ನು ಅಜ್ಜ-ಅಜ್ಜಿಯ ಬಾಯಲ್ಲೂ ನೂರೆಂಟು ಬಾರಿ ಕೇಳಿದ್ದರೂ ಪ್ರತಿ ಬಾರಿಯೂ ಆ ಕತೆಗಳು ಹೊಸದೇ ಎನಿಸುತ್ತಿದ್ದವು.

ಈ ಲೇಖನ ಓದಿದ್ದೀರಾ?: ಊರ್ಬದಿ | ಗರುಡಪಕ್ಷಿಯ ಕೊಂದ ಬಳಿಕ ಬೇಟೆಯನ್ನೇ ಬಿಟ್ಟ ನಾರಾಯಣ

ಹೊಳಗೋಡು ಸಾಬರ ಬೇಟೆಯ ಕತೆಗಳು ನಮ್ಮ ಗುಡ್ಲು ರಾತ್ರಿಗಳಿಗೆ ಇನ್ನಷ್ಟು ರೋಚಕತೆ ತರುತಿದ್ದವು. ಗುಡ್ಲಿನ ದಾರಿಯಲ್ಲಿ ಬೆಳೆದುನಿಂತಿರುತ್ತಿದ್ದ ಶೇಂಗಾ ಕಿತ್ತು, ಒಲೆಯಲ್ಲಿ ಬೇಯಿಸಿ ತಿನ್ನುವುದು, ರಾತ್ರಿ ಅಳಿವೆಯ ನೀರಲ್ಲಿ ಆಡುತ್ತಿದ್ದ ಏಡಿ ಸಿಕ್ಕರೆ ಬೇಯಿಸುವುದು, ಕಬ್ಬಿನ ಗದ್ದೆಗೆ ನುಗ್ಗಿ ಕಬ್ಬು ಕಡಿದು ಗುಡ್ಲಿಗೆ ಒಯ್ದು ತಿನ್ನುವುದು, ಸಿಹಿ ಗೆಣಸು ಸುಟ್ಟು ಹುಡಿಹಾರಿಸುವುದು... ಹೀಗೆ ಗುಡ್ಲಿನ ರಾತ್ರಿಯ ನಾನಾ ರೋಚಕತೆಗಳಿಗೆ ಬೇಟೆಯ ಕತೆಗಳೂ ಸೇರಿ ಬೇರೆಯದೇ ಮಜಾ ಕೊಡುತ್ತಿದ್ದವು. 

ಸಾಗರ-ಭಟ್ಕಳ ಗಡಿಭಾಗದ ದುರ್ಗಮ ಕಾಡಿನ ನಡುವಿನ ಅರ್ಕಳ ಎಂಬ ಕುಗ್ರಾಮದ ಗೆಳೆಯ ಕೇಶವ ಅರ್ಕಳ ಮೊನ್ನೆ ತನ್ನ ಮೊಬೈಲಿನಲ್ಲಿ ಗದ್ದೆಬಯಲಿನ ನಡುವಿನ ಗುಡ್ಲೊಂದರ ಫೋಟೊ ಹಾಕಿ, 'ಗದ್ದೆ ಕಾಯುವ ಗುಡಿಸಲು ಈಗ ನೆನಪು ಮಾತ್ರ' ಎಂದು ಬರೆದಿದ್ದರು. ಆ ಅವರ ಸ್ಟೇಟಸ್‌ ನೋಡಿ ನನ್ನ ಗುಡ್ಲು ಕಾವಲು ದಿನಗಳು ನೆನಪಾದವು.

ಹೌದು, ಮಲೆನಾಡಿನ ಗದ್ದೆಗಳನ್ನು ಕಾಯಲು ಈಗ ವಿದ್ಯುತ್‌ ಬೇಲಿ ಮತ್ತು ವಿದ್ಯುತ್‌ ಹಾಯಿಸುವ ತಂತಿಗಳು ಬಂದಿವೆ. ಕಾಡು ಕರಗಿ ಆ ಜಾಗದಲ್ಲಿ ಮೆಕ್ಕೆಜೋಳ ಬಂದಿದೆ. ಹಂದಿಗಳ ಸಂಖ್ಯೆಯೂ ಕ್ಷೀಣಿಸಿದೆ. ಇರುವ ಅಷ್ಟಿಷ್ಟು ಹಂದಿಗಳಿಗೆ ಭತ್ತದ ಒಡೆಗಿಂತ ಮೆಕ್ಕೆಜೋಳ ಹೆಚ್ಚು ರುಚಿಸಿದೆ. ಹಾಗಾಗಿ, ಗದ್ದೆಗೆ ಹಂದಿ ಹಾವಳಿಯೂ ಕಡಿಮೆ. ಹಂದಿ ಹಾವಳಿಯಿಂದ ಭತ್ತ ಬಚಾವು ಮಾಡುವ ಗುಡ್ಲು ಕಾವಲು ಕೂಡ ಈಗ ನೆನಪು ಮಾತ್ರ.

ಛಾಯಾಚಿತ್ರ ಮತ್ತು ಕಲಾಕೃತಿ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
7 ವೋಟ್