ಜಾಗರ | ಸಿನಿಮಾಧ್ಯಮಕ್ಕೆ ಜೀವ ತುಂಬಿದ ಅಪೂರ್ವ ಮಾನವತಾವಾದಿ ಗ್ರಿಫಿ಼ತ್

D W Griffith 3

ಜಗತ್ತಿನ ಮೊದಲ ಸೂಪರ್ ಹಿಟ್ ಚಿತ್ರ, 'ದಿ ಗ್ರೇಟ್ ಟ್ರೈನ್ ರಾಬರಿ' ನಿರ್ದೇಶಕ ಎಡ್ವಿನ್ ಪೋರ್ಟರ್‌ನ ಚಿತ್ರಗಳ ಕತೆಗಳು ಜಾಳುಜಾಳಾಗಿವೆ ಅನ್ನಿಸುತ್ತದೆ ಗ್ರಿಫಿ಼ತ್‌ಗೆ. ತಾನೊಂದು ಗಟ್ಟಿ ಕತೆ ಬರೆದುಕೊಂಡು ಪೋರ್ಟರ್‌ನನ್ನು ಕಾಣುತ್ತಾನೆ. ಪೋರ್ಟರ್‌ ಆ ಹಸ್ತಪ್ರತಿಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಬದಲಿಗೆ, "ನನ್ನ ಮುಂದಿನ ಚಿತ್ರದಲ್ಲಿ ನಟಿಸುವೆಯಾ?" ಕೇಳುತ್ತಾನೆ!

ಸುಖಾಸುಮ್ಮನೆ ಅವನನ್ನು 'ಸಿನಿಮಾ ಪಿತಾಮಹ' ಎಂದು ಕರೆಯಲಿಲ್ಲ. ತನ್ನದೇ ಎಂಬಂಥ ಸ್ವಂತಿಕೆಯಿಲ್ಲದ, ಅಗ್ಗದ ಬೆರಕೆ ಕಲೆ ಎಂದು ಅವಗಣನೆಗೀಡಾಗಿದ್ದ ಸಿನಿಮಾ ಮಾಧ್ಯಮದ ಕಥನಕಲೆಯನ್ನು ರೂಪಿಸಿದವನು ಡೇವಿಡ್ ವಾರ್ಕ್ ಗ್ರಿಫಿ಼ತ್. "ಯಾವ ಕಾಲದಲ್ಲೇ ಆಗಲಿ, ಯಾವ ಭಾಷೆ-ದೇಶದಲ್ಲೇ ಆಗಲಿ, ಸಿನಿಮಾ ಮಾಡುತ್ತಿರುವ ಪ್ರತಿ ನಿರ್ದೇಶಕ/ಕಿಯರ ಹೆಗಲ ಮೇಲೆ ಕುಳಿತು ಗ್ರಿಫಿ಼ತ್ ಆ ನಿರ್ದೇಶಕ/ಕಿಯನ್ನು ನಿರ್ದೇಶಿಸುತ್ತಿರುತ್ತಾನೆ,” ಎಂಬ ಮಾತೊಂದಿದೆ. ಇದು ಅಪ್ಪಟ ಸತ್ಯದ ಮಾತು.

ಜಗತ್ತಿನ ಮೊದಲ ಸಿನಿಶೋಮ್ಯಾನ್ ಜ್ಯಾರ್ಜ್ ಮೆಲಿಯೇಸ್, ಜಗತ್ತಿನ ಮೊದಲ ಸಿನಿಕಥನಗಾರ ಎಡ್ವಿನ್ ಸ್ಟ್ಯಾಂಟನ್ ಪೋರ್ಟರ್, ಸಿನಿಕುಸುರಿ ಕಸುಬುದಾರ ಸಿಸಿಲ್ ಹೆಪ್‌ವರ್ತ್‌ರಂಥವರು ಸಿನಿಕಥನ ಹಾದಿಯನ್ನು ಸೃಷ್ಟಿಸಿದ ತನ್ನ ಘಟಾನುಘಟಿ ಪೂರ್ವಸೂರಿಗಳು. ಇವರೆಲ್ಲರೂ ಸಿನಿಕಥನದಲ್ಲಿ ಆವಿಷ್ಕರಿಸಿದ್ದ ಕಥನ ತಾಂತ್ರಿಕ ಅಂಶಗಳನ್ನು ರೂಢಿಸಿ, ದುಡಿಸಿಕೊಂಡು, ಸಿನಿಮಾ ತಯಾರಿಸುವವರು ಪಾಲಿಸಲೇಬೇಕಾದ ಮೂಲಭೂತ ಸಿನಿವ್ಯಾಕರಣದ ನಿಯಮಗಳನ್ನು ಮತ್ತು ಸೂತ್ರಗಳನ್ನು ತನಗೇ ಅರಿವಿಲ್ಲದಂತೆ ಗ್ರಿಫಿ಼ತ್ ರಚಿಸಿದ.

Image
D W Griffith 4

ತಮಾಷೆಯ ವಿಷಯವೆಂದರೆ, ಗ್ರಿಫಿ಼ತ್‌ಗೆ ಸಿನಿಮಾ ಆದ್ಯತೆಯ ಅಭಿವ್ಯಕ್ತಿ ಮಾಧ್ಯಮ ಆಗಿರಲಿಲ್ಲ. ಅವನ ಒಂದೇ ಆದ್ಯತೆ ನಾಟಕವಾಗಿತ್ತು. ಅವನು ಅತ್ಯುತ್ತಮ ನಾಟಕಗಳನ್ನು ಬರೆದು ಅಮೆರಿಕದ ಶೇಕ್ಸ್‌ಪಿಯರ್ ಆಗಲು ಬಯಸಿದ್ದ. ಜಗತ್ತಿನ ಮೊದಲ ಸೂಪರ್ ಹಿಟ್ ಚಿತ್ರವಾದ 'ದಿ ಗ್ರೇಟ್ ಟ್ರೈನ್ ರಾಬರಿ' ನಿರ್ದೇಶಕ ಎಡ್ವಿನ್ ಪೋರ್ಟರ್‌ನ ಚಿತ್ರಗಳ ಕತೆಗಳು ಜಾಳುಜಾಳಾಗಿವೆ ಅನ್ನಿಸಿ, ತಾನೊಂದು ಗಟ್ಟಿ ಕತೆಯನ್ನು ಬರೆದ ಗ್ರಿಫಿ಼ತ್, ಪೋರ್ಟರ್‌ನನ್ನು ಕಾಣುತ್ತಾನೆ. ಪೋರ್ಟರ್‌ನು ಆ ಹಸ್ತಪ್ರತಿಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಬದಲಿಗೆ, "ನನ್ನ ಮುಂದಿನ ಚಿತ್ರದಲ್ಲಿ ನಟಿಸುವೆಯಾ?" ಎಂದು ಕೇಳುತ್ತಾನೆ. ಗ್ರಿಫಿ಼ತ್ ಆಗ ತಾನೇ ಮದುವೆಯಾಗಿ ಹಣವಿಲ್ಲದೆ ಲಾಟರಿ ಹೊಡೆಯುತ್ತಿದ್ದುದರಿಂದ, ತಾನು ಶೇಕ್ಸ್‌ಪಿಯರನಾಗುವ ಬಯಕೆಯ ಅದಮ್ಯತೆಯನ್ನು ಅದುಮಿ, ನಟನಾಗಲು ಒಪ್ಪಿಕೊಳ್ಳುತ್ತಾನೆ. ಎಡ್ವಿನ್ ಪೋರ್ಟರ್‌ನಿಗಾದರೋ ಬಿಡುವಿಲ್ಲದಷ್ಟು ಸಿನಿಮಾ ಕೆಲಸ. ಜಗತ್ತಿನಾದ್ಯಂತ ಅವನ ಚಿತ್ರಗಳಿಗಾಗಿ ಜನ ಕಾಯುತ್ತಿದ್ದರು. ಕತೆ ಹೇಳುವ ಹೊಸ ಮಾಧ್ಯಮವಾದ ಸಿನಿಮಾದಲ್ಲಿ ನಟಿಸಲು ಸೂಕ್ತ ಕಲಾವಿದರ ಲಭ್ಯತೆಯ ಕೊರತೆ ಇತ್ತು. ಆದ್ದರಿಂದ ನಾಟಕದ ಹಿನ್ನೆಲೆಯವನಾದ ಗ್ರಿಫಿ಼ತ್‌ನನ್ನು ನಟಿಸುವೆಯಾ ಎಂದು ಕೇಳಿದ್ದನಾತ. ತಂತ್ರಜ್ಞಾನ ಅವಲಂಬಿತ ಸಿನಿಕಥನವು ಶೈಶವ ಅವಸ್ಥೆಯಲ್ಲಿದ್ದ ಅಂದು, ಗಗನಚುಂಬಿ ಬೃಹತ್ ಮರಗಳನ್ನು ಹತ್ತಿ, ಮರದ ನೆತ್ತಿಯಿಂದ ಸರಪಣಿ ಗರಗಸದಲ್ಲಿ ತುಂಡು-ತುಂಡುಗಳನ್ನು ಕೊಯ್ದುಕೊಂಡು ಇಳಿಯುವ ‘ಲುಂಬರ್‌ಜ್ಯಾಕ್’ ಶ್ರಮಿಕನ ಪಾತ್ರದಲ್ಲಿ ನರಪೇತಲ ಗ್ರಿಫಿ಼ತ್ ನಟಿಸುತ್ತಾನೆ! ಅದರಲ್ಲೂ, ಮರದ ತುದಿಯಲ್ಲಿ ತನ್ನ ಗೂಡಿನೊಳಕ್ಕೆ ಬೃಹತ್ ಹದ್ದೊಂದು ಎತ್ತೊಯ್ದು ಇಟ್ಟುಕೊಂಡಿರುವ ಎಳೆಯ ಮಗುವೊಂದನ್ನು ಆ ಬೃಹತ್ ಹದ್ದಿನೊಂದಿಗೆ ಸೆಣಸಿ ಕಾಪಾಡುವ ಪಾತ್ರ!

Image
D W Griffith 2

ಎಡಿಸನ್‌ನ ಚಿತ್ರಗಳಲ್ಲಿ ಕೆಲವು ಕಾಲ ನಟಿಸುವ ಗ್ರಿಫಿ಼ತ್, 'ಬಯೋಗ್ರಾಫ಼್' ಎಂಬ ಸಿನಿಕಂಪನಿಯನ್ನು ಸೇರುತ್ತಾನೆ. ಅಲ್ಲಿಯೂ ನಟನಾಗಿ ಮುಂದುವರಿಯುತ್ತಿದ್ದ ಗ್ರಿಫಿ಼ತ್ತ‌ನಿಗೆ, ಆತನ ಸಿನಿಮಾ ಜ್ಞಾನ ಮತ್ತು ಸಿನಿಸಾಮರ್ಥ್ಯಗಳನ್ನು ಗುರುತಿಸಿದ ಕಂಪನಿ ನಿರ್ದೇಶಿಸಲು ಕೋರುತ್ತದೆ. ಆ ವೇಳೆಗೆ ಜಗತ್ತಿನಾದ್ಯಂತ ಸಿನೆಮಾ ಬೇಡಿಕೆ ಹೆಚ್ಚಾಗಿತ್ತು. ಹೆಚ್ಚು-ಹೆಚ್ಚು ಚಿತ್ರಗಳನ್ನು ಮಾಡಬೇಕಾಗಿದ್ದರಿಂದ ಕಂಪನಿಗೆ ಈಗಾಗಲೇ ಇರುವ ನಿರ್ದೇಶಕನಲ್ಲದೆ ಮತ್ತೊಬ್ಬ ನಿರ್ದೇಶಕ ಬೇಕಿತ್ತು. ಆದರೆ, ಗ್ರಿಫಿ಼ತ್‌ಗೆ ಹೆದರಿಕೆ. ನಟನಾಗಿ ಒಂದಿಷ್ಟು ವರಮಾನವಿದೆ,‌ ಹೆಂಡತಿ-ಮಕ್ಕಳೊಂದಿಗನಾದ ತಾನು ನಿರ್ದೇಶಕನಾಗಿ ವಿಫಲನಾದರೆ ಈಗಿರುವ ಸಂಪಾದನೆಗೂ ಕಲ್ಲು ಬೀಳುತ್ತದೆ ಎಂಬುದು ಹಿಂಜರಿಕೆಗೆ ಕಾರಣ. ಅವನು ನಿರ್ದೇಶಕನಾಗಿ ಸೋತರೆ ಪುನಃ ನಟನಾಗಿ ಕೆಲಸ ಮಾಡುವ ಅವಕಾಶ ಕೊಡುತ್ತೇವೆ ಎಂದು ಕಂಪನಿ ಭರವಸೆ ನೀಡುತ್ತದೆ, ಒಪ್ಪಿಕೊಳ್ಳುತ್ತಾನೆ. ಅಲ್ಲಿಂದ ಆತ ಹಿಂದಿರುಗಿ ನೋಡುವುದೇ ಇಲ್ಲ. 450ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾನೆ. ಹೇಗೆ ಎರೆಹುಳು ‘ನಾನು ಈ ಭೂಮಿಯನ್ನು ಫಲವತ್ತು ಮಾಡುತ್ತಿದ್ದೇನೆ‘ ಎಂಬ ಅರಿವಿಲ್ಲದೆ ಯೋಚಿಸಿದೆ ಕಾಯಕ ಮಾಡುತ್ತ ಭೂಮಿಯನ್ನು ಫಲವತ್ತು ಮಾಡುತ್ತದೆಯೋ ಹಾಗೆ ಗ್ರಿಫಿ಼ತ್, ಬೇರೇನನ್ನೂ ಯೋಚಿಸದೆ ಸಿನಿಕಾಯಕದಲ್ಲಿ ತೊಡಗಿಕೊಂಡು, ಸಿನಿಮಾ ಮಾಧ್ಯಮವನ್ನು ತಾಂತ್ರಿಕವಾಗಿ ಫಲವತ್ತು ಮಾಡಿದ.

Image
D W Griffith 6
ಗ್ರಿಫಿ಼ತ್ ಮತ್ತು ಬಿಲ್ಲಿ ಬಿಟ್ಜ಼ರ್‌

ಗ್ರಿಫಿ಼ತ್ ಮತ್ತು ಅವನ ಸೂಕ್ಷ್ಮ ಸಂವೇದಿ ಸೃಜನಶೀಲ ಛಾಯಾಗ್ರಾಹಕನಾದ ಬಿಲ್ಲಿ ಬಿಟ್ಜ಼ರ್‌ ಜೊತೆಯಾಗಿ ಸಿನಿ ಛಾಯಾಗ್ರಹಣದಲ್ಲಿ ಪರಿಣಾಮಕಾರಿ ಸಿನಿಕಥನ ತಂತ್ರಗಳನ್ನು ಹೊಸದಾಗಿ ರೂಪಿಸಿದರು. 1909ರ ವೇಳೆಗೇ ಬಿಲ್ಲಿ ಬಿಟ್ಜ಼ರ್‌ನು ಬೆಂಕಿಯ ಬೆಳಕು, ಮೇಣದಬತ್ತಿಯ ಬೆಳಕು, ಮುಂಜಾವಿನ ಸೂರ್ಯನ ಬೆಳಕುಗಳನ್ನು ಬಳಸಿ ಸಿನಿಛಾಯಾಗ್ರಹಣವನ್ನು ಯಶಸ್ವಿಯಾಗಿ ಸಾಧಿಸಿದ್ದ. ಸಿನಿಲೋಕದಲ್ಲಿ ಬಿಲ್ಲಿಯು ಕೃತಕ ಬೆಳಕಿನ ಮೂಲಗಳನ್ನು ಬಳಸಿದ ಮೊದಲಿಗ. ಗ್ರಿಫಿ಼ತ್ತನ ಕಲ್ಪನೆಗಳನ್ನು, ದೃಶ್ಯಕ್ಕೆ ಬೇಕಾದ ಭಾವನೆಗಳನ್ನು ಬಿಲ್ಲಿ ಯಶಸ್ವಿಯಾಗಿ ಚಿತ್ರೀಕರಣದಲ್ಲಿ ಸಾಧಿಸುತ್ತಿದ್ದ.

ಇವರಿಬ್ಬರೂ ಸೇರಿಕೊಂಡು ಸಿನಿಕಥನಕ್ಕೆ ಆವಿಷ್ಕರಿಸಿದ ಹೊಸ ಸಂವಹನ ವಿಧಾನಗಳಲ್ಲಿ 'ಕ್ಲೋಸ್ ಅಪ್ ಷಾಟ್' ಸಹ ಒಂದು. ಮುಖದ, ಕೇವಲ ಹಸ್ತಗಳ ಕ್ಲೋಸ್ ಅಪ್ ಷಾಟ್‌ಗಳ ಮೂಲಕ ಒಂದು ಸನ್ನಿವೇಶದ ಭಾವತೀವ್ರತೆಯನ್ನು, ಒಂದು ಪಾತ್ರದ ಒಳತೋಟಿಗಳನ್ನು ಪ್ರೇಕ್ಷಕರಿಗೆ ಸಂವಹನಿಸಿದರು. ಅದಕ್ಕೆ ಕಂಪನಿಯ ಮಾಲೀಕರಿಂದ ಬಂದ ಪ್ರತಿಕ್ರಿಯೆ ಅಂದು ಸಿನಿಮಾಧ್ಯಮ ಇದ್ದ ಸ್ಥಿತಿಯನ್ನು ಸೂಚಿಸುತ್ತದೆ: "ನಾವು ನಟ-ನಟಿಯರಿಗೆ ಹಣ ಕೊಡುತ್ತಿರುವುದು ಅವರ ಪೂರ್ತಿ ದೇಹಕ್ಕೆ. ನೀವೇನು ಬರೀ ಅವರ ಮುಖ, ಕಣ್ಣು, ಮೂಗು, ಬಾಯಿ, ಕೈಗಳನ್ನು ತೋರಿಸಿ ಉಳಿದ ಭಾಗಗಳನ್ನು ವೇಸ್ಟ್ ಮಾಡುತ್ತಿದ್ದೀರಲ್ಲ?”

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಮೈಸೂರಿನ ಟಿಪ್ಪು ಸುಲ್ತಾನ ಅಬ್ಬನ 'ಟಿಪ್ಪು'ವಾದ ಸೋಜಿಗ

ಇಂಥ ಹಲವಾರು ಪ್ರಶ್ನೆಗಳಿಗೆ ಸಮಜಾಯಿಷಿ ಕೊಡುತ್ತಲೇ ಗ್ರಿಫಿ಼ತ್ ತನ್ನ ಸಿನಿಕಾಯಕ ಮುಂದುವರಿಸಿದ. ಮುಂದಿನ ಸಿನಿತಲೆಮಾರುಗಳಿಗೆ, ಲಾಂಗ್ ಷಾಟ್‌ಗಳು, ಮೀಡಿಯಂ ಷಾಟ್‌ಗಳು ಹಾಗೂ ಕ್ಲೋಸ್ ಷಾಟ್‌ಗಳ ಮೂಲಕ ಸಿನಿದೃಶ್ಯವನ್ನು ಪ್ರೇಕ್ಷಕರ ಭಾವನಾತ್ಮಕತೆಯ ಹೃದಯಕ್ಕೇ ನೇರ ತಲುಪಿಸುವುದನ್ನು ತೋರಿಸಿಕೊಟ್ಟ.

ಇವರಿಬ್ಬರೂ ಆವಿಷ್ಕರಿಸಿದ ಮತ್ತೊಂದು ಸಿನೆ ವ್ಯಾಕರಣ ಸೂತ್ರವೆಂದರೆ '180° ನಿಯಮ' ಅಥವಾ 'ಕ್ಯಾಮೆರಾ ಆ್ಯಕ್ಸಿಸ್ ನಿಯಮ.' ಸರಳವಾಗಿ ಹೇಳುವುದಾದರೆ, ಎರಡು ಪಾತ್ರಗಳು ಎದುರಾಬದುರು ಇದ್ದು ಸಂಭಾಷಿಸುವಾಗ, ಅವರ ಕ್ಲೋಸ್ ಅಪ್‌ಗಳು ಅವರಿಬ್ಬರ ಮೂಲಕ ಒಂದು ಕಾಲ್ಪನಿಕ ಸರಳ ರೇಖೆ ಹಾಕಿಕೊಂಡು, ಆ ಸರಳ ರೇಖೆಯ ಒಂದೇ ಬದಿಯಲ್ಲಿ ಇಬ್ಬರ ಪ್ರತ್ಯೇಕ ಷಾಟ್‌ಗಳನ್ನು ಅವರವರ ಎದುರು ಕೋನಗಳಲ್ಲಿ ತೆಗೆಯಬೇಕು.

ಆತನ ಕಾಲದಲ್ಲಿ ಕತೆಗೆ ಅನಗತ್ಯವಾದ ವಿವರಗಳನ್ನು ಚಿತ್ರೀಕರಿಸುತ್ತಲೇ ಇರಲಿಲ್ಲ. ಕಂಪನಿಯ ಮಾಲೀಕರು, “ಇದೇನು ವಿವರಗಳನ್ನು ಹಾರಿಸಿಬಿಟ್ಟಿದ್ದೀಯಲ್ಲ?” ಎಂದು ಕೇಳಿದಾಗ, “ಚಾರ್ಲ್ಸ್ ಡಿಕನ್ಸ್ ಕತೆ ಹೇಳುವ ವಿಧಾನ ಹೀಗೇ ತಾನೇ?” ಎಂದು ಮರುಪ್ರಶ್ನೆಯ ಮೂಲಕ ಉತ್ತರಿಸಿದ್ದ.

Image
D W Griffith 5
ಕಲಾವಿದರಾದ ಚಾರ್ಲಿ ಚಾಪ್ಲಿನ್, ಮೇರಿ ಪಿಕ್‌ಫೋರ್ಡ್ ಹಾಗೂ ಡಗ್ಲಾಸ್ ಫೈರ್‌ಬ್ಯಾಂಕ್ಸ್ ಜೊತೆ ಗ್ರಿಫಿ಼ತ್

ಕೆಂಟುಕಿಯ ಗ್ರಾಮೀಣ ಪ್ರದೇಶದಿಂದ ಪುಸ್ತಕಗಳನ್ನು ಮಾರಾಟ ಮಾಡಿಕೊಂಡು, ಕ್ಯಾಲಿಫೋರ್ನಿಯಾದ ತೋಟಗಳಲ್ಲಿ ಹಾಪ್ ಬಳ್ಳಿಗಳಿಂದ ಹೂವುಗಳನ್ನು ಕೀಳುವ ಕೂಲಿಯವನಾಗಿ ದುಡಿದುಕೊಂಡು (ಹಾಪ್ ಹೂವುಗಳನ್ನು ಭಟ್ಟಿಯಿಳಿಸಿ ಮಾದಕ ಪಾನೀಯವನ್ನು ತಯಾರಿಸುತ್ತಾರೆ), ಸ್ಥಳೀಯ ಪತ್ರಿಕೆಯೊಂದಕ್ಕೆ ವರದಿಗಾರನಾಗಿ, ಕೊನೆಗೆ ಉನ್ನತ ವರ್ಗದ ಪ್ರೇಕ್ಷಕರಿಗಾಗಿ ಸರ್ಕಾರದಿಂದ ‘ಪರವಾನಗಿ' ಪಡೆದಿರುವ ರಂಗಭೂಮಿಯಲ್ಲಿ ನಟಿಸಿಕೊಂಡು ನಾಟಕ ಬರೆದುಕೊಂಡು ಇದ್ದವನು ಗ್ರಿಫಿ಼ತ್. ಅಂದು 'ಕೊಚ್ಚೆ ಕಲೆ' ಎಂದು ಪರಿಗಣಿತವಾಗಿದ್ದ, ಆದರೆ ಅತ್ಯಂತ ಜನಪ್ರಿಯ ಮಾಧ್ಯಮವಾದ ಸಿನಿಮಾಕ್ಕೆ ತನ್ನ ಗುಣಮಟ್ಟದ ಕಂಟೆಂಟ್ ಕೊಡಲೆಂದು ಫೋರ್ಟರ್ ಬಳಿಗೆ ಹೋದವ ಸಿನೆಮಾಕ್ಕೆ ತಗುಲಿಹಾಕಿಕೊಂಡು ಈ ಮಟ್ಟಕ್ಕೆ ಬೆಳೆಯುವ ಪರಿ ಸೋಜಿಗದ್ದು. ಗ್ರಿಫಿ಼ತ್ ಸಿನಿಮಾಗಳಲ್ಲಿ ಅವನು ಕೆಲಸ ಮಾಡಿದ ‘ಬೆಲಾಸ್ಕೊ’ ರಂಗಭೂಮಿಯ ಮುಖ್ಯ ಲಕ್ಷಣಗಳಾದ ಮೆಲೋಡ್ರಾಮ, ಕುತೂಹಲ, ದುಃಖ ಮತ್ತು ಪರಿಶುದ್ಧತೆಗಳು ಕಂಡುಬರುತ್ತವೆ.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

ಇತ್ತೀಚೆಗೆ, ‘ಮಲೆಗಳಲ್ಲಿ ಮದುಮಗಳು‘ ಕಾದಂಬರಿ ಆಧರಿಸಿ ನಮ್ಮಲ್ಲಿ ಕೆಲವರು, "ಕುವೆಂಪು ಮುಸ್ಲಿಂ ವಿರೋಧಿ," ಎಂದಿದ್ದಾರೆ! ಇದೇ ರೀತಿಯಲ್ಲಿ ಇತ್ತೀಚೆಗೆ, "ಗ್ರಿಫಿ಼ತ್ ಜನಾಂಗೀಯವಾದಿ ಮತ್ತು ಅವನ ಚಿತ್ರಗಳಲ್ಲಿ ವರ್ಣಬೇಧ ನೀತಿ ಇದೆ," ಎಂಬ ಮಾತುಗಳು ಕೇಳಿಬಂದಿವೆ. ಆದರೆ, ನಾನು ಅವನ ಬಹುತೇಕ ಚಿತ್ರಗಳನ್ನು, ಅದರಲ್ಲೂ, ಆಪಾದಿಸುವವರು ಉಲ್ಲೇಖಿಸಿರುವ ಚಿತ್ರಗಳನ್ನು ಹಲವಾರು ಬಾರಿ ನೋಡಿದ್ದೇನೆ. ಗ್ರಿಫಿ಼ತ್ ಮಾನವತಾವಾದಿ. ಮಾನವತಾವಾದದೊಳಗೇ ನೈತಿಕವಾದಿ. ಇವನ ಈ ರೀತಿಯ ನಿಲುವುಗಳಿಂದಾಗಿಯೇ ಇವನು ಸಿನಿಕಥನದ ತಾಂತ್ರಿಕತೆಯಲ್ಲಿ ಹೊಸ-ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಸಾಧ್ಯವಾಗಿದ್ದು.

ಮುಂದೆ, ಗ್ರಿಫಿ಼ತ್‌ನ ಚಿತ್ರೀಕರಣ ತಂತ್ರಗಳನ್ನು ಬಳಸಿಕೊಂಡು ಮತ್ತಷ್ಟು ನೈಪುಣ್ಯದಿಂದ ಜರ್ಮನ್ ಚಿತ್ರ ತಯಾರಕರು, ‘ಜರ್ಮನ್ ಸುವರ್ಣ ಯುಗ’ವನ್ನು ಸೃಷ್ಟಿಸಿದರು. ಸೋವಿಯತ್ ಚಿತ್ರ ತಯಾರಕರು ಗ್ರಿಫಿ಼ತ್‌ನ ಸಂಕಲನ ತಂತ್ರಗಳ ಆಧಾರದ ಮೇಲೆ ಮತ್ತಷ್ಟು ಪ್ರಯೋಗಗಳನ್ನು ಮಾಡಿ ಸಿನಿಕಲೆಯನ್ನು ಕಾವ್ಯದ ಮಟ್ಟಕ್ಕೆ ಏರಿಸಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್