ಪಕ್ಷಿನೋಟ | ಮರಿಗಳಿಗೆ ಗಂಡು ಹಕ್ಕಿ ತಂದು ಕೊಟ್ಟ ಸೂರ್ಯನ ಕುದುರೆಯನ್ನು ಹೆಣ್ಣು ಹಕ್ಕಿ ಕಿತ್ತೊಯ್ದಿದ್ದೇಕೆ?

Tickells blue flycatcher 1

ನಾವು ಕಂಡಿದ್ದ ಗೂಡಿನಲ್ಲಿ ಮೂರು ಮರಿಗಳು ಕಣ್ಣು ಬಿಟ್ಟು ಎರಡು ದಿನಗಳಾಗಿದ್ದವು. ಜೋಡಿಯು ತೋಟದ ತುಂಬೆಲ್ಲ ಓಡಾಡಿಕೊಂಡು, ಗೂಡಿನ ಹತ್ತಿರ ಬರುವ ಎಲ್ಲ ಹಕ್ಕಿಗಳನ್ನು ಓಡಿಸಿಕೊಂಡು ಮರಿ ಬೆಳೆಸುವ ಕಾರ್ಯದಲ್ಲಿ ಮಗ್ನರಾಗಿತ್ತು. ಶುರುವಿನಲ್ಲಂತೂ ತೋಟದಲ್ಲಿ ಸಿಗುವ ಕೀಟಗಳನ್ನು ಹಿಡಿದು ಬಿಡುವಿಲ್ಲದೆ ಮರಿಗಳಿಗೆ ತಿನಿಸುತ್ತಿದ್ದವು. ಆದರೆ ಅವತ್ತು...

ಅದೊಂದು ಬಿರುಬೇಸಿಗೆಯ ಸುಡು ಮಧ್ಯಾಹ್ನ. ತೋಟದಲ್ಲಿ ಕೆಲಸ ಮಾಡುತ್ತ ಮೈ ಬೆವರಿಳಿದಿತ್ತು. ಬಿಂದಿಗೆಯಲ್ಲಿದ್ದ ನೀರು ಕುಡಿದು, ಮರವೊಂದರ ಕೆಳಗೆ ಕುಳಿತು ಸುತ್ತಲೂ ನೋಡತೊಡಗಿದೆ.  ಮಧ್ಯಾಹ್ನದ ಸಮಯವಾದ್ದರಿಂದ ತೋಟದ ಹಾದಿಯಲ್ಲಿ ಯಾರೂ ಕಾಣಲಿಲ್ಲ. ಜೊತೆಗೆ, ಸುತ್ತಲೂ ಮೌನ. ಹನ್ನೆರಡು ಗಂಟೆಯಾಗಿರಬೇಕು, ಮಧ್ಯಾಹ್ನದ ಶಿಫ್ಟಿನ ಮೋಟಾರು ಲೈನು ಬಂದಿದ್ದರಿಂದ ಪಕ್ಕದ ತೋಟದವರ ಬೋರು ಚಾಲನೆಗೊಂಡಿತು. ಅವರ ತೋಟದ ಮರಗಳ ಬುಡದಲ್ಲಿ ಡ್ರಿಪ್ ಪೈಪುಗಳಿಂದ ನೀರು ಹಾರುತ್ತಿದ್ದು ನಾನು ಕುಳಿತ ಜಾಗದಿಂದಲೇ ಕಾಣಿಸುತ್ತಿತ್ತು. ನನಗೂ ಸ್ವಲ್ಪ ಹೆಚ್ಚೇ ದಣಿವಾದ್ದರಿಂದ ಮತ್ತೆ ಕೆಲಸಕ್ಕೆ ಏಳಲು ಮನಸ್ಸಾಗದೆ ಸುಮ್ಮನೆ ಕೂತಿದ್ದೆ.

Eedina App

ಒಂದೆಡೆ ಡ್ರಿಪ್ ಪೈಪ್ ಒಡೆದು ಜೋರಾಗಿ ನೀರು ನುಗ್ಗಿ ಗುಂಡಿಯಲ್ಲಿ ನೀರು ನಿಲ್ಲುತ್ತಿತ್ತು. ಆ ನಿಂತ ನೀರಿನ ಬಳಿ ಚಂಗನೆ ಪಕ್ಷಿಯೊಂದು ಹಾರಿ ಬಂದು ಕುಳಿತದ್ದರಿಂದ ನನ್ನ ಸಂಪೂರ್ಣ ಗಮನ ಅತ್ತ ಹೋಯಿತು. ಅದೆಂಥ ಚೆಂದನೆಯ ಪಕ್ಷಿಯದು! ನೀಲಿ ಮೈ ಬಣ್ಣ, ನಸುಗೆಂಪನೆಯ ಕೊರಳು ಸೇರಿ ಆ ಪುಟಾಣಿ ಹಕ್ಕಿ ಬಲು ಸುಂದರವಾಗಿ ಕಾಣುತ್ತಿತ್ತು. ಈ ಹಿಂದೆ ಇದರ ಬಗ್ಗೆ ಓದಿದ್ದರಿಂದ 'ಟಿಕೆಲ್ಸ್ ಬ್ಲ್ಯೂ ಫ್ಲೈ ಕ್ಯಾಚರ್' (ಕೆಂಪು ಕೊರಳಿನ ನೊಣ ಹಿಡುಕ) ಎಂದು ಅರಿವಾಯಿತು. ನೀರಿನ ಗುಂಡಿಯಲ್ಲಿ ಮೈ ಅದ್ದಿ ಒದ್ದೆ ಮಾಡಿಕೊಂಡು, ತದ ನಂತರ ಅದೇ ತೋಟದಲ್ಲೇ ಇದ್ದ ಕರಿ ಜಾಲಿ ಮರದ ಮೇಲೆ ಕುಳಿತಿದ್ದು ಗಮನಿಸಿದೆ. ಇನ್ನೆರಡು ನಿಮಿಷದ ನಂತರ ಆ ಹಕ್ಕಿ ಕೂಗಲು ಶುರು ಮಾಡಿತು. ಆಹಾ... ಇಂಪಾದ ಗಾನವದು! ನೀವು ಕೇಳಿಯೇ ತೀರಬೇಕು. ನಾನು ಮೊದಲ ಬಾರಿಗೆ ಇಂತ ಸುಂದರ ಧ್ವನಿ ಹೊರಡಿಸುವ ಹಕ್ಕಿಯ ಕೂಗಿಗೆ ಮಾರುಹೋಗಿದ್ದೆ. ನನ್ನ ಆಯಾಸವೆಲ್ಲ ತಕ್ಷಣಕ್ಕೆ ಮಾಯವಾಗಿತ್ತು ಬಿಡಿ.

Tickells blue flycatcher 2
ಚಿತ್ರ: ಪುಟ್ಟಾರಾಧ್ಯ ಸಿದ್ದರಾಜು

ಅಂದಿನಿಂದ ಯಾವಾಗ ತೋಟದ ಕಡೆಗೆ ಬಂದರೂ ಈ ಹಕ್ಕಿಯ ಕೂಗು ಕೇಳಿದೊಡನೆ ಒಮ್ಮೆ ನನ್ನ ಕೆಲಸವನ್ನೆಲ್ಲ ಮರೆತು ಕೇಳಿಸಿಕೊಳ್ಳಲು ಶುರುಮಾಡುತ್ತಿದ್ದೆ. ಒಂದಿನ ತೋಟದಲ್ಲಿ ಕ್ಯಾಮೆರಾ ಹೊತ್ತು ತಿರುಗುತ್ತಿದ್ದವನಿಗೆ, ಕೆಂಪು ಕೊರಳಿನ ನೊಣ ಹಿಡುಕನ ಜೋಡಿ ಕಾಣುವ ಅವಕಾಶ ಸಿಕ್ಕಿತು. ಬೇಸಿಗೆ ಶುರುವಾದಂತೆ ಗಂಡು ಹಕ್ಕಿ ಹೆಣ್ಣನ್ನು ಒಲಿಸಿಕೊಳ್ಳಲು ಶುರು ಮಾಡುತ್ತದೆ; ತನ್ನ ಆಕರ್ಷಕ ಬಣ್ಣ, ಚೆಂದವಾದ ಹಾಡಿನ ಮೂಲಕ ಹೆಣ್ಣಿಗೆ ಹತ್ತಿರವಾಗಲು ಹರಸಾಹಸ ಮಾಡುತ್ತದೆ.

AV Eye Hospital ad

ಅಲ್ಲೊಂದು ಗಂಡು ಹಕ್ಕಿ ಮೆಲ್ಲಮೆಲ್ಲನೆ ಒಂದೊಂದೇ ಕೊಂಬೆ ಹಾರಿ ಹೆಣ್ಣಿಗೆ ಹತ್ತಿರವಾದೊಡನೆ, ಹೆಣ್ಣು ಸುಂಯ್ಯನೆ ಮತ್ತೊಂದು ಮರಕ್ಕೆ ಹಾರಿಬಿಡುತ್ತಿತ್ತು. ಇಲ್ಲಿ ಹೆಣ್ಣಿಗೆ ಒಂದು ಗಂಡನ್ನು ಆರಿಸಿಕೊಳ್ಳಲು ತನ್ನದೇ ಆದ ಷರತ್ತುಗಳು ಇರುತ್ತವೆ. ಸುಂದರ ಬಣ್ಣ, ಇಂಪಾದ ಕೂಗು, ವಿಶೇಷ ಕಲೆಗಳು ಎಲ್ಲವೂ ಇದ್ದ ಮಾತ್ರಕ್ಕೆ ಹೆಣ್ಣು ಗಂಡಿಗೆ ಜೋಡಿಯಾಗಲು ಒಪ್ಪಲಾರಳು. ಹೆಣ್ಣಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜೋಡಿಯಾದ ಗಂಡು ಆರೋಗ್ಯವಂತನಾಗಿದ್ದು, ತನಗೆ ಹುಟ್ಟಲಿರುವ ಮರಿಗಳು ಸದೃಢವಾಗಿದ್ದು, ಅವುಗಳಿಗೆ ಉತ್ತಮ ಅನುವಂಶಿಕ ಧಾತುಗಳನ್ನು ಧಾರೆ ಎರೆಯುವ ಉದ್ದೇಶವೇ ಇರುತ್ತದೆ. ಹಾಗಾಗಿ, ಈ ಹೆಣ್ಣು ಹಕ್ಕಿಗೆ ಗಂಡಿನ ಬಣ್ಣ, ಕೂಗು, ಗೂಡು ಕಟ್ಟುವ ಕಲೆ, ನಾಟ್ಯ... ಇವೆಲ್ಲವೂ ತನ್ನ ಸಂಗಾತಿಯ ಆರೋಗ್ಯ ನಿರ್ಧರಿಸಲು ಸಹಾಯ ಮಾಡುವ ಸಂಗತಿಗಳು.

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ನೆಲಗುಬ್ಬಿಯ ಮಾಯಾಲೋಕ ಮತ್ತು ಅಮಾಯಕ ಕೇರೆಹಾವು

ಅದೇ ಬೇಸಿಗೆಯಲ್ಲಿ ಒಂದು ಮಳೆ ಬಿದ್ದು ತೋಟಗಳೆಲ್ಲ ತಣ್ಣಗಾಗಿದ್ದವು. ನಾನು ಇದೇ ಸಮಯ ಹಿಡಿದು ಬೆಂಗಳೂರು ಸೇರಿ ನನ್ನ ಕೆಲಸಗಳಲ್ಲಿ ನಿರತನಾಗಿದ್ದೆ. ಅತ್ತ ಕಡೆಯಿಂದ ತಂಗಿಯ ಫೋನು ಒಂದು ವಿಶೇಷ ಸುದ್ದಿ ತಲುಪಿಸಿತ್ತು. ನಾವು ಈ ಹೆಣ್ಣು ಮತ್ತು ಗಂಡಿನ ಜೋಡಿ ಗುರುತಿಸಿದ್ದ ತೋಟದಲ್ಲೇ ಒಂದು ಮರದಲ್ಲಿ ಗೂಡು ಕಾಣಿಸಿಕೊಂಡಿದೆ ಎಂದು ತಿಳಿದಿದ್ದರಿಂದ ಮತ್ತೆ ಊರಿನ ಕಡೆ ದೌಡಾಯಿಸಿದೆ. ಊರಿಗೆ ಹೋಗಿ ನೋಡಿದರೆ, ಹೆಣ್ಣು ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಅಲ್ಲಿಂದ ಮುಂದೆ ಮರಿಗಳೂ ಆದವು. ಹಲವು ದಿನಗಳವರೆಗೆ ಈ ಜೋಡಿ ಹಕ್ಕಿಯ ಶ್ರಮ, ಹೋರಾಟ, ಪೋಷಣೆ ಎಲ್ಲವನ್ನೂ ಕಂಡೆವು.

ನಾವು ಕಂಡಿದ್ದ ಗೂಡಿನಲ್ಲಿ ಮೂರು ಮರಿಗಳು ಕಣ್ಣು ಬಿಟ್ಟು ಎರಡು ದಿನಗಳಾಗಿದ್ದವು. ಇತ್ತ ಈ ಪೋಷಕ ಜೋಡಿಯು ತೋಟದ ತುಂಬೆಲ್ಲ ಓಡಾಡಿಕೊಂಡು, ಗೂಡಿನ ಹತ್ತಿರ ಬರುವ ಎಲ್ಲ ಹಕ್ಕಿಗಳನ್ನು ಓಡಿಸಿಕೊಂಡು ಮರಿ ಬೆಳೆಸುವ ಕಾರ್ಯದಲ್ಲಿ ಮಗ್ನರಾಗಿತ್ತು. ಶುರುವಿನಲ್ಲಂತೂ ತೋಟದಲ್ಲಿ ಸಿಗುವ ಹಲವು ತರದ ಕೀಟಗಳನ್ನು ಹಿಡಿದು ಬಿಡುವಿಲ್ಲದೆ ಮರಿಗಳಿಗೆ ತಿನಿಸುತ್ತಿದ್ದವು.

ಒಂದಿನ ಗಂಡು ಹಕ್ಕಿ ಸೂರ್ಯನ ಕುದುರೆಯೊಂದನ್ನು (Praying Mantis) ಹಿಡಿಯುತ್ತಿರುವುದು ಕಾಣಿಸಿತು. ಆಗ ಇದ್ದಕ್ಕಿದ್ದಂತೆ ಹೆಣ್ಣು ಗಂಡಿನ ಬಳಿ ಹಾರಿದ್ದೇ, ಗಂಡಿನ ಬಾಯಿಂದ ಅದನ್ನು ಕಿತ್ತುಕೊಳ್ಳಲು ಹೋಗಿದ್ದು ಕಂಡು ನಮಗೆ ಆಶ್ಚರ್ಯವಾಗಿತ್ತು. ಆದರೆ, ಗಂಡು ಅಲ್ಲಿಂದ ತಪ್ಪಿಸಿಕೊಂಡು ಬೇರೆಡೆ ಹಾರಿ, ಸ್ವಲ್ಪ ಹೊತ್ತು ಕುಳಿತು, ಗೂಡಿನ ಬಳಿಗೆ ಹೋಗಿದ್ದೇ ಆ ಸೂರ್ಯನ ಕುದುರೆಯನ್ನು ಮರಿಯೊಂದರ ಬಾಯಿಗೆ ಹಾಕಿತು. ಆ ಕ್ಷಣಕ್ಕೆ ಹೆಣ್ಣು ಅಲ್ಲಿಗೆ ನುಗ್ಗಿದ್ದೇ, ಒಮ್ಮೆಗೇ ಮರಿಯ ಬಾಯಿಯಲ್ಲಿದ್ದ ಸೂರ್ಯನ ಕುದುರೆಯನ್ನು ಕಿತ್ತುಕೊಂಡು ಹೊರ ಹಾರಿತು. ಇತ್ತ ಗಂಡಿಗೆ ಏನೂ ಅರ್ಥವಾಗದೆ ಅಲ್ಲಿಂದ ಹಾರಿಹೋಗಬೇಕಾದ ಗತಿ. ನಾವು ಎಂತದೂ ಅರ್ಥವಾಗದೆ, ಕಣ್ಣು ಮಿಟುಕಿಸದೆ ಅತ್ತಲೇ ನೋಡುತ್ತಿದ್ದೆವು.

Tickells blue flycatcher 3

ಕೆಲವು ಕ್ಷಣಗಳ ನಂತರ ಅದೇ ಸೂರ್ಯನ ಕುದುರೆಯನ್ನು ಈ ಹೆಣ್ಣು ಹೊತ್ತು ಬಂದಾಗ  ನೋಡಿದರೆ, ಆ ಸೂರ್ಯನ ಕುದುರೆಯ ಕತ್ತು ಸಂಪೂರ್ಣ ಮುರಿದಿದೆ. ಮರಿಗೆ ಮತ್ತೊಮ್ಮೆ ಅದೇ ಸೂರ್ಯನ ಕುದುರೆಯನ್ನು ನೀಡಿ ಅಲ್ಲಿಂದ ಹಾರಿಹೋಯಿತು. ಸೂರ್ಯನ ಕುದುರೆ ಬಲು ವಿಶೇಷ ಕೀಟ. ಅದರ ಕೈಗೆ ಯಾವುದಾದರೂ ಕೀಟ ಸಿಕ್ಕರೆ ಅಲ್ಲಿಗೆ ಕತೆ ಮುಗಿಯಿತು. ತನ್ನ ಕೈಗಳಲ್ಲಿ ಬೇಟೆಯನ್ನು ಹಿಡಿದು, ತಲೆ ಮುರಿದು ತಿಂದು ಮುಗಿಸುವ ಈ ಸೂರ್ಯನ ಕುದುರೆ ಭಯಾನಕ  ಭಕ್ಷಕ. ಆದ್ದರಿಂದ ಈ ಹೆಣ್ಣು ಹಕ್ಕಿ ತನ್ನ ಮರಿಗಳ ಸುರಕ್ಷತೆಗಾಗಿ ಮರಿಯ ಬಾಯಿಯಲ್ಲಿದ್ದ ಸೂರ್ಯನ ಕುದುರೆಯನ್ನು ಹೊರ ಹೊತ್ತೊಯ್ದು, ನೆಲಕ್ಕೆ ಪದೇಪದೆ ಬಡಿದು ಸಂಪೂರ್ಣ ಸಾಯಿಸಿ ಮತ್ತೆ ಮರಿಗೆ ನೀಡಿದ ಈ ಪ್ರಸಂಗ ನಮ್ಮಲ್ಲಿ ವಿಶೇಷ ಭಾವನೆ ಮೂಡಿಸಿತ್ತು. ಗಂಡಿಗೆ ಅರಿವಾಗದ ಈ ಎಚ್ಚರಿಕೆ ಹೆಣ್ಣಿಗೆ ಹೇಗೆ ಅರಿವಾಯಿತು ಎಂಬುದನ್ನು ನಾವು ಮಾತೃ ವಿಶೇಷ ಎನ್ನಬೇಕೋ ತಿಳಿಯದು.

ನೀವು ಗಮಿಸಿದರೆ, ತೋಟದ ಬೇಲಿಗಳಲ್ಲಿ ಸುಶ್ರಾವ್ಯವಾಗಿ ಹಾಡುವ ಈ ಕೆಂಪು ಕೊರಳಿನ ನೊಣ ಹಿಡುಕಗಳ ಇಂಪಾದ ಕೂಗು ಕೇಳುತ್ತದೆ. ಆಗಾಗ್ಗೆ ಕೂತಲ್ಲಿಂದ ಚಂಗನೆ ಹಾರಿ ಹುಳು ಹಿಡಿಯುತ್ತ ಉತ್ತಮ ಕೀಟ ನಿಯಂತ್ರಣ ಕೆಲಸವನ್ನೂ ಇವು ಮಾಡುತ್ತಿರುತ್ತವೆ.

ಮುಖ್ಯ ಚಿತ್ರ ಕೃಪೆ: ಜಮುನಾ ಎಂ ಬಿ
ನಿಮಗೆ ಏನು ಅನ್ನಿಸ್ತು?
5 ವೋಟ್
eedina app